ಆರ್ಥಿಕ ಹಿಂಜರಿತ ಮತ್ತು ಅಭಿವೃದ್ಧಿ: ನಿಜ ಭ್ರಮೆಗಳಾಚೆ

Update: 2023-09-06 08:21 GMT

ಭಾಗ 2

ಬಡತನ ಮತ್ತು ಸರಕಾರದ ಅಭಿವೃದ್ಧಿ

ವಿಶ್ವ ಬ್ಯಾಂಕ್‌ನ ಅನುಸಾರ ಕೋವಿಡ್ ಕಾಯಿಲೆಯ ಸಂದರ್ಭದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ 10 ಕೋಟಿ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಡುತ್ತಾರೆ. ಇವರ ಆದಾಯವು ಸರಕಾರವೇ ನಿಗದಿಪಡಿಸಿದ ಪ್ರತೀ ದಿನ 224 ರೂ. ಗಿಂತಲೂ ಕಡಿಮೆಯಾಗಲಿದೆ. ಫೈನಾನ್ಸ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯಾದಂತೆ ಕೋವಿಡ್ ಪೂರ್ವದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆ 81 ಕೋಟಿ ಇತ್ತು (ಶೇ.60). ಕೋವಿಡ್ ನಂತರ ಅದು 92 ಕೋಟಿಗೆ ಏರಿಕೆಯಾಗುವ ಸಂಭವವಿದೆ (ಶೇ.68). ಪ್ರಸಕ್ತ ಸಂದರ್ಭದಲ್ಲಿ ಭಾರತದಲ್ಲಿ 35 ಕೋಟಿ ಬಡವರಿದ್ದಾರೆ ಎಂದು ಸರಕಾರದ ಅಂಕಿಅಂಶಗಳು ಹೇಳುತ್ತಿದೆ. 4.9 ಕೋಟಿ ಜನರು ತೀವ್ರ ಹಸಿವಿನ ಬಾಧೆಯಿಂದ ನರಳುತ್ತಿದ್ದಾರೆ.

ಇತ್ತೀಚೆಗೆ ನೀತಿ ಆಯೋಗವು ಬಿಡುಗಡೆ ಮಾಡಿದ ವರದಿಯ ಪ್ರಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಬಹು ಆಯಾಮದ ಬಡತನ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು 13.5 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಆದರೆ ಈ ಸಮೀಕ್ಷೆಗೆ ಆಧರಿಸಿದ ಮಾನದಂಡಗಳು ಅನುಮಾನಾಸ್ಪದವಾಗಿದೆ. ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಪಿಐ) ಸಮೀಕ್ಷೆ ಆಧರಿಸಿ ಈ ವರದಿ ಪ್ರಕಟಿಸಲಾಗಿದೆ. ಆದರೆ ಈ ವಿಧಾನವು ಬಡತನದ ಸಮಗ್ರ ಸ್ಥಿತಿಯನ್ನು ಪರಿಚಯಿಸುವುದಿಲ್ಲ. ಎನ್‌ಎಸ್‌ಸಿ, ಎನ್‌ಎಸ್‌ಎಸ್‌ಒ, ಐಐಪಿಎಸ್ ಸಂಸ್ಥೆಗಳು ಬಿಡುಗಡೆಗೊಳಿಸಿದ ಬಡತನ, ಪೌಷ್ಟಿಕತೆ ಮುಂತಾದವುಗಳ ಕುರಿತಾದ ವರದಿಯನ್ನು ಬಹಿರಂಗಗೊಳಿಸದೆ ‘ಸಬ್ ಚಂಗಾಸ್ ಹೈ’ ಎಂದು ಹೇಳುವ ತನ್ನದೇ ಆದ ಸಮೀಕ್ಷೆಯನ್ನು ಪ್ರಕಟಿಸಿರವುದು ಸಂಶಯಾಸ್ಪದವಾಗಿದೆ. ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕದ (ಎಂಪಿಐ) ಸಮೀಕ್ಷೆಯ ಚೌಕಟ್ಟನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡು ಸಮೀಕ್ಷೆ ನಡೆಸಿರುವ ಎನ್‌ಎಂಪಿಐ (ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ) 2022ರಲ್ಲಿ ಪ್ರಟಿಸಿರುವ ವರದಿಯ ಪ್ರಕಾರ ಭಾರತದಲ್ಲಿ 2005-06ರಲ್ಲಿ ಶೇ.54ರಷ್ಟಿದ್ದ ಎಂಪಿಐ 2015-16ರಲ್ಲಿ ಶೇ.27.9ಕ್ಕೆ, 2019-21ರಲ್ಲಿ ಶೇ.16ಕ್ಕೆ ಕಡಿಮೆಯಾಗಿದೆ ಎಂದು ಹೇಳಿದೆ. ಆರ್ಥಿಕ ತಜ್ಞ ಸಂತೋಷ್ ಮೆಹ್ರೋತ್ರ ಅವರು ಜಾಗತಿಕ ಎಂಪಿಐಯ ವಿಧಾನವನ್ನು ಬದಲಾಯಿಸಿದ ಎನ್‌ಎಂಪಿಐ ಶೇ.18ರಷ್ಟು ಜನಸಂಖ್ಯೆಯಿರುವ 6-14ನೇ ವಯಸ್ಸಿನ ಮಕ್ಕಳನ್ನು ತನ್ನ ಸಮೀಕ್ಷೆಯಲ್ಲಿ ಹೊರಗಿಟ್ಟಿದೆ. ಆದರೆ ಗುಂಪಿನ ಮುಕ್ಕಾಲು ಪಾಲು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಎನ್‌ಎಂಪಿಐ ಸಮೀಕ್ಷೆಯಲ್ಲಿ ಇದು ಒಳಗೊಂಡಿಲ್ಲ. ವಿಶ್ವಸಂಸ್ಥೆಯು ಪ್ರಕಟಿಸಿದ ವಿಶ್ವ 2023ರಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಕುರಿತ ವರದಿಯ ಅನುಸಾರ ಭಾರತದಲ್ಲಿ 104.3 ಕೋಟಿ (ಶೇ.74.1) ಜನಸಂಖ್ಯೆಯು ಗುಣಮಟ್ಟದ ಆಹಾರ ಸೇವಿಸುತ್ತಿಲ್ಲ. ಇದು ಎಂಪಿಐ ಸಮೀಕ್ಷೆಯಲ್ಲಿ ಪ್ರತಿಫಲಿತವಾಗಿಲ್ಲ. ಎನ್‌ಎಂಪಿಐ ಸಮೀಕ್ಷೆಯಲ್ಲಿ ವಿಶ್ವಾಸಾರ್ಹವಲ್ಲದ ತೂಕ ಮತ್ತು ವಯಸ್ಸನ್ನು ಆಧರಿಸಿ ಅಪೌಷ್ಟಿಕತೆಯನ್ನು ಅಳೆದರೆ ಜಾಗತಿಕ ಎಂಪಿಐ ಸಮೀಕ್ಷೆಯಲ್ಲಿ ಎತ್ತರ ಮತ್ತು ವಯಸ್ಸನ್ನು ಆಧರಿಸಿ (stunting) ಅಪೌಷ್ಟಿಕತೆಯನ್ನು ಅಳೆಯುತ್ತಾರೆ. ಎರಡನೆಯಾಗಿ ಗರ್ಭಿಣಿಯರು ಪರಿಣಿತರಲ್ಲದ ಆರೋಗ್ಯ ಕಾರ್ಯಕರ್ತರ ಕೈಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದನ್ನು ಸೂಚಕವಾಗಿ ಬಳಸಿಕೊಳ್ಳುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಶೇ.80ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ಹೆರಿಗೆ ಆಧಾರಿತ ಸಾವುಗಳು ಸಹ ಕಡಿಮೆಯಾಗಿರುತ್ತದೆ. ಆದರೆ ಸಾವುನೋವುಗಳು ತುಂಬಾ ಕಡಿಮೆ ಇರುವ ಮೊದಲ ವಿಧಾನವನ್ನೇ ಒಂದು ಸೂಚಕವಾಗಿ ಬಳಸಿಕೊಳ್ಳುವುದರಿಂದ ಇಲ್ಲಿ ಸಹಜವಾಗಿಯೇ ಉತ್ತಮ ಫಲಿತಾಂಶ ದೊರಕುತ್ತದೆ ಎಂದು ಬರೆಯುತ್ತಾರೆ. ಅಂದರೆ ಸುಸಂಬದ್ಧವಾಗಿರುವ ಅಂಶಗಳನ್ನೇ ಸಮೀಕ್ಷೆಗೆ ಬಳಸಿಕೊಳ್ಳುವುದರಿಂದ ಸಹಜವಾಗಿಯೇ ಎಂಪಿಐ ಕಡಿಮೆಯಾಗಿದೆ ಎನ್ನುವ ಫಲಿತಾಂಶ ಬರುತ್ತದೆ. ಇದು ಸಹ ವಂಚನೆಯಾಗಿದೆ.

ಜಿಡಿಪಿ ಎನ್ನುವ ಮರೆಮೋಸ

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಈ ಜಿಡಿಪಿ ಎನ್ನುವ ಅಭಿವೃದ್ಧಿ ಸೂಚ್ಯಂಕದ ಹಾವು ಏಣಿಯಾಟದಲ್ಲಿ ಮೇಲಿನ ವಲಸೆ ಕಾರ್ಮಿಕರ, ಕೂಲಿ ಕಾರ್ಮಿಕರ, ಬಡ ರೈತರ ಹಸಿವು ಮತ್ತು ನಿರುದ್ಯೋಗ ಮುಂತಾದವುಗಳನ್ನು ಒಳಗೊಂಡಿರುವುದಿಲ್ಲ ಮತ್ತು ಪರಿಗಣಿಸಿರುವುದಿಲ್ಲ. 2019ರಲ್ಲಿ ಅಂದಾಜು ಶೇ.12 ಪ್ರಮಾಣದ ನಿರುದ್ಯೋಗವಿತ್ತು, 2020ರಲ್ಲಿ ಲಾಕ್‌ಡೌನ್ ಕಾರಣದಿಂದ ನಿರುದ್ಯೋಗದ ಪ್ರಮಾಣ ಶೇ.27ರಷ್ಟು ಏರಿಕೆಯಾಗಿದೆ ಮತ್ತು 12 ಕೋಟಿ ಜನಸಂಖ್ಯೆ ನಿರುದ್ಯೋಗಿಗಳಾಗಿದ್ದಾರೆ. ಆದರೆ ಈ ವಾಸ್ತವ ಸಂಗತಿಗಳನ್ನು ಜಿಡಿಪಿ ಅಳತೆಯಲ್ಲಿ ಒಳಗೊಳ್ಳುವುದಿಲ್ಲ. ಬಡ ರೈತರ ಬವಣೆ, ಆಟೋ ಚಾಲಕರು, ಬೀದಿ ಬದಿಯ ವ್ಯಾಪಾರಿಗಳು, ಕುಶಲ ಕರ್ಮಿಗಳ ಬದುಕಿನ ಉದ್ಯೋಗದ ಕುರಿತು ಈ ಜಿಡಿಪಿ ಒಳಗೊಂಡಿರುವುದಿಲ್ಲ. ಈ ಕಾರಣಕ್ಕಾಗಿಯೇ ಬಹುತೇಕ ದೇಶಗಳಲ್ಲಿ ಅಭಿವೃದ್ಧಿಯ ಬೆಳವಣಿಗೆಯನ್ನು ನಿರ್ಧರಿಸಲು ಕೇವಲ ಜಿಡಿಪಿಯನ್ನು ಮಾತ್ರ ಅವಲಂಬಿಸುವುದಿಲ್ಲ.

2.94 ಅಥವಾ 3.30 ಡಾಲರ್ ಟ್ರಿಲಿಯನ್ ಎಂದು ಹೇಳಲಾಗುವ ಜಿಡಿಪಿ ಹೊಂದಿರುವ ಭಾರತ (ಎಷ್ಟು ನಿಜ? ಎಲ್ಲಿದೆ ಮಾನದಂಡ?) ದೇಶದಲ್ಲಿ 27 ಕೋಟಿ ಜನಸಂಖ್ಯೆ ಬಡತನ ರೇಖೆಗಿಂತ (ಸರಕಾರ ನಿಗದಿಪಡಿಸಿದ 87.5 ರೂ. ಪ್ರತೀ ದಿನ) ಕೆಳಗಿದೆ ಎಂದು ವರದಿಯಾಗಿದೆ. ಸ್ಕ್ರಾಲ್.ಇನ್ ವರದಿಯ ಪ್ರಕಾರ ಭಾರತದ ಕೋಟ್ಯಂತರ ಕೂಲಿ ಕಾರ್ಮಿಕರು ಮತ್ತು 138 ಬಿಲಿಯಾಧಿಪತಿಗಳಿಗೆ ಜಿಡಿಪಿಯ per capita ಒಂದೇ ಆಗಿರುತ್ತದೆ. ವಾರ್ಷಿಕವಾಗಿ 2018-19ರಲ್ಲಿ per capita ಆದಾಯ 1,26,406 ರಷ್ಟಿತ್ತು. ಆದರೆ ನಂತರದ ಲಾಕ್‌ಡೌನ್ ಸಂದರ್ಭದಲ್ಲಿ ಹಸಿವಿನಿಂದ ಮೃತರಾದ ವಲಸೆ ಕಾರ್ಮಿಕರ ಮತ್ತು ಕೋಟ್ಯಂತರ ಕೂಲಿ ಕಾರ್ಮಿಕರ ವಾರ್ಷಿಕ ಆದಾಯ 1,26,406 ರೂ. ಇರುವುದಿಲ್ಲ ಮತ್ತು ಬಿಲಿಯಾಧಿಪತಿಗಳದ್ದೂ ಇರುವುದಿಲ್ಲ. ಜಾಗತಿಕವಾಗಿ 112 ಹಸಿವಿನ ದೇಶಗಳಲ್ಲಿ ಭಾರತವು 100ನೆ ಸ್ಥಾನದಲ್ಲಿದೆ. ವ್ಯಂಗ್ಯವೆಂದರೆ ಭಾರತೀಯ ಆಹಾರ ನಿಗಮ(ಎಫ್‌ಸಿಐ) ಬಳಿ 79 ಮಿಲಿಯನ್ ಟನ್ ಆಹಾರ ಧಾನ್ಯದ ಸಂಗ್ರಹವಿದೆ. ಆದರೆ ಅದು ಬಡಜನರಿಗೆ ವಿತರಣೆಯಾಗುತ್ತಿಲ್ಲ ಮತ್ತು ಜನತೆಗೆ ಕೊಳ್ಳುವ ಸಾಮರ್ಥ್ಯ ಸೃಷ್ಟಿಸುತ್ತಿಲ್ಲ.

ಇನ್ನೂ ಸರಳವಾಗಿ ವಿವರಿಸಬೇಕೆಂದರೆ ಈ ದೇಶದ ಶ್ರೇಣೀಕೃತ ವರ್ಗ ವ್ಯವಸ್ಥೆಯಲ್ಲಿ ಕೆಳವರ್ಗದ, ಅತಿ ಕೆಳವರ್ಗದ ಶೇ.70 ಜನಸಂಖ್ಯೆಯ ವಾರ್ಷಿಕ ಆದಾಯ ಅಥವಾ ಕಳೆದ ಹತ್ತು ವರ್ಷಗಳ ಆದಾಯ ಎಷ್ಟಿದೆ? ಮಧ್ಯಮ ವರ್ಗದ ಶೇ.20 ಜನಸಂಖ್ಯೆಯ, ಮೇಲ್ವರ್ಗದ ಶ್ರೀಮಂತರ ಶೇ.9, ಅತಿ ಶ್ರೀಮಂತರ ಶೇ.1 ಜನಸಂಖ್ಯೆಯ ವಾರ್ಷಿಕ ಅಥವಾ ಕಳೆದ ಹತ್ತು ವರ್ಷಗಳ ಆದಾಯ ಎಷ್ಟಿದೆ? ಇಲ್ಲಿನ ಜಿಡಿಪಿ ಲೆಕ್ಕಾಚಾರವು ಈ ಎಲ್ಲಾ ಅಂಶಗಳನ್ನು ಬಿಡಿಬಿಡಿಯಾಗಿ ಪರಿಗಣಿಸುವುದಿಲ್ಲ. ಬದಲಿಗೆ ಬಂಡವಾಳ ಹೂಡಿಕೆ, ಬಂಡವಾಳದ ಪುನರುತ್ಪಾದನೆ, ಮಿಗುತಾಯ ಮೌಲ್ಯ ಮತ್ತು ಜೀವನೋಪಾಯದ ಉಳಿತಾಯದ ಪ್ರಮಾಣದ ಮೇಲೆ ಜಿಡಿಪಿಯ ಅಭಿವೃದ್ಧಿ ಸೂಚ್ಯಂಕದ ಲೆಕ್ಕಾಚಾರವನ್ನು ನಿರ್ಧರಿಸುತ್ತಾರೆ. ಇಲ್ಲಿನ ಜಿಡಿಪಿ ಆಧರಿತ ಅಭಿವೃದ್ಧಿ ಸೂಚ್ಯಂಕವು ಮೇಲೆ ಹೇಳಿದ ಶೇ. 9-10 ಪ್ರಮಾಣದ ಮೇಲ್ವರ್ಗದ ಶ್ರಿಮಂತರು, ಅತಿ ಶ್ರೀಮಂತರು, ಕ್ರೂನಿ ಬಂಡವಾಳಶಾಹಿಗಳ ಬಂಡವಾಳ ಹೂಡಿಕೆ, ಅವರ ವ್ಯಾಪಾರದ ಅಭಿವೃದ್ಧಿ, ಪುನರುತ್ಪಾದನೆ ಮತ್ತು ಅವರ ಮಿಗುತಾಯ ಮೌಲ್ಯದ ಏರಿಳಿತದ ಮೇಲೆ ನಿರ್ಧರಿಸಲ್ಪಡುತ್ತದೆ. ಈ ಬಂಡವಾಳಶಾಹಿ ಕುಟುಂಬಗಳ ವಹಿವಾಟಿನಿಂದ ದೊರಕುವ ವಿದೇಶಿ ವಿನಿಮಯ, ಉತ್ಪಾದನೆ ಮತ್ತು ಉದ್ಯೋಗದ ಪ್ರಮಾಣದ ಮೇಲೆ, ಉಳಿತಾಯದ ಮೇಲೆ ಜಿಡಿಪಿ ಸೂಚ್ಯಂಕ ನಿರ್ಧರಿಸಲಾಗುತ್ತದೆ. ಆದರೆ ಜಿಡಿಪಿಯ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಧರಿಸಲು ಬಡತನ ರೇಖೆಗಿಂತ ಕೆಳಗಿರುವ ಶೇ.70 ಪ್ರಮಾಣದ ಜನಸಂಖ್ಯೆಯ ದಾರುಣ ಬದುಕು ಮಾನದಂಡವಾಗುವುದಿಲ್ಲ. ಅವರ ಜೀವನ ದೇಶದ ಅಭಿವೃದ್ಧಿಯ ಮೌಲ್ಯಮಾಪನಕ್ಕೆ ಒಳಪಡುವುದೇ ಇಲ್ಲ. ಹೀಗಾಗಿ ಜಿಡಿಪಿ ಪ್ರಮಾಣ ಹೆಚ್ಚಿರುವ ಅವಧಿಯಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಅಭಿವೃದ್ಧಿಯನ್ನು ನಿರ್ಧರಿಸುವ ಮಾನದಂಡಗಳ ಮಿಥ್ಯೆಯನ್ನು, ಮರೆಮೋಸವನ್ನು ಸಾಬೀತುಪಡಿಸುತ್ತವೆ. ಬಂಡವಾಳಶಾಹಿಗಳ ಪಾಲಿಗೆ ನಿಜವಾಗಿರುವ ಸುಸ್ಥಿರ ಅಭಿವೃದ್ಧಿ ಕೂಲಿ ಕಾರ್ಮಿಕರು, ರೈತರು, ದಲಿತರು, ಆದಿವಾಸಿಗಳ ಪಾಲಿಗೆ ನೇಣುಗಂಬವಾಗಿದೆ.

ನಮ್ಮ ಜಿಡಿಪಿಯ ಅರ್ಥೈಸುವಿಕೆಯನ್ನು ಸಂಪೂರ್ಣ ಬದಲಿಸಬೇಕಾದ ಕಾಲ ಬಂದಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಬಿ. ಶ್ರೀಪಾದ ಭಟ್

contributor

Similar News