ಗ್ಯಾರಂಟಿ ಕೊಡುತ್ತಲೇ ಜನರ ಜೇಬಿಗೆ ಕತ್ತರಿ !

Update: 2024-07-15 12:13 GMT

ಬೆಂಗಳೂರು: 'ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ' ಎಂಬ ಗಾದೆಮಾತು ಈ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸರಿಯಾಗಿ ಹೊಂದಿಕೆಯಾಗುವ ಹಾಗೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಾಕ್ಷಣ ರಾಜ್ಯಕ್ಕೆ ತಮ್ಮ ಐದು ಗ್ಯಾರಂಟಿಗಳ ಕೊಡುಗೆಗಳನ್ನು ನೀಡಿತು. ಬಹಳ ಮಟ್ಟಿಗೆ ಮಟ್ಟಿಗೆ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರು - ವಿಶೇಷತಃ ಬಡವರು, ಮಹಿಳೆಯರು, ಯುವಜನ - ಈ ಗ್ಯಾರಂಟಿಗಳ ಫಲಾನುಭವಿಗಳಾಗಿ ಪ್ರಯೋಜನ ಪಡೆಯುತ್ತಿದ್ದಾರೆ.

ಆದರೆ, ಒಂದು ಕಡೆ ಗ್ಯಾರಂಟಿ ಕೊಡುತ್ತಲೇ ಇನ್ನೊಂದು ಕಡೆಯಿಂದ ರಾಜ್ಯ ಸರಕಾರ ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಮೊದಲು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತದೆ. ಅದರ, ಬೆನ್ನಲ್ಲೆ ರಾಜ್ಯ ಸರಕಾರ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಸುತ್ತದೆ. ಈಗ, 295 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಪ್ರಯಾಣ ದರವನ್ನು ಶೇ.15ರಿಂದ 20ರಷ್ಟು ಏರಿಕೆ ಮಾಡಲು ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ.

"ಶಕ್ತಿ ಯೋಜನೆ ಇನ್ನೂ 10 ವರ್ಷಗಳ ಕಾಲ ಇರಲಿದೆ" ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕಳೆದ ವರ್ಷ ಆಗಸ್ಟ್ ನಲ್ಲಿ ಹೇಳಿದ್ದರು. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ರೀತಿಯ ನಷ್ಟ ಆಗಿಲ್ಲ ಎಂದೂ ಹೇಳಿದ್ದರು. ಆದರೆ, ಈಗ ನಡೆಯುತ್ತಿರುವುದು ಮಾತ್ರ ಅದಕ್ಕೆ ತದ್ವಿರುದ್ಧವಾಗಿದೆ.

ರಾಜ್ಯ ಸರಕಾರದ ಹಾಲಿನ ಬೆಲೆ ಏರಿಕೆ ತೀರ್ಮಾನಕ್ಕೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಹಾಲಿನ ಉತ್ಪಾದನೆ ಹೆಚ್ಚಾಗಿದ್ದು ‘ನಂದಿನಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂ ದರ ನಿಗದಿಪಡಿಸಿದೆ ಅಷ್ಟೇ ಹೊರತು ಯಾವುದೇ ಬೆಲೆಯನ್ನು ಏರಿಕೆ ಮಾಡಿಲ್ಲ’, ಗುಜರಾತ್‍ನಲ್ಲಿ , ಮಹಾರಾಷ್ಟ್ರ , ದಿಲ್ಲಿಗೆ ಹೋಲಿಸಿದರೂ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಎಂದು ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು.

ಈಗ, ಬಸ್ ಟಿಕೆಟ್ ದರಗಳನ್ನು ಏರಿಸುವ ಕುರಿತು ಮಾಧ್ಯಮಗಳಲ್ಲಿ ಸುದ್ದಿಯನ್ನು ಕಂಡು ಜನಸಾಮಾನ್ಯರು ಹೌಹಾರಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ನಮಗೆ 295 ಕೋಟಿ ರೂಪಾಯಿ ನಷ್ಟವಾಗಿದೆ. ''ಇಂಧನ ದರ, ವಾಹನ ಬಿಡಿ ಭಾಗಗಳ ಬೆಲೆ ಏರಿಕೆ ಹಾಗೂ ಸಿಬ್ಬಂದಿ ವೇತನ ವೆಚ್ಚದಿಂದ ಕೆಎಸ್‌ಆರ್‌ಟಿಸಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು ಟಿಕೆಟ್‌ ದರ ಏರಿಕೆ ಅನಿವಾರ್ಯ'' ಎಂದು KSRTC ಅಧ್ಯಕ್ಷ, ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಹೇಳಿದ್ದಾರೆ.

ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಸ್‌ ಪ್ರಯಾಣ ದರ ಹೆಚ್ಚಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ಶ್ರೀನಿವಾಸ್ ಅವರು ತಿಳಿಸಿದ್ದಾರೆ. "ಪ್ರಯಾಣ ದರ ಹೆಚ್ಚಿಸದಿದ್ದರೆ KSRTCಗೆ ಉಳಿಗಾಲವಿಲ್ಲ" ಎಂದೂ ಶ್ರೀನಿವಾಸ್ ಹೇಳಿದ್ದಾರೆ.

"ಕಳೆದ ಬಾರಿ 2019 ರಲ್ಲಿ ಬಸ್ ಟಿಕೆಟ್ ದರ ಏರಿಕೆಯಾಗಿದೆ. ನಂತರ ಯಾವುದೇ ಹೆಚ್ಚಳವಿಲ್ಲದೆ ಐದು ವರ್ಷಗಳು ಕಳೆದಿವೆ. ತೈಲ ಬೆಲೆ ಏರಿಕೆಯಿಂದಾಗಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ. ಸಂಬಳ ಹೆಚ್ಚಿಸಲು ಮತ್ತು ನೌಕರರಿಗೆ ಅನುಕೂಲಗಳನ್ನು ಒದಗಿಸಲು ದರಗಳನ್ನು ಸರಿಹೊಂದಿಸುವುದು ಅಗತ್ಯವಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (NWKRTC) ಅಧ್ಯಕ್ಷ, ಶಾಸಕ ರಾಜು ಕಾಗೆ ಅವರು " ಶಕ್ತಿ ಯೋಜನೆಯಿಂದ ನಿಗಮಕ್ಕೆ ಬಹಳ ನಷ್ಟ ಉಂಟಾಗಿದೆ" ಎಂದು ಹೇಳಿದ್ದಾರೆ. ಅಲ್ಲಿಗೆ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ದುಡ್ಡು ಹರಿದು ಬರಲಿದೆ, ಅವು ಲಾಭದ ದಾರಿ ಹಿಡಿಯಲಿವೆ ಎಂಬ ನಿರೀಕ್ಷೆ ಸುಳ್ಳಾಗಿದೆ.

"ಕಳೆದ 10 ವರ್ಷಗಳಿಂದ ನಾವು ಬಸ್ ಪ್ರಯಾಣ ದರವನ್ನು ಹೆಚ್ಚಿಸಿಲ್ಲ; ಇಲಾಖೆ ನಷ್ಟದಲ್ಲಿದೆ, ಆದರೆ ನಾವು ಹೇಗೋ ನಿರ್ವಹಿಸುತ್ತಿದ್ದೇವೆ" ಎಂದು ರಾಜು ಕಾಗೆ ಅವರು ಹೇಳಿದ್ದಾರೆ.

ಬಸ್‌ ಟಿಕೆಟ್ ದರ ಏರಿಕೆ ವಿಚಾರ ವರದಿಯಾಗುತ್ತಲೇ ಅದಕ್ಕೆ ವಿರೋಧ ವ್ಯಕ್ತವಾಗಿದೆ. KSRTC ಅಧ್ಯಕ್ಷ ಶ್ರೀನಿವಾಸ್ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ದರ ಏರಿಕೆ ವಿಚಾರವಾಗಿ ಸ್ಪಷ್ಟನೆ ನೀಡಲು ನಿರಾಕರಿಸಿರುವ ರಾಮಲಿಂಗಾರೆಡ್ಡಿ ಅವರು, ದರ ಏರಿಕೆ ಬಗ್ಗೆ ಗುಬ್ಬಿ ಶ್ರೀನಿವಾಸ್‌ರನ್ನೇ ಕೇಳಿಕೊಳ್ಳಿ ಎಂದು ಹೇಳಿದ್ದಾರೆ.

ಆ ಕಡೆ ಗ್ಯಾರಂಟಿ ಕೊಡುತ್ತಲೇ ಈ ಕಡೆ ದರ ಏರಿಕೆ ಮಾಡಿ ಸಿದ್ದರಾಮಯ್ಯ ಸರಕಾರ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News