ಮಣಿಪುರದಲ್ಲಿ ತಕ್ಷಣ ಶಾಂತಿ ನೆಲೆಸಲಿ
ನಮ್ಮ ದೇಶದ ಮಣಿಪುರದಲ್ಲಿ ಮೂರು ತಿಂಗಳಿಂದ ನಿರಂತರವಾಗಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದರೂ ಮತ್ತು ಈ ಬಗ್ಗೆ ಎಲ್ಲಾ ವಿರೋಧ ಪಕ್ಷಗಳು ಮತ್ತು ಎಲ್ಲಾ ರಾಜಕೀಯೇತರ ಸಂಘಟನೆಗಳು, ವಿಚಾರವಂತರು, ಒಮ್ಮತವಾಗಿ ಶಾಂತಿ ಕಾಪಾಡಿಕೊಳ್ಳಬೇಕೆಂದು ಅನೇಕ ಸಭೆಗಳ ಮೂಲಕ ಕೇಳಿಕೊಂಡರೂ ಅಲ್ಲಿನ ಮುಖ್ಯಮಂತ್ರಿ ಶಾಂತಿ ಕಾಪಾಡಲಿಲ್ಲ. ರಾಜ್ಯ ಸರಕಾರ ಸೋತಾಗ ಕೇಂದ್ರ ಸರಕಾರ ಅದರ ಜವಾಬ್ದಾರಿಯನ್ನು ತೆಗೆದುಕೊಂಡು ಶಾಂತಿ ಕಾಪಾಡಬೇಕಾಗಿತ್ತು. ಆದರೆ ನಮ್ಮ ಕೇಂದ್ರ ಸರಕಾರ ಇದನ್ನು ಮಾಡದಿದ್ದಾಗ ನಮ್ಮ ಸರ್ವೋಚ್ಚ ನ್ಯಾಯಾಲಯವು ಸಹ ಪ್ರವೇಶ ಮಾಡಿ ಕೇಂದ್ರ ಸರಕಾರಕ್ಕೆ ಶಾಂತಿ ಕಾಪಾಡುವಂತೆ ಸೂಚನೆ ನೀಡುವ ಪರಿಸ್ಥಿತಿ ಬಂದೊದಗಿತು. ಆನಂತರ ಸರ್ವೋಚ್ಚ ನ್ಯಾಯಾಲಯ ಹಿಂಸಾಚಾರ ತಡೆಗಟ್ಟಲು ಸೂಚನೆ ನೀಡಿದ್ದರೂ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಜನಾಂಗೀಯ ಹಿಂಸಾಚಾರದ ಬಗ್ಗೆ ಚರ್ಚೆಗಳಾಗಿದ್ದರೂ ಇನ್ನೂ ನಮ್ಮ ಕೇಂದ್ರ ಸರಕಾರದ ಕಿವಿ ಕಿವುಡಾಗಿದೆ. ಕಣ್ಣು ಕುರುಡಾಗಿದೆ. ಈ ಹಿಂಸಾಚಾರದ ಕುರಿತು ಕೇಂದ್ರ ಸರಕಾರ, ಹೃದಯದಿಂದ ಸ್ಪಂದನೆ ನೀಡುವ ಬದಲು ಅಹಂಕಾರದಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ?
ಇದುವರೆಗೂ ಮಣಿಪುರದಲ್ಲಿ ಶಾಂತಿ ಕಾಪಾಡುವ ಬಗ್ಗೆ ನಮ್ಮ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಮಾತಾಡದೆ ಇರುವುದನ್ನು ನೋಡಿದರೆ ಈ ದೇಶದ ರಾಷ್ಟ್ರಪತಿ ಮತ್ತು ಪ್ರಧಾನಿಗಳು ಗಾಢ ನಿದ್ದೆಯಲ್ಲಿದ್ದಾರೆಂದೇ ಪ್ರಜೆಗಳಾದ ನಾವು ತಿಳಿಯಬೇಕಾಗುತ್ತದೆ. ಏಕೆಂದರೆ ಮಣಿಪುರದಲ್ಲಿ ಇಷ್ಟು ಗಂಭೀರ ಪರಿಸ್ಥಿತಿ ಇದ್ದರೂ ಪಾರ್ಲಿಮೆಂಟಿನಲ್ಲಿ ಆ ವಿಷಯವನ್ನು ಚರ್ಚಿಸದೆ ಕೇವಲ ೨೦೨೪ರ ಚುನಾವಣೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅಧಿಕಾರದ ಉಳಿವಿಗೆ ಚಿಂತನೆ ನಡೆಸುವ ಬಿಜೆಪಿ ನಾಯಕರಿಗೆ ಮಾನವೀಯತೆ ಸತ್ತು ಹೋಗಿದೆಯೇ ಎಂಬ ಅನುಮಾನ ಕಾಡುತ್ತಿದೆ.
ದೇಶದ ಯಾವುದೇ ಒಂದು ರಾಜ್ಯದಲ್ಲಿ ಈ ರೀತಿ ಜನಾಂಗೀಯ ದ್ವೇಷದ ಗಲಭೆಗಳಾದಾಗ ಅದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆಂಬ ಕನಿಷ್ಠ ಪ್ರಜ್ಞೆಯು ಬಿಜೆಪಿ ನಾಯಕರ ಅರಿವಿಗೆ ಬರದೇ ಇರುವುದು ನಮ್ಮ ದೇಶದ ದುರಂತವೇ ಸರಿ. ಏಕೆಂದರೆ ರಾಜಪ್ರಭುತ್ವ ಸೋತರೆ ಕೇಂದ್ರ ಪ್ರಭುತ್ವವು ಅದಕ್ಕೆ ಸೂಕ್ತವಾದ ಪರಿಹಾರ ಕೊಡಬೇಕು. ಇಲ್ಲಿ ಯಾವುದೇ ಚುನಾವಣೆ ಅಥವಾ ರಾಜಕೀಯ ಮುಖ್ಯವಲ್ಲ. ದೇಶ ಮುಖ್ಯವಾಗಬೇಕು. ಜನ ಮುಖ್ಯವಾಗಬೇಕು. ವಿಶ್ವಗುರು ಎಂದು ಕರೆಸಿಕೊಳ್ಳುವ ನಮ್ಮ ಪ್ರಧಾನಿಗೆ ತನ್ನ ದೇಶದಲ್ಲಿರುವ ಒಂದು ಸಣ್ಣ ಪ್ರದೇಶದಲ್ಲಿ ನಡೆಯುವ ರಂಪಾಟವನ್ನು ಸುಮ್ಮನಿರಿಸಲು ಸಾಧ್ಯವಾಗದೆ ಹೋಯಿತೆ?
ದೇಶದ ಪ್ರಭುತ್ವದಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳು ೨೦೨೪ರ ಲೋಕಸಭಾ ಚುನಾವಣೆಯ ತಂತ್ರಗಳನ್ನು ಮರೆತು ಭಾರತ ದೇಶವನ್ನು ಉಳಿಸಲು ತಕ್ಷಣವೇ ಮಣಿಪುರದ ಮುಖ್ಯಮಂತ್ರಿಯನ್ನು ಬದಲಾಯಿಸಬೇಕು. ಆನಂತರ ಅಲ್ಲಿ ಯಾವುದೇ ಗಲಾಟೆ, ಹಿಂಸಾಚಾರ ನಡೆಯದಂತಿರಲು ನಮ್ಮ ಸೇನೆಯನ್ನು ಕಳುಹಿಸಿ ಅಲ್ಲಿನ ಪರಿಸ್ಥಿತಿಯನ್ನು ಶಮನಗೊಳಿಸಬೇಕು. ಅಲ್ಲಿನ ಜನರ ನಡುವೆ ಸಾಮರಸ್ಯ ತರುವ ಕೆಲಸ ಮಾಡಿ, ನಮ್ಮ ರಾಜ್ಯಂಗದಲ್ಲಿರುವ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ಮೌಲ್ಯಗಳನ್ನು ಕಾಪಾಡಬೇಕು.
ನಿಮ್ಮಿಂದ ಇದು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ ಎಂದು ಪ್ರಜೆಗಳು ಕೇಳುವುದಕ್ಕೆ ಅವಕಾಶ ಮಾಡಿಕೊಡ ಬೇಡಿ. ಏಕೆಂದರೆ ನೀವು ಭಾರತ ದೇಶವನ್ನು, ಜನಾಂಗೀಯ ದ್ವೇಷಕ್ಕೆ, ಅಶಾಂತಿಗೆ, ಅನ್ಯಾಯಗಳಿಗೆ, ದಾರಿ ಮಾಡಿಕೊಟ್ಟರೆ ದೇಶದ ಅಳಿವಿಗೆ ನೀವೇ ಕಾರಣಕರ್ತರಾಗುತ್ತೀರಿ. ಮೂರು ತಿಂಗಳಿಂದ ನಿರಂತರವಾಗಿ ನಡೆದಿರುವ ಹಿಂಸಾಚಾರದ ಪರಿಸ್ಥಿತಿಯನ್ನು ಗಮನಿಸಿದರೆ ದೇಶದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಇಲ್ಲದಿರುವ ದೇಶವೆಂದು ದೇಶದ ಪ್ರಜೆಗಳು ಅಂದುಕೊಳ್ಳುವ ಸ್ಥಿತಿಯನ್ನುಂಟು ಮಾಡಬೇಡಿ. ತತ್ಕ್ಷಣವೇ ಮಣಿಪುರದಲ್ಲಿ ಶಾಂತಿ ಕಾಪಾಡಿ, ದೇಶದ ಮರ್ಯಾದೆ ಉಳಿಸಿ.