ಒಳಮೀಸಲಾತಿ ಸುಪ್ರೀಂ ತೀರ್ಪು: ಇನ್ನು ನೆಪವೊಡ್ಡದೆ ನ್ಯಾಯ ದಕ್ಕಲಿ!

ಈಗ ಪರಿಶಿಷ್ಟ ಜಾತಿಗಳೊಳಗೆ ವರ್ಗೀಕರಣ ಮಾಡಿ ಅತಿ ಹಿಂದುಳಿದವರಿಗೆ ಆದ್ಯತೆಯ ಮೀಸಲಾತಿ ಕೊಡುವುದಕ್ಕೆ ಯಾವ ಸಾಂವಿಧಾನಿಕ ಅಡ್ಡಿಯೂ ಇಲ್ಲ. ಹೀಗಾಗಿ ಪರಿಶಿಷ್ಟ ಸಮುದಾಯಗಳೊಳಗಿನ ಈವರೆಗಿನ ಅಧಿಕ ಫಲಾನುಭವಿಗಳು ಇದುವರೆಗೆ ವಂಚನೆಗೊಳಗಾದ ಪರಿಶಿಷ್ಟ ಬಂಧುಗಳೊಂದಿಗೆ ಹಂಚಿಕೊಂಡು ತಿನ್ನುವ ಪ್ರಜಾತಾಂತ್ರಿಕ ಪ್ರಬುದ್ಧತೆಯನ್ನು ಮೆರೆಯಬೇಕಿದೆ. ಇಲ್ಲದಿದ್ದರೆ ಈ ಭೇದವನ್ನು ಶೋಷಕ ಮನುವಾದಿ ಶಕ್ತಿಗಳು ಪರಿಶಿಷ್ಟರ ನಡುವೆ ದಾಯಾದಿ ಕಲಹವನ್ನಾಗಿ ಮಾರ್ಪಡಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತವೆ. ಈವರೆಗೆ ಆಗುತ್ತಾ ಬಂದಿರುವುದು ಇದೇ. ಈಗಲಾದರೂ ಅದಕ್ಕೆ ಆಸ್ಪದಕೊಡದಂತೆ ನೋಡಿಕೊಳ್ಳಬೇಕಿದೆ.

Update: 2024-08-07 05:30 GMT
Editor : Musaveer | Byline : ಶಿವಸುಂದರ್

ದಶಕಗಳಿಂದ ನ್ಯಾಯಬದ್ಧ ಪಾಲು ಕೇಳುತ್ತಿದ್ದ ಪರಿಶಿಷ್ಟರೊಳಗಿನ ಪರಿಶಿಷ್ಟರಿಗೆ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ ನ್ಯಾಯ ಒದಗಿಸಿದೆ. ಪರಿಶಿಷ್ಟರ ಮೀಸಲಾತಿಯೊಳಗೆ ವರ್ಗೀಕರಣವಾದ ಜಾತಿಗಳಲ್ಲಿ ಉಳಿದ ಪರಿಶಿಷ್ಟ ಜಾತಿಗಳಿಗಿಂತ ಹಿಂದುಳಿದ ಜಾತಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಆ ಜಾತಿಗಳನ್ನು ಒಳವರ್ಗೀಕರಣ ಮಾಡಿ ಮೀಸಲಾತಿ ಒದಗಿಸುವ ಕ್ರಮ ಮತ್ತು ಅದನ್ನು ಮಾಡುವ ರಾಜ್ಯ ಸರಕಾರಗಳ ಅಧಿಕಾರ ಎರಡನ್ನೂ ಕೂಡ ಸಾಂವಿಧಾನಿಕ ಪೀಠ 6:1ರ ಬಹುಮತದಲ್ಲಿ ಎತ್ತಿ ಹಿಡಿದಿದೆ. ಹೀಗಾಗಿ ಈಗಲಾದರೂ ಪರಿಶಿಷ್ಟ ಜಾತಿಗಳೊಳಗೆ ಇನ್ನಷ್ಟು ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯವನ್ನು ಆದ್ಯತೆಯ ಮೇಲೆ ಹಾಗೂ ಪ್ರತ್ಯೇಕವಾಗಿ ಒದಗಿಸುವ ಸಾಮಾಜಿಕ ನ್ಯಾಯದ ಕ್ರಮಗಳಿಗೆ ಈಗ ಯಾವುದೇ ತಡೆಯಿಲ್ಲವಾಗಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನು ಯಾವುದೇ ನೆಪವೊಡ್ಡದೆ ಈ ಪರಿಶಿಷ್ಟರ ಮೀಸಲಾತಿಯ ವರ್ಗೀಕರಣಕ್ಕೆ ಮುಂದಾಗಬೇಕಿದೆ.

ಆದರೆ ಮೋದಿ ಸರಕಾರಕ್ಕಾಗಲೀ ಅಥವಾ ಉಳಿದ ವಿರೋಧ ಪಕ್ಷಗಳಿಗಾಗಲೀ ಅಂಥ ಬದ್ಧತೆ ಇದೆಯೇ ಎಂಬ ಪ್ರಶ್ನೆ ಈ ತೀರ್ಪು ಬಂದ ನಂತರದ ಬೆಳವಣಿಗೆಗಳಲ್ಲಿ ಮತ್ತೊಮ್ಮೆ ವ್ಯಕ್ತವಾಗುತ್ತಿದೆ.

ಉದಾಹರಣೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಗೂ ಇನ್ನಿತರ ಕೆಲವು ವಿರೋಧ ಪಕ್ಷಗಳ ರಾಷ್ಟ್ರೀಯ ನಾಯಕತ್ವ, ತೀರ್ಪು ಬಂದು ಇಷ್ಟು ದಿನಗಳಾದರೂ ಈವರೆಗೆ ತೀರ್ಪಿನ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಈವರೆಗೆ ಹೇಳಿಕೆ ನೀಡಿರುವ ರಾಷ್ಟ್ರೀಯ ಪಕ್ಷಗಳಲ್ಲಿ ಬಿಎಸ್‌ಪಿ ಪಕ್ಷ ತೀರ್ಪನ್ನು ವಿರೋಧಿಸಿದೆ. ಸಿಪಿಎಂ ಪಕ್ಷ ಸ್ವಾಗತಿಸಿದೆ. ಆಳುವ ಎನ್‌ಡಿಎ ಒಕ್ಕೂಟದ ಮಿತ್ರ ಪಕ್ಷವಾದ ಎಲ್‌ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ತೀರ್ಪು ವಿರೋಧಿಸಿ ಮರುಪರಿಶೀಲನಾ ಅರ್ಜಿ ಹಾಕುವುದಾಗಿ ಘೋಷಿಸಿದ್ದರೆ, ತೆಲುಗು ದೇಶಂ ಮತ್ತು ಜೆಡಿಯು ಪಕ್ಷಗಳು ಸ್ವಾಗತಿಸಿವೆ. ಮತ್ತೊಂದೆಡೆ ‘ಇಂಡಿಯಾ’ ಒಕ್ಕೂಟದ ಆರ್‌ಜೆಡಿ ಪಕ್ಷ ತೀರ್ಪನ್ನು ವಿರೋಧಿಸಿದ್ದರೆ, ಡಿಎಂಕೆ ಸ್ವಾಗತಿಸಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ಇದರ ಬಗ್ಗೆ ಈವರೆಗೆ ಯಾವುದೇ ಅಭಿಪ್ರಾಯ ನೀಡದಿದ್ದರೂ ಕರ್ನಾಟಕದ ಹಾಗೂ ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ರೇವಂತ್ ರೆಡ್ಡಿಯವರು ಒಳಮೀಸಲಾತಿಯನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ತ್ವರಿತವಾಗಿ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ.

ಅದೇ ರೀತಿ ಸಮಾಜದಲ್ಲಿ ಈವರೆಗೆ ಮೀಸಲಾತಿಯ ಸೌಲಭ್ಯದಿಂದ ಹೆಚ್ಚಿನ ವಂಚನೆಗೆ ಗುರಿಯಾಗುತ್ತಿದ್ದ ಪರಿಶಿಷ್ಟರೊಳಗಿನ ಅತಿ ಪರಿಶಿಷ್ಟರು ಸುಪ್ರೀಂ ತೀರ್ಪಿನ ಬಗ್ಗೆ ಅಪಾರ ಸಂತಸ ಹಾಗೂ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಿದ್ದರೆ, ಒಳಮೀಸಲಾತಿಯ ಬಗ್ಗೆ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸಿಕೊಂಡು ಬಂದಿರುವ ಪರಿಶಿಷ್ಟ ಮೀಸಲಾತಿಯ ಪ್ರಧಾನ ಫಲಾನುಭವಿ ಶಕ್ತಿಗಳು ತೀರ್ಪಿನಲ್ಲಿ ಹಲವಾರು ಐಬುಗಳನ್ನು ಕಾಣುತ್ತಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕೆಲವು ಗೊಂದಲಗಳಿಗೆ ಸುಪ್ರೀಂ ತೀರ್ಪಿನಲ್ಲೇ ಕೆಲವು ನ್ಯಾಯಾಧೀಶರು ಅವಕಾಶ ಕೊಟ್ಟಿದ್ದರೂ, ಒಟ್ಟಾರೆಯಾಗಿ ತೀರ್ಪು ಒಳಮೀಸಲಾತಿ ಒದಗಿಸುವುದಕ್ಕೆ ಬಲವಾದ ಸಾಂವಿಧಾನಿಕ ಬೆಂಬಲವಿರುವುದನ್ನು ಸ್ಪಷ್ಟಪಡಿಸಿದೆ.

ಆದ್ದರಿಂದ ಒಳಮೀಸಲಾತಿಯ ತೀರ್ಪಿನ ಬಗ್ಗೆ ಅನಗತ್ಯವಾಗಿ ಎದ್ದಿರುವ ಕೆಲವು ಗೊಂದಲಗಳನ್ನು ಹಾಗೂ ಉದ್ದೇಶಪೂರ್ವಕವಾಗಿ ತೀರ್ಪಿನ ಪ್ರಮುಖ ಆಶಯಗಳನ್ನು ಹಿಮ್ಮೆಟ್ಟಿಸಲು ಹುಟ್ಟಿಸಲಾಗುತ್ತಿರುವ ಗೊಂದಲಗಳ ಬಗ್ಗೆಯೂ ಕೆಲವು ಸ್ಪಷ್ಟತೆಗಳನ್ನು ಪಡೆದುಕೊಳ್ಳುವ ಅಗತ್ಯವಿದೆ.

ಪರಿಶಿಷ್ಟರ ಒಳಮೀಸಲಾತಿ ಸಾಂವಿಧಾನಿಕ ಮತ್ತು ನ್ಯಾಯಬದ್ಧ

ಈಗಾಗಲೇ ಅಸ್ಪಶ್ಯತೆಯ ಹಿನ್ನೆಲೆಯ ಕಾರಣಕ್ಕಾಗಿ ಅತಿ ಹಿಂದುಳಿದ ಪರಿಶಿಷ್ಟ ವರ್ಗ ಎಂದು ವರ್ಗೀಕರಣವಾದ ಜಾತಿಗಳನ್ನು ಮತ್ತೆ ಅದರೊಳಗೆ ಅತಿ ಹಿಂದುಳಿದ ಎಂದು ಉಪವರ್ಗೀಕರಣ ಮಾಡುವುದಕ್ಕೆ ಸಂವಿಧಾನದ ಆರ್ಟಿಕಲ್ 14,15,16 ಮತ್ತು 341 ಅವಕಾಶ ಮಾಡಿಕೊಡುವುದಿಲ್ಲ ಎಂಬುದು ಇ.ವಿ. ಚಿನ್ನಯ್ಯ ಪ್ರಕರಣದಲ್ಲಿ ಒಳಮೀಸಲಾತಿಯನ್ನು ನಿರಾಕರಿಸಿದ್ದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಮುಂದಿಟ್ಟಿದ್ದ ಸಾಂವಿಧಾನಿಕ ವ್ಯಾಖ್ಯಾನ. ಅದೇ ವಾದವನ್ನೇ ಪರಿಶಿಷ್ಟರ ಮೀಸಲಾತಿಯ ಪ್ರಧಾನ ಫಲಾನುಭವಿಗಳು ಈವರೆಗೂ ಮಾಡಿಕೊಂಡು ಬಂದಿರುವ ವ್ಯಾಖ್ಯಾನ. ಚಿರಾಗ್ ಪಾಸ್ವಾನ್ ಅವರೂ ಸಹ ಅಸ್ಪಶ್ಯತೆಯ ಮಾನದಂಡದ ಮೇಲೆ ಪರಿಶಿಷ್ಟರ ವರ್ಗಕ್ಕೆ ಸೇರಿದ ಮೇಲೆ ಅದರ ಮತ್ತಷ್ಟು ಮರು ವರ್ಗೀಕರಣ ಆರ್ಟಿಕಲ್ 15, 16, 341 ಹಾಗೂ ಇಂದ್ರಾ ಸಹಾನಿ ಪ್ರಕರಣದಲ್ಲಿ ಒಂಭತ್ತು ನ್ಯಾಯಾಧೀಶರ ತೀರ್ಪಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ವಿರೋಧ ಎಂದು ತೀರ್ಪಿನ ನಂತರವೂ ಹೇಳುತ್ತಿದ್ದಾರೆ. ಹಾಗೆಯೇ ಬಿಎಸ್‌ಪಿಯ ಮಾಯಾವತಿಯವರ ವಾದವೂ ಇದೇ ಆಗಿದೆ.

ಆದರೆ ಹಾಲಿ ಏಳು ಜನರ ಸಾಂವಿಧಾನಿಕ ಪೀಠದಲ್ಲಿ ಆರು ನ್ಯಾಯಾಧೀಶರು ಸರ್ವ ಸಮ್ಮತಿಯೊಂದಿಗೆ ಮೇಲಿನ ವಾದಗಳನ್ನು ನಿರಾಕರಿಸುತ್ತಾರೆ. ಯಾವ ರೀತಿ ಸಮಾಜದಲ್ಲಿ ಪರಿಶಿಷ್ಟ ಜಾತಿಗಳನ್ನೂ ಒಳಗೊಂಡಂತೆ ಇತರರಿಗಿಂತ ಅತ್ಯಂತ ಹಿಂದುಳಿದವರನ್ನು ಗುರುತಿಸಿ ಸೂಕ್ತ ಅವಕಾಶ ಹಾಗೂ ಪ್ರಾತಿನಿಧ್ಯವನ್ನು ಒದಗಿಸಿ ಕೊಡಲು ಸಂವಿಧಾನದ 15 (4) ಹಾಗೂ 16 (4) ಅವಕಾಶ ಕಲ್ಪಿಸಿಕೊಡುವುದೋ ಅದೇ ರೀತಿ ಪರಿಶಿಷ್ಟರೊಳಗಿನ ಅತ್ಯಂತ ಹಿಂದುಳಿದವರನ್ನು ಗುರುತಿಸಲು ಸಹ ಇದೇ ಕಲಮುಗಳು ಅವಕಾಶ ಮಾಡಿಕೊಡುತ್ತದೆ ಎಂಬ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ರ ತೀರ್ಪನ್ನು ನ್ಯಾ. ಬೇಲಾ ತ್ರಿವೇದಿಯವರನ್ನು ಹೊರತುಪಡಿಸಿ ಉಳಿದ ಐವರು ನ್ಯಾಯಾಧೀಶರೂ ಅನುಮೋದಿಸುತ್ತಾರೆ.

ಪರಿಶಿಷ್ಟ ಜಾತಿ ಎಂಬ ವರ್ಗೀಕರಣಕ್ಕೆ ಸೇರಿಸಲ್ಪಟ್ಟ ಜಾತಿಗಳು ಸಮಾಜದ ಇತರ ಜಾತಿಗಳಿಗೆ ಹೋಲಿಸಿದಲ್ಲಿ ಸಮಾನವಾದ ಶೋಷಣೆ, ವಂಚನೆ ಮತ್ತು ಪ್ರಾತಿನಿಧ್ಯದ ಕೊರತೆಗೆ ಗುರಿಯಾದದ್ದೇ ಮಾನದಂಡವಾಗಿದ್ದರೂ, ಅದರ ಅರ್ಥ ಪರಿಶಿಷ್ಟವರ್ಗ ಎಂದು ಸೇರಿಸಲ್ಪಟ್ಟ ಜಾತಿಗಳು, ಬುಡಕಟ್ಟುಗಳು ಮತ್ತು ವರ್ಗಗಳು ತಮ್ಮೊಳಗೆ ಸಮಾನವಾದ ಹಿಂದುಳಿದಿರುವಿಕೆಯನ್ನು ಅನುಭವಿಸುತ್ತಿದ್ದವು ಎಂದು ಅರ್ಥವಲ್ಲ. ಏಕೆಂದರೆ ಪರಿಶಿಷ್ಟ ವರ್ಗೀಕರಣಕ್ಕೆ ಅಸ್ಪಶ್ಯತೆ ಮಾತ್ರ ಏಕೈಕ ಮಾನದಂಡವಾಗಿರಲಿಲ್ಲ. ಹೀಗಾಗಿ ಪರಿಶಿಷ್ಟ ವರ್ಗ ಎಂಬುದು ಸರ್ವಸಮವಾಗಿರುವ ಘಟಕಗಳ ಗುಂಪಲ್ಲ. ಆ ಗುಂಪಿನೊಳಗೆ ಏರುಪೇರುಗಳಿರುವುದು ವಾಸ್ತವ. ಆದ್ದರಿಂದ ಏಕರೂಪಿಯಾಗಿರದ ಗುಂಪಿನ ಘಟಕ ಜಾತಿಗಳನ್ನು ಏಕರೂಪಿಯೆಂದು ಪರಿಗಣಿಸುವುದು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರೋಧವಾಗಿರುತ್ತದೆ. 16 (4) ಬಗ್ಗೆ ಇಂದ್ರಾ ಸಹಾನಿ ಪ್ರಕರಣದಲ್ಲಿ ಒಂಭತ್ತು ನ್ಯಾಯಾಧೀಶರ ವ್ಯಾಖ್ಯಾನ ಪರಿಶಿಷ್ಟರೊಳಗಿನ ವರ್ಗೀಕರಣಕ್ಕೆ ಅನ್ವಯವಾಗದು ಎಂಬ ವ್ಯಾಖ್ಯಾನಕ್ಕೆ ಯಾವುದೇ ಬುನಾದಿಯಿಲ್ಲ ಎಂದು ಬಹುಮತದ ತೀರ್ಪು ಘೋಷಿಸಿದೆ.

ಅದೇ ರೀತಿ ಸಂವಿಧಾನದ ಆರ್ಟಿಕಲ್ 341(1)ರ ಪ್ರಕಾರ ರಾಜ್ಯಪಾಲರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಆಯಾ ರಾಜ್ಯಗಳ ಪರಿಶಿಷ್ಟರ ಪಟ್ಟಿಯನ್ನು ಘೋಷಿಸುವ ಅಧಿಕಾರ ಪಡೆದಿರುತ್ತಾರೆ. ಆರ್ಟಿಕಲ್ 341 (2)ರ ಪ್ರಕಾರ ಆ ಪಟ್ಟಿ ಸೇರ್ಪಡೆ ಮಾಡುವುದಾಗಲೀ ಮತ್ತು ಪಟ್ಟಿಯಿಂದ ಹೊರತೆಗೆಯುವುದಾಗಲೀ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರವಿದೆ. ಆದ್ದರಿಂದ ರಾಜ್ಯಗಳಿಗೆ ಒಳವರ್ಗೀಕರಣದ ಅಧಿಕಾರವಿಲ್ಲ ಎಂಬುದು ಚಿನ್ನಯ ತೀರ್ಪಿನ ಹಾಗೂ ಒಳಮೀಸಲಾತಿ ವಿರೋಧಿಗಳ ಮತ್ತೊಂದು ವಾದವಾಗಿತ್ತು. ಆದರೆ ಈ ಸಂವಿಧಾನ ಪೀಠವು ಆರ್ಟಿಕಲ್ 341 (1) ರಾಷ್ಟ್ರಪತಿಗಳಿಗೆ ಪರಿಶಿಷ್ಟರನ್ನು ಗುರುತಿಸುವ ಅಧಿಕಾರಕೊಡುತ್ತದೆ ಎಂದು ಮಾತ್ರ ಹೇಳುತ್ತದೆಯೇ ಹೊರತು ಅವುಗಳಲ್ಲಿ ಅತ್ಯಂತ ಹಿಂದುಳಿದವರನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ನಿರಾಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೀಗಾಗಿ ಈಗ ಪರಿಶಿಷ್ಟ ಜಾತಿಗಳೊಳಗೆ ವರ್ಗೀಕರಣ ಮಾಡಿ ಅತಿ ಹಿಂದುಳಿದವರಿಗೆ ಆದ್ಯತೆಯ ಮೀಸಲಾತಿ ಕೊಡುವುದಕ್ಕೆ ಯಾವ ಸಾಂವಿಧಾನಿಕ ಅಡ್ಡಿಯೂ ಇಲ್ಲ. ಹೀಗಾಗಿ ಪರಿಶಿಷ್ಟ ಸಮುದಾಯಗಳೊಳಗಿನ ಈವರೆಗಿನ ಅಧಿಕ ಫಲಾನುಭವಿಗಳು ಇದುವರೆಗೆ ವಂಚನೆಗೊಳಗಾದ ಪರಿಶಿಷ್ಟ ಬಂಧುಗಳೊಂದಿಗೆ ಹಂಚಿಕೊಂಡು ತಿನ್ನುವ ಪ್ರಜಾತಾಂತ್ರಿಕ ಪ್ರಬುದ್ಧತೆಯನ್ನು ಮೆರೆಯಬೇಕಿದೆ. ಇಲ್ಲದಿದ್ದರೆ ಈ ಭೇದವನ್ನು ಶೋಷಕ ಮನುವಾದಿ ಶಕ್ತಿಗಳು ಪರಿಶಿಷ್ಟರ ನಡುವೆ ದಾಯಾದಿ ಕಲಹವನ್ನಾಗಿ ಮಾರ್ಪಡಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತವೆ. ಈವರೆಗೆ ಆಗುತ್ತಾ ಬಂದಿರುವುದು ಇದೇ. ಈಗಲಾದರೂ ಅದಕ್ಕೆ ಆಸ್ಪದಕೊಡದಂತೆ ನೋಡಿಕೊಳ್ಳಬೇಕಿದೆ.

ಶೇ. 50ರ ಮೇಲ್ಮಿತಿ ರದ್ದಾಗಲಿ, ಶೇ.17 ಮೀಸಲು

ರಕ್ಷಣೆಯಾಗಲಿ, ಖಾಸಗಿಯೂ ಮೀಸಲಾಗಲಿ

ಅಂಥ ಒಗ್ಗಟ್ಟಿನ ಆಧಾರದಲ್ಲಿಯೇ ಪರಿಶಿಷ್ಟರು ಒಟ್ಟಾಗಿಯೇ ಸಮಾಜದಲ್ಲಿ ಮತ್ತು ಸರಕಾರದಲ್ಲಿ ತಮ್ಮ ನೈಜ ಪಾಲಿನ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಹೋರಾಡಬೇಕಿದೆ.

ಅದಕ್ಕಾಗಿ ಮೊದಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗದ ವರದಿಯ ಮೇರೆಗೆ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕದ ಪರಿಶಿಷ್ಟ ಜಾತಿಗಳನ್ನು ಶೇ. 15ರಿಂದ ಶೇ. 17ಕ್ಕೆ ಮಾಡಿದ ಏರಿಕೆಯನ್ನೂ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಮಾಡಿದ ಏರಿಕೆಯನ್ನು ಸಾಂವಿಧಾನಿಕವಾಗಿ ಸಿಂಧುಗೊಳಿಸಲು ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಕರ್ನಾಟಕದ ಈ ಕಾಯ್ದೆಯನ್ನು 9ನೇ ಶೆಡ್ಯೂಲಿನಲ್ಲಿ ಸೇರಿಸಲು ಕ್ರಮತೆಗೆದುಕೊಳ್ಳಬೇಕೆಂದು ಒಕ್ಕೊರಲಿನಿಂದ ಹೋರಾಡಬೇಕಿದೆ. ಹಾಗಾದಲ್ಲಿ ಎಲ್ಲಾ ದಲಿತರ ಅಸಲಿ ಪಾಲು ಹೆಚ್ಚುತ್ತದೆ. ಇದಾಗದಂತೆ ತಡೆಯುವುದಕ್ಕಾಗಿಯೇ ಶೋಷಕ ಶಕ್ತಿಗಳು ಮತ್ತು ಬಿಜೆಪಿಯಂಥ ಮನುವಾದಿ ಪಕ್ಷಗಳು ಪರಿಶಿಷ್ಟರೊಳಗೇ ದಾಯಾದಿ ಕಲಹ ಹಚ್ಚಲು ಯತ್ನಿಸುತ್ತವೆೆ. ಮೋದಿ ಸರಕಾರಕ್ಕೆ ಮತ್ತು ಬಿಜೆಪಿಗೆ ಕರ್ನಾಟಕದ ಕಾಯ್ದೆಗೆ 9ನೇ ಶೆಡ್ಯೂಲಿನ ರಕ್ಷಣೆ ಒದಗಿಸದೆ ಒಳಮೀಸಲಾತಿ ಪರವಾಗಿ ಮಾತಾಡುವ ಯಾವ ನೈತಿಕ ಅರ್ಹತೆಯೂ ಇಲ್ಲ.

ಅಷ್ಟು ಮಾತ್ರವಲ್ಲ. ಇಂದ್ರಾ ಸಹಾನಿ ಪ್ರಕರಣದಿಂದಲೂ ದಲಿತ ಹಾಗೂ ಒಬಿಸಿ ಮೀಸಲಾತಿಯ ಮೇಲ್ಮಿತಿಯನ್ನು ಶೇ. 50 ದಾಟುವಂತಿಲ್ಲ ಎಂಬ ಅವೈಜ್ಞಾನಿಕ ಮಿತಿಯನ್ನು ನ್ಯಾಯಾಂಗ ಶೋಷಿತ ಸಮಾಜದ ಮೇಲೆ ಹೇರಿದೆ. ಇದರ ಹಿಂದೆ ಸಾಮರ್ಥ್ಯ ಮತ್ತು ಸಾಮಾಜಿಕ ಸಮಾನತೆಯ ನಡುವೆ ಸಮತೋಲನ ಕಾದುಕೊಳ್ಳಬೇಕೆಂಬ ಬ್ರಾಹ್ಮಣಶಾಹಿ ಪೂರ್ವಗ್ರಹಗಳಿವೆ. ಆದರೆ ಶೋಷಕ ಜಾತಿಗಳ ಮಧ್ಯಮವರ್ಗದವರಿಗೆ ಶೇ.10ರಷ್ಟು ಇಡಬ್ಲ್ಯುಎಸ್ ಮೀಸಲಾತಿಯನ್ನು ಒದಗಿಸುವಲ್ಲಿ ಮಾತ್ರ ಈ ಮೇಲ್ಮಿತಿ ಅಡ್ಡಿಯಾಗಲಿಲ್ಲ. ಹೀಗಾಗಿ ದಲಿತ ಮತ್ತು ಹಿಂದುಳಿದ ಜಾತಿಗಳ ಮೀಸಲಾತಿಗೆ ಮಾತ್ರ ಹಾಕಿರುವ ಶೇ. 50ರ ಮೇಲ್ಮಿತಿ ಒಂದು ಬ್ರಾಹ್ಮಣಶಾಹಿ ಪೂರ್ವಗ್ರಹಗಳೇ ಆಗಿವೆ. ಆದ್ದರಿಂದ ಶೇ. 50ರ ಮೇಲ್ಮಿತಿ ರದ್ದಾಗಲು ದಲಿತರು ಮತ್ತು ಹಿಂದುಳಿದವರೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ.

ಅಷ್ಟು ಮಾತ್ರವಲ್ಲ. ಸಂವಿಧಾನ 16 (4)ರಡಿ ಸರಕಾರದ ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಮತ್ತು ಒಳಮೀಸಲಾತಿ ಕೊಡಬೇಕೆಂಬ ತೀರ್ಪು ಅರ್ಥ ಪಡೆದುಕೊಳ್ಳಬೇಕೆಂದರೆ ಸರಕಾರಿ ಉದ್ಯೋಗಗಳು ಹೆಚ್ಚಾಗಬೇಕು. ಆದರೆ ಮೀಸಲಾತಿ ಅನ್ವಯ ಸಿಗಬೇಕಾದ ಸ್ಥಾನಗಳನ್ನು ಸರಕಾರವು ಭರ್ತಿ ಮಾಡಿಕೊಳ್ಳದೆ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಸರಕಾರಿ ಉದ್ಯೋಗಳು ಖಾಲಿ ಬಿದ್ದಿವೆ ಮತ್ತು ಬ್ಯಾಕ್ ಲಾಗ್ ಆಗಿವೆ. ಅವೆಲ್ಲವೂ ಕೂಡಲೇ ಭರ್ತಿಯಾಗಬೇಕೆಂಬ ಹೋರಾಟವನ್ನು ಕೂಡ ಎಲ್ಲಾ ಶೋಷಿತ ಸಮುದಾಯ ಹೂಡಬೇಕಾದ ಅಗತ್ಯವಿದೆ.

ಸರಕಾರಿ ಉದ್ಯೋಗಗಳನ್ನು ಹೊರಗುತ್ತಿಗೆ ಕೊಡುವ, ಖಾಸಗೀಕರಿಸುವ ಸರಕಾರದ ನೀತಿಗಳು ನಿಲ್ಲದೆ ಮೀಸಲಾತಿ ಮತ್ತು ಒಳಮೀಸಲಾತಿ ಸೌಲಭ್ಯಕ್ಕೆ ಅರ್ಥವಿರುವುದಿಲ್ಲ. ಹೀಗಾಗಿ ಖಾಸಗೀಕರಣದ ವಿರುದ್ಧ ಮತ್ತು ಹಾಲಿ ಇರುವ ಖಾಸಗೀ ವಲಯದಲ್ಲೂ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಲು ಒಗ್ಗಟ್ಟಾದ ಹೋರಾಟ ಮಾಡಬೇಕಿದೆ. ಆಗ ಮಾತ್ರ ಯಾರ ಪಾಲಿಗೂ ಧಕ್ಕೆ ಬರುವುದಿಲ್ಲ. ಹೀಗಾಗಿ ಈವರೆಗೆ ವಂಚಿತರಾದವರೂ ಮತ್ತು ತಮ್ಮ ಪಾಲು ಕಿರಿದಾಗುತ್ತದೆ ಎಂದು ಪಟ್ಟಭದ್ರರಾಗುತ್ತಿರುವ ಈವರೆಗೆ ಹೆಚ್ಚಿನ ಅವಕಾಶ ಉಂಡವರೂ ಇಬ್ಬರೂ ತಮ್ಮ ಪಾಲನ್ನು ಹೆಚ್ಚಿಸಿಕೊಳ್ಳಲು ಈ ಎಲ್ಲಾ ಹೋರಾಟಗಳನ್ನು ಜಂಟಿಯಾಗಿ ಮಾಡಲು ಮುಂದಾಗಬೇಕಿದೆ. ಹಾಗೆ ಮಾಡದಂತೆ ತಡೆಯಲು ಶೋಷಿತರ ನಡುವೆ ಕಲಹ ಹಚ್ಚುವ ಮನುವಾದಿಗಳ ಹುನ್ನಾರ ಅರ್ಥಮಾಡಿಕೊಳ್ಳುವ ಪ್ರಬುದ್ಧತೆ ತೋರಬೇಕಿದೆ.

ಕರ್ನಾಟಕ ಸರಕಾರ ಮತ್ತು ಸಮಾಜ ಕೂಡಲೇ ಮಾಡಬೇಕಿರುವುದು:

ಈಗ ತಡಮಾಡದೇ ಕರ್ನಾಟಕ ಸರಕಾರದಿಂದ ಆಗಬೇಕಿರುವುದಿಷ್ಟು:

1. ರಾಜ್ಯ ಸರಕಾರಗಳೇ ತಳಮಟ್ಟದ ಅಧ್ಯಯನ, ಹಾಗೂ ಪ್ರಮಾಣಾತ್ಮಕ ದತ್ತಾಂಶಗಳ ಮೂಲಕ ಒಳಮೀಸಲಾತಿ ಅಗತ್ಯವಿರುವ ಪರಿಶಿಷ್ಟ ಜಾತಿಗಳನ್ನು ಗುರುತಿಸಬೇಕು ಮತ್ತು ಅವರಿಗೆ ಒಳಮೀಸಲಾತಿ ಒದಗಿಸಬೇಕು. ಆದರೆ ಅದಕ್ಕಾಗಿ ಜಾತಿ ಗಣತಿ ಆಗಬೇಕು.

2. ಆದರೆ ಕರ್ನಾಟಕದಲ್ಲಿ ಆಗಲೇ 2015ರಲ್ಲಿ ಜಾತಿ ಗಣತಿಯೂ ಆಗಿದೆ. 2013ರಲ್ಲಿ ಪರಿಶಿಷ್ಟ ವರ್ಗೀಕರಣದ ಬಗ್ಗೆ ಸದಾಶಿವ ವರದಿಯೂ ಮಂಡನೆಯಾಗಿದೆ. ಕರ್ನಾಟಕ ಸರಕಾರ ಎರಡನ್ನೂ ಕೂಡಲೇ ಬಿಡುಗಡೆ ಮಾಡಿ ಸಮಯ ಮಿತಿಯೊಳಗೆ ಸಾರ್ವಜನಿಕ ಚರ್ಚೆ ಮತ್ತು ಅಭಿಪ್ರಾಯಗಳನ್ನು ಕ್ರೋಡೀಕರಿಸಬೇಕು.

3. ಫಲಾನುಭವಿಗಳಲ್ಲಿ ಆತಂಕವನ್ನು ಕಡಿಮೆ ಮಾಡಿ, ಸುಪ್ರೀಂ ತೀರ್ಪಿನಂತೆ ಒಳಮೀಸಲು ಒದಗಿಸಲು ಸಂಬಂಧಪಟ್ಟ ಸಮುದಾಯಗಳಲ್ಲಿ ಸಹ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಬೇಕು.

4. ಕರ್ನಾಟಕದ ಪರಿಶಿಷ್ಟಮೀಸಲನ್ನು ಶೇ. 18ರಿಂದ ಶೇ. 24ಕ್ಕೆ ಏರಿಸಿರುವ ಕರ್ನಾಟಕದ ಕಾಯ್ದೆಯನ್ನು 9ನೇ ಶೆಡ್ಯೂಲಿಗೆ ಸೇರಿಸಿ ಸಾಂವಿಧಾನಿಕ ರಕ್ಷಣೆ ಒದಗಿಸಲು ಕೇಂದ್ರದ ಮೇಲೆ ರಾಜ್ಯ ಸರಕಾರ ಮತ್ತು ಬಿಜೆಪಿಯ ಮೇಲೆ ಕರ್ನಾಟಕದ ಜನತೆ ಒತ್ತಡ ತರಬೇಕು. ಹಾಗೆ ಮಾಡದೆ ಒಳಮೀಸಲಾತಿಯ ಬಗ್ಗೆ ಬಿಜೆಪಿ ಮಾತನಾಡುವುದೇ ಅನೈತಿಕ.

5. ಶೇ. 50ರ ಮೀಸಲಾತಿ ಮೇಲ್ಮಿತಿಯನ್ನು ರದ್ದು ಮಾಡಲು ಹಾಗೂ ಖಾಸಗಿಯನ್ನು ಮೀಸಲಾಗಿಸಲು ಒಗ್ಗಟಿನ ಹೋರಾಟ ಮುಂದಿನ ಹೆಜ್ಜೆಯಾಗಬೇಕು.

6. ಎಲ್ಲಕ್ಕಿಂತ ಹೆಚ್ಚಾಗಿ ಸರಕಾರಗಳು ನೆಪಗಳನ್ನು ಮುಂದಿಟ್ಟು ಒಳಮೀಸಲಾತಿ ಜಾರಿಯನ್ನು ಮುಂದೂಡುವ ಬಗ್ಗೆ ಹಾಗೂ ಆತಂಕ ಅಸಮಾಧಾನಗಳನ್ನು ಮನುವಾದಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳದಂತೆ ತಡೆಗಟ್ಟಲು ಶೋಷಿತ ಸಮುದಾಯಗಳ ಒಗ್ಗಟ್ಟನ್ನು ಗಟ್ಟಿ ಮಾಡಿಕೊಳ್ಳಬೇಕು.

 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಶಿವಸುಂದರ್

contributor

Similar News