ಬಿಎಸ್‌ವೈ ‘ರೀ-ಎಂಟ್ರಿ’ ಮತ್ತು ಈಶ್ವರಪ್ಪ ‘ಸೆಕೆಂಡ್ ಇನ್ನಿಂಗ್ಸ್’ ನಡುವಿನ ನಂಟುಗಳು!
ಹೆಚ್ಚೂಕಮ್ಮಿ, ರಾಜಕೀಯವಾಗಿ ಮೂಲೆಗುಂಪಾಗಿದ್ದ ಈಶ್ವರಪ್ಪನವರನ್ನು ಬಿಜೆಪಿ ಈಗ ಮತ್ತೆ ದಿಢೀರ್ ಮುನ್ನೆಲೆಗೆ ತರುತ್ತಿರುವುದು ಯಾಕೆ? ತಾನೇ ಟಿಕೆಟ್ ನಿರಾಕರಿಸಿದ್ದ ವ್ಯಕ್ತಿಗೆ ಪಕ್ಷದ ವೇದಿಕೆಗಳಲ್ಲಿ ಮತ್ತೆ ಪ್ರಾಮುಖ್ಯತೆ ಕೊಡುತ್ತಿರೋದೇಕೆ? ಬಿಜೆಪಿ ಹೈಕಮಾಂಡ್ ದಯಪಾಲಿಸಿರುವ ಈ ರಾಜಕೀಯ ಪುನರ್ಜನ್ಮದ ಹಿಂದಿರುವ ನಿಜವಾದ ತಂತ್ರಗಾರಿಕೆಯೇನು?
2023ರ ವಿಧಾನಸಭಾ ಚುನಾವಣೆಗೆ ಮಾಜಿಮಂತ್ರಿ ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಅವರ ರಾಜಕೀಯ ಬದುಕಿನ ಅಂತ್ಯವನ್ನು ಬಿಜೆಪಿ ಬಹುಪಾಲು ಘೋಷಿಸಿತ್ತು. ಕೊನೇಪಕ್ಷ, ತನ್ನ ಮಗ ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಈಶ್ವರಪ್ಪನವರು ಮಾಡಿಕೊಂಡ ಮನವಿಗೂ ಹೈಕಮಾಂಡ್ ಮಣೆ ಹಾಕಿರಲಿಲ್ಲ. ಈಶ್ವರಪ್ಪನವರ ಸೊಸೆ ಆ ಕ್ಷಣದಲ್ಲಿ ಚಿಕ್ಕಮಗುವಿನಂತೆ ಬಹಿರಂಗವಾಗಿ ಕಣ್ಣೀರಿಟ್ಟು ಗೋಳಾಡಿದ ದೃಶ್ಯವು ಕುಟುಂಬಕ್ಕೆ ಎದುರಾಗಿದ್ದ ರಾಜಕೀಯ ಅಸ್ಥಿರತೆಯ ಆತಂಕಕ್ಕೆ ಕನ್ನಡಿ ಹಿಡಿದಂತಿತ್ತು.
ಬಿಜೆಪಿ ಕಾರ್ಯಕರ್ತನೂ ಆಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಈಶ್ವರಪ್ಪನವರ ಪಾಲಿಗೆ ದೊಡ್ಡ ಆಘಾತವೆಂದರೂ ತಪ್ಪಲ್ಲ. ಬೊಮ್ಮಾಯಿ ಸರಕಾರದಲ್ಲಿ ಪಂಚಾಯತ್ ರಾಜ್ ಮಂತ್ರಿಯಾಗಿದ್ದ ಈಶ್ವರಪ್ಪನವರು ಬಿಲ್ ಪಾವತಿಗೆ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದ ಸಂತೋಷ್ ಪಾಟೀಲ್ ಕೊನೆಗೆ ಆತ್ಮಹತ್ಯೆ ಕೂಡಾ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ಈಶ್ವರಪ್ಪ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಪೊಲೀಸ್ ಬಿ ರಿಪೋರ್ಟ್‌ನಿಂದಾಗಿ, ಈಶ್ವರಪ್ಪ ಆ ಪ್ರಕರಣದಿಂದ ಬಚಾವಾಗುವಲ್ಲಿ ಯಶಸ್ವಿಯಾದರೂ, ನಿರಂತರ ಪ್ರಯತ್ನದ ಹೊರತಾಗಿಯೂ ಮತ್ತೆ ಸಂಪುಟದಲ್ಲಿ ಸೇರ್ಪಡೆಗೊಳ್ಳಲು ಸಾಧ್ಯವಾಗಲಿಲ್ಲ. ಆ ವೇಳೆಗಾಗಲೇ, ಈಶ್ವರಪ್ಪನವರನ್ನು ರಾಜಕೀಯವಾಗಿ ಸೈಡ್‌ಲೈನ್ ಮಾಡಬೇಕೆಂದು ಹೈಕಮಾಂಡ್ ನಿರ್ಧರಿಸಿತ್ತು. ಚುನಾವಣೆಗೆ ಟಿಕೆಟ್ ನಿರಾಕರಣೆಯ ಮೂಲಕ ಅದನ್ನು ಅಧಿಕೃತವಾಗಿ ಜಾಹೀರು ಮಾಡಿತ್ತಷ್ಟೆ.
ಹೀಗೆ ಹೆಚ್ಚೂಕಮ್ಮಿ, ರಾಜಕೀಯವಾಗಿ ಮೂಲೆಗುಂಪಾಗಿದ್ದ ಈಶ್ವರಪ್ಪನವರನ್ನು ಬಿಜೆಪಿ ಈಗ ಮತ್ತೆ ದಿಢೀರ್ ಮುನ್ನೆಲೆಗೆ ತರುತ್ತಿರುವುದು ಯಾಕೆ? ತಾನೇ ಟಿಕೆಟ್ ನಿರಾಕರಿಸಿದ್ದ ವ್ಯಕ್ತಿಗೆ ಪಕ್ಷದ ವೇದಿಕೆಗಳಲ್ಲಿ ಮತ್ತೆ ಪ್ರಾಮುಖ್ಯತೆ ಕೊಡುತ್ತಿರೋದೇಕೆ? ಬಿಜೆಪಿ ಹೈಕಮಾಂಡ್ ದಯಪಾಲಿಸಿರುವ ಈ ರಾಜಕೀಯ ಪುನರ್ಜನ್ಮದ ಹಿಂದಿರುವ ನಿಜವಾದ ತಂತ್ರಗಾರಿಕೆಯೇನು?
ಈಶ್ವರಪ್ಪನವರಿಗೆ ದಕ್ಕಿರುವ ಈ ‘ಸೆಕೆಂಡ್ ಇನ್ನಿಂಗ್ಸ್’ಗೆ ಪ್ರಧಾನವಾಗಿ ಇಬ್ಬರು ವ್ಯಕ್ತಿಗಳ ಪರೋಕ್ಷ ಛಾಯೆ ಕಾರಣ; ಮೊದಲನೆಯವರು ಯಡಿಯೂರಪ್ಪ! ಎರಡನೆಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ!!
ಎತ್ತಿಂದೆತ್ತ ನೋಡಿದರೂ, ಈ ಇಬ್ಬರೂ ಈಶ್ವರಪ್ಪನವರ ಬದ್ಧ ರಾಜಕೀಯ ವೈರಿಗಳು! ಒಬ್ಬರು ಬೇರೆ ಪಕ್ಷದಲ್ಲಿರುವ ಕಾರಣಕ್ಕೆ ರಾಜಕೀಯ ಎದುರಾಳಿಯಾಗಿದ್ದರೆ, ಮತ್ತೊಬ್ಬರು ಒಂದೇ ಪಕ್ಷದೊಳಗಿನ ಆಂತರಿಕ ಕಚ್ಚಾಟದ ಕಾರಣಕ್ಕೆ ವೈರಿಯಾದವರು. ಅಂತಹದ್ದರಲ್ಲಿ ಈ ಇಬ್ಬರು ಹೇಗೆ ಈಶ್ವರಪ್ಪನವರ ರಾಜಕೀಯ ಪುನರ್ಜನ್ಮಕ್ಕೆ ಕಾರಣವಾಗಬಲ್ಲರು? ರಾಜಕೀಯ ಹಿನ್ನೆಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಮಗೆ ಈ ಪ್ರಶ್ನೆಗೆ ಉತ್ತರ ಸಿಗುತ್ತೆ.
ಮೊದಲನೆಯದಾಗಿ ಯಡಿಯೂರಪ್ಪನವರ ಆಯಾಮವನ್ನೇ ಪರಿಗಣಿಸುವುದಾದರೆ, ಒಂದು ಕಾಲಕ್ಕೆ ಇಬ್ಬರೂ ‘ಜೋಡೆತ್ತು’ಗಳಂತೆ ಶಿವಮೊಗ್ಗದಿಂದ ರಾಜಕಾರಣ ಶುರು ಮಾಡಿದವರು. ಆದರೆ ಕಾಲಾಂತರದಲ್ಲಿ ಬದ್ಧ ವೈರಿಗಳಾಗುತ್ತಾ ಬಂದರು. ಪಕ್ಷದೊಳಗೆ ಯಡಿಯೂರಪ್ಪನವರ ಪ್ರಾಬಲ್ಯವನ್ನು ಕಟ್ಟಿಹಾಕಬೇಕೆಂದು ಬಿಜೆಪಿಯ ಒಂದು ಬಣ ಕಾರ್ಯಪ್ರವೃತ್ತವಾದಾಗ, ಆ ಬಣ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡದ್ದು ಇದೇ ಈಶ್ವರಪ್ಪನವರನ್ನು. ಆ ನಿರಂತರ ಕಿರುಕುಳದಿಂದ ಬೇಸತ್ತು, ಯಡಿಯೂರಪ್ಪನವರು ಪಕ್ಷ ತೊರೆಯುವಂತೆ ಮಾಡಿದುದರಲ್ಲಿ ಈಶ್ವರಪ್ಪನವರೂ ಒಬ್ಬರು. ಕೆಜೆಪಿ ಕಟ್ಟಿ ತಾವು ಮುಗ್ಗರಿಸಿದರೂ, ತನ್ನ ಹೊರತಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂಬುದನ್ನು ಅರ್ಥ ಮಾಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು. ಹಾಗಾಗಿ ಬಿಜೆಪಿ ಮತ್ತೆ ಅವರನ್ನು ಪಕ್ಷಕ್ಕೆ ಕರೆತಂದಿತು. ಆಗಲೂ, ಯಡಿಯೂರಪ್ಪನವರನ್ನು ನಿಯಂತ್ರಿಸಲು ಸಂಘ ಪರಿವಾರ ಈಶ್ವರಪ್ಪನವರನ್ನು ಚೆಕ್‌ಮೇಟ್ ಥರ ಬಳಸಿಕೊಳ್ಳುತ್ತಾ ಬಂತು. ‘ರಾಯಣ್ಣ ಬ್ರಿಗೇಡ್’ ಅದಕ್ಕೊಂದು ಸ್ಪಷ್ಟ ನಿದರ್ಶನ. ಸಾರಾಂಶದಲ್ಲಿ ಹೇಳಬೇಕೆಂದರೆ, ಸಂಘ ಪರಿವಾರಕ್ಕೆ ಹತ್ತಿರವಿರುವ ಒಂದು ಬಣ ಈಶ್ವರಪ್ಪನವರಲ್ಲಿ ರಾಜಕೀಯ ಪ್ರಸ್ತುತತೆಯನ್ನು ಕಂಡುಕೊಂಡಿದ್ದೇ, ಯಡಿಯೂರಪ್ಪನವರನ್ನು ವಿರೋಧಿಸಲು ಅಸ್ತ್ರವಾಗಿ ಬಳಕೆಯಾಗುತ್ತಾರೆ ಎಂಬ ಉದ್ದೇಶದಿಂದ. ಅದರರ್ಥ, ಯಾವಾಗ ಯಡಿಯೂರಪ್ಪನವರನ್ನು ನಿಯಂತ್ರಿಸುವ ಅನಿವಾರ್ಯತೆ ಸಂಘ ಪರಿವಾರಕ್ಕೆ ಇಲ್ಲವಾಗುತ್ತದೋ ಆಗ ಈಶ್ವರಪ್ಪನವರ ಪೊಲಿಟಿಕಲ್ ವ್ಯಾಲಿಡಿಟಿಯೂ ಮುಕ್ತಾಯವಾಗುತ್ತದೆ.
ಕಳೆದ ಸರಕಾರದ ಅವಧಿಯಲ್ಲಿ ಮುಪ್ಪಿನ ನೆಪ ಹೇಳಿ ಸಿಎಂ ಕುರ್ಚಿಯಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಿದ ಬಿಜೆಪಿ ಹೈಕಮಾಂಡ್, ನಿರ್ದಿಷ್ಟವಾಗಿ ಬಿ.ಎಲ್.ಸಂತೋಷ್ ಬಣ, ಆನಂತರದಲ್ಲಿ ಹಂತಹಂತವಾಗಿ ಯಡಿಯೂರಪ್ಪನವರನ್ನು ಮೂಲೆಗುಂಪಾಗಿಸುತ್ತಲೇ ಬಂತು. ಟಿಕೆಟ್ ಹಂಚಿಕೆಯ ವಿಚಾರದಿಂದ ಮೊದಲ್ಗೊಂಡು, ಪಕ್ಷದ ಗಂಭೀರ ನಿರ್ಧಾರ ತೆಗೆದುಕೊಳ್ಳುವ ವಿಚಾರದವರೆಗೆ ಯಡಿಯೂರಪ್ಪನವರನ್ನು ಅಪ್ರಸ್ತುತಗೊಳಿಲಾಯಿತು. ಅವರ ಹಿಂಬಾಲಕರನ್ನು ನಿರ್ಲಕ್ಷಿಸಲಾಯಿತು. ಪ್ರಧಾನಿ ಮೋದಿ ವರ್ಚಸ್ಸು ಮತ್ತು ಕೋಮುಸಂಘರ್ಷ ವಾತಾವರಣ ಸೃಷ್ಟಿಯಿಂದ, ಯಡಿಯೂರಪ್ಪನವರ ಅಗತ್ಯವಿಲ್ಲದೆಯೂ ತಾವು ಕರ್ನಾಟಕದಲ್ಲಿ ಗಮನಾರ್ಹ ಸೀಟು ಗೆಲ್ಲಬಹುದು ಎಂಬ ಭ್ರಮೆಯೇ ಬಿಜೆಪಿ ಹೈಕಮಾಂಡ್‌ನ ಆ ನಡವಳಿಕೆಗೆ ಕಾರಣ.
ಬಿಜೆಪಿಗೆ ಯಡಿಯೂರಪ್ಪನವರೇ ಶಾಶ್ವತವಾಗಿ ಬೇಡವೆನಿಸಿದ ಮೇಲೆ, ಅವರನ್ನು ನಿಂದಿಸುವ ಕೆಲಸಕ್ಕೆ ಮಾತ್ರ ಸೀಮಿತವಾದ ಈಶ್ವರಪ್ಪನವರು ಹೇಗೆ ತಾನೆ ಬೇಕಾಗುತ್ತಾರೆ? ಹಾಗಾಗಿಯೇ ಈಶ್ವರಪ್ಪನವರಿಗಾಗಲಿ, ಅವರ ಮಗ ಕಾಂತೇಶ್‌ಗಾಗಲಿ ಸುತಾರಾಂ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೈಕಮಾಂಡ್ ಹೇಳಿತ್ತು.
ಆದರೆ, ಬಿಜೆಪಿ ಲೆಕ್ಕಾಚಾರಗಳೆಲ್ಲ ತಲೆಕೆಳಗಾದವು. ಆಡಳಿತ ವಿರೋಧಿ ಅಲೆಯಿಂದಾಗಿ ತಾನು ಈ ಚುನಾವಣೆಯಲ್ಲಿ ಬಹುಮತ ಗಳಿಸುವುದಿಲ್ಲ ಎಂಬುದು ಬಿಜೆಪಿಗೆ ಸ್ಪಷ್ಟವಿತ್ತಾದರೂ, ಕಡೇಪಕ್ಷ 85-90 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಂತೂ ಇತ್ತು. ಆನಂತರ ಆಪರೇಷನ್ ಕಮಲದ ಭರವಸೆಗಳೂ ಇದ್ದಿರಬಹುದು. ಆದರೆ ಜನ ಬಿಜೆಪಿಯನ್ನು 66ಕ್ಕೆ ಸೀಮಿತಗೊಳಿಸಿದರು. ಆಪರೇಷನ್ ಕಮಲದ ಸಾಧ್ಯತೆಯೂ ಇಲ್ಲವಾಯಿತು. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿಗೆ ಇದು ದೊಡ್ಡ ಆಘಾತ! ಯಡಿಯೂರಪ್ಪನವರು ಈ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ನೀಡಿದ ಒಳಏಟು ಕೂಡಾ ತನ್ನ ಈ ಹೀನಾಯ ಸೋಲಿಗೆ ಕಾರಣ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿತು. ಎಂ.ಪಿ. ಎಲೆಕ್ಷನ್ ವೇಳೆಗಾದರೂ ಈ ಕುಸಿತದಿಂದ ಚೇತರಿಸಿಕೊಳ್ಳಬೇಕೆಂದರೆ, ಯಡಿಯೂರಪ್ಪನವರಿಗೆ ಮತ್ತೆ ಮಣೆ ಹಾಕದೆ ಬಿಜೆಪಿಗೆ ಬೇರೆ ದಾರಿಯಿರಲಿಲ್ಲ. ಕಾಯಿಸಿ-ಸತಾಯಿಸಿ ಕೊನೆಗೂ ಅವರ ಮಗ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ.
ಯಾವಾಗ ಯಡಿಯೂರಪ್ಪನವರು ಮತ್ತೆ ಪಕ್ಷಕ್ಕೆ ಅನಿವಾರ್ಯವಾದರೋ, ಆಗ ಅವರನ್ನು ನಿಯಂತ್ರಿಸುವ ಒಂದು ಕೀಲಿಕೈ ಕೂಡಾ ಬಿಜೆಪಿ ಹೈಕಮಾಂಡ್‌ಗೆ (ಸಂತೋಷ್ ಬಣ) ಬೇಕಾಯಿತು. ಖಂಡಿತ, ಆ ಕೀಲಿಕೈ ಈಶ್ವರಪ್ಪನವರೇ ಆಗಿದ್ದರು. ಆ ಕಾರಣಕ್ಕೆ ಅವರಿಗೆ ಪುನಃ ಪಕ್ಷದ ವೇದಿಕೆಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದಾಗ, ‘‘ವಿಜಯೇಂದ್ರ ರಾಜ್ಯಾಧ್ಯಕ್ಷ ಇರಬಹುದು. ಆದರೆ ಒಬ್ಬರಿಂದಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಲಿದೆ’’ ಎಂಬ ಈಶ್ವರಪ್ಪನವರ ಮಾತುಗಳೇ, ಬಿಜೆಪಿ ಹೈಕಮಾಂಡ್ ಯಾವ ಉದ್ದೇಶದಿಂದ ಅವರನ್ನು ವಾಪಸ್ ಕರೆಸಿಕೊಂಡಿದೆ ಅನ್ನುವುದನ್ನು ಸಾಬೀತು ಮಾಡುತ್ತದೆ.
ಇಲ್ಲೊಂದು ಉಪಪ್ರಶ್ನೆಯ ಸಾಧ್ಯತೆಯುಂಟು. ಯಡಿಯೂರಪ್ಪನವರನ್ನು ನಿರ್ಲಕ್ಷಿಸಿದ ನಂತರ ಈಶ್ವರಪ್ಪನ ಅಗತ್ಯ ತನಗಿಲ್ಲ ಎಂದು ಬಿಜೆಪಿ ನಿರ್ಲಕ್ಷಿಸಬಹುದಾದರೆ, 2013ರಲ್ಲಿ ಯಡಿಯೂರಪ್ಪ ಪಕ್ಷದಿಂದ ಹೊರನಡೆದಿದ್ದಾಗ ಯಾಕೆ ಈಶ್ವರಪ್ಪರನ್ನು ಬಿಜೆಪಿ ಮೂಲೆಗುಂಪು ಮಾಡಲಿಲ್ಲ? ಎರಡು ಕಾರಣಗಳಿವೆ. ಯಡಿಯೂರಪ್ಪ ಪಕ್ಷದಿಂದ ಹೊರಹೋಗಿ ದ್ದರೂ, ಅವರಿನ್ನೂ ರಾಜಕೀಯವಾಗಿ ಉತ್ತುಂಗದಲ್ಲಿದ್ದರು; ಸಕ್ರಿಯವಾಗಿದ್ದರು; ಬೇರೊಂದು ಪಕ್ಷದ ರೂವಾರಿಯಾಗಿದ್ದರು. ಅವರ ಮೇಲೆ ತಮ್ಮ ಪಕ್ಷದಿಂದ ದಾಳಿ ನಡೆಸುವವರು ಬಿಜೆಪಿಗೆ ಬೇಕಿತ್ತು. ಆ ಕೆಲಸದಲ್ಲಿ ನಿಷ್ಣಾತರಾಗಿದ್ದ ಈಶ್ವರಪ್ಪನವರ ಅನಿವಾರ್ಯತೆ ಬಿಜೆಪಿಗಿತ್ತು. ಯಡಿಯೂರಪ್ಪನವರ ಮೇಲೆ ಹೀನಾಮಾನ ದಾಳಿ ಮಾಡಿ, ಈಶ್ವರಪ್ಪ ಆ ಕಾಯಕವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು ಕೂಡಾ. ಎರಡನೇ ಕಾರಣವೆಂದರೆ, ಈಶ್ವರಪ್ಪನವರ ನೈಜ ರಾಜಕೀಯ ಸಾಮರ್ಥ್ಯ ಆಗಿನ್ನೂ ಒರೆಗಚ್ಚಲ್ಪಟ್ಟಿರಲಿಲ್ಲ. ಲಿಂಗಾಯತ ಮತಗಳು ನಿರ್ಣಾಯಕ ಸಂಖ್ಯೆಯಲ್ಲಿರುವ ಶಿವಮೊಗ್ಗದಲ್ಲಿ ಈಶ್ವರಪ್ಪ ಗೆಲ್ಲುತ್ತಿದ್ದುದಕ್ಕೆ ಮುಖ್ಯ ಕಾರಣ ಯಡಿಯೂರಪ್ಪನವರಾಗಿದ್ದರು. ಯಾವಾಗ ಯಡಿಯೂರಪ್ಪನವರು ಬಿಜೆಪಿಯಿಂದ ಹೊರಹೋಗಿ ಈಶ್ವರಪ್ಪನನ್ನು ಸೋಲಿಸುವ ಜಿದ್ದಿಗೆ ಬಿದ್ದರೋ, ಆಗ 2013ರ ಚುನಾವಣೆಯಲ್ಲಿ ಈಶ್ವರಪ್ಪ ಹೀನಾಯ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು!
ಆದರೆ ಈ ಸಲ ಪರಿಸ್ಥಿತಿ ಹಿಂದಿನಂತಿರಲಿಲ್ಲ. ಯಡಿಯೂರಪ್ಪ ನೇರವಾಗಿ ಬಿಜೆಪಿ ವಿರುದ್ಧ ತಿರುಗಿಬಿದ್ದಿರಲಿಲ್ಲ. ಪಕ್ಷದ ಚೌಕಟ್ಟಿನಲ್ಲೇ ಮೂಲೆಗುಂಪಾಗಿದ್ದರು. ಅಲ್ಲದೆ, ವಯೋಸಹಜ ವೃದ್ಧಾಪ್ಯದ ಕಾರಣಕ್ಕೆ ಅವರು ಶಾಶ್ವತವಾಗಿ ರಾಜಕೀಯ ದಿಂದ ನಿಷ್ಕ್ರಿಯರಾಗುವ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟ ನಿರೀಕ್ಷೆಗಳಿದ್ದವು. ಹಾಗಾಗಿ, ಯಡಿಯೂರಪ್ಪನವರ ಸಹಕಾರವಿಲ್ಲದೆ ಸ್ವಂತ ಕ್ಷೇತ್ರದಲ್ಲಿ ಗೆಲ್ಲುವ ತಾಕತ್ತೂ ಇಲ್ಲದ; ಯಡಿಯೂರಪ್ಪನವರನ್ನು ವಿರೋಧಿಸುವ ಏಕೈಕ ಕಾಯಕದ ಹೊರತು ರಾಜ್ಯಮಟ್ಟದ ವರ್ಚಸ್ಸೂ ಇಲ್ಲದ; ಸಾಲದ್ದಕ್ಕೆ, ಗುತ್ತಿಗೆದಾರ ಸಂತೋಷ್ ಪಾಟೀಲ್‌ನ ಆತ್ಮಹತ್ಯೆ ಪ್ರಕರಣದಿಂದ ಭ್ರಷ್ಟಾಚಾರದ ಆರೋಪ ಹೊತ್ತ ಈಶ್ವರಪ್ಪನವರನ್ನು ಈ ಸಲ ಮೂಲೆಗುಂಪು ಮಾಡಲು ಬಿಜೆಪಿಗೆ ಸಾಕಷ್ಟು ಕಾರಣಗಳಿದ್ದವು. ಆದರೆ ಯಡಿಯೂರಪ್ಪನವರ ರೀ-ಎಂಟ್ರಿಯಿಂದಾಗಿ, ಈಶ್ವರಪ್ಪನವರಿಗೂ ‘ಚೆಕ್‌ಮೇಟ್’ ಆಧಾರದಲ್ಲಿ ಪುನರ್ಜನ್ಮ ಸಿಕ್ಕಂತಾಗಿದೆ. ಅಂದರೆ, ಅನಿವಾರ್ಯತೆಯ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಬಿಜೆಪಿ ಹೈಕಮಾಂಡ್ (ಸಂತೋಷ್ ಬಣ) ಯಡಿಯೂರಪ್ಪನವರಿಗೆ ಮತ್ತೆ ಮಣೆ ಹಾಕಿ, ಅವರ ಮಗನನ್ನು ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದೆಯೇ ಹೊರತು ಸಂಪೂರ್ಣ ಒಲವಿನಿಂದಲ್ಲ ಎಂಬುದನ್ನು ಈಶ್ವರಪ್ಪನವರ ಸೆಕೆಂಡ್ ಇನ್ನಿಂಗ್ಸ್ ಸೂಚ್ಯವಾಗಿ ಹೇಳುತ್ತದೆ.
ಇನ್ನು, ಈಶ್ವರಪ್ಪನವರ ರಾಜಕೀಯ ಪುನರ್ಜನ್ಮ ದಲ್ಲಿ ಸಿದ್ದರಾಮಯ್ಯನವರ ಪಾತ್ರವೇನು? ಇದಂತೂ ಬಹಳ ಸಲೀಸು. ಸಿದ್ದರಾಮಯ್ಯನವರು ಯಾವ ಕುರುಬ ಸಮುದಾಯವನ್ನು ಪ್ರತಿನಿಧಿಸು ತ್ತಾರೋ, ಈಶ್ವರಪ್ಪನವರೂ ಅದೇ ಜಾತಿಗೆ ಸೇರಿದವರು. ಧರ್ಮಾಧಾರಿತ ಹಿಂದುತ್ವದ ರಾಜಕಾರಣ ನಡೆಸುವ ಈಶ್ವರಪ್ಪನವರನ್ನು ಕುರುಬ ಸಮುದಾಯ ಯಾವತ್ತೂ ತನ್ನ ನಾಯಕನೆಂದು ಸ್ವೀಕರಿಸಿಲ್ಲ. ಆದರೂ ಕೆಲವೊಮ್ಮೆ ಜಾತಿ ಎನ್ನುವುದು ರಾಜಕಾರಣದಲ್ಲಿ ನಿರೀಕ್ಷೆಗಿಂತಲೂ ದುಪ್ಪಟ್ಟು ಕೆಲಸಕ್ಕೆ ಬರುತ್ತದೆ. ಈಗಾಗಲೇ ಅಹಿಂದ ನಾಯಕನಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿರುವುದರಿಂದ, ಅವರನ್ನು ಟೀಕಿಸಲು ಆ ಸಮುದಾಯದ ದನಿಯನ್ನೇ ಬಳಸಿಕೊಂಡರೆ ಕ್ಷೇಮ ಎನ್ನುವುದು ಸಹಜ ಲೆಕ್ಕಾಚಾರ. ಆ ಭಾಗವಾಗಿಯೂ ಈಶ್ವರಪ್ಪನವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಆದರೆ ಸಿದ್ದರಾಮಯ್ಯನವರ ಆಯಾಮಕ್ಕಿಂತ, ಯಡಿಯೂರಪ್ಪನವರನ್ನು ಕಟ್ಟಿಹಾಕಬೇಕೆಂಬ ಆಯಾಮವೇ ಈಶ್ವರಪ್ಪನವರ ರಾಜಕೀಯ ಪುನರ್ಜನ್ಮದ ಪ್ರಧಾನ ತಂತುವಿನಂತೆ ಗೋಚರಿಸುತ್ತಿದೆ.