ಲೋಕಸಭಾ ಚುನಾವಣೆಗೆ ತಯಾರಿ: ಕಣಕ್ಕಿಳಿದ ಸಿಎಂ, ಡಿಸಿಎಂ

Update: 2023-08-22 16:42 GMT
Editor : musaveer | By : ಆರ್. ಜೀವಿ

ಆಪರೇಷನ್ ಕಮಲಕ್ಕೆ ಒಳಗಾಗಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದವರಲ್ಲಿ ಕೆಲವರು ಕಾಂಗ್ರೆಸ್ ಗೆ ಮರಳಿ ಬರಲು ತಯಾರಾಗಿದ್ದಾರೆಯೆ?. ಕಾಂಗ್ರೆಸ್ ನಾಯಕರ ಹೇಳಿಕೆಗಳಲ್ಲಿಯೂ ಅಂಥ ಸುಳಿವುಗಳು ಕಾಣಿಸುತ್ತಿದ್ದು, ಇದು ಬಿಜೆಪಿಗೆ ನೇರಾ ನೇರ ಏಟು ಕೊಡುವ ತಂತ್ರದ ಭಾಗವಾಗಿದೆಯೆ?. ಲೋಕಸಭೆ ಚುನಾವಣೆ ಎದುರಿಗಿರುವಾಗ, ಆಪರೇಷನ್ ಹಸ್ತ ಮೂಲಕ ಬಿಜೆಪಿ ಪಾಳಯಕ್ಕೆ ಹೊಡೆತ ಕೊಡಲು ಕಾಂಗ್ರೆಸ್ ಯೋಚಿಸುತ್ತಿದೆ ಎಂಬ ಸುದ್ದಿ ಜೋರಾಗಿಯೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಎದ್ದಿರೋ ತಳಮಳ ಎಂಥಹುದು?

ಬಾಂಬೇ ಬಾಯ್ಸ್ ಗುಂಪಿನವರು ಮಾತ್ರವಲ್ಲದೆ ಇತರ ಕೆಲ ನಾಯಕರೂ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳಿರುವುದರ ನಡುವೆಯೇ, ಜೆಡಿಎಸ್ ಶಾಸಕರ ಮೇಲೆಯೂ ಕಾಂಗ್ರೆಸ್ ಕಣ್ಣಿಟ್ಟಿದೆ ಎಂದು ಕುಮಾರಸ್ವಾಮಿ ಆತಂಕಗೊಂಡಿರೋದು ಏಕೆ?.

ಮೊದಲನೆಯದಾಗಿ, ಆಪರೇಷನ್ ಹಸ್ತದ ಸಾಧ್ಯತೆ ಇಷ್ಟು ಚರ್ಚೆಯಾಗುತ್ತಿರುವುದಕ್ಕೆ ಕಾರಣ ಬಿಜೆಪಿ ಮತ್ತು ಜೆಡಿಎಸ್ ಎರಡೂ ಭಾರೀ ಸೋಲಿನ ಹಿನ್ನೆಲೆಯಲ್ಲಿ ಹತಾಶವಾಗಿರುವುದೇ ಆಗಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಸುಲಭವಾಗಿಯೇ ತಮ್ಮ ಶಾಸಕರುಗಳನ್ನು ಸೆಳೆಯಬಹುದು ಎಂದು ಅವೆರಡೂ ಪಕ್ಷಗಳು ಅನುಮಾನ ಪಡುತ್ತಿರುವ ಹಿನ್ನೆಲೆಯಲ್ಲಿಯೂ, ಆಪರೇಷನ್ ಹಸ್ತ ಸಾಧ್ಯತೆ ವಿಚಾರ ಭಯಗೊಳಿಸುತ್ತಿರಲೂ ಬಹುದು.

ಆದರೆ, ಬೇರೆ ಪಕ್ಷಗಳ ನಾಯಕರನ್ನು ಕರೆದುಕೊಳ್ಳುವ ಸಾಧ್ಯತೆಯನ್ನು ಕಾಂಗ್ರೆಸ್ ನಾಯಕರು ಕೂಡ ನಿರಾಕರಿಸುತ್ತಿಲ್ಲ ಮತ್ತು ಬಹಿರಂಗವಾಗಿಯೇ ಅದರ ಬಗ್ಗೆ ಹೇಳುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳನ್ನು ಇನ್ನಷ್ಟು ದಿಗಿಲುಗೊಳಿಸುತ್ತಿದೆ. ಆಪರೇಷನ್ ಹಸ್ತ ವಿಚಾರವಾಗಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ಯಾವುದೇ ಕಾರಣಕ್ಕೂ ದ್ವೇಷ ಸಾಧಿಸದೆ, ಪಕ್ಷದ ಮತ ಗಳಿಕೆ ಹೆಚ್ಚು ಮಾಡಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇವೆ. ಬೇರೆ ಪಕ್ಷದ ನಾಯಕರನ್ನು ಸೇರಿಸಿಕೊಳ್ಳಲು ಸೂಚನೆ ಕೊಟ್ಟಿದ್ದೇವೆ ಎಂದಿದ್ದಾರೆ.

ವರದಿಗಳ ಪ್ರಕಾರ, ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಮತ್ತು ಸದ್ಯ ಬಿಜೆಪಿಯಲ್ಲಿರುವ ಕೆಲ ಶಾಸಕರು ಮತ್ತೆ ಕಾಂಗ್ರೆಸ್ ಕದ ತಟ್ಟಿರುವ ಬಗ್ಗೆಯೂ ಡಿಕೆ ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ಧಾರೆ. ದೊಡ್ಡವರನ್ನು ಬಿಟ್ಟು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಲ ಹೆಚ್ಚಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿರುವುದಾಗಿ ತಿಳಿದುಬಂದಿದೆ.

ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ, ಎಲ್ಲವನ್ನೂ ಸ್ಥಳೀಯ ಮುಖಂಡರೇ ತೀರ್ಮಾನ ಮಾಡುತ್ತಾರೆ. ನಮಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮತ ಬ್ಯಾಂಕ್‌ನ್ನು ಹೆಚ್ಚಿಸುವುದಷ್ಟೇ ಆದ್ಯತೆ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿರುವುದು ವರದಿಯಾಗಿದೆ

ಸ್ಥಳೀಯವಾಗಿ ಒಮ್ಮೊಮ್ಮೆ ಅನುಕೂಲಸಿಂಧು ರಾಜಕಾರಣ ಮಾಡಿಕೊಳ್ಳಬೇಕಾಗುತ್ತದೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ. ದೊಡ್ಡ, ದೊಡ್ಡ ನಾಯಕರನ್ನು ಸೇರಿಸಿಕೊಳ್ಳುತ್ತಿಲ್ಲ, ಇತರ ಪಕ್ಷಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ ಎಂದೂ ಡಿಕೆ ಶಿವಕುಮಾರ್ ಹೇಳಿದ್ಧಾರೆ.

ಈ ಹಂತದಲ್ಲಿ ಡಿಕೆ ಶಿವಕುಮಾರ್ ಅವರ ಈ ಮಾತುಗಳು ಮಹತ್ವ ಪಡೆಯುತ್ತಿರುವುದಕ್ಕೆ ಕೆಲವು ಕಾರಣಗಳಿವೆ. ಇತ್ತೀಚೆಗೆ ಬಿಜೆಪಿಯ ಕೆಲ ಶಾಸಕರು ಪ್ರತ್ಯೇಕವಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಮಾಜಿ ಸಚಿವ ಎಸ್ಟಿ ಸೋಮಶೇಖರ್ ಅವರು ಡಿಕೆ ಶಿವಕುಮಾರ್ ತಮ್ಮ ರಾಜಕೀಯ ಗುರು ಎಂದು ಕೊಂಡಾಡಿದ್ದರು. ಶಾಸಕ ಮುನಿರತ್ನ ಕೂಡ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ಗೆ ಸೇರುವುದು ಖಚಿತ ಎಂಬ ಮಾತುಗಳು ಮತ್ತೊಮ್ಮೆ ಜೋರಾಗಿ ಕೇಳಿಬರಲು ಶಾಸಕರ ಈ ಭೇಟಿಗಳು ಕಾರಣವಾಗಿದ್ದವು.

ಐದಾರು ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಸೇರಲಿದ್ದಾರೆಂಬ ಮಾತುಗಳು ಕೇಳಿಬರುತ್ತಿರುವಾಗಲೇ, ಕಾಂಗ್ರೆಸ್ಗೆ ಬರುವವರನ್ನು ಸೇರಿಸಿಕೊಳ್ಳುತ್ತೇವೆ ಎಂದು ಗೃಹಸಚಿವ ಪರಮೇಶ್ವರ್ ಹೇಳಿರುವುದು ಇದಕ್ಕೆ ಪುಷ್ಟಿಯೊದಗಿಸುತ್ತದೆ. ತಮ್ಮ ಜೊತೆ ಶಾಸಕರು ಚರ್ಚೆ ಮಾಡಿರುವುದರ ಸುಳಿವನ್ನೂ ಕೊಟ್ಟಿರುವ ಪರಮೇಶ್ವರ್, ಬಿಜೆಪಿಯಲ್ಲಿ ಆಗಿರುವ ಬೇಸರದಿಂದ, ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂಬ ಅಸಮಾಧಾನದಿಂದ ಕಾಂಗ್ರೆಸ್ಗೆ ಬರಲೂಬಹುದು ಎಂದಿದ್ದಾರೆ.

ಪರಮೇಶ್ವರ್ ಅವರ ಮತ್ತೂ ಒಂದು ಮಾತು ಗಮನ ಸೆಳೆಯುತ್ತದೆ. ಹಿಂದೆ ಪಕ್ಷ ಬಿಟ್ಟು ಹೋದವರು ಬರಬಹುದು, ಪಕ್ಷ ಬಿಟ್ಟು ಹೋದವರು ವಾಪಸ್ ಬಂದ ಉದಾಹರಣೆ ಇದೆ. ತಪ್ಪು ಮಾಡಿದ್ದನ್ನು ಸರಿ ಮಾಡಿಕೊಂಡರೆ ಬರಬಹುದು. ಆದರೆ ಅವರಿಗೆ ಫಸ್ಟ್ ಬೆಂಚ್ ಸಿಗುವುದಿಲ್ಲ. ಕ್ಲಾಸ್ ರೂಂಗೆ ಅವಕಾಶವಂತೂ ಇದೆ. ಫಸ್ಟ್ ಬೆಂಚ್ ಬೇಕಾದ್ರೆ ತುಂಬಾ ದಿನ ಆಗುತ್ತದೆ ಎಂಬುದು ಪರಮೇಶ್ವರ್ ಹೇಳಿರುವ ಮಾತು.

ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಅವರ ಮಾತುಗಳಲ್ಲಿ ಸಾಮಾನ್ಯವೆನ್ನಿಸುವ ಎರಡು ಅಂಶಗಳೆಂದರೆ, ಒಂದು, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿರುವವರಲ್ಲಿ ಕೆಲವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬುದನ್ನು ಇವರಿಬ್ಬರ ಮಾತುಗಳು ಖಚಿತಪಡಿಸುತ್ತವೆ. ಎರಡನೆಯದು, ಬಿಟ್ಟುಹೋದವರಿಗಾಗಿ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ಗೆ ಮರಳುವುದು ಆ ಶಾಸಕರದೇ ಇಚ್ಛೆಯಾಗಿದೆ ಎಂಬ ವಿಚಾರ.

ದೊಡ್ಡ ನಾಯಕರನ್ನು ಸೇರಿಸಿಕೊಳ್ಳುತ್ತಿಲ್ಲ ಎಂಬ ಡಿಕೆ ಶಿವಕುಮಾರ್ ಮಾತಿನಲ್ಲಿಯ ವ್ಯಂಗ್ಯ ಮತ್ತು ಫಸ್ಟ್ ಬೆಂಚ್ ಸಿಗುವುದಿಲ್ಲ ಎಂಬ ಪರಮೇಶ್ವರ್ ಮಾತಿನ ಧಾಟಿ ಎರಡೂ ಇದನ್ನು ಸೂಚಿಸುವ ಹಾಗಿವೆ. ಕೆಲವು ವರದಿಗಳು ಹೇಳುತ್ತಿರುವಂತೆ, ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿ ಬಿಜೆಪಿ ಸೇರಿ ಶಾಸಕರಾಗಿರುವ ಕೆಲವರು ಮತ್ತೆ ಕಾಂಗ್ರೆಸ್‌ಗೆ ಬರಲು ತಯಾರಾಗಿರುವುದು ನಿಜವೇ ಆಗಿದೆ. ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ಲೋಕಸಭಾ ಚುನಾವಣೆಯ ಹೊತ್ತಿಗೆ ಬೆಂಗಳೂರಿನ 4ರಿಂದ 5 ಬಿಜೆಪಿ ಶಾಸಕರೂ ಸೇರಿದಂತೆ ಏಳೆಂಟು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಹೀಗಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದನ್ನು ಬೇರೆ ಬಗೆಯಲ್ಲಿ ಹೇಳಿರುವುದು, ಮುಂದಿನ ದಿನಗಳಲ್ಲಿ ಆಪರೇಷನ್ ಹಸ್ತದ ಸಾಧ್ಯತೆಯನ್ನು ದೃಢಪಡಿಸುತ್ತದೆ. ಯಶವಂತಪುರದ ಎಸ್. ಟಿ ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್ ನ ಕೆ. ಗೋಪಾಲಯ್ಯ ಹಾಗೂ ಯಲ್ಲಾಪುರದ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ ಎನ್ನಲಾಗಿದೆ.

2019ರಲ್ಲಿ ಪಕ್ಷ ತೊರೆದು ಹೋಗಿದ್ದವರ ಪೈಕಿ ಆಯ್ದ ಶಾಸಕರನ್ನು ಪಕ್ಷಕ್ಕೆ ಕರೆತರುವ ಕಾರ್ಯದಲ್ಲಿ ಸಿದ್ದರಾಮಯ್ಯನವರೇ ಅಖಾಡಕ್ಕಿಳಿದಿದ್ದಾರೆ ಎನ್ನಲಾಗಿದೆ. ಈ ಮೂವರು ಶಾಸಕರು ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಖಾಸಗಿ ಹೋಟೆಲ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಆ ನಂತರವಷ್ಟೇ ಮೂವರು ಶಾಸಕರನ್ನು ಪಕ್ಷಕ್ಕೆ ಮರಳಿ ತರುವ ಪ್ರಯತ್ನಕ್ಕೆ ಬಲ ಬಂದಂತಾಗಿದೆ. ವರಿಷ್ಠರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಂತಿದೆ.

ಮೂವರು ಶಾಸಕರೊಂದಿಗೆ ಮಾತುಕತೆ ವೇಳೆ ಮುಖ್ಯಮಂತ್ರಿಗಳು ಶಾಸಕ ಮುನಿರತ್ನ ವಿಚಾರವಾಗಿಯೂ ಪ್ರಸ್ತಾಪಿಸಿದರು. ಅದರಂತೆ ಮತ್ತೊಂದು ಸಂದರ್ಭದಲ್ಲಿ ಭೇಟಿಯಾದ ಮುನಿರತ್ನ ಅವರೊಂದಿಗೆ ಮಾತುಕತೆ ನಡೆಸಿದ ಸಿಎಂ, ಪಕ್ಷ ಸೇರ್ಪಡೆ ವಿಚಾರವಾಗಿ ಡಿ.ಕೆ. ಶಿವಕುಮಾರ್, ಡಿ.ಕೆ.ಸುರೇಶ್ ಅವರೊಂದಿಗೂ ಚರ್ಚಿಸುವಂತೆ ಸೂಚಿಸಿದ್ದಾರೆ.

ಆ ಬಳಿಕ ಮುನಿರತ್ನ ಅವರು ಶಿವಕುಮಾರ್, ಸುರೇಶ್ ಅವರನ್ನೂ ಭೇಟಿಯಾದ ಬೆಳವಣಿಗೆ ನಡೆದಿದೆ. ಆದರೆ ರಾಜರಾಜೇಶ್ವರಿನಗರದಲ್ಲಿ ಸ್ಪರ್ಧಿಸಬಾರದು ಎಂಬ ಷರತ್ತು ಹಾಕಿರುವುದರಿಂದ ಮುನಿರತ್ನ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ. ಈಗ ಅವರು ನಾನು ಬೇಕಿದ್ರೆ ರಾಜಕೀಯ ನಿವೃತ್ತಿ ಪಡೀತೀನಿ, ಕಾಂಗ್ರೆಸ್ ಗೆ ಹೋಗೋದೇ ಇಲ್ಲ ಅಂತ ಹೇಳ್ತಿದ್ದಾರೆ. ಇನ್ನು ಬಿಜೆಪಿ ಸೇರಿರುವ ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಸಿಎಂ ಆಪ್ತ ಸಚಿವ ಬೈರತಿ ಸುರೇಶ್ ಕಾರಣದಿಂದಾಗಿ ದೂರ ಇಡಲಾಗಿದೆ ಎಂಬ ಮಾಹಿತಿಯಿದೆ.

ಕಾಂಗ್ರೆಸ್ ಸೇರಲು ಬಯಸಿರುವ ಬಿಜೆಪಿ ಶಾಸಕರು ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರು ಎನ್ನುವುದು ಗಮನಾರ್ಹ. ಅವರೆಲ್ಲ ಮೂಲತಃ ಕಾಂಗ್ರೆಸ್‌ನಿಂದ ರಾಜಕಾರಣ ಆರಂಭಿಸಿದ್ದರು. ಸದ್ಯ ಬಿಜೆಪಿಯಲ್ಲಿ ಅವರಿಗೆ ಉಸಿರುಗಟ್ಟುವ ವಾತಾವರಣವಿದೆ. ವಲಸಿಗರಾದ ಆ ಶಾಸಕರುಗಳನ್ನು ಬಿಜೆಪಿ ನಾಯಕರು ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅವರೆಲ್ಲ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬರಲು ತಯಾರಾಗಿದ್ಧಾರೆ ಎಂದು ಕಾಂಗ್ರೆಸ್ ಬಹಿರಂಗವಾಗಿಯೇ ಹೇಳುತ್ತಿದ್ದರೂ, ಆ ಶಾಸಕರುಗಳು ಅದನ್ನು ನಿರಾಕರಿಸುತ್ತಿದ್ಧಾರೆ. ಅದೆಲ್ಲ ಸುಳ್ಳು ಎಂಬುದು ಅವರ ವಾದ. ಶಾಸಕ ಮುನಿರತ್ನ ಕೂಡ ಅದೇ ಥರದಲ್ಲಿ ವಾದಿಸಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ತಾನು ಭೇಟಿ ಮಾಡಿರುವುದರ ಹಿಂದೆ ಕ್ಷೇತ್ರ ಅಭಿವೃದ್ಧಿಯ ಕಾರಣವಿದೆಯೇ ಹೊರತು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ ಎಂದು ಅವರು ಹೇಳಿದ್ದಾರೆ. ಅವರನ್ನು ಬಿಜೆಪಿಯಲ್ಲಿ ಯಾರೂ ಏಕವಚನದಲ್ಲಿ ಮಾತನಾಡಿಸಿಲ್ಲವಂತೆ.

ಅದೆಲ್ಲ ಏನೇ ಇದ್ದರೂ ಈಗ ಕೇಳಿಬರುತ್ತಿರುವ ಮಾತುಗಳೆಂದರೆ, ಮುಂದಿನ ವರ್ಷದ ಆರಂಭದಲ್ಲಿ ಬಿಜೆಪಿಯ ಆ ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಮೂಲಕ, ಲೋಕಸಭೆ ಚುನಾವಣೆಯ ಹೊತ್ತಿನಲ್ಲಿಯೇ ಉಪಚುನಾವಣೆ ಎದುರಿಸಲು ತಯಾರಾಗಬಹುದು. ಹೀಗೆ, ಲೋಕಸಭೆ ಚುನಾವಣೆ ಹೊತ್ತಿಗೆ ವಿರೋಧಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಬಹುದು.

ಸಂಸದ ಡಿಕೆ ಸುರೇಶ್ ಅವರು, ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಬೇಡವಾ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪ್ರಾಥಮಿಕವಾಗಿ ನನಗೆ ಯಾವುದೇ ವಿಚಾರ ಗೊತ್ತಿಲ್ಲ. ನಾನು ಕ್ಷೇತ್ರದ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಪಕ್ಷದ ಸಿದ್ದಾಂತ ಒಪ್ಪಿಕೊಂಡು ಯಾರು ಬಂದರೂ ಸ್ವೀಕರಿಸುತ್ತೇವೆ. ಅಂತಿಮ ನಿರ್ಧಾರ ಹೈಕಮಾಂಡ್ ನದ್ದು ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್, ಕಾಂಗ್ರೆಸ್‌ ಸರ್ಕಾರ ಡಬಲ್ ಡೆಕ್ಕರ್ ಬಸ್ ಇದ್ದಂತೆ. ಯಾವುದೇ ಪಕ್ಷದವರು, ಯಾರೇ ಬಂದರೂ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಯಾರು ಬೇಕಾದರೂ ಬರಬಹುದು. ಬಂದವರನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಪರೇಷನ್ ಮಾಡುವುದು ನಾವಲ್ಲ, ಜನರು. ಬಿಜೆಪಿಯವರು ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ ರಾಹುಲ್‌ ಗಾಂಧಿ ವರ್ಚಸ್ಸು ಕಡಿಮೆ ಮಾಡುವ ಯತ್ನ ಮಾಡಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದರು.

ಶಾಸಕ ಶಿವರಾಮ ಹೆಬ್ಬಾರ ಅವರು, ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವಂತಹ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ನಾನಂತೂ ಭಾಗಿಯಾಗಿಲ್ಲ. ಇಂತಹ ಸಭೆಗಳು ನಡೆದಿದ್ದು ನನ್ನ ಗಮನಕ್ಕಿಲ್ಲ. ನನಗೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಲೇಬೇಕಾದ ಸಂದರ್ಭ ನಿರ್ಮಾಣ ಆಗಿಲ್ಲ ಎಂದಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸರ್ಕಾರ ಮಾಡಿದ್ದ 17 ಶಾಸಕರು ವಾಪಸ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಓದಿದ್ದೇನೆ. ಆದರೆ, ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ, 'ಬಾಂಬೆ ಬಾಯ್ಸ್ ಮಾತ್ರ ಅಲ್ಲ ಬಿಜೆಪಿ, ಜೆಡಿಎಸ್‌ನ ಯಾವುದೇ ಶಾಸಕರಿಗೂ ಆ ಪಕ್ಷದಲ್ಲಿ ಭವಿಷ್ಯ ಇಲ್ಲ ಎನ್ನುವುದು ಗೊತ್ತಾಗಿದೆ. ಹೀಗಾಗಿ, ಅಲ್ಲಿ ಯಾವೊಬ್ಬ ಶಾಸಕರೂ ಉಳಿಯುವುದಿಲ್ಲ ಎಂದು ಹೇಳಿದರು. ಬಾಂಬೆ ಬಾಯ್ಸ್ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಆದರೆ, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಎರಡೂ ಪಕ್ಷಗಳು ಹತಾಶೆಗೊಂಡಿರುವುದಂತೂ ಸತ್ಯ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ನಲ್ಲಿ ಭವಿಷ್ಯವೇ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ತಯಾರಿ ನಡೆಸುತ್ತಿದೆ ಎಂಬ ಮಾತುಗಳಿವೆ. ಕಳೆದ ಬಾರಿ ಬಿಜೆಪಿ 25 ಸ್ಥಾನ ಪಡೆದಿತ್ತು. ಈ ಬಾರಿ ನಾವು ಗುರಿ ಇಟ್ಟುಕೊಂಡಿದ್ದೇವೆ. ಆದರೆ, ಜನ ತೀರ್ಮಾನ ಮಾಡುತ್ತಾರೆ ಎಂದು ಪರಮೇಶ್ವರ್ ಹೇಳಿರುವುದನ್ನು ಗಮನಿಸಬಹುದು.

ಈ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತ ಸಾಧ್ಯತೆ ಬಗೆಗಿನ ಅನುಮಾನ ಈಗ ಬಿಜೆಪಿಯೊಳಗೆ ದಿಗಿಲಿಗೆ ಕಾರಣವಾಗಿದೆ. ತನ್ನ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವುದರ ಬಗ್ಗೆ ಆತಂಕಗೊಂಡಿರುವ ರಾಜ್ಯ ಬಿಜೆಪಿ, ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿನ ಯಡವಟ್ಟಿನಿಂದಾಗಿ ಪ್ರಬಲ ಸಮುದಾಯಗಳ ನಾಯಕರನ್ನು ಕಳೆದುಕೊಂಡಿರುವ ಹಾಗೂ ಇನ್ನೂ ಕೆಲವರ ತೀವ್ರ ಅಸಮಾಧಾನ ಎದುರಿಸುತ್ತಿರುವ ಬಿಜೆಪಿಗೆ, ಈಗ ಆಪರೇಷನ್ ಹಸ್ತವೂ ಎದುರಾದರೆ ಪ್ರಭಾವಿ ಶಾಸಕರು ಮತ್ತು ಮುಖಂಡರುಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದೆಂಬ ತಲೆನೋವು ಶುರುವಾಗಿದೆ ಎಂಬ ಸುದ್ದಿಗಳಿವೆ.

ಈ ನಡುವೆಯೇ ಯಡಿಯೂರಪ್ಪ ಬೆಂಗಳೂರು ಶಾಸಕರ ಸಭೆ ಕರೆದಿರುವುದು ಕುತೂಹಲ ಕೆರಳಿಸಿದೆ. ಸಭೆಗೆ ಬೇರೆಯೇ ಕಾರಣಗಳನ್ನು ಕೊಡಲಾಗಿದೆಯಾದರೂ, ಪಕ್ಷದಿಂದ ಒಂದು ಕಾಲನ್ನು ಹೊರಗಿಟ್ಟ ಮನಃಸ್ಥಿತಿಯಲ್ಲಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಅದಾಗಿದೆ ಎಂಬುದನ್ನು ಗ್ರಹಿಸುವುದು ಕಷ್ಟವಲ್ಲ.

ಬಿಜೆಪಿಯೊಳಗಿನ ತಳಮಳ ಒಂದು ಬಗೆಯಾದರೆ, ಬಿಜೆಪಿಗಿಂತಲೂ ಒಂದು ಕೈ ಜಾಸ್ತಿಯೇ ಎಂಬಂತೆ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿರುವ ಕುಮಾರಸ್ವಾಮಿಯವರದ್ದು ಮತ್ತೊಂದು ಥರದ ತಳಮಳ. ಸಿದ್ದರಾಮಮಯ್ಯ ಅವರೇ ವ್ಯಂಗ್ಯ ಮಾಡುವಂತೆ, ಕುಮಾರಸ್ವಾಮಿಯವರು ಸರ್ಕಾರದ ವಿರುದ್ಧ ಮೊದಲ ದಿನದಿಂದಲೇ ಹಿಟ್ & ರನ್ ಆರೋಪಗಳನ್ನು ಮಾಡುತ್ತ ಅಬ್ಬರಿಸುತ್ತಿರುವವರು. ಅವರ ಈ ನಡೆಗೆ, ತನ್ನ ಪಾಲಿನ ಕಿಂಗ್ ಮೇಕರ್ ಅವಕಾಶವನ್ನು ಕಾಂಗ್ರೆಸ್ ಕಿತ್ತುಕೊಂಡಿತು ಎಂಬ ಹತಾಶೆಯೇ ಕಾರಣ ಎಂಬುದನ್ನು ಯಾರೂ ಊಹಿಸಬಹುದು.

ಈಗ ಅವರಿಗೆ, ಆಪರೇಷನ್ ಹಸ್ತದ ಬಿಸಿ ತಮ್ಮ ಪಕ್ಷಕ್ಕೂ ತಟ್ಟಲಿರುವುದರ ಸುಳಿವು ಸಿಕ್ಕಿದೆ. ಹಾಗೇನಾದರೂ ಪಕ್ಷ ಬಿಟ್ಟು ಜೆಡಿಎಸ್ ನಾಯಕರು ಕಾಂಗ್ರೆಸ್ ಕಡೆ ಹೋದರೆ, ಲೋಕಸಭೆಯಲ್ಲಿ ಕಣಕ್ಕಿಳಿಸುವುದಕ್ಕೂ ಜೆಡಿಎಸ್ಗೆ ಅಭ್ಯರ್ಥಿಗಳಿರದ ಸ್ಥಿತಿ ಬರಬಹುದೆಂದು ಹೇಳಲಾಗುತ್ತಿದೆ.

ಡಿಸಿಎಂ ಡಿಕೆ ಶಿವಕುಮಾರ್ ಹಾಗು ಸಂಸದ ಡಿ ಕೆ ಸುರೇಶ್ ಅವರು ಸರಕಾರಕ್ಕೆ ಇರಿಸು ಮುರುಸು ತರುತ್ತಿರುವ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಅವರ ಸ್ವಕ್ಷೇತ್ರದಲ್ಲೇ ಪ್ರಭಾವಿ ಜೆಡಿಎಸ್ ಮುಖಂಡರನ್ನು ಸೆಳೆಯಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ. ಚನ್ನಪಟ್ಟಣ ಮಾಜಿ ಶಾಸಕ ಎಂ.ಸಿ. ಅಶ್ವಥ್ ಅವರೂ ಇದಕ್ಕೆ ಪೂರಕವಾಗಿ ಮಾತಾಡಿದ್ದಾರೆ. " ಮೂರಾಲ್ಕು ಚುನಾವಣೆಗಳಿಂದಲೂ ನಾನು ಮತ್ತು ನನ್ನ ಸಹೋದರ ಆದಿಯಾಗಿ ನಮ್ಮ ಬೆಂಬಲಿಗರು ಜೆಡಿಎಸ್‌ ಸಂಘಟಿಸುತ್ತಾ ಬರುತ್ತಿದ್ದೇವೆ. ಚುನಾವಣಾ ಸಮಯದಲ್ಲಿ ನಮ್ಮನ್ನು ಬಳಕೆ ಮಾಡಿಕೊಂಡು ನಂತರ ಸೈಡ್‌ ಲೈನ್ ಮಾಡಲಾಗುತ್ತಿದೆ. ಇದರಿಂದ ಮನಸ್ಸಿಗೆ ಬಹಳ ಬೇಸರವಾಗಿದೆ. ಹಿಂಬಾಲಕರ ಹಿತ ಹಾಗೂ ನಮ್ಮ ರಾಜಕೀಯ ಭವಿಷ್ಯದಿಂದ ಕಾಂಗ್ರೆಸ್ ಸೇರುವ ಬಗ್ಗೆ ಚಿಂತನೆ ಇದೆ​ " ಅಂತ ಅವರು ಹೇಳಿದ್ದಾರೆ.

ಹೀಗಾಗಿ ಮುಖಂಡರುಗಳನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಹೇಗೆಂಬ ಚಿಂತೆ ಕುಮಾರಸ್ವಾಮಿಯವರನ್ನು ಕಾಡುತ್ತಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ಶಾಸಕರ ಪೈಕಿ ಕೆಲವರು ವಾಪಸ್ ಹೋಗಲಿದ್ದಾರೆ ಎಂಬ ವದಂತಿ ಗಳನ್ನು ಬಿಜೆಪಿ ನಾಯಕರು ಬಲವಾಗಿ ತಳ್ಳಿ ಹಾಕಿದ್ದಾರೆ. ಬಿಜೆಪಿಯ ಯಾವುದೇ ಶಾಸಕರೂ ಕಾಂಗ್ರೆಸ್ ಕದ ತಟ್ಟುತ್ತಿಲ್ಲ. ಅವರು ಪಕ್ಷಬಿಟ್ಟು ಹೋಗುವಂಥ ಯಾವುದೇ ಸಮಸ್ಯೆಗಳಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ಮಾಹಿತಿ ಆಧಾರದಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ರಾಜಕಾರಣ ನಿಂತ ನೀರಲ್ಲ, ಯಾರು, ಯಾವಾಗ, ಎಲ್ಲಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ, ಯಾವ ವ್ಯಕ್ತಿ ಪಕ್ಷಕ್ಕೆ ನಿಷ್ಠನಾಗಿರು ತಾನೋ ಅವನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದರು.

ಕಾಂಗ್ರೆಸ್‌ಗೆ ಹೋಗುವವರು ಯಾರು ಇಲ್ಲ. ಕೇವಲ ಸುದ್ದಿ ಹರಡಿಸಿದ್ದಾರೆ. ಊಹಾಪೋಹದ ಸುದ್ದಿಗೆ ಉತ್ತರ ಕೊಡಲ್ಲ. ಅಪನಂಬಿಕೆಯಿಂದ ನಾನು ಯಾರನ್ನೂ ನೋಡಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ. ಅಂತೂ ಆಪರೇಷನ್ ಹಸ್ತ ಸಾಧ್ಯತೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವ ಮೂಲಕವೇ ರಾಜಕೀಯವಾಗಿ ಕೆಲವು ಸಂಭಾವ್ಯಗಳಿಗೆ ಕಾರಣವಾಗುವಂತೆ ಕಾಣಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಆರ್. ಜೀವಿ

contributor

Similar News