ಈಶ್ವರ ಮಲ್ಪೆಗೆ ಆಸರೆಯಾದ ಕೇರಳ!
ಶಿರೂರು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಗಾಗಿ ನಡೆಸಲಾದ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದ ಉಡುಪಿಯ ಈಜುಗಾರ ಹಾಗು ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಅನಾರೋಗ್ಯ ಪೀಡಿತ ಇಬ್ಬರು ಮಕ್ಕಳಿಗೆ ಚಿಕಿತ್ಸಾ ಸೌಲಭ್ಯವನ್ನು ನೀಡಲು ಕೇರಳದ ರೋಟರಿ ಕ್ಲಬ್ ಮುಂದೆ ಬಂದಿದೆ.
ಕೋಝಿಕ್ಕೋಡ್ ನ 'ಮೈತ್ರ' ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಜಂಟಿಯಾಗಿ ಆಯೋಜಿಸಿರುವ ಆರೋಗ್ಯ ಸೇವಾ ಅಭಿಯಾನದ ಭಾಗವಾಗಿ ಆಸ್ಪತ್ರೆಯು ಈಶ್ವರ್ ಮಲ್ಪೆಯವರ ಮಕ್ಕಳಿಗೆ ಚಿಕಿತ್ಸೆಗೆ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಿದ್ದು, ರೋಟರಿ ಕ್ಲಬ್ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಭರಿಸಲಿದೆ. ಅಲ್ಲದೇ ಚಿಕಿತ್ಸಾ ವೆಚ್ಚದಲ್ಲಿ ಆಸ್ಪತ್ರೆಯು ವಿಶೇಷ ರಿಯಾಯಿತಿಯನ್ನು ನೀಡಲಿದೆ ಎಂದು 'ಮೈತ್ರ' ಆಸ್ಪತ್ರೆಯ ಅಧಿಕಾರಿಗಳು ವಾರ್ತಾಭಾರತಿಗೆ ತಿಳಿಸಿದ್ದಾರೆ.
ಚಿಕಿತ್ಸೆಗಾಗಿ ಕೋಝಿಕ್ಕೋಡ್ ಗೆ ಈಶ್ವರ್ ಕುಟುಂಬ ತಲುಪಿದ್ದು, 'ಮೈತ್ರ' ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿನ ವಿಶೇಷ ವೈದ್ಯರ ತಂಡದಿಂದ ಇಬ್ಬರು ಮಕ್ಕಳ ಪ್ರಾಥಮಿಕ ಪರೀಕ್ಷೆಗಳು ಬುಧವಾರ ಪೂರ್ಣಗೊಂಡಿದ್ದು, ಪರೀಕ್ಷೆಗಳ ವರದಿ ಬಂದ ಬಳಿಕ ಚಿಕಿತ್ಸೆ ಮುಂದುವರಿಸಲಾಗುತ್ತದೆ.
ಈಶ್ವರ್ ಮಲ್ಪೆ ಅವರ ಇಬ್ಬರು ಮಕ್ಕಳಾದ (23) ವರ್ಷದ ಕಾರ್ತಿಕ್ ಹಾಗು (7) ವರ್ಷದ ಬ್ರಾಹ್ಮಿ ಅನಾರೋಗ್ಯ ಪೀಡಿತರಾಗಿದ್ದು, ಎದ್ದು ನಡೆದಾಡಲು ಆಗದ ಸ್ಥಿತಿಯಲ್ಲಿ ಮಲಗಿದಲ್ಲೇ ಇದ್ದಾರೆ. ಇವರ ವೈದ್ಯಕೀಯ ಚಿಕಿತ್ಸೆಗೆ ಲಕ್ಷಾಂತರ ರೂ. ಹಣದ ಅಗತ್ಯವಿದೆ ಎಂಬುದನ್ನು ಮನಗಂಡ ಕ್ಯಾಲಿಕಟ್ ನ 'ಮೈತ್ರ' ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಅವರ ನೆರವಿಗೆ ಧಾವಿಸಿದೆ. ಅಭಿಯಾನದ ಅಂಗವಾಗಿ ಬೇರೆ ಹಲವು ಮಕ್ಕಳಿಗೂ ಚಿಕಿತ್ಸೆ ನೀಡುವ ಯೋಜನೆ ಇದೆ.
"ವೈದ್ಯಕೀಯ ವರದಿಗಳು ಬಂದ ನಂತರ ಚಿಕಿತ್ಸೆ ಆರಂಭಿಸಲಾಗುವುದು. ಭಾರತದಲ್ಲಿ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸಲು ಪ್ರಯತ್ನಿಸುತ್ತೇವೆ. ಆರ್ಥೋ, ನ್ಯೂರೋ, ಪೀಡಿಯಾಟ್ರಿಕ್ಸ್, ಕಾರ್ಡಿಯಾಲಜಿ ಇತ್ಯಾದಿ ವಿಭಾಗಗಳಲ್ಲಿ ಪರೀಕ್ಷೆ ಪೂರ್ಣಗೊಂಡಿದೆ,” ಎಂದು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಮೈತ್ರ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ. ಫೆಬಿನ್ ಹೇಳಿದರು.
ತಜ್ಞ ವೈದ್ಯ ಡಾ. ಅನೂಪ್ ಮಾವಿಳ ಮಾಹಿತಿ ನೀಡಿ, ಇಬ್ಬರು ಮಕ್ಕಳನ್ನು ಮಲಗಿರುವ ಸ್ಥಿತಿಯಿಂದ ವೀಲ್ ಚೇರ್ ಗೆ ಶಿಫ್ಟ್ ಆಗುವ ರೀತಿಯಲ್ಲಿ ಪ್ರಥಮ ಹಂತದ ಪ್ರಯತ್ನ ನಡೆಸುತ್ತೇವೆ. ಚಿಕಿತ್ಸೆಗೆ ಮೊದಲು ಅರಿವಳಿಕೆ ಸೇರಿದಂತೆ ಇತರ ಪ್ರಕ್ರಿಯೆಗಳಿಗೆ ಅವರು ದೈಹಿಕವಾಗಿ ಸಾಮರ್ಥ್ಯವನ್ನು ಹೊಂದಿದ್ದಾರೆಯೇ ಎಂದು ಪರೀಕ್ಷೆ ಮಾಡಲಾಗುತ್ತದೆ. ಆ ನಂತರವಷ್ಟೇ ಮುಂದಿನ ವಾರ ಶಸ್ತ್ರ ಚಿಕಿತ್ಸೆ ಹಾಗೂ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದರು.
ಅರ್ಜುನ್ ಲಾರಿ ಮಾಲಕ ಮನಾಫ್ ಮಾತನಾಡಿ, ಮಕ್ಕಳಿಗೆ ಈವರೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಈ ಪರಿಸ್ಥಿತಿ ಬಂದಿದೆ ಎಂದು ಭಾವಿಸಿದ್ದೇನೆ. ಮೈತ್ರ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡವಿದೆ. ಅವರ ಮೇಲೆ ಭರವಸೆ ಇಟ್ಟಿದ್ದೇವೆ. ಈ ಪ್ರಯತ್ನಕ್ಕೆ ನೆರವು ನೀಡುವ ರೋಟರಿ ಕ್ಲಬ್ ಗೆ ಆಭಾರಿ ಎಂದರು.
ಈ ವೇಳೆ ಈಶ್ವರ್ ಮಲ್ಪೆ ಮಾತನಾಡಿ, 'ಆರ್ಥಿಕ ತೊಂದರೆಯಿಂದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಈವರೆಗೂ ಸಾಧ್ಯವಾಗಿರಲಿಲ್ಲ. ಮಲಗಿದ ಸ್ಥಿತಿಯಲ್ಲೇ ಬಂದಿರುವ ನನ್ನ ಮಕ್ಕಳು ಕುಳಿತುಕೊಂಡು ಹೋಗುವ ಸ್ಥಿತಿಗೆ ತಲುಪಿಸಿದರೂ ಸಾಕು. ಚಿಕಿತ್ಸೆ ಫಲಕಾರಿಯಾಗಬಹುದು ಮತ್ತು ಮಕ್ಕಳು ನಡೆದಾಡುವ ಸ್ಥಿತಿಗೆ ತಲುಪಬಹುದು ಎಂಬ ನಿರೀಕ್ಷೆ ಇದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮುಂದೆ ಬಂದಿರುವ ರೋಟರಿ ಕ್ಲಬ್, ಮೈತ್ರ ಆಸ್ಪತ್ರೆ ಸೇರಿದಂತೆ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಈಶ್ವರ್ ಮಲ್ಪೆ ಕುಟುಂಬ ಬುಧವಾರ ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿ ಊರಿಗೆ ತೆರಳಿದ್ದು, ವರದಿ ತಲುಪಿದ ಬಳಿಕ ಆಸ್ಪತ್ರೆಯ ವೈದ್ಯರ ತಂಡದ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಿದೆ.