ಅವಕಾಶವಾದಿತನದಿಂದ ಎಲ್ಲಿಗೂ ಸಲ್ಲದವರಾದ ಸಿಎಂ ಇಬ್ರಾಹೀಮ್

Update: 2023-10-25 10:42 GMT
Editor : Naufal | By : ಆರ್. ಜೀವಿ

► ಅಪ್ಪ, ಮಕ್ಕಳು, ಮೊಮ್ಮಕ್ಕಳ ಪಕ್ಷದ ಭವಿಷ್ಯವೇನು ?

► ಪ್ರಾದೇಶಿಕ ಮಿತ್ರ ಪಕ್ಷಗಳನ್ನು ಉಳಿಸಿದೆಯೇ ಬಿಜೆಪಿ ?

ದೇವೇಗೌಡರ ಜಾತ್ಯತೀತ ರಾಜಕಾರಣ ಎಂದರೆ ಏನೆಂಬುದು ಮತ್ತೊಮ್ಮೆ ಬಯಲಾಗಿದೆ. ಜೊತೆಗೇ, ಪುತ್ರ ವ್ಯಾಮೋಹವೂ ಅವರ ರಾಜಕಾರಣದ ಭಾಗವೇ ಆಗಿರುವುದನ್ನು ಮತ್ತೂ ಒಂದು ಬಾರಿ ನೋಡುವಂತಾಗಿದೆ. ಇದರ ನಡುವೆ ಸಿಎಂ ಇಬ್ರಾಹಿಂ ಅವರಿಗೆ ಸಿಕ್ಕಿರುವುದು, ಅವರೇ ಹೇಳಿಕೊಂಡಿರುವಂತೆ ಹುಣಸೆ ಬೀಜ ಮಾತ್ರ.

ಬಿಜೆಪಿ ಜೊತೆಗಿನ ಮೈತ್ರಿ ವಿರೋಧಿಸಿ ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದ ಸಿಎಂ ಇಬ್ರಾಹಿಂ ಅವರನ್ನು, ದೇವೇಗೌಡರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿದ್ದಾರೆ. ಜೆಡಿಎಸ್ ಕೋರ್ ಕಮಿಟಿ ತುರ್ತು ಸಭೆ ಕರೆಯಲಾಗಿದೆ ಎಂದಾಗಲೇ ಹೀಗೆಯೇ ಆಗುತ್ತದೆ ಎಂಬುದನ್ನು ರಾಜಕೀಯ ವಲಯದಲ್ಲಿ ನಿರೀಕ್ಷಿಸಲಾಗಿತ್ತು. ಅದೇ ಆಯಿತು.

ದೇವೇಗೌಡರ ಈ ಕ್ರಮದ ಬಳಿಕ ಇಬ್ರಾಹಿಂ, ತಂದೆ ಸಮಾನ ಎಂದುಕೊಂಡಿದ್ದಕ್ಕೆ, ನಿಮಗಾಗಿ ಪರಿಷತ್ ಸದಸ್ವತ್ವ ಬಿಟ್ಟು ಬಂದಿದ್ದಕ್ಕೆ ಸರಿಯಾದ ಉಡುಗೊರೆ ಕೊಟ್ಟಿದ್ದೀರಿ ಎಂದು ನೋವಿನಿಂದ ಪ್ರತಿಕ್ರಿಯಿಸಿದ್ದಾರೆಂದು ವರದಿಯಾಗಿದೆ. ಕಾನೂನು ಹೋರಾಟದ ಎಚ್ಚರಿಕೆಯನ್ನೂ ಇಬ್ರಾಹಿಂ ಕೊಟ್ಟಿದ್ದಾರೆ.

ಆದರೆ, ದೇವೇಗೌಡರ ರಾಜಕಾರಣ ಎಂಥದ್ದು ಎಂಬುದು ಇಬ್ರಾಹಿಂ ಅವರಿಗೆ ಗೊತ್ತಿರದೇ ಇದ್ದ ವಿಚಾರವೇನೂ ಆಗಿರಲಿಲ್ಲ. ಅಂಥವರು ಜೆಡಿಎಸ್ನಲ್ಲಿ ಏನಿದೆ ಎಂದು ಬಂದಿದ್ದರು ಎಂಬುದನ್ನು, ಅವರೇ ಈಗ ಒಮ್ಮೆ ನಿಂತು ಕೇಳಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಯಾಕೆಂದರೆ, ಇಬ್ರಾಹಿಂ ಅವರನ್ನು ಉಚ್ಚಾಟಿಸಿರುವ ದೇವೇಗೌಡರು, ಆ ಜಾಗಕ್ಕೆ ಕುಮಾರಸ್ವಾಮಿಯವರನ್ನೇ ಮತ್ತೊಮ್ಮೆ ಕೂರಿಸಿದ್ದಾರೆ.

ಈಗ ಅಪ್ಪ, ಮಗ, ಮೊಮ್ಮಗ ಪ್ರಮುಖ ಹುದ್ದೆಗಳಲ್ಲಿರುವ ಪಕ್ಷವಾಗಿ ಜೆಡಿಎಸ್ ರಾರಾಜಿಸುವಂತಾಗಿದೆ. ಒರಿಜಿನಲ್ ಜೆಡಿಎಸ್ ಎಂಬ ಮಾತನಾಡಿದ್ದ ಇಬ್ರಾಹಿಂ, ನಡುನೀರಿನಲ್ಲಿ ಒಬ್ಬಂಟಿಯಾಗಿದ್ದಾರೆ. ತಮಾಷೆಯೆಂದರೆ, ಇಷ್ಟೆಲ್ಲ ಆದ ಮೇಲೂ ದೇವೇಗೌಡರು ಜೆಡಿಎಸ್ ಸಿದ್ಧಾಂತಕ್ಕೆ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಿರುವುದು.

"ಬಿಜೆಪಿ ಸರ್ಕಾರದಲ್ಲಿ ಭಾಗಿಯಾಗಿಲ್ಲ, ಲೋಕಸಭೆ ಚುನಾವಣೆ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ ಅಷ್ಟೆ" ಎಂದು ಎನ್ನುವ ಮೂಲಕ, ತಮ್ಮ ಪಕ್ಷ ಈಗಲೂ ಜಾತ್ಯತೀತ ಸಿದ್ಧಾಂತವನ್ನೇ ಹೊಂದಿದೆ ಎಂದು ಯಾರನ್ನು ನಂಬಿಸಲು ಅವರು ಯತ್ನಿಸುತ್ತಿದ್ಧಾರೆ?. ಬಿಜೆಪಿ ಜೊತೆ ಹೋಗುವ ಸನ್ನಿವೇಶವನ್ನು ಸೃಷ್ಟಿಸಿದ್ದು ಯಾರು ಎಂದು ಅವರು ಕೇಳುತ್ತಿರುವುದಂತೂ ಇನ್ನೂ ವಿಚಿತ್ರವಾಗಿದೆ. ಮುಸ್ಲಿಂ ನಾಯಕರನ್ನು ಕಡೆಗಣಿಸಿಲ್ಲ. ಪಕ್ಷ ಉಳಿಸಿಕೊಳ್ಳಬೇಕಾಗಿರುವುದರಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಅಲ್ಲಿಗೆ ಅವರು ಬಿಜೆಪಿ ಆಶ್ರಯ ತಮಗೆ ಅನಿವಾರ್ಯ ಎಂಬುದನ್ನು ಒಪ್ಪಿಕೊಂಡಂತಾಗಿದೆ. ತಮ್ಮ ಪಕ್ಷಕ್ಕಾದ ಸೋಲಿಗೆ ಒಂದು ಸಮುದಾಯದ ಮೇಲೆ ಗೂಬೆ ಕೂರಿಸುವ ಅವರ ರೀತಿಯಂತೂ, ಬಿಜೆಪಿ ಜೊತೆಗೆ ಹೋಗಬೇಕಿದ್ದ ತಮ್ಮ ಅನಿವಾರ್ಯತೆಗೆ ಒಂದು ನೆಪ ಎಂಬುದು ಈಗ ಅತ್ಯಂತ ಸ್ಪಷ್ಟವಾಗಿದೆ.

ಕುಮಾರಸ್ವಾಮಿ ಕೂಡ ತಮಗಿನ್ನು ಯಾರ ಹಂಗೂ ಇಲ್ಲ ಎಂದು ಬಿಜೆಪಿ ಜೊತೆ ಹೋಗುತ್ತಿರುವುದು, ಅವರ ಸೋಲಿನ ಹತಾಶೆಯನ್ನೇ ಸೂಚಿಸುತ್ತದೆ. ಆದರೆ, ಇದೆಲ್ಲದರ ಪರಿಣಾಮಗಳು ಮುಟ್ಟಬಹುದಾದ ವೈಪರೀತ್ಯಗಳು ಎಂಥವಾಗಿರಬಹುದು ?. ಈ ಬಗ್ಗೆ ಯೋಚಿಸಿದರೆ, ಆತಂಕವಾಗುವುದು, ಕುಮಾರಸ್ವಾಮಿಯಂಥ ನಾಯಕರ ಅಧಿಕಾರದ ಆಸೆ ಮತ್ತು ಅವಕಾಶವಾದಿ ರಾಜಕಾರಣ ತಂದಿಡಬಹುದಾದ ಅಪಾಯಗಳ ಬಗ್ಗೆ.

ಮುಖ್ಯಮಂತ್ರಿಯಾಗಬೇಕೆಂದು ಹೊರಟ ಅವರ ಕಾರಣದಿಂದಾಗಿಯೇ ಬಿಜೆಪಿ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರುವಂತಾಯಿತು. ಮತ್ತದರಿಂದ ಏನೇನೆಲ್ಲಾ ಆಯಿತು ಎಂಬುದು ಕರ್ನಾಟಕದ ರಾಜಕೀಯದಲ್ಲಿ ಇವತ್ತಿಗೂ ತಳಮಳವನ್ನು ಉಳಿಸಿರುವ ಅಧ್ಯಾಯವೇ ಆಗಿದೆ. ಈಗ ಪಕ್ಷವನ್ನು ಉಳಿಸಿಕೊಳ್ಳುವುದನ್ನು ಮುಂದೆ ಮಾಡಿ, ದೇವೇಗೌಡರೂ, ಕುಮಾರಸ್ವಾಮಿಯೂ ಬಿಜೆಪಿ ಜೊತೆ ಹೋಗುತ್ತಿರುವುದು ಅವರನ್ನು ಬೆಂಬಲಿಸಿದ ಸಮುದಾಯಗಳ ದಿಕ್ಕು ತಪ್ಪಿಸುವ ನಡೆಯೂ ಆಗಿದೆ ಎಂಬುದರಲ್ಲಿ ಅನುಮಾನವಿಲ್ಲ.

ಒಂದೆಡೆ ಮುಸ್ಲಿಂರ ಮತಗಳನ್ನು ನಂಬಿಕೊಂಡು ರಾಜಕೀಯ ಮಾಡಿಲ್ಲ ಎನ್ನುವ ಮೂಲಕ ಅವರನ್ನು ಪೂರ್ಣವಾಗಿ ನಿರ್ಲಕ್ಷಿಸುವ ಬಿಜೆಪಿಯದ್ದೇ ಧೋರಣೆಯನ್ನು ಕುಮಾರಸ್ವಾಮಿ ಈಗಾಗಲೇ ತೋರಿಸಿ ಆಗಿದೆ. ಇನ್ನೊಂದೆಡೆ ಒಕ್ಕಲಿಗ ಸಮುದಾಯದವರನ್ನು ಬಿಜೆಪಿ ಜೊತೆ ಗುರುತಿಸಿಕೊಳ್ಳುವಂತೆ ಮಾಡುವುದಕ್ಕೂ ಈಗ ಅಪ್ಪ ಮಕ್ಕಳ ಪಕ್ಷ ಕಾರಣವಾಗಲಿದೆಯೆ?

ರಾಜಕೀಯದಲ್ಲಿ ಎಲ್ಲಾ ಪಕ್ಷಗಳೂ ಭಾಗಶಃ ಎಲ್ಲ ಸಮುದಾಯಗಳಿಂದಲೂ ಮತಗಳನ್ನು ಪಡೆಯುವುದು ಸಹಜ. ಆದರೆ ಸೈದ್ಧಾಂತಿಕವಾಗಿ ಬೇರೆಯದೇ ನಿಲುವಿನೊಂದಿಗೆ ತೋರಿಸಿಕೊಂಡಿದ್ದ ಪಕ್ಷವೊಂದು, ಅದಕ್ಕೆ ವಿರುದ್ಧ ನಿಲುವಿನ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗ ಅದು ಸೈದ್ಧಾಂತಿಕ ಬದ್ಧತೆಯೇ ಇಲ್ಲದ ಆ ಪಕ್ಷಕ್ಕೆ ಬಾಧಕ ಅಲ್ಲದಿದ್ದರೂ, ಅದನ್ನು ಬೆಂಬಲಿಸಿದ್ದ ಜನರು ಗೊಂದಲಕ್ಕೊಳಗಾಗುತ್ತಾರೆ.

ದೊಡ್ಡ ಸಮುದಾಯವೊಂದರ ಸಾಂಪ್ರದಾಯಿಕ ಮತಬ್ಯಾಂಕ್ ಹೊಂದಿರುವ ಜೆಡಿಎಸ್ನಂಥ ಪಕ್ಷದ ತಪ್ಪು ನಡೆಗಳಿಂದಾಗಿ ಉಂಟಾಗುವ ರಾಜಕೀಯ ಪರಿಣಾಮಗಳು, ಮತ್ತೆ ಸುಲಭವಾಗಿ ತಿದ್ದಲಾರದ ಮಟ್ಟಿಗೆ ಅತಿರೇಕವಾಗಲೂ ಬಹುದು. ಜೆಡಿಎಸ್ ಈಗ ತೆಗೆದುಕೊಂಡಿರುವ ತೀರ್ಮಾನ ಅದರ ಪಾಲಿಗೆ ಮುಂದಿನ ದಿನಗಳಲ್ಲಿ ಹಾಗೆ ತಿದ್ದಿಕೊಳ್ಳಲು ಆಗಲಾರದಂಥ ತಪ್ಪಾಗಿ ಕಾಡಿದರೂ ಅಚ್ಚರಿಯಿಲ್ಲ. ಆದರೆ ಸದ್ಯಕ್ಕೆ, ಸೋಲಿನ ಹತಾಶೆಯಲ್ಲಿರುವ, ಸೇಡಿನ ಆತುರದಲ್ಲಿರುವ ಜೆಡಿಎಸ್ ನಾಯಕರಿಗೆ ಅದರ ಬಗ್ಗೆ ಲಕ್ಷ್ಯವಿಲ್ಲವಾಗಿರುವುದು ದುಃಖದ ಸಂಗತಿ.

ದೇವೇಗೌಡರರು ಯಾರನ್ನೂ ಬೆಳೆಯಲು ಬಿಡಲಿಲ್ಲ. ಎಲ್ಲಾ ತಮಗೆ, ತಮ್ಮ ಮಕ್ಕಳಿಗೆ ಅಂತ ಇರೋರು ಗೌಡರು. ಕನಿಷ್ಠ ಪಕ್ಷ ಒಕ್ಕಲಿಗರಲ್ಲಿಯೂ ಯಾರನ್ನೂ ಬೆಳೆಸಲಿಲ್ಲ. ನನ್ನ ಬದಲು ಶ್ರವಣಕುಮಾರ್ ಗೆ ಪರಿಷತ್ ಸದಸ್ಯ ಸ್ಥಾನ ಕೊಟ್ಟರು. ರಾಜ್ಯಸಭೆ ಸ್ಥಾನ ಕುಪೇಂದ್ರ ರೆಡ್ಡಿಗೆ ಕೊಟ್ಟರು. ಪರಿಷತ್ ಸ್ಥಾನ ಬಿಟ್ಟು ಬಂದ ನನಗೆ ಹುಣಸೇಬೀಜ ಕೊಟ್ಟರು ಎಂದು ದೊಡ್ಡ ಗೌಡರನ್ನು ಈಗ ಇಬ್ರಾಹಿಂ ಕಟುವಾಗಿ ಟೀಕಿಸಿದ್ದಾರೆ.

ಆದರೆ, ಈಗ ಪಕ್ಷದ ಅಸ್ತಿತ್ವದ ನೆಪ ಮಾಡಿಕೊಂಡು ಬಿಜೆಪಿ ಜೊತೆ ಹೋಗುತ್ತಿರುವ ಕುಮಾರಸ್ವಾಮಿಯವರಿಗೂ ನಾಳೆ ಹೀಗೆಯೇ ಆಗಲಿದೆ ಎಂದು ಮತ್ತೊಂದೆಡೆ ಕಾಂಗ್ರೆಸ್ ಟೀಕಿಸಿದೆ. ಮಾತಾಡಿ, ಮಾತಾಡಿ ಮಂಡ್ಯ ಚುನಾವಣೆಯಲ್ಲಿ ನಿಮ್ಮ ಮಗನನ್ನು ಬಲಿ ಕೊಟ್ಟಿರಿ. ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನೇ ಅಡ್ಡಡ್ಡ ಉದ್ದುದ್ದ ಮಲಗಿಸಿದಿರಿ. ಈಗ ನಿಮ್ಮನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ ಎಂದು, ಬಿಜೆಪಿ ಜೊತೆ ಹೋಗುತ್ತಿರುವುದಕ್ಕೆ ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ.

ದೇವೇಗೌಡ ಮತ್ತು ಕುಮಾರಸ್ವಾಮಿ ಬಗ್ಗೆ ಇರುವ ಮತ್ತೊಂದು ಸಾಮಾನ್ಯ ಆರೋಪವೆಂದರೆ, ಎಲ್ಲರನ್ನೂ ಅಗತ್ಯಕ್ಕೆ ತಕ್ಕಂತೆ ಬಳಸಿ ಬಳಿಕ ಬಿಸಾಡಿ ಬಿಡುತ್ತಾರೆ ಎಂಬುದು. ಈಗ ಸ್ವತಃ ಅವರೇ, ಬಳಸಿ ಎಸೆಯುವ ಬುದ್ಧಿಯ ಬಿಜೆಪಿಯ ಜೊತೆ ಹೋಗುತ್ತಿದ್ದಾರೆ. ಪ್ರಹ್ಲಾದ್ ಜೋಶಿಯವರನ್ನು ಅನ್ಯರಾಜ್ಯದ ಪೇಶ್ವೆ ಎಂದು ನಿಂದಿಸಿದ್ದ, ಸಿಟಿ ರವಿಯನ್ನು ಲೂಟಿ ರವಿ ಎಂದಿದ್ದ ಕುಮಾರಸ್ವಾಮಿ ಈಗ ಅವರ ಬಳಿಗೇ ಹೋಗಿ ನಿಲ್ಲುತ್ತಿದ್ದಾರೆ. ಆ ಪಕ್ಷ ಇವರನ್ನು ಬೇಕಾದಷ್ಟು ಬಳಸಿ, ಇವರ ಮತಬ್ಯಾಂಕನ್ನು ದೋಚಿ ನಾಳೆ ಬರಿಗೈಯಲ್ಲಿಯೇ ಇವರನ್ನು ಕಳಿಸಲಾರದು ಎಂದೇನಾದರೂ ಗ್ಯಾರಂಟಿ ಇದೆಯೆ ?.

ಬಿಜೆಪಿ ಈವರೆಗೆ ಮೈತ್ರಿ ಮಾಡಿಕೊಂಡ ಪ್ರಾದೇಶಿಕ ಪಕ್ಷಗಳ ಪರಿಸ್ಥಿತಿ ಏನಾಗಿದೆ ಎಂಬುದು, ಈಗ ಎಲ್ಲರಿಗೂ ಗೊತ್ತಿರುವ ಸತ್ಯ. ಮಹಾರಾಷ್ಟ್ರದಲ್ಲಿ ಅಷ್ಟು ಬಲಿಷ್ಠವಾಗಿದ್ದ ಶಿವಸೇನೆಯನ್ನೇ ಇಬ್ಭಾಗ ಮಾಡಿ ಹಾಕಿದ ಪಕ್ಷ ಅದು. ಇವತ್ತು ಶಿವಸೇನೆಯನ್ನು ಸ್ಥಾಪಿಸಿದವರ ಪುತ್ರನಿಗೆ ಆ ಪಕ್ಷದ ಹೆಸರೂ ಇಲ್ಲ, ಚಿಹ್ನೆಯೂ ಇಲ್ಲದಂತಹ ಸ್ಥಿತಿ ತಂದಿಟ್ಟಿದೆ ಬಿಜೆಪಿ.

ಇವರ ಅವಕಾಶವಾದಿ ರಾಜ್ಯ ರಾಜಕೀಯವನ್ನು, ಇಲ್ಲಿನ ಸಾಮಾಜಿಕ ಸಂರಚನೆಯನ್ನು ಎಲ್ಲಿಗೆ ತಂದು ನಿಲ್ಲಿಸಲಿದೆಯೊ ಗೊತ್ತಿಲ್ಲ. ಆದರೆ ಅಧಿಕಾರಕ್ಕಾಗಿ ಸಿದ್ಧಾಂತ, ಆತ್ಮಾಭಿಮಾನ, ಬದ್ಧತೆ ಎಲ್ಲವನ್ನೂ ಬಿಟ್ಟುಬಿಡಬಲ್ಲ ರಾಜಕೀಯದವರ ಈ ಬಗೆಯ ನಡೆಗಳು, ಮತ್ತೆ ಮತ್ತೆ ಜನರು ಅಸಹನೆ ತೋರುವುದಕ್ಕೂ ಅಸಹ್ಯಪಟ್ಟುಕೊಳ್ಳುವುದಕ್ಕೂ ಕಾರಣವಾಗುತ್ತವೆ ಎಂಬುದು ನಿಜ. ಇವರು ಮಾತ್ರ, ಏನೂ ಆಗಿಲ್ಲ ಎಂಬಂತೆ, ಯಾರನ್ನು ಜರೆದಿದ್ದರೊ ಅವರ ಬಳಿಯೇ ಬಂದು ನಾಳೆ ನಿಲ್ಲಲೂಬಹುದು. ಯಾಕೆಂದರೆ, ಅದು ಕೂಡ ಅವರು ಈಗ ಮಾಡುತ್ತಿರುವ ರಾಜಕಾರಣದ್ದೇ ಮುಂದುವರಿಕೆಯಾಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಜೀವಿ

contributor

Similar News