ಪತ್ರಕರ್ತರನ್ನು 'ಚೆನ್ನಾಗಿ ನೋಡಿಕೊಳ್ಳಿ' ಎಂದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ
► 'ಚಾಯ್ ಪಾನಿ' ಕೊಡ್ತೀವಿ, ಪ್ರಶ್ನೆಗೆ ಉತ್ತರ ಕೊಡಲ್ಲ ಎನ್ನುವ ಬಿಜೆಪಿ ► ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ರಲ್ಲಿ ಭಾರತಕ್ಕೆ 161 ನೇ ಸ್ಥಾನ !
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಈ ದೇಶದ ಮಾಧ್ಯಮಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಬಿಜೆಪಿ ತನ್ನ ನಾಯಕರಿಗೆ, ಕಾರ್ಯಕರ್ತರಿಗೆ ಬಹಳ ಸ್ಪಷ್ಟ ಸಂದೇಶ ರವಾನಿಸುತ್ತಿದೆ. ಪ್ರಧಾನಿ ಮೋದಿ ಅವರು ಒಂಬತ್ತೂವರೆ ವರ್ಷಗಳಲ್ಲಿ ಒಮ್ಮೆಯೂ ಪತ್ರಿಕಾ ಗೋಷ್ಠಿ ಮಾಡದೆ , ಒಂದೇ ಒಂದು ರಿಯಲ್ ಸಂದರ್ಶನ ನೀಡದೆ, ಇಷ್ಟು ದೊಡ್ಡ ಜಿ 20 ಶೃಂಗ ಸಭೆಯನ್ನೇ ಒಂದೇ ಒಂದು ಪತ್ರಿಕಾ ಗೋಷ್ಠಿ ಮಾಡದೇ, ಒಂದೇ ಒಂದು ಪ್ರಶ್ನೆಗೆ ಉತ್ತರಿಸದೆ ಮಾಧ್ಯಮಗಳನ್ನು , ಪತ್ರಕರ್ತರನ್ನು ಹೇಗೆ "ನೋಡಿಕೊಳ್ಳಬೇಕು" ಅಂತ ಒಂದು ಅದ್ಭುತ ಮಾದರಿ ಹಾಕಿಕೊಟ್ಟಿದ್ದಾರೆ.
ಅದಕ್ಕೂ ಮೊದಲು ಎಲ್ಲಾದರೂ ಪ್ರಧಾನಿಗೆ, ಬಿಜೆಪಿ ನಾಯಕರಿಗೆ ನಿಜವಾದ ಪತ್ರಕರ್ತರು, ನಿಜವಾದ ಪ್ರಶ್ನೆ ಕೇಳಿ ಬಿಟ್ಟರೆ ಅವರನ್ನು ಹೇಗೆ " ಸರಿಯಾಗಿ ನೋಡಿಕೊಳ್ಳಬೇಕು" ಅಂತ ಬಿಜೆಪಿ ಐಟಿ ಸೆಲ್ ಹಾಗು ಅದರ ಬೆಂಬಲಿಗರು ನೂರಾರು ಬಾರಿ ವಾಟ್ಸ್ ಆಪ್ ನಲ್ಲಿ, ಟ್ವಿಟರ್ ನಲ್ಲಿ ಈಗಾಗಲೇ ತೋರಿಸಿದ್ದಾರೆ. ಈಗ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷರು ತಾನೇನು ಕಡಿಮೆಯಿಲ್ಲ ಎಂದು ಪತ್ರಕರ್ತರನ್ನು "ನೋಡಿಕೊಳ್ಳುವ" ಇನ್ನೊಂದು ವಿಧಾನವನ್ನು ತಮ್ಮ ನಾಯಕರು ಹಾಗು ಕಾರ್ಯಕರ್ತರಿಗೆ ತಿಳಿಸಿಕೊಟ್ಟಿದ್ದಾರೆ. ಅದೀಗ ಭಾರೀ ಚರ್ಚೆಯಲ್ಲಿದೆ.
ಮೊನ್ನೆ ರವಿವಾರ ಅಹ್ಮದ್ ನಗರಕ್ಕೆ ಚುನಾವಣಾ ತಯಾರಿ ಸಂಬಂಧಿತ ಸಭೆಗಾಗಿ ಬಂದಿದ್ದರು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಭವಾಂಕುಲೆ. ಅಲ್ಲಿ ಮೀಟಿಂಗ್ ಮಾಡುವಾಗ ಚುನಾವಣೆ ಸಮೀಪಿಸುತ್ತಿರುವಾಗ ಈ ಪತ್ರಕರ್ತರನ್ನು " ಹೇಗೆ ನೋಡಿಕೊಳ್ಳಬೇಕು" ಎಂಬುದರ ಬಗ್ಗೆ ಪಕ್ಷದ ನಾಯಕರು ಹಾಗು ಕಾರ್ಯಕರ್ತರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ರಾಜ್ಯಾಧ್ಯಕ್ಷರು.
"2024 ರ ಚುನಾವಣೆಗೆ ಮೊದಲು ಯಾವ ಕಾರಣಕ್ಕೂ ಬಿಜೆಪಿ ಬಗ್ಗೆ ಒಂದೇ ಒಂದು ನೆಗೆಟಿವ್ ಸುದ್ದಿ ಬರಬಾರದು. ಅದಕ್ಕೆ ನೀವು ಆಗಾಗ ಪತ್ರಕರ್ತರನ್ನು " ಚಾಯ್ ಪಾನಿಗಾಗಿ" ಕರೆದುಕೊಂಡು ಹೋಗುತ್ತಿರಬೇಕು. ಅವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು " ಎಂದು ಹೇಳಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷರು. ಅಷ್ಟೇ ಅಲ್ಲ. " ಚಾಯ್ ಪಾನಿ" ಅಂತ ನಾನು ಹೇಳುವಾಗ ಅದು ಏನು ಅಂತ ನಿಮಗೆ ಚೆನ್ನಾಗಿ ಗೊತ್ತಲ್ವಾ ? ಅಂತಾನೂ ಕೇಳಿದ್ದಾರೆ. ಯಾವ ಕಾರಣಕ್ಕೂ ಬಿಜೆಪಿ ವಿರುದ್ಧ ಒಂದೇ ಒಂದು ನೆಗೆಟಿವ್ ಸುದ್ದಿ ಬರಬಾರದು ಎಂದು ರಾಜ್ಯಾಧ್ಯಕ್ಷರು ಫರ್ಮಾನು ಹೊರಡಿಸಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದುವರಿದಿರುವ ರಾಜ್ಯಾಧ್ಯಕ್ಷರು " ಸಣ್ಣಪುಟ್ಟ ವೆಬ್ ಸೈಟ್ ಗಳನ್ನು , ಯೂಟ್ಯೂಬ್ ಚಾನಲ್ ಗಳನ್ನು ನಡೆಸುವ ವೀಡಿಯೊ ಪತ್ರಕರ್ತರು ಸಣ್ಣ ಪುಟ್ಟ ವಿಷಯಗಳನ್ನೇ ದೊಡ್ಡ ಬಾಂಬ್ ಸ್ಫೋಟ ಆದ ಹಾಗೆ ಮಾಡಿ ಬಿಡ್ತಾರೆ. ಅದಕ್ಕೆ ಆಯಾ ಬೂತ್ ಗಳಲ್ಲಿ ಯಾರು ಪ್ರಿಂಟ್ ಮೀಡಿಯಾದವರು, ಯಾರು ವೆಬ್ ಸೈಟ್ ನವರು, ಯಾರು ಯೂಟ್ಯೂಬ್ ಚಾನಲ್ ನವರು ಎಂದು ಪಟ್ಟಿ ಮಾಡಿ ಅವರೊಂದಿಗೆ ಸಂಪರ್ಕದಲ್ಲಿರಬೇಕು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು " ಎಂದು ಹೇಳಿರುವ ಆಡಿಯೋ ಈಗ ವೈರಲ್ ಆಗಿದೆ.
ನೋಡಿ. ಮೋದೀಜಿ ಹಾಗು ಅವರ ಪಕ್ಷದ ನಾಯಕರು ಈ ದೇಶದಲ್ಲಿ ಪತ್ರಿಕೋದ್ಯಮವನ್ನು ಬೆಳಗಲು, ಪತ್ರಕರ್ತರನ್ನು " ಚೆನ್ನಾಗಿ ನೋಡಿಕೊಳ್ಳಲು" ಎಷ್ಟೊಂದು ಶ್ರಮ ಹಾಕ್ತಾ ಇದ್ದಾರಲ್ವಾ ?
ಕಳೆದ ಒಂಬತ್ತೂವರೆ ವರ್ಷಗಳಿಂದ ಮೋದೀಜಿ ಹಾಗು ಅವರ ಪಕ್ಷದವರು ಹಾಕಿರುವ ಈ ಅಭೂತಪೂರ್ವ ಶ್ರಮದಿಂದಾಗಿಯೇ ಇಂದು ಭಾರತ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪಟ್ಟಿಯಲ್ಲಿ 161ಕ್ಕೆ ಹೋಗಿ ತಲುಪಿದೆ. ಅಂದ್ರೆ ಅದು ಎಷ್ಟು ಕೆಳಗೆ ಹೋಗಿದೆ ಅಂದ್ರೆ ಸುಮ್ನೆ ಹೀಗೆ ಕೆಳಗೆ ನೋಡಿದ್ರೆ ಕಾಣೋದಿಲ್ಲ, ಸೀದಾ ಕೆಳಗೆ ಪಾತಾಳಕ್ಕೆ ಇಳಿದು ಟಾರ್ಚ್ ಹಾಕಿ ನೋಡ್ಬೇಕು , ಅಲ್ಲಿಗೆ ತಲುಪಿದೆ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿ ಈ ದೇಶದಲ್ಲಿ.
ಇದೇ ವರ್ಷ ಫೆಬ್ರವರಿಯಲ್ಲಿ ಇದೇ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶಶಿಕಾಂತ್ ವಾರಿಶೆ ಎಂಬ ಪತ್ರಕರ್ತನನ್ನು ಒಂದು ಎಸ್ ಯು ವಿ ವಾಹನದಡಿ ಹೊಸಕಿ ಹಾಕಿ ಕೊಂದು ಬಿಡಲಾಯಿತು. ಶಶಿಕಾಂತ್ ಮಾಡಿದ್ದ ಮಹಾ ಪಾಪವೇನು ಗೊತ್ತಾ ? ಅವರು ಅಲ್ಲಿನ ಬಿಜೆಪಿ ಬೆಂಬಲಿತ ಲಾಬಿಗಳು ಪತ್ರಕರ್ತರಿಗೆ ಕೊಡುತ್ತಿದ್ದ " ಚಾಯ್ ಪಾನಿ" ಯನ್ನು ಸ್ವೀಕರಿಸಲು ನಿರಾಕರಿಸಿ ರತ್ನಗಿರಿ ರಿಫೈನರಿ ಹಾಗು ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಗೆ ಸ್ಥಳೀಯರ ವಿರೋಧ ಇರುವುದನ್ನು ವರದಿ ಮಾಡಿದ್ದರು. ಅದರಲ್ಲಿ ಸ್ಥಳೀಯ ಭೂ ಲಾಬಿಯ ಪಂಢರಿನಾತ್ ಅಂಬೇರ್ಕರ್ ಹೇಗೆ ಶಾಮೀಲಾಗಿದ್ದಾನೆ, ಆತ ಹೇಗೆ ಪ್ರಧಾನಿ ಮೋದಿ, ಸಿಎಂ ಶಿಂದೆ ಮತ್ತಿತರರ ಫೋಟೋಗಳ ಜೊತೆ ಪೋಸ್ಟರ್ ಹಾಕಿಕೊಂಡು ಮರೆಯುತ್ತಿದ್ದಾನೆ ಎಂದು ಮಹಾನಗರಿ ಟೈಮ್ಸ್ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೇ ಶಶಿಕಾಂತ್ ರನ್ನು ವಾಹನದಡಿ ಹಾಕಿ ಕೊಂದೇ ಬಿಡಲಾಯಿತು.
ಯಾವುದೇ ಪಕ್ಷ ಅಧಿಕಾರದಲ್ಲಿರಲಿ. ವಸ್ತುನಿಷ್ಠವಾಗಿ ವರದಿ ಮಾಡುವ, ನೇರ ಪ್ರಶ್ನೆ ಕೇಳುವ ಪತ್ರಕರ್ತರಿಗೆ ಇಲ್ಲಿ ಅನುಕೂಲಕರ ವಾತಾವರಣ ಇರೋದೇ ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಅಪಾಯಕಾರಿ ವಾತಾವರಣವಾಗಿ ಬದಲಾಗಿಬಿಟ್ಟಿದೆ.
ಆದರೂ ಈ ಚಾಯ್ ಪಾನಿಯನ್ನು ಧಿಕ್ಕರಿಸಿ ಕೇಳಬೇಕಾದ ಪ್ರಶ್ನೆಗಳನ್ನು ಕೇಳುವ, ಹೇಳಬೇಕಾದ ಸತ್ಯವನ್ನು ಹೇಳಿಯೇ ಬಿಡುವ ನೂರಾರು ಪತ್ರಕರ್ತರು ಇನ್ನೂ ಇದ್ದಾರೆ. ಈ ದೇಶದ ಸಣ್ಣ ಸಣ್ಣ ಊರುಗಳಲ್ಲಿ ಹೀಗೆ ಸತ್ಯ ಹೇಳುವ, ನಿಜವಾದ ಪ್ರಶ್ನೆ ಕೇಳುವ ಪತ್ರಕರ್ತರು, ಬಿಡಿ ವರದಿಗಾರರು ಈ ದೇಶಕ್ಕಾಗಿ ಯೋಧರಂತೆ ಸೇವೆ ಸಲ್ಲಿಸುತ್ತಿದ್ದಾರೆ.
ಚಾಯ್ ಪಾನಿಯನ್ನು ತಿರಸ್ಕರಿಸಿ ಪ್ರಶ್ನೆ ಕೇಳಿದ, ವರದಿ ಮಾಡಿದ ಪತ್ರಕರ್ತರಿಗೆ ಇಲ್ಲಿ ಏನೇನು ಗತಿ ತಂದಿಡಲಾಗಿದೆ ಎಂಬುದನ್ನೂ ಈ ದೇಶ ನೋಡಿದೆ. ಉತ್ತರ ಪ್ರದೇಶದಲ್ಲಿ ಬಿಸಿಯೂಟದ ಬದಲು ಮಕ್ಕಳಿಗೆ ರೊಟ್ಟಿ ಹಾಗು ಉಪ್ಪು ಕೊಡುತ್ತಿದ್ದಾರೆ ಎಂದು ವರದಿ ಮಾಡಿ ದೇಶದ ಗಮನ ಸೆಳೆದ ಪವನ್ ಕುಮಾರ್ ಜೈಸ್ವಾಲ್ ವಿರುದ್ಧವೇ ಆದಿತ್ಯನಾಥ್ ಸರಕಾರ ಪ್ರಕರಣ ದಾಖಲಿಸಿತು. ಕೊನೆಗೆ ಆ ದಿಟ್ಟ ಪತ್ರಕರ್ತ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಜೀವ ಬಿಟ್ಟರು.
ವರದಿ ಮಾಡಲು ಹೋದ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ರನ್ನು 28 ತಿಂಗಳ ಕಾಲ ಉತ್ತರ ಪ್ರದೇಶ ಸರಕಾರ ಜೈಲಿನಲ್ಲಿಟ್ಟಿತು. ಮೊನ್ನೆ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ ಅವರಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಗೆ ನೀವೇನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಕರ್ತೆ ಸಬ್ರೀನಾ ಸಿದ್ದೀಕಿ ವಿರುದ್ಧ ಇನ್ನಿಲ್ಲದಂತೆ ಬಿಜೆಪಿ ಐಟಿ ಸೆಲ್ ಹಾಗು ಬೆಂಬಲಿಗರ ಪಡೆ ಸೋಷಿಯಲ್ ಮೀಡಿಯಾ ದಾಳಿ ನಡೆಸಿತು. ಕೊನೆಗೆ ಇದು ಸರಿಯಲ್ಲ ಎಂದು ಶ್ವೇತ ಭವನವೇ ಹೇಳಬೇಕಾಯಿತು.
ನಿಷ್ಠುರ ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇಲ್ಲಿ ನಿಜವಾದ ಪ್ರಶ್ನೆ ಕೇಳುವ ಪತ್ರಕರ್ತರನ್ನು, ಮಾಧ್ಯಮ ಸಂಸ್ಥೆಗಳನ್ನು ಪ್ರಧಾನಿ ಮೋದಿ ಹಾಗು ಬಿಜೆಪಿ ನಾಯಕರು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ಅವರಿಗೆ ಸಂದರ್ಶನ ಕೊಡುವುದೇ ಇಲ್ಲ. ಅವರಿಗೆ ಸರಿಯಾಗಿ ಮಾಹಿತಿಯೂ ಸಿಗೋದಿಲ್ಲ. ಆದರೆ ಹಗಲು ರಾತ್ರಿ ಭಟ್ಟಂಗಿತನ ಮಾಡುವ, ಟಿವಿಯಲ್ಲಿ ಸುಳ್ಳು ಸುಳ್ಳೇ ಹೇಳಿ ದ್ವೇಷ ಪ್ರಸಾರ ಮಾಡುವ ಆಂಕರ್ ಗಳನ್ನು ಕರೆದೂ ಕರೆದು ಮೋದೀಜಿ ಹಾಗು ಅವರ ಪಕ್ಷದವರು ಸಂದರ್ಶನ ಕೊಡ್ತಾರೆ. ಯೂಟ್ಯೂಬರ್ ಗಳನ್ನೂ ಕರೆದು ಮಾತಾಡ್ತಾರೆ. ಅವರು " ನೀವು ಊಟ ಯಾವಾಗ ಮಾಡೋದು, ನಿಮಗೆ ಸುಸ್ತಾಗಲ್ವಾ, ನೀವು ಮಾವಿನ ಹಣ್ಣು ಹೇಗೆ ತಿನ್ನೋದು, ಎಷ್ಟೊಂದು ಕೆಲಸ ಮಾಡ್ತಾ ಇದ್ದೀರಿ... ರಜೆ ತೆಗೊಳೋದೆ ಇಲ್ವಾ ?" ಅಂತೆಲ್ಲ ತೀರಾ ಅಸಂಬದ್ಧ ಪ್ರಶ್ನೆ ಕೇಳಿ ಹೋಗ್ತಾರೆ.
ಇದು ಪತ್ರಕರ್ತರಿಗೆ "ಚಾಯ್ ಪಾನಿ " ಕೊಟ್ಟು ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ದೇಶದಲ್ಲಿ ಪತ್ರಕರ್ತರ ಹಾಗು ಪತ್ರಿಕೋದ್ಯಮದ ಸ್ಥಿತಿಗತಿ. ಇದನ್ನು ಬದಲಾಯಿಸೋದು ನಿಮಗೆ ಮಾತ್ರ ಸಾಧ್ಯ. ಭಟ್ಟಂಗಿ ಚಾನಲ್ ಗಳನ್ನು ನೋಡೋದನ್ನು ಕೂಡಲೇ ಬಿಟ್ಟು ಬಿಡಿ. ಮಡಿಲ ಮಾಧ್ಯಮಗಳನ್ನು ತಿರಸ್ಕರಿಸಿ. ವಾರ್ತಾಭಾರತಿ ಸಹಿತ ಎಲ್ಲ ವಸ್ತುನಿಷ್ಠ ಪತ್ರಕರ್ತರನ್ನು, ಮಾಧ್ಯಮ ಸಂಸ್ಥೆಗಳನ್ನು ಬೆಂಬಲಿಸಿ. ಅವರ ಯೂಟ್ಯೂಬ್ ಚಾನಲ್ ಗಳನ್ನು Subscribe ಮಾಡಿ. ಅವರಿಗೆ ನಿಮ್ಮಿಂದಾಗುವ ಆರ್ಥಿಕ ನೆರವು ನೀಡಿ. ಅವರು ಸ್ವತಂತ್ರವಾಗಿ ಕೆಲಸ ಮಾಡಲು ಬೆಂಬಲಿಸಿ, ನೆರವಾಗಿ.