ಬೊಮ್ಮಾಯಿ ಪುತ್ರನಿಗೆ ಯಾಸಿರ್ ಪಠಾಣ್ ಸವಾಲು

Update: 2024-10-24 17:05 GMT

ಶಿಗ್ಗಾವಿ ಸವಣೂರ ಕ್ಷೇತ್ರದಲ್ಲಿ ಕೊನೆಗೂ ಕಾರ್ಯಕರ್ತರ ಮಾತಿಗೆ ಕಾಂಗ್ರೆಸ್ ಮನ್ನಣೆ ನೀಡಿದೆ. ಕ್ಷೇತ್ರದಲ್ಲಿ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದವರಿಗೆ ಟಿಕೆಟ್ ಕೊಡಬೇಕು ಎಂಬ ಆಗ್ರಹಕ್ಕೆ ಪುರಸ್ಕಾರ ಸಿಕ್ಕಿದೆ. ಈ ಬಾರಿ ಮುಸಲ್ಮಾನರಿಗೆ ಟಿಕೆಟ್ ಬೇಡ ಎಂಬ ವಾದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಒಪ್ಪಿಗೆ ನೀಡಿಲ್ಲ.

ಪಕ್ಷದಲ್ಲಿ ಹಾಗು ಸ್ಥಳೀಯ ಕಾರ್ಯಕರ್ತರ ನಡುವೆ ಜನಪ್ರಿಯ ನಾಯಕರಾಗಿರುವ ಯಾಸಿರ್ ಪಠಾಣ್ ಅವರಿಗೆ ಪಕ್ಷ ಮಣೆ ಹಾಕಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಪೈಪೋಟಿ ಜೋರಾಗಿತ್ತು .

ಅದರಲ್ಲೂ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುವುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಆ ಕುತೂಹಲಕ್ಕೆ ತೆರೆಬಿದ್ದಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ಶಿಗ್ಗಾಂವಿ ಸವಣೂರ ಕ್ಷೇತ್ರದ ಉಪಚುನಾವಣೆಗೆ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯಾಸಿರ್ ಖಾನ್ ಪಠಾಣ್ ರಿಗೆ ಅವಕಾಶ ನೀಡಬೇಕು ಎಂದು ಕಾರ್ಯಕರ್ತರಿಂದ ವ್ಯಾಪಕ ಆಗ್ರಹ ಕೇಳಿ ಬಂದಿತ್ತು. 2023 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 35,978 ಮತಗಳ ಅಂತರದಿಂದ ಬಸವರಾಜ ಬೊಮ್ಮಾಯಿ ವಿರುದ್ಧ ಪರಾಜಿತಗೊಂಡಿದ್ದರು.

Full View

2024 ರ ಉಪಚುನಾವಣೆಯಲ್ಲಿ ಯಾಸಿರ್ ಖಾನ್ ಪಠಾಣ್ ರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಬೇಕು. ಅವರಿಗೆ ಶಿಗ್ಗಾಂವಿ ಮತ್ತು ಸವಣೂರ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಬಸವರಾಜ ಬೊಮ್ಮಾಯಿ ವಿರುದ್ಧ ಸೋತರೂ ಕ್ಷೇತ್ರದ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಪಕ್ಷದ ಸಂಘಟನೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಗಿತ್ತು.

ಶಿಗ್ಗಾಂವಿ ತಾಲೂಕಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಕಷ್ಟಕ್ಕೆ ನೆರವಾಗಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ರವರು 100016 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿಯಾದ ಯಾಸೀರ್ ಅಹ್ಮದ್ ಖಾನ್ ಪಠಾಣ್ ರವರು 64038 ಮತಗಳನ್ನು ಪಡೆದು ಸೋಲನುಭವಿಸಿದ್ದರು. ಆದ್ದರಿಂದ ಈ ಬಾರಿ ಉಪಚುನಾವಣೆಯಲ್ಲಿ ಅವರಿಗೇ ಅವಕಾಶ ಸಿಗಬೇಕು ಎಂಬ ಆಗ್ರಹ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಂದ ಇತ್ತು.

ಶಿಗ್ಗಾಂವ ಖಾಜಿಖಾನ ಓಣಿಯವರಾದ ಯಾಸಿರ್ ಅಹ್ಮದ್ ಖಾನ್ ಪಠಾಣ್ 1981ರ ಆಗಸ್ಟ್ 20ರಂದು ಜನಿಸಿದರು. ತಂದೆ ಮಹಮ್ಮದ್ ಖಾನ್ ಪಠಾಣ್ 1987 ರಿಂದ 1992 ರವರೆಗೆ ಧಾರವಾಡ ಜಿಲ್ಲಾ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದವರು.ಮಹಮ್ಮದ್ ಖಾನ್ ಪಠಾಣ್ ಅವರ ಐವರು ಮಕ್ಕಳಲ್ಲಿ ಯಾಸಿರ್ ಒಬ್ಬರು.

ಕರ್ನಾಟಕ ಕಾಲೇಜು ಧಾರವಾಡದಲ್ಲಿ B A ಪದವಿ ಪಡೆದಿದ್ದಾರೆ. ರಾಜಕೀಯದಲ್ಲಿ ಹಿರಿಯ ನಾಯಕರ ಒಡನಾಟ ಇರುವವರು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಸತೀಶ್ ಜಾರಕಿಹೊಳೆ, ಜಮೀರ್ ಅಹ್ಮದ್ ಖಾನ್ , ಸಲಿಂ ಅಹ್ಮದ್ .ಎಚ್ ಕೆ ಪಾಟೀಲ್. ಶ್ರೀನಿವಾಸ್ ಮಾನೆ ಸೇರಿಂದಂತೆ ಹಲವು ನಾಯಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

2013 ಶಿಗ್ಗಾಂವ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. 2023 ವಿಧಾನ ಸಭೆ ಚುನಾವಣೆಯಲ್ಲಿ ಶಿಗ್ಗಾಂವ - ಸವಣೂರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಬಸವರಾಜ ಬೊಮ್ಮಾಯಿ ವಿರುದ್ಧ ಸೋತರು. 2023ರ ಸೋಲಿನ ನಂತರ ಸುಮ್ಮನಾಗದೆ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆಗಾಗಿ ದುಡಿದರು. 2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಕ್ಷೇತ್ರದ ಉದ್ದಗಲಗಳಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು.

ಕಳೆದ 25 ವರ್ಷಗಳಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ 30 ಸಾವಿರಕ್ಕೂ ಕಡಿಮೆ ಮತಗಳು ಬರುತ್ತಿದ್ದ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ವಿನೋದ ಅಸೂಟಿಗೆ 8300 ಮತಗಳ ಮುನ್ನಡೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೋದಿ ಅಲೆ, ಪ್ರಭಾವಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭ್ಯರ್ಥಿ ಮತ್ತು ಬಸವರಾಜ್ ಬೊಮ್ಮಾಯಿ ಶಾಸಕರಾಗಿ ಇದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎನ್ನುವ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.

ವಿಶೇಷವಾಗಿ ಕ್ಷೇತ್ರದ ಎಲ್ಲಾ ಸಮೂದಾಯದ ನಾಯಕರನ್ನು ಒಗ್ಗೂಡಿಸಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News