ಪ್ರಿಯಾಂಕಾ ಗಾಂಧಿ ವಾದ್ರಾ | ಜನಸಾಮಾನ್ಯರಿಗೆ ಇಂದಿರಾ ಗಾಂಧಿಯನ್ನು ನೆನಪಿಸುವ ಆಕರ್ಷಕ ವ್ಯಕ್ತಿತ್ವ

Update: 2024-10-23 16:33 GMT

ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ | PTI 

2019ರಲ್ಲಿ ಔಪಚಾರಿಕವಾಗಿ ರಾಜಕೀಯಕ್ಕೆ ಸೇರಿದ ಐದು ವರ್ಷಗಳ ನಂತರ, ತಮ್ಮ ಸಹೋದರ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ಧಾರೆ.

ನೆಹರೂ-ಗಾಂಧಿ ಕುಟುಂಬದ ಕುಡಿಗೆ ಇದು ಮೊದಲ ಚುನಾವಣೆ. ಅತಿ ವರ್ಚಸ್ವಿ ಕಾಂಗ್ರೆಸ್ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಂತಾಗಿದೆ. ಚುನಾವಣಾ ರಾಜಕಾರಣ ಹೊಸದಾದರೂ ಪ್ರಿಯಾಂಕಾ ಪಾಲಿಗೆ ರಾಜಕಾರಣ ಅಪರಿಚಿತವಲ್ಲ. ಎಐಸಿಸಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದಲ್ಲಿ, ದಿಲ್ಲಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಕಿರಿಯ ಸಹೋದರಿ. ತನ್ನ ರಾಜಕೀಯ ವೃತ್ತಿಜೀವನದ ಮೊದಲ ವರ್ಷಗಳಲ್ಲಿ, ಪ್ರಿಯಾಂಕಾ ಅವರು ಸಕ್ರಿಯ ರಾಜಕೀಯದಿಂದ ದೂರವೇ ಇರಲು ಬಯಸಿದ್ದವರು. ಆದರೆ ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಲ್ಲಿ ಅವರ ತಾಯಿ ಸೋನಿಯಾ ಮತ್ತು ಅಮೇಥಿಯಲ್ಲಿ ಅವರ ಸಹೋದರ ರಾಹುಲ್ ಅವರ ಚುನಾವಣಾ ಪ್ರಚಾರಕ್ಕೆ ನೆರವಾಗುವುದರೊಂದಿಗೆ ರಾಜಕೀಯ ಅಂಗಳದಲ್ಲಿ ವಿಶೇಷವಾಗಿ ಗಮನ ಸೆಳೆದರು.

2004ರ ಲೋಕಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಅವರು ರಾಜಕೀಯಕ್ಕೆ ಮೊದಲ ದೃಢ ಹೆಜ್ಜೆ ಇಟ್ಟರು. ಆಗ ಅವರು ಹಲವಾರು ಕ್ಷೇತ್ರಗಳಲ್ಲಿ ರ‍್ಯಾಲಿಗಳನ್ನು ನಡೆಸಿದರು. ಉತ್ತರ ಪ್ರದೇಶದ ಹೊರಗೆ ಕೂಡ ಮೊದಲ ಬಾರಿಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

2019ರ ಜನವರಿ 23ರಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯಾಗಿ ನೇಮಕಗೊಂಡಾಗ ಪ್ರಿಯಾಂಕಾ ಅವರು ಔಪಚಾರಿಕವಾಗಿ ಸಕ್ರಿಯ ರಾಜಕೀಯ ಪ್ರವೇಶಿಸಿದರು. 2020ರ ಸೆಪ್ಟೆಂಬರ್ 11ರಂದು ಇಡೀ ಉತ್ತರ ಪ್ರದೇಶದ ಉಸ್ತುವಾರಿ ಹೊಣೆಗಾರಿಕೆ ಪ್ರಿಯಾಂಕಾ ಅವರ ಹೆಗಲೇರಿತು.2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದರು.

ಕಾಂಗ್ರೆಸ್ ಪಕ್ಷದ ಒಂದು ವರ್ಗ ಪ್ರಿಯಾಂಕಾ ಗಾಂಧಿ ಮುಂದೊಂದು ದಿನ ಪಕ್ಷವನ್ನು ಮುನ್ನಡೆಸಬೇಕೆಂದು ಬಯಸುತ್ತದೆ ಎನ್ನುವುದು ನಿಜ. ನೇರವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸೇರ್ಪಡೆಗೊಂಡಿದ್ದ ಪ್ರಿಯಾಂಕಾ ಅವರನ್ನು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ಮಾಡಲಾಗಿತ್ತಾದರೂ, ಅವರ ವರ್ಚಸ್ಸನ್ನು ಸ್ಥಾನಗಳನ್ನಾಗಿ ಪರಿವರ್ತಿಸುವುದು ಆಗ ಕಾಂಗ್ರೆಸ್ ಗೆ ಸಾಧ್ಯವಾಗಿರಲಿಲ್ಲ.

ಆದರೆ ಅದೇ ಪ್ರಿಯಾಂಕಾ ಅನಂತರದ ವರ್ಷಗಳಲ್ಲಿ ತಂತ್ರಗಾರಿಕೆಯಲ್ಲಿ ಪಳಗಿದ್ದಾರೆ. ಹೆಚ್ಚು ಬೇಡಿಕೆಯಿರುವ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ. ಅಜ್ಜಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನೇ ನಿಕಟವಾಗಿ ಹೋಲುತ್ತಾರೆಂಬ ಕಾರಣಕ್ಕೂ ಗಮನ ಸೆಳೆಯುವ ಪ್ರಿಯಾಂಕಾ, ಅಷ್ಟಕ್ಕೇ ಸೀಮಿತರಾಗದೆ ರಾಜಕೀಯದಲ್ಲಿ ತಮ್ಮ ಸಾಮರ್ಥ್ಯದಿಂದಲೂ ಹೆಸರಾಗುತ್ತಿದ್ದಾರೆ.

ಮೋದಿಯಂಥವರಿಗೆ ಸವಾಲೆಸೆಯಬಲ್ಲ ಮಾತುಗಾರಿಕೆಯಿಂದಲೂ ಪ್ರಿಯಾಂಕಾ ಈಗಾಗಲೇ ಗಮನ ಸೆಳೆದವರು. ತಾಯಿ ಸೋನಿಯಾ ಅವರ ಕ್ಷೇತ್ರ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಅವರೇ ಸ್ಪರ್ಧಿಸಲಿದ್ದಾರೆ ಎಂದು ಮಾತುಗಳಿದ್ದವು. ಅದಕ್ಕಾಗಿಯೇ ಕಾಂಗ್ರೆಸ್ ಅನಂತರ ವಯನಾಡ್ ಸಂಸದೀಯ ಸ್ಥಾನದಿಂದ ಪ್ರಿಯಾಂಕಾ ಉಮೇದುವಾರಿಕೆಯನ್ನು ಘೋಷಿಸಿತ್ತು.

ವಯನಾಡನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ರಾಹುಲ್ ಅನುಪಸ್ಥಿತಿಯ ಕೊರತೆ ಜನರನ್ನು ಕಾಡದಂತೆ ನೋಡಿಕೊಳ್ಳುವೆ. ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಉತ್ತಮ ಪ್ರತಿನಿಧಿಯಾಗಿರಲು ಸಾಧ್ಯವಿರುವಷ್ಟೂ ಪ್ರಯತ್ನಿಸುತ್ತೇನೆ ಎಂದು ವಾದ್ರಾ ಜೂನ್‌ನಲ್ಲಿ ಪಕ್ಷ ತಮ್ಮನ್ನು ಮೊದಲ ಬಾರಿಗೆ ಅಭ್ಯರ್ಥಿಯಾಗಿ ಹೆಸರಿಸಿದಾಗಲೇ ಹೇಳಿದ್ದರು.

ರಾಯ್ ಬರೇಲಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನಾನು ಅಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ ಮತ್ತು ಆ ಸಂಬಂಧ ಎಂದಿಗೂ ಮುರಿಯುವುದಿಲ್ಲ ಎಂದು ಕೂಡ ಪ್ರಿಯಾಂಕಾ ಹೇಳುತ್ತಾರೆ.

ಪ್ರಿಯಾಂಕಾ ಅವರು 1972ರ ಜನವರಿ 12ರಂದು ಜನಿಸಿದರು. ಶಾಲಾ ಶಿಕ್ಷಣವನ್ನು ನವದೆಹಲಿಯ ಮಾಡರ್ನ್ ಸ್ಕೂಲ್ ಮತ್ತು ಕಾನ್ವೆಂಟ್ ಆಫ್ ಜೀಸಸ್ & ಮೇರಿಯಲ್ಲಿ ಪಡೆದರು. ದೆಹಲಿ ವಿಶ್ವವಿದ್ಯಾನಿಲಯದ ಜೀಸಸ್ & ಮೇರಿ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ಪ್ರಿಯಾಂಕಾ ಅವರು ನವದೆಹಲಿ ಮೂಲದ ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮತ್ತು ಒಬ್ಬ ಮಗಳು. ಪ್ರಿಯಾಂಕಾ ಅವರು ಬೌದ್ಧ ಫಿಲಾಸಫಿಯ ಕಟ್ಟಾ ಅನುಯಾಯಿಯಾಗಿದ್ದಾರೆ.

ಯುಪಿಎ ಸರಕಾರ ಇದ್ದಾಗ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಅವರು ಸೋನಿಯಾ ಗಾಂಧಿ ಅವರ ಪ್ರಭಾವ ಬಳಸಿಕೊಂಡು ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅದೇ ಆರೋಪಗಳನ್ನು ಕೈ ಬಿಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News