ಬೀದಿಯಲ್ಲೇ ಬಿಜೆಪಿ ಬಿಗ್ ಫೈಟ್ ! । ಸುಮ್ಮನೆ ಕೂತು ಆಟ ನೋಡುತ್ತಿರುವ ವರಿಷ್ಠರು

Update: 2023-06-30 05:57 GMT

ಶಿಸ್ತಿನ ಪಕ್ಷ ಬಿಜೆಪಿಯ ಹಿರಿಯ ನಾಯಕರೇ ನಾನು.. ನೀನು... ಅಂತ ಬೀದಿ ಜಗಳಕ್ಕೆ ನಿಂತು ಬಿಟ್ಟಿದ್ದಾರೆ. ಪರಿಸ್ಥಿತಿ ಒಬ್ಬರಿಗೊಬ್ಬರು ಏಕವಚನದಲ್ಲೇ ಬೈದು, ಬೆದರಿಕೆ ಹಾಕುವಲ್ಲಿಗೆ ಬಂದು ತಲುಪಿದೆ.

ಅದು ಯಾರೋ ತಳಮಟ್ಟದ ಕಾರ್ಯಕರ್ತರಲ್ಲ. ಹಿರಿಯ ನಾಯಕರು, ಮಾಜಿ ಸಚಿವರೇ ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಹೀನಾಯವಾಗಿ ಸೋತಿರುವ ಹತಾಶೆಯಾದ್ರೆ, ಇನ್ನೊಂದು ಕಡೆ ಈ ಎಲ್ಲ ಜಗಳ ತಾರಕಕ್ಕೇರಲು ಮುಖ್ಯ ಕಾರಣ ವಿಪಕ್ಷ ನಾಯಕ ಹಾಗು ರಾಜ್ಯಾಧ್ಯಕ್ಷ ಸ್ಥಾನಗಳು.

ಈ ಎರಡೂ ಪ್ರಮುಖ ಹುದ್ದೆಗಳಿಗೆ ಬಿಜೆಪಿ ವರಿಷ್ಠರು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಎರಡೂ ಸ್ಥಾನಗಳಿಗೆ ಆಯ್ಕೆ ಅಂತಿಮವಾಗಲಿದೆ. ಆ ಸ್ಥಾನಗಳಿಗೆ ಏರ್ಪಟ್ಟಿರುವ ಭಾರೀ ಜಿದ್ದಾಜಿದ್ದಿ ಈಗ ರಾಜ್ಯ ಬಿಜೆಪಿ ನಾಯಕರ ನಡುವೆ ಬಹಿರಂಗ ಸಮರಕ್ಕೆ ಕಾರಣವಾಗಿದೆ.

ಅಸೆಂಬ್ಲಿ ಸೋಲಿಗೆ ಬಿಜೆಪಿ ನಾಯಕರಲ್ಲೇ ಹಲವರು ಕೊಡುಗೆ ನೀಡಿದ್ದಾರೆ ಎಂಬ ಅನುಮಾನ ಬಿಜೆಪಿ ರಾಜ್ಯ ಹಾಗು ರಾಷ್ಟ್ರೀಯ ನಾಯಕರಲ್ಲೂ ಇದೆ. ಈಗಾಗಲೇ ಸಂಸದ ಪ್ರತಾಪ್ ಸಿಂಹ, ಸಿಟಿ ರವಿಯಂತಹ ನಾಯಕರು ಅದನ್ನು ನೇರವಾಗಿಯೇ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಟಾರ್ಗೆಟ್ ಮಾಡಿಯೂ ಆರೋಪ ಮಾಡಲಾಗಿದೆ.

ರವಿವಾರ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹಾಗು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಡುವೆಯೇ ಜಗಳಬಂದಿ ನಡೆದಿತ್ತು. "ಕಾಂಗ್ರೆಸ್ ನಾಯಕರನ್ನು ಮನೆಗೆ ಬಿಟ್ಟುಕೊಳ್ಳಬೇಡಿ " ಎಂದು ಯತ್ನಾಳ್ ನೇರವಾಗಿಯೇ ಬೊಮ್ಮಾಯಿಯವರಿಗೆ ಹೇಳಿದ್ದರು. ಅದಕ್ಕೆ ಅಲ್ಲೇ ತಿರುಗೇಟು ನೀಡಿದ್ದ ಬೊಮ್ಮಾಯಿ " ನಾವು ಮನೆಗೆ ಬರೋರನ್ನು ತಡೆಯಕ್ಕೆ ಆಗಲ್ಲ, ಆದರೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲ್ಲ. ಮನೆಗೆ ಹೋಗದೆಯೇ ಹೊಂದಾಣಿಕೆ ಮಾಡಿಕೊಂಡವರು ಯಾರು ಅಂತ ಎಲ್ಲರಿಗೂ ಗೊತ್ತು" ಎಂದಿದ್ದರು.

ಸೋಮವಾರ ಯತ್ನಾಳ್ ಹಾಗು ಮುರುಗೇಶ್ ನಿರಾಣಿ ನಡುವೆ ಮಾತಿನ ಸಮರ ನಡೆದಿದೆ. ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತಾಡಿದ ನಿರಾಣಿ "ವಿಜಯಪುರ ಜಿಲ್ಲೆಯ ಮಂತ್ರಿಯೊಬ್ಬರಿಗೆ ಚೇಲಾ ಆಗಿ ಕೆಲಸ ಮಾಡೋರು ಯಾರು ಎಂದು ತಿಳಿದಿಲ್ಲವೇ ? ಬಬಲೇಶ್ವರದಲ್ಲಿ ಮೂರು ಬಾರಿ ಬಿಜೆಪಿಯನ್ನು ಸೋಲಿಸಿದ್ದು ಯಾರು ? ನಮ್ಮನ್ನು ಹೆಚ್ಚು ಮಾತಾಡಿಸಬೇಡಿ " ಎಂದು ಯತ್ನಾಳ್ ರನ್ನು ಕೆಣಕಿದ್ದಾರೆ. ಇದಕ್ಕೆ ಅಲ್ಲೇ ತಿರುಗೇಟು ನೀಡಿದ ಯತ್ನಾಳ್ " ಬಾಗಲಕೋಟೆಯಲ್ಲಿ ಚರಂತಿಮಠ ಹಾಗು ಕಾರಜೋಳರನ್ನು ಸೋಲಿಸಲು ದುಡ್ಡು ಕೊಟ್ಟವರು, ಮನೆ ಒಡೆದವರು ಯಾರು ಎಂದು ಬಾಯಿ ಬಿಡಬೇಕಿಲ್ಲ, ಕಾರ್ಯಕರ್ತರಿಗೆ ಗೊತ್ತು. ನನ್ನನ್ನು ಮನೆಗೆ ಕಳಿಸುತ್ತೇನೆ ಎಂದು ಹೇಳಿದವರೇ ಮನೆಗೆ ಹೋಗಿದ್ದಾರೆ " ಎಂದು ಹೇಳಿದ್ದಾರೆ.

ವಿಜಯಪುರ ಸಭೆಯಲ್ಲೂ ಸಂಸದ ರಮೇಶ್ ಜಿಗಜಿಣಗಿ, ಮಾಜಿ ಎಮ್ಮೆಲ್ಸಿ ಅರುಣ ಶಹಾಪುರ, ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಕೊನೆಗೆ ಈ ನಾಯಕರು ವೇದಿಕೆಯಿಂದ ಹೊರನಡೆದಿದ್ದಾರೆ. ಮಾಜಿ ಸಚಿವ ಶಶಿಕಲಾ ಜೊಲ್ಲೆ ಮಾತಾಡುವಾಗಲೂ ಅವರ ಮಾತಿಗೆ ಅಡ್ಡಿಪಡಿಸಿದ್ದಾರೆ.

ಇದೆಲ್ಲ ಸಾಲದ್ದಕ್ಕೆ ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಸಹಿತ ಬೇರೆ ಪಕ್ಷದಿಂದ ಬಂದವರಿಂದ ಬಿಜೆಪಿಯಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿಬಿಟ್ಟಿದ್ದಾರೆ. ಕಾಂಗ್ರೆಸ್ ನ ಅಶಿಸ್ತು ಬಿಜೆಪಿಗೆ ಬಂದಿದೆ ಎಂದಿದ್ದಾರೆ. ಬೇರೆ ಪಕ್ಷ ಬಿಟ್ಟು ಬಂದು ಇಲ್ಲಿ ಎರಡೆರಡು ಚುನಾವಣೆ ಎದುರಿಸಿದ ಮೇಲೂ ಈ ಮಾತು ಯಾಕೆ ಅಂತ ವಲಸಿಗ ನಾಯಕರು ಸಿಟ್ಟಾಗಿದ್ದಾರೆ.

ಅಲ್ಲಿಗೆ ಚುನಾವಣೆಯಲ್ಲಿ ಸೋಲಿಗೆ ಪಕ್ಷದ ಹಿರಿಯ ನಾಯಕರೇ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ ಅಂತ ಬಿಜೆಪಿ ನಾಯಕರೇ ಈಗ ಬೀದಿ ಬೀದಿಯಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. ಈ ನಡುವೆ ಮೂರ್ನಾಲ್ಕು ದಿನಗಳಲ್ಲೇ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಜೋರಾಗಿಯೇ ಲಾಬಿ ನಡೆಯುತ್ತಿದೆ. ರಾಜ್ಯಾಧ್ಯಕ್ಷರ ನೇಮಕ ಆದ ಮೇಲೆ ಈ ಆಂತರಿಕ ಸಮರ ಯಾವ ರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾತ್ರ ಇದನ್ನೆಲ್ಲಾ ಮೌನವಾಗಿ ನೋಡಿ ಸುಮ್ಮನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News