ಪಳೆಯುಳಿಕೆ ಇಂಧನಗಳ ಮೇಲೆ ಭಾರೀ ವೆಚ್ಚ: ಕಳವಳಕಾರಿ ಸನ್ನಿವೇಶಕ್ಕೆ ಪರಿಹಾರ ಹೇಳುವುದೆ ಜಿ20 ಶೃಂಗಸಭೆ?

ಜಿ೨೦ ನಾಯಕರ ಶೃಂಗಸಭೆ ಸೆಪ್ಟಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿದೆ. ಅಲ್ಲಿ ಹವಾಮಾನ ಬದಲಾವಣೆ ಮತ್ತು ಇಂಧನ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಲಿವೆ. ಎಲ್ಲರ ಕಣ್ಣುಗಳು ಈಗ ಈ ಮಾತುಕತೆಗಳ ಮೇಲೆ ಇವೆ. ಆದರೂ, ಭಾರತದಲ್ಲಿ ಜಿ೨೦ ಶೃಂಗಸಭೆಯ ಭಾಗವಾಗಿ ಮುಕ್ತಾಯಗೊಂಡ ಸಂಬಂಧಿತ ಸಚಿವರ ಮತ್ತು ಕಾರ್ಯನಿರತ ಗುಂಪಿನ ಸಭೆಗಳು ಇಂಧನ ಪರಿವರ್ತನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿರುವ ಸುದ್ದಿಯೂ ಬಂದಿದೆ.

Update: 2023-08-28 09:31 GMT

ಕಳೆದ ವರ್ಷ, ಜಿ20 ದೇಶಗಳು ಪಳೆಯುಳಿಕೆ ಇಂಧನಗಳನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸಿದವು. 2022ರಲ್ಲಿ ಈ ದೇಶಗಳು ಪಳೆಯುಳಿಕೆ ಇಂಧನದ ಮೇಲೆ ಮಾಡಿರುವ ಖರ್ಚು ದಾಖಲೆಯ ಜಿ20 ದೇಶಗಳು ಪಳೆಯುಳಿಕೆ ಇಂಧನಗಳಿಗೆ ನೀಡಿದ ಬೆಂಬಲ, 2009ರಲ್ಲಿ ಜಿ20 ರಾಷ್ಟ್ರಗಳ ಬದ್ಧತೆ ಸೇರಿದಂತೆ ಕೆಲವು ಅಂತರ್‌ರಾಷ್ಟ್ರೀಯ ಹವಾಮಾನ ಬದ್ಧತೆಗಳ ಪ್ರಕಾರ ವಿವಿಧ ದೇಶಗಳು ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿದ್ದ ಪ್ರತಿಜ್ಞೆಗಳಿಗೆ ವಿರುದ್ಧವಾಗಿದೆ ಎಂಬುದನ್ನು ವರದಿ ನಿರೂಪಿಸಿದೆ.

ಪಳೆಯುಳಿಕೆ ಇಂಧನಗಳ ಬಳಕೆ ಮತ್ತು ಧನಸಹಾಯದಿಂದ ಗ್ರಾಹಕರು ಮತ್ತು ಹೂಡಿಕೆದಾರರು ದೂರವಿರುವಂತೆ ಮಾಡಲು ಇಂಗಾಲ ತೆರಿಗೆಯನ್ನು ವಿಧಿಸುವುದೂ ಸೇರಿದಂತೆ ಜಿ20 ರಾಷ್ಟ್ರಗಳಿಗೆ ಈ ವರದಿ ಹಲವಾರು ಶಿಫಾರಸುಗಳನ್ನು ಮಾಡಿದೆ. ಅಂದಾಜಿನ ಪ್ರಕಾರ, ಅಂತಹ ತೆರಿಗೆ ಪ್ರತೀ ವರ್ಷ 1 ಟ್ರಿಲಿಯನ್ ಡಾಲರ್ ಅನ್ನು ತರಬಹುದು. ಸಮಾಜ ಕಲ್ಯಾಣ ಯೋಜನೆಗಳಿಗೆ ನೆರವಾಗಿ ಅದನ್ನು ಬಳಸಬಹುದು ಎಂಬ ಸಲಹೆಯೂ ಬಂದಿದೆ.

ಈ ವರದಿ 18ನೇ ಜಿ20 ನಾಯಕರ ಶೃಂಗಸಭೆಗೆ ಮೊದಲು ಹೊರಬಿದ್ದಿದೆ. ಅದು ಸೆಪ್ಟಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿದೆ. ಅಲ್ಲಿ ಹವಾಮಾನ ಬದಲಾವಣೆ ಮತ್ತು ಇಂಧನ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಲಿವೆ. ಎಲ್ಲರ ಕಣ್ಣುಗಳು ಈಗ ಈ ಮಾತುಕತೆಗಳ ಮೇಲೆ ಇವೆ. ಆದರೂ, ಭಾರತದಲ್ಲಿ ಜಿ20 ಶೃಂಗಸಭೆಯ ಭಾಗವಾಗಿ ಮುಕ್ತಾಯಗೊಂಡ ಸಂಬಂಧಿತ ಸಚಿವರ ಮತ್ತು ಕಾರ್ಯನಿರತ ಗುಂಪಿನ ಸಭೆಗಳು ಇಂಧನ ಪರಿವರ್ತನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿರುವ ಸುದ್ದಿಯೂ ಬಂದಿದೆ.

ಸ್ಥಿರ ಅಭಿವೃದ್ಧಿ ಕುರಿತ ಅಂತರ್‌ರಾಷ್ಟ್ರೀಯ ಸಂಸ್ಥೆ ವರದಿ ಪ್ರಕಾರ, ಜಿ20 ದೇಶಗಳು ಪಳೆಯುಳಿಕೆ ಇಂಧನಗಳ ಮೇಲಿನ ಕಳೆದ ಬಾರಿಯ ದಾಖಲೆ ಗಾತ್ರದ ವೆಚ್ಚ ಹಿಂದಿನ ದಶಕದಲ್ಲಿನ ವಾರ್ಷಿಕ ಸರಾಸರಿಗಿಂತ ನಾಲ್ಕು ಪಟ್ಟು ಹೆಚ್ಚು. ರಶ್ಯ-ಉಕ್ರೇನ್ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ದೇಶಗಳು ನೀಡಿದ ಹೆಚ್ಚಿನ ಬಳಕೆಯ ಸಬ್ಸಿಡಿಗಳ ಕಾರಣದಿಂದಾಗಿ ಇದು ಸಂಭವಿಸಿದೆ. ಈಗ ಜಿ20 ದೇಶಗಳು ಪಳೆಯುಳಿಕೆ ಇಂಧನ ಸಬ್ಸಿಡಿಗಳನ್ನು ತೆಗೆದುಹಾಕಲು ಗಡುವನ್ನು ಒಪ್ಪಿಕೊಳ್ಳುವುದು ನಿರ್ಣಾಯಕವಾಗಿದೆ (ಉದಾಹರಣೆಗೆ, ಜಿ7 ಇದನ್ನು 2025ರ ವೇಳೆಗೆ ಸಾಧಿಸುವ ಬದ್ಧತೆ ಪ್ರಕಟಿಸಿದೆ). ಸಬ್ಸಿಡಿಗಳನ್ನು ತೆಗೆದುಹಾಕುವುದರಿಂದ ಪಳೆಯುಳಿಕೆ ಇಂಧನ ಸಂಬಂಧಿತ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಸಾವಿರಾರು ಜೀವಗಳನ್ನು ಉಳಿಸಬಹುದು. ವರದಿ ಹೇಳುವಂತೆ, ಪಳೆಯುಳಿಕೆ ಇಂಧನ ಬಳಕೆಯಿಂದಾಗುವ ಮಾಲಿನ್ಯ ಜಿ20 ದೇಶಗಳಲ್ಲಿ ವರ್ಷಕ್ಕೆ 5 ಮಿಲಿಯನ್ ಸಾವುಗಳಿಗೆ ಮತ್ತು ಜಾಗತಿಕವಾಗಿ ಐದು ಸಾವುಗಳಲ್ಲಿ ಒಂದು ಸಾವಿಗೆ ಕಾರಣವಾಗುತ್ತಿದೆ.

ವರದಿಯ ಪ್ರಕಾರ, ಜಿ20 ದೇಶಗಳಲ್ಲಿ ಸರಕಾರಿ ಸ್ವಾಮ್ಯದ ಉದ್ಯಮಗಳು (ಎಸ್‌ಒಇ) ಪಳೆಯುಳಿಕೆ ಇಂಧನ ಮೂಲಸೌಕರ್ಯದಲ್ಲಿ ಮಾಡುತ್ತಿರುವ ಹೂಡಿಕೆಗಳು ಕೋವಿಡ್ ಮೊದಲಿನ ಇಂಧನ ಬಿಕ್ಕಟ್ಟಿನ ಮಟ್ಟಕ್ಕಿಂತ ಹೆಚ್ಚಾಗಿದ್ದು, 2022ರಲ್ಲಿ 322 ಬಿಲಿಯನ್ ಡಾಲರ್ ಆಗಿತ್ತು.

ನವೀಕರಿಸಬಹುದಾದ ಇಂಧನದಲ್ಲಿನ ಜಾಗತಿಕ ಹೂಡಿಕೆ 2022ರಲ್ಲಿ 500 ಶತಕೋಟಿ ಡಾಲರ್. ಇದು ದಾಖಲೆಯ ಗರಿಷ್ಠ ಮಟ್ಟ. ಆದರೆ ಇದು ಪಳೆಯುಳಿಕೆ ಇಂಧನಗಳಲ್ಲಿನ ಹೂಡಿಕೆಯ (950 ಶತಕೋಟಿ ಡಾಲರ್) ಅರ್ಧದಷ್ಟು ಮಾತ್ರ ಎಂದು ವರದಿ ಪತ್ತೆ ಮಾಡಿದೆ. ಜಿ20 ದೇಶಗಳು 2020 ಮತ್ತು ಜೂನ್ 2023ರ ನಡುವೆ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಗೆ 265 ಶತಕೋಟಿ ಡಾಲರ್ ಸಬ್ಸಿಡಿಗಳನ್ನು ಘೋಷಿಸಿದರೆ, ಪಳೆಯುಳಿಕೆ ಇಂಧನಗಳ ಸಬ್ಸಿಡಿಗಳು 2020ರಿಂದ 2022ರವರೆಗೆ 1.4 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚು.

ಜಿ20 ದೇಶಗಳು ಹವಾಮಾನ ಬದ್ಧತೆಗಳ ಮೇಲೆ ಕಾರ್ಯನಿರ್ವಹಿಸಬೇಕು ಎಂದು ವರದಿ ಶಿಫಾರಸು ಮಾಡುತ್ತದೆ. ಪಳೆಯುಳಿಕೆ ಇಂಧನಗಳಿಗೆ ಎಲ್ಲಾ ಸಾರ್ವಜನಿಕ ಹಣಕಾಸಿನ ಹರಿವನ್ನು ತೆಗೆದುಹಾಕುವುದು ಅಗತ್ಯವೆಂದು ಅದು ಹೇಳುತ್ತದೆ.

ವರದಿ ಕೊಡುವ ಅಂಕಿಅಂಶಗಳು ಬಹಳ ಆತಂಕಕಾರಿ ವಾಸ್ತವವನ್ನು ಹೇಳುತ್ತವೆ ಎಂಬುದು ಪರಿಣಿತರ ಅಭಿಪ್ರಾಯ. ಪಳೆಯುಳಿಕೆ ಇಂಧನಗಳಿಗೆ ಹೋಲಿಸಿದರೆ ನವೀಕರಿಸಬಹುದಾದ ಇಂಧನ ಹೂಡಿಕೆಗಳು ಬಹಳ ಸಣ್ಣ ಪ್ರಮಾಣದಲ್ಲಿವೆ ಎಂಬುದನ್ನು ವರದಿ ತೋರಿಸುತ್ತಿದೆ.

ಹವಾಮಾನ ಬದ್ಧತೆ ಹಿನ್ನೆಲೆಯಲ್ಲಿನ ಮಹತ್ವಾಕಾಂಕ್ಷೆಯ ಗುರಿ ಮುಟ್ಟಲು ಜಿ೨೦ ಶೃಂಗ ನಾಯಕತ್ವವನ್ನು ತೋರಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಭಾರತ, ಪಳೆಯುಳಿಕೆ ಇಂಧನಗಳು

ಮತ್ತು ಜಿ೨೦ ಶೃಂಗಸಭೆ:

ಜಿ20 ಅಧ್ಯಕ್ಷ ದೇಶವಾಗಿ ಭಾರತ ಈ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವವನ್ನು ವಿಶ್ವಾಸದಿಂದ ಪ್ರದರ್ಶಿಸಬಹುದು. 2014ರಿಂದ 2022ರವರೆಗೆ ತನ್ನ ಪಳೆಯುಳಿಕೆ ಇಂಧನ ಸಬ್ಸಿಡಿಗಳನ್ನು ಶೇ.76ರಷ್ಟು ಕಡಿಮೆ ಮಾಡುವುದರ ಜೊತೆಗೆ ಶುದ್ಧ ಶಕ್ತಿಗೆ ನೀಡಬೇಕಿರುವ ಬೆಂಬಲವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ವರದಿ ಹೇಳಿದೆ.

ಆದರೂ, ಇತ್ತೀಚೆಗೆ ಮುಕ್ತಾಯಗೊಂಡಿರುವ ಸಭೆಗಳು ಹೆಚ್ಚಿನ ಭರವಸೆಯನ್ನು ನೀಡುವುದಿಲ್ಲ. ಉದಾಹರಣೆಗೆ, ಚೆನ್ನೈನಲ್ಲಿ ಜುಲೈ 28ರಂದು ಮುಕ್ತಾಯಗೊಂಡ ಜಿ20 ಪರಿಸರ ಮತ್ತು ಹವಾಮಾನ ಸಚಿವರ ಸಭೆ ಮಾಲಿನ್ಯ ಮತ್ತಿತರ ನಿರ್ಣಾಯಕ ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಗಲಿಲ್ಲ. ನವೀಕರಿಸಬಹುದಾದ ಇಂಧನದ ಮಟ್ಟವನ್ನು ವೇಗಗೊಳಿಸುವುದು, ನವೀಕರಿಸಬಹುದಾದ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವುದು ಮತ್ತು ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ಇಳಿಸುವುದು ಸೇರಿದಂತೆ ಶುದ್ಧ ಇಂಧನ ಪರಿವರ್ತನೆಗಳ ಪ್ರಾಮುಖ್ಯತೆಯ ಕುರಿತು ಚರ್ಚೆಗಳು ನಡೆದವಾದರೂ, ಇಂಧನ ಸಮಸ್ಯೆಗಳ ವಿಚಾರವಾಗಿ ಚರ್ಚಿಸಲು ಸದಸ್ಯರಲ್ಲಿ ಭಿನ್ನಮತಗಳು ಕಂಡುಬಂದವು.

2025ರ ವೇಳೆಗೆ ಪಳೆಯುಳಿಕೆ ಇಂಧನ ಸಬ್ಸಿಡಿಗಳನ್ನು ಹಂತಹಂತವಾಗಿ ತೆಗೆದುಹಾಕುವ ಜಿ7 ಗುರಿ ಮತ್ತು 2030ರ ಮೊದಲು ಸುಧಾರಣೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ನಾಯಕತ್ವವನ್ನು ಪ್ರದರ್ಶಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಪಳೆಯುಳಿಕೆ ಇಂಧನ ಸಬ್ಸಿಡಿ ಸುಧಾರಣೆಗಾಗಿ ಜಿ20 ಸದಸ್ಯರು ನಿರ್ದಿಷ್ಟ ಗಡುವು ಅಳವಡಿಸಿಕೊಳ್ಳುವುದು ಅಗತ್ಯವೆಂದು ಐಐಎಸ್‌ಡಿ ಶಿಫಾರಸು ಮಾಡಿದೆ.

2014 ಮತ್ತು 2022ರ ನಡುವೆ ಪಳೆಯುಳಿಕೆ ಇಂಧನ ಸಬ್ಸಿಡಿಗಳ ಮೌಲ್ಯವನ್ನು ಶೇ.76ರಷ್ಟು ಕಡಿಮೆಗೊಳಿಸಿದ್ದರಿಂದ ಭಾರತ ಸುಧಾರಣಾ ಅನುಷ್ಠಾನದಲ್ಲಿ ಬಲವಾದ ಹೆಜ್ಜೆಯಿಟ್ಟಿರುವುದನ್ನು ಐಐಎಸ್‌ಡಿ ಒಂದು ಭರವಸೆ ಎಂಬಂತೆ ತೆಗೆದುಕೊಂಡಿದೆ. ಸೆಪ್ಟಂಬರ್ 9 ಮತ್ತು 10ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ವಿಶ್ವ ನಾಯಕರ ಶೃಂಗಸಭೆಯ ಮೇಲೆ ಈಗ ಎಲ್ಲರ ಕಣ್ಣುಗಳಿವೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆಥಿರಾ ಪೆರಿಂಚೇರಿ

contributor

Similar News