ಭಾರತದ ಯೋಜಿತ ಆರ್ಥಿಕ ಬೆಳವಣಿಗೆಗೆ ತೊಡಕಾಗುವ ನಾಲ್ಕು ಅಂಶಗಳು

ಇಳಿಮುಖವಾಗುತ್ತಿರುವ ಉತ್ಪಾದನಾ ಚಟುವಟಿಕೆ, ಸೇವಾ ವಲಯದಲ್ಲಿನ ಮಂದಗತಿ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ವಾಯು ಮಾಲಿನ್ಯವು ಭಾರತದ ಯೋಜಿತ ಆರ್ಥಿಕ ಬೆಳವಣಿಗೆಗೆ ಸವಾಲನ್ನು ಒಡ್ಡಬಹುದು ಎನ್ನುತ್ತಿದ್ದಾರೆ ಪರಿಣಿತರು.

Update: 2023-11-07 07:11 GMT

Photo: PTI

2023-2024ರ ಆರ್ಥಿಕ ವರ್ಷದಲ್ಲಿ ಭಾರತವು ಶೇ.6.5ರ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ. ಆದರೂ, ನಾಲ್ಕು ಅಂಶಗಳು ಈ ಯೋಜಿತ ಗುರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಹೇಳಲಾಗುತ್ತಿದೆ. ಅವೆಂದರೆ, ಇಳಿಮುಖವಾಗುತ್ತಿರುವ ಉತ್ಪಾದನಾ ಚಟುವಟಿಕೆ, ಸೇವಾ ವಲಯದಲ್ಲಿನ ನಿಧಾನಗತಿ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ವಾಯು ಮಾಲಿನ್ಯ.

ಕನಿಷ್ಠ ಮಟ್ಟಕ್ಕಿಳಿದ ಪಿಎಂಐ

ಖಾಸಗಿ ಸಮೀಕ್ಷೆಯ ಪ್ರಕಾರ, ಖರೀದಿ ನಿರ್ವಾಹಕರ ಸೂಚ್ಯಂಕ (ಪಿಎಂಐ) ಸೆಪ್ಟಂಬರ್‌ನಲ್ಲಿ 61 ಇದ್ದದ್ದು ಕಳೆದ 7 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಅಂದರೆ 58.4ಕ್ಕೆ ಇಳಿದಿದೆ. ಇದರೊಂದಿಗೆ, ದೇಶದ ಸೇವಾ ವಲಯವು ಅಕ್ಟೋಬರ್‌ನಲ್ಲಿ ನಿಧಾನಗತಿಯನ್ನು ಕಂಡಿತು. ಕಡಿಮೆಯಾದ ಬೇಡಿಕೆ, ಬೆಲೆ ಒತ್ತಡ ಮತ್ತು ಸ್ಪರ್ಧಾತ್ಮಕ ಪರಿಸ್ಥಿತಿಗಳು ಈ ಕುಸಿತಕ್ಕೆ ಕಾರಣವೆಂದು ಸಮೀಕ್ಷೆ ಹೇಳಿದೆ.

ಈ ಸಮೀಕ್ಷೆಯು ಚಿಲ್ಲರೆಯೇತರ ಗ್ರಾಹಕ ಸೇವೆಗಳು, ಸಾರಿಗೆ, ಮಾಹಿತಿ, ಸಂವಹನ, ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ವ್ಯಾಪಾರ ಸೇವೆಗಳಲ್ಲಿನ ಸುಮಾರು 400 ಕಂಪೆನಿಗಳನ್ನು ಒಳಗೊಂಡಿತ್ತು. ಮೇ ತಿಂಗಳಿನಿಂದ ಬೆಳವಣಿಗೆಯು ದುರ್ಬಲವಾಗಿದ್ದರೂ, ಗ್ರಾಹಕರ ಆಸಕ್ತಿ ಮತ್ತು ಯಶಸ್ವಿ ಜಾಹೀರಾತಿನಿಂದ ಇದು ಗಣನೀಯವಾಗಿ ಉಳಿದಿದೆ ಎಂದು ಅದು ಹೇಳುತ್ತದೆ. ತೀವ್ರ ಪೈಪೋಟಿ ಮತ್ತು ಕೆಲವು ರೀತಿಯ ಸೇವೆಗಳಿಗೆ ಕಡಿಮೆಯಾದ ಬೇಡಿಕೆಯು ಒಟ್ಟಾರೆ ವಿಸ್ತರಣೆಯನ್ನು ಕುಂಠಿತಗೊಳಿಸಿದೆ ಎಂಬುದು ಸಮೀಕ್ಷೆಯ ಪ್ರತಿಪಾದನೆ.

ವ್ಯಾಪಾರ ಚಟುವಟಿಕೆ ಹೆಚ್ಚುವುದು ಮತ್ತು ಹೊಸ ಕೆಲಸವನ್ನು ತೆಗೆದುಕೊಳ್ಳುವುದು ಸೆಪ್ಟಂಬರ್‌ನಲ್ಲಿ 13 ವರ್ಷಗಳ ಗರಿಷ್ಠ ಮಟ್ಟದಿಂದ ಕೆಳಗಿಳಿದಿದ್ದರೂ, ಭಾರತೀಯ ಸೇವಾ ಆರ್ಥಿಕತೆಯು ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ ಎಂದು S&P ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನಲ್ಲಿ ಅರ್ಥಶಾಸ್ತ್ರದ ಸಹ ನಿರ್ದೇಶಕರಾಗಿರುವ ಪೊಲಿಯಾನಾ ಡಿ ಲಿಮಾ ಹೇಳಿರುವುದನ್ನು ‘ಬಿಸಿನೆಸ್ ಸ್ಟ್ಯಾಂಡರ್ಡ್’ ವರದಿ ಮಾಡಿದೆ.

ಹಲವಾರು ಕಂಪೆನಿಗಳು ಹೊಸ ಒಪ್ಪಂದಗಳನ್ನು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದವು. ಆದರೆ ಕೆಲವು ಕಂಪೆನಿಗಳು ತಮ್ಮ ಸೇವೆಗಳು ಮತ್ತು ಸ್ಪರ್ಧಾತ್ಮಕ ಪರಿಸ್ಥಿತಿಗಳಿಗೆ ಕಡಿಮೆ ಬೇಡಿಕೆ ಇರುವುದರ ಬಗ್ಗೆ ಹೇಳಿವೆ. ಅಕ್ಟೋಬರ್‌ನಲ್ಲಿ ನಿರ್ದಿಷ್ಟವಾಗಿ ಲಾಭ ತಂದಿದ್ದು ರಫ್ತುಗಳು. ಏಶ್ಯ, ಯುರೋಪ್ ಮತ್ತು ಅಮೆರಿಕದಿಂದ ಹೊಸ ವ್ಯಾಪಾರ ಲಾಭಗಳು ಒಂಭತ್ತು ವರ್ಷಗಳ ಇತಿಹಾಸದಲ್ಲಿಯೇ ಇಂತಹ ಎರಡನೇ ಅತ್ಯಧಿಕ ಬೆಳವಣಿಗೆಗೆ ಕಾರಣವಾದವು ಎಂಬುದು ಅವರ ಅಭಿಪ್ರಾಯ.

ಉತ್ಪಾದನಾ ಚಟುವಟಿಕೆ ಕುಸಿತ

ಸೇವೆಗಳ ಬೆಳವಣಿಗೆಯಲ್ಲಿನ ನಿಧಾನಗತಿಯು ಕಳೆದ ತಿಂಗಳಲ್ಲಿ ಉತ್ಪಾದನಾ ಚಟುವಟಿಕೆಯಲ್ಲಿನ ಕುಸಿತದ ಬೆನ್ನಲ್ಲಿಯೇ ಆಯಿತು. ಹೆಚ್ಚುತ್ತಿರುವ ವೆಚ್ಚದ ಒತ್ತಡಗಳು ಮತ್ತು ಗ್ರಾಹಕ ಸರಕುಗಳ ಬೇಡಿಕೆಯಲ್ಲಿನ ಕುಸಿತವು ಅಕ್ಟೋಬರ್‌ನಲ್ಲಿ ಉತ್ಪಾದನಾ ಚಟುವಟಿಕೆಯನ್ನು ತಗ್ಗಿಸಿತು. ಇದು ಎಂಟು ತಿಂಗಳಲ್ಲಿ ನಿಧಾನಗತಿಯಲ್ಲಿ ಬೆಳೆದಿತ್ತು.

ಇತ್ತೀಚಿನ ರಾಯ್ಟರ್ಸ್ ಸಮೀಕ್ಷೆಯು ಹಬ್ಬದ ಹೊತ್ತಿನಲ್ಲಿಯ ಬೇಡಿಕೆಯು ಆರ್ಥಿಕತೆಗೆ ಸ್ವಲ್ಪ ಮೆರಗು ತರುತ್ತದೆ ಎಂಬುದನ್ನು ತೋರಿಸಿದೆ. ಆದರೂ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಇದು ಸಾಕಾಗುವುದಿಲ್ಲ.

S&P ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹ ನಿರ್ದೇಶಕ ಪೊಲಿಯಾನಾ ಡಿ ಲಿಮಾ, ಸವಾಲಿನ ಜಾಗತಿಕ ಆರ್ಥಿಕ ವಾತಾವರಣದ ಹೊರತಾಗಿಯೂ ಭಾರತದ ಉತ್ಪಾದನಾ ವಲಯವು ಅಕ್ಟೋಬರ್‌ನಲ್ಲಿ ಗಣನೀಯ ಬೆಳವಣಿಗೆಯನ್ನು ಸೃಷ್ಟಿಸಿದೆ ಎಂಬುದನ್ನು ಗುರುತಿಸುತ್ತಾರೆ. ಇದರ ಹೊರತಾಗಿಯೂ, ಸಮೀಕ್ಷೆ ಮಾಡಲಾದ ಖರೀದಿ ನಿರ್ವಾಹಕರ ಒಳನೋಟಗಳು ಹಲವಾರು ಕ್ರಮಗಳ ಕುಸಿತವನ್ನು ಸೂಚಿಸುತ್ತವೆ ಎನ್ನುತ್ತಾರೆ ಅವರು.

ಉತ್ಪಾದನೆ ಮತ್ತು ಸೇವೆಗಳೆರಡರಲ್ಲೂ ನಿಧಾನಗತಿಯು ಕಡಿಮೆ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಸೂಚಿಸುತ್ತದೆ. ಇದರರ್ಥ ಕಡಿಮೆ ಸರಕುಗಳನ್ನು ಉತ್ಪಾದಿಸಲಾಗುತ್ತಿದೆ ಮತ್ತು ಕಡಿಮೆ ಉದ್ಯೋಗಗಳನ್ನು ನೀಡಲಾಗುತ್ತಿದೆ.

ಗರಿಷ್ಠ ಮಟ್ಟದಲ್ಲಿ ನಿರುದ್ಯೋಗ

ಇನ್ನೊಂದೆಡೆ, ಭಾರತದ ನಿರುದ್ಯೋಗ ದರವು ಅಕ್ಟೋಬರ್‌ನಲ್ಲಿ ಎರಡು ವರ್ಷಗಳ ಗರಿಷ್ಠ ಮಟ್ಟ ಶೇ.10.09ಕ್ಕೆ ಏರಿದೆ ಎಂದು, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಅಂಕಿಅಂಶಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಆದರೂ, ಜುಲೈ 2022ರಿಂದ ಜೂನ್ 2023ರವರೆಗಿನ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (ಪಿಎಲ್‌ಎಫ್‌ಎಸ್) ಅಂಕಿಅಂಶವು 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಭಾರತದ ನಿರುದ್ಯೋಗ ದರವು ಆರು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು ತೋರಿಸಿದೆ. ಅದು ಶೇ.3.2ರಷ್ಟಿದೆ.

ಪಿಎಲ್‌ಎಫ್‌ಎಸ್ ದತ್ತಾಂಶದ ಪ್ರಕಾರ, ಸಾಮಾನ್ಯ ಕಾರ್ಮಿಕರು ಮತ್ತು ನಿಯಮಿತ ಸಂಬಳದ ವರ್ಗಕ್ಕಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಸ್ವಯಂ ಉದ್ಯೋಗಿಗಳಾಗಿದ್ದಾರೆ.

ಒಟ್ಟು ಉದ್ಯೋಗಿಗಳಲ್ಲಿ ಸ್ವಯಂ ಉದ್ಯೋಗಿಗಳ ಪಾಲು ಹೆಚ್ಚುತ್ತಿದೆ ಮತ್ತು ಅವರೊಳಗೆ ಹೆಚ್ಚಿನವರು ಸಂಬಳ ರಹಿತ ದುಡಿಮೆ ಮಾಡುವ ಕುಟುಂಬದೊಳಗಿನ ಕಾರ್ಮಿಕರು ಮತ್ತು ಸ್ವಂತದ್ದೇ ಕೆಲಸ ಮಾಡುವವರಾಗಿದ್ದಾರೆ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ ಸಂತೋಷ್ ಮೆಹ್ರೋತ್ರಾ ಹೇಳುತ್ತಾರೆ. ಉತ್ತಮ ಕೆಲಸ ಮತ್ತು ಕೂಲಿ ಕೊರತೆಯಿಂದ ಜನರು ಸ್ವಯಂ ಉದ್ಯೋಗವನ್ನು ಆಯ್ದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅವರು.

ಕಾರ್ಮಿಕ ಮಾರುಕಟ್ಟೆಯ ಉತ್ತಮ ಮೌಲ್ಯಮಾಪನಕ್ಕಾಗಿ ಅರ್ಥಶಾಸ್ತ್ರಜ್ಞರು ಸಿಎಂಐಇ ಡೇಟಾವನ್ನು ಅವಲಂಬಿಸಿದ್ದಾರೆ ಏಕೆಂದರೆ ಅದರ ಅಂಕಿಅಂಶಗಳು ಮಾಸಿಕ ಸಮೀಕ್ಷೆಗಳನ್ನು ಆಧರಿಸಿರುತ್ತವೆ. ಇದು ದೇಶಾದ್ಯಂತ ಡೇಟಾವನ್ನು ಕಡಿಮೆ ಬಾರಿ ಬಿಡುಗಡೆ ಮಾಡುವ ಸರಕಾರದ ದತ್ತಾಂಶಕ್ಕೆ ವಿರುದ್ಧವಾಗಿರುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳುತ್ತದೆ.

ಭಾರತದ ಉದ್ಯೋಗಿಗಳ ಸಂಖ್ಯೆಯು ಹೆಚ್ಚುತ್ತಿರುವ ದುಡಿಯುವ ವಯಸ್ಸಿನ ಜನಸಂಖ್ಯೆಗೆ ಸಂಬಂಧಿಸಿದಂತೆ ಏರುತ್ತಿಲ್ಲ ಎಂದು ಸಿಎಂಐಇ ಮುಖ್ಯಸ್ಥ ಮಹೇಶ್ ವ್ಯಾಸ್ ಮೇ ತಿಂಗಳಲ್ಲಿ ಹೇಳಿದ್ದರು. ಕಳೆದ ಐದು ವರ್ಷಗಳಲ್ಲಿ ಭಾರತದ ಉದ್ಯೋಗಿಗಳ ಸಂಖ್ಯೆಯು 40 ಕೋಟಿಗಿಂತಲೂ ಸ್ವಲ್ಪ ಹೆಚ್ಚಿನ ಮಟ್ಟಕ್ಕೆ ಸ್ಥಿರವಾಗಿದೆ ಮತ್ತು ಭಾರತದಲ್ಲಿನ ಉದ್ಯೋಗಗಳ ಗುಣಮಟ್ಟದಲ್ಲಿ ತುಂಬಾ ಕುಸಿತ ಉಂಟಾಗಿದೆ ಎಂದು ಅವರು ಹೇಳಿದ್ದರು.

ಈ ವರ್ಷ ಶೇ.6ರಿಂದ ಶೇ.6.5ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿರುವ ಭಾರತದ ಆರ್ಥಿಕತೆಯ ಮೇಲೆ ಈ ಎಲ್ಲಾ ಅಂಶಗಳು ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ವಾಯು ಮಾಲಿನ್ಯ

ವಾಯು ಮಾಲಿನ್ಯವು ಜಿಡಿಪಿ ಬೆಳವಣಿಗೆ ಮತ್ತು ತಲಾ ಆದಾಯದ ಮಟ್ಟಗಳ ಮೇಲೆ ನೇರವಾದ ಮತ್ತು ನಿರ್ದಿಷ್ಟವಾಗಿ ದುರ್ಬಲಗೊಳಿಸುವ ಪರಿಣಾಮವನ್ನು ಬೀರುವಂಥದ್ದಾಗಿದೆ. ಕಡಿಮೆ ಕಾರ್ಮಿಕರ ಉತ್ಪಾದನೆ, ಬಳಕೆ ಪ್ರಧಾನ ಸೇವೆಗಳಲ್ಲಿ ತಗ್ಗಿದ ಗ್ರಾಹಕರು, ಅಡೆತಡೆಗೆ ಒಳಗಾದ ಆಸ್ತಿ ಉತ್ಪಾದಕತೆ, ವಿಶೇಷವಾಗಿ ಉತ್ಪಾದಕ ವಯಸ್ಸಿನ ಗುಂಪುಗಳಲ್ಲಿ ಆರೋಗ್ಯ ವೆಚ್ಚಗಳು ಮತ್ತು ಕಲ್ಯಾಣ ಹಂಚಿಕೆಗಳಲ್ಲಿನ ಹೆಚ್ಚಳ ಇಂಥ ಪರಿಣಾಮಗಳಾಗಿವೆ ಎನ್ನುತ್ತವೆ ವರದಿಗಳು.

ಪ್ರಮುಖ ಉತ್ಪಾದನೆ ಮತ್ತು ಸೇವಾ ಕೇಂದ್ರಗಳಲ್ಲಿ ಮರುಕಳಿಸುವ ವಾರ್ಷಿಕ ಮಾಲಿನ್ಯ ಚಕ್ರಗಳ ಪರಿಣಾಮಗಳನ್ನು ನಾವು ಪರಿಗಣಿಸಿದಾಗ, ಆರ್ಥಿಕ ಉತ್ಪಾದಕತೆಯ ಮೇಲಿನ ಒತ್ತಡವು ಗಣನೀಯವಾಗಿ ಹೆಚ್ಚು ಮಹತ್ವದ್ದಾಗಿದೆ ಎಂದು ವರದಿ ಹೇಳಿದೆ.

ಆರೋಗ್ಯ, ಉತ್ಪಾದಕತೆ, ಕಾರ್ಮಿಕ ಪೂರೈಕೆ ಮತ್ತಿತರ ಆರ್ಥಿಕ ಸಂಬಂಧಿತ ಫಲಿತಾಂಶಗಳ ಮೇಲೆ ವಾಯುಮಾಲಿನ್ಯದ ಪರಿಣಾಮಗಳು ವರ್ಷದಿಂದ ವರ್ಷಕ್ಕೆ ಗಮನಿಸಬಹುದಾದ ಮಟ್ಟದಲ್ಲಿ ಜಿಡಿಪಿಯಲ್ಲಿನ ಬದಲಾವಣೆಗೆ ಕಾರಣವಾಗುತ್ತವೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ ಎಂದು ವಿಶ್ವ ಬ್ಯಾಂಕ್ ಪ್ರಬಂಧ ಹೇಳಿದೆ.

ಪರಿಣಾಮವು ಕಡೆಗಣಿಸುವಂಥದ್ದಲ್ಲ. ಪಿಎಂ2.5 ಮಟ್ಟದಲ್ಲಿ ಸರಾಸರಿ ವಾರ್ಷಿಕ ಹೆಚ್ಚಳವು ಒಟ್ಟು ದೇಶೀಯ ಉತ್ಪನ್ನದಲ್ಲಿ ವರ್ಷದಿಂದ ವರ್ಷಕ್ಕೆ ಶೇ.0.56ರಷ್ಟು ಅಂಶಗಳನ್ನು ಕಡಿಮೆ ಮಾಡುತ್ತದೆ ಎಂದು ವರದಿ ಹೇಳುತ್ತದೆ.

ಈ ಪ್ರವೃತ್ತಿಯು ಕಳವಳಕಾರಿಯಾಗಿದೆ ಎಂಬ ಆರ್‌ಬಿಐ ವರದಿಯನ್ನು ಉಲ್ಲೇಖಿಸಿ ಹೇಳಲಾಗುತ್ತಿರುವುದು ಏನೆಂದರೆ, ಭಾರತದಲ್ಲಿ ಉದ್ಯೋಗ ಸೃಷ್ಟಿಯು ಈಗಲೂ ಹೆಚ್ಚಾಗಿ ಕೃಷಿ ಮತ್ತು ನಿರ್ಮಾಣದಂತಹ ಹೊರಾಂಗಣದ ವಲಯಗಳನ್ನು ಒಳಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದೆ. ಈ ಎರಡೂ ವಲಯಗಳು ದೊಡ್ಡ ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿ ಸೇರಿವೆ. ವಿತರಣಾ ಸೇವೆಗಳು ಮತ್ತು ಭದ್ರತಾ ಏಜೆನ್ಸಿ ಕೆಲಸಗಳು ನಗರ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಆಯ್ಕೆಗಳಿಗೆ ಕಾರಣವಾಗಿವೆ.

ಆದಾಗ್ಯೂ, ವಾಯು ಮಾಲಿನ್ಯದ ಪರಿಣಾಮವು ಹೊರಗಡೆ ಕೆಲಸ ಮಾಡುವವರಿಗೆ ಮಾತ್ರವೇ ಸೀಮಿತವಾಗಿಲ್ಲ. ಕಾಲ್ ಸೆಂಟರ್‌ಗಳಂತಹ ಒಳಾಂಗಣ ಉದ್ಯೋಗಗಳಲ್ಲಿಯೂ ವಾಯು ಮಾಲಿನ್ಯವು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ವರದಿಗಳು ಹೇಳುತ್ತಿವೆ.

(ಕೃಪೆ:thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ತಾನಿಯಾ ರಾಯ್

contributor

Similar News