ತನಿಖೆ ಎದುರಿಸಿದ್ದ 30 ಕಂಪೆನಿಗಳಿಂದ ಬಿಜೆಪಿಗೆ 335 ಕೋಟಿ ರೂ. ದೇಣಿಗೆ!

Update: 2024-02-21 16:09 GMT
Editor : Irshad Venur | Byline : Prateek Goyal

ಭಾಗ - 1

ಹಿಂದಿನ ಐದು ಹಣಕಾಸು ವರ್ಷಗಳಲ್ಲಿ ಬಿಜೆಪಿಗೆ ಒಟ್ಟು ಸುಮಾರು 335 ಕೋಟಿ ರೂ.ಗಳ ದೇಣಿಗೆ ನೀಡಿದ್ದ ಕನಿಷ್ಠ 30 ಕಂಪನಿಗಳು ಈ ಅವಧಿಯಲ್ಲಿ ಕೇಂದ್ರೀಯ ಏಜೆನ್ಸಿಗಳಿಂದ ಕ್ರಮವನ್ನು ಎದುರಿಸಿದ್ದವು. ಈ ಪೈಕಿ ಕೆಲವು ಕಂಪನಿಗಳು ದಾಳಿಯ ನಂತರದ ತಿಂಗಳುಗಳಲ್ಲಿ ಭಾರೀ ಮೊತ್ತವನ್ನೂ ದೇಣಿಗೆಯಾಗಿ ನೀಡಿದ್ದವು ಎಂದು Newslaundry ಮತ್ತು The News Minute ನಲ್ಲಿ ಪ್ರತೀಕ್‌ ಗೋಯಲ್‌ ಅವರ ತನಿಖಾ ಸರಣಿಯಲ್ಲಿ ತಿಳಿದು ಬಂದಿದೆ.

ಈ ನಡುವೆ, ಚುನಾವಣಾ ಬಾಂಡ್‌ಗಳಿಗಿಂತ ಹಿಂದಿನ ಚುನಾವಣಾ ಟ್ರಸ್ಟ್ ಈಗ ಹೆಚ್ಚು ಕಡಿಮೆ ಅಸ್ತಿತ್ವವನ್ನು ಕಳೆದುಕೊಂಡಿದೆ. ಆದರೆ ಒಂದು ಇನ್ನೂ ಕಣದಲ್ಲಿದೆ. ಏಕೆ?  ಕೆಲವು ಕಂಪನಿಗಳು ಈಗಲೂ ಟ್ರಸ್ಟ್‌ಗಳ ಮೂಲಕ ದೇಣಿಗೆ ನೀಡಲು ಬಯಸುತ್ತಿವೆ?

ಇವು ಸುದ್ದಿ ಜಾಲತಾಣಗಳಾದ Newslaundry ಮತ್ತು The News Minute ge ತನಿಖಾ ಸರಣಿಗಳು ಕಳೆದ 10 ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ದತ್ತಾಂಶಗಳು, ಅಂದರೆ ಚುನಾವಣಾ ಬಾಂಡ್‌ಗಳನ್ನು ಹೊರತುಪಡಿಸಿ ಇತರ ಎಲ್ಲವುಗಳೊಂದಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಕೆಲವು ಪ್ರಶ್ನೆಗಳಾಗಿವೆ.

ನರೇಂದ್ರ ಮೋದಿ ಸರಕಾರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸರ್ವೋಚ್ಛ ನ್ಯಾಯಾಲಯವು ರದ್ದುಗೊಳಿಸಿದೆ ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡುವ ಕಾರ್ಪೊರೇಟ್‌ಗಳಿಂದ ಪ್ರತಿಫಲಾಪೇಕ್ಷೆಯ ಸಾಧ್ಯತೆ ಮತ್ತು ಸಾರ್ವಜನಿಕ ಪಾರದರ್ಶಕತೆಯ ಅಗತ್ಯವನ್ನು ಅದು ಬೆಟ್ಟು ಮಾಡಿದೆ.

ಅಧಿಕಾರ, ಬಾಂಡ್‌ಗಳು ಮತ್ತು ಕಾರ್ಪೊರೇಟ್‌ಗಳು

ಕಳೆದ ಕೆಲವು ವರ್ಷಗಳಲ್ಲಿ ಆಡಳಿತಾರೂಢ ಬಿಜೆಪಿಯು ಹೇಗೆ ನಿರಂತರವಾಗಿ ಇತರ ಪಕ್ಷಗಳಿಗಿಂತ ಹೆಚ್ಚಿನ ದೇಣಿಗೆಗಳನ್ನು ಸ್ವೀಕರಿಸಿದೆ ಎನ್ನುವುದು ಆಗಾಗ್ಗೆ ವರದಿಯಾಗುತ್ತದೆ.

ಬಿಜೆಪಿಯು ಚುನಾವಣಾ ಟ್ರಸ್ಟ್‌ಗಳ ಮೂಲಕ ಅತ್ಯಂತ ಹೆಚ್ಚಿನ ಆದಾಯವನ್ನು ಗಳಿಸಿದೆ. 2022-23ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಬಿಜೆಪಿಯು ಭಾರತೀಯ ಕಂಪನಿಗಳಿಂದ ಸ್ವೀಕರಿಸಿದ್ದ ಪ್ರತಿ ನೂರು ರೂಪಾಯಿಗೆ ಹೋಲಿಸಿದರೆ ಕಾಂಗ್ರೆಸ್ ಕೇವಲ 19 ಪೈಸೆಗಳನ್ನು ಸ್ವೀಕರಿಸಿತ್ತು. ಚುನಾವಣಾ ಟ್ರಸ್ಟ್ ಕಾರ್ಪೊರೇಟ್ ಕಂಪನಿಗಳು ತಮ್ಮ ದೇಣಿಗೆಗಳನ್ನು ಟ್ರಸ್ಟ್‌ನಲ್ಲಿ ಒಟ್ಟುಗೂಡಿಸುವ ಮತ್ತು ವಿವಿಧ ರಾಜಕೀಯ ಪಕ್ಷಗಳಿಗೆ ಅರೆ ಅನಾಮಧೇಯವಾಗಿ ವಿತರಿಸುವ ಯೋಜನೆಯಾಗಿದೆ. ಯುಪಿಎ ಸರಕಾರವು 2013ರಲ್ಲಿ ಈ ಯೋಜನೆಯನ್ನು ತಂದಾಗಿನಿಂದ ಅದರಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿಯು ವಿವಿಧ ಚುನಾವಣಾ ಟ್ರಸ್ಟ್‌ಗಳಿಂದ 1,893 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಪಡೆದುಕೊಂಡಿದೆ.

ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕವೂ ಹೆಚ್ಚಿನ ಆದಾಯವನ್ನು ಗಳಿಸಿದೆ. 2022-23ರಲ್ಲಿ ಅದು ಸುಮಾರು 1,300 ಕೋಟಿ ರೂ.ಗಳನ್ನು ಸ್ವೀಕರಿಸಿದ್ದು, ಇದು ಇದೇ ಅವಧಿಯಲ್ಲಿ ಕಾಂಗ್ರೆಸ್ ಸ್ವೀಕರಿಸಿದ್ದ ದೇಣಿಗಳಿಗಿಂತ ಏಳು ಪಟ್ಟು ಹೆಚ್ಚು. ಇದೇ ಅವಧಿಯಲ್ಲಿ ಬಿಜೆಪಿಗೆ ದೇಣಿಗೆಗಳ ಸುಮಾರು ಶೇ.61ರಷ್ಟು ಚುನಾವಣಾ ಬಾಂಡ್‌ಗಳ ಮೂಲಕ ಬಂದಿತ್ತು. 2018 ಮತ್ತು 2022ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ನೀಡಲಾಗಿದ್ದ ಒಟ್ಟು ದೇಣಿಗೆಗಳ ಸುಮಾರು ಶೇ.57ರಷ್ಟು ಬಿಜೆಪಿ ಬೊಕ್ಕಸವನ್ನು ಸೇರಿತ್ತು.

ಒಟ್ಟು ದೇಣಿಗೆಗಳ ಸಿಂಹಪಾಲನ್ನೂ ಬಿಜೆಪಿ ಪಡೆದುಕೊಂಡಿತ್ತು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿಯಂತೆ 2022-23ರಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನೀಡಲಾಗಿದ್ದ ಒಟ್ಟು 850.4 ಕೋಟಿ ರೂ.ಗಳ ದೇಣಿಗೆಗಳಲ್ಲಿ 719.8 ಕೋಟಿ ರೂ. ಬಿಜೆಪಿಗೆ ಸಂದಾಯವಾಗಿತ್ತು.

ಈ ನಡುವೆ ಸರಕಾರವು ಬಿಡುಗಡೆಗೊಳಿಸಿದ್ದ ಚುನಾವಣಾ ಬಾಂಡ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಮಾರ್ಚ್ 2022 ಮತ್ತು ಮಾರ್ಚ್ 2023ರ ನಡುವಿನ ವಿತ್ತೀಯ ವರ್ಷದಲ್ಲಿ ಒಟ್ಟು 2,800 ಕೋಟಿ ರೂ.ಗಳ ಸಂಚಿತ ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟವಾಗಿದ್ದವು. ಸರಕಾರವು ಈ ತಿಂಗಳು ಸಂಸತ್ತಿನಲ್ಲಿ ಒದಗಿಸಿದ ದತ್ತಾಂಶಗಳಂತೆ 2018ರಿಂದ 16,518 ಕೋಟಿ ರೂ.ಗೂ ಅಧಿಕ ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟಗೊಂಡಿವೆ.

ಈ ಬಾಂಡ್‌ಗಳನ್ನು ಖರೀದಿಸಿದವರು ಯಾರು?

ಆರ್‌ಟಿಐ ಕಾರ್ಯಕರ್ತ ನಿವೃತ್ತ ಕಮೊಡೋರ್ ಲೋಕೇಶ ಬಾತ್ರಾ ಅವರು ಸ್ವೀಕರಿಸಿದ ಆರ್‌ಟಿಐ ಉತ್ತರದಂತೆ, 2018ರಿಂದ ಡಿಸೆಂಬರ್ 2022ರವರೆಗೆ 1,000 ರೂ.ಮುಖಬೆಲೆಯ ಬಾಂಡ್‌ಗಳ ಪ್ರಮಾಣ ಒಟ್ಟು ಮಾರಾಟದ ಕೇವಲ ಶೇ.0.01ರಷ್ಟಿದ್ದರೆ, ಒಂದು ಕೋಟಿ ರೂ.ಮೌಲ್ಯದ ಬಾಂಡ್‌ಗಳು ಶೇ.94.41ರಷ್ಟಿದ್ದವು. ಈ ದೇಣಿಗೆಗಳನ್ನು ಕಾರ್ಪೊರೇಟ್ ಸಂಸ್ಥೆಗಳು ವ್ಯಕ್ತಿಗಳು ಅಥವಾ ಬೇನಾಮಿ ಕಂಪೆನಗಳ ಹೆಸರಿನಲ್ಲಿ ನೀಡಿರುವ ಸಾಧ್ಯತೆಯಿದೆ.

ಚುನಾವಣಾ ಬಾಂಡ್‌ಗಳ ವಿತರಣೆಯನ್ನು ನಿಲ್ಲಿಸುವಂತೆ ಎಸ್‌ಬಿಐಗೆ ತಿಳಿಸಿರುವ ಸರ್ವೋಚ್ಚ ನ್ಯಾಯಾಲಯವು, 2019ರಿಂದ ದೇಣಿಗೆಗಳ ವಿವರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಈ ನಡುವೆ ಚುನಾವಣಾ ಬಾಂಡ್‌ಗಳ ಇತ್ತೀಚಿನ ಮಾರಾಟದಿಂದ ಸ್ವೀಕರಿಸಲಾಗಿರುವ ಹಣವು ದೇಶಾದ್ಯಂತ ಇತ್ತೀಚಿನ ಸುತ್ತಿನ ಚುನಾವಣಾ ಪ್ರಚಾರಕ್ಕೆ ಬಳಕೆಯಾಗುವ ಸಾಧ್ಯತೆಯಿದೆ.

ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆ ವಿಶ್ವಾದ್ಯಂತ ಚರ್ಚೆಯಲ್ಲಿರುವ ವಿಷಯವಾಗಿದೆ. ಕಂಪನಿಗಳು ರಾಜಕಾರಣಿಗಳಿಗೆ ಹಣವನ್ನು ನೀಡುವುದು, ಅವರ ನಡುವಿನ ಸಂಬಂಧದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಭ್ರಷ್ಟಾಚಾರ ಮತ್ತು ಕ್ರೋನಿಯಿಸಮ್‌ಗೆ ಕಾರಣವಾಗುವ ಇದು ಪ್ರತಿಫಲಾಪೇಕ್ಷೆಯ ವ್ಯವಹಾರಗಳಿಗೆ ಕ್ಷೇತ್ರವನ್ನು ಮುಕ್ತವಾಗಿಸುತ್ತದೆ. ಫೆ.5ರಂದು ತೀರ್ಪು ಪ್ರಕಟಿಸಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನೂ ಒತ್ತಿ ಹೇಳಿದೆ. ‘ಕಂಪನಿಗಳು ನೀಡುವ ದೇಣಿಗೆಗಳು ಪ್ರತಿಫಲಾಪೇಕ್ಷೆಯಿಂದ ಮಾಡಲಾದ ವ್ಯಹಹಾರ ವಹಿವಾಟುಗಳಾಗಿವೆ’ಎಂದು ಅದು ಹೇಳಿದೆ.

ಕಳೆದ 10 ವರ್ಷಗಳಲ್ಲಿ ಒಂದು ಕೋಟಿ ರೂ.ಅಥವಾ ಹೆಚ್ಚಿನ ದೇಣಿಗೆಗಳನ್ನು ನೀಡಿರುವ ಕಂಪನಿಗಳ ಪಟ್ಟಿಯನ್ನು ʼನ್ಯೂಸ್‌ಲಾಂಡ್ರಿʼ ಮತ್ತು ʼದಿ ನ್ಯೂಸ್ ಮಿನಿಟ್ʼ ಪರಿಶೀಲಿಸಿದಾಗ ಎರಡು ಪ್ರವೃತ್ತಿಗಳು ಕಂಡು ಬಂದಿವೆ.

ಈ ಅವಧಿಯಲ್ಲಿ ಬಿಜೆಪಿಗೆ ಒಟ್ಟು 335 ಕೋಟಿ ರೂ.ದೇಣಿಗೆಗಳನ್ನು ನೀಡಿರುವ ಕನಿಷ್ಠ 30 ಕಂಪನಿಗಳು ಇದೇ ಅವಧಿಯಲ್ಲಿ ಕೇಂದ್ರ ಸರಕಾರದ ಏಜೆನ್ಸಿಗಳಿಂದ ಕ್ರಮವನ್ನೂ ಎದುರಿಸಿದ್ದವು. ಕೆಲವು ಕಂಪನಿಗಳು ಈ ಏಜೆನ್ಸಿಗಳ ದಾಳಿಗೆ ಗುರಿಯಾದ ಬಳಿಕ ಬಿಜೆಪಿಗೆ ಹೆಚ್ಚಿನ ದೇಣಿಗೆಗಳನ್ನು ನೀಡಿದ್ದರೆ, ವರ್ಷದಲ್ಲಿ ದೇಣಿಗೆಯನ್ನು ನೀಡುವುದನ್ನು ತಪ್ಪಿಸಿದ್ದ ಕೆಲವು ಕಂಪನಿಗಳು ಕ್ರಮವನ್ನು ಎದುರಿಸಿದ್ದವು. ದಾಳಿಗೆ ಗುರಿಯಾಗಿದ್ದ ಮಧ್ಯಪ್ರದೇಶದ ಡಿಸ್ಟಿಲರಿಯೊಂದು ತನ್ನ ಮಾಲಿಕರು ಜಾಮೀನು ಪಡೆದ ಕೆಲವೇ ದಿನಗಳಲ್ಲಿ  ದೇಣಿಗೆಯನ್ನು ಪಾವತಿಸಿತ್ತು.

ಚುನಾವಣಾ ಬಾಂಡ್‌ಗಳ ಪೂರ್ವಾಧಿಕಾರಿ ಚುನಾವಣಾ ಟ್ರಸ್ಟ್ ಹೆಚ್ಚು ಕಡಿಮೆ ಅಸ್ತಿತ್ವ ಕಳೆದುಕೊಂಡಿದ್ದರೂ ಒಂದು ಈಗಲೂ ಕಣದಲ್ಲಿದೆ. ಅದು ಭಾರ್ತಿ ಗ್ರೂಪ್ ಸ್ಥಾಪಿಸಿದ ಪ್ರುಡಂಟ್ ಚುನಾವಣಾ ಟ್ರಸ್ಟ್. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಈ ಎಲ್ಲ ವರ್ಷಗಳಲ್ಲಿ ನೂರಾರು ಕೋಟಿ ರೂ.ಗಳ ದೇಣಿಗೆಗಳನ್ನು ಪ್ರುಡಂಟ್‌ಗೆ ನೀಡಿದ್ದು, ಇದರಲ್ಲಿ ಸಿಂಹಪಾಲು ಬಿಜೆಪಿ ಜೇಬು ಸೇರಿದೆ.

ಇತರ ಚುನಾವಣಾ ಟ್ರಸ್ಟ್‌ಗಳು ಯಾವುದೇ ಹಣ ಸ್ವೀಕರಿಸುತ್ತಿಲ್ಲ. ಹೀಗಿರುವಾಗ ಪ್ರುಡಂಟ್ ತನ್ನ ಕಾರ್ಯಾಚರಣೆಗಳನ್ನು ಏಕೆ ಮುಂದುವರಿಸಿದೆ? ಮತ್ತು ಚುನಾವಣಾ ಬಾಂಡ್‌ಗಳಿದ್ದರೂ ಕೆಲವು ಕಂಪನಿಗಳು ಚುನಾವಣಾ ಟ್ರಸ್ಟ್‌ಗಳ ಮೂಲಕವೇ ಹಣವನ್ನು ನೀಡಲು ಬಯಸಿದ್ದು ಏಕೆ? ಈ 30 ಕಂಪನಿಗಳು ಯಾವುದು? ಅವುಗಳ ಮೇಲೆ ಯಾವ ಆರೋಪ ಹೊರಿಸಲಾಗಿತ್ತು?

ವಿವರಗಳಿಗೆ ಈ ಸರಣಿಯ ಮುಂದಿನ ಭಾಗವನ್ನು ನಿರೀಕ್ಷಿಸಿ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - Prateek Goyal

contributor

Similar News