14 ವರ್ಷದ ಬಳಿಕ ಕುಟುಂಬ ಸೇರಿದ ಮಂಡ್ಯದ ಫರ್ಝಾನ

Update: 2024-10-20 17:15 GMT

ಪುಟ್ಟಪುಟ್ಟ ಮಕ್ಕಳಿದ್ದಾಗ ತಾಯಿ ಮಾನಸಿಕ ಅಸ್ವಸ್ಥಳಾಗಿ ಬೀದಿಪಾಲಾಗಿದ್ದರು. ಯಾರದೋ ಕೈಗೂಸಾಗಿ ಬೆಳೆದ ಮಕ್ಕಳಿಗೆ ಈಗ ಮದುವೆಯಾಗಿ ಮಕ್ಕಳಾಗಿದೆ. ತಾಯಿಗೆ ಮುದಿತನ ಆವರಿಸಿದೆ. ಕೊನೆಗೂ ತಾಯಿ-ಮಕ್ಕಳು ಒಂದಾಗಿದ್ದಾರೆ. ಹೌದು... ಈ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ಮಂಗಳೂರಿನ ವೈಟ್ ಡೌಸ್ ಮನೋವೈದ್ಯಕೀಯ ಶುಶ್ರೂಷೆ ಮತ್ತು ನಿರ್ಗತಿಕರ ಆಶ್ರಮ ಸಂಸ್ಥೆ.

2009ರಲ್ಲಿ ಮಂಗಳೂರಿನ ಬೀದಿಗಳಲ್ಲಿ ದಿಕ್ಕುದೆಸೆಯಿಲ್ಲದೆ ಫರ್ಝಾನ ಎಂಬವರು ಮಾನಸಿಕ ಅಸ್ವಸ್ಥೆಯಾಗಿ ಅಲೆದಾಡುತ್ತಿದ್ದರು.ಈ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಸೇವಾ ಸಂಸ್ಥೆ ವೈಟ್ ಡೌಸ್‌ನ ಕೊರಿನಾ ರಸ್ಕಿನ್ ಅವರು, ಮಹಿಳೆಗೆ ಚಿಕಿತ್ಸೆ ಕೊಡಿಸಿ ಆಶ್ರಯ ನೀಡಿದ್ದರು. ಈ ವೇಳೆ ಮಹಿಳೆ ಬಳಿ ತನ್ನೂರಿನ ಮತ್ತು ಕುಟುಂಬದ ಬಗ್ಗೆ ಕೇಳಿದಾಗ ನಿಖರ ಮಾಹಿತಿ ನೀಡುತ್ತಿರಲಿಲ್ಲ.

ಕೇವಲ ಮದ್ದೂರು ಮಾಂಸದಂಗಡಿ ಬಳಿ ಮನೆ ಇರುವುದಾಗಿ ಹೇಳುತ್ತಿದ್ದರು. ರಾಜ್ಯದ ಹಲವೆಡೆ ಮದ್ದೂರು ಹೆಸರಿನಲ್ಲಿ ಊರುಗಳಿದ್ದು, ಯಾವ ಮದ್ದೂರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ವೈಟ್ ಡೌಸ್ ಸಂಸ್ಥೆ ಹಲವೆಡೆಗೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಹುಡುಕಿಸಿದ್ದರೂ ಕುಟುಂಬಸ್ಥರು ಪತ್ತೆಯಾಗಿರಲಿಲ್ಲ.

ಇದೀಗ 14 ವರ್ಷಗಳ ಬಳಿಕ ಆಕೆಯ ಕುಟುಂಬಸ್ಥರು ಫರ್ಝಾನ ಅವರನ್ನ ಗುರುತಿಸಿದ್ದಾರೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರಿನ ಓರ್ವರ ಮೂಲಕ ಫರ್ಝಾನ ಪುತ್ರ ಆಸೀಫ್‌ಗೆ ವೈಟ್‌ಡೌಸ್ ಸಂಸ್ಥೆಯಲ್ಲಿ ತನ್ನ ತಾಯಿ ಇರುವುದು ತಿಳಿದಿದೆ. ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಲು ಪುತ್ರ ಆಸಿಫ್ ತನ್ನ ಹೆಂಡತಿ - ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸಿದ್ದು, ತಾಯಿ - ಮಗ ಒಂದಾದ ಭಾವನಾತ್ಮಕ ಸನ್ನಿವೇಶಕ್ಕೆ ಮಂಗಳೂರಿನ ವೈಟ್ ಡೌಸ್ ಸಂಸ್ಥೆ ಸಾಕ್ಷಿಯಾಗಿದೆ.

ಹಲವು ವರ್ಷಗಳಿಂದ ನಾವು ತಾಯಿಯನ್ನು ಹುಡುಕುತ್ತಿದ್ದೆವು. ನನ್ನ ತಂಗಿ ತಾಯಿಯನ್ನು ನೋಡಿಯೇ ಇರಲಿಲ್ಲ. ಈಗ ನನ್ನ ತಾಯಿ ಸಿಕ್ಕಿದ್ದು ತುಂಬಾ ಖುಷಿಯಾಗಿದೆ ಎಂದು ಫರ್ಝಾನ ಅವರ ಪುತ್ರ ಆಸಿಫ್ ಹೇಳಿದ್ದಾರೆ.

ವೈಟ್ ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನಾ ರಸ್ಕಿನ್ ಮಾತನಾಡಿ, "2009 ಆಗಸ್ಟ್ನಲ್ಲಿ ಫರ್ಝಾನ ಸಿಕ್ಕಿದ್ದರು. ಆಗ ಅವರು ಸರಿಯಾದ ಮಾಹಿತಿ ನೀಡಿರಲಿಲ್ಲ. ನಮಗೆ ಆಕೆ ಮನೆ ಸೇರುವ ಬಗ್ಗೆ ವಿಶ್ವಾಸವೇ ಇರಲಿಲ್ಲ. ಎರಡು ವಾರದ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರಿನ ಮಹಿಳೆಯೊಬ್ಬರನ್ನು ಮನೆಗೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಫರ್ಝಾನ ಬಗ್ಗೆ ಮಾಹಿತಿ ನೀಡಿದ್ದೆವು. ಅವರ ಸಹಾಯದಿಂದ ಇದೀಗ ಫರ್ಝಾನ ಕುಟುಂಬಸ್ಥರು ಸಿಕ್ಕಿದ್ದಾರೆ" ಎಂದು ತಿಳಿಸಿದ್ದಾರೆ.

14 ವರ್ಷಗಳ ಬಳಿಕ ಪುತ್ರನ ಗುರುತು ಹಿಡಿಯದ ಫರ್ಝಾನ, ತನ್ನ 3 ವರ್ಷದ ಮೊಮ್ಮಗನನ್ನೇ ಪುತ್ರನೆಂದು ಅಂದುಕೊಂಡು ತನ್ನತ್ತ ಎಳೆದುಕೊಳ್ಳುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಸದ್ಯ ಫರ್ಝಾನ ಅವರು ಪುತ್ರ-ಸೊಸೆ-ಮೊಮ್ಮಕ್ಕಳೊಂದಿಗೆ ಕಾರಿನಲ್ಲಿ ಮಂಡ್ಯದ ಮದ್ದೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News