ಮುಂದಿನ ಒಂದು ವರ್ಷ ಹೊಸ ಬಿಪಿಎಲ್ ಕಾರ್ಡ್ ಇಲ್ಲ

Update: 2023-12-26 04:44 GMT

Photo: karnataka.com/govt

ಬೆಂಗಳೂರು: ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿಯೇ ಅತೀ ಹೆಚ್ಚು ಬಿಪಿಎಲ್ ಪಡಿತರ ಚೀಟಿದಾರರು ಇದ್ದಾರೆ. ಹೀಗಾಗಿ ಮುಂದಿನ ಒಂದು ವರ್ಷದವರೆಗೆ ಹೊಸದಾಗಿ ಬಿಪಿಎಲ್ ಕಾರ್ಡ್‌ಗಳನ್ನು ಮಂಜೂರು ಮಾಡಬಾರದು ಎಂದು ಆರ್ಥಿಕ ಇಲಾಖೆಯು ಹೇಳಿದೆ.

ಕರ್ನಾಟಕದಲ್ಲಿ ಶೇ.85.23ರಷ್ಟು ಅಂದರೆ 1,13,84,605 ಬಿಎಪಿಎಲ್ ಪಡಿತರ ಚೀಟಿದಾರರಿದ್ದಾರೆ. ಗುಜರಾತ್‌ನಲ್ಲಿ 76,07,818 (ಶೇ.62.11), ಮಹಾರಾಷ್ಟ್ರದಲ್ಲಿ 1,57,16,582 (ಶೇ.64.36), ತೆಲಂಗಾಣದಲ್ಲಿ 54,07,637 (ಶೇ. 65.59), ತಮಿಳುನಾಡಿನಲ್ಲಿ 1,11,41,076 (ಶೇ.60.14), ಕೇರಳದಲ್ಲಿ 41,28,595 (ಶೇ.52.57), ಗೋವಾದಲ್ಲಿ 1,43,918 (ಶೇ.41.88)ರಷ್ಟು ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ ಎಂದು ಹಣಕಾಸು ಇಲಾಖೆಯು ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಉಲ್ಲಂಘನೆ: ರಾಜ್ಯವನ್ನು ಭಾರೀ ಪ್ರಮಾಣದ ಆದಾಯ ಕೊರತೆಗೆ ದೂಡಲಿದೆ ಎಂದು ಹಣಕಾಸು ಇಲಾಖೆಯು ನೀಡಿದ್ದ ಎಚ್ಚರಿಕೆಯನ್ನೂ ಬದಿಗೊತ್ತಿ ಪಡಿತರದಾರರಿಗೆ 10 ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವುದನ್ನು ಇದೀಗ ‘the-file.in’ ಆರ್‌ಟಿಐ ದಾಖಲೆ ಸಹಿತ ಹೊರಗೆಡವುತ್ತಿದೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಕೇಂದ್ರ ಸರಕಾರವು ಸ್ಪಂದಿಸುತ್ತಿಲ್ಲ ಮತ್ತು ಸಹಕರಿಸುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಇಡೀ ಕಾಂಗ್ರೆಸ್ ಸರಕಾರವೇ ಟೀಕೆಗಳನ್ನು ಮಾಡುತ್ತಿದೆ. ಇದರ ನಡುವೆಯೇ 10 ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಯು ಕಾರ್ಯಸಾಧುವಲ್ಲ ಎಂದು ಹಣಕಾಸು ಇಲಾಖೆ ನೀಡಿದ್ದ ಅಭಿಪ್ರಾಯವು ಇದೀಗ ಮುನ್ನೆಲೆಗೆ ಬಂದಿದೆ.

ವಿಶೇಷವೆಂದರೇ ಅವಕಾಶ ಸಿಕ್ಕಾಗಲೆಲ್ಲಾ ವಿತ್ತೀಯ ಶಿಸ್ತಿನ ಕುರಿತು ಸದನದಲ್ಲಿ ಸುದೀರ್ಘವಾಗಿ ಅಂಕಿ ಅಂಶಗಳನ್ನಿಡಿದು ಪಾಠ ಮಾಡುವ ಸಿದ್ದರಾಮಯ್ಯ ಅವರೇ ಇದೀಗ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ನೇರವಾಗಿಯೇ ಉಲ್ಲಂಘಿಸಿರುವುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

ಅಲ್ಲದೇ ‘ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ 3 ಮಾನದಂಡಗಳನ್ನು ಪಾಲಿಸಬೇಕಿದ್ದು, ಈ ಪೈಕಿ 2023-24ರ ಬಜೆಟ್‌ನಲ್ಲಿ 2 ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಜುಲೈ 7ರಂದು ಸದನದಲ್ಲಿಯೇ ಹೇಳಿಕೆ ನೀಡಿದ್ದರು. ಆದರೀಗ ಅವರೇ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಉಲ್ಲಂಘಿಸಿ ಆರ್ಥಿಕ ಅಶಿಸ್ತಿಗೆ ದಾರಿ ಮಾಡಿಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಈ ಯೋಜನೆಯನ್ನು ಜಾರಿಗೊಳಿಸಿದರೇ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆಯಾಗುತ್ತದೆ’ ಎಂದು ಹಣಕಾಸು ಇಲಾಖೆಯ ಎಚ್ಚರಿಕೆಯನ್ನೂ ಬದಿಗೊತ್ತಿರುವ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯವನ್ನು ಬೃಹತ್ ಪ್ರಮಾಣದ ಆದಾಯ ಕೊರತೆಗೆ ದೂಡಿರುವುದು ದಾಖಲೆಗಳಿಂದ ಗೊತ್ತಾಗಿದೆ.

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?: ಪ್ರಸ್ತುತ ವಿತ್ತೀಯ ನಿರ್ಬಂಧಗಳ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಯನ್ನು ಅಳವಡಿಸುವುದು ಕಷ್ಟ. ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದರಿಂದ ಭಾರೀ ಪ್ರಮಾಣದ ಪುನರಾವರ್ತಿತ ಹೊಣೆಗಾರಿಕೆ ನಿರ್ಮಾಣವಾಗುತ್ತದೆ. ಕಂದಾಯ ಮತ್ತು ಬಂಡವಾಳ ಬಾಬ್ತುಗಳಲ್ಲಿ ಎಲ್ಲ ಲೆಕ್ಕ ಶೀರ್ಷಿಕೆ ಮತ್ತು ಇಲಾಖೆಗಳಿಗೆ ಪ್ರಸ್ತುತ ಆಯವ್ಯಯದಲ್ಲಿ ಒದಗಿಸಿರುವ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಕಡಿತವನ್ನು ಮಾಡಬೇಕಾಗುತ್ತದೆ. ಮುಂದೆ ಇದರಿಂದ ರಾಜ್ಯವನ್ನು ಭಾರೀ ಪ್ರಮಾಣದ ಆದಾಯ ಕೊರತೆಗೆ ದೂಡಿದಂತಾಗುತ್ತದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಆರ್ಥಿಕ ಇಲಾಖೆಯು ಸರಕಾರವನ್ನು ಎಚ್ಚರಿಸಿತ್ತು ಎಂಬುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

ಮತ್ತೊಂದು ವಿಶೇಷವೆಂದರೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನದ ಸಂದರ್ಭದಲ್ಲಿಯೂ ಆರ್ಥಿಕ ಇಲಾಖೆಯು ಇದೇ ಅಭಿಪ್ರಾಯವನ್ನು ಹೇಳಿತ್ತಲ್ಲದೇ ಸರಕಾರವನ್ನು ಎಚ್ಚರಿಸಿತ್ತು. ಹಣಕಾಸು ಇಲಾಖೆಯ ಎಚ್ಚರಿಕೆ ನಡುವೆಯೂ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ 10ಕೆ.ಜಿ. ಅಕ್ಕಿ ವಿತರಿಸುವ ಅನ್ನ ಭಾಗ್ಯ ಯೋಜನೆಯ ಪ್ರಸ್ತಾವವನ್ನು ಸಚಿವ ಸಂಪುಟಕ್ಕೆ ಮಂಡಿಸಿದ್ದರು. ಈ ಯೋಜನೆಗೆ ಪ್ರತೀ ತಿಂಗಳು 841.46 ಕೋಟಿ ರೂ., ವಾರ್ಷಿಕವಾಗಿ 10,097.52 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಹಾಗೆಯೇ ಈ ಯೋಜನೆಗಾಗಿ ಪ್ರತೀ ತಿಂಗಳು ಹೆಚ್ಚುವರಿಯಾಗಿ 2,29,343.19 ಮೆಟ್ರಿಕ್ ಟನ್, ವಾರ್ಷಿಕವಾಗಿ 27,52,118.28 ಮೆಟ್ರಿಕ್ ಟನ್ ಆಹಾರ ಧಾನ್ಯ ಅಗತ್ಯವಿದೆ. ಹೆಚ್ಚುವರಿ ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದೂ ಸಚಿವ ಸಂಪುಟದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ. ಮಹಾಂತೇಶ್

contributor

Similar News