ಮಣಿಪುರ ಸಂಘರ್ಷ: ತಟಸ್ಥ ನಾಗಾ ಸಮುದಾಯದ ತಳಮಳಗಳೇನು?
ತಮ್ಮ ನಿಲುವು ಮತ್ತು ಬೇಡಿಕೆಗಳು ಕುಕಿಗಳೊಂದಿಗೆ ಹೆಚ್ಚು ಸಮಾನವಾಗಿವೆ ಎಂಬುದನ್ನು ನಾಗಾ ನಾಯಕರು ಒಪ್ಪಿಕೊಳ್ಳುತ್ತಾರೆ. ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿರುವ ಆದಿವಾಸಿಗಳಾಗಿ ಎರಡೂ ಸಮುದಾಯದವರ ಅನೇಕ ಸಮಸ್ಯೆಗಳು ಒಂದೇ ಬಗೆಯವು ಎಂಬ ಅವರ ಮಾತಿನಲ್ಲಿ ಸತ್ಯವಿದೆ.
ಮಣಿಪುರದ ಎರಡನೇ ಅತಿ ದೊಡ್ಡ ಸಮುದಾಯವಾದ ನಾಗಾಗಳು, ಮೈತೈ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳಲ್ಲಿ ಈವರೆಗೂ ತಟಸ್ಥರಾಗಿಯೇ ಇದ್ದುದು ಕಂಡಿದೆ.
ಇತ್ತೀಚೆಗೆ, ಸಮುದಾಯದ ಅತ್ಯುನ್ನತ ಸಂಸ್ಥೆಯಾದ ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್ಸಿ) ಬಹಿರಂಗವಾಗಿ ವ್ಯಕ್ತಪಡಿಸಿದ ನಿಲುವೊಂದು ಎಲ್ಲರ ಹುಬ್ಬೇರುವಂತೆ ಮಾಡಿತು. ಕುಕಿ-ಜೋ ಸಮುದಾಯದ ಈವರೆಗಿನ ಪ್ರತಿಯೊಂದು ಹೇಳಿಕೆ ಮತ್ತು ಮನವಿ ಪತ್ರಗಳಲ್ಲಿರುವುದು ಕಟುವಾದ ಸುಳ್ಳುಗಳು, ಸುಳ್ಳು ಇತಿಹಾಸ ಮತ್ತು ಕೃತ್ರಿಮ ಮಾಹಿತಿ ಎಂಬ ಅದರ ತೀಕ್ಷ್ಣ ಪ್ರತಿಕ್ರಿಯೆ ಚರ್ಚೆಗೆ ಎಡೆ ಮಾಡಿಕೊಟ್ಟಿತು.
ಕುಕಿಗಳ ಪ್ರತ್ಯೇಕ ಸರಕಾರದ ಬೇಡಿಕೆಯನ್ನು ವಿರೋಧಿಸಿ ನಾಗಾ ಸಮುದಾಯದ ಎಂಟು ಶಾಸಕರು ನೀಡಿದ್ದ ಕಾರಣಗಳು ಮೈತೈ ಸಮುದಾಯದವರು ಕೊಡುತ್ತಿರುವ ಕಾರಣಗಳನ್ನೇ ಹೋಲುತ್ತಿದ್ದ ಹಿನ್ನೆಲೆಯಲ್ಲಿ, ನಾಗಾಗಳು ಮೈತೈಗಳ ಪರವಿದ್ದಾರೆ ಎಂಬ ಅನುಮಾನಗಳು ಎದ್ದವು. ನಾಗಾ ಶಸ್ತ್ರಸಜ್ಜಿತ ಗುಂಪುಗಳು ಮೈತೈಗಳಿಗೆ ಸಹಾಯ ಮಾಡುತ್ತಿವೆ ಎಂದು ಈಗಾಗಲೇ ಇದ್ದ ಆರೋಪದ ಹಿನ್ನೆಲೆಯಲ್ಲಿ ಈ ಅನುಮಾನ ತೀವ್ರ ಸ್ವರೂಪದ್ದೇ ಆಗಿತ್ತು.
ಮಣಿಪುರದಲ್ಲಿನ ಸಂಘರ್ಷ ಐದನೇ ತಿಂಗಳಿಗೆ ಕಾಲಿಟ್ಟ ಹೊತ್ತಿನ ಈ ಬೆಳವಣಿಗೆಗಳು ನಾಗಾಗಳು ಅಂತಿಮವಾಗಿ ಮೈತೈಗಳ ಪರ ನಿಂತರೇ ಎಂಬ ಊಹಾಪೋಹಕ್ಕೆ ಕಾರಣವಾಯಿತು. ಆದರೆ ಇದು ಮೇಲೆ ಕಾಣಿಸುವುದಕ್ಕಿಂತಲೂ ಸಂಕೀರ್ಣವಾಗಿದೆ ಎಂಬುದನ್ನು ಸ್ಕ್ರಾಲ್ ಡಿಜಿಟಲ್ ಸುದ್ದಿ ಮಾಧ್ಯಮ ನಡೆಸಿದ ಶೋಧ ಕಂಡುಕೊಂಡಿದೆ. ನಾಗಾ ಸಮುದಾಯದ ರಾಜಕಾರಣಿಗಳು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರನ್ನು ಅದು ಮಾತನಾಡಿಸಿದಾಗ ತಿಳಿದಿರುವ ಸತ್ಯಗಳು, ಇದು ಮುಂದೆ ದೀರ್ಘ ಮತ್ತು ಸಂಕೀರ್ಣವಾದ ದಾರಿಯಲ್ಲಿ ಸಾಗಲಿದೆ ಎಂಬುದನ್ನೇ ಸೂಚಿಸುತ್ತದೆ.
ಮಣಿಪುರದಲ್ಲಿ ಕಾದಾಡುತ್ತಿರುವ ಗುಂಪುಗಳು ಮೈತೈಗಳು ಮತ್ತು ಕುಕಿಗಳಾಗಿರಬಹುದು, ಆದರೆ ಅದರಿಂದ ನಾಗಾಗಳೂ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಾಗಾಗಿ ಶಾಂತಿ ಸ್ಥಾಪನೆ ವಿಚಾರ ನಾಗಾಗಳನ್ನೂ ಒಳಗೊಂಡಿರುತ್ತದೆ. ಮಣಿಪುರದ ನಾಗಾ ಹಕ್ಕುಗಳ ವರ್ಕಿಂಗ್ ಗ್ರೂಪ್‌ನ ಸಂಚಾಲಕ ಮಾಲ್ವಿಯೋ ಜೆ ವಾಬಾ ಹೇಳಿದಂತೆ, ಯಾವುದೇ ಪರಿಹಾರ ಕ್ರಮಗಳ ವಿಚಾರದಲ್ಲಿ ನಾಗಾಗಳೊಂದಿಗೆ ಸಮಾಲೋಚಿಸುವುದು ಮತ್ತು ಒಪ್ಪಿಗೆ ಪಡೆಯುವುದು ಅಗತ್ಯವಾಗಿದೆ.
ಹಳೆಯ ವೈಷಮ್ಯ:
ಮಣಿಪುರದ ಜನಸಂಖ್ಯೆಯ ಕಾಲು ಭಾಗದಷ್ಟು ನಾಗಾಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ಕಣಿವೆಯನ್ನು ಸುತ್ತುವರಿದ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ, ಕಣಿವೆ ಪ್ರದೇಶದ ಹೆಚ್ಚಾಗಿ ರಾಜ್ಯದ ಅತಿದೊಡ್ಡ ಜನಾಂಗೀಯ ಗುಂಪಾದ ಮೈತೈಗಳ ನೆಲೆಯಾಗಿದೆ. ರಾಜ್ಯದ ಮೂರನೇ ಅತಿ ದೊಡ್ಡ ಸಮುದಾಯವಾದ ಕುಕಿಗಳು ಕೂಡ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿದ್ದಾರೆ.
ಇದು ಆಗಾಗ ನಾಗಾಗಳು ಮತ್ತು ಕುಕಿಗಳ ನಡುವೆ ಭೂಮಿಗೆ ಸಂಬಂಧಿಸಿದಂತೆ ಸಂಘರ್ಷಕ್ಕೆ ಕಾರಣವಾಗುತ್ತದೆ. ವಸಾಹತುಶಾಹಿ ಕಾಲದಿಂದಲೂ ಘರ್ಷಣೆಗಳು ನಡೆಯುತ್ತಿದ್ದುದು ಹೌದಾದರೂ, ರಾಜಕೀಯ ಅಸ್ಮಿತೆ ಮತ್ತು ಆಕಾಂಕ್ಷೆಗಳು ಸ್ಪಷ್ಟವಾಗಿರುವುದು ದ್ವೇಷವನ್ನು ಇನ್ನಷ್ಟು ಹೆಚ್ಚಿಸಿದೆ. ಕಲ್ಪಿತ ನಾಗಾ ತಾಯ್ನಾಡು ಅಥವಾ ನಾಗಾಲಿಮ್ ಭಾರತ ಮತ್ತು ಮ್ಯಾನ್ಮಾರ್ ಅನ್ನು ವ್ಯಾಪಿಸಿದೆ, ಮಣಿಪುರದಲ್ಲಿ ವಿಶಾಲವಾದ ಪ್ರದೇಶಗಳನ್ನು ಹೊಂದಿದೆ. ಇದು ಕುಕಿಗಳು ತಮ್ಮ ಪ್ರದೇಶವೆಂದು ಹೇಳಿಕೊಳ್ಳುವ ಪ್ರದೇಶಗಳನ್ನೂ ಅತಿಕ್ರಮಿಸುತ್ತದೆ.
1993ರಲ್ಲಿ ಈ ವಿವಾದ ಉಗ್ರ ಜನಾಂಗೀಯ ಘರ್ಷಣೆಗೆ ಎಡೆ ಮಾಡಿಕೊಟ್ಟಾಗ, ನೂರಾರು ಜನರು ಬಲಿಯಾಗಿದ್ದರು ಮತ್ತು ಹಳ್ಳಿಗಳಿಂದ ಜನರು ಸ್ಥಳಾಂತರಗೊಂಡಿದ್ದರು.
ಅದೇ ಸಮಯದಲ್ಲಿ, ನಾಗಾ ಮಾತೃಭೂಮಿಯ ಕಲ್ಪನೆ ರಾಜ್ಯದ ನಕ್ಷೆಯನ್ನು ಬದಲಾಯಿಸುವ ವಿಚಾರವಾಗಿ ತೀವ್ರ ವಿರೋಧ ತೋರುವ ಮೈತೈಗಳೊಂದಿಗೆ ಕೂಡ ನಿರಂತರ ಘರ್ಷಣೆ ನಡೆದೇ ಇತ್ತು. ವಾಸ್ತವವಾಗಿ, ಮಣಿಪುರದ ಪ್ರತ್ಯೇಕ ರಾಷ್ಟ್ರ-ರಾಜ್ಯದ ಬೇಡಿಕೆಯ ಮೈತೈ ಬಂಡಾಯ ಹುಟ್ಟಿಕೊಳ್ಳುವುದಕ್ಕೆ ನಾಗಾ ಉಗ್ರಗಾಮಿಗಳ ನಿಲುವಿಗೆ ಪ್ರತಿಯಾದ ಧೋರಣೆಯೂ ಭಾಗಶಃ ಕಾರಣವಾಯಿತು.
ತಟಸ್ಥ ನಿಲುವು?:
ಪ್ರಸ್ತುತ ಘರ್ಷಣೆಯ ಆರಂಭಿಕ ದಿನಗಳಲ್ಲಿ ನಾಗಾ ಸಮುದಾಯದ ನಾಗರಿಕ ಸಮಾಜದ ಗುಂಪುಗಳು ಮತ್ತು ಚರ್ಚ್‌ಗಳ ನಿಲುವು ಹಿಂಸೆಯನ್ನು ಖಂಡಿಸುವ ಹೇಳಿಕೆಗಳನ್ನು ನೀಡುವುದಕ್ಕೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಎರಡೂ ಕಡೆಯವರನ್ನು ಒತ್ತಾಯಿಸುವುದಕ್ಕೆ ಸೀಮಿತವಾಗಿತ್ತು. ಜುಲೈನಲ್ಲಿ ನಾಗಾ ಮಹಿಳೆಯನ್ನು ಕುಕಿ ಮಹಿಳೆ ಎಂದು ತಪ್ಪಾಗಿ ಭಾವಿಸಿದ ಮೈತೈ ಗುಂಪೊಂದು ಕೊಂದುಹಾಕಿದಾಗಲೂ ನಾಗಾ ಸಮುದಾಯದ ನಾಗರಿಕ ಸಮಾಜದ ಸಂಘಟನೆಗಳು ಮತ್ತು ಪ್ರತಿನಿಧಿಗಳು ತೀವ್ರವಾಗಿ ಪ್ರತಿಕ್ರಿಯಿಸಿರಲಿಲ್ಲ.
ಆಗಸ್ಟ್ ಮೊದಲ ವಾರದಲ್ಲಿ ಎಂಟು ನಾಗಾ ಶಾಸಕರು ತಮ್ಮ ಕಣಿವೆ ಮೂಲದ 32 ಮಂದಿಯ ನಿಯೋಗದೊಂದಿಗೆ ಪ್ರಧಾನಿ ನಿವಾಸಕ್ಕೆ ಬಂದಾಗ ಅವರು ತಟಸ್ಥ ನಿಲುವಿನಿಂದ ದೂರ ಸರಿದಂಥ ಮೊದಲ ಲಕ್ಷಣಗಳು ಕಂಡುಬಂದವು. ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ, ಅಸ್ಸಾಂ ರೈಫಲ್ಸ್ ಕಾರ್ಯಾಚರಣೆಯ ನ್ಯಾಯವ್ಯಾಪ್ತಿಯ ಮೇಲಿನ ನಿರ್ಬಂಧಗಳು ಮತ್ತು ಕುಕಿ ಉಗ್ರಗಾಮಿ ಗುಂಪುಗಳೊಂದಿಗಿನ ಕದನ ವಿರಾಮ ಒಪ್ಪಂದ ರದ್ದುಗೊಳಿಸುವುದು ಸೇರಿದಂತೆ ಮೇ 3ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಮೈತೈಗಳು ಪದೇ ಪದೇ ಎತ್ತುತ್ತಿದ್ದ ಹಲವಾರು ಬೇಡಿಕೆಗಳೇ ನಾಗಾ ನಿಯೋಗದ ಬೇಡಿಕೆಗಳ ಭಾಗವೂ ಆಗಿದ್ದವು.
ಇದಕ್ಕಿಂತ ಗಮನ ಸೆಳೆದದ್ದೆಂದರೆ, ಕುಕಿಗಳ ಪ್ರತ್ಯೇಕ ರಾಜ್ಯ ಬೇಡಿಕೆ ಯಾವುದೇ ಕಾರಣಕ್ಕೂ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ನಾಗಾ ಸಮುದಾಯ ಹೇಳಿದೆ ಎಂಬುದು. ಇದು ಮಣಿಪುರದ ಪ್ರಾದೇಶಿಕ ಸಮಗ್ರತೆ ಕುರಿತ ಮೈತೈ ನಿಲುವನ್ನೇ ಸ್ಪಷ್ಟವಾಗಿ ಅನುಮೋದಿಸುತ್ತಿದೆ ಎಂಬ ಗ್ರಹಿಕೆ ವ್ಯಾಪಕವಾಗಿ ಕಂಡುಬಂತು.
ಯುಎನ್‌ಸಿ ಮತ್ತು ನಾಗಾ ದಂಗೆಕೋರ ಗುಂಪುಗಳ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ನ ಇಸಾಕ್-ಮುಯಿವಾ ಬಣ ಅಥವಾ ಎನ್‌ಎಸ್‌ಸಿಎನ್ (ಐಎಂ) ಪ್ರಸಕ್ತ ಮಣಿಪುರದ ಗುಡ್ಡಗಾಡು ಜಿಲ್ಲೆಗಳ ಕೆಲ ಭಾಗಗಳನ್ನು ಒಳಗೊಂಡ ಪ್ರತ್ಯೇಕ ನಾಗಾ ಆಡಳಿತ ಘಟಕಕ್ಕಾಗಿ ಕೇಂದ್ರದೊಂದಿಗೆ ಮಾತುಕತೆ ನಡೆಸುತ್ತಿದೆ. ಇದು ಎರಡೂ ಸಮುದಾಯಗಳು ನಾಗಾ ಶಾಸಕರ ಮೇಲೆ ತೀವ್ರ ವಾಗ್ದಾಳಿ ನಡೆಸುವುದಕ್ಕೆ ಕಾರಣವಾಗಿದೆ.
1997ರಲ್ಲಿ ಕೇಂದ್ರ ಸರಕಾರದೊಂದಿಗೆ ಮೊದಲ ಬಾರಿಗೆ ಮಾತುಕತೆ ಪ್ರಾರಂಭಿಸಿದ ಎನ್‌ಎಸ್‌ಸಿಎನ್ (ಐಎಂ), 2015ರಲ್ಲಿ ಮೋದಿ ಸರಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿತು. ಇದು ನಾಗಾಗಳ ವಿಶಿಷ್ಟ ಇತಿಹಾಸ ಮತ್ತು ಸ್ಥಾನವನ್ನು ಗುರುತಿಸುತ್ತದೆ. ಆದರೆ ನಾಗಾಗಳು ಮತ್ತು ಕೇಂದ್ರದ ನಡುವಿನ ಮಾತುಕತೆಗಳು 2019ರಿಂದ ಮತ್ತೆ ಸ್ಥಗಿತಗೊಳ್ಳುವುದಕ್ಕೆ ಶುರುವಾಯಿತು.
ಈಗಿನ ಬೇಡಿಕೆಗೆ ಸಹಿ ಮಾಡಿರುವ ನಾಗಾ ಶಾಸಕರೊಬ್ಬರ ಪ್ರಕಾರ, ಪ್ರತ್ಯೇಕ ಕುಕಿ ಆಡಳಿತಕ್ಕೆ ನಾಗಾ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿದೆ ಎಂದರೆ ಅದು ಮೈತೈಗಳೊಂದಿದೆ ನಿಂತಿದೆ ಎಂದಲ್ಲ. ಇದು ತಪ್ಪು ಗ್ರಹಿಕೆಯಾಗಿದ್ದು, ನಾಗಾ ಸಮುದಾಯ ಹೇಳಲು
ಉದ್ದೇಶಿಸಿರುವುದು ಕುಕಿ ಪ್ರತ್ಯೇಕ ಆಡಳಿತ ಬೇಡಿಕೆ ನಾಗಾ ಪ್ರದೇಶ
ಗಳ ಮೇಲೆ ಪರಿಣಾಮ ಬೀರಬಾರದು ಎಂಬುದಷ್ಟೇ ಎಂಬುದು ಆ ಶಾಸಕರು ಕೊಡುವ ವಿವರಣೆ. ಅದನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸಬೇಕಾಗಿತ್ತು ಮತ್ತದನ್ನು ಮಾಡಿದ್ದೇವೆ ಎನ್ನುತ್ತಾರೆ ಅವರು.
ಮತ್ತೊಂದು ತಿರುವು:
ಆದರೆ ಇನ್ನೊಂದು ತಿರುವು ಈ ವಿದ್ಯಮಾನಕ್ಕೆ ಸಿಕ್ಕಿದೆ. ಕಳೆದ ತಿಂಗಳು ಎನ್‌ಎಸ್‌ಸಿಎನ್ (ಐಎಂ) ಪ್ರಸ್ತಾಪ ಬರುವ ವೀಡಿಯೊವೊಂದು ಹರಿದಾಡಿದ್ದು, ಅದರಲ್ಲಿರುವ ಯುವಕ ಎನ್‌ಎಸ್‌ಸಿಎನ್ (ಐಎಂ) ಕಾರ್ಯಕರ್ತ ತಾನೆಂದು ಹೇಳಿಕೊಂಡಿರುವುದಲ್ಲದೆ, ಮೈತೈ ಉಗ್ರಗಾಮಿ ಗುಂಪಾದ ಪ್ರೆಪಕ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವುದನ್ನು ಒಪ್ಪಿಕೊಳ್ಳುವುದು ಕಂಡುಬರುತ್ತದೆ. ಆದರೆ, ಇದು ಉದ್ದೇಶಪೂವರ್ಕವಾಗಿ ಸೃಷ್ಟಿಸಲಾಗಿರುವ ವೀಡಿಯೊ ಎಂದು ಎನ್‌ಎಸ್‌ಸಿಎನ್ (ಐಎಂ) ವಾದಿಸಿದೆ. ಎಲ್ಲ ಆರೋಪಗಳನ್ನು ಅದು ತಳ್ಳಿಹಾಕಿದೆ.
ತಮ್ಮೊಳಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು, ಆದರೆ ಎನ್‌ಎಸ್‌ಸಿಎನ್ (ಐಎಂ) ಯಾವುದೇ ಒಂದು ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದೂ ಅದು ಹೇಳಿದೆ.
ನಿಯಂತ್ರಣದ ಆಚೆ:
ಆದರೂ, ಯುಎನ್‌ಸಿ ಮತ್ತು ಐಎಂ ನಿಯಂತ್ರಣದಲ್ಲಿಲ್ಲದ ಹಲವಾರು ನಾಗಾ ಸಶಸ್ತ್ರ ಬಣಗಳಿವೆ ಎಂಬುದು ಕೂಡ ನಿಜ ಎಂದು ಹೇಳಲಾಗುತ್ತದೆ. ಅಂಥ ಬಣಗಳು ತಮ್ಮ ಹಿತಾಸಕ್ತಿಗಳಿಗೆ ತಕ್ಕಂತೆ ಕೆಲಸ ಮಾಡುತ್ತವೆ ಎಂಬ ಮಾತುಗಳಿವೆ.
ಅಂತಹ ಒಂದು ಗುಂಪು, ಮಣಿಪುರ ನಾಗಾ ರೆವಲ್ಯೂಷನರಿ ಫ್ರಂಟ್. ಅದು ಆಗಸ್ಟ್ 19ರಂದು ನಾಗಾ ಬಹುಸಂಖ್ಯಾತ ಪ್ರದೇಶದ ಹಳ್ಳಿಯೊಂದರಲ್ಲಿ ಮೂವರು ಕುಕಿ ಸಮುದಾಯದವರನ್ನು ಕೊಂದ ಮೈತೈ ದಂಗೆಕೋರರಿಗೆ ನೆರವು ನೀಡಿತ್ತು ಎಂದು ಆರೋಪಿಸಲಾಗಿದೆ.
ಈ ನಡುವೆ ಎನ್‌ಎಸ್‌ಸಿಎನ್ (ಐಎಂ) ಹತ್ಯೆಗಳನ್ನು ಖಂಡಿಸುವ ಹೇಳಿಕೆ ನೀಡಿದ್ದು, ಅದರಲ್ಲಿ ಎಂಎನ್‌ಆರ್‌ಎಫ್‌ಗೆ ಅದು ಎಚ್ಚರಿಕೆ ನೀಡಿದೆ. ಯಾವುದೇ ಸಂದರ್ಭದಲ್ಲೂ ನಾಗಾ ಪ್ರದೇಶಗಳಲ್ಲಿ ಮೈತೈ ಮತ್ತು ಕುಕಿ-ಜೊ ಹಿಂಸಾಚಾರವನ್ನು ನಾಗಾಗಳು ಬಯಸುವುದಿಲ್ಲ ಎಂದು ಸಂಘಟನೆ ಹೇಳಿದೆ.
ಹಾಗಿದ್ದರೂ, ಎನ್‌ಎಸ್‌ಸಿಎನ್ (ಐಎಂ) ಗೆ ನೇರವಾಗಿ ಸೇರದ ನಾಗಾ ಗುಂಪುಗಳು ಸಂಘರ್ಷದಲ್ಲಿ ತಮ್ಮ ಸಮುದಾಯಕ್ಕೆ ಸಹಾಯ ಮಾಡಲು ಮ್ಯಾನ್ಮಾರ್‌ನಿಂದ ಬರುವ ಮೈತೈ ಭೂಗತ ಗುಂಪುಗಳ ಬಂಡುಕೋರರಿಗೆ ಸುರಕ್ಷೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದು ಭದ್ರತಾ ಅಧಿಕಾರಿಗಳ ಅಭಿಪ್ರಾಯ. ನಾಗಾ ಬೆಂಬಲವಿಲ್ಲದೆ ಅವರು ಗಡಿ ದಾಟಿ ಕಣಿವೆಗೆ ಬರಲು ಸಾಧ್ಯವಿಲ್ಲ ಎಂಬುದು ಗುಪ್ತಚರ ಅಧಿಕಾರಿಯೊಬ್ಬರ ವಾದ.
ಪೂರ್ವಜರ ಭೂಮಿ:
ನಾಗಾ ನಾಯಕರು ಹೇಳುವಂತೆ ಇದೆಲ್ಲದಕ್ಕೂ ಭೂಮಿಯಂಥ ಮೂಲಭೂತ ಕಾರಣವಿದೆ. ಕುಕಿ-ಜೋ ಗುಂಪುಗಳು ಕೇಳುತ್ತಿರುವ ಪ್ರತ್ಯೇಕ ರಾಜ್ಯ, ನಾಗಾಗಳು ತಮ್ಮದು ಎಂದು ಹೇಳಿಕೊಳ್ಳುವ ಪ್ರದೇಶಗಳನ್ನು ಒಳಗೊಂಡಿದೆ.
ಚುರಾಚಾಂದ್‌ಪುರ ಜಿಲ್ಲೆ ಕುಕಿ ಪ್ರದೇಶವೆಂಬುದರ ಬಗ್ಗೆ ಸಾಕಷ್ಟು ಒಮ್ಮತವಿದ್ದರೂ, ಚಾಂದೇಲ್ ಮತ್ತು ತೆಂಗ್‌ನೌಪಾಲ್ ಪ್ರದೇಶಗಳಿಗಾಗಿ ಹಕ್ಕು ಸಾಧಿಸುವ ಎರಡೂ ಸಮುದಾಯದವರು ತೀವ್ರ ಪೈಪೋಟಿ ನಡೆಸಿದ್ದಾರೆ.
ಕುಕಿಗಳು ಚುರಾಚಾಂದ್‌ಪುರದೊಂದಿಗೆ ಪ್ರತ್ಯೇಕವಾಗುವುದಾದರೆ ಅದಕ್ಕೆ ತಕರಾರಿಲ್ಲ ಎಂದು ನಾಗಾ ಶಾಸಕರೊಬ್ಬರು ಹೇಳಿದ್ದಾರೆ. ಆದರೆ, ಕಂಗ್ಪೋಕ್ಪಿ ಎರಡೂ ಸಮುದಾಯವರನ್ನು ಹೊಂದಿದೆ. ತೆಂಗ್‌ನೌಪಾಲ್ ಮತ್ತು ಚಾಂದೇಲ್ ಮೂಲಭೂತವಾಗಿ ನಾಗಾ ಪ್ರದೇಶಗಳಾಗಿವೆ ಎನ್ನುತ್ತಾರೆ ಅವರು
ಪ್ರಸ್ತುತ ಸನ್ನಿವೇಶಗಳಿಂದಾಗಿ ಈ ಮೂರು ಜಿಲ್ಲೆಗಳು ತಮ್ಮ ಕೈಯಿಂದ ಜಾರುತ್ತಿವೆ ಎಂಬ ಕಳವಳವೇ ಯುಎನ್‌ಸಿ ತೀಕ್ಷ್ಣ ಹೇಳಿಕೆ ಬಿಡುಗಡೆ ಮಾಡಿರುವುದರ ಕಾರಣ ಎನ್ನಲಾಗುತ್ತಿದೆ.
ಮಾತುಕತೆಯ ದಾರಿ:
ಸಂಘರ್ಷದ ಹೊರತಾಗಿಯೂ, ನಾಗಾಗಳು ಕುಕಿಗಳೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂಬುದನ್ನು ಸೂಚಿಸುವ ಹಲವು ಅಂಶಗಳೂ ಕಂಡಿವೆ. ಯಾವ ಪ್ರದೇಶಗಳಿಗಾಗಿ ಪೈಪೋಟಿ ನಡೆಯುತ್ತಿದೆಯೊ ಅಲ್ಲಿ ಅವರಿಗೆ ಹಕ್ಕುಗಳೇ ಇಲ್ಲ ಎಂದು ನಾವು ಹೇಳುತ್ತಿಲ್ಲ. ಪ್ರಾಂತಗಳ ಅತಿಕ್ರಮಣ ಎಲ್ಲೆಡೆ ಇದೆ ಎನ್ನುವ ನಾಗಾ ಸಮುದಾಯದ ಪ್ರತಿನಿಧಿಯೊಬ್ಬರು, ಮಾತುಕತೆ ಮೂಲಕ ಪರಸ್ಪರ ಅರ್ಥಮಾಡಿಕೊಳ್ಳಬೇಕು. ನಾವು ಇನ್ನು ಮುಂದೆ ಹಿಂಸೆಯನ್ನು ಬಯಸುವುದಿಲ್ಲ ಎನ್ನುತ್ತಾರೆ.
ತಮ್ಮ ನಿಲುವು ಮತ್ತು ಬೇಡಿಕೆಗಳು ಕುಕಿಗಳೊಂದಿಗೆ ಹೆಚ್ಚು ಸಮಾನವಾಗಿವೆ ಎಂಬುದನ್ನು ನಾಗಾ ನಾಯಕರು ಒಪ್ಪಿಕೊಳ್ಳುತ್ತಾರೆ. ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿರುವ ಆದಿವಾಸಿಗಳಾಗಿ ಎರಡೂ ಸಮುದಾಯದವರ ಅನೇಕ ಸಮಸ್ಯೆಗಳು ಒಂದೇ ಬಗೆಯವು ಎನ್ನುತ್ತಾರೆ ಅವರು.
ತಾವು ಎರಡೂ ಸಮುದಾಯದವರು ಒಂದು ಬುಡಕಟ್ಟು ಘಟಕವನ್ನು ಹೊಂದಬಹುದು, ಮೈತೈಗಳಿಂದ ಸ್ವತಂತ್ರರಾಗಬಹುದು ಮತ್ತು ಅದರ ನಂತರ ಎರಡೂ ಸಮುದಾಯದವರು ಕ್ರಿಶ್ಚಿಯನ್ನರು ಮತ್ತು ಬುಡಕಟ್ಟಿನವರೇ ಆಗಿರುವುದರಿಂದ ಬಹುಶಃ ಒಂದು ಅನುಕೂಲಕರ ಒಪ್ಪಂದಕ್ಕೆ ಬರುವುದು ಸಾಧ್ಯವಿದೆ ಎಂಬುದು ನಾಗಾ ಸಮುದಾಯದವರ ನಿರೀಕ್ಷೆ.
(ಆಧಾರ: scroll.in))