ಎಸ್ ಟಿ ಇಲಾಖೆಯ ವಿದ್ಯಾರ್ಥಿ ವೇತನದ ನೋಡಲ್ ಅಧಿಕಾರಿ ನೇಮಕವಿಲ್ಲ
ಬೆಂಗಳೂರು: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ(ಎಸ್‌ಟಿ) ಪಾವತಿಯಾಗಬೇಕಾದ ವಿದ್ಯಾರ್ಥಿ ವೇತನದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು, ವಿದ್ಯಾರ್ಥಿ ವೇತನದ ನೋಡಲ್ ಅಧಿಕಾರಿ ನೇಮಕವಾಗದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ವಂಚಿತ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡುತ್ತಿತ್ತು. ಆದರೆ, ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ವಿಭಜನೆಯಾಗಿದ್ದು, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಕುರಿತು ಎರಡು ಇಲಾಖೆಯಲ್ಲಿಯೂ ಸಮರ್ಪಕವಾದ ಮಾಹಿತಿ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದು ಮುನ್ನೆಲೆಗೆ ಬಂದಿದೆ.
2022-23ನೇ ಸಾಲಿನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಕೆಲವು ಕೋರ್ಸ್ ಗಳ ಶುಲ್ಕವನ್ನು ತಪ್ಪಾಗಿ ನಮೂದು ಮಾಡಿತ್ತು. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿವೇತನ ಕಡಿತವಾಗಿತ್ತು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಕಡಿತದ ಕುರಿತು ವಿವಿಯ ಕುಲಪತಿಗಳಿಗೆ ಪತ್ರ ಬರೆದು ವಿದ್ಯಾರ್ಥಿವೇತನವನ್ನು ಕಡಿತಗೊಳಿಸದೆ ಪೂರ್ಣ ಪ್ರಮಾಣದಲ್ಲಿ ವಿತರಿಸಬೇಕು ಎಂದು ಒತ್ತಾಯಿಸಿದ್ದರು.
ಇದನ್ನು ಪರಿಗಣಿಸಿ, ಕಡಿತವಾಗಿರುವ ಹಣವನ್ನು ಮರು ಪಾವತಿ ಮಾಡುವಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಇ-ಮೇಲ್ ಮೂಲಕ ಎರಡು ಇಲಾಖೆಗೆ ಪತ್ರಬರೆದು ಒತ್ತಾಯಿಸಿದೆ. ಮನವಿ ಪತ್ರವನ್ನು ಪರಿಗಣಿಸಿ ಸಮಾಜ ಕಲ್ಯಾಣ ಇಲಾಖೆಯು ಕಡಿತಗೊಂಡ ಹಣವನ್ನು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮಂಜೂರು ಮಾಡುತ್ತಿದೆ. ಆದರೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಡಿತಗೊಂಡ ಹಣವನ್ನು ಮಂಜೂರು ಮಾಡಲು ಎರಡು ಇಲಾಖೆಗಳ ನಡುವೆ ಗೊಂದಲ ಉಂಟಾಗುತ್ತಿದೆ.
2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಪುರುಷೋತ್ತಮ್ ಎಂಬುವವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಈಗ ಅವರು ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ, ಕೇವಲ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದಲ್ಲಿ ಉಂಟಾಗಿರುವ ಗೊಂದಲಗಳನ್ನು ಮಾತ್ರ ಬಗೆಹರಿಸುತ್ತಿದ್ದಾರೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನದ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂಬುದು ಎಸ್‌ಟಿ ವಿದ್ಯಾರ್ಥಿಗಳ ಆರೋಪವಾಗಿದೆ.
ಪರಿಶಿಷ್ಟ ಪಂಗಡ ವಿದ್ಯಾರ್ಥಿವೇತನ ಕಡಿತವಾಗಿರುವ ಕುರಿತು ಹಲವು ಬಾರಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿಗಳು ಚರ್ಚಿಸಿದ್ದಾರೆ. ಆದರೆ ಇದುವರೆಗೂ ಕಡಿತಗೊಂಡಿರುವ ವಿದ್ಯಾರ್ಥಿವೇತನ ಪಾವತಿ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ ಕಡಿತವಾಗಿರುವ ವಿದ್ಯಾರ್ಥಿವೇತನದ ಕುರಿತು ಸಮಾಜ ಕಲ್ಯಾಣ ಇಲಾಖೆಯಲ್ಲಿ ನೇಮಕವಾಗಿರುವ ನೋಡಲ್ ಅಧಿಕಾರಿಗಳು ಬಗೆಹರಿಸಬೇಕು ಎಂದು ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಸಚಿವರ ಕರೆ ನಿರಾಕರಣೆ
ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ತಿಳಿಯಲು ಮತ್ತು ನೋಡಲ್ ಅಧಿಕಾರಿಯನ್ನು ನೇಮಿಸದಿರುವ ಕುರಿತು ವಿಚಾರಿಸಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಬಿ.ನಾಗೇಂದ್ರ ಅವರನ್ನು ಸಂಪರ್ಕಿಸಿದ್ದು, ಅವರು ಕರೆ ನಿರಾಕರಿಸಿದ್ದಾರೆ.
2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಕುರಿತು ನನ್ನನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಆದರೆ ಈ ವರ್ಷದಲ್ಲಿ ಅಂತಹ ಆದೇಶವಾಗಿಲ್ಲ.
ಹಾಗಾಗಿ ನಾನು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಬಗ್ಗೆ ಮಾತ್ರ ಕ್ರಮವಹಿಸುತ್ತಿದ್ದೇನೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಕಡಿತಗೊಂಡಿರುವ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗುತ್ತದೆ. ಆದರೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನದ ಕುರಿತು ನಾವು ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ.
- ಪುರುಷೋತ್ತಮ್
ಸಮಾಜ ಕಲ್ಯಾಣ ಇಲಾಖೆಯ ಶಿಕ್ಷಣ ವಿಭಾಗದ ಉಪ ನಿರ್ದೇಶಕ