ಗೋವಿನ ಹೆಸರಿನ ರಾಜಕೀಯದ ಬಲಿಪಶುಗಳು

ಸಾಬಿರ್ ಮಲಿಕ್ ಗೋಮಾಂಸದ ಹೆಸರಲ್ಲಿ ಹತ್ಯೆಯಾಗಿ ಹೋದರು. ಆದರೆ, ಕೊಲೆಗಡುಕರಾಗಿ ಜೈಲುಪಾಲಾಗಿರುವ ಯುವಕರ ಬದುಕು ಕೂಡ ಅದೇ ಗೋಮಾಂಸದ ಹೆಸರಲ್ಲಿಯೇ ಬಲಿಯಾಗಿ ಹೋಯಿತಲ್ಲವೆ? ಗೋಹತ್ಯಾ ನಿಷೇಧ ಕಾಯ್ದೆಯಲ್ಲಿ ಯಾರನ್ನಾದರೂ ಕೊಲ್ಲುವುದಕ್ಕೆ ಅವಕಾಶವಿಲ್ಲ. ಆದರೆ ಹಿಂದುತ್ವದ ರಕ್ಷಣೆ ಹೆಸರಿನ ರಾಜನೀತಿ ಆ ಅಷ್ಟೂ ಯುವಕರ ಇಡೀ ಬದುಕನ್ನೇ ಹಾಳುಗೆಡವಿತಲ್ಲವೆ?

Update: 2024-10-27 06:31 GMT

ಸಾಬಿರ್ ಮಲಿಕ್ ಹತ್ಯೆ ಪ್ರಕರಣದಲ್ಲಿ ಹೊಸ ಮಾಹಿತಿ ಹೊರಬಿದ್ದಿದೆ. ಆತ ಕೊಲೆಯಾದದ್ದು ಗೋಮಾಂಸದ ಹೆಸರಲ್ಲಿ. ಆದರೆ ಈಗ ಪ್ರಯೋಗಾಲಯದಲ್ಲಿ ಅದು ಗೋಮಾಂಸ ಅಲ್ಲ ಎಂದು ಸಾಬೀತಾಗಿದೆ.

ಹಿಂದೂಗಳನ್ನು ಜಾಗೃತಗೊಳಿಸುವ ಹೆಸರಿನಲ್ಲಿ ಈ ದೇಶದ ಜನರ ಮಕ್ಕಳನ್ನು ಜಾಗೃತಗೊಳಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಎಲ್ಲಾ ರೀತಿಯ ಬೋಗಸ್ ಕೋಮು ಸಿದ್ಧಾಂತಗಳನ್ನು ಪ್ರಚಾರ ಮಾಡುವ ಮೂಲಕ ಯುವಕರ ಮನಸ್ಸಲ್ಲಿ ವಿಷ ತುಂಬಿಸಲಾಗಿದೆ. ಯಾರ ಮನೆಗೆ ಬೇಕಾದರೂ ಹೋಗಿ ಹಿಂಸಾಚಾರ ನಡೆಸಬಹುದು, ಯಾರನ್ನು ಬೇಕಾದರೂ ಕೊಲ್ಲಬಹುದು ಎಂಬ ಅಹಂಕಾರವನ್ನು ಅವರಲ್ಲಿ ತುಂಬಲಾಗಿದೆ.

ಹಿಂದೂ ಜಾಗೃತಿ ಹೆಸರಲ್ಲಿ ನಡೆಯುತ್ತಿರುವ ಮತಾಂಧ ರಾಜಕೀಯ ಇವರನ್ನು ಜೈಲಿಗೆ ತಳ್ಳುತ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ನಂತಹ ಬೋಗಸ್ ವಿಷಯಗಳನ್ನು ಮುಂದೆ ಮಾಡಿಕೊಂಡು ರಾಜಕೀಯ ಮಾಡುತ್ತಿರುವವರ ಬಲಿಪಶುಗಳು ಇವರೆಲ್ಲ.

ವಿವೇಚನೆಯೇ ಇಲ್ಲದ ಹುಂಬ ಹುಡುಗರು ಇಂಥವರ ಮಾತುಗಳಿಗೆ ಮರುಳಾಗಿ ದ್ವೇಷದ ವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ತಮ್ಮನ್ನು ತಾವು ಧರ್ಮದ ರಕ್ಷಕರು ಎಂಬ ಅಮಲನ್ನು ಆ ಹುಡುಗರೆಲ್ಲ ತಲೆಯೊಳಗೆ ತುಂಬಿಕೊಳ್ಳುತ್ತಿದ್ದಾರೆ. ರಕ್ಷಣೆ ಮಾಡುವುದು ಪೊಲೀಸರ ಕೆಲಸ. ಆದರೆ ಈ ಹುಡುಗರು ರಕ್ಷಣೆಯ ಹೊಣೆಯನ್ನು ತಾವೇ ಹೊತ್ತುಕೊಳ್ಳತೊಡಗಿದ್ದಾರೆ.

ಶೋಭಾಯಾತ್ರೆ ವೇಳೆ ಹಾಡಿಗೆ ಕುಣಿಯುತ್ತ ಹೋಗುವವರು ಇದ್ದಕ್ಕಿದ್ದಂತೆ ಇನ್ನೊಂದು ಸಮುದಾಯವನ್ನು ಕೆಣಕುವ, ಅವಮಾನಿಸುವ ಹಾಡು ಶುರು ಮಾಡುತ್ತಾರೆ. ಅಂತಹ ಹುಡುಗರನ್ನೆಲ್ಲ ಇನ್ನೂ ಎತ್ತಿಕಟ್ಟುವ ಕೆಲಸ ಆಗುತ್ತಿದೆ.

ಅಂತಹದೇ ಹುಡುಗರಾದ ಅಭಿಷೇಕ್, ರವೀಂದರ್, ಮೋಹಿತ್, ಕಮಲ್ಜೀತ್, ಸಾಹಿಲ್ ಎಂಬವರು ಸಾಬಿರ್ ಮಲಿಕ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಗೋಮಾಂಸ ತಿಂದಿದ್ದಾರೆಂಬ ಅನುಮಾನದ ಮೇಲೆ ಸಾಬಿರ್ ಮಲಿಕ್ ಎಂಬ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕನನ್ನು ಹರ್ಯಾಣದ ಚರಖಿ ದಾದ್ರಿ ಜಿಲ್ಲೆಯಲ್ಲಿ ಹೊಡೆದು ಕೊಂದ ಆರೋಪದ ಮೇಲೆ ಈ ಆರೂ ಯುವಕರನ್ನು ಬಂಧಿಸಲಾಗಿತ್ತು.

ಆ ಯುವಕರು ಯಾರನ್ನೇ ಆದರೂ ಹತ್ಯೆ ಮಾಡುವಂಥದ್ದೇನಿತ್ತು? ಆತ ತಪ್ಪು ಮಾಡಿದ್ದಾನೆ ಎಂದಾಗಿದ್ದರೆ ಪೊಲೀಸರಿಗೆ ತಿಳಿಸಬಹುದಿತ್ತು. ಆದರೆ ಕೊಲೆ ನಡೆದ ಮೇಲೆ ಪೊಲೀಸರಿಗೆ ಸುದ್ದಿ ಮುಟ್ಟಿತು. ಗೋಮಾಂಸ ತಿಂದವರನ್ನು ಕೊಲ್ಲಬಹುದು ಎಂದು ಈ ಯುವಕರಿಗೆ ಹೇಳಿದವರು ಯಾರು? ಇದಕ್ಕೆಲ್ಲ ಯಾರು ಹೊಣೆ?

ಇಲ್ಲಿ ಸಾಬಿರ್ ಗೋಮಾಂಸದ ಹೆಸರಲ್ಲಿ ಹತ್ಯೆಯಾಗಿ ಹೋದರು. ಆದರೆ, ಕೊಲೆಗಡುಕರಾಗಿ ಜೈಲುಪಾಲಾಗಿರುವ ಯುವಕರ ಬದುಕು ಕೂಡ ಅದೇ ಗೋಮಾಂಸದ ಹೆಸರಲ್ಲಿಯೇ ಬಲಿಯಾಗಿ ಹೋಯಿತಲ್ಲವೆ? ಗೋಹತ್ಯಾ ನಿಷೇಧ ಕಾಯ್ದೆಯಲ್ಲಿ ಯಾರನ್ನಾದರೂ ಕೊಲ್ಲುವುದಕ್ಕೆ ಅವಕಾಶವಿಲ್ಲವಲ್ಲ. ಆದರೆ ಹಿಂದುತ್ವದ ರಕ್ಷಣೆ ಹೆಸರಿನ ರಾಜನೀತಿ ಆ ಅಷ್ಟೂ ಯುವಕರ ಇಡೀ ಬದುಕನ್ನೇ ಹಾಳುಗೆಡವಿತಲ್ಲವೆ?

ಧರ್ಮದ ಹೆಸರಲ್ಲಿ ಯುವಕರಲ್ಲಿ ಆಕ್ರೋಶ ಬಡಿದೆಬ್ಬಿಸುವ ರಾಜಕೀಯ ದುಷ್ಟತನದ ಬಗ್ಗೆ ಚರ್ಚೆಯಾಗಬೇಕಾಗಿದೆ. ಹರ್ಯಾಣದ ಚರಖಿ ದಾದ್ರಿ ಜಿಲ್ಲೆಯಲ್ಲಿ ಆಗಸ್ಟ್ ೨೭ರಂದು ಸಾಬಿರ್ ಮಲಿಕ್ ಹತ್ಯೆಯಾಯಿತು. ಆ ವೇಳೆ ಸಿಎಂ ನಾಯಬ್ ಸಿಂಗ್ ಸೈನಿ ಹೇಳಿಕೆಯೊಂದು ಬಂತು.

‘‘ಆಕ್ರೋಶಿತ ಗುಂಪನ್ನು ತಡೆಯುವವರು ಯಾರು? ಹಳ್ಳಿಯ ಜನರಿಗೆ ಹೇಗೆ ಹೇಳುವುದು?’’ ಎಂಬ ಪ್ರಶ್ನೆಯನ್ನು ಅವರು ಕೇಳಿದ್ದರು. ಆದರೆ ಅದನ್ನು ತಡೆಯಬೇಕಿದೆ, ಅದಕ್ಕಾಗಿ ಕಾನೂನು ಇದೆ ಎಂಬುದನ್ನು ಅವರು ಹೇಳದೇ ಹೋದರು.

ಹರ್ಯಾಣದಲ್ಲಿ ಗೋಹತ್ಯೆ ನಿಷಿದ್ಧ. ಅದು ಅಲ್ಲಿ ಕಾನೂನು. ಎಮ್ಮೆಯ ಮಾಂಸದ ಮೇಲೆ ನಿರ್ಬಂಧವಿಲ್ಲ. ಆದರೆ ಭಾರತದಿಂದ ಬೀಫ್ ರಫ್ತಾಗುತ್ತದೆ. ಜಗತ್ತಿನಲ್ಲೇ ಬೀಫ್ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ.

ತನ್ನ ಅನೇಕ ಸ್ನೇಹಿತರು ಈ ವ್ಯಾಪಾರದಲ್ಲಿದ್ದಾರೆ. ಇದನ್ನು ಧರ್ಮದ ಜೊತೆ ಜೋಡಿಸಬೇಡಿ ಎಂದು ಸ್ವತಃ ಮೋದಿ ಹೇಳುತ್ತಾರೆ. ಸಂದರ್ಶನವೊಂದರಲ್ಲಿ ಅವರು, ‘‘ಮಾಂಸ ರಫ್ತು ಒಂದು ಸಮುದಾಯಕ್ಕೆ ಸಂಬಂಧಿಸಿಲ್ಲ. ನನ್ನ ಅನೇಕ ಸ್ನೇಹಿತರು ಇದೇ ಉದ್ಯಮದಲ್ಲಿದ್ದಾರೆ. ಅದನ್ನು ಸಮುದಾಯದ ಜೊತೆಗೆ ತಳುಕು ಹಾಕಬೇಡಿ’’ ಎಂದಿದ್ದರು. ಕೊಲೆ ನಡೆದದ್ದು ಗೋಮಾಂಸ ಸೇವಿಸಿದ್ದಾನೆ ಎಂಬ ಅನುಮಾನದ ಮೇಲೆ. ಆದರೆ ಲ್ಯಾಬ್ ರಿಪೋರ್ಟ್ ಹೇಳುವ ಪ್ರಕಾರ, ಅದು ಗೋಮಾಂಸವಾಗಿರಲಿಲ್ಲ.

ಅವತ್ತಿನ ವರದಿ ಪ್ರಕಾರ, ಮಲಿಕ್ ಗೋಮಾಂಸ ಸೇವಿಸಿದ್ದಾನೆ ಎಂದು ಅನುಮಾನಿಸಿ ಆರೋಪಿ ಯುವಕರು ಆತನನ್ನು ಅಂಗಡಿಯೊಂದರ ಬಳಿ ಕರೆಸಿ ಥಳಿಸಿದ್ದಾರೆ. ಆಗ ಕೆಲವರು ಮಧ್ಯಪ್ರವೇಶಿಸಿ, ಹೊಡೆಯುವುದನ್ನು ತಪ್ಪಿಸಿದ್ದಾರೆ. ಬಳಿಕ ಆರೋಪಿಗಳು ಮಲಿಕ್ರನ್ನು ಮತ್ತೊಂದು ಜಾಗಕ್ಕೆ ಕರೆದೊಯ್ದು ಮತ್ತೆ ಹೊಡೆದು ಕೊಂದು ಹಾಕಿದ್ದಾರೆ.

ಅವರನ್ನು ಪ್ರಚೋದಿಸುವ ವಾಟ್ಸ್ಆ್ಯಪ್ ಯೂನಿವರ್ಸಿಟಿ ಮಂದಿಯ ಮಕ್ಕಳು ವಿದೇಶದಲ್ಲಿ ಓದುತ್ತಾರೆ. ಆದರೆ ಯಾರೋ ಬಡವರ, ಅಮಾಯಕರ ಮಕ್ಕಳು ಗೋಮಾಂಸದ ಹೆಸರಿನಲ್ಲಿ ತಮ್ಮನ್ನು ತಾವು ರಕ್ಷಕರೆಂದು ಭಾವಿಸಿ, ಕಡೆಗೆ ಯಾರನ್ನೋ ಕೊಂದೂ ಬಿಡುತ್ತಾರೆ.

ಗೋರಕ್ಷಕರು ಎಂದುಕೊಂಡವರ ಗುಂಪೇ ಹರ್ಯಾಣದಲ್ಲಿ ಮುಸ್ಲಿಮ್ ಮನೆಗಳೊಳಗೆ ನುಗ್ಗಿ ಒಬ್ಬನನ್ನು ಕೊಂದೇಬಿಟ್ಟಿತ್ತು. ಆತನ ಮೇಲೆ ಹಲ್ಲೆಯಾಗುವಾಗ ಆತನ ಪತ್ನಿ ಆ ಗುಂಪಿನಲ್ಲಿದ್ದವರ ಕಾಲಿಗೆ ಬಿದ್ದು, ಗಂಡನನ್ನು ಹೊಡೆಯದಂತೆ ಬೇಡಿಕೊಂಡಿದ್ದಳು. ಆದರೆ ಅವರು ನಿಲ್ಲಿಸಿರಲೇ ಇಲ್ಲ. ಎಂಥ ದ್ವೇಷವನ್ನು ಆ ಗುಂಪು ತಲೆಯಲ್ಲಿ ತುಂಬಿಕೊಂಡಿದ್ದಿರಬಹುದು? ಕಾಲಿಗೆ ಬಿದ್ದು ಬೇಡಿಕೊಂಡರೂ ಮನಸ್ಸು ಕರಗಲಿಲ್ಲವೆಂದರೆ ಅದೆಂಥ ಕಟು ಮನಸ್ಸು? ಹಿಂದುತ್ವದ ಹೆಸರಿನಲ್ಲಿ ಅದೆಂಥ ಹಿಂಸಾತ್ಮಕ ಮನಃಸ್ಥಿತಿ?

ಗೋರಕ್ಷಣೆ ಮತ್ತು ಹಿಂದೂ ರಕ್ಷಣೆ ಹೆಸರಿನಲ್ಲಿ ಯಾರನ್ನೋ ಮನೆಯಿಂದ ಹೊರಗೆಳೆದು ಹಲ್ಲೆ ನಡೆಸುವುದಕ್ಕೆ, ಸಿಗರೇಟಿನಿಂದ ದೇಹವನ್ನು ಸುಡುವುದಕ್ಕೆ, ಕಡೆಗೆ ಹೊಡೆದು ಕೊಂದೇ ಹಾಕುವುದಕ್ಕೆ ಅಧಿಕಾರ ಕೊಟ್ಟವರಾದರೂ ಯಾರು?

ಈ ಪ್ರಶ್ನೆಗೆ ಉತ್ತರವನ್ನು ಈ ದೇಶದ ಜನರು ಕಂಡುಕೊಳ್ಳಲೇಬೇಕಾಗಿದೆ. ಇಲ್ಲದಿದ್ದರೆ ಗೋವಿನ ಹೆಸರಲ್ಲಿ ನಡೆಯುತ್ತಿರುವ ಈ ಘೋರ ರಾಜಕೀಯದಲ್ಲಿ ಇನ್ನಷ್ಟು ಜನ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ ಹಾಗೂ ಸಾವಿರಾರು ಹಿಂದೂ ಯುವಕರು ಜೈಲು ಸೇರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಎಚ್. ವೇಣುಪ್ರಸಾದ್

contributor

Similar News