ಕರ್ನಾಟಕದ ಮಠಗಳು: ಅಧಿಕಾರ, ಧರ್ಮ, ರಾಜಕೀಯ

ಕರ್ನಾಟಕದಲ್ಲಿ ರಾಜಕೀಯ, ಮಠಗಳು ಮತ್ತು ಮಠಾಧೀಶರ ನಡುವಿನ ಆಳವಾದ ಸಂಬಂಧವನ್ನು ಯಾರೂ ಅಲ್ಲಗಳೆಯಲಾಗದು. 1980 ಮತ್ತು 1990ರ ದಶಕದ ಉತ್ತರಾರ್ಧದಿಂದ ಹಿಂದುಳಿದ ಜಾತಿಯ ಮಠಗಳು ತಮ್ಮ ಸಮುದಾಯದ ಪ್ರತಿನಿಧಿಗಳಾಗಿ ಮಾರ್ಪಟ್ಟಿವೆ. ಪ್ರಬಲ ಜಾತಿಗಳಿಂದ ನಿರ್ಲಕ್ಷಿಸಲ್ಪಟ್ಟ ತಮ್ಮ ಸಮುದಾಯದ ಸಾಮಾಜಿಕ, ರಾಜಕೀಯ ಹಿತಾಸಕ್ತಿಗಳನ್ನು ಮುನ್ನಡೆಸುವ ಅವಕಾಶವನ್ನು ಅವು ಹೊಂದಿವೆ.

Update: 2023-10-26 07:27 GMT

ಎತ್ತಪ್ಪನ ಆರಾಧನಾ ಸ್ಥಳ

ಎತ್ತಪ್ಪನ ಬೆಟ್ಟ. ಬಯಲುಸೀಮೆ ಪ್ರದೇಶದಲ್ಲಿನ ಈ ಎತ್ತರದ ಸ್ಥಳ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಅಲ್ಲಿ ತಲುಪಲು ಕಡಲೆಕಾಯಿ ಮತ್ತು ಜೋಳದ ಹೊಲಗಳ ನಡುವಿನ ಕಿರಿದಾದ ಮತ್ತು ಮಣ್ಣಿನ ರಸ್ತೆಗಳ ಮೂಲಕ ಸಾಗಬೇಕು. ಭಯ ಹುಟ್ಟಿಸುವಂತಿರುವ ಆ ಬೆಟ್ಟದ ಮೇಲೆ ಕಾಡುಗೊಲ್ಲ ಸಮುದಾಯದ ಆರಾಧ್ಯದೈವ ಎತ್ತಪ್ಪನ ಗುಡಿಯಿದೆ. ಸಮುದಾಯದ ನಂಬಿಕೆಗಳಿಗೆ ಅನುಗುಣವಾಗಿ, ಎತ್ತಪ್ಪನ ಯಾವುದೇ ಮಾನವರೂಪಿ ಶಿಲ್ಪ ಅಲ್ಲಿಲ್ಲ. ಬದಲಾಗಿ, ಅರ್ಧವೃತ್ತಾಕಾರದಲ್ಲಿ ಲಂಬವಾಗಿ ಇರಿಸಲಾಗಿರುವ ಗ್ರಾನೈಟ್ ಶಿಲೆಗಳ ಸಾಲು ಮತ್ತು ತಾಜಾ ಗೊಂಡೆ ಹೂಗಳ ಮಾಲೆಯ ಅಲಂಕಾರ ಅಲ್ಲಿ ದೈವಿಕ ವಾತಾವರಣವನ್ನು ನಿರ್ಮಿಸಿದೆ.

ತಮ್ಮ ಆರಾಧ್ಯದೈವ ಎತ್ತಪ್ಪನ ಈ ಸ್ಥಳದಲ್ಲಿ ಮಠ ಸ್ಥಾಪಿಸಲು ಬಯಸುವುದಾಗಿ ಕಾಡು ಗೊಲ್ಲರ ಸಂಘದ (ಕೆಜಿಎಸ್) ಚಳ್ಳಕೆರೆ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಹೇಳುತ್ತಾರೆ. ಕೆಲ ದಿನಗಳ ಹಿಂದೆ, ಕರ್ನಾಟಕದಾದ್ಯಂತದ ಕೆಜಿಎಸ್ ಸದಸ್ಯರು ತಮ್ಮ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಇಲ್ಲಿ ಸೇರಿದ್ದರು. ಸಮಾರಂಭದಲ್ಲಿ ಮಾತನಾಡಿದ್ದ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಕರ್ನಾಟಕದಾದ್ಯಂತ ಹಲವಾರು ಜಾತಿಗಳು ತಮ್ಮದೇ ಆದ ಮಠಗಳನ್ನು ಹೊಂದಿವೆ. ಕಾಡು ಗೊಲ್ಲರಿಗೆ ಎತ್ತಪ್ಪ ಮತ್ತು ಜುಂಜಪ್ಪನ ಕ್ಷೇತ್ರಗಳೇ ಮಠಗಳಂತಿವೆ. ಆದ್ದರಿಂದ ನಾವು ಎತ್ತಪ್ಪನ ಬೆಟ್ಟವನ್ನು ಅಭಿವೃದ್ಧಿಪಡಿಸಿ ಅದನ್ನು ಮಠವನ್ನಾಗಿ ಮಾಡಬೇಕು ಎಂದಿದ್ದರು. ನಮ್ಮ ಸಮುದಾಯ ಬುಡಕಟ್ಟು ಸ್ವರೂಪದ್ದಾಗಿದೆ. ಅನೇಕ ವರ್ಷಗಳಿಂದ ನಾವು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದೇವೆ. ನಮ್ಮ ಸಮುದಾಯವನ್ನು ಒಡೆಯುವ ಯತ್ನಗಳು ಆಗುತ್ತಿವೆ. ಆದರೆ ನಾವು ನಮ್ಮ ಈ ಬೇಡಿಕೆ ಈಡೇರಿಸಿಕೊಳ್ಳಲು ಒಗ್ಗಟ್ಟಾಗಿರಬೇಕು ಎಂದೂ ಅವರು ಸಮುದಾಯವನ್ನು ಒತ್ತಾಯಿಸಿದ್ದರು.

ರಾಜಣ್ಣ ಪ್ರಕಾರ, ಕರ್ನಾಟಕದಾದ್ಯಂತ 1,250 ಕಾಡು ಗೊಲ್ಲರ ಹಟ್ಟಿಗಳಿವೆ. ಅವುಗಳಲ್ಲಿ ಹೆಚ್ಚಿನವು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿವೆ. ಹಳ್ಳಿಗಳ ಹೊರವಲಯದಲ್ಲಿರುವ ಈ ಹಾಡಿಗಳು ಸಮುದಾಯದ ಅನನ್ಯ ಸಾಂಸ್ಕೃತಿಕ ಅಸ್ಮಿತೆಯನ್ನು ಸಂರಕ್ಷಿಸಲು ಅನುಕೂಲಕರವಾಗಿವೆ. ಊರಿನ ಭಾಗವಾಗಿ ನೆಲೆಗೊಂಡಿರುವವರು ಊರು ಗೊಲ್ಲರು. ಗೊಲ್ಲರನ್ನು (ಊರು ಗೊಲ್ಲರು ಮತ್ತು ಕಾಡು ಗೊಲ್ಲರು) ಹಿಂದುಳಿದ ಜಾತಿ ಎಂದು ವರ್ಗೀಕರಿಸ ಲಾಗಿದ್ದು, ಅತಿ ಹಿಂದುಳಿದ ವರ್ಗ 1ರಲ್ಲಿ ಬರುತ್ತಾರೆ.

ಎಸ್‌ಸಿ, ಎಸ್‌ಟಿ ಸ್ಥಾನಮಾನಕ್ಕಾಗಿ ಹೋರಾಟ

ಕಳೆದ ಕೆಲ ದಶಕಗಳಲ್ಲಿ ದೇಶಾದ್ಯಂತ ವಿವಿಧ ಸಮುದಾಯಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಹೋರಾಡುತ್ತಿವೆ. ಅದು ಈ ಜಾತಿ ಮತ್ತು ಬುಡಕಟ್ಟು ಗುಂಪುಗಳಿಗೆ ಸುರಕ್ಷಿತತೆ ಒದಗಿಸುವಂಥದ್ದಾಗಿದೆ. ಅಂಥ ಹೋರಾಟಗಳು ದೇಶದ ಸಾಮಾಜಿಕ ನೈಜ ರಾಜಕೀಯದ ಭಾಗವಾಗಿರುವ ಮತ್ತು ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತವಾಗಿರುವ ಹೊತ್ತಿನಲ್ಲಿ, ರಾಜಣ್ಣ ತಮ್ಮ ಸಮುದಾಯದ ಮಠ ಸ್ಥಾಪನೆ ಮತ್ತು ಎಸ್‌ಟಿ ಸ್ಥಾನಮಾನದ ಬೇಡಿಕೆಯ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಕರ್ನಾಟಕದ ಇತರ ಸಮುದಾಯಗಳು ಕೂಡ ತಮ್ಮ ರಾಜಕೀಯ ಉದ್ದೇಶಗಳನ್ನು ಪೂರೈಸಲು ಮಠವನ್ನು ಬಳಸಿಕೊಂಡಿದ್ದಿದೆ. ಆದರೆ ಹಾಗೆಂದು ನೇರವಾಗಿ ತೋರಿಸಿಕೊಂಡಿಲ್ಲ..

ಕರ್ನಾಟಕದಲ್ಲಿ ವಿವಿಧ ಜಾತಿ ಮಠಗಳು ಅಥವಾ ಮಠಗಳ ವಿಶಿಷ್ಟ ಬೆಳವಣಿಗೆಯನ್ನು ಹತ್ತಿರದಿಂದ ಕಂಡವರಿಗೆ ಅವೆರಡರ ನಡುವಿನ ಸಂಬಂಧ ಚೆನ್ನಾಗಿಯೇ ಗೊತ್ತು. ಅಂಥ ಸಂಪ್ರದಾಯ ಅಥವಾ ಸಂಸ್ಕೃತಿಯನ್ನು ಹೊಂದಿರದ ಗುಂಪುಗಳಿಗೂ ಇದು ಅಪರಿಚಿತವಲ್ಲ. ಮೇಲ್ನೋಟಕ್ಕೆ, ಮಠಗಳು ಜಾತಿಯ ಆಧ್ಯಾತ್ಮಿಕ ಆಚರಣೆಗೆ ಮತ್ತು ಪೂಜೆಗೆ ಸ್ಥಳವೆಂಬಂತೆ ಮಾತ್ರ ಕಾಣಿಸುತ್ತವೆ. ಆದರೆ ಅವು ಸಮುದಾಯದ ಹಿತಾಸಕ್ತಿಗಳನ್ನು ಜಾಣ್ಮೆಯಿಂದ ಮತ್ತಷ್ಟು ಹೆಚ್ಚಿಸುವ ನೆಲೆಗಳಾಗಿವೆ ಎಂಬುದನ್ನು ವಿದ್ವಾಂಸರು ಗಮನಿಸುತ್ತಾರೆ. ಹೀಗಾಗಿ, ಮಠ ಮತ್ತು ಮಠಾಧೀಶರು ಸಮುದಾಯದ ಪರವಾಗಿ ಸರಕಾರದೊಂದಿಗೆ ಅಧಿಕಾರ ರಾಜಕಾರಣದ ಸಂಧಾನಗಳಲ್ಲಿ ತೊಡಗಿರುವುದು ಹೊಸದಲ್ಲ.

ಪ್ರಾಚೀನ ಇತಿಹಾಸ

ಕರ್ನಾಟಕದಲ್ಲಿ ಮಠಗಳ ಇತಿಹಾಸ ಸಾವಿರಾರು ವರ್ಷಗಳಷ್ಟು ಹಳೆಯದು. ಮತ್ತದು ಬ್ರಾಹ್ಮಣ ಉಪಜಾತಿಗಳಿಂದ ಸ್ಥಾಪಿತ, ಬೆಂಬಲಿತ ಮಠಗಳ ಮೂಲಕ ಶುರುವಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠ ಅಥವಾ ಶೃಂಗೇರಿ ಶಾರದಾ ಪೀಠವನ್ನು 8ನೇ ಶತಮಾನದಲ್ಲಿ ವೈದಿಕ ಪರಂಪರೆಯ ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಆನಂತರದವರಾದ ರಾಮಾನುಜಾಚಾರ್ಯ ಮತ್ತು ಮಧ್ವಾಚಾರ್ಯರಂಥ ಇತರರೂ ತಮ್ಮ ಗುರುಗಳ ವೈದಿಕ ತತ್ವಗಳನ್ನು ಹರಡಲು ಮಠವನ್ನು ಸ್ಥಾಪಿಸಿದರು.

ಚುನಾವಣೆಗಳು ಸಮೀಪಿಸಿದಾಗ, ಪಕ್ಷಾತೀತವಾಗಿ ರಾಜಕಾರಣಿಗಳು ಮಠಾಧೀಶರ ಆಶೀರ್ವಾದ ಪಡೆಯಲು ಮಠಗಳಿಗೆ ಹೋಗುತ್ತಾರೆ. ಇದು ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆಯೂ ಇತ್ತು. ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮೊದಲು ಮರುಕಳಿಸಲಿದೆ. ಮಠಗಳು ಮತಗಳನ್ನು ತರುತ್ತವೆಂಬ ನಂಬಿಕೆ ಉತ್ಪ್ರೇಕ್ಷಿತ ಎಂಬುದು ವಿದ್ವಾಂಸರ ವಾದವಾದರೂ, ರಾಜಕಾರಣಿಗಳು ಮಾತ್ರ ಅಪಾಯ ಎದುರುಹಾಕಿಕೊಳ್ಳಲು ತಯಾರಿಲ್ಲ

12ನೇ ಶತಮಾನದಲ್ಲಿ ಬಸವಣ್ಣ ಮತ್ತಿತರ ವಚನಕಾರರು, ಇಂದಿನ ಕರ್ನಾಟಕದ ಈಶಾನ್ಯ ಪ್ರದೇಶದಲ್ಲಿ ವೈದಿಕ ಜಾತಿ ಶ್ರೇಣೀಕರಣವನ್ನು ವಿರೋಧಿಸುವ ಪ್ರಗತಿಪರ ಆಲೋಚನೆಗಳೊಂದಿಗೆ ಸಮಾಜ ಸುಧಾರಕರಾಗಿ ಹೊರಹೊಮ್ಮಿದರು. ಇದರಿಂದಾಗಿ ಬಸವಣ್ಣನ ಅನುಯಾಯಿಗಳು ಎಂದು ತಿಳಿಯಲಾಗುವ ಲಿಂಗಾಯತರು ಕಿರುಕುಳಕ್ಕೆ ಒಳಗಾದರು ಮತ್ತು ನಂತರದ ಶತಮಾನಗಳಲ್ಲಿ ಪುನರುಜ್ಜೀವನಗೊಳ್ಳುವ ಮೊದಲು ಈ ಚಳವಳಿ ಬಹುತೇಕ ನಶಿಸಿಹೋಗಿತ್ತು. ಲಿಂಗಾಯತ ಮಠಗಳು ಈ ಪುನರುಜ್ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ ಮತ್ತು ಈಗ ಅವು ರಾಜ್ಯದ ಲಿಂಗಾಯತ ಸಮುದಾಯದೊಂದಿಗೆ ಆಂತರಿಕವಾಗಿ ಗುರುತಿಸಲ್ಪಟ್ಟಿವೆ. ಮಠಾಧೀಶರು ಸಮುದಾಯದ ಪ್ರಬಲ ಮತ್ತು ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅತ್ಯಂತ ಪ್ರಸಿದ್ಧ ಲಿಂಗಾಯತ ಮಠಗಳು ಶತಮಾನಗಳಿಂದ ಮುಂದುವರಿದುಕೊಂಡು ಬಂದಿರುವ ಗುರು ಪರಂಪರೆಯನ್ನು ಹೊಂದಿವೆ. ಕೆಲವು ಪ್ರಸಿದ್ಧ ಲಿಂಗಾಯತ ಮಠಗಳೆಂದರೆ, ತುಮಕೂರಿನ ಸಿದ್ಧಗಂಗಾ ಮಠ, ಗದಗಿನ ತೋಂಟದಾರ್ಯ ಮಠ, ಮೈಸೂರಿನ ಸುತ್ತೂರು ಮಠ ಮತ್ತು ಚಿತ್ರದುರ್ಗದ ಮುರುಘಾ ಮಠ.

1956ರಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಮೈಸೂರು ರಾಜ್ಯದಡಿಯಲ್ಲಿ ವಿಲೀನಗೊಂಡ ಬಳಿಕ ಪರಿಸ್ಥಿತಿ ಬದಲಾಯಿತು. ಹಿಂದಿನ ಬಾಂಬೆ ಪ್ರೆಸಿಡೆನ್ಸಿ ಮತ್ತು ಹೈದರಾಬಾದ್ ರಾಜಪ್ರಭುತ್ವದ ಪ್ರದೇಶಗಳು ಮೈಸೂರು ರಾಜಪ್ರಭುತ್ವದ ಜೊತೆಗೆ ಸಂಯೋಜನೆಗೊಂಡಾಗ, ದಕ್ಷಿಣ ಕರ್ನಾಟಕದಲ್ಲಿ ಪ್ರಬಲವಾದ ದೊಡ್ಡ ರೈತ ಸಮುದಾಯವಾದ ಒಕ್ಕಲಿಗರು ರಾಜಕೀಯವಾಗಿ ಲಿಂಗಾಯತರ ಎದುರಾಳಿಗಳಾದರು. 1970ರ ದಶಕದಲ್ಲಿ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸಲು ಮತ್ತು ಅದರ ಹಿತಾಸಕ್ತಿಗಳನ್ನು ತೀವ್ರಗೊಳಿಸಲು ನೆರವಾದ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠ ಈ ಸಮುದಾಯದ ಕೇಂದ್ರ ನೆಲೆಯಾಯಿತು.

ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಒಮ್ಮೆ ಹೇಳಿದ್ದಂತೆ, ಕರ್ನಾಟಕ ಏಕೀಕರಣದ ನಂತರ, ಒಕ್ಕಲಿಗರು ಮುಖ್ಯಮಂತ್ರಿ ಯಾಗಲು ಸಾಧ್ಯವಾಗಲಿಲ್ಲ ಮತ್ತು ಲಿಂಗಾಯತರಿಗೆ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳುವ ಭಯವಿತ್ತು. 1970 ಮತ್ತು 1980ರ ದಶಕದ ಆರಂಭದಲ್ಲಿ ಆದಿಚುಂಚನಗಿರಿ ಮಠದ ಮುಖ್ಯಸ್ಥರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿಯ ವರು ಒಕ್ಕಲಿಗ ರಾಜಕಾರಣಿಗಳೊಂದಿಗೆ ಗುರುತಿಸಿಕೊಂಡು ಅವರನ್ನು ಆ ದಿಸೆಯಲ್ಲಿ ಸಜ್ಜುಗೊಳಿಸತೊಡಗಿದರು.

ಮಠಗಳ ಪ್ರಾಬಲ್ಯ

1990ರ ದಶಕದಲ್ಲಿ ಲಿಂಗಾಯತ ಮಠವಾದ ಮುರುಘಾ ಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಹಿಂದುಳಿದ ಜಾತಿಗಳು ಮತ್ತು ದಲಿತರಿಗೆ ದೀಕ್ಷೆ ನೀಡಲು ಪ್ರಾರಂಭಿಸಿದರು. ಇದಾದ ಬಳಿಕ ಕರ್ನಾಟಕದಲ್ಲಿ ಮಠಗಳು ಸಾಲುಸಾಲಾಗಿ ಹುಟ್ಟಿಕೊಂಡವು. ಚುನಾವಣೆಗಳು ಸಮೀಪಿಸಿದಾಗ, ಪಕ್ಷಾತೀತವಾಗಿ ರಾಜಕಾರಣಿಗಳು ಮಠಾಧೀಶರ ಆಶೀರ್ವಾದ ಪಡೆಯಲು ಮಠಗಳಿಗೆ ಬರುವುದೂ ಹೆಚ್ಚಿತು.

ಮುರುಘಾ ಶರಣರು ಹಿಂದುಳಿದ ಜಾತಿಗಳು ಮತ್ತು ದಲಿತರಿಗೆ ದೀಕ್ಷೆ ನೀಡತೊಡಗಿದ ಬೆಳವಣಿಗೆಯನ್ನು ಅಧ್ಯಯನಿಸಿದ ಜಪಾನಿನ ವಿದ್ವಾಂಸ ಅಯಾ ಇಕೆಗೇಮ್ ಅವರು, ಮಠಾಧೀಶರು ಕೆಳಜಾತಿಗಳು, ಹಾಗೆಯೇ ದಲಿತರು ಮತ್ತು ಆದಿವಾಸಿಗಳನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು ಮತ್ತು ತಮ್ಮದೇ ಆದ ಮಠಗಳ ಸ್ಥಾಪನೆಗೆ ಅವರನ್ನು ಪ್ರೋತ್ಸಾಹಿಸಿದರು ಎಂದು ಬರೆದಿದ್ದಾರೆ. ಆನಂತರ ವಿವಿಧ ಕೆಳಜಾತಿಗಳು ತಮ್ಮದೇ ಮಠಗಳ ಮೂಲಕ ಸಮುದಾಯವನ್ನು ಸಂಘಟಿಸುವುದು ಶುರುವಾಗಿ, ಕರ್ನಾಟಕದಲ್ಲಿ ಮಠಗಳು ದೊಡ್ಡ ಸಂಖ್ಯೆಯಲ್ಲಿ ಬೆಳೆದವು.

ತಮ್ಮದೇ ಆದ ಮಠವನ್ನು ಮೊದಲು ಸ್ಥಾಪಿಸಿದ ಹಿಂದುಳಿದ ಸಮುದಾಯವೆಂದರೆ ದೇವಾಂಗರು (ನೇಕಾರರು). ಆನಂತರ ಈ ಸಾಲಿಗೆ ಸೇರಿದ ಇತರ ಹಿಂದುಳಿದ ಜಾತಿ ಸಮುದಾಯಗಳೆಂದರೆ, ಕುರುಬರು, ವಾಲ್ಮೀಕಿಗಳು, ಉಪ್ಪಾರರು, ಲಂಬಾಣಿಗಳು, ಮಡಿವಾಳರು, ಮಾದಿಗರು ಮತ್ತು ವಿಶ್ವಕರ್ಮರು (ಚಿನ್ನದ ಕೆಲಸಗಾರರು).

ಪತ್ರಕರ್ತ ಕೆ. ಕರಿಸ್ವಾಮಿ ಪ್ರಕಾರ, ಈ ಅಲೆ ಶುರುವಾದದ್ದು 2000ದಲ್ಲಿ. ಅಂದಿನಿಂದ ಇತರ ಹಿಂದುಳಿದ ಜಾತಿಗಳು ಮತ್ತು ಉಪಜಾತಿಗಳು ತಮ್ಮದೇ ಆದ ಮಠಗಳನ್ನು ಸ್ಥಾಪಿಸಿವೆ ಮತ್ತು ಜಾತಿಯನ್ನು ಒಗ್ಗೂಡಿಸುವಲ್ಲಿ ಮಠಗಳೂ ಈಗ ನಿರ್ಣಾಯಕವಾಗಿವೆ. ಇತ್ತೀಚೆಗೆ ರೂಪುಗೊಂಡ ಅನೇಕ ಮಠಗಳು ಪುರಾತನ ಮತ್ತು ಪೌರಾಣಿಕ ಗುರುತುಗಳನ್ನು ಹೇಳಿಕೊಳ್ಳುತ್ತವೆ. ಅವು ಸಾಮಾನ್ಯವಾಗಿ ಕಾಲ್ಪನಿಕವಾಗಿರುತ್ತವೆ. ಆದರೆ ಜಾತಿ ಅಸ್ಮಿತೆಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಮಹತ್ವದವಾಗುತ್ತವೆ. ಮಠಗಳು ಎಷ್ಟು ವೇಗವಾಗಿ ಹುಟ್ಟಿಕೊಳ್ಳುತ್ತಿವೆಯೆಂದರೆ, ಈಗ ಅವುಗಳ ಸಂಖ್ಯೆ ಎಷ್ಟೆಂಬ ಅಧಿಕೃತ ಲೆಕ್ಕವೇ ಇಲ್ಲದಂತಾಗಿದೆ.

ಹೀಗಾಗಿ, ಮಠವನ್ನು ಸ್ಥಾಪಿಸುವ ಕಾಡು ಗೊಲ್ಲರ ಬಯಕೆ ಕೂಡ ಕರ್ನಾಟಕದಲ್ಲಿನ ಮಠಗಳ ಈ ಸುದೀರ್ಘ ಹಾದಿಯಲ್ಲಿನದೇ ಆಗಿರಬೇಕು. ಚಿತ್ರದುರ್ಗದಲ್ಲಿ ಈಗಾಗಲೇ ಗೊಲ್ಲ ಮಠವಿದ್ದು, ಅದು ಉತ್ತರ ಭಾರತದ ಯಾದವ ಸಮುದಾಯದೊಂದಿಗೆ ಸಂಪರ್ಕ ಹೊಂದಿದೆ. ಈ ಮಠವನ್ನು ಹಿಂದೆ ಊರು ಗೊಲ್ಲರು ಮತ್ತು ಕಾಡು ಗೊಲ್ಲರು ಪೋಷಿಸುತ್ತಿದ್ದರು. ಆದರೆ ಕಾಡು ಗೊಲ್ಲರು ತಮ್ಮ ಸಮುದಾಯವನ್ನು ವಿಶಾಲವಾದ ಗೊಲ್ಲರ ಅಸ್ಮಿತೆಯೊಳಗೆ ನೋಡುವುದನ್ನು ವಿರೋಧಿಸಿದರು. ತಮ್ಮದೇ ಆದ ಮಠವನ್ನು ಹೊಂದುವುದು ತಮ್ಮನ್ನು ಪ್ರತ್ಯೇಕಿಸಲು, ತಮ್ಮ ಬುಡಕಟ್ಟು ಸ್ವರೂಪಗಳನ್ನು ಮತ್ತು ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳನ್ನು ಸಂರಕ್ಷಿಸಲು, ಅಲ್ಲದೆ ಎಸ್‌ಟಿ ಸ್ಥಾನಮಾನಕ್ಕಾಗಿ ಹೋರಾಟ ತೀವ್ರಗೊಳಿಸಲು ಸರಿಯಾದ ದಾರಿಯೆಂಬುದು ಅವರ ನಿಲುವು.

ಕರ್ನಾಟಕದಲ್ಲಿ ರಾಜಕೀಯ, ಮಠಗಳು ಮತ್ತು ಮಠಾಧೀಶರ ನಡುವಿನ ಆಳವಾದ ಸಂಬಂಧವನ್ನು ಯಾರೂ ಅಲ್ಲಗಳೆಯಲಾಗದು. 1980 ಮತ್ತು 1990ರ ದಶಕದ ಉತ್ತರಾರ್ಧದಿಂದ ಹಿಂದುಳಿದ ಜಾತಿಯ ಮಠಗಳು ತಮ್ಮ ಸಮುದಾಯದ ಪ್ರತಿನಿಧಿಗಳಾಗಿ ಮಾರ್ಪಟ್ಟಿವೆ. ಪ್ರಬಲ ಜಾತಿಗಳಿಂದ ನಿರ್ಲಕ್ಷಿಸಲ್ಪಟ್ಟ ತಮ್ಮ ಸಮು ದಾಯದ ಸಾಮಾಜಿಕ, ರಾಜಕೀಯ ಹಿತಾಸಕ್ತಿಗಳನ್ನು ಮುನ್ನಡೆಸುವ ಅವಕಾಶವನ್ನು ಅವು ಹೊಂದಿವೆ. ಪ್ರತೀ ಮಠದ ಸದಸ್ಯರಿಗೆ ಸಿಗುವ ಅಧಿಕಾರ ಎಷ್ಟೆಂಬುದು ಅಸ್ಪಷ್ಟವಾಗಿರಬಹುದು. ಆದರೆ ಮಠಾಧೀಶರಿಗೂ ಅವರದೇ ಆದ ಸ್ಥಾನಮಾನವಂತೂ ಇದ್ದೇ ಇದೆ.

ಇಲ್ಲಿ ಇನ್ನೊಂದು ರೀತಿಯ ಆಕಾಂಕ್ಷೆಯೂ ಇದೆ. ಕೆಲವು ಕಡೆಗಣಿಸಲ್ಪಟ್ಟ ಜಾತಿಯ ಮಠಗಳು ಸ್ಥಾಪಿತ ಲಿಂಗಾಯತ ಮತ್ತು ಒಕ್ಕಲಿಗ ಮಠಗಳದ್ದೇ ಸ್ಥಾನಮಾನವನ್ನು ಮುಟ್ಟಲು ಹಾತೊರೆಯುತ್ತವೆ. ವಿಸ್ತೃತ ಮತ್ತು ಶ್ರೀಮಂತ ಲಿಂಗಾಯತ ಇಲ್ಲವೇ ಒಕ್ಕಲಿಗ ಮಠಗಳು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತವೆ. ಅವುಗಳ ಪ್ರಭಾವ ಸಣ್ಣ ಪಟ್ಟಣಗಳಲ್ಲಿ ಸರಕಾರಕ್ಕೆ ಸಮವಾಗಿರುತ್ತವೆ. ಅನೇಕ ಹಳೆಯ ಮಠಗಳು ಸಮಾಜ ಸೇವೆಯಲ್ಲಿ ಉತ್ತಮ ಹೆಸರನ್ನೂ ಹೊಂದಿವೆ. ಆದರೆ ಅವು ಆಧ್ಯಾತ್ಮಿಕ ಮತ್ತು ರಾಜಕೀಯ ಪ್ರಭಾವದ ಜೊತೆಗೇ ಆರ್ಥಿಕ ಪ್ರಾಬಲ್ಯವನ್ನೂ ಸಾಧಿಸಿವೆ.

ಬಿ.ಎಸ್. ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾಗಿದ್ದ 2008 ಮತ್ತು 2011ರ ಅವಧಿಯಲ್ಲಿ ಲಿಂಗಾಯತ ಮಠಗಳಿಗೆ ಬಜೆಟ್ ಅನುದಾನವನ್ನು ನೇರವಾಗಿ ನೀಡುವ ಮೂಲಕ, ಮಠಗಳು ಮತ್ತು ರಾಜಕೀಯದ ನಡುವಿನ ಸಂಬಂಧದ ಲಾಭ ಪಡೆದ ಮೊದಲ ಪ್ರಮುಖ ನಾಯಕ. ಧರ್ಮ ಮತ್ತು ರಾಜಕೀಯವನ್ನು ವಿಭಜಿಸುವ ಅದೃಶ್ಯ ಗೆರೆ ಅಳಿಸಿಹೋಯಿತು. ಯಡಿಯೂರಪ್ಪನವರ ಮುಖ್ಯಮಂತ್ರಿ ಹುದ್ದೆಗೆ ಬೆದರಿಕೆ ಬಂದಾಗ ಮಠಾಧೀಶರು ನಿಷ್ಠೆಯಿಂದ ಅವರ ಬೆಂಬಲಕ್ಕೆ ನಿಂತರು.

ಚುನಾವಣೆಯ ಹೊತ್ತಿನಲ್ಲಿ

ಚುನಾವಣೆಗಳು ಸಮೀಪಿಸಿದಾಗ, ಪಕ್ಷಾತೀತವಾಗಿ ರಾಜಕಾರಣಿಗಳು ಮಠಾಧೀಶರ ಆಶೀರ್ವಾದ ಪಡೆಯಲು ಮಠಗಳಿಗೆ ಹೋಗುತ್ತಾರೆ. ಇದು ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆಯೂ ಇತ್ತು. ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮೊದಲು ಮರುಕಳಿಸಲಿದೆ. ಮಠಗಳು ಮತಗಳನ್ನು ತರುತ್ತವೆಂಬ ನಂಬಿಕೆ ಉತ್ಪ್ರೇಕ್ಷಿತ ಎಂಬುದು ವಿದ್ವಾಂಸರ ವಾದವಾದರೂ, ರಾಜಕಾರಣಿಗಳು ಮಾತ್ರ ಅಪಾಯ ಎದುರುಹಾಕಿಕೊಳ್ಳಲು ತಯಾರಿಲ್ಲ.

ಈ ವರ್ಷದ ಆರಂಭದಲ್ಲಿ ಮಂಡ್ಯದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಗಳು 1799ರಲ್ಲಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನ್‌ನನ್ನು ಕೊಂದ ಇಬ್ಬರು ಒಕ್ಕಲಿಗ ಸೈನಿಕರ ಕುರಿತ ಸುಳ್ಳು ಕಥೆಗಳನ್ನು ಬಿಜೆಪಿ ರಾಜಕಾರಣಿಗಳು ಹರಡುತ್ತಿದ್ದುದರ ವಿರುದ್ಧ ಮಾತನಾಡಿದಾಗ, ಈ ಮಠಾಧೀಶರು ಎಷ್ಟು ಪ್ರಭಾವಶಾಲಿ ಎಂಬುದನ್ನು ಕರ್ನಾಟಕ ಕಂಡಿತು. ಕಳೆದ ಕೆಲವು ವರ್ಷಗಳಿಂದ ಹಬ್ಬಿಸುತ್ತ ಬರಲಾದ ಈ ಕಟ್ಟುಕಥೆಯನ್ನು ನಿಜವಾದ ಇತಿಹಾಸವೆಂಬಂತೆ ಬಿಜೆಪಿ ರಾಜಕಾರಣಿಗಳು ಹೇಳತೊಡಗಿದ್ದರು. ಆದರೆ ಮಠಾಧೀಶರು ಖಂಡಿಸಿದ ಬಳಿಕ ಅದು ನಿಂತುಹೋಯಿತು. ತಮ್ಮ ಜಾತಿಗೆ ಮೀಸಲಾತಿಯನ್ನು ಹೆಚ್ಚಿಸುವಂತೆ ಒತ್ತಾಯಿಸುವ ಆಂದೋಲನಗಳ ನೇತೃತ್ವದಂಥ ಹೊತ್ತಿನಲ್ಲಿಯೂ ಮಠಾಧೀಶರು ಇಂದಿನ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕರ್ನಾಟಕದಲ್ಲಿ ಸಾಮಾಜಿಕವಾಗಿ ಮಠಗಳು ಬೀರಿರುವ ಸೂಕ್ಷ್ಮ ಪ್ರಭಾವವನ್ನೂ ವಿದ್ವಾಂಸರು ಎತ್ತಿ ತೋರಿಸಿದ್ದಾರೆ. ಮೊದಲನೆಯದಾಗಿ, ಮಠಗಳು ರಾಜ್ಯದಲ್ಲಿ ಜಾತಿ ಪ್ರಜ್ಞೆಯನ್ನು ಹೆಚ್ಚಿಸಿವೆ. ಸಮಾಜದೊಳಗಿನ ಅಸ್ತಿತ್ವದಲ್ಲಿರುವ ಬಿರುಕುಗಳನ್ನು ಒತ್ತಿಹೇಳುತ್ತವೆ. ಜಾತಿಯ ಸದಸ್ಯರು ಮಠ ಮತ್ತು ಮಠಾಧೀಶರ ಅಡಿಯಲ್ಲಿ ಒಗ್ಗೂಡುವುದರೊಂದಿಗೆ, ಇತರ ಜಾತಿಗಳೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಸವಲತ್ತಾಗಿಸಿಕೊಳ್ಳುತ್ತಾರೆ. ಎರಡನೆಯದಾಗಿ, ಮಠಗಳು ಸಂಸ್ಕೃತೀಕರಣದ ಪ್ರಕ್ರಿಯೆಯಲ್ಲಿ, ಅಂದರೆ ವಿಶಾಲವಾದ ಹಿಂದೂ ಗುರುತಿನೊಂದಿಗೆ ವಿಲೀನಗೊಳ್ಳಲು ಸಹಾಯ ಮಾಡುತ್ತವೆ. ಸಂಸ್ಕೃತೀಕರಣ ಎಂಬುದು ಮೇಲ್ಜಾತಿಗಳ ಆಚರಣೆಗಳು ಮತ್ತು ರೂಢಿಗಳನ್ನು ಅನುಕರಿಸುವ ಮೂಲಕ ಕೆಳಜಾತಿಗಳು ಮೇಲ್ಮುಖ ಚಲನಶೀಲತೆಯನ್ನು ಹುಡುಕುವ ಪ್ರಕ್ರಿಯೆ ಎಂದು ಸಮಾಜಶಾಸ್ತ್ರಜ್ಞರಾದ ಎಂ.ಎನ್. ಶ್ರೀನಿವಾಸ್ ಉಲ್ಲೇಖಿಸಿದ್ದಾರೆ.

ಬೆಂಗಳೂರು ಮೂಲದ ಪತ್ರಕರ್ತ ಆದಿತ್ಯ ಭಾರದ್ವಾಜ್ ಹೇಳುವ ಪ್ರಕಾರ, 2022ರಲ್ಲಿ ಆಗಿನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಿಂದೂ ಮಠಾಧೀಶರೊಂದಿಗೆ ಸಭೆ ನಡೆಸಿದ್ದರು. ಆಗ ಬ್ರಾಹ್ಮಣ ಮಠಾಧೀಶರೊಬ್ಬರು ಶಾಲೆಗಳಲ್ಲಿ ಸಾತ್ವಿಕ ಆಹಾರವನ್ನು (ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸಸ್ಯಾಹಾರ) ಮಾತ್ರ ನೀಡಬೇಕೆಂದು ಮತ್ತು ಮೊಟ್ಟೆಗಳನ್ನು ನೀಡಬಾರದು ಎಂದು ಹೇಳಿದರು. ಈ ಹೇಳಿಕೆಗೆ ದಲಿತ ಮಠಾಧೀಶರಾದ ಮಾದರ ಚೆನ್ನಯ್ಯ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಈ ಮಠಗಳು ಒಂದು ರೀತಿಯ ಬ್ರಾಹ್ಮಣ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಹೀಗೆ ಈ ಮಠಾಧೀಶರೇ ಪ್ರಬಲ ಜಾತಿಯ ಧಾರ್ಮಿಕ ಆಚರಣೆಗಳನ್ನು ಅನುಕರಿಸಲು ಪ್ರಾರಂಭಿಸಿದಾಗ ಸಮುದಾಯದೊಳಗಿನ ಸಾಂಸ್ಕೃತಿಕ ಆಚರಣೆಗಳಲ್ಲಿನ ಬದಲಾವಣೆಗಳಿಗೆ ಅದು ಕಾರಣವಾಗುತ್ತದೆ.

ಕರಿಸ್ವಾಮಿಯವರ ಪ್ರಕಾರ, ಶಿವಮೂರ್ತಿ ಮುರುಘಾ ಶರಣರು ಹಿಂದುಳಿದ ಜಾತಿಗಳಿಗೆ 1990ರ ದಶಕದಲ್ಲಿ ತಮ್ಮದೇ ಆದ ಮಠವನ್ನು ಕಟ್ಟುವಂತೆ ಪ್ರೋತ್ಸಾಹಿಸಿದ್ದರಲ್ಲಿ ಕ್ರಾಂತಿಕಾರಿ ಅಥವಾ ಪ್ರಗತಿಪರವಾದುದು ಏನೂ ಇರಲಿಲ್ಲ. ಈ ಯಾವ ಗುರುಗಳಿಗೂ ಬಸವಣ್ಣನವರ ಜಾತಿ ವಿರೋಧಿ ತತ್ವಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಜಾತಿ ಆಚರಣೆಗಳನ್ನು ಮಾಡುತ್ತಾರೆ ಮತ್ತು ತಮ್ಮದೇ ಆದ ಶ್ರೀಮಂತ ಸಂಸ್ಕೃತೇತರ ಸಂಸ್ಕೃತಿಯನ್ನು ಕಡಿಮೆ ಮಾಡುತ್ತಾರೆ. ಈ ಮಠಗಳು ಹಿಂದುಳಿದ ಜಾತಿಗಳ ಸಂಸ್ಕೃತೀಕರಣವನ್ನು ಹೆಚ್ಚಿಸುತ್ತಿವೆ. ದಲಿತ ಕವಿ ಸಿದ್ದಲಿಂಗಯ್ಯ ಹೊಸ ಮಠಗಳ ಬಗ್ಗೆ ಒಮ್ಮೆ ಹೀಗೆ ಹೇಳಿದ್ದರು: ‘‘ಹಿಂದುಳಿದ ಜಾತಿಗಳಿಗೆ ಮಠಗಳಿಲ್ಲದ ಕಾರಣ ಪ್ರಗತಿಪರವಾಗಿ ಯೋಚಿಸುವ ಸ್ವಾತಂತ್ರ್ಯವಿತ್ತು. ನಮ್ಮ ಗೆಳೆತನ, ಶಿಕ್ಷಣ, ಪುಸ್ತಕಗಳು ಮತ್ತು ಸಿನೆಮಾಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸಬೇಕಿತ್ತು. ಆದರೆ ಆ ಅವಕಾಶವನ್ನೀಗ ನಾವು ಮಠಕ್ಕೆ ಕೊಡುತ್ತಿದ್ದೇವೆ.’’

ಎತ್ತಪ್ಪನ ಬೆಟ್ಟದ ವಿಚಾರಕ್ಕೇ ಬರುವುದಾದರೆ, ಕಾಡುಗೊಲ್ಲರ ಮುಖಂಡರನ್ನುದ್ದೇಶಿಸಿ ಮಾತನಾಡುವಾಗ ಮಠದ ಸ್ಥಾಪನೆ ಎತ್ತುವ ಸಾಂಸ್ಕೃತಿಕ ಪ್ರಶ್ನೆಗಳ ಬಗ್ಗೆ ಅವರು ಯೋಚಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವರಿಗೆ, ಪರಿಶಿಷ್ಟ ಪಂಗಡದ ಬೇಡಿಕೆಯನ್ನು ಪುಷ್ಟೀಕರಿಸುವ ಗುರಿಯನ್ನು ಪೂರೈಸಲು ಮಠ ಒಂದು ಸಾಧನ. ಇದು, ಕರ್ನಾಟಕದ ರಾಜಕೀಯ ಮತ್ತು ಸಮಾಜದಲ್ಲಿ ಮಠ ಎಷ್ಟು ನಿರ್ಣಾಯಕವಾಗಿದೆ ಎಂಬುದನ್ನು ತೋರಿಸುತ್ತದೆ.

(ಕೃಪೆ: frontline)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ವಿಖಾರ್ ಅಹ್ಮದ್ ಸಯೀದ್

contributor

Similar News