ಸೌಜನ್ಯ ಕೊಲೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಆಗಸ್ಟ್ 28 ರಂದು ಚಲೋ ಬೆಳ್ತಂಗಡಿ

Update: 2023-08-22 16:07 GMT
Editor : Ismail | Byline : ಆರ್. ಜೀವಿ

ಸೌಜನ್ಯ

ಎರಡು ಕುಟುಂಬಗಳನ್ನು ಮುಗಿಯದ ಸಂಕಟಕ್ಕೆ ನೂಕಿದ, ಕರ್ನಾಟಕವನ್ನು ಮಾತ್ರವಲ್ಲ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆ ಹೇಯ ಕೃತ್ಯ ನಡೆದು 11 ವರ್ಷಗಳಾಗಿವೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಬಂದಿದ್ದು, ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಕೋರ್ಟ್ ಹೇಳಿದೆ.

ಇದರ ನಡುವೆಯೆ, ಆತ ಆರೋಪಿಯಾಗಿರಲಿಲ್ಲ ಎಂಬುದು ಗೊತ್ತಿರುವ ವಿಚಾರವೇ ಆಗಿತ್ತು, ನಿಜವಾದ ಅಪರಾಧಿಗಳನ್ನು ರಕ್ಷಿಸಲು ಆತನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು ಎಂದೂ, ಈ ಪ್ರಕರಣದ ವಿಚಾರವಾಗಿ ಹೋರಾಡುತ್ತಿರುವವರು ಹೇಳುತ್ತಿದ್ದಾರೆ. ಆರೋಪಿಗಳು ಯಾರೆನ್ನುವುದು ನಿಗೂಢವಾಗಿಯೇ ಉಳಿದಿರುವ ಈ ಪ್ರಕರಣದಲ್ಲಿ ಭಯಾನಕ ದಾಳಿಗೆ ತುತ್ತಾಗಿ ಬಲಿಯಾಗಿ ಹೋದವಳಿಗೆ ನ್ಯಾಯವೆಂಬುದು ಸುಳ್ಳು ಎಂಬಂತಾಗುತ್ತಿದೆ.

ಈಗಿನ ಬಹು ಮುಖ್ಯ ಬೆಳವಣಿಗೆಯೆಂದರೆ, ಅವಳಿಗೆ ನ್ಯಾಯ ಕೊಡಿಸಬೇಕೆಂದು ಹೋರಾಡುತ್ತಿರುವವರು ಆಕೆ ಎಲ್ಲಿ ಬಲಿಯಾದಳೊ ಆ ಸ್ಥಳದಲ್ಲಿಯೇ ಅವಳ ಪ್ರತಿಮೆ ಸ್ಥಾಪಿಸುವ ಮೂಲಕ, ನಿಜವಾದ ಅಪರಾಧಿಗಳೂ ಸೇರಿದಂತೆ ಎಲ್ಲರ ಆತ್ಮಸಾಕ್ಷಿಯನ್ನು ಅವಳ ಸಾವು ಚುಚ್ಚುತ್ತಲೇ ಇರುವಂತೆ ಮಾಡುವ ಒಂದು ತಾತ್ವಿಕ ತೀರ್ಮಾನಕ್ಕೆ ಬಂದಿದ್ದಾರೆ.  

ಇದರೊಂದಿಗೆ ಈ ಇಡೀ ಪ್ರಕರಣ ಒಂದು ಆಂದೋಲನದ ರೂಪ ಪಡೆದಿದೆ. ಮತ್ತು ಇಡೀ ಪ್ರಕರಣದ ಮರುತನಿಖೆಗೆ ಒತ್ತಾಯ, ಈ ಪ್ರಕರಣದಲ್ಲಿ ಸಾಕ್ಷ್ಯನಾಶ ಮಾಡಿದವರ ವಿರುದ್ಧ ಕಾನೂನು ಹೋರಾಟ ಇವೆಲ್ಲವನ್ನೂ ಈ ಆಂದೋಲನ ಒಳಗೊಳ್ಳುತ್ತ ತೀವ್ರತೆ ಪಡೆಯುತ್ತಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂಥದೊಂದು ಆಂದೋಲನದ ಸ್ವರೂಪ ಬರಲು ಶುರುವಾದದ್ದು ಕಳೆದೆರಡು ತಿಂಗಳಿನಿಂದ. ಅಂದರೆ, ಪ್ರಕರಣದ ತೀರ್ಪು ಹೊರಬಿದ್ದ ಬಳಿಕ.

ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅವತ್ತು 2012ರ ಅಕ್ಟೋಬರ್ 9. ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣ ಸಂಕ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿತ್ತು. ಶಂಕಿತ ಆರೋಪಿ ಸಂತೋಷ್ ರಾವ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿಯಾಗಿದ್ದು, ಬಾಹುಬಲಿ ಬೆಟ್ಟದ ಬಳಿ ಕೆಲವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. 11 ವರ್ಷಗಳ ಹಿಂದಿನ ಈ ಪ್ರಕರಣಕ್ಕೆ ಸಂಬಂಧಿಸಿ ಈ ವರ್ಷ ಜೂನ್ 16ರಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿತು. ಆರೋಪಿ ಸಂತೋಷ್ ರಾವ್‌ನನ್ನು ನಿರ್ದೋಷಿ ಎಂದು ಕೋರ್ಟ್ ಹೇಳಿತು. ಸಾಕ್ಷ್ಯಾಧಾರದ ಕೊರತೆಯಿಂದ ಆರೋಪಿಯನ್ನು ದೋಷಮುಕ್ತಗೊಳಿಸಲಾಗಿದೆ ಎಂಬ ತೀರ್ಪಿನ ಬಳಿಕ ಆರೋಪಿಯ ಬಿಡುಗಡೆಯೂ ಆಗಿದೆ.

ಆದರೆ, ಈ ಇಡೀ ಪ್ರಕರಣದ ಹಿಂದೆ ಏನೆಲ್ಲ ಇದೆ, ಏನೇನೆಲ್ಲ ಮುಚ್ಚಿಹೋಗಿದೆ, ನಿಜವಾದ ಅಪರಾಧಿಗಳು ಯಾರು ಮತ್ತು ಅದೇಕೆ ಬಯಲಾಗದೆ ಉಳಿದಿದೆ ಎಂಬ ಪ್ರಶ್ನೆಗಳನ್ನು ಸೌಜನ್ಯ ಕುಟುಂಬದ ಪರವಾಗಿ ಹೋರಾಡುತ್ತಿರುವವರು ಕೇಳುತ್ತಲೇ ಬಂದಿದ್ದಾರೆ. ಮತ್ತು ಅದು ಈಗ ಹೆಚ್ಚು ಗಟ್ಟಿ ದನಿ ಪಡೆದಿದೆ.

ಬಹಳ ಮುಖ್ಯವೆನ್ನಿಸುವ ಪ್ರಶ್ನೆಗಳನ್ನು ಎತ್ತಿರುವುದು ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆ. ಅದರ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರ ಪ್ರಕಾರ, ಈಗ ನಿರ್ದೋಷಿ ಎಂದು ಬಿಡುಗಡೆಯಾಗಿರುವ ಸಂತೋಷ್ ರಾವ್ ತಪ್ಪಿತಸ್ಥನಲ್ಲ ಎಂಬುದು 10 ವರ್ಷಗಳ ಹಿಂದೆಯೇ ತಿಳಿದಿದ್ದ ವಿಚಾರ.  ನಿಜವಾದ ಅಪರಾಧಿಗಳನ್ನು ರಕ್ಷಿಸುವ ವ್ಯವಸ್ಥೆಯಾಗಿ ಆತನನ್ನು ತಪ್ಪಿತಸ್ಥನೆಂದು ನಿಲ್ಲಿಸಲಾಯಿತು. ನಿಜವಾದ ಆರೋಪಿಗಳ ವಿರುದ್ಧದ ಎಲ್ಲ ಸಾಕ್ಷ್ಯಗಳನ್ನು ಹಂತಹಂತವಾಗಿ ನಾಶಪಡಿಸಲಾಯಿತು. ಸೌಜನ್ಯ ಪರ ಸಾಕ್ಷ್ಯ ಹೇಳಲು ಬಂದಿದ್ದವರಲ್ಲಿ ಒಬ್ಬರು ನೇಣು ಹಾಕಿಕೊಂಡು, ಇನ್ನೊಬ್ಬರು ಬಾವಿಗೆ ಬಿದ್ದು ಸತ್ತಿದ್ದರೆ, ಮತ್ತೊಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಅವೆಲ್ಲವೂ ಅನುಮಾನಾಸ್ಪದ ಸಾವುಗಳೇ ಆಗಿದ್ದವು.

ಪೊಲೀಸರು ಮತ್ತು ವೈದ್ಯಕೀಯ ವರದಿ ನೀಡಿರುವ ಪೊಲೀಸರು ಲೋಪವೆಸಗಿರುವುದು ಸ್ಪಷ್ಟವಾಗಿದ್ದು, ಅವರುಗಳ ವಿರುದ್ಧ ಕೋರ್ಟ್ ಮೊರೆಹೋಗುವುದಾಗಿಯೂ ಮಹೇಶ್ ಶೆಟ್ಟಿ ಹೇಳಿರುವುದು ವರದಿಯಾಗಿದೆ. ಪ್ರಕರಣವನ್ನು ಮರು ತನಿಖೆ ನಡೆಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸುತ್ತಿವೆ.

ಪುತ್ತೂರು ನಗರದಲ್ಲಿ ಪುತ್ತಿಲ ಪರಿವಾರದಿಂದ ಪಾದಯಾತ್ರೆ, ರಸ್ತೆ ತಡೆ, ಪ್ರತಿಭಟನೆ ನಡೆದಿದೆ. ಮಹಿಳೆಯರೂ ಸೇರಿ, ಸಾವಿರಾರು ಮಂದಿ ಪುತ್ತಿಲ ಪರಿವಾರದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆ ವೇಳೆ ಪುತ್ತೂರು ನಗರದ ಬಹುತೇಕ ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್‌ಕುಮಾರ್ ಪುತ್ತಿಲ ಹೇಳಿರುವುದು:  

“ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಒಪ್ಪಿಸಬೇಕು. ಕೃತ್ಯ ಎಸಗಿರುವವರನ್ನು ಗಲ್ಲಿಗೇರಿಸುವವರೆಗೆ ಹೋರಾಟ ಮಾಡುವ ಸಂಕಲ್ಪ ಮಾಡಿದ್ದೇವೆ. ಸೌಜನ್ಯ ಪರವಾದ ಈ ಹೋರಾಟದಲ್ಲಿ ನಾವು ಸಂಘರ್ಷಕ್ಕೂ ಸಿದ್ಧ. ಸರ್ಕಾರದ ವಿಳಂಬ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಈ ಆಂದೋಲನ ಸಂಘರ್ಷದ ದಾರಿ ಹಿಡಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು.”

ಇನ್ನು, ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಆಗಸ್ಟ್ 28ರಂದು ಬೆಳ್ತಂಗಡಿ ಚಲೋ ಧರಣಿಯನ್ನು ಆಯೋಜಿಸಿರುವುದಾಗಿ ಮಾಜಿ ಶಾಸಕ, ಕಾರ್ಯಕ್ರಮದ ಗೌರವ ಸಂಚಾಲಕ ಕೆ ವಸಂತ ಬಂಗೇರ ಹೇಳಿದ್ದಾರೆ. ಈ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿಯಲ್ಲಿ ಎಡಪಕ್ಷಗಳ ಜೊತೆ ಹಲವು ಜನಪರ ಸಂಘಟನೆಗಳು ಕೈ ಜೋಡಿಸಿವೆ. ರಾಜ್ಯ ಸರ್ಕಾರ ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಬೇಕು ಹಾಗೂ ಧರ್ಮಸ್ಥಳ, ಉಜಿರೆ ಭಾಗಗಳಲ್ಲಿ ನಡೆದಿರುವ ಅಸಹಜ ಸಾವುಗಳ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.  

ಈ ನಡುವೆ ವಸಂತ ಬಂಗೇರ ಅವರು ಹೇಳಿರುವ ಇನ್ನೊಂದು ಮಾತು ಸಂಚಲನ ಉಂಟುಮಾಡಿದೆ. ಸಿಬಿಐ ತನಿಖೆಯ ದಾರಿ ತಪ್ಪಿಸಲಾಗಿತ್ತು. ಸೌಜನ್ಯ ಪ್ರಕರಣದ ಈ ರಹಸ್ಯ ಬಿಚ್ಚಿಟ್ಟರೆ ನನ್ನನ್ನೂ ಸಾಯಿಸಬಹುದು. ಸಿಬಿಐ ತನಿಖೆ ಅರ್ಧ ಹಂತ ಮುಟ್ಟಿದಾಗ, ಅದರಲ್ಲಿ ಮೋಸ ಇದೆ ಅನ್ನೋದು ನನಗೆ ತಿಳಿಯಿತು. ಈಗ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ನಾನು ಪ್ರಸ್ತಾಪಿಸಿಯೇ ಸಿದ್ದ. ಖಾಕಿಯಾಗಲೀ, ಕಾವಿಯಾಗಲೀ ಅವರನ್ನೂ ತನಿಖೆ ಮಾಡುವ ಶಕ್ತಿ ನಮ್ಮಲ್ಲಿದೆ ಎಂದು ಬಂಗೇರ ಹೇಳಿದ್ದಾರೆ.

ಮಹೇಶ್ ಶೆಟ್ಟಿಯವರೂ ಇದೇ ಧಾಟಿಯಲ್ಲಿ ಮಾತನಾಡುತ್ತ, ತನಿಖೆಯಲ್ಲಿದ್ದವರೇ ದೊಡ್ಡವರ ಸೂಚನೆಯಂತೆ ನಡೆದಿದ್ದೇವೆ ಎಂದು ನನ್ನ ಬಳಿ ಹೇಳಿದ್ದರು. ದೊಡ್ಡವರು ಯಾರು, ಸಣ್ಣವರು ಯಾರು ಎಂಬುದು ಈ ಭಾಗದ ಜನರಿಗೆ ಗೊತ್ತಿದೆ ಎಂದಿದ್ದಾರೆ.   ಬಿಜೆಪಿ ಕೂಡ ಆಗಸ್ಟ್‌ 27ರಂದು ಹೋರಾಟ ನಡೆಸಲಿದ್ದು, ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ಧಾರೆ.  ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಯೂ 60ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಧರಣಿ ನಡೆಸಿ, ಪ್ರಕರಣದ ಮರುತನಿಖೆಗೆ ಎಸ್ಐಟಿ ರಚಿಸುವಂತೆ ಒತ್ತಾಯಿಸಿವೆ.

ಈ ನಡುವೆ, ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ಎಂಬ ಸಂಘಟನೆಯವರು ಸೌಜನ್ಯಾಳ ಕುರಿತು ನಡೆಸುತ್ತಿದ್ದ ಸಮಾವೇಶ, ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಲೆಂದು ಹೋಗಿದ್ದ ಸೌಜನ್ಯಾ ತಾಯಿ ಕುಸುಮಾವತಿ, ಸಹೋದರಿಯರಾದ ಸೌಂದರ್ಯ, ಸೌಹಾರ್ದ ಮತ್ತು ಸಹೋದರ ಜಯರಾಮ ಅವರ ಮೇಲೆ ದೌರ್ಜನ್ಯ ಎಸಗಿರುವುದಾಗಿ ಜನವಾದಿ ಮಹಿಳಾ ಸಂಘಟನೆ ಆರೋಪಿಸಿದೆ. ಆ ಕುಟುಂಬಕ್ಕೆ ಸರ್ಕಾರ ಭದ್ರತೆ ನೀಡಬೇಕು ಎಂದೂ ಆಗ್ರಹಿಸಲಾಗಿದೆ.

ಇನ್ನು, ನಟ ಪ್ರಕಾಶ ರಾಜ್, ”ಧರ್ಮದ ಸೋಗಿನವರು ತಪ್ಪು ಮಾಡಿದರೆ ಅದನ್ನು ತನಿಖೆ ಮಾಡುವುದು ಸರಿಯಾಗಿಯೇ ಇದೆ” ಎಂದು  ಹೇಳಿದ್ದಾರೆ. ”ಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಧರ್ಮಾಧಿಕಾರಿಗಳನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ? ಪೊಲೀಸರು ಇದನ್ನು ನೋಡಿಕೊಳ್ಳುತ್ತಾರೆ. ಸತ್ಯ ಹೊರಗೆ ಬಂದೇ ಬರುತ್ತದೆ. ಕೊನೆಯದಾಗಿ ಧರ್ಮ ಉಳಿಯಬೇಕು” ಎಂದಿದ್ದಾರೆ.

ಕನ್ನಡ ಚಿತ್ರರಂಗದ ಕೆಲವು ನಟರು ಕೂಡ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ. ದುನಿಯಾ ವಿಜಯ್ ಹಾಗೂ ವಿನೋದ್ ಪ್ರಭಾಕರ್ ಅವರು ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ಧರ್ಮಸ್ಥಳಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಕರಣದ ಮರುತನಿಖೆಯ ಯೋಚನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರಾದರೂ, ಸಿಎಂ ಸಿದ್ದರಾಮಯ್ಯ, ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದೆಂದು ವಿಚಾರ ಮಾಡಲಾಗುವುದು ಎಂದಿದ್ದಾರೆ. ಅಧಿಕಾರಿಗಳಿಂದ ಲೋಪವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖವಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ತೀರ್ಪು ಓದಿದ ನಂತರ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೆ ಸಲ್ಲಿಸಲಾಗುವುದು ಎಂದಿದ್ಧಾರೆ.

 

ಮರುತನಿಖೆಯ ಈ ಒತ್ತಾಯಗಳು, ಧರಣಿ, ಪ್ರತಿಭಟನೆ, ಪಾದಯಾತ್ರೆ, ಕಾನೂನು ಹೋರಾಟದ ಇಂಗಿತ ಇವೆಲ್ಲವೂ ಒಂದು ಭಾಗವಾದರೆ, ಸೌಜನ್ಯಳ ಪ್ರತಿಮೆ ಸ್ಥಾಪಿಸುವ ನಿಲುವು ಆಂದೋಲನದ ಬಹು ಪ್ರಮುಖ ಭಾಗವಾಗಿ ಕಾಣಿಸುತ್ತಿದೆ.

ಸೌಜನ್ಯ ಸಮಾಧಿ ಬಳಿಯಲ್ಲೇ ಆಕೆಯ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ. ಆಕೆ ಒಂದು ಶಕ್ತಿಯಾಗಲಿದ್ದಾಳೆ. ಆ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವ ಭಕ್ತರು ಮಾತ್ರವಲ್ಲ, ಅತ್ಯಾಚಾರ ನಡೆಸಿ ಕೊಲೆ ಮಾಡಿದವರು ಸಹ ಅದನ್ನು ನಿತ್ಯವೂ ನೋಡುವಂತಾಗಬೇಕು. ಧರ್ಮದ ಹೆಸರಿನಲ್ಲಿ ಹೆದರಿಸುವುದರ ಭೀಕರತೆಯ ಅರಿವು ಎಲ್ಲರಿಗೂ ಆಗಬೇಕು. ನಮ್ಮ ಹೋರಾಟ ಅಪರಾಧಿಗಳ ವಿರುದ್ಧ ಮಾತ್ರ ಎಂದಿದ್ಧಾರೆ ಮಹೇಶ್ ಶೆಟ್ಟಿ.

ಕೊಂದವರ, ನೀತಿಗೆಟ್ಟವರ, ಪರಮ ನೀಚರ ಎದುರಲ್ಲಿ ಸೌಜನ್ಯ ಸಾಯದೆ ಪ್ರತಿಮೆಯಾಗಿ ನಿಂತು ಕಾಡುವುದಿದೆಯಲ್ಲ, ಅದು ಈಗ, ಈ ಹನ್ನೊಂದು ವರ್ಷಗಳ ನಂತರವಾದರೂ ಆಗಬೇಕಿರುವುದು ಅಗತ್ಯವೇ ಆಗಿದೆ. ಬದುಕಿ ಬಾಳಬೇಕಿದ್ದವಳು ಇಂದು ನಮ್ಮ ನಡುವೆ ಇಲ್ಲ. ಅವಳ ಸಾವಿನ ಪ್ರಕರಣವನ್ನು ಕಾಣದ ಕೈಗಳೆಲ್ಲ ಸೇರಿ ನಿಗೂಢವಾಗಿಸಿವೆ ಎಂಬ ಅನುಮಾನಗಳಿರುವ ಈ ಹೊತ್ತಿನಲ್ಲಿ, ಅವಳು ಕಣ್ಣೆದುರು ಕಾಣುತ್ತಲೇ ಇರುವಂತಾಗುವುದು, ಈಗಿನ ಸಂಘರ್ಷದಲ್ಲಿ ಬಹುದೊಡ್ಡ ತಾತ್ವಿಕ ಗೆಲುವಾಗಲಿದೆ ಎಂದು ಮಾತ್ರ ಹೇಳಬಹುದು. 

ಆಗಸ್ಟ್ 28 ರ ಬೆಳ್ತಂಗಡಿ ಚಲೋ ಆಂದೋಲನ ಯಶಸ್ವಿಯಾಗಲಿ, ಸೌಜನ್ಯ ಗೆ ನ್ಯಾಯ ಸಿಗಲಿ, ಹಾಗೆ ನಿರಪರಾಧಿ ಸಂತೋಷ್ ರಾವ್ ನನ್ನು ಸಿಲುಕಿಸಿದ ವರಿಗೂ ಶಿಕ್ಷೆಯಾಗಲಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News