ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗದ ‘ಸ್ಕಾಲರ್ ಶಿಪ್’

Update: 2024-10-24 06:20 GMT

ಸಾಂದರ್ಭಿಕ ಚಿತ್ರ PC: freepik

ಮಂಗಳೂರು: ಪ್ರಸಕ್ತ (2024-25) ಶೈಕ್ಷಣಿಕ ವರ್ಷ ಆರಂಭಗೊಂಡು ಐದು ತಿಂಗಳಾಗುತ್ತಾ ಬಂದರೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಎಸ್‌ಎಸ್‌ಪಿ-ಸ್ಕಾಲರ್‌ಶಿಪ್ ಭಾಗ್ಯ ಇನ್ನೂ ಲಭಿಸಿಲ್ಲ. ಈ ವಿದ್ಯಾರ್ಥಿ ವೇತನಕ್ಕೆ ಯಾವಾಗ ಅರ್ಜಿ ಸಲ್ಲಿಸಬಹುದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವೂ ಅಧಿಕಾರಿಗಳಿಂದ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೆತ್ತವರು ಕೂಡ ಸರಕಾರದ ಈ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದ್ದರೂ ಪದೇ ಪದೇ ಕಾಡುವ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿದೆ. ಸರ್ವರ್ ಸಮಸ್ಯೆ ನೀಗದ ಕಾರಣ ವಿದ್ಯಾರ್ಥಿಗಳು ಮತ್ತು ಹೆತ್ತವರು ಸೈಬರ್ ಸೆಂಟರ್‌ಗಳಿಗೆ ಅಲೆದಾಡುವುದು ತಪ್ಪುತ್ತಿಲ್ಲ.

ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಜೋಡಣೆ ಆಗದಿರುವುದು, ಇಕೆವೈಸಿ ಮತ್ತಿತರ ತಾಂತ್ರಿಕ ಕಾರಣದಿಂದ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಹಲವರಿಗೆ ಇನ್ನೂ ವಿದ್ಯಾರ್ಥಿ ವೇತನ ಲಭಿಸಿಲ್ಲ ಎಂದು ಹೇಳಲಾಗುತ್ತಿದೆ. ಕಳೆದ ಬಾರಿಯ ವಿದ್ಯಾರ್ಥಿ ವೇತನ ಪಡೆದವರು ಈ ಬಾರಿ ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಅದು ತನ್ನಿಂತಾನಾಗಿಯೇ ಪುನರಾವರ್ತನೆಗೊಳ್ಳಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಆದಾಗ್ಯೂ ಕೆಲವು ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಆ ಬಗ್ಗೆ ಖಚಿತ ಮಾಹಿತಿಯಿಲ್ಲದ ಕಾರಣ ಸೈಬರ್ ಸೆಂಟರ್‌ಗಳಿಗೆ ಅಲೆದಾಡುವುದು ಕಂಡು ಬರುತ್ತಿದೆ. ಒಮ್ಮೆ ವಿದ್ಯಾರ್ಥಿ ವೇತನ ಪಾವತಿಯಾಗದಿದ್ದರೆ ಮತ್ತೆ ಜಮೆ ಆಗದಿರುವ ಸಾಧ್ಯತೆ ಇದೆ ಎಂದು ಭಾವಿಸಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್‌ಗಳ ಮುಂದೆ ದುಂಬಾಲು ಬೀಳುತ್ತಿರುವುದನ್ನು ಕಾಣಬಹುದಾಗಿದೆ.

ಈ ಹಿಂದೆ ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದರೂ ತಾಂತ್ರಿಕ ಕಾರಣದಿಂದ ಹಣ ಜಮೆಯಾಗದವರು ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಲು ಸೂಚಿಸಲಾಗಿತ್ತು. ಅದರಂತೆ ನಾವು ಅಂಚೆ ಕಚೇರಿಯಲ್ಲಿ ಹೊಸ ಖಾತೆ ತೆರೆದರೂ ನಮಗಿನ್ನೂ ವಿದ್ಯಾರ್ಥಿ ವೇತನ ಜಮೆಯಾಗಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರ ಹೆತ್ತವರು ‘ವಾರ್ತಾಭಾರತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ರಾಜ್ಯ ಸರಕಾರದ ಎಸ್‌ಎಸ್‌ಪಿ ವಿದ್ಯಾರ್ಥಿ ವೇತನದ ಕತೆ ಹೀಗಾದರೆ, ಕೇಂದ್ರ ಸರಕಾರದ ಎನ್‌ಎಸ್‌ಪಿ ಏನಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ವರ್ಷದ ಹಿಂದೆ ಎನ್‌ಎಸ್‌ಪಿ ವಿದ್ಯಾರ್ಥಿ ವೇತನಕ್ಕಾಗಿ ಶಾಲೆಗಳಲ್ಲಿ ಕ್ಯಾಂಪ್ ಮಾಡಿ ಬೆರಳಚ್ಚು ಪಡೆಯಲಾಗಿದೆ. ಆದರೆ ಹಣ ಮಾತ್ರ ಜಮೆ ಆಗಿಲ್ಲ ಎಂದು ಹಲವು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಕಟಿಸಲಾಗಿದ್ದ ಶ್ರಮ ಶಕ್ತಿ, ಟ್ಯಾಕ್ಸಿ ಗೂಡ್ಸ್, ಗಂಗಾ ಕಲ್ಯಾಣ, ಕಿರುಸಾಲ, ಸ್ವಯಂ ಉದ್ಯೋಗ ಸಹಿತ ಮತ್ತಿತರ ಯೋಜನೆಗಳ ಗುರಿಯನ್ನು ತೀರಾ ಕಡಿಮೆ ಸಂಖ್ಯೆಗೆ ಇಳಿಸಲಾಗಿದೆ. ಇದು ಅಲ್ಪಸಂಖ್ಯಾತರ ನಿರೀಕ್ಷೆಯನ್ನು ಸುಳ್ಳಾಗಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಆರ್ಥಿಕವಾಗಿ ಹಿಂದುಳಿದ ಹೆಣ್ಣಿನ ಮದುವೆಯ ಸಂದರ್ಭ ಕೊಡಲಾಗುತ್ತಿದ್ದ 50,000 ರೂ.ವಿನ ಶಾದಿಭಾಗ್ಯ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಅರಿವು ಸಾಲ ಯೋಜನೆಯನ್ನು ಇದೀಗ ಸಿಇಟಿ/ನೀಟ್ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನೂ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಪಶುಸಂಗೋಪನೆ, ಮೈಕ್ರೋ ಸಾಲ, ಸ್ವಯಂ ಉದ್ಯೋಗ ಯೋಜನೆಯಲ್ಲಿದ್ದ 5 ಲಕ್ಷ ರೂ. ಸಬ್ಸಿಡಿಯನ್ನು ಕಳೆದ ವರ್ಷದಿಂದ 1ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದೆ. ಆಯಾ ಕ್ಷೇತ್ರದ ಶಾಸಕರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ಕಳೆದ ವರ್ಷ ಆಯ್ಕೆಯಾದ ಫಲಾನುಭವಿಗಳಿಗೆ ಇನ್ನೂ ಹಣ ಜಮೆ ಆಗಿಲ್ಲ. 2024- 25ರಲ್ಲಿ ಈ ಯಾವ ಯೋಜನೆಗಳು ಕೂಡಾ ಪ್ರಾರಂಭವಾಗಿಲ್ಲ ಎಂಬ ಆರೋಪವೂ ಇದೆ.

ಸರ್ವರ್ ಸ್ತಬ್ಧ

ಅಲ್ಪಸಂಖ್ಯಾತರು ಅದರಲ್ಲೂ ರಾಜ್ಯದ ಮುಸ್ಲಿಮ್ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗಾಗಿ ಅಧಿಕ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವುದು ಸಾಮಾನ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತಡೆಯುವ ಸಲುವಾಗಿ ಕೆಲವು ದಿನಗಳ ಕಾಲ ಸರ್ವರ್ ಸ್ತಬ್ಧಗೊಳಿಸಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ. ಆದರೆ ಇದನ್ನು ಹಿರಿಯ ಅಧಿಕಾರಿಗಳು ನಿರಾಕರಿಸುತ್ತಿದ್ದು, ತಾಂತ್ರಿಕ ಕಾರಣದಿಂದ ಕೆಲವು ದಿನ ಸ್ಥಗಿತಗೊಳಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಸರ್ವರ್ ಸ್ತಬ್ಧಗೊಳಿಸಲಾಗಿಲ್ಲ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸರಕಾರಕ್ಕೆ ಕಾಳಜಿ ಇಲ್ಲ

ರಾಜ್ಯ ಸರಕಾರಕ್ಕೆ ಮತೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಕಾಳಜಿಯೇ ಇಲ್ಲ. ಹೆಸರಿಗಷ್ಟೇ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಿವೆ. ಆದರೆ ಯಾವುದನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಬೇರೆ ಬೇರೆ ಪ್ರಮುಖ ಯೋಜನೆಗಳ ಗುರಿಯನ್ನು ಕಡಿತಗೊಳಿಸಿದೆ. 2018-19ನೇ ಸಾಲಿನಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಫಲಾನುಭವಿಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. 2023-24ನೇ ಸಾಲಿನಲ್ಲಿ ಅದರ ಗುರಿ ಕೇವಲ 2ಕ್ಕೆ ಸೀಮಿತವಾಗಿದೆ. ಅಲ್ಲದೇ ಅದರ ಅನುದಾನವೂ ಬಂದಿಲ್ಲ. 2024-25ನೇ ಸಾಲಿನಲ್ಲಿ ಬಹುತೇಕ ಯೋಜನೆಗಳಿಗೆ ಅರ್ಜಿಯನ್ನೇ ಆಹ್ವಾನಿಸಿಲ್ಲ ಎಂಬ ಆರೋಪವಿದೆ.

ಈವರೆಗೆ ರಾಜ್ಯದ 3.13 ಲಕ್ಷ ವಿದ್ಯಾರ್ಥಿಗಳಿಗೆ 70 ಕೋ.ರೂ.ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ. ಇಕೆವೈಸಿ, ಆಧಾರ್ ಸೀಡಿಂಗ್ ಸಹಿತ ಕೆಲವು ತಾಂತ್ರಿಕ ಕಾರಣಗಳಿಂದ ಅಲ್ಪಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಯಾಗಿಲ್ಲ. ಸೇವಾ ಸಿಂಧು ಪೋರ್ಟಲ್‌ನ್ನು ನಿರ್ವಹಣೆ ಮಾಡುತ್ತಿದ್ದರಿಂದ ಒಂದು ವಾರ ಸರ್ವರ್ ಸ್ಥಗಿತವಾಗಿತ್ತು. ಈಗ ಎಂದಿನಂತೆ ಕಾರ್ಯಾಚರಿಸುತ್ತಿದೆ. ಕಳೆದ ವರ್ಷ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ 1,700 ಕೋ.ರೂ. ಅನುದಾನ ನೀಡಲಾಗಿತ್ತು. ಅದರಲ್ಲಿ 1,600 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸಲಾಗಿದೆ.

- ಜಿಲಾನಿ ಮೊಕಾಶಿ, ನಿರ್ದೇಶಕರು- ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News