ಒಟಿಎಸ್‌ನಿಂದ ಸರಕಾರದ ಬೊಕ್ಕಸಕ್ಕೆ 6,105 ಕೋಟಿ ರೂ. ನಷ್ಟ

Update: 2024-08-28 04:12 GMT

ಬೆಂಗಳೂರು, ಆ.27: ಪರವಾನಿಗೆ ಉಲ್ಲಂಘನೆ, ಒತ್ತುವರಿ, ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪ ಖನಿಜ ತೆಗೆದಿರುವುದು, ರಾಜಧನವನ್ನೂ ಪಾವತಿಸದೇ ಖನಿಜ ಸಂಪತ್ತನ್ನು ಸಾಗಣೆ ಮಾಡಿದ್ದ ಗಣಿ ಉದ್ಯಮಿ ಮತ್ತು ಕಂಪೆನಿಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರವು ಒಟಿಎಸ್(ಒನ್ ಟೈಮ್ ಸೆಟ್ಲ್‌ಮೆಂಟ್) ಹೆಸರಿನಲ್ಲಿ ಭಕ್ಷೀಸು ನೀಡಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಒಟಿಎಸ್ ಯೋಜನೆ ಜಾರಿಗೊಳಿಸಲು ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಪ್ರಸ್ತಾವವನ್ನು ಕೈ ಬಿಡಲಾಗಿತ್ತು. ಹಿಂದಿನ ಬಿಜೆಪಿ ಸರಕಾರವು ಕೈ ಬಿಟ್ಟಿದ್ದ ಒಟಿಎಸ್ ಯೋಜನೆ ಜಾರಿಗೆ ಅನುಮತಿ ನೀಡಿರುವ ಈಗಿನ ಕಾಂಗ್ರೆಸ್ ಸರಕಾರದ ಸಚಿವ ಸಂಪುಟವು, ಸರಕಾರದ ಬೊಕ್ಕಸಕ್ಕೆ 6,105 ಕೋಟಿ ರೂ.ಗಳ ಆದಾಯಕ್ಕೆ ಕಲ್ಲು ಹಾಕಿದೆ.

ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ರಹಸ್ಯ ಹಾಳೆಗಳು ಮತ್ತು ಸಮಗ್ರ ಕಡತವು "the-file.in"ಗೆ ಲಭ್ಯವಾಗಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಕೆಲವೇ ಕೆಲವು ತಿಂಗಳಲ್ಲಿ ಗಣಿ ಉದ್ಯಮಿಗಳಿಗೆ ಒಟಿಎಸ್ ಸೌಲಭ್ಯ ನೀಡಲು ಪ್ರಸ್ತಾವಕ್ಕೆ ಮರು ಜೀವ ಬಂದಿತ್ತು. ಈ ಕುರಿತು 2023ರ ನವೆಂಬರ್ 27ರಿಂದಲೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆಗಳು ನಡೆದಿವೆ.

ವಿಶೇಷವೆಂದರೇ ಆರ್ಥಿಕ ಇಲಾಖೆಯು ಒಟಿಎಸ್ ಸೌಲಭ್ಯ ನೀಡುವುದರಿಂದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗುವುದರ ಬಗ್ಗೆ ಹೆಚ್ಚು ಗಮನವನ್ನೇ ಹರಿಸಿಲ್ಲ. ಬದಲಿಗೆ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆರ್ಥಿಕ ಪರಿಣಾಮಗಳನ್ನು ನಿರೀಕ್ಷಿಸಬಹುದು ಎಂದು ಒಂದು ಸಾಲಿನ ಅಭಿಪ್ರಾಯವನ್ನು ನೀಡಿರುವುದು ಸಚಿವ ಸಂಪುಟದ ಹಾಳೆಯಿಂದ ಗೊತ್ತಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 2,145 ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಒಟಿಎಸ್ ಜಾರಿಯಾಗಲಿದೆ. 2018-19ನೇ ಸಾಲಿನಲ್ಲಿ ಕಲ್ಲು ಗಣಿ ಗುತ್ತಿಗೆಗಳ ಡ್ರೋನ್ ಮತ್ತು ಡಿಜಿಪಿಎಸ್ ಸರ್ವೇ ಕಾರ್ಯವನ್ನು ಕೈಗೊಂಡು ಈ ಸಾಲಿನಲ್ಲಿ ಚಾಲ್ತಿಯಲ್ಲಿದ್ದ ರಾಜಧನ 60 ರೂ.ರಂತೆ ಒಟ್ಟು 5 ಪಟ್ಟು ದಂಡ ವಿಧಿಸಲಾಗಿದ್ದು ಪ್ರಸಕ್ತ ಒಟಿಎಸ್ ಅನುಷ್ಠಾನಕ್ಕೆ ಈ ರಾಜಧನ ಮೊತ್ತವನ್ನೇ ಪರಿಗಣಿಸಬೇಕು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅಭಿಪ್ರಾಯ ವ್ಯಕ್ತಪಡಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ‘2006ರ ನಂತರದ ವರ್ಷಗಳಲ್ಲಿ ನಿಗದಿಪಡಿಸಿದ ರಾಜಧನ ಮೊತ್ತಕ್ಕೆ ಕೆಎಂಎಂಸಿಆರ್ 1994ರ ನಿಯಮ 41 ಅನ್ವಯ ಬಾಕಿ ರಾಜಧನ, ಬಡ್ಡಿ ಮತ್ತು ದಂಡದ ಮೇಲಿನ ಮೊತ್ತಕ್ಕೆ ಶೇ.15ರಷ್ಟು ಬಡ್ಡಿಯನ್ನು ವಿಧಿಸಿದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರಾಜಧನ 70 ರೂ.ಗಿಂತ ಹೆಚ್ಚಿನ ಮೊತ್ತವಾಗಲಿದೆ,’ ಎಂದು ಸಭೆಗೆ ವಿವರಿಸಿರುವುದು ನಡಾವಳಿಯಿಂದ ತಿಳಿದು ಬಂದಿದೆ. ಹೀಗಾಗಿ ಲಭ್ಯವಿರುವ ಕಾರ್ಟ್ಸಾಟ್ ಇಮೇಜ್‌ಗಳನ್ನು ಬಳಸಿಕೊಂಡು ಗುತ್ತಿಗೆ ಪ್ರದೇಶದಲ್ಲಿ ತೆಗೆದಿರುವ ಖನಿಜ ಪ್ರಮಾಣವನ್ನು ಅಂದಾಜಿಸಿ ಒಟಿಎಸ್ ಮೂಲಕ ರಾಜಧನ ಸಂಗ್ರಹಿಸಲು ಮೊತ್ತ ನಿಗದಿಪಡಿಸಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

‘ಇನ್ನು ಮುಂದೆ ಗುತ್ತಿಗೆ ಪ್ರದೇಶಗಳಲ್ಲಿ ಡ್ರೋನ್ ಮತ್ತು ಡಿಜಿಪಿಎಸ್ ಸರ್ವೇ ಕಾರ್ಯ ನಡೆಸಿ ತೆಗೆದ ಖನಿಜ ಪ್ರಮಾಣವನ್ನು ನಿಖರವಾಗಿ ಅಂದಾಜಿಸಿ ಸರಕಾರಕ್ಕೆ ರಾಜಧನ ಸೋರಿಕೆಯಾಗದಂತೆ ತಡೆಯಲು ಹಾಗೂ ಈ ಹಿಂದೆ ತೆಗೆದಿರುವ ಖನಿಜವನ್ನು ಒಟಿಎಸ್ ಮೂಲಕ ಇತ್ಯರ್ಥಪಡಿಸಲು ಪ್ರಸ್ತಾಪಿಸಲಾಗಿದೆ,’ ಎಂದು ಕೃಷ್ಣಬೈರೇಗೌಡ ಅವರು ಅಭಿಪ್ರಾಯಿಸಿದ್ದಾರೆ.

2018-19ನೇ ಸಾಲಿನಲ್ಲಿ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 2,438 ಕಟ್ಟಡ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಡ್ರೋನ್, ಡಿಜಿಪಿಎಸ್ ಉಪಕರಣಖ ಬಳಸಿ ಸರ್ವೇ ಮಾಡಲಾಗಿದೆ. ಈ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಖನಿಜ ರವಾನೆ ಪರವಾನಿಗೆ ಪಡೆಯದೇ 281.33 ಮಿಲಿಯನ್ ಮೆಟ್ರಿಕ್ ಟನ್, ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿ 75.71 ಮಿಲಿಯನ್ ಮೆಟ್ರಿಕ್ ಟನ್ ಸೇರಿ ಒಟ್ಟು 357.07 ಮಿಲಿಯನ್ ಮೆಟ್ರಿಕ್ ಟನ್ ಪ್ರಮಾಣದ ಕಟ್ಟಡ ಕಲ್ಲು ಉಪ ಖನಿಜವನ್ನು ತೆಗೆದಿದೆ ಎಂದು ಅಂದಾಜಿಸಿರುವುದನ್ನು ಸಚಿವ ಸಂಪುಟ ಸಭೆಯ ಟಿಪ್ಪಣಿಯಲ್ಲಿ ದಾಖಲಿಸಿದೆ.

ಕಲ್ಲು ಗಣಿ ಗುತ್ತಿಗೆ ಮಂಜೂರಾದ ದಿನಾಂಕದಿಂದ ಪ್ರಸಕ್ತ ಸಾಲಿನವರೆಗಿನ ಸಂಚಿತ ಆಡಿಟ್ ಪ್ರಮಾಣ 153.50 ಮಿಲಿಯನ್ ಮೆಟ್ರಿಕ್ ಟನ್‌ಅನ್ನಹ ಕಳೆದು ಉಳಿದ ಖನಿಜ ಪ್ರಮಾಣ 203.54 ಮಿಲಿಯನ್ ಮೆಟ್ರಿಕ್ ಟನ್ ಕಟ್ಟಡ ಕಲ್ಲು ಉಪ ಖನಿಜಕ್ಕೆ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 36ರಂತೆ ಪ್ರತಿ ಮೆಟ್ರಿಕ್ ಟನ್‌ಗೆ 60 ರೂ. ಪಾವತಿಸಲು ಕಲ್ಲು ಗಣಿ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ.

ಒಟ್ಟು 1,221.00 ಕೋಟಿ ರೂ. ರಾಜಧನ ಐದು ಪಟ್ಟು ದಂಡ 6,105 ಕೋಟಿ ರೂ.ಗಳ ದಂಡವನ್ನು ಅಂದಾಜಿಸಿದೆ. ಈ ದಂಡವನ್ನು ಒಟಿಎಸ್ ಮೂಲಕ ಅನುಷ್ಠಾನಗೊಳಿಸುವ ಕುರಿತು ಸಚಿವ ಸಂಪುಟಕ್ಕೆ ಶಿಫಾರಸು ಮಾಡಲಾಗಿತ್ತು. ಇದನ್ನು ಇಲಾಖೆಯೂ ಸಮರ್ಥಿಸಿಕೊಂಡಿತ್ತು.

ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?

‘ಉಪ ಖನಿಜಗಳ ಪ್ರಮಾಣಕ್ಕೆ ಅನುಗುಣವಾಗಿ ವಿಧಿಸಬೇಕಾಗಿರುವ ರಾಜಧನ, ದಂಡವನ್ನು ಒಟಿಎಸ್ ಮೂಲಕ ಅನುಷ್ಠಾನಗೊಳಿಸುವುದು ಸಮಂಜಸವಾಗಿರುತ್ತದೆ. ಗಣಿ ಭೂ ವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು ಒಟಿಎಸ್ ಮೂಲಕ ಅನುಷ್ಠಾನಗೊಳಿಸಿರುವ ಕುರಿತು ಶಿಫಾರಸುಗಳನ್ನು ಮಾಡಲು ರಚಿತವಾಗಿರುವ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸುಗಳ ಮೇಲೆ ಸಚಿವ ಸಂಪುಟವು ಕೈಗೊಳ್ಳುವ ತೀರ್ಮಾನದ ಹಿನ್ನೆಲೆಯಲ್ಲಿ ಆರ್ಥಿಕ ಪರಿಣಾಮಗಳನ್ನು ನಿರೀಕ್ಷಿಸಿದೆ’ ಎಂದು ಅಭಿಪ್ರಾಯಿಸಿತ್ತು

ವಿಶೇಷವೆಂದರೇ ಒಟಿಎಸ್ ಯೋಜನೆಯನ್ನು 2023ರ ಜುಲೈ ಆಯವ್ಯಯದ ಸಂದರ್ಭದಲ್ಲೇ ಜಾರಿಗೊಳಿಸಲು ಇಲಾಖೆಯು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವವು ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿರಲಿಲ್ಲ ಮತ್ತು ನಂತರ ನಡೆದ ಸಚಿವ ಸಂಪುಟ ಸಭೆಗಳಲ್ಲಿ ಈ ವಿಚಾರವು ಪ್ರಸ್ತಾಪವಾಗಿರಲಿಲ್ಲ.

ಸಮರ್ಥನೆಯಲ್ಲೇನಿದೆ?

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 36ರಂತೆ ಪ್ರತೀ ಮೆಟ್ರಿಕ್ ಟನ್‌ಗೆ 60 ರೂಪಾಯಿಯಂತೆ ರಾಜಧನ ಒಟ್ಟು 1,221 ಕೋಟಿ ರೂ.ಗಳ ಐದುಪಟ್ಟು ದಂಡದ ರೂಪದಲ್ಲಿ 6,105.98 ಕೋಟಿ ರೂ.ಗಳ ದಂಡ ವಸೂಲಿಗೆ ಗುತ್ತಿಗೆದಾರರಿಗೆ ನೋಟಿಸ್ ಜಾರಿಮಾಡಲಾಗಿದೆ. ಆದರೆ ಈ ನೋಟಿಸ್‌ಗಳನ್ನು ಗುತ್ತಿಗೆದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ರಾಜಧನ ಸಂಗ್ರಹವಾಗದೇ ಬಾಕಿ ಉಳಿದಿದೆ. ಹೀಗಾಗಿ ಒಟಿಎಸ್ ಅನುಷ್ಠಾನಗೊಳಿಸಬಹುದು ಎಂದು ಇಲಾಖೆಯು ಸಮರ್ಥನೆ ಮಾಡಿಕೊಂಡಿತ್ತು. ಆಡಳಿತ ಇಲಾಖೆಯ ಈ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಸಹಮತಿಸಿತ್ತು. ಆದರೆ ಎಲ್ಲಿಯೂ ಬೊಕ್ಕಸಕ್ಕೆ ಇದರಿಂದ ನಷ್ಟವಾಗಲಿದೆ ಎಂಬ ಕನಿಷ್ಟ ಕಾಳಜಿಯನ್ನೂ ವ್ಯಕ್ತಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News