ಬಿಜೆಪಿ ಸರಕಾರದ ಅವಧಿಯಲ್ಲಿ ಬೇನಾಮಿ ಖಾತೆಗಳಿಗೆ ಲಕ್ಷಾಂತರ ರೂ. ವರ್ಗಾವಣೆ
ಬೆಂಗಳೂರು, ಆ.12: ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಜಾರಿಗೊಳಿಸಿರುವ ವಿವಿಧ ಯೋಜನೆಗಳಿಗೆ ಆಯ್ಕೆಯಾಗದ ಫಲಾನುಭವಿಗಳಿಗೆ ಮತ್ತು ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ಲಕ್ಷಾಂತರ ರೂ. ವರ್ಗಾವಣೆ ಮಾಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ 94 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣ ಕುರಿತು ಪ್ರತಿಪಕ್ಷ ಬಿಜೆಪಿ ಬೀದಿಗಿಳಿದಿದೆ. ಇದರ ಬೆನ್ನಲ್ಲೇ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತೂ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು.
ಇದನ್ನು ಪ್ರತಿರೋಧಿಸಿದ್ದ ಶ್ರೀನಿವಾಸ ಪೂಜಾರಿ ವಿಕಾಸಸೌಧದ ಬಳಿಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ಸರಕಾರವು ಅಧಿಕಾರದಲ್ಲಿದ್ದ ಅವಧಿಯಲ್ಲಿಯೇ ಬೇನಾಮಿ ಖಾತೆಗಳಿಗೆ ಲಕ್ಷಾಂತರ ರೂ. ವರ್ಗಾವಣೆ ಆಗಿರುವುದು ಮುನ್ನೆಲೆಗೆ ಬಂದಿದೆ.
ಉದ್ಯಮಶೀಲತಾ, ಸಮೃದ್ಧಿ, ಗಂಗಾ ಕಲ್ಯಾಣ ಸೇರಿದಂತೆ ಹಲವು ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮತ್ತು ಆಯ್ಕೆಯಾದ ಫಲಾನುಭವಿಗಳಿಗೆ ನಿಗದಿಪಡಿಸಿದ ಸಹಾಯಧನಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಿರುವುದನ್ನು ಜಾಗೃತ ಕೋಶ ಪತ್ತೆ ಹಚ್ಚಿರುವುದು ಗೊತ್ತಾಗಿದೆ.
ನಿಗಮದ ಮೈಸೂರು ಜಿಲ್ಲೆಯ ಕಚೇರಿ ವ್ಯಾಪ್ತಿಯೊಂದರಲ್ಲೇ 73,82,500 ರೂ.ಗಳನ್ನು ಬೇನಾಮಿ ಖಾತೆಗಳಿಗೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ವರ್ಗಾವಣೆ ಮಾಡಲಾಗಿದೆ ಎಂದು ಜಾಗೃತ ಕೋಶದ ತಪಾಸಣೆ ವರದಿಯು ಹೊರಗೆಡವಿದೆ. ಈ ತಪಾಸಣೆ ವರದಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ನಿಗಮದ ಹಣವನ್ನು ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮೈಸೂರು ಜಿಲ್ಲೆಯ ಹಿಂದಿನ ವ್ಯವಸ್ಥಾಪಕ ಶ್ರೀನಿವಾಸ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ. 2023ರ ಮೇ 17ರಂದು ಜಾರಿಗೊಳಿಸಿರುವ ನೋಟಿಸ್ ಪ್ರತಿಯೂ ‘ಣhe-ಜಿiಟe.iಟಿ’ಗೆ ಲಭ್ಯವಾಗಿದೆ.
ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ್ದ ಮಾನದಂಡ, ಮಾರ್ಗಸೂಚಿ, ನಿಯಮಗಳು, ಆದೇಶ, ಸುತ್ತೋಲೆಗಳನ್ನು ಉಲ್ಲಂಘಿಸಿ ಅನರ್ಹರನ್ನೂ ನಿಗಮ ಯೋಜನೆಗಳಿಗೆ ಆಯ್ಕೆ ಮಾಡಲಾಗಿತ್ತು ಎಂಬುದನ್ನು ಜಾಗೃತ ಕೋಶದ ವರದಿಯು ವಿಸ್ತೃತವಾಗಿ ವಿವರಿಸಿದೆ.
ಪ್ರಕರಣ 1
ಉದ್ಯಮಶೀಲತಾ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ ಪಿರಿಯಾಪಟ್ಟಣ ತಾಲೂಕಿಗೆ ಒಟ್ಟು 17.00 ಲಕ್ಷ ರೂ. ಸಹಾಯಧನ ನಿಗದಿಪಡಿಸಲಾಗಿತ್ತು. ಈ ಪೈಕಿ ಲಕ್ಷ್ಮಣ ಎಂಬವರು ಆಯ್ಕೆಯಾಗಿದ್ದರು. ಇವರಿಗೆ 2.50 ಲಕ್ಷ ರೂ. ಸಹಾಯಧನ ದೊರೆತಿದೆ. ಆದರೆ ಚೆಕ್ ಸಂಖ್ಯೆ 587058ರಲ್ಲಿ 5.00 ಲಕ್ಷ ರೂ. ಬಿಡುಗಡೆಯಾಗಿತ್ತು.
ಈ ಸಹಾಯಧನವನ್ನು ಶಾಸಕರು ಗುರುತಿಸಿದ್ದ 5 ಫಲಾನುಭವಿಗಳಲ್ಲಿ 3 ಫಲಾನುಭವಿಗಳಿಗೆ 2.50 ಲಕ್ಷ ರೂ.ಗಳಂತೆ ನಿಗದಿಗೊಳಿಸಿ ಆಯ್ಕೆ ಮಾಡಿದ್ದರು. ಅದರಂತೆ 3 ಫಲಾನುಭವಿಗಳಿಗೆ ತಲಾ 4 ಲಕ್ಷ ರೂ.ನಂತೆ ಬಿಡುಗಡೆಗೊಳಿಸಿ ಉಳಿದ ಇಬ್ಬರು ಫಲಾನುಭವಿಗಳ ಬದಲಿಗೆ ಒಬ್ಬರಿಗೇ ಹೆಚ್ಚುವರಿಯಾಗಿ 5 ಲಕ್ಷ ರೂ. ಬಿಡುಗಡೆ ಯಾಗಿದೆ. ಈ ಪ್ರಕರಣದಲ್ಲಿ ಅಕ್ರಮವಾಗಿ 2.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಆರ್ಥಿಕ ನಷ್ಟವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಪ್ರಕರಣ 2
ಟಿ. ನರಸೀಪುರ ತಾಲೂಕು ಅಲಗೋಡು ಗ್ರಾಮದ ಶಿವರಾಜು ಎಂಬವರು ವರುಣಾ ವಿಧಾನಸಭಾ ಕ್ಷೇತ್ರ ಆಯ್ಕೆ ಪಟ್ಟಿ ಕ್ರಮ ಸಂಖ್ಯೆ 05ರಲ್ಲಿ 2.00 ಲಕ್ಷ ರೂ. ಸಹಾಯಧನಕ್ಕೆ ಆಯ್ಕೆಯಾಗಿದ್ದರು. ಆದರೆ (ಚೆಕ್ ಸಂಖ್ಯೆ 587059- ದಿನಾಂಕ 08.03.2022) 3,46,337 ರೂ.ಗಳನ್ನು ಅಕ್ರಮವಾಗಿ ಬಿಡುಗಡೆ ಮಾಡಲಾಗಿತ್ತು.
ಶಾಸಕರ ಪತ್ರ ( 02.09.2020)ದಂತೆ 2018-19ನೇ ಸಾಲಿನಲ್ಲಿ ಬಿಡುಗಡೆಯಾಗದೇ ಬಾಕಿ ಉಳಿದಿದ್ದ 6,30,735 ರೂ.ಗಳನ್ನು 3 ಫಲಾನುಭವಿಗಳಿಗೆ ವಿಭಾಗಿಸಿ ಹಂಚಿಕೆ ಮಾಡಲು ಸೂಚಿಸಿದ್ದರು. ಅದರಂತೆ ಜಿಲ್ಲಾ ಕಚೇರಿಯಿಂದ 14,6,337 ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಲಾಗಿತ್ತು.
ಪ್ರಕರಣ 3
ಎಚ್.ಡಿ. ಕೋಟೆಯ ದಟ್ಟೇಹಳ್ಳಿ ಗ್ರಾಮದ ಯೋಗೇಶ್ ಎಸ್. ಎಂಬವರು 2019-20ನೇ ಸಾಲಿಗೆ 3.50 ಲಕ್ಷ ರೂ. ಸಹಾಯಧನಕ್ಕೆ ಆಯ್ಕೆಯಾಗಿದ್ದರು. ಆದರೆ (ಚೆಕ್ ಸಂಖ್ಯೆ 432932 ) ಆಗಸ್ಟ್ 7ರಂದು 3,24,209 ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು.
ಪ್ರಕರಣ 4
ಸರಗೂರು ತಾಲೂಕಿನ ಚನ್ನೀಪುರದ ನಾಗರಾಜು ಎಂಬವರು 2019-20ನೇ ಸಾಲಿನ ಎಚ್.ಡಿ. ಕೋಟೆ ವಿಧಾನಸಭೆ ಕ್ಷೇತ್ರದ ಆಯ್ಕೆ ಪಟ್ಟಿ 11ರಲ್ಲಿ 5.00 ಲಕ್ಷ ರೂ.ಗಳ ಸಹಾಯಧನಕ್ಕೆ ಆಯ್ಕೆಯಾಗಿದ್ದರು. ಆದರೆ (ಚೆಕ್ ಸಂಖ್ಯೆ 432940- 19.08.2020)ರಲ್ಲಿ 4 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.
ಪ್ರಕರಣ 5
ಎಚ್.ಡಿ. ಕೋಟೆ ವಿಧಾನಸಭೆ ಕ್ಷೇತ್ರದ ಶಾಸಕರು ಎಚ್.ವಿ. ಕೃಷ್ಣಮೂರ್ತಿ ಹೆಗ್ಗನೂರು ಬದಲಾಗಿ ಮಣಿ ಡಿ. ರಾಮ್ ಎಂಬವರನ್ನು ಆಯ್ಕೆ ಮಾಡಿ ಪತ್ರ ನೀಡಿದ್ದರು. ಇವರು 2019-20ನೇ ಸಾಲಿನ ಸಹಾಯಧನದ 3.50 ಲಕ್ಷ ರೂ.ಗಳಿಗೆ ಆಯ್ಕೆಯಾಗಿದ್ದರು. ಆದರೆ (ಚೆಕ್ ಸಂಖ್ಯೆ 432661) (07.11.2020) 2.00 ಲಕ್ಷ ರೂ.ಗಳನ್ನು ವಾಹನ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿತ್ತು.
ಪ್ರಕರಣ 6
ಮೈಸೂರಿನ ಮಂಡಿಮೊಹಲ್ಲಾದ ಪ್ರಸನ್ನ ಎಸ್. ಎಂಬವರು ಸಾಂಸ್ಥಿಕ ಕೋಟಾದಡಿಯಲ್ಲಿ 2019ರ ಜುಲೈ 20ರಂದು ಟ್ಯಾಕ್ಸಿ ಉದ್ದೇಶಕ್ಕೆ ಆಯ್ಕೆಯಾಗಿದ್ದರು. ಇವರಿಗೆ 2.50 ಲಕ್ಷ ರೂ.ಗಳ ಮಂಜೂರಾತಿ ನೀಡಿ ಬಿಡುಗಡೆಯಾಗಿತ್ತು. ಆದರೆ ಜಿಲ್ಲಾ ಕಚೇರಿಯಿಂದ (ಚೆಕ್ ಸಂಖ್ಯೆ 432669) (30.01.2021) 3.50 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ 1.00 ಲಕ್ಷ ರೂ. ಬಿಡುಗಡೆಗೊಳಿಸಿದ್ದರು ಎಂಬುದು ಜಾಗೃತ ಕೋಶದ ವರದಿಯಿಂದ ತಿಳಿದು ಬಂದಿದೆ