ಕೇರಳ ಹೊಸ ರಾಷ್ಟ್ರ!: ಬಿಜೆಪಿ ಆರೋಪ ಏನು ?

Update: 2024-07-21 08:56 GMT

ಪಿಣರಾಯಿ ವಿಜಯನ್ / ಕೆ. ಸುರೇಂದ್ರನ್ (Photo: PTI)

ಕೇರಳ ರಾಜಕಾರಣದಲ್ಲಿ ಈಗ ಹೊಸ ಚರ್ಚೆಯೊಂದು ಶುರುವಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳವನ್ನು ಹೊಸ ರಾಷ್ಟ್ರವಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಆರೋಪದ ಹಿನ್ನೆಲೆಯೇನು? ಯಾಕೆ ಏಕಾಏಕಿ ಈ ಆರೋಪ ಕೇಳಿ ಬರುತ್ತಿದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ:

ಕೇರಳ ಸರ್ಕಾರವು ಈ ವಾರದ ಆರಂಭದಲ್ಲಿ ಹಿರಿಯ ಐಎಎಸ್ ಅಧಿಕಾರಿ ಡಾ. ಕೆ ವಾಸುಕಿ ಅವರಿಗೆ ವಿದೇಶ ನೀತಿ ಸಂಬಂಧಿಸಿದ ವಿಷಯಗಳ ಹೆಚ್ಚುವರಿ ಉಸ್ತುವಾರಿಯನ್ನು ನೀಡಿ ಆದೇಶ ಹೊರಡಿಸಿತ್ತು. ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಕಾರ್ಯದರ್ಶಿಯಾಗಿರುವ ಡಾ. ಕೆ ವಾಸುಕಿ ಐಎಎಸ್ ರವರಿಗೆ ವಿದೇಶ ಸಹಕಾರ ವಿಷಯಗಳ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ ಎಂದು ರಾಜ್ಯ ಸರಕಾರದ ಆದೇಶದಲ್ಲಿತ್ತು. ಜುಲೈ 15 ರಿಂದ ಅಧಿಕಾರಿಯು ಈ ಹೊಸ ಹುದ್ದೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಸರ್ಕಾರಿ ಆದೇಶ ತಿಳಿಸಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯ ಕೇರಳ ಹೌಸ್‌ನಲ್ಲಿರುವ ರೆಸಿಡೆಂಟ್ ಕಮಿಷನರ್ ವಿದೇಶ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಸುಕಿ ಅವರಿಗೆ ಸಹಕಾರ ನೀಡಲಿದ್ದಾರೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿವಿಧ ದೇಶಗಳ ಮಿಷನ್‌ಗಳು ಮತ್ತು ರಾಯಭಾರ ಕಚೇರಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದರೆ ಈ ಆದೇಶದ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರವು ತನ್ನ ಅಧಿಕಾರವನ್ನು ಮೀರಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ಈ ಕ್ರಮವನ್ನು "ಸ್ಪಷ್ಟ ಅತಿಕ್ರಮಣ" ಮತ್ತು ಸಂವಿಧಾನದ ಒಕ್ಕೂಟ ಪಟ್ಟಿಯ (Union List)  ಉಲ್ಲಂಘನೆ ಎಂದು ಬಣ್ಣಿಸಿದ್ದಾರೆ. ಮುಖ್ಯಮಂತ್ರಿಗಳು ಕೇರಳವನ್ನು "ಪ್ರತ್ಯೇಕ ರಾಷ್ಟ್ರ" ಎಂದು ಸ್ಥಾಪಿಸಲು ಬಯಸುತ್ತಾರೆಯೇ ಎಂದು ಎಕ್ಸ್‌ನಲ್ಲಿ ಸುರೇಂದ್ರನ್ ಕೇಳಿದ್ದಾರೆ.

"ಎಲ್‌ಡಿಎಫ್ ಸರ್ಕಾರಕ್ಕೆ ವಿದೇಶಾಂಗ ವ್ಯವಹಾರಗಳಲ್ಲಿ ಕ್ರಮ ಕೈಗೊಳ್ಳಲು ಯಾವುದೇ ಜನಾದೇಶವಿಲ್ಲ. ಈ ಅಸಾಂವಿಧಾನಿಕ ಕ್ರಮವು ಅಪಾಯಕಾರಿ ಪೂರ್ವನಿದರ್ಶನವನ್ನು ರೂಪಿಸುತ್ತದೆ. ಸಿಎಂ ಪಿಣರಾಯಿ ವಿಜಯನ್ ಕೇರಳವನ್ನು ಪ್ರತ್ಯೇಕ ರಾಷ್ಟ್ರವಾಗಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆಯೇ?" ಎಂದು ಸುರೇಂದ್ರನ್ ಕೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಮತ್ತು ಮಾಜಿ ರಾಜತಾಂತ್ರಿಕ ಶಶಿ ತರೂರ್ ಅವರು, ರಾಜ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಿಸುವ ಕೇರಳ ಸರ್ಕಾರದ ಕ್ರಮವನ್ನು ಅಸಾಮಾನ್ಯ ಎಂದು ಬಣ್ಣಿಸಿದ್ದಾರೆ. ರಾಜ್ಯದ ಅಧಿಕಾರಶಾಹಿಗೆ ತನ್ನದೇ ಆದ ವಿದೇಶಿ ಸಂಬಂಧದ ಜವಾಬ್ದಾರಿ ಇಲ್ಲ ಎಂಬುದನ್ನು ಬೊಟ್ಟು ಮಾಡಿ ಹೇಳಿದ್ದಾರೆ.

ವಿವಾದದ ಕುರಿತು ಮಾತನಾಡಿದ ಶಶಿ ತರೂರ್, ರಾಜ್ಯ ಸರ್ಕಾರಗಳು ತಮ್ಮ ನಿವಾಸಿಗಳನ್ನು ಒಳಗೊಂಡಿರುವ ವಿಷಯಗಳಿಗೆ ವಿದೇಶದಲ್ಲಿ ರಾಯಭಾರ ಕಚೇರಿಗಳಿಲ್ಲದೆ ಕೆಲಸ ಮಾಡುವುದು ಸಂಪೂರ್ಣವಾಗಿ ಸೂಕ್ತವಾಗಿದೆ ಎಂದಿದ್ದಾರೆ. ವಿದೇಶಿ ಸಂಬಂಧಗಳನ್ನು ಕೇಂದ್ರ ಸರ್ಕಾರವು ನಿಯಂತ್ರಿಸುತ್ತದೆ. ಆದರೆ ಯಾವುದೇ ರಾಜ್ಯ ಸರ್ಕಾರವು ಸ್ವತಂತ್ರ ವಿದೇಶಿ ಸಂಬಂಧಗಳನ್ನು ಹೊಂದದೆ ತಮ್ಮ ನಿವಾಸಿಗಳನ್ನು ಒಳಗೊಂಡಿರುವ ವಿಷಯಕ್ಕಾಗಿ ವಿದೇಶದಲ್ಲಿ ರಾಯಭಾರ ಕಚೇರಿಗಳಿಲ್ಲದೆ ಕೆಲಸ ಮಾಡುವುದು ಸಂಪೂರ್ಣವಾಗಿ ಸೂಕ್ತವಾಗಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

"ಈಗ ಒಬ್ಬ ಅಧಿಕಾರಿಗೆ ಈ ರೀತಿಯ ನಿರ್ದಿಷ್ಟ ಜವಾಬ್ದಾರಿಯನ್ನು ನೀಡುವುದು ಅಸಾಮಾನ್ಯವಾಗಿದೆ. ಆದರೆ ಆಕೆಗೆ ತನ್ನದೇ ಆದ ಯಾವುದೇ ವಿದೇಶಿ ಸಂಬಂಧದ ಜವಾಬ್ದಾರಿ ಇಲ್ಲ ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅವರು ಭಾರತ ಸರ್ಕಾರದ ಸಂಸ್ಥೆಗಳ ಮೂಲಕವೇ ತಮ್ಮ ಜವಾಬ್ದಾರಿಗಳನ್ನು ನೆರವೇರಿಸಲಿದ್ದಾರೆ ಎಂದು ತರೂರ್ ಹೇಳಿದ್ದಾರೆ.

ಅಂದ್ರೆ ಕೇರಳ ಸರಕಾರ ನೇಮಕ ಮಾಡಿರುವ ಅಧಿಕಾರಿ ನೇರವಾಗಿ ವಿದೇಶಿ ವ್ಯವಹಾರಗಳನ್ನು ನಡೆಸಲ್ಲ. ಅವರು ಕೇರಳ ಸರಕಾರದ ಪರವಾಗಿ ಭಾರತ ಸರಕಾರದ ವಿದೇಶಾಂಗ ಇಲಾಖೆ ಮೂಲಕವೇ ಕೇರಳಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವ್ಯವಹರಿಸುತ್ತಾರೆ. ಹಾಗಾಗಿ ಇದು ಸಮಸ್ಯೆ ಅಲ್ಲ ಎಂದು ಶಶಿ ತರೂರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಸರಕಾರ ಹಲವು ರಾಜ್ಯ ಸರಕಾರಗಳ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಎದುರಿಸುತ್ತಿದೆ. ರಾಜ್ಯಪಾಲರ ಮೂಲಕವೂ ರಾಜ್ಯ ಸರಕಾರ ಗಳಿಗೆ ಕಿರುಕುಳ ಕೊಡುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಅದರ ವಿರುದ್ಧ ಹಲವು ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ ವರೆಗೂ ಹೋಗಿವೆ.

ಆದರೆ ಈಗ ಕೇರಳ ಸರಕಾರದ ಒಂದು ನೇಮಕಾತಿ ಬಿಜೆಪಿಯ ಕಣ್ಣು ಕೆಂಪಾಗಿಸಿದೆ. ಕೇಂದ್ರ ರಾಜ್ಯ ಸರಕಾರಗಳ ಕರ್ತವ್ಯಗಳ ನಡುವಿನ ಲಕ್ಷ್ಮಣ ರೇಖೆಯನ್ನು ಅದು ತೋರಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News