ಬೋರ್ಡ್ ಪರೀಕ್ಷೆ ಹಿಂದೆ ಕಲಿಕೆಗಿಂತ ಪಟ್ಟಭದ್ರ ಹಿತಾಸಕ್ತಿಯಿದೆ

ಕಲಿಕೆಯು ನಿರಂತರ, ಸುರುಳಿಯಾಕಾರದ ಮತ್ತು ಸಮಗ್ರತೆಯ ಪ್ರಕ್ರಿಯೆಯಾಗಿರುವ ಕಾರಣ, ಮೌಲ್ಯಮಾಪನವೂ ಸಹ ನಿರಂತರ ಮತ್ತು ವ್ಯಾಪಕವಾಗಿರಬೇಕಾಗುತ್ತದೆ. ಅದು ವರ್ಷಕ್ಕೊಮ್ಮೆ ನಡೆಸುವ ಕೇಂದ್ರೀಕೃತ ಬೋರ್ಡ್ಪರೀಕ್ಷೆಯ ಮೂಲಕ ಹಣೆಬರಹ ನಿರ್ಧರಿಸುವ ಸಾಧನವಾಗಬಾರದು. ಕಲಿಕೆ ಮತ್ತು ಮೌಲ್ಯಮಾಪನ ನಿರಂತರ ಮತ್ತು ಪರಸ್ಪರ ಪೂರಕವಾಗಿರುವುದರಿಂದ ಅದನ್ನು ಶಾಲಾ ಹಂತದಲ್ಲಿ ಕೈಗೊಳ್ಳಬೇಕಾಗಿರುವುದು ಶಿಕ್ಷಕರೇ ಹೊರತು ಕಲಿಕೆಯ ಭಾಗವಾಗಿರದ ಮತ್ತು ಪಟ್ಟಭದ್ರ ಹಿತಾಸಕ್ತಿಯ ಅಧಿಕಾರಿಗಳಲ್ಲ.

Update: 2024-10-27 06:08 GMT

ಜಗತ್ತಿನಲ್ಲಿ ಹಲವು ರಾಷ್ಟ್ರಗಳು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ ಕಲಿಕೆಯನ್ನು ಮತ್ತಷ್ಟು ಉತ್ತಮಗೊಳಿಸಲು ಮತ್ತು ಕಲಿಕೆಯನ್ನು ಸುಧಾರಿಸಲು ಹತ್ತು-ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ, ಕರ್ನಾಟಕ ಸರಕಾರ ಕಲಿಕೆಯನ್ನು ಉತ್ತೇಜಿಸುವ ಮೂಲಭೂತ ಸೌಕರ್ಯ, ಕಲಿಕಾ ವೈವಿಧ್ಯ, ಕಲಿಕಾ ವಿಧಾನ ಮತ್ತು ಶಾಲೆಯಿಂದ ಶಾಲೆಗೆ ಬದಲಾಗುವ ಕಲಿಕಾ ವಾತಾವರಣವನ್ನು ಪಕ್ಕಕ್ಕೆ ಸರಿಸಿ, ಸನಾತನತೆಯಿಂದ ಕೂಡಿದ ಒಂದೇ ಆಕಾರ, ಗಾತ್ರ ಮತ್ತು ಗುಣಗಳಿರುವ ಕೇಂದ್ರೀಕೃತ ಬೋರ್ಡ್ ಪರೀಕ್ಷೆಯ ಮೂಲಕ ಮಕ್ಕಳಲ್ಲಿ ಭಯೋತ್ಪಾದನೆ, ಆತಂಕ ಮತ್ತು ಕಲಿಕೆಯನ್ನು ನೀರಸಗೊಳಿಸುವ ನಿರರ್ಥಕ ಕೆಲಸಕ್ಕೆ ಮುಂದಾಗಿದೆ. ಇದನ್ನು ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಡೆಸುತ್ತಿರುವ ಮೌಲ್ಯಾಂಕನ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದೆ. ದೇಶದ ಸರ್ವೋಚ್ಚ ನ್ಯಾಯಾಲಯ ಹಲವು ಬಗೆಯಲ್ಲಿ ಸರಕಾರದ ತಪ್ಪು ನಿರ್ಧಾರವನ್ನು ಬಿಡಿಸಿ ಹೇಳುವ ಪ್ರಯತ್ನವನ್ನು ಮಾಡಿದರೂ, ಹಠಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಮೌಲ್ಯಾಂಕನದ ಹೆಸರಿನಲ್ಲಿ ಕದ್ದುಮುಚ್ಚಿ ಬೋರ್ಡ್ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದಕ್ಕೆ ಸಿಟ್ಟಾದ ನ್ಯಾಯಾಲಯವು, ಇದು ಸರಕಾರ ‘ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕಿರುಕುಳ’ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ. ಮುಂದಿನ ಆದೇಶದವರೆಗೆ ಈವರೆಗೆ ನಡೆಸಿರುವ ಯಾವುದೇ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸದಂತೆ ಸರಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಕಲಿಕೆ ಮತ್ತು ಮೌಲ್ಯಮಾಪನ ಕುರಿತಂತೆ ಕೆಲವು ಮುಖ್ಯ ವಿಷಯಗಳನ್ನು ಅವಲೋಕಿಸುವ ಆಶಯ ಈ ಲೇಖನದ್ದಾಗಿದೆ.

ಶಾಲಾ ಶಿಕ್ಷಣದಲ್ಲಿ ಕೇಂದ್ರೀಕೃತ ಬೋರ್ಡ್ ಪರೀಕ್ಷೆಗಳ ದುಷ್ಪರಿಣಾಮಗಳ ಕುರಿತು ಸ್ವಾತಂತ್ರ್ಯಾನಂತರ ರಚನೆಯಾದ ಅನೇಕ ಶಿಕ್ಷಣ ಆಯೋಗಗಳು ಚರ್ಚಿಸುತ್ತಾ ಬಂದಿದ್ದು, ಸುಧಾರಣೆಗಾಗಿ ಸೂಕ್ತ ಶಿಫಾರಸುಗಳನ್ನು ನೀಡುತ್ತಾ ಬಂದಿವೆ.ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಸೆಕೆಂಡರಿ ಶಿಕ್ಷಣ ಆಯೋಗ (1952-53), ಶಿಕ್ಷಣ ಆಯೋಗ (1964-66) ಮತ್ತು ಹೊರೆಯಿಲ್ಲದ ಕಲಿಕೆ(1993). ಈ ಶಿಫಾರಸುಗಳನ್ನು ಆಧರಿಸಿ ರೂಪಿಸಿಲಾದ ರಾಷ್ಟ್ರೀಯ ಶಿಕ್ಷಣ ನೀತಿಗಳಾದ 1968, 1986, 1992 (ಪರಿಷ್ಕೃತ) ಮತ್ತು 2020 ಅಗತ್ಯ ಸುಧಾರಣೆಗಳನ್ನು ಪ್ರಸ್ತಾವಿಸಿವೆ. ಉದಾಹರಣೆಗೆ, 1968ರ ನೀತಿ ‘ಪರೀಕ್ಷಾ ಸುಧಾರಣೆಗಳ ಪ್ರಮುಖ ಗುರಿಯೆಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ವಿದ್ಯಾರ್ಥಿಯ ಗುಣಮಟ್ಟವನ್ನು ‘ಪ್ರಮಾಣೀಕರಿಸುವ’ ಬದಲು ಅವರ ಕಲಿಕೆಯನ್ನು ಸುಧಾರಿಸಲು ಮೌಲ್ಯಮಾಪನವನ್ನು ನಿರಂತರ ಪ್ರಕ್ರಿಯೆಯನ್ನಾಗಿ ಮಾಡಬೇಕು’ ಎಂದಿದೆ.

ಈ ಶಿಫಾರಸುಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳುವ ಭಾಗವಾಗಿ ರಚನೆಯಾಗುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 1997, 1988, 2000, 2005 ಮತ್ತು 2023 ಮೌಲ್ಯಮಾಪನ ಸುಧಾರಣೆಗಳ ಬಗ್ಗೆ ಪ್ರಸ್ತಾವಿಸಿವೆ. ಆದರೆ, ಕೇಂದ್ರೀಕೃತ ಬೋರ್ಡ್ಪರೀಕ್ಷೆ ಮಾಡಲು ಹಪಿಹಪಿಸುವವರು ಇದಾವುದನ್ನು ಅರಿಯದೆ ಮತ್ತು ಕಲಿಕೆಯ ಕೆಲವು ಮೂಲ ಗುಣಧರ್ಮಗಳನ್ನು ತಿಳಿಯದೆ ಯಾಂತ್ರಿಕವಾಗಿ ಪರೀಕ್ಷೆಗಳನ್ನು ನಡೆಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಕಲಿಕೆ ನಿರಂತರವಾದದ್ದು ಮತ್ತು ಅಷ್ಟೇ ವ್ಯಾಪಕವಾದದ್ದು. ಮಕ್ಕಳು ಶಾಲೆಯನ್ನು ಮೀರಿ ತಮ್ಮ ಕುಟುಂಬಗಳಲ್ಲಿ ಮತ್ತು ಸಮುದಾಯದೊಂದಿಗೆ ಹಲವು ಸಾಮಾಜಿಕ ಸನ್ನಿವೇಶಗಳಲ್ಲಿ ಸಂವಹನ ನಡೆಸುತ್ತಿರುವಾಗ ಅನೇಕ ವಿಚಾರಗಳನ್ನು ತಿಳಿಯುತ್ತಾರೆ ಹಾಗೂ ಕಲಿಯುತ್ತಾರೆ. ಇವೆಲ್ಲವೂ ಜ್ಞಾನವನ್ನು ಕಟ್ಟಿಕೊಡುವಲ್ಲಿ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ನಿಜ ಹೇಳಬೇಕೆಂದರೆ, ತರಗತಿಯ ಕೋಣೆಯ ಕಲಿಕೆಯು ಅವರ ನಿಜ ಜೀವನದಲ್ಲಿ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಅರ್ಥೈಸಿ ಸಮನ್ವಯಗೊಳಿಸಲು ಮತ್ತು ಅದರ ಆಧಾರದಲ್ಲಿ ಹೊಸ ಬಗೆಯ ಚರ್ಚೆ ಮತ್ತು ಜ್ಞಾನವನ್ನು ಕಟ್ಟಿಕೊಡುವ ಪ್ರಕ್ರಿಯೆಯಲ್ಲಿ ಅವರನ್ನು ಸಮರ್ಥರನ್ನಾಗಿಸಬೇಕಿದೆ. ಮೌಲ್ಯಮಾಪನ ಪ್ರಕ್ರಿಯೆಯು, ಈ ಎಲ್ಲಾ ಬಗೆಯ ಕಲಿಕೆಗಳನ್ನು ಸಮಗ್ರವಾಗಿ ಮತ್ತು ವ್ಯಾಪಕವಾಗಿ ಸೆರೆಹಿಡಿಯಬೇಕಾಗುತ್ತದೆ. ಹೀಗಾಗಿ, ಮೌಲ್ಯಮಾಪನದ ವ್ಯಾಪಕತೆ ತರಗತಿಯಲ್ಲಿ ಮಕ್ಕಳ ಕಲಿಕೆ ಹಾಗೂ ಅನುಭವಗಳ ಜೊತೆಗೆ ಸಾಮಾಜಿಕ ಸನ್ನಿವೇಶಗಳಿಗೆ ಅವರ ಪ್ರತಿಕ್ರಿಯೆ, ಕಲಿತ ಜ್ಞಾನವನ್ನು ತನ್ನ ದೈನಂದಿನ ಬದುಕಿನಲ್ಲಿ ಬಳಸಿ ವಿಮರ್ಶೆ, ವಿಶ್ಲೇಷಣೆ ಮತ್ತು ವೈಚಾರಿಕ ಚಿಂತನೆಯ ಮೂಲಕ ತೀರ್ಮಾನ ಕೈಗೊಳ್ಳಲು ಅಳವಡಿಸಿಕೊಳ್ಳುವ ಕ್ರಮ ಹೀಗೆ ಕಲಿಕೆಯ ವಿವಿಧ ಆಯಾಮಗಳನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಬೋರ್ಡ್ಪರೀಕ್ಷೆಗಳು ಕಂಠಪಾಠದ ಮರಣೋತ್ತರ ಪರೀಕ್ಷೆಯಾಗುತ್ತವೆ.

ಕಲಿಕಾ ಪ್ರಕ್ರಿಯೆಯು ಎಲ್ಲಾ ಮಕ್ಕಳಿಗೆ ಏಕರೂಪವಾಗಿರು ವುದಿಲ್ಲ. ಏಕೆಂದರೆ ಪ್ರತೀ ಮಗುವು ಜ್ಞಾನವನ್ನು ಪಡೆದುಕೊಳ್ಳುವ ವಿಶಿಷ್ಟ ಸಾಮರ್ಥ್ಯ ಮತ್ತು ವಿಧಾನವನ್ನು ಹೊಂದಿರುತ್ತದೆ. ಹಲವು ಸಂದರ್ಭಗಳಲ್ಲಿ ವಿದ್ಯಾರ್ಥಿ ತನ್ನ ಸ್ವಂತ ವೇಗದಲ್ಲಿ ಹಾಗೂ ತನ್ನದೇ ಆದ ವಿಧಾನದಲ್ಲಿ ಕಲಿಯಬಹುದು. ಇದು ಎಲ್ಲಾ ಕಲಿಕಾರ್ಥಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಜೊತೆಗೆ, ಕಲಿಕೆಯು ಸಮಗ್ರತಾ ದೃಷ್ಟಿಯ ಮತ್ತು ವ್ಯಾಪಕತೆಯ ಪ್ರಕ್ರಿಯೆಯಾಗಿದೆ. ಏಕೆಂದರೆ ಮಕ್ಕಳು ಯಾವುದೇ ಶಿಸ್ತಿನ ಗಡಿಗಳ ಮೂಲಕ ಪ್ರಪಂಚವನ್ನು ವೀಕ್ಷಿಸುವುದಿಲ್ಲ. ಬದಲಿಗೆ, ತಾವು ಈಗಾಗಲೇ ಕಲಿತ ಅನುಭವಗಳ ಮೂಲಕ ಜ್ಞಾನವನ್ನು ಕಟ್ಟಿಕೊಳ್ಳಲು ಅನುಭವದ ಕಲಿಕೆಗೆ ಒತ್ತು ನೀಡುವ ಆಟ, ಅನ್ವೇಷಣೆ, ಸ್ವಯಂ ಪ್ರಯತ್ನ ಮತ್ತು ವಿಭಿನ್ನ ಚಟುವಟಿಕೆಗಳ ಮೂಲಕ ಕಲಿಯಲು ಹಾತೊರೆಯುತ್ತಾರೆ. ಇದನ್ನು ಕಲಿಕೆಯ ರಚನಾವಾದ ಅಥವಾ ರಚನಾತ್ಮಕವಾದ ಎನ್ನುತ್ತೇವೆ.

ರಚನಾತ್ಮಕ ಕಲಿಕೆಯ ಸಿದ್ಧಾಂತವು ಕಲಿಯುವವರಿಗೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅರ್ಥಪೂರ್ಣ ಸಂವಹನಗಳ ಮೂಲಕ ಹಾಗೂ ಅವರ ಸ್ವಯಂ-ನಿರ್ದೇಶಿತ ಕಲಿಕೆಯ ಮೂಲಕ ಜ್ಞಾನವನ್ನು ಕಟ್ಟಿಕೊಳ್ಳಲು ಅವಕಾಶ ನೀಡುತ್ತದೆ. ಈ ಶೈಕ್ಷಣಿಕ ವಿಧಾನವು ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಅನುಭವ ಮತ್ತು ಚಿಂತನ ಶಕ್ತಿಯ ಮೂಲಕ ತನ್ನದೇ ಆದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುತ್ತಾನೆ ಎಂಬ ಕಲ್ಪನೆಗೆ ಮಹತ್ವ ನೀಡುತ್ತದೆ. ಶಿಕ್ಷಕರು ಅಥವಾ ಬಾಹ್ಯ ಮೂಲದಿಂದ ವಿಷಯಗಳನ್ನು ಕಂಠಪಾಠದ ಮೂಲಕ ನೆನಪಿಟ್ಟುಕೊಳ್ಳುವ ಬದಲು, ಕಲಿಯುವವರು ತಮ್ಮನ್ನು ಸಕ್ರಿಯವಾಗಿಸಿಕೊಂಡು ಜ್ಞಾನವನ್ನು ಕಟ್ಟಿಕೊಳ್ಳುತ್ತಾರೆ. ಶಿಕ್ಷಕ ಸುಗುಮಕಾರನಾಗುತ್ತಾನೆ. ಮೂಲದಲ್ಲಿ, ರಚನಾತ್ಮಕತೆಯು ಆವಿಷ್ಕಾರವಾಗಿದೆ ಹಾಗೂ ಕಲಿಕಾ ಪ್ರಕ್ರಿಯೆಯ ನಿರ್ಣಾಯಕ ಅಂಶವಾಗಿದೆ. ವಾಸ್ತವದಲ್ಲಿ ಈ ಬಗೆಯ ವಿಧಾನಗಳು ಸಂಪೂರ್ಣ ಕಲಿಕೆಯ ಪ್ರಕ್ರಿಯೆಯನ್ನು ಉತ್ತೇಜಿಸುತ್ತವೆ ಹಾಗೂ ಮಕ್ಕಳು ಹೆಚ್ಚು ಸಂತೋಷವಾಗಿ ಹಾಗೂ ಅರ್ಥಪೂರ್ಣವಾಗಿ ಕಲಿಯುತ್ತಾರೆ ಎಂಬುದನ್ನು ಸಾಬೀತುಪಡಿಸಿವೆ.

ಉದಾಹರಣೆಗೆ, ಪ್ರಾಥಮಿಕ ಹಂತದಲ್ಲಿ ಮಕ್ಕಳು ಇತರರೊಂದಿಗೆ ಸಂವಹನ ನಡೆಸುವಾಗ ಅಥವಾ ಅನೌಪಚಾರಿಕವಾಗಿ ತಾವು ಕಲಿಯುತ್ತಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ಉತ್ತಮವಾಗಿ ಕಲಿಯುತ್ತಾರೆ. ಮಕ್ಕಳು ಆಟ, ಸಮಾಜದ ವಿವಿಧ ಸಭೆ-ಸಮಾರಂಭ ಮತ್ತು ತನ್ನ ಸುತ್ತಮುತ್ತಲೂ ಘಟಿಸುವ ಘಟನೆಗಳಲ್ಲಿ ನೇರ ಭಾಗಿಯಾಗುವ ಮೂಲಕ ಪ್ರಾಯೋಗಿಕವಾಗಿ ಹೆಚ್ಚಿನದನ್ನು ಕಲಿಯುತ್ತಾರೆ. ಈ ಬಗೆಯ ‘ಹ್ಯಾಂಡ್-ಆನ್’ ಮತ್ತು ‘ಮೈಂಡ್ಸ್-ಆನ್’ ಎರಡರಲ್ಲೂ ತೊಡಗಿಸಿಕೊಳ್ಳುವ ವೈಯಕ್ತಿಕ ಅಥವಾ ಗುಂಪು ಕಲಿಕೆಯ ಸಂದರ್ಭಗಳನ್ನು ಹೆಚ್ಚು ಪ್ರೋತ್ಸಾಹಿಸುವುದು ನಿರಂತರ ಹಾಗೂ ಸಮಗ್ರ ಕಲಿಕೆಯನ್ನು ಅನುಕೂಲಿಸುತ್ತದೆ.

ಈ ಎಲ್ಲಾ ಕಾರಣಗಳಿಂದ, ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸುವಾಗ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನವನ್ನು ಗಂಭೀರವಾಗಿ ಪರಿಗಣಿಸಲಾಯಿತು. ಕಾಯ್ದೆಯ ಅನ್ವಯ, ಸರಕಾರವು ಅಗತ್ಯ ನಿಯಮ ಮತ್ತು ಮಾನದಂಡಗಳನ್ನು ಪೂರೈಸುವ ಮೂಲಕ ಔಪಚಾರಿಕ ಶಾಲೆಯಲ್ಲಿ ತೃಪ್ತಿಕರ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಕಾಯ್ದೆಯ ಪ್ರಕರಣ 19ರ ಅನ್ವಯ, ಪ್ರತಿಯೊಂದು ಶಾಲೆಯೂ ನಿಯಮಾನುಸಾರ ಕಲಿಕೆಗೆ ಪೂರಕವಾದ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕಾಗುತ್ತದೆ. ಈ ಪಟ್ಟಿಯಲ್ಲಿ ಶಿಕ್ಷಕರು, ಉತ್ತಮ ತರಗತಿ ಕೋಣೆ, ಅಂಗವಿಕಲ ಮಕ್ಕಳಿಗೆ ತಡೆಯಿಲ್ಲದ ಪ್ರವೇಶ, ಬಳಸಬಹುದಾದ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಆಟದ ಮೈದಾನ, ಕಾಂಪೌಂಡ್ಗೋಡೆ, ತರಗತಿವಾರು ಪಾಠೋಪಕರಣ, ತರಗತಿವಾರು ಕ್ರೀಡಾ ಸಾಮಗ್ರಿ, ಶಾಲೆ ಕಾರ್ಯನಿರ್ವಹಿಸಬೇಕಾದ ಕನಿಷ್ಠ ದಿನಗಳು ಮತ್ತು ಕನಿಷ್ಠ ಕಲಿಕಾ ಗಂಟೆಗಳು ಸೇರಿವೆ.

ಇನ್ನು, ಪ್ರಕರಣ 29(2)ರ ಅಡಿಯಲ್ಲಿ, ಕಲಿಕಾ ಪಠ್ಯಕ್ರಮ ಮತ್ತು ಮೌಲ್ಯಮಾಪನ ವಿಧಾನ ಹೇಗಿರಬೇಕೆಂದು ತಿಳಿಸಿದೆ. ಅದರಂತೆ, ಕಲಿಕೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಬೇಕು. ಚಟುವಟಿಕೆ, ಅನ್ವೇಷಣೆ ಮತ್ತು ಪರಿಶೋಧನೆಯ ಮೂಲಕ ಪೂರ್ಣ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ಅಭಿವೃದ್ಧಿಯೊಂದಿಗೆ ಜ್ಞಾನ, ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಕಟ್ಟಿಕೊಡಬೇಕೆಂದು ಹೇಳುತ್ತದೆ. ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಮೂಲಕ ಭಯ, ಆಘಾತ ಮತ್ತು ಆತಂಕ ಮುಕ್ತವಾದ ಉತ್ತಮ ಪರಿಸರದಲ್ಲಿ ಪ್ರತೀ ಮಗುವೂ ಶಿಶು ಕೇಂದ್ರಿತ ಹಾಗೂ ಶಿಶು ಸ್ನೇಹಿ ವಾತಾವರಣದಲ್ಲಿ ಕಲಿಯಲು ಅವಕಾಶವನ್ನು ಕಲ್ಪಿಸಬೇಕೆಂದು ಕಾಯ್ದೆ ಸ್ಪಷ್ಟಪಡಿಸುತ್ತದೆ.

ಜೊತೆಗೆ, ಶಿಕ್ಷಣ ಹಕ್ಕು ಕಾಯ್ದೆ ಎಲಿಮೆಂಟರಿ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಯಾವುದೇ ಮಗು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಅಗತ್ಯವಿಲ್ಲವೆಂದು ಖಚಿತ ಪಡಿಸಿದೆ. 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಮೌಲ್ಯಮಾಪನದಲ್ಲಿ ನಮ್ಯತೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಯಾವುದೇ ಸಂದರ್ಭದಲ್ಲಿಯೂ V, VIII, IX ಅಥವಾ XIಕ್ಕೆ ಶಾಲಾ ಹಂತದ ಪರೀಕ್ಷೆಗಳನ್ನು ಬಿಟ್ಟು ಬೋರ್ಡ್ ಅಥವಾ ರಾಜ್ಯ ಮಟ್ಟದ ಪರೀಕ್ಷೆಗಳನ್ನು ನಡೆಸಬಾರದು ಎಂದು ಹೇಳುತ್ತದೆ. ವಾಸ್ತವವಾಗಿ, ಬೋರ್ಡ್ಪರೀಕ್ಷೆಗಳನ್ನು ದೀರ್ಘಾವಧಿಯ ಮತ್ತು ಒಂದು ಹಂತದ ಶಿಕ್ಷಣವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಪರಿಗಣಿಸಬೇಕೇ ಹೊರತು ಪದೇಪದೇ ನಡೆಸಬಾರದು ಎನ್ನುತ್ತದೆ. ಅದೇ ಶಾಲೆಯಲ್ಲಿ ಮುಂದುವರಿಯುವ ವಿದ್ಯಾರ್ಥಿಗಳಿಗೆ ಬೋರ್ಡ್ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ ಬದಲಿಗೆ, ಶಾಲಾ ಹಂತದ ಆಂತರಿಕ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವ್ಯವಸ್ಥೆಯು ಮಕ್ಕಳ ಕಲಿಕೆಯನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಅಗತ್ಯ ಮಧ್ಯಪ್ರವೇಶಿಕೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಹಾಯವಾಗುತ್ತದೆ.

ಎಲ್ಲಾ ಮಕ್ಕಳ ಗುಣಾತ್ಮ ಕಲಿಕೆಯನ್ನು ಖಾತ್ರಿಪಡಿಸುವ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯ ಉದ್ದೇಶವನ್ನು ಗೌರವಿಸುವಲ್ಲಿ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಒಂದು ಪ್ರಬಲ ಸಾಧನವಾಗಿದೆ. ಶೈಕ್ಷಣಿಕ ಶಾಸನದ ಭಾಗವಾಗಿರುವ ಈ ವಿಧಾನವು 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ವಿವರಿಸಲಾದ ಮಕ್ಕಳ-ಕೇಂದ್ರಿತ ಪಠ್ಯಕ್ರಮದ ನೀತಿಯ ಸೂಚಕಗಳ ಅನ್ವಯ ಒಂದು ತಾತ್ವಿಕ ಪ್ರಮಾಣೀಕರಿಸದ ಚೌಕಟ್ಟನ್ನು ಒದಗಿಸುತ್ತದೆ. ಇದು ಜಗತ್ತಿನ ವಿವಿಧ ಭಾಗಗಳಲ್ಲಿ ಅನುಸರಿಸುತ್ತಿರುವ ಕ್ರಮವೂ ಹೌದು. ಆದರೆ, ಕರ್ನಾಟಕದಲ್ಲಿ ಮಾತ್ರ ಇದನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಪ್ರಕ್ರಿಯೆಯು ಶಿಕ್ಷಕರಿಗೆ ಮಗುವಿನ ಕಲಿಕೆಯ ಪ್ರಗತಿಯನ್ನು ನಿರಂತರವಾಗಿ ವೀಕ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ, ಮಗುವಿಗೆ ಕಲಿಕೆಗೆ ಯಾವುದಾದರೂ ತೊಂದರೆಗಳು ಇದ್ದರೆ ಅದನ್ನು ತಕ್ಷಣ ನಿವಾರಿಸಲು ಸಮಯೋಚಿತ ಪ್ರತಿಕ್ರಿಯೆ ಮತ್ತು ಬೆಂಬಲವನ್ನು ನೀಡುತ್ತದೆ. ಮಗುವನ್ನು ಶೈಕ್ಷಣಿಕ ಅವಧಿಯ ಕೊನೆಯಲ್ಲಿ ಪರೀಕ್ಷಿಸಿ ಕಲಿತಿಲ್ಲವೆಂದು ಪರಿತಪಿಸುವ ಸ್ಥಿತಿ ಉದ್ಭವಿಸುವುದಿಲ್ಲ. ಆದ್ದರಿಂದ, ಶಿಕ್ಷಣದ ಅಪೇಕ್ಷಿತ ಗುರಿಗಳನ್ನು ಸಾಧಿಸಲು ವಿದ್ಯಾರ್ಥಿಗಳ ಕಲಿಕೆ ಮತ್ತು ಅಭಿವೃದ್ಧಿಯ ವಾಸ್ತವಿಕ ಚಿತ್ರವನ್ನು ತಲುಪಲು ಕಲಿಕೆ ಮತ್ತು ಮೌಲ್ಯಮಾಪನ ಎರಡನ್ನೂ ಒಟ್ಟಿಗೆ ಅರ್ಥಮಾಡಿಕೊಳ್ಳುವುದು ಮತ್ತು ಬಳಸುವುದು ಮುಖ್ಯವಾಗಿದೆ.

ಕಲಿಕೆಯು ನಿರಂತರ, ಸುರುಳಿಯಾಕಾರದ ಮತ್ತು ಸಮಗ್ರತೆಯ ಪ್ರಕ್ರಿಯೆಯಾಗಿರುವ ಕಾರಣ, ಮೌಲ್ಯಮಾಪನವೂ ಸಹ ನಿರಂತರ ಮತ್ತು ವ್ಯಾಪಕವಾಗಿರಬೇಕಾಗುತ್ತದೆ. ಅದು ವರ್ಷಕ್ಕೊಮ್ಮೆ ನಡೆಸುವ ಕೇಂದ್ರೀಕೃತ ಬೋರ್ಡ್ಪರೀಕ್ಷೆಯ ಮೂಲಕ ಹಣೆಬರಹ ನಿರ್ಧರಿಸುವ ಸಾಧನವಾಗಬಾರದು. ಕಲಿಕೆ ಮತ್ತು ಮೌಲ್ಯಮಾಪನ ನಿರಂತರ ಮತ್ತು ಪರಸ್ಪರ ಪೂರಕವಾಗಿರುವುದರಿಂದ ಅದನ್ನು ಶಾಲಾ ಹಂತದಲ್ಲಿ ಕೈಗೊಳ್ಳಬೇಕಾಗಿರುವುದು ಶಿಕ್ಷಕರೇ ಹೊರತು ಕಲಿಕೆಯ ಭಾಗವಾಗಿರದ ಮತ್ತು ಪಟ್ಟಭದ್ರ ಹಿತಾಸಕ್ತಿಯ ಅಧಿಕಾರಿಗಳಲ್ಲ.

ಈ ಕಾರಣದಿಂದ, ಮೌಲ್ಯಮಾಪನವೆಂಬುದು ವರ್ಷಕ್ಕೊಮ್ಮೆ ನಡೆಯುವ ಕೇಂದ್ರೀಕೃತ ಕಸರತ್ತಾಗದೆ ಶಾಲಾ ಹಂತದಲ್ಲಿ ನಡೆಯುವ, ನಿರಂತರತೆ ಮತ್ತು ವ್ಯಾಪಕತೆಯ ಮೌಲ್ಯಗಳನ್ನು ಒಳಮಾಡಿಕೊಳ್ಳುವ ಅರ್ಥಪೂರ್ಣ ಪ್ರಕ್ರಿಯೆಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಮಕ್ಕಳ ಕಲಿಕೆಯನ್ನು ಅನುಕೂಲಿಸುವ ಮತ್ತು ಅವರ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಲು, ಮೌಲ್ಯಮಾಪನ ಪ್ರಕ್ರಿಯೆಯು ಕಲಿಸುವವರ ಹಂತದಲ್ಲಿಯೇ ನಡೆಯಬೇಕಿದೆ. ಶಿಕ್ಷಕರು ಸಮಯೋಚಿತವಾಗಿ ಕೈಗೊಳ್ಳುವ ಮೌಲ್ಯಮಾಪನ ಪ್ರಕ್ರಿಯೆಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಕಲಿತ-ಕಲಿಯಬೇಕಿದ್ದ ಜ್ಞಾನದ ನಡುವಿನ ಅಂತರವನ್ನು ಅರಿತು ಮುಂದೆ ಸಾಗಬೇಕಾದ ನಿರ್ಣಾಯಕ ಸಾಧನವಾಗುತ್ತದೆ.

ಮಕ್ಕಳ ದೈನಂದಿನ ಕಲಿಕಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಮೂಲಕ ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ಮತ್ತು ಅಗತ್ಯ ಮಧ್ಯಪ್ರವೇಶಿಕೆಗಳನ್ನು ನಿರ್ಣಯಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಆದ್ದರಿಂದಲೇ, ಕಲಿಸುವ ಶಿಕ್ಷಕ ಮಾತ್ರ ತನ್ನ ವಿದ್ಯಾರ್ಥಿಯ ಪ್ರಗತಿಯನ್ನು ಅಳೆಯಲು ಸಮರ್ಥನಿರುತ್ತಾನೆ. ಅದನ್ನು ಧಿಕ್ಕರಿಸಿ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನಿರ್ವಾತದಲ್ಲಿ ಯೋಚಿಸಿ ತೀರ್ಮಾನಿಸುವ ಅಧಿಕಾರಿಗಳಿಗೂ ಮೌಲ್ಯಮಾಪನ ಪ್ರಕ್ರಿಯೆಗೂ ಸಂಬಂಧವೇ ಇರುವುದಿಲ್ಲ. ಈ ಅಧಿಕಾರಿಗಳು ನಿಜವಾಗಿಯೂ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದರೆ, ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ನಿಗದಿಪಡಿಸಿರುವ ಶಾಲಾ ಹಂತದಲ್ಲಿ ಕಲಿಕೆ ಅಗತ್ಯವಾದ ಮತ್ತು ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಮೊದಲು ಒದಗಿಸಬೇಕು. ಜೊತೆಗೆ, ಶಿಕ್ಷಣ ಇಲಾಖೆಯಲ್ಲಿ ವಿವಿಧ ಹಂತದಲ್ಲಿ; ಸಿಆರ್ಸಿ, ಬಿಆರ್ಸಿ, ಡಯಟ್ ಮತ್ತು ಉಳಿದ ಎಲ್ಲಾ ಹಂತದ ಅಧಿಕಾರಿಗಳು ಪ್ರತಿನಿತ್ಯ ಕನಿಷ್ಠ ಅರ್ಧ ದಿನವಾದರೂ ಶಾಲೆಯಲ್ಲಿದ್ದು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಮಕ್ಕಳು ಹಾಗೂ ಶಿಕ್ಷಕರಿಗೆ ಕೈಯಾಸರೆಯಾಗಬೇಕೇ ಹೊರತು ಕಿರಿಕಿರಿ ಉಂಟುಮಾಡುವ ಪೀಡಕರಾಗಬಾರದು.

ಒಟ್ಟಾರೆ, ಕಳೆದ ಎರಡು ವರ್ಷದಲ್ಲಿ ಹಲವು ಬಾರಿ ಸರ್ವೋಚ್ಚ ನ್ಯಾಯಾಲಯದ ಛೀಮಾರಿಗೆ ಒಳಗಾದ ಬೋರ್ಡ್ಪರೀಕ್ಷೆ ನಡೆಸುವ ಸರಕಾರದ ಈ ನಡೆಯು, ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಅಧಿಕಾರಿಗಳ ಬೌದ್ಧಿಕ ದಿವಾಳಿತನ ಮತ್ತು ಶಿಕ್ಷಣ-ಕಲಿಕೆಯ ಬಗ್ಗೆ ಅವರಿಗಿರುವ ಅರೆಬರೆ ಸಂಕುಚಿತ ತಿಳುವಳಿಕೆಯನ್ನು ಅನಾವರಣಗೊಳಿಸಿದೆ. ಇನ್ನಾದರೂ, ಸರಕಾರ ಅವರನ್ನು ಈ ನಿರರ್ಥಕ ಕೆಲಸದಿಂದ ಬಿಡುಗಡೆ ಮಾಡಿ, ಬೋರ್ಡ್ಪರೀಕ್ಷೆಗೆ ಬಳಸುವ ಅಗಾಧ ಸಂಪನ್ಮೂಲಗಳನ್ನು ಶಾಲಾ ಹಂತದಲ್ಲಿ ಕಲಿಕಾ ವಾತಾವರಣವನ್ನು ಬಲಪಡಿಸಲು ವಿನಯೋಗಿಸಬೇಕಿದೆ. ಜೊತೆಗೆ, ಶಾಲಾ ಹಂತದಿಂದ ಮೇಲಿರುವ ಇಲಾಖೆಯ ಎಲ್ಲಾ ವರ್ಗದ ಅರ್ಹ ವಿದ್ಯಾರ್ಹತೆ ಹೊಂದಿರುವ ಸಿಬ್ಬಂದಿಯನ್ನು ಅಂದರೆ, ಎಲ್ಲಾ ಸಿಆರ್ಪಿ, ಬಿಆರ್ಪಿ, ಬಿಇಒ, ಬಿಆರ್ಸಿ, ಎಡಿಪಿಐ, ಎಸ್ಎಡಿಪಿಐ, ಡಿಡಿಪಿಐ, ಡಯಟ್ ಪ್ರಾಂಶುಪಾಲರು ಹಾಗೂ ಸಿಬ್ಬಂದಿ, ಜೆಡಿ ಹಾಗೂ ಡಿಪಿಐಗಳನ್ನು ಕನಿಷ್ಠ ಅರ್ಧದಿನವಾದರೂ ಶಾಲೆಗೆ ಕಳಿಸಿ ಕಲಿಸುವ-ಕಲಿಯುವ ಹೊಸ ಬಗೆಯ ಕಲಿಕಾ ಸಂಸ್ಕೃತಿಯನ್ನು ರಾಜ್ಯದಲ್ಲಿ ಹುಟ್ಟುಹಾಕಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ನಿರಂಜನಾರಾಧ್ಯ ವಿ.ಪಿ.

contributor

Similar News