‘ಆಹಾರ ಭದ್ರತೆ v/s ಆಹಾರ-ಪರಿಸರ’: ಸಾರ್ವಭೌಮತೆ ಎಂಬ ದುರಂತದ ಕುರಿತು...
ಭಾಗ- 2
‘‘ಕೆಂಪು ಕ್ರಾಂತಿಯನ್ನು ಹತ್ತಿಕ್ಕಬೇಕೆಂದರೆ ಹಸಿರು ಕ್ರಾಂತಿ ಅತ್ಯಗತ್ಯ’’-ಚೆಸ್ಟರ್ ಬೌಲೆಸ್
ಅದೇ ವೇಳೆಗೆ ಜಗತ್ತು ಹೊಸ ಬಗೆಯ ರಾಜಕೀಯ ಪಲ್ಲಟವನ್ನು ಕಾಣುತ್ತಿತ್ತು. ಏಶ್ಯದ ಬೃಹತ್ ರಾಷ್ಟ್ರ ಚೀನಾದಲ್ಲಿ ಕಮ್ಯುನಿಸ್ಟ್ ಕ್ರಾಂತಿಯಾಗಿ ಭೂಮಾಲಕರನ್ನು ಮತ್ತು ಸಾಮ್ರಾಜ್ಯಶಾಹಿಗಳನ್ನು ಚೀನಾದಿಂದ ಹೊರಗಟ್ಟಲಾಗಿತ್ತು. ಕೊರಿಯಾದಲ್ಲಿ ಸಹ ಅಂತರ್ಯುದ್ಧ ಪ್ರಾರಂಭವಾಗಿ ಅರ್ಧ ಕೊರಿಯಾ ಕಮ್ಯುನಿಸ್ಟ್ ಪ್ರಭಾವಕ್ಕೊಳಗಾಗಿತ್ತು. ಮಲೇಶ್ಯದಲ್ಲಿ ಬ್ರಿಟನ್ ಸಾಮ್ರಾಜ್ಯಶಾಹಿಗಳ ವಿರುದ್ಧ ಎಡಪಂಥೀಯ ಗೆರಿಲ್ಲಾಗಳ ಯುದ್ಧ ಪ್ರಾರಂಭವಾಗಿತ್ತು. ಕಾಂಬೋಡಿಯಾ, ಲಾವೋಸ್ ಇನ್ನಿತ್ಯಾದಿ ಇಂಡೋ-ಚೀನಾ ದೇಶಗಳಲ್ಲಿ ಕಮ್ಯುನಿಸ್ಟರ ಗೆರಿಲ್ಲಾಗಳು ಅಧಿಕಾರದ ಕದವನ್ನು ತಟ್ಟುತ್ತಿದ್ದರು. ಫಿಲಿಪ್ಪೀನ್ಸ್ ದೇಶದಲ್ಲೂ ಎಡಪಂಥೀಯ ಗೆರಿಲ್ಲಾಗಳೂ ಸಶಕ್ತಗೊಳ್ಳುತ್ತಿದ್ದರು. ಇವತ್ತಿಗೆ ಹೋಲಿಸಿದಲ್ಲಿ 60-70ರ ದಶಕಗಳಲ್ಲಿ ಭಾರತದಲ್ಲೂ ಕಮ್ಯುನಿಸ್ಟರ ಪ್ರಭಾವ ಗಣನೀಯವಾಗಿತ್ತು. ಎರಡನೇ ಮಹಾಯುದ್ಧ ಕೊನೆಗೊಳ್ಳುವ ಜೊತೆಜೊತೆಗೆ ಅರ್ಧ ಯುರೋಪ್ ಸಹ ಬಂಡವಾಳಶಾಹಿ ಜಗತ್ತಿನ ಪ್ರಭಾವವನ್ನು ಕಳಚಿಕೊಂಡು ಕಮ್ಯುನಿಸ್ಟರ ಪ್ರಭಾವದೆಡೆ ಸೆಳೆಯಲ್ಪಡುತ್ತಿತ್ತು.
ಅಮೆರಿಕ ಹಸಿರುಕ್ರಾಂತಿಯನ್ನು ಅನ್ವೇಷಿಸಿದ್ದು ಇಂತಹ ರಾಜಕೀಯ ಸಂದರ್ಭದಲ್ಲಿ. ಕಮ್ಯುನಿಸಂ ಬಲಗೊಳ್ಳುವುದೇ ಹಸಿವಿರುವಾಗ ಎಂದು ಅರ್ಥಮಾಡಿಕೊಂಡ ಅಮೆರಿಕನ್ನರು ಹಸಿವಿಗೆ ತುತ್ತನ್ನು ಒದಗಿಸಿ ಕಮ್ಯುನಿಸ್ಟರ ಪ್ರಭಾವದಲ್ಲಿರುವ ದೇಶಗಳನ್ನು ಮತ್ತೆ ಬಂಡವಾಳಶಾಹಿ ಜಗತ್ತಿಗೆ ಎಳೆದು ತರುವ ಸಂಚಿನ ಭಾಗವಾಗಿಯೇ ಹಸಿರು ಕ್ರಾಂತಿ ರೂಪುಗೊಂಡಿತು.
ಹೀಗಾಗಿಯೇ 1965ರಲ್ಲಿ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಚೆಸ್ಟರ್ ಬೌಲೆಸ್ ‘‘ಕೆಂಪು ಕ್ರಾಂತಿಯನ್ನು ಹತ್ತಿಕ್ಕಬೇಕೆಂದರೆ ಹಸಿರು ಕ್ರಾಂತಿ ಅತ್ಯಗತ್ಯ’’ ಎಂದು ಘೋಷಿಸಿದ್ದರು. ಆದ್ದರಿಂದಲೇ 1970ರಲ್ಲಿ ನಾರ್ಮನ್ ಬೊರ್ಲಾಗ್‌ಗೆ ನೊಬೆಲ್ ಪ್ರಶಸ್ತಿ ಸಿಕ್ಕಿದ್ದು ಕೃಷಿ ವಿಜ್ಞಾನಕ್ಕಲ್ಲ. ಬದಲಿಗೆ ಶಾಂತಿಗಾಗಿ! ‘‘ಆತಂಕದಲ್ಲಿದ್ದ ಬಂಡವಾಳಶಾಹಿ ಜಗತ್ತಿಗೆ ಶಾಂತಿ ತಂದುಕೊಟ್ಟಿದ್ದಕ್ಕಾಗಿ..’’
ಹೀಗಾಗಿ ಈ ಮೊದಲೇ ವಿವರಿಸಿದಂತೆ ಹಸಿರು ಕ್ರಾಂತಿಯ ತಂತ್ರಜ್ಞಾನವು ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಹೊಸ ಮಾರುಕಟ್ಟೆ ತಂದುಕೊಡುವುದು ಎಂದು ಖಾತರಿಯಾದ ಮೇಲೆ ಅಮೆರಿಕ ಅದನ್ನು ಕಡ್ಡಾಯವಾಗಿ ಎಲ್ಲಾ ದೇಶಗಳ ಮೇಲೆ ಹೇರತೊಡಗಿತು. ಆವರೆಗೆ ಪ್ರಪಂಚದ ಎಲ್ಲಾ ಬಡ ದೇಶಗಳಿಗೆ ಪಿಎಲ್-480 ಯೋಜನೆಯಡಿಯಲ್ಲಿ ಗೋಧಿಯನ್ನು ಸಬ್ಸಿಡಿ ದರದಲ್ಲಿ ಸರಬರಾಜು ಮಾಡುತ್ತಿದ್ದ ಅಮೆರಿಕದ ನೀತಿಯನ್ನು 1965ರಲ್ಲಿ ಅಧ್ಯಕ್ಷ ಲಿಂಡನ್ ಜಾನ್ಸನ್ ಬದಲಾಯಿಸಿದ. ಇನ್ನು ಮುಂದೆ ಅಮೆರಿಕದ ಸಬ್ಸಿಡಿ ಗೋಧಿ ಬೇಕೆಂದರೆ ಬಡ ದೇಶಗಳು ತಮ್ಮ ಕೈಗಾರಿಕೀಕರಣ ನೀತಿಯನ್ನು ಕೈಬಿಡಬೇಕು, ಹೈಬ್ರಿಡ್ ಕೃಷಿಯನ್ನು ಅನುಸರಿಸಬೇಕು ಮತ್ತು ಅಮೆರಿಕದ ಬಂಡವಾಳಕ್ಕೆ ತಮ್ಮ ದೇಶದ ಮಾರುಕಟ್ಟೆಯನ್ನು ತೆರೆದಿಡಬೇಕು ಎಂಬ ಶರತ್ತನ್ನು ವಿಧಿಸಿದ.
ಭಾರತ ಹಸಿದಿತ್ತು- ಅಮೆರಿಕ ಹೊಂಚು ಹಾಕುತ್ತಿತ್ತು
1965ರಲ್ಲಿ ಭಾರತದಲ್ಲಿ ಹಿಂದೆಂದೂ ಕಾಣದ ಕ್ಷಾಮ ಡಾಮರ ಆವರಿಸಿ ಅಪಾರ ಆಹಾರ ಕೊರತೆ ಎದುರಾಗಿತ್ತು.
ಈ ಅವಕಾಶವನ್ನು ಬಳಸಿಕೊಂಡ ಅಮೆರಿಕ ಭಾರತವೂ ಹಸಿರುಕ್ರಾಂತಿ ಯೋಜನೆಯನ್ನು ಜಾರಿ ಮಾಡಬೇಕೆಂದೂ, ಅಮೆರಿಕದ ಕೃಷಿ ಬಂಡವಾಳಕ್ಕೆ ಮಾರುಕಟ್ಟೆಯನ್ನು ತೆರೆಯಬೇಕೆಂದೂ, ಇಲ್ಲದಿದ್ದರೆ ಆಹಾರ ಸರಬರಾಜು ಮಾಡುವುದಿಲ್ಲವೆಂದೂ ಬ್ಲ್ಯಾಕ್‌ಮೇಲ್ ಮಾಡಿ ಹಸಿರು ಕ್ರಾಂತಿ ಯೋಜನೆಯನ್ನು ಮಂಡಿಬಲವಿಲ್ಲದ ಭಾರತದ ಸರಕಾರದ ಮೇಲೆ ಹೇರಿತು.
ಮತ್ತೊಂದು ಕಡೆ ಗ್ರಾಮೀಣ ಪ್ರದೇಶದ ಹಸಿವು-ಬಡತನಗಳಿಗೆ ಕಾರಣವಾಗಿದ್ದ ಭೂಮಾಲಕತ್ವ ಹಾಗೂ ಊಳಿಗಮಾನ್ಯ ಪಾಳೆಗಾರಿ ವ್ಯವಸ್ಥೆಯ ವಿರುದ್ಧ ರೈತಕೂಲಿಗಳ ಬಂಡಾಯದ ಕೆಂಪು ಕ್ರಾಂತಿಯನ್ನು ಬಗ್ಗುಬಡಿಯಲು ಕೂಡ ಸ್ಥಳೀಯ ಆಳುವವರ್ಗಗಳು ಪಾಶ್ಚಿಮಾತ್ಯ ದೇಶಗಳ ಸಂಪೂರ್ಣ ಕುಮ್ಮಕ್ಕಿನೊಂದಿಗೆ ಹಸಿರುಕ್ರಾಂತಿಯನ್ನು ಬಳಸಿಕೊಂಡರು.
ಹೀಗಾಗಿ ಹಸಿರುಕ್ರಾಂತಿಯೆಂಬುದು ಭಾರತದಂತಹ ಕೃಷಿ ಪ್ರಧಾನ ದೇಶವನ್ನು ಅಮೆರಿಕನ್ ಸಾಮ್ರಾಜ್ಯಶಾಹಿ ನಿಯಂತ್ರಣಕ್ಕೆ ಒಳಪಡಿಸುವ ಸಂಚೇ ಹೊರತು ರೈತೋದ್ಧಾರದ ಯೋಜನೆಯಲ್ಲ.
ಏಕೆಂದರೆ ಈ ಹಸಿರುಕ್ರಾಂತಿ ಪವಾಡ ಸದೃಶವೆಂಬಂತೆ ಬೆಳೆಯನ್ನು ಹೆಚ್ಚಿಸಿತು. ಜನರ ಹಸಿವನ್ನು ನೀಗಿಸದಿದ್ದರೂ ದೇಶದ ಆಹಾರ ಉತ್ಪಾದನೆಯನ್ನು ಹೆಚ್ಚಿಸಿತು. ಉತ್ಪಾದನೆಯ ಹೆಚ್ಚಳದಲ್ಲಿ ತೊಡಗಿದ್ದ ವರ್ಗಗಳು ಗ್ರಾಮೀಣ ಪ್ರದೇಶದಲ್ಲಿ ಹೊಸ ನವ ಶ್ರೀಮಂತ ರೈತಾಪಿ ವರ್ಗವಾಗಿ ವಿಕಸನಗೊಂಡವು. ನಿಧಾನವಾಗಿ ಈ ರೈತ ವರ್ಗಕ್ಕೆ ತಳಹಂತದ ರಾಜಕೀಯ ಅಧಿಕಾರವೂ ದೊರೆತು ತಳಮಟ್ಟದ ಆಳುವ ವರ್ಗಗಳಾದವು. ನಂತರ ಇದರ ಮೇಲ್‌ಸ್ತರ 80-90ರ ದಶಕದಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಅಧಿಕಾರದಲ್ಲೂ ಪಾಲು ಪಡೆದವು.
ಮತ್ತೊಂದು ಕಡೆ ಗ್ರಾಮೀಣ ಸಮಾಜದ ಬಡ ಹಾಗೂ ರೈತ ಕೂಲಿ ವರ್ಗಗಳು (ಇವರು ಸಾಮಾನ್ಯವಾಗಿ ದಲಿತ ಹಾಗೂ ಅತಿಹಿಂದುಳಿದ ಶೂದ್ರ ಜಾತಿಗಳಿಗೆ ಸೇರಿರುತ್ತಾರೆ) ಈ ಅಭಿವೃದ್ಧಿ ಕಥನದಲ್ಲಿ ಯಾವುದೇ ಪಾಲು ಪಡೆಯದೇ ನಿತ್ರಾಣಗೊಳ್ಳುತ್ತಾ ಹೋದವು.
ಹಾಗೆಯೇ ಅತಿ ಉತ್ಪಾದನೆಯ ಮೋಹದಲ್ಲಿ ರಾಸಾಯನಿಕಗಳ ಒಳಸುರಿಯ ಹೆಚ್ಚಳದಿಂದ ಮಣ್ಣು ಕ್ಷಾರವಾಗುತ್ತಾ ಹೋಯಿತು. ಉತ್ಪಾದನೆಯೂ ಇಳಿಮುಖವಾಗುತ್ತಾ ಹೋಯಿತು. ಹಳೆಯ ಕೃಷಿ ವ್ಯವಸ್ಥೆಯ ಏಕೋ ಸಿಸ್ಟಮ್ ಸಂಪೂರ್ಣವಾಗಿ ಧ್ವಸ್ತವಾಯಿತು. ಭಾರತದ ಪರಿಸರದಲ್ಲಿ ವಿಕಸನಗೊಂಡಿದ್ದ ನೂರಾರು ದೇಶೀಯ ಭತ್ತದ ಹಾಗೂ ಇತರ ಧಾನ್ಯಗಳ ತಳಿಗಳನ್ನು ಈ ಬಹುರಾಷ್ಟ್ರೀಯ ಕಂಪೆನಿಗಳು ಹಗಲು ದರೋಡೆ ಮಾಡಿ ಕೊಂಡೊಯ್ದವು. ಈ ದರೋಡೆಗೆ ಸಂಶೋಧನೆಯ ಹೆಸರಲ್ಲಿ ಭಾರತದ ಸರಕಾರ ಹಾಗೂ ಪರಿಣಿತ ವಿಜ್ಞಾನಿಗಳೇ ಸಹಕರಿಸಿದರು. ಅದೇ ವೇಳೆ ಜಾಗತೀಕರಣದ ಒಪ್ಪಂದಗಳಿಂದಾಗಿ ಸರಕಾರ ತನ್ನ ಬೆಂಬಲವನ್ನೂ ಹಿಂದೆಗೆದುಕೊಂಡಿತು ಮತ್ತು ಅಗ್ಗದ ವಿದೇಶಿ ಕೃಷಿ ಸರಕುಗಳು ಭಾರತದ ಮಾರುಕಟ್ಟೆಯಲ್ಲಿ ಸುರಿಯಲಾರಂಭಿಸಿ ಭಾರತದ ರೈತರು ಆತ್ಮಹತ್ಯೆ ಮಾಡಿಕೊಳ್ಳಲಾರಂಭಿಸಿದರು.
ಹೀಗೆ ಹಸಿರು ಕ್ರಾಂತಿ ಕೇವಲ ಉತ್ಪಾದನೆಯನ್ನು ಮಾತ್ರ ಹೆಚ್ಚಿಸಿದ ಒಂದು ತಾಂತ್ರಿಕ ವಿದ್ಯಮಾನವಾಗಿರಲಿಲ್ಲ. ಅದು ಭಾರತದ ರೈತ ವರ್ಗ, ಅದರಲ್ಲೂ ಸಣ್ಣ ಹಾಗೂ ಅತಿ ಸಣ್ಣ ರೈತಾಪಿಯನ್ನು ದಿವಾಳಿಯೆಬ್ಬಿಸಿದೆ. ಅದರ ಜೊತೆಗೆ ಭಾರತದ ಕೃಷಿ, ಗ್ರಾಮೀಣ ಆರ್ಥಿಕತೆ, ಈ ದೇಶದ ನೆಲ-ಜಲ ಎಲ್ಲವೂ ಕೊನೆಯರಿಯದ ಕಾಯಿಲೆಗೆ ದೂಡಿದ ವಿದ್ಯಮಾನವಾಯಿತು. ಜೀವ ವೈವಿಧ್ಯದಲ್ಲೂ ಭಾರತವನ್ನು ಬರಡು ಮಾಡಿ ಅವಲಂಬಿಗೊಳಿಸಿದೆ.
ಅದರ ಪರಿಣಾಮವೇ ಕೊನೆಯಿಲ್ಲದ ರೈತರ ಆತ್ಮಹತ್ಯೆಗಳು. ಹಸಿವಿನ ಸಾವುಗಳು. ಬತ್ತಿಹೋದ ಕೆರೆಗಳು. ಕುಸಿದುಬಿದ್ದಿರುವ ಅಂತರ್ಜಲದ ಮಟ್ಟ. ಕಂಡುಕೇಳರಿಯದ ಬೆಳೆ ರೋಗಗಳು. ಅತಂತ್ರ ರೈತ. ಪರಾವಲಂಬಿ ದೇಶ...
ಹೀಗಾಗಿ ಹಸಿರು ಕ್ರಾಂತಿ ಭಾರತದ ‘ಅಂದಿನ ಹಸಿವು’ ನೀಗಿಸಿದರೂ ‘ಭವಿಷ್ಯದ ಉಸಿರು’ ತೆಗೆಯಿತು.
ಇವೆಲ್ಲಕ್ಕೂ ಸ್ವಾಮಿನಾಥನ್ ಅವರು ಹೊಣೆಯಲ್ಲ. ಅವರು ಅಂದಿನ ದೇಶದ ಸಮಸ್ಯೆಯಾದ ಹಸಿವನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನವನ್ನೇ ಮಾಡಿದರು. ಆದರೆ ಈಗ ಹಿಂದಿರುಗಿ ನೋಡಿದರೆ ನರಕದಂತೆ ಕಂಡು ಬರುವ ಗ್ರಾಮೀಣ ಭಾರತದ ಬದುಕಿಗೆ ಹಸಿರು ಕ್ರಾಂತಿಯ ಅಂತರ್ಗತ ಲಾಭೋದ್ದೇಶದ ಆಸಕ್ತಿ ಕಾರಣ ಎಂದು ಪಶ್ಚಾತ್ತಾಪ ಪಟ್ಟಿರಬಹುದೇ ಎಂಬ ಪ್ರಶ್ನೆ ಹಾಗೆ ಉಳಿದುಕೊಳ್ಳುತ್ತದೆ.
ಹಾಗೆಯೇ ಹಸಿರು ಕ್ರಾಂತಿಯ ಯಶಸ್ಸಿಗಾಗಿ ಅಂತರ್ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿದ ಹೊಸ ಸರಕಾರಿ ಮತ್ತು ಖಾಸಗಿ-ಸರಕಾರಿ ಸಹಯೋಗಿ ಸಂಸ್ಥೆಗಳು ಹೇಗೆ ಇತರ ಪರ್ಯಾಯ ಸಾಧ್ಯತೆಗಳನ್ನೆಲ್ಲಾ ತಿರಸ್ಕರಿಸಿ ಅಮೆರಿಕ ಕಾರ್ಪೊರೇಟ್ ನಿರ್ದೇಶಿತ ಪ್ರಯೋಗ ಮತ್ತು ಕಾರ್ಯಕ್ರಮಗಳನ್ನು ಮಾತ್ರ ಜಾರಿ ಮಾಡಿದವು ಮತ್ತು ತಮ್ಮ ಯೋಜನೆಯನ್ನು ಅನುಮಾನಿಸುವ ಪರಿಣಿತರನ್ನು ಕಿತ್ತುಹಾಕಿ, ತಮ್ಮ ವಿಶ್ವಾಸಿಗಳನ್ನು ಮಾತ್ರ ಕೀಲಕ ಸ್ಥಾನದಲ್ಲಿ ನೇಮಿಸಿದರು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಕೂಲಂಕಷವಾಗಿ ವಿಮರ್ಶಿಸುವ ಅಗತ್ಯವಿದೆ.
ಏಕೆಂದರೆ ಆ ಹುದ್ದೆಗಳಿಗೆ ಕೇವಲ ಪರಿಣತಿಯೊಂದೇ ಮಾನದಂಡವಾಗಿರಲಿಲ್ಲ. ಅದರ ಜೊತೆಗೆ ಅಂದಿನ ಅಮೆರಿಕ ಪ್ರಾಯೋಜಿತ ‘ಕೃಷಿ ಅಭಿವೃದ್ಧಿ’ ರಾಜಕಾರಣವನ್ನು ಅತ್ಯಗತ್ಯವೆಂದು ಅಂತರಂಗೀಕರಿಸಿ ಕೊಳ್ಳುವುದೂ ಅಷ್ಟೇ ಮುಖ್ಯವಾಗಿತ್ತು.
ಈ ಅಂತರ್ ರಾಷ್ಟ್ರೀಯ ‘ಸಂಶೋಧನಾ’ ಸಂಸ್ಥೆಗಳು ಪಾಶ್ಚಿಮಾತ್ಯ ದೈತ್ಯ ಕಾರ್ಪೊರೇಟ್ ಕಂಪೆನಿಗಳು ಭಾರತದ ಸಹಸ್ರಾರು ಸ್ಥಳೀಯ ಧಾನ್ಯ ತಳಿಗಳನ್ನು ಹಗಲು ದರೋಡೆ ಮಾಡಲು ಸಹಕರಿಸಿದವು. ಪ್ರಾರಂಭದಲ್ಲಿ ಅಂತಹ ಕೆಲವು ಸಂಸ್ಥೆಗಳು ಜಗತ್ತಿಗೆ ಉಪಕಾರ ಮಾಡುತ್ತಿವೆ ಎಂಬ ಸಾರ್ವತ್ರಿಕ ತಿಳಿವಳಿಕೆಯೇ ಸ್ವಾಮಿನಾಥನ್ ಅವರಿಗೂ ಇತ್ತು... ಅಂತಹ ಹಲವು ಸಂಸ್ಥೆಗಳ ಮುಖ್ಯಸ್ಥರಾಗಿಯೂ ಅವರು ಕೆಲಸ ಮಾಡಿದ್ದರು..
ಸ್ವಾಮಿನಾಥನ್ ಅವರು ಕೇವಲ ಹಸಿರು ಕ್ರಾಂತಿಯ ಬಗೆಗೆ ಮಾತ್ರವಲ್ಲದೆ ನಂತರದ ದಿನಗಳಲ್ಲಿ ನಿರಂತರ ಹಸಿರು ಕ್ರಾಂತಿಯ ಬಗೆಗೆ ಮತ್ತು ಈ ಶತಮಾನದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಜೆನೆಟಿಕಲ್ ಮಾಡಿಫೈಡ್ - ಕುಲಾಂತರಿ ತಂತ್ರಜ್ಞ್ಞ್ಞ್ಞ್ಞಾನದ ಪ್ರತಿಪಾದಕರಾಗಿದ್ದರು. ಈ ತಂತ್ರಜ್ಞಾನವು ಪರಿಸರದ ಮೇಲೆ, ಮಣ್ಣಿನ ಮೇಲೆ ಮತ್ತು ಭೂಹೀನ ಮಣ್ಣಿನ ಮಕ್ಕಳ ಮೇಲೆ ಮಾಡಬಹುದಾದ ದುಷ್ಪರಿಣಾಮದ ಆಯಾಮಗಳನ್ನು ಸ್ವಾಮಿನಾಥನ್ ಅವರು ಉತ್ಪಾದನೆಯ ಹೆಚ್ಚಳದಷ್ಟು ಗಂಭೀರವಾಗಿ ಪರಿಗಣಿಸದಂತೆ ಕಾಣುವುದಿಲ್ಲ.
‘‘ವಾಸ್ತವದಲ್ಲಿ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವಿದ್ದರೆ ಸಾಕು ಉತ್ಪಾದನಾ ಮಾದರಿ ಮತ್ತು ತಂತ್ರಜ್ಞಾನ ಮಾದರಿ ಬಂಡವಾಳ ಶಾಹಿ ಆಗಿದ್ದರೂ ಪರವಾಗಿಲ್ಲ’’ ಎಂಬ ಇಂತಹ ತಿಳಿವಳಿಕೆ ಇಂದಿನ ಬಹುಪಾಲು ಎಡಪಂಥೀಯರಲ್ಲೂ ವ್ಯಾಪಕವಾಗಿದೆ. ಅದು ಹೇಗೆ ಹಗಲುಗುರುಡಿನ ಗ್ರಹಿಕೆ ಎಂಬುದಕ್ಕೆ ಹಸಿರು ಕ್ರಾಂತಿಯ ವಿನಾಶಕಾರಿ ಪರಿಣಾಮಗಳೇ ಸಾಕ್ಷಿ.
ಇದು ಭಾರತವು ಆಹಾರ ಭದ್ರತೆಯ ಹೆಸರಲ್ಲಿ ಆಹಾರ ಸಾರ್ವಭೌಮತೆ ಮತ್ತು ರೈತ ಸಾರ್ವಭೌಮತೆ ಕಳೆದುಕೊಂಡ ಪರಿ.
ಈ ಉತ್ಪಾದನೆ ಹೆಚ್ಚಳ -ಅರ್ಥಾತ್ ಇದರ ಹಿಂದಿನ ಬೀಜ, ಒಳಸುರಿ ಮತ್ತು ಕೃಷಿ ಮಾರುಕಟ್ಟೆ ದೈತ್ಯ ಕಾರ್ಪೊರೇಟ್ ಕಂಪೆನಿಗಳ ಲಾಭದ ವಿಜ್ಞಾನ-ರಾಜಕೀಯ ಮೇಲುಗೈ ಪಡೆದು ಇತರ ಪರ್ಯಾಯಗಳು ಮತ್ತು ಅದನ್ನು ಪ್ರತಿಪಾದಿಸು ತ್ತಿದ್ದವರು ಸದ್ದಿಲ್ಲದೇ ಹಿನ್ನೆಲೆಗೆ ಸರಿದದ್ದನ್ನು ಇಂದು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಿದೆ.
ಬೇಯರ್-ಮೊನ್ಸಾಂಟೊ ದಾಳಿ ಮತ್ತು Global Methane Pledge ಎಂಬ ಹುನ್ನಾರ
ಏಕೆಂದರೆ ಇವತ್ತು ಮತ್ತೆ ಬೇಯರ್-ಮೊನ್ಸಾಂಟೊದಂತಹ ಬೃಹತ್ ಕೃಷಿ ಬಹುರಾಷ್ಟ್ರೀಯ ಕಂಪೆನಿಗಳು ಎರಡನೇ ಮತ್ತು ನಿರಂತರ ಹಸಿರು ಕ್ರಾಂತಿಯ ಹೆಸರಲ್ಲಿ ಭಾರತದ ಕೃಷಿಯ ಭವಿಷ್ಯವನ್ನು ಕಬ್ಜಾ ಮಾಡಿಕೊಳ್ಳಲು ಹವಣಿಸುತ್ತಿವೆ. ಈ ನಿಟ್ಟಿನಲ್ಲಿ ತೀರಾ ಇತ್ತೀಚೆಗೆ ಬೇಯರ್-ಮೊನ್ಸಾಂಟೊ ಮತ್ತು ಭಾರತ ಸರಕಾರದ ಐಸಿಎಆರ್ (ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್) ದೀರ್ಘಕಾಲೀನ ಒಡಂಬಡಿಕೆಗೂ ಸಹಿ ಹಾಕಿವೆ. ಈ ಒಪ್ಪಂದದ ಮೂಲಕ ಬೇಯರ್-ಮೊನ್ಸಾಂಟೊ ಕಂಪೆನಿ ಭಾರತದ ಕೃಷಿಕರ ಉತ್ಪಾದನೆ, ತಂತ್ರಜ್ಞಾನ, ಮಾರುಕಟ್ಟೆ ಇತ್ಯಾದಿ ಎಲ್ಲಾ ವಿದ್ಯಮಾನಗಳಲ್ಲೂ ನೇರವಾಗಿ ಹಸ್ತಕ್ಷೇಪ ಮಾಡಲಿದೆ.
ಮತ್ತೊಂದೆಡೆ ಅಮೆರಿಕ ಮತ್ತು ಐರೋಪ್ಯ ಒಕ್ಕ್ಕೂಟಗಳು ಭಾರತದಂತಹ ಬಡರಾಷ್ಟ್ರಗಳ ಮೇಲೆ Global Methane Pledgeಗೆ ಸಹಿ ಹಾಕಲು ಒತ್ತಡ ಹೆಚ್ಚಿಸುತ್ತಿವೆ. ಅವುಗಳ ಪ್ರಕಾರ ಜಾಗತಿಕ ತಾಪಮಾನ ಹೆಚ್ಚಿಸುತ್ತಿರುವ ಹಸಿರು ಮನೆ ಅನಿಲಗಳಲ್ಲಿ ಒಂದಾದ ಮಿಥೇನ್‌ನ ಶೇ. 40ರಷ್ಟು ಉತ್ಪಾದನೆ ಕೃಷಿಯಿಂದ ಅದರಲ್ಲೂ ಭತ್ತ ಉತ್ಪಾದನೆಯಿಂದ ಆಗುತ್ತಿದೆಯಂತೆ. ಹೀಗಾಗಿ ಭತ್ತ ಉತ್ಪಾದನೆಯನ್ನು ಕಡಿಮೆ ಮಾಡಲು ಒತ್ತಡ ಹಾಕುತ್ತಿದೆ. ಅದಕ್ಕೆ ತಕ್ಕಂತೆ ಮೋದಿ ಸರಕಾರ ಜಗತ್ತಿಗೆ ತಾನು ಸಿರಿಧಾನ್ಯ ಉತ್ಪಾದನೆ ಮಾಡುವುದಾಗಿ ಘೋಷಿಸಿದೆ. ಅದರ ಸಾಧ್ಯತೆ ಮತ್ತು ಪರಿಣಾಮಗಳ ಯೋಚನೆ ಮಾಡದೆ ಆಗಲೇ ಅದಕ್ಕೆ ಕಾರ್ಪೊರೇಟ್ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ಹೀಗೆ ಈ ಕಾಲಘಟ್ಟದಲ್ಲಿ ಮತ್ತೊಮ್ಮೆ ಭಾರತದ ಕೃಷಿ ಎರಡನೇ ಹಸಿರು ಕ್ರಾಂತಿಯ ಹೆಸರಲ್ಲಿ, ಜೆನೆಟಿಕಲ್ ಮಾಡಿಫೈಡ್ - ಕುಲಾಂತರಿ ತಳಿ ಉತ್ಪಾದನೆಯ ಹೆಸರಲ್ಲಿ, ಕಾರ್ಪೊರೇಟ್ ಮಾರುಕಟ್ಟೆಗೆ ಸಿರಿಧಾನ್ಯ ಉತ್ಪಾದನೆ ಮಾಡುವ ತಂತ್ರೋಪಾಯಗಳಲ್ಲಿ ಶ್ರೀಮಂತ ರಾಷ್ಟ್ರಗಳ ಕಾರ್ಪೊರೇಟ್ ಬಂಡವಾಳಶಾಹಿ ಜಾಲಕ್ಕೆ ಸಿಲುಕಿಕೊಳ್ಳುತ್ತಿದೆ.
ಮೊದಲ ಹಸಿರು ಕ್ರಾಂತಿ ಹೇಗೆ ಉತ್ಪಾದನೆ ಹೆಚ್ಚಳದ ತಾಂತ್ರಿಕ ಪರಿಹಾರವನ್ನು ಮುಂದುಮಾಡಿ ಭಾರತದ ಕೃಷಿ ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ರೈತಾಪಿಗಳನ್ನು ಮತ್ತು ಭಾರತದ ಕೃಷಿ ಪರಿಸರವನ್ನು ವಿನಾಶದತ್ತ ಕೊಂಡೊಯ್ಯಿತು ಎಂಬ ಅನುಭವ ಈ ದೇಶಕ್ಕಿದೆ.
ಈಗ ಭಾರತ ಮತ್ತೊಮ್ಮೆ ಉತ್ಪಾದನೆಯ ಹೆಚ್ಚಳವೆಂಬ ಪಾಶ್ಚಿಮಾತ್ಯ ಕಾರ್ಪೊರೇಟ್ ತಂತ್ರ ಜಾಲದ ಅಪಾಯವನ್ನು ಎದುರಿಸುತ್ತಿದೆ.
ಭಾರತಕ್ಕೆ, ಕೃಷಿಗೆ ಮತ್ತು ರೈತಾಪಿಗೆ ಬೇಕಿರುವುದು ಕಾರ್ಪೊರೇಟ್ ಬಂಡವಾಳಶಾಹಿ ನಿಯಂತ್ರಿತ ತಾಂತ್ರಿಕ ಪರಿಹಾರವಲ್ಲ.
ಉತ್ಪಾದನೆ ಮಾದರಿ, ತಂತ್ರಜ್ಞಾನಗಳಲ್ಲೂ ಜನಮುಖಿಯಾದ, ಕೃಷಿ, ರೈತ ಮತ್ತು ದೇಶದ ಸಾರ್ವಭೌಮತೆ ಕಾಪಾಡುವ, ಅವರ ವಿವೇಕ ಮತ್ತು ಜ್ಞಾನವನ್ನು ಗೌರವಿಸುವ, ಜನಹಿತದ ರಾಜಕೀಯ ಉಳ್ಳ ಪರಿಸರ ಭಾಗೀ ಕೃಷಿ ವ್ಯವಸ್ಥೆ.
ಹೀಗಾಗಿ ಇಂದು ಮೊದಲ ಹಸಿರು ಕ್ರಾಂತಿಯ ರಾಜಕೀಯ, ಕೃಷಿ ಆರ್ಥಿಕ ಹಾಗೂ ಪರಸರವಾದಿ ಪಾಠಗಳನ್ನು ಸಮಗ್ರವಾಗಿ ಕಲಿತು ಬೇಡವಾದದ್ದನ್ನು ಬೇಡ ಎಂದು ನಿರಾಕರಿಸುವ ಸ್ವಾಯತ್ತತೆಯನ್ನು ಬೆಳೆಸಿಕೊಳ್ಳುವ ಮೂಲಕ ಮಾತ್ರ ಸ್ವಾಮಿನಾಥನ್ ಅವರಿಗೆ ನಿಜವಾದ ನಮನ ಸಲ್ಲಿಸಬಹುದು.