ನರಳುತ್ತಿರುವ ಗಾಝಾ

ಬಾಂಬ್ ಸ್ಫೋಟಗಳು ಮತ್ತು ಇಂಧನ ಕೊರತೆಯಿಂದಾಗಿ ಗಾಝಾದಲ್ಲಿ ಹಲವಾರು ಆಸ್ಪತ್ರೆಗಳನ್ನು ಮುಚ್ಚಬೇಕಾಯಿತು. ಇರುವ ಆಸ್ಪತ್ರೆಗಳ ಪಾಡು ಹೇಳತೀರದು. ಅಸಂಖ್ಯಾತ ರೋಗಿಗಳ ಆಗಮನದೊಂದಿಗೆ ಅವುಗಳು ನಿಭಾಯಿಸಲಾರದ ಸ್ಥಿತಿ ತಲುಪಿವೆ.

Update: 2023-12-08 06:03 GMT

Photo- PTI

ಇಡೀ ವಿಶ್ವವೇ ದಿಗ್ಭ್ರಮೆಗೆ ಒಳಗಾಗುವಂತೆ ಮಾಡಿರುವ ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಪೂರ್ಣ ವಿರಾಮ ಇನ್ನೂ ಬಿದ್ದಿಲ್ಲ. 2023ರ ಅಕ್ಟೋಬರ್ 7ರಿಂದ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ನಿರಂತರ ಸಂಘರ್ಷದಲ್ಲಿ 16,000ಕ್ಕೂ ಹೆಚ್ಚು ಫೆಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ. ದುರದೃಷ್ಟವಶಾತ್, ಒಂದು ವಾರದ ಕದನ ವಿರಾಮದ ಬಳಿಕ ಇಸ್ರೇಲ್ ರಕ್ಷಣಾ ಪಡೆಗಳು ಇತ್ತೀಚೆಗೆ ತಮ್ಮ ಭೂ ಆಕ್ರಮಣವನ್ನು ತೀವ್ರಗೊಳಿಸಿವೆ. ಇದರಿಂದ ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಈ ಮಧ್ಯೆ, ಭೀಕರ ಯುದ್ಧದ ಪರಿಣಾಮವಾಗಿ ಗಾಝಾ ಪಟ್ಟಿಯಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳು ಇಸ್ರೇಲ್ ವೈಮಾನಿಕ ದಾಳಿಗಿಂತಲೂ ಹೆಚ್ಚು ಭೀಕರವಾಗುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಚ್ಚರಿಕೆ ನೀಡಿರುವುದು ಗಮನಾರ್ಹ. ತುರ್ತು ಕ್ರಮಗಳನ್ನು ತೆಗೆದು ಕೊಳ್ಳಬೇಕಾದ ಅಗತ್ಯದ ಬಗ್ಗೆಯೂ ಡಬ್ಲ್ಯುಎಚ್ಒ ಒತ್ತಿ ಹೇಳಿದೆ.

ಗಾಝಾ ಪಟ್ಟಿಯಲ್ಲಿ ಅತಿಸಾರ ಮತ್ತು ಇತರ ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಡಬ್ಲ್ಯುಎಚ್ಒ ನೀಡಿದೆ. 5 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ನಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳಿಗಿಂತ ಈ ಬಾರಿ 100 ಪಟ್ಟು ಹೆಚ್ಚು ದಾಖಲಾಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಮುನ್ಸೂಚನೆ ನೀಡಿದೆ. ಗಾಝಾ ಪಟ್ಟಿಯಲ್ಲಿ ಸಂಭವಿಸಿರುವ ಸಾವುನೋವುಗಳ ಪೈಕಿ ಶೇ. 40ರಷ್ಟು ಸಂತ್ರಸ್ತರು ಮಕ್ಕಳೇ ಆಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಸಾವಿನ ಸಂಖ್ಯೆ ಹೆಚ್ಚುವುದನ್ನು ತಡೆಗಟ್ಟಲು ಆರೋಗ್ಯ ವ್ಯವಸ್ಥೆಯನ್ನು ಪುನಃಸ್ಥಾಪಿಸುವ ತುರ್ತು ಅಗತ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರಾದ ಮಾರ್ಗರೆಟ್ ಹ್ಯಾರಿಸ್ ಒತ್ತಿ ಹೇಳಿದ್ದಾರೆ. ರೋಗಗಳಿಂದ, ಬಾಂಬ್ ದಾಳಿಯಿಂದ ಉಂಟಾದ ಸಾವುನೋವುಗಳನ್ನು ಸಾಂಕ್ರಾಮಿಕ ರೋಗಗಳು ಮೀರಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವೈಮಾನಿಕ ದಾಳಿಯಿಂದ ಹದಗೆಟ್ಟ ಗಾಝಾ ಆಸ್ಪತ್ರೆಗಳನ್ನು ಹಮಾಸ್ ಸಂಘಟನೆಯ ಅಡಗುತಾಣಗಳಾಗಿ ಬಳಸಲಾಗಿವೆ ಎಂಬ ಶಂಕೆಯಿಂದಾಗಿ ಇಸ್ರೇಲಿ ರಕ್ಷಣಾ ಪಡೆಗಳು ಆಸ್ಪತ್ರೆಗಳನ್ನೇ ಗುರಿಯಾಗಿಸಿ ವೈಮಾನಿಕ ದಾಳಿಗಳನ್ನು ನಡೆಸಿರುವುದು ಮಾರಕವಾಗಿದೆ. ಇದು ಗಾಝಾದಲ್ಲಿನ ಆರೋಗ್ಯ ವ್ಯವಸ್ಥೆಯು ತೀರಾ ಹದಗೆಡುವಂತೆ ಮಾಡಿದೆ ಎಂದು ಗಾಝಾದಲ್ಲಿ ಒಂದೂವರೆ ತಿಂಗಳ ಕಾಲ ಸೇವೆ ಸಲ್ಲಿಸಿದ ಡಾ. ಘಸ್ಸನ್ ಅಬು ಸಿತ್ತಾ ಬೇಸರ ವ್ಯಕ್ತಪಡಿಸಿರುವುದು ಗಮನಾರ್ಹ. ತಾವು ಚಿಕಿತ್ಸೆ ನೀಡಿದ ರೋಗಿಗಳಲ್ಲಿ ಶೇ. 50ರಷ್ಟು ಮಕ್ಕಳೇ ಇದ್ದರು. ಈ ಮಟ್ಟದ ಸಂಘರ್ಷಕ್ಕೆ ತಾನು ಹಿಂದೆಂದೂ ಸಾಕ್ಷಿಯಾಗಿರಲಿಲ್ಲ ಎಂದು ಅವರು ಹೇಳಿರುವುದು ಮನ ಕಲಕುವಂತೆ ಮಾಡಿದೆ.

ಗಾಝಾದಲ್ಲಿ ಆರೋಗ್ಯ ಮೂಲಸೌಕರ್ಯಗಳ ಅಗತ್ಯತೆಗಳ ಬಗ್ಗೆ ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧನಾಮ್ ಗೇಬ್ರಿಯೇಸಸ್ ಕೂಡ ಬೆಳಕು ಚೆಲ್ಲಿದ್ದಾರೆ. ಅವರ ಪ್ರಕಾರ, ಗಾಝಾದ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಚಿಕಿತ್ಸಾಲಯಗಳಲ್ಲಿ ಮೂರನೇ ಒಂದು ಭಾಗ ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ನಾಗರಿಕರ ಸಂಕಷ್ಟವನ್ನು ತಡೆಗಟ್ಟಲು ಶಾಶ್ವತವಾದ ಕದನ ವಿರಾಮದ ತುರ್ತು ಅಗತ್ಯವಿದೆ ಎಂಬುದನ್ನು ಅವರು ಒತ್ತಿಹೇಳಿರುವುದು ಗಮನಿಸಬೇಕಾದ ವಿಚಾರ.

ದಯನೀಯ ಸ್ಥಿತಿಯಲ್ಲಿ ಗಾಝಾ ಆಸ್ಪತ್ರೆಗಳು

ಅಲ್ ಶಿಫಾ ಆಸ್ಪತ್ರೆ ಕುಸಿದಂತೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅಲ್ಲಿಂದ ಸಿಬ್ಬಂದಿ, ರೋಗಿಗಳನ್ನು ಸ್ಥಳಾಂತರಿಸುವ ಸಮಯದಲ್ಲಿ ಅದರ ವೈದ್ಯಕೀಯ ಸಿಬ್ಬಂದಿಯನ್ನು ಬಂಧಿಸಿರುವುದು ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ. ಬಾಂಬ್ ಸ್ಫೋಟಗಳು ಮತ್ತು ಇಂಧನ ಕೊರತೆಯಿಂದಾಗಿ ಗಾಝಾದಲ್ಲಿ ಹಲವಾರು ಆಸ್ಪತ್ರೆಗಳನ್ನು ಮುಚ್ಚಬೇಕಾಯಿತು. ಇರುವ ಆಸ್ಪತ್ರೆಗಳ ಪಾಡು ಹೇಳತೀರದು. ಅಸಂಖ್ಯಾತ ರೋಗಿಗಳ ಆಗಮನದೊಂದಿಗೆ ಅವುಗಳು ನಿಭಾಯಿಸಲಾರದ ಸ್ಥಿತಿ ತಲುಪಿವೆ. ಫೆಲೆಸ್ತೀನಿಯರು ಶುದ್ಧ ನೀರಿನ ಅಭಾವ, ಜನದಟ್ಟಣೆ ಮತ್ತು ಹಸಿವಿನಿಂದ ಬಳಲುತ್ತಿರುವುದನ್ನು ಬೇರೆ ಹೇಳಬೇಕಿಲ್ಲವಷ್ಟೇ.

ಸದ್ಯದಲ್ಲಿನ ಗಾಝಾ ಪಟ್ಟಿಯ ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದ್ದು, ಹಮಾಸ್ ಅನ್ನು ತೊಡೆದುಹಾಕುವ ಇಸ್ರೇಲ್ ನಿರ್ಣಯದಿಂದಾಗಿ ಇದು ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಸುಟ್ಟಗಾಯಗಳು, ಕಲುಷಿತ ನೀರಿನ ಸೇವನೆ ಪರಿಣಾಮವಾಗಿ ಗ್ಯಾಸ್ಟ್ರೋಎಂಟರೈಟಿಸ್ನಿಂದ ಬಳಲುತ್ತಿರುವ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ನಿಭಾಯಿಸಲು ಆಸ್ಪತ್ರೆಗಳು ಹೆಣಗಾಡುತ್ತಿವೆ. ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ ಕೂಡ ಆತಂಕಕಾರಿ ವಿಚಾರವಾಗಿ ಪರಿಣಮಿಸಿದೆ. ಮಕ್ಕಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲಾಗದ ಪೋಷಕರ ಅಸಹಾಯಕತೆ ಒಂದು ಕಡೆಯಾದರೆ, ವೈದ್ಯಕೀಯ ಸೌಲಭ್ಯಗಳಿಲ್ಲದೆ ವೈದ್ಯರೂ ಅಸಹಾಯಕರಾಗಿದ್ದಾರೆ. ಗಾಯಗೊಂಡ ಮಕ್ಕಳು ವೈದ್ಯಕೀಯ ಆರೈಕೆಗಾಗಿ ಕಾಯುತ್ತಿದ್ದರೆ, ಈ ಪೈಕಿ ಅನೇಕರನ್ನು ಹೊರಾಂಗಣಗಳಲ್ಲೇ ಹಾಸಿಗೆ ಹಾಕಿ ಮಲಗಿಸಿರುವ ದೃಶ್ಯಗಳು ಕರುಳು ಚುರುಕ್ ಎನ್ನುವಂತಿವೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಗಿರೀಶ್ ಲಿಂಗಣ್ಣ

contributor

Similar News