ಗುರಿ ತಲುಪದ ಲೂನಾ-25

ಬಾಹ್ಯಾಕಾಶ ತಜ್ಞರು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಗಳು ಇಳಿಯಲು ಹೆಚ್ಚಿನ ಸವಾಲುಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ. ಯಾಕೆಂದರೆ, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಳಿಗಳು ಮತ್ತು ದಿಬ್ಬಗಳಿವೆ. ರಾಸ್‌ಕಾಸ್ಮೋಸ್ ನಿರ್ದೇಶಕರು ತಮ್ಮ ಲೂನಾ-25 ಯೋಜನೆಯ ಯಶಸ್ಸಿನ ಪ್ರಮಾಣ ಶೇ. 75 ಎಂದು ಈ ಮೊದಲೇ ಅಂದಾಜಿಸಿದ್ದರು.

Update: 2023-08-23 07:33 GMT

ಗಿರೀಶ್ ಲಿಂಗಣ್ಣ

- ರಕ್ಷಣೆ ಮತ್ತು ಬಾಹ್ಯಾಕಾಶ ವಿಶ್ಲೇಷಕ

ಬಹುತೇಕ ಐದು ದಶಕಗಳ ಅವಧಿಯಲ್ಲಿ ರಶ್ಯ ಕೈಗೊಂಡ ಮೊದಲ ಚಂದ್ರ ಅನ್ವೇಷಣಾ ಯೋಜನೆ ದುರಂತದಲ್ಲಿ ಅಂತ್ಯ ಕಂಡಿದೆ. ರಶ್ಯದ ಮಾನವ ರಹಿತ ಲೂನಾ-25 ಬಾಹ್ಯಾಕಾಶ ನೌಕೆ ಇಲ್ಲಿಯತನಕ ಯಾರೂ ಇಳಿದಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ತನ್ನ ಪ್ರಯತ್ನದಲ್ಲಿ ಪತನಗೊಂಡು, ದುರಂತ ಅಂತ್ಯ ಕಂಡಿದೆ. ಈ ದುರದೃಷ್ಟಕರ ಘಟನೆಯನ್ನು ರಶ್ಯನ್ ಅಧಿಕಾರಿಗಳು ರವಿವಾರ ಖಚಿತಪಡಿಸಿದ್ದಾರೆ.

ರಶ್ಯ ಮತ್ತು ಭಾರತ ಎರಡು ರಾಷ್ಟ್ರಗಳು ಮಂಜುಗಡ್ಡೆಯ ರೂಪದಲ್ಲಿ ಅಪಾರ ಪ್ರಮಾಣದ ನೀರಿದೆ ಎಂದು ನಂಬಲಾದ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲು ಲ್ಯಾಂಡರ್ ಇಳಿಸಿ, ರೋವರ್ ಚಲಾಯಿಸಬೇಕು ಎಂಬ ಸ್ಪರ್ಧೆಗೆ ಇಳಿದಿದ್ದವು. ಈ ಪ್ರದೇಶ ಭವಿಷ್ಯದಲ್ಲಿ ಮಾನವ ನೆಲೆಗೆ ಪೂರಕವಾಗಿದೆ ಎಂದು ಅಂದಾಜಿಸಲಾಗಿದೆ.

ಸೊಯುಜ್ 2.1ಬಿ ರಾಕೆಟ್ ಮೂಲಕ ಆಗಸ್ಟ್ 11ರಂದು ರಶ್ಯದ ಪೂರ್ವದಲ್ಲಿರುವ ವೋಸ್ತೋಚ್ನಿ ಕಾಸ್ಮೋಡ್ರೋಮ್ ನಿಂದ ಉಡಾವಣೆಗೊಂಡ ಲೂನಾ-25 ಆಗಸ್ಟ್ 21ರಂದು ಚಂದ್ರನ ಅಂಗಳದಲ್ಲಿ ಇಳಿಯುವುದಾಗಿ ನಿರ್ಧರಿಸಲಾಗಿತ್ತು.

ಪಾಶ್ಚಾತ್ಯ ರಾಜಕೀಯ ಮತ್ತು ಏರೋಸ್ಪೇಸ್ ವಿಶ್ಲೇಷಕರ ಪ್ರಕಾರ, ರಶ್ಯ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಪರಿಣಾಮವಾಗಿ ರಶ್ಯದ ಮೇಲೆ ಹೇರಲಾದ ನಿರ್ಬಂಧಗಳು ಅದಕ್ಕೆ ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ತಂತ್ರಜ್ಞಾನಗಳನ್ನು ಪಡೆದುಕೊಳ್ಳದಂತೆ ತಡೆದಿರಬಹುದು. ಒಂದು ವೇಳೆ ಲೂನಾ-25 ಏನಾದರೂ ಯಶಸ್ವಿಯಾಗಿದ್ದರೆ, ಅದು ಕ್ರೆಮ್ಲಿನ್ ಇಂದಿಗೂ ತಾಂತ್ರಿಕ ಸಾಮರ್ಥ್ಯವನ್ನು ಗಳಿಸಿಕೊಂಡಿದೆ ಎಂದು ಸಾಬೀತುಪಡಿಸುತ್ತಿತ್ತು.

ರಶ್ಯದ ಸರಕಾರಿ ಸುದ್ದಿ ಸಂಸ್ಥೆ ಟಿಎಎಸ್‌ಎಸ್ ಶನಿವಾರದಂದು ಲೂನಾ-25 ಯೋಜನೆ ಲ್ಯಾಂಡಿಂಗ್ ಪೂರ್ವ ಕಕ್ಷೆಗೆ ಚಲಿಸುವ ಹಂತದಲ್ಲಿ ಒಂದು ಅಸಂಗತ ಪರಿಸ್ಥಿತಿಯನ್ನು ಎದುರಿಸಿದೆ ಎಂದು ವರದಿ ಮಾಡಿತ್ತು. ಅದಾದ ಬಳಿಕ, ಅದೇ ದಿನ ಮಾಸ್ಕೋ ಸಮಯ ಮಧ್ಯಾಹ್ನ 2:57ಕ್ಕೆ ಲೂನಾ-25 ಭೂಮಿಯ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿತು.

ರಶ್ಯದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ಪ್ರಕಾರ, ಲೂನಾ-25 ತನ್ನ ಉದ್ದೇಶಿತ ಪಥದಿಂದ ಬದಲಾವಣೆ ಹೊಂದಿ, ಇನ್ನೊಂದು ಕಕ್ಷೆಗೆ ಚಲಿಸಿ, ಚಂದ್ರನ ಮೇಲ್ಮೈಗೆ ಅಪ್ಪಳಿಸಿ, ಕಳೆದುಹೋಯಿತು.

ಲೂನಾ-25ರ ಲ್ಯಾಂಡಿಂಗ್ ಭಾರತದ ಚಂದ್ರಯಾನ-3ಗಿಂತಲೂ ಮೊದಲು ನಡೆಯಬೇಕಾಗಿತ್ತು. ಚಂದ್ರಯಾನ-3 ಅದೇ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲಿದೆ ಎಂದು ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಕಳೆದ ಒಂದಷ್ಟು ಸಮಯದಿಂದ, ಚಂದ್ರನ ದಕ್ಷಿಣ ಧ್ರುವ ಭವಿಷ್ಯದಲ್ಲಿ ಮಾನವ ನೆಲೆಗೆ ಪೂರಕವಾಗಿರಬಹುದೆಂಬ ಕಾರಣಕ್ಕಾಗಿ ಕುತೂಹಲಕ್ಕೆ ಪಾತ್ರವಾಗಿದೆ.

ಇಲ್ಲಿಯ ತನಕ ಚೀನಾ, ರಶ್ಯ ಮತ್ತು ಅಮೆರಿಕಗಳು ಮಾತ್ರವೇ ಚಂದ್ರನ ಮೇಲ್ಮೈಗೆ ಅನ್ವೇಷಣಾ ಯೋಜನೆಗಳನ್ನು ಕಳುಹಿಸಿವೆ. ಚೀನಾ 2019ರಲ್ಲಿ ಯಶಸ್ವಿಯಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿತ್ತು. ರಶ್ಯ ಮುಂದಿನ ಚಂದ್ರ ಸಂಶೋಧನಾ ಕೇಂದ್ರ ಸ್ಥಾಪಿಸಲು ಚೀನಾದೊಡನೆ ಕೈಜೋಡಿಸುವ ಉದ್ದೇಶ ಹೊಂದಿದೆ.

ಬಾಹ್ಯಾಕಾಶ ತಜ್ಞರು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಗಳು ಇಳಿಯಲು ಹೆಚ್ಚಿನ ಸವಾಲುಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ. ಯಾಕೆಂದರೆ, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಳಿಗಳು ಮತ್ತು ದಿಬ್ಬಗಳಿವೆ. ರಾಸ್‌ಕಾಸ್ಮೋಸ್ ನಿರ್ದೇಶಕರು ತಮ್ಮ ಲೂನಾ-25 ಯೋಜನೆಯ ಯಶಸ್ಸಿನ ಪ್ರಮಾಣ ಶೇ. 75 ಎಂದು ಈ ಮೊದಲೇ ಅಂದಾಜಿಸಿದ್ದರು.

ಅಮೆರಿಕದೊಡನೆ ಶೀತಲ ಸಮರ ನಡೆಯುತ್ತಿದ್ದ ಕಾಲದಲ್ಲಿ ಸೋವಿಯತ್ ಒಕ್ಕೂಟ ಸದೃಢವಾದ ಬಾಹ್ಯಾಕಾಶ ಕಾರ್ಯಕ್ರಮವನ್ನು ಸ್ಥಾಪಿಸಿತ್ತು. ಚಂದ್ರನ ಮೇಲಿಳಿದ ಕೊನೆಯ ಸೋವಿಯತ್ ಬಾಹ್ಯಾಕಾಶ ನೌಕೆಯೆಂದರೆ 1976ರಲ್ಲಿ ಉಡಾವಣೆಗೊಂಡ ಲೂನಾ-24 ಆಗಿತ್ತು.

ಇತ್ತೀಚಿನ ವರ್ಷಗಳಲ್ಲಿ, ರಶ್ಯನ್ ಸರಕಾರ ಹೆಚ್ಚಿನ ಹಣವನ್ನು ಮಿಲಿಟರಿಗೆ ಹೂಡಿಕೆ ಮಾಡಿದ ಕಾರಣದಿಂದ, ಬಾಹ್ಯಾಕಾಶ ಯೋಜನೆಗಳಿಗೆ ಹಣದ ಕೊರತೆ ಉಂಟಾಗಿ, ಬಾಹ್ಯಾಕಾಶ ಕಾರ್ಯಕ್ರಮಗಳು ಕಷ್ಟದ ಸಮಯ ಎದುರಿಸುತ್ತಾ ಬಂದಿವೆ.

2012ರಲ್ಲಿ ಉಡಾವಣೆಗೊಳಿಸಿದ ರಶ್ಯದ ಫೋಬೋಸ್ ಗ್ರಂಟ್ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಚಂದ್ರರಿಂದ ಮಾದರಿಗಳನ್ನು ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ಅದು ಎರಡು ತಿಂಗಳ ಕಾಲ ಭೂಮಿಯ ಕಕ್ಷೆಯಲ್ಲೇ ಉಳಿದುಕೊಂಡು, ಬಳಿಕ ಪೆಸಿಫಿಕ್ ಸಾಗರಕ್ಕೆ ಪತನಗೊಂಡಿತು.

2018ರಲ್ಲಿ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ರಶ್ಯದ ಬಾಹ್ಯಾಕಾಶ ಅನ್ವೇಷಣಾ ಕಾರ್ಯಕ್ರಮದ ನಾಯಕತ್ವ ಕುಸಿಯುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆಗಳನ್ನು ವೃದ್ಧಿಸುವುದಾಗಿ ತಿಳಿಸಿದ್ದರು.

ಆದರೂ, ತೀವ್ರ ಹಣಕಾಸಿನ ಸವಾಲುಗಳು ಮತ್ತು ಭ್ರಷ್ಟಾಚಾರದ ಕಾರಣದಿಂದ ಬಾಹ್ಯಾಕಾಶ ಯೋಜನೆಗಳ ಪ್ರಗತಿ ಸಾಧಿತವಾಗಲಿಲ್ಲ. 2021ರಲ್ಲಿ ರಶ್ಯ ಚೀನಾದೊಡನೆ ಸಹಯೋಗ ಹೊಂದಿ, ಚಂದ್ರನ ಮೇಲೆ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಿತು.

ಇನ್ನು ರಶ್ಯದ ಸೊಯುಜ್ ವರ್ಗಕ್ಕೆ ಸೇರಿದ ಉಡಾವಣಾ ರಾಕೆಟ್‌ಗಳು ಸೋವಿಯತ್ ಒಕ್ಕೂಟದ ಕಾಲದಲ್ಲಿ ನಿರ್ಮಿಸಿದ್ದಾಗಿವೆ. ಈ ರಾಕೆಟ್‌ಗಳು ಸತತವಾಗಿ ರಶ್ಯನ್ ಬಾಹ್ಯಾಕಾಶ ಕಾರ್ಯಕ್ರಮಗಳ ಮಹತ್ವದ ಭಾಗವಾಗಿವೆ. ಲೂನಾ-25 ಸೇರಿದಂತೆ, ಬಹುತೇಕ 2,000 ಉಡಾವಣೆಗಳ ಭಾಗವಾಗಿರುವ ಸೊಯುಜ್ ವರ್ಗದ ರಾಕೆಟ್‌ಗಳು ಅತಿಹೆಚ್ಚು ಬಾರಿ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಕೆಟ್ ಎಂಬ ಕೀರ್ತಿಗೆ ಭಾಜನವಾಗಿವೆ.

ಒಂದು ಕಾಲದಲ್ಲಿ, ರಶ್ಯದ ಸೊಯುಜ್ ರಾಕೆಟ್‌ಗಳು ಮಾನವರನ್ನೂ ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಯುಎಸ್ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ ಸಿಬ್ಬಂದಿಯನ್ನೂ ಭೂಮಿಯ ಪರಿಭ್ರಮಣೆ ನಡೆಸುವ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದವು. 2020ರಲ್ಲಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ 9 ರಾಕೆಟ್ ಸಿಬ್ಬಂದಿಯನ್ನು ಒಯ್ದು ಉಡಾವಣೆಗೊಂಡ ಬಳಿಕ ಈ ಪರಿಸ್ಥಿತಿ ಬದಲಾಯಿತು.

ಭ್ರಷ್ಟಾಚಾರ, ಕಳಪೆ ಗುಣಮಟ್ಟದ ಇಂಜಿನಿಯರಿಂಗ್, ಹೊಸ ಯೋಚನೆಗಳ ಕೊರತೆ, ಉಕ್ರೇನ್ ಮೇಲೆ ರಶ್ಯದ ದಾಳಿಗಳು ಎಲ್ಲವೂ ರಶ್ಯದ ಬಾಹ್ಯಾಕಾಶ ಕಾರ್ಯಕ್ರಮಗಳ ಮೇಲೆ ವರ್ಷಗಳಿಂದ ದುಷ್ಪರಿಣಾಮ ಬೀರುತ್ತಾ ಬಂದಿವೆ.

ರಶ್ಯದ ಬಾಹ್ಯಾಕಾಶ ಕಾರ್ಯಕ್ರಮಗಳು ಸೋವಿಯತ್ ವಿನ್ಯಾಸದ ಸೊಯುಜ್ ರಾಕೆಟ್‌ಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು, ಮರಳಲು ಬಳಸಿಕೊಳ್ಳುವಲ್ಲಿ ಸಮರ್ಥವಾಗಿದ್ದವು. ಆದರೆ, ಅದರ ಪ್ರಭಾವ ಇದನ್ನು ಮೀರಿ ಬೆಳೆಯಲು ವಿಫಲವಾಗಿದೆ. ಇತರ ರಾಷ್ಟ್ರಗಳ ಉಪಗ್ರಹಗಳು ಸೌರಮಂಡಲದ ಮೂಲೆ ಮೂಲೆಯನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದರೆ, ಸೋವಿಯತ್ ಒಕ್ಕೂಟದ ಪತನಾನಂತರ ರಶ್ಯ ಬಾಹ್ಯಾಕಾಶದ ಆಳದ ಅನ್ವೇಷಣೆ ನಡೆಸುವಲ್ಲಿ ಹೇಳಿಕೊಳ್ಳುವ ಸಾಧನೆ ಕೈಗೊಂಡಿಲ್ಲ.

ಈಗ ರಶ್ಯ, ಅಮೆರಿಕ, ಚೀನಾ ಮತ್ತು ಭಾರತಗಳ ನಡುವೆ ಹೆಚ್ಚುತ್ತಿರುವ ಬಾಹ್ಯಾಕಾಶ ಸ್ಪರ್ಧೆಯ ಸಂದರ್ಭದಲ್ಲೇ ರಶ್ಯದ ಬಾಹ್ಯಾಕಾಶ ಯೋಜನೆ ವೈಫಲ್ಯ ಕಂಡಿದೆ. ಈಗಾಗಲೇ ಉಕ್ರೇನ್‌ನಲ್ಲಿ ತನ್ನ ಕಾರ್ಯತಂತ್ರದ ಗುರಿಗಳನ್ನು ಈಡೇರಿಸಲು ಕಷ್ಟಪಡುತ್ತಿರುವ ಪುಟಿನ್ ಮುಂದೆ ಈ ವೈಫಲ್ಯ ಇನ್ನಷ್ಟು ಸವಾಲುಗಳನ್ನು ಒಡ್ಡಿದೆ.

ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಅಮೆರಿಕದೊಡನೆ ಸ್ಪರ್ಧಿಸುತ್ತಿರುವ ಚೀನಾ ಈಗಾಗಲೇ ರಶ್ಯದೊಡನೆ ಚಂದ್ರನ ಮೇಲೆ ಮಾನವ ನೆಲೆ ಸ್ಥಾಪಿಸಲು ಸಹಯೋಗ ಹೊಂದಿದೆ. ಆದರೆ, ಇತ್ತೀಚಿನ ಲೂನಾ-25 ಪತನ ಈ ಒಪ್ಪಂದದಲ್ಲಿ ಸಣ್ಣ ಪಾಲುದಾರನಾಗಿರುವ ರಶ್ಯಕ್ಕೆ ಇನ್ನಷ್ಟು ಕಡಿಮೆ ಪಾತ್ರ ಇರಬಹುದು ಎಂಬ ಭಾವನೆ ಮೂಡಿಸಿದೆ.

ನಾಸಾದ ಆಡಳಿತಗಾರ ಬಿಲ್ ನೆಲ್ಸನ್ ಈ ತಿಂಗಳ ಆರಂಭದಲ್ಲಿ ಲೂನಾ-25 ಯೋಜನೆಗೆ ರಶ್ಯಕ್ಕೆ ಶುಭ ಹಾರೈಸುವುದಾಗಿ ತಿಳಿಸಿದ್ದರು. ಆದರೆ, ಪ್ರಸಕ್ತ ನಡೆಯುತ್ತಿರುವ ಬಾಹ್ಯಾಕಾಶ ಓಟದ ಸ್ಪರ್ಧೆಯಲ್ಲಿ ಚೀನಾ ಮಾತ್ರವೇ ಅಮೆರಿಕಕ್ಕೆ ಪ್ರತಿಸ್ಪರ್ಧಿ ಎಂದು ಅವರು ಅಭಿಪ್ರಾಯ ಪಟ್ಟಿದ್ದರು.

‘‘ನಾವು ಈ ವಿಚಾರದ ಕುರಿತು ಚರ್ಚಿಸುತ್ತಿರುವ ಸಮಯದಲ್ಲಿ, ಚಂದ್ರನ ಮೇಲೆ ಮಾನವರನ್ನು ಕರೆದೊಯ್ಯುವ ಸಾಮರ್ಥ್ಯ ಪ್ರದರ್ಶಿಸಲು ರಶ್ಯ ಸಿದ್ಧವಿದೆ ಎನ್ನುವುದನ್ನು ಬಹಳಷ್ಟು ಜನರು ನಂಬಲು ಸಾಧ್ಯವಿಲ್ಲ’’ ಎಂದು ನೆಲ್ಸನ್ ಹೇಳಿದ್ದಾರೆ.

ಮೂಲತಃ, ಯುರೋಪಿನಲ್ಲಿ ನಾಸಾಗೆ ಸಮನಾಗಿರುವ, ಯುರೋಪಿಯನ್ ಸ್ಪೇಸ್ ಏಜೆನ್ಸಿ ರಶ್ಯದೊಡನೆ ಚಂದ್ರ ಅನ್ವೇಷಣಾ ಯೋಜನೆಯಲ್ಲಿ ಕೈಜೋಡಿಸಿ, ಅದಕ್ಕೆ ಅವಶ್ಯಕ ತಂತ್ರಜ್ಞಾನಗಳನ್ನು ಒದಗಿಸಲು ಉದ್ದೇಶಿಸಿತ್ತು. ಆದರೆ ರಶ್ಯದ ಉಕ್ರೇನ್ ಆಕ್ರಮಣದೊಂದಿಗೆ ಈ ಸಾಧ್ಯತೆಗಳೂ ಕೊನೆಗೊಂಡವು.

ರಶ್ಯದ ಬಾಹ್ಯಾಕಾಶ ನೀತಿಯ ಕುರಿತು ಗಮನ ಹರಿಸುವ ಸೆಂಟರ್ ಫಾರ್ ಯುರೋಪಿಯನ್ ಪಾಲಿಸಿ ಅನಾಲಿಸಿಸ್ ಇನ್ ವಾಶಿಂಗ್ಟನ್ ಸಂಸ್ಥೆಯ ಹಿರಿಯ ಸದಸ್ಯರಾದ ಪಾವೆಲ್ ಲುಜಿನ್ ಅವರು ರಶ್ಯದ ಚಂದ್ರ ಯೋಜನೆಗಳ ಮೇಲಿನ ಹೂಡಿಕೆ ಮೂಲತಃ ರಾಜಕೀಯ ಮತ್ತು ಪ್ರಚಾರದ ಗುರಿಗಳನ್ನಷ್ಟೇ ಹೊಂದಿವೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಗಿರೀಶ್ ಲಿಂಗಣ್ಣ

contributor

Similar News