ಮಹಾರಾಷ್ಟ್ರ | ಕಾಂಗ್ರೆಸ್ ಮೈತ್ರಿಕೂಟ ಮಹಾವಿಕಾಸ್ ಅಘಾಡಿಯಲ್ಲಿ ಬಿರುಕು ಬಿಟ್ಟಿದೆಯೇ ?

Update: 2024-10-21 17:58 GMT

ಉದ್ಧವ್ ಠಾಕ್ರೆ ,  ದೇವೇಂದ್ರ ಫಡ್ನವಿಸ್ |PC : PTI

ಮಹಾರಾಷ್ಟ್ರದಲ್ಲಿ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗ ಎಲ್ಲರ ಕಣ್ಣುಗಳು ಮಹಾ ವಿಕಾಸ್ ಅಘಾಡಿ ಮೇಲೆ ನೆಟ್ಟಿದೆ.

ಆದರೆ ಇದೀಗ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಡುವಿನ ಸಭೆಯ ವರದಿಗಳು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿವೆ.

ಈ ಭೇಟಿ ನಡೆದದ್ದು ಹೌದೇ? ಹೌದಾದಲ್ಲಿ ಏನು ಚರ್ಚೆ ನಡೆದಿದೆ ಎಂಬ ಪ್ರಶ್ನೆ ಜೋರಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದ್ದು, ಆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಉಪ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಬಿಪಿ ಮಾಜಾ ವರದಿ ಮಾಡಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈನಲ್ಲಿದ್ದಾಗ ಈ ಸಭೆ ನಡೆದಿದೆ ಎಂದು ಇಂಡಿಯಾ ಟಿವಿ ಕೂಡ ವರದಿ ಮಾಡಿದೆ.

ಇದು ಮಹಾ ವಿಕಾಸ್ ಅಘಾಡಿ ನಡುವೆ ಅಸಮಾಧಾನವಿದೆ ಎಂಬ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಫಡ್ನವೀಸ್ ಮತ್ತು ಠಾಕ್ರೆ ಪ್ರಸ್ತುತ ಮಹಾರಾಷ್ಟ್ರ ರಾಜಕೀಯದಲ್ಲಿ ಪರಸ್ಪರ ವಿರುದ್ಧ ಪಾಳೆಯದಲ್ಲಿದ್ದು ಈ ರೀತಿ ಭೇಟಿಯೊಂದು ನಡೆದಿದ್ದರೆ ಅದೊಂದು ದೊಡ್ಡ ಸುದ್ದಿ. ಬಿಜೆಪಿ ಈಗಾಗಲೇ 99 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಆದರೆ MVA ಇನ್ನೂ ತನ್ನ ಅಭ್ಯರ್ಥಿಗಳ ಯಾವುದೇ ಪಟ್ಟಿ ಬಿಡುಗಡೆ ಮಾಡಿಲ್ಲ.

ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಪ್ರಸ್ತುತ ವಿದರ್ಭ ಪ್ರದೇಶದ ಹಲವಾರು ಸ್ಥಾನಗಳ ಬಗ್ಗೆ ಸಹಮತದಲ್ಲಿಲ್ಲ ಮತ್ತು ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ತಮ್ಮ ಪಕ್ಷದ ಪ್ರಭಾವವಿರುವ ಕ್ಷೇತ್ರಗಳನ್ನು ನಾವು ಶಿವಸೇನೆಗೆ ಹೇಗೆ ಬಿಟ್ಟು ಕೊಡುವುದು ಎಂದು ಅಲ್ಲಿನ ಕಾಂಗ್ರೆಸ್ ನಾಯಕರು ಕೇಳುತ್ತಿರುವುದಾಗಿ ವರದಿಯಾಗಿದೆ.

ಎಬಿಪಿ ವರದಿ ಮಾಡಿದಂತೆ, ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಪಾಳಯಗಳಲ್ಲಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವ ಆಗ್ರಹವೂ ಇದೆ. ಹರಿಯಾಣದಲ್ಲಿ ಇದು ಹೇಗೂ ಕಾಂಗ್ರೆಸ್ಸಿಗೆ ನಷ್ಟವುಂಟು ಮಾಡಿದೆ. ಶಿವಸೇನೆ ಸಂಸದ ಸಂಜಯ್ ರಾವತ್ ಅವರು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದೂ ವರದಿಗಳು ತಿಳಿಸಿವೆ. ಇವೆಲ್ಲಾ ವರದಿಗಳು ಮಾತ್ರ ಎಂಬುದು ಇಲ್ಲಿ ಗಮನಾರ್ಹ ಅಂಶ.

MVA ಯೊಳಗೆ ಅಸಮಾಧಾನವಿದೆ ಎಂಬ ಎಲ್ಲಾ ಮಾತುಗಳನ್ನು ಕಾಂಗ್ರೆಸ್ ನಿರಾಕರಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್, MVA ಯೊಳಗಿನ ಭಿನ್ನಾಭಿಪ್ರಾಯದ ಮಾತುಗಳನ್ನು ನಿರಾಕರಿಸಿದ್ದಾರೆ ಮತ್ತು ಗೊಂದಲವನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಬಿಜೆಪಿ ಇಂತಹ ತಪ್ಪು ಕಥೆಗಳನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಎಂವಿಎ ಒಗ್ಗಟ್ಟಿನಿಂದ ಸ್ಪರ್ಧಿಸಲಿದೆ. "ನಾಳೆ ಸಂಜೆಯ ವೇಳೆಗೆ ನಾವು 17 ಸ್ಥಾನಗಳನ್ನು ಅಂತಿಮಗೊಳಿಸುತ್ತೇವೆ. ವಿದರ್ಭದಲ್ಲಿ 6-7 ಸ್ಥಾನಗಳ ಬಗ್ಗೆ ಸಮಸ್ಯೆಗಳಿವೆ , ಅದು ಕೂಡ ಬಗೆಹರಿಯುತ್ತದೆ. ನಾವು ಅಘಾಡಿಯಾಗಿ ಸ್ಪರ್ಧಿಸಲಿದ್ದೇವೆ . ಏಕೆಂದರೆ 3 ಪಕ್ಷಗಳು 288 ಸ್ಥಾನಗಳನ್ನು ಹಂಚಿಕೊಂಡಿವೆ. ಇದು ಸ್ವಲ್ಪ ಸಮಯ ತೆಗೆದುಕೊಂಡಿತು. ಮಹಾ ವಿಕಾಸ್ ಅಘಾಡಿಯ ಎಲ್ಲಾ 288 ಸ್ಥಾನಗಳ ಅಂತಿಮ ನಿರ್ಧಾರವನ್ನು ನಾಳೆ ಸಂಜೆಯೊಳಗೆ ಮಾಡಲಾಗುವು̧ದು” ಎಂದು ಅವರು ANI ಗೆ ಹೇಳಿರುವುದಾಗಿ ವರದಿಯಾಗಿದೆ.

ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News