ಗಾಂಧಿಯ ಕಣ್ಣಲ್ಲಿ ಧರ್ಮ

ಈ ಮೂಢನಂಬಿಕೆಗಳು ಹಿಂದೂ ಧರ್ಮದ ಅಂಗವಾಗಿವೆ ಎಂಬುದನ್ನು ನಾನು ನಂಬುವುದಿಲ್ಲ. ನಾನು ನಿಮಗೆ ವಿವರಿಸಿರುವ ಸತ್ಯಕ್ಕೆ ಹೊಂದಿಕೆಯಾಗದ ಯಾವುದನ್ನೇ ಆಗಲಿ ಅದು ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂದು ಕೂಡಲೇ ನಿರಾಕರಿಸಬೇಕು ಎಂದು ಹಿಂದೂ ಧರ್ಮವು ವಿಧಿಸಿರುವ ವ್ಯಾಖ್ಯಾನ ಸೂತ್ರಗಳೇ ನನಗೆ ಬೋಧಿಸುತ್ತವೆ.

Update: 2023-10-02 06:29 GMT

ವೇದಗಳಿಗೆ ಅಥವಾ ಇತರ ಯಾವುದೇ ಧರ್ಮಗ್ರಂಥಗಳಿಗೆ ಸಂಬಂಧಿಸಿದಂತೆ ನಾನು ದೈವೀಮೂಲ ಎಂಬ ಪದವನ್ನು ಉದ್ದೇಶಪೂರ್ವಕವಾಗಿಯೇ ಬಳಸದೆ ಇರುವುದನ್ನು ಓದುಗನು ಗಮನಿಸುತ್ತಾನೆ. ಏಕೆಂದರೆ ವೇದಗಳು ಮಾತ್ರವೇ ದೈವಿಕವಾದವು ಎಂಬುದನ್ನು ನಾನು ನಂಬುವುದಿಲ್ಲ. ಬೈಬಲ್, ಕುರ್‌ಆನ್ ಮತ್ತು ಜೆಂಡ್‌ಅವೆಸ್ತಾ ಸಹ ವೇದಗಳಷ್ಟೇ ದೈವಿಕವಾಗಿ ಪ್ರೇರಿತವಾದವು ಎಂಬುದು ನನ್ನ ನಂಬಿಕೆ. ಹಿಂದೂಧರ್ಮ ಗ್ರಂಥಗಳಲ್ಲಿ ನನಗೆ ನಂಬಿಕೆ ಇರುವ ಮಾತ್ರಕ್ಕೆ ಅವುಗಳಲ್ಲಿನ ಪ್ರತಿಶಬ್ದ ಮತ್ತು ಪ್ರತಿಶ್ಲೋಕ ದೇವರಿಂದ ಪ್ರೇರಿತವಾದುದು ಎಂದು ನಾನು ಅಂಗೀಕರಿಸ ಬೇಕಾದ ಅಗತ್ಯವಿಲ್ಲ. ಈ ಅದ್ಭುತಗ್ರಂಥಗಳ ನೇರ ಪರಿಚಯ ನನಗಿದೆಯೆಂದು ನಾನು ಹೇಳಿಕೊಳ್ಳುವುದೂ ಇಲ್ಲ. ಆದರೆ ಈ ಧರ್ಮಗ್ರಂಥಗಳ ಮುಖ್ಯೋಪದೇಶದ ತತ್ವಗಳ ಜ್ಞಾನ ಮತ್ತು ಅರಿವು ನನಗಿದೆಯೆಂದು ದೃಢವಾಗಿ ಹೇಳುತ್ತೇನೆ. ಅವುಗಳ ಯಾವುದೇ ವ್ಯಾಖ್ಯಾನ, ಅದೆಷ್ಟೇ ಪಾಂಡಿತ್ಯಪೂರ್ಣವಾಗಿರಲಿ, ಅದು ತರ್ಕಕ್ಕೆ ಅಥವಾ ನೈತಿಕ ದೃಷ್ಟಿಗೆ ವಿರುದ್ಧವಾಗಿದ್ದಲ್ಲಿ ಅದಕ್ಕೆ ಕಟ್ಟುಬೀಳಲು ನಾನು ನಿರಾಕರಿಸು ತ್ತೇನೆ. ಇಂದಿನ ಶಂಕರಾಚಾರ್ಯರುಗಳು ಮತ್ತು ಶಾಸ್ತ್ರಿಗಳು ಹಿಂದೂ ಧರ್ಮಗ್ರಂಥಗಳ ಸರಿಯಾದ ವಿವರಣೆಯನ್ನು ನೀಡುತ್ತಾರೆ ಎಂಬ ವಾದವನ್ನು, ಅಂಥದ್ದನ್ನೇನಾದರೂ ಅವರು ಮುಂದಿಟ್ಟಲ್ಲಿ, ನಾನು ಅತ್ಯಂತ ಆಗ್ರಹಪೂರ್ವಕವಾಗಿ ನಿರಾಕರಿಸುತ್ತೇನೆ. ತದ್ವಿರುದ್ಧವಾಗಿ ಈ ಗ್ರಂಥಗಳ ವಿಷಯದಲ್ಲಿ ನಮ್ಮ ಸದ್ಯದ ಜ್ಞಾನ ಅತ್ಯಂತ ಗೊಂದಲದ ಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಡುತ್ತೇನೆ. ಅಹಿಂಸೆ, ಸತ್ಯ ಮತ್ತು ಬ್ರಹ್ಮಚರ್ಯಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸದ ಮತ್ತು ಸಂಪತ್ತಿನ ಎಲ್ಲಾ ಆರ್ಜನೆ ಹಾಗೂ ಸ್ವಾಮ್ಯಗಳನ್ನು ತ್ಯಜಿಸದ ಯಾರೂ ಶಾಸ್ತ್ರಗಳನ್ನು ಅರಿತವರಲ್ಲ ಎಂಬ ಹಿಂದೂ ಸೂತ್ರವನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ, ಗುರುಪದ್ಧತಿಯಲ್ಲಿ ನನಗೆ ನಂಬಿಕೆ ಇದೆ. ಆದರೆ ಈ ಯುಗದಲ್ಲಿ ಲಕ್ಷಾಂತರ ಜನ ಒಬ್ಬ ಗುರುವಿಲ್ಲದೆ ಹೋಗ ಬೇಕಾಗಿದೆ, ಏಕೆಂದರೆ ಪೂರ್ಣ ಪರಿಶುದ್ಧತೆ ಮತ್ತು ಪರಿಪೂರ್ಣ ಪಾಂಡಿತ್ಯಗಳ ಸಂಯೋಗವನ್ನು ಕಾಣುವುದು ಒಂದು ಅಪರೂಪದ ಸಂಗತಿ. ಆದರೆ ತಮ್ಮ ಧರ್ಮದ ಸತ್ಯಸ್ವರೂಪವನ್ನು ಎಂದಾದರೂ ಅರಿತುಕೊಳ್ಳುವ ಬಗ್ಗೆ ಯಾರೂ ನಿರಾಶರಾಗಬೇಕಾಗಿಲ್ಲ. ಏಕೆಂದರೆ, ಪ್ರತಿಯೊಂದು ಮಹಾನ್ ಧರ್ಮದಂತೆಯೇ, ಹಿಂದೂಧರ್ಮದ ಮೂಲತತ್ವಗಳು ವ್ಯತ್ಯಾಸ ಆಗದಂತಹವು ಮತ್ತು ಸುಲಭವಾಗಿ ಅರ್ಥವಾಗುವಂತಹವು. ಪ್ರತಿಯೊಬ್ಬ ಹಿಂದುವೂ ದೇವರು ಮತ್ತು ತನ್ನ ಐಕ್ಯತೆಯಲ್ಲಿ, ಪುನರ್ಜನ್ಮ ಮತ್ತು ಮೋಕ್ಷದಲ್ಲಿ ನಂಬಿಕೆ ಇಡುತ್ತಾನೆ.

ನನ್ನ ಹೆಂಡತಿಯನ್ನು ಕುರಿತು ನನ್ನ ಮನೋಭಾವವನ್ನು ಹೇಗೆ ವರ್ಣಿಸಲಾರೆನೋ ಹಾಗೆಯೇ ಹಿಂದೂಧರ್ಮವನ್ನು ಕುರಿತು ನನ್ನ ಮನೋಭಾವವನ್ನು ಸಹ ನಾನು ವರ್ಣಿಸಲಾರೆ, ಆಕೆ ನನ್ನ ಮನಸ್ಸನ್ನು ಪ್ರಪಂಚದಲ್ಲಿನ ಇನ್ನಾವುದೇ ಹೆಂಗಸು ಹಿಡಿದಿಡಲಾಗದಷ್ಟು ಹಿಡಿದಿಡುತ್ತಾಳೆ. ಆಕೆಯಲ್ಲಿ ದೋಷಗಳು ಇಲ್ಲವೆಂದೇನೂ ಅಲ್ಲ. ನಾನೇ ನೋಡುವುದಕ್ಕಿಂತಲೂ, ನನಗೆ ಕಾಣುವುದಕ್ಕಿಂತಲೂ, ಇನ್ನೂ ಹೆಚ್ಚಿನ ದೋಷಗಳು ಆಕೆಯಲ್ಲಿವೆ ಎಂದು ನಾನು ಹೇಳಬಲ್ಲೆ. ಆದರೆ ಬಿಗಿಯಾಗಿ ಬಂಧಿಸಿಡುವ ಭಾವ ಅದರಲ್ಲಿದೆ. ಅದರ ಎಲ್ಲಾ ಲೋಪದೋಷಗಳಿದ್ದಾಗ್ಯೂ ಹಿಂದೂಧರ್ಮದ ಬಗ್ಗೆ ನನ್ನ ಅಭಿಪ್ರಾಯ ಅದೇ ರೀತಿಯಾಗಿದೆ. ಗೀತೆ ಮತ್ತು ತುಳಸಿದಾಸರ ರಾಮಾಯಣದ ಮಾಧುರ‌್ಯ ನನ್ನನ್ನು ಉತ್ತೇಜಿಸುವಷ್ಟು ಬೇರಾವುದೂ ಉತ್ತೇಜಿಸದು. ನನಗೆ ಗೊತ್ತಿದೆ ಎಂದು ಹೇಳಿಕೊಳ್ಳಬಹುದಾದ ಹಿಂದೂಧರ್ಮದ ಗ್ರಂಥಗಳೆಂದರೆ ಇವೆರಡೇ. ನಾನು ನನ್ನ ಕೊನೆಯುಸಿರು ಎಳೆಯುತ್ತಿದ್ದೇನೆ ಎಂದು ಅಂದುಕೊಂಡಾಗ ನನಗೆ ನೆಮ್ಮದಿ ನೀಡಿದ್ದು ಗೀತೆ, ಎಲ್ಲಾ ದೊಡ್ಡ ಹಿಂದೂ ದೇವಾಲಯಗಳಲ್ಲಿ ಇಂದು ನಡೆಯುತ್ತಿರುವ ದುರಾಚಾರ ನನಗೆ ಗೊತ್ತಿದೆ. ಆದರೆ ಹೇಳಬಾರದ ಕೊರತೆಗಳಿಂದ ಕೂಡಿದ್ದರೂ ಅವು ನನಗೆ ಪ್ರಿಯವಾಗಿವೆ. ಅವುಗಳಲ್ಲಿ ನಾನು ಆಸಕ್ತಿ ತೋರುತ್ತೇನೆ. ಆ ಆಸಕ್ತಿಯನ್ನು ಬೇರಾವುದರಲ್ಲಿಯೂ ತೋರುವುದಿಲ್ಲ. ನಾನು ಪೂರ್ತಿಯಾಗಿ ಒಬ್ಬ ಸುಧಾರಕ. ಆದರೆ ನನ್ನ ಉತ್ಸಾಹ ಹಿಂದೂಧರ್ಮದ ಮುಖ್ಯಾಂಶಗಳಲ್ಲಿನ ಯಾವುದನ್ನೇ ನಿರಾಕರಿಸುವ ಸ್ಥಿತಿಗೆ ಎಂದಿಗೂ ನನ್ನನ್ನು ಒಯ್ಯುವುದಿಲ್ಲ. ಮೂರ್ತಿಪೂಜೆಯಲ್ಲಿ ನನಗೆ ಅಪನಂಬಿಕೆ ಇಲ್ಲ ಎಂದೂ ನಾನು ಹೇಳಿದ್ದೇನೆ. ಒಂದು ವಿಗ್ರಹ ನನ್ನಲ್ಲಿ ಯಾವುದೇ ಪೂಜ್ಯಭಾವವನ್ನು ಎಬ್ಬಿಸುವುದಿಲ್ಲ. ಆದರೆ ಮೂರ್ತಿಪೂಜೆ, ಮಾನವಸ್ವಭಾವದ ಒಂದು ಅಂಶ ಎಂದು ನಾನು ಭಾವಿಸುತ್ತೇನೆ. ನಾವು ಸಾಂಕೇತಿಕತೆಗಾಗಿ ಹಾತೊರೆಯುತ್ತೇವೆ. ಒಬ್ಬ ವ್ಯಕ್ತಿ ಬೇರೆ ಯಾವುದೇ ಜಾಗಕ್ಕಿಂತಲೂ ಚರ್ಚೊಂದರಲ್ಲಿ ಏಕೆ ಹೆಚ್ಚು ಮನಸ್ಸಮಾಧಾನ ಪಡೆಯಬೇಕು? ವಿಗ್ರಹಗಳು ಪೂಜೆಗೆ ಒಂದು ಸಾಧನ, ಯಾವ ಹಿಂದುವೂ ವಿಗ್ರಹವೊಂದನ್ನು ದೇವರೆಂದು ಭಾವಿಸುವುದಿಲ್ಲ. ಮೂರ್ತಿಪೂಜೆಯನ್ನು ನಾನು ಒಂದು ಪಾಪವೆಂದು ಪರಿಗಣಿಸುವುದಿಲ್ಲ.

ಹಿಂದೂಧರ್ಮವು ಒಂದು ಅನ್ಯನಿಷೇಧಕ ಧರ್ಮವಲ್ಲವೆಂಬುದು ಈ ಮೇಲಿನದರಿಂದ ಸ್ಪಷ್ಟವಾಗಿದೆ. ಅದರಲ್ಲಿ ಪ್ರಪಂಚದ ಎಲ್ಲಾ ಪ್ರವಾದಿಗಳ ಪೂಜೆಗೆ ಅವಕಾಶವಿದೆ. ಪ್ರಚಾರಕ ಎಂಬ ಪದದ ಸಾಮಾನ್ಯಾರ್ಥದಲ್ಲಿ ಅದೊಂದು ಮತಪ್ರಚಾರಕ ಧರ್ಮವಲ್ಲ. ಅದು ಅನೇಕ ಬುಡಕಟ್ಟುಗಳನ್ನು ತನ್ನ ಬಳಗದಲ್ಲಿ ವಿಲೀನಗೊಳಿಸಿಕೊಂಡಿರುವುದರಲ್ಲಿ ಸಂಶಯವಿಲ್ಲ. ಆದರೆ ಈ ವಿಲೀನ ಕ್ರಮವಾದ, ಅಗೋಚರವಾದ, ವಿಕಾಸದ ರೀತಿಯದು. ಪ್ರತಿಯೊಬ್ಬನೂ ತನ್ನ ಸ್ವಂತ ಮತಧರ್ಮಕ್ಕೆ ಅನುಸಾರವಾಗಿ ದೇವರನ್ನು ಪೂಜಿಸುವಂತೆ ಹಿಂದೂಧರ್ಮ ಹೇಳುತ್ತದೆ. ಆದ್ದರಿಂದ ಅದು ಎಲ್ಲಾ ಧರ್ಮಗಳ ಜೊತೆ ಸ್ನೇಹದಿಂದ ಬಾಳುತ್ತದೆ.

 

ಹಿಂದೂಧರ್ಮದ ನನ್ನ ಕಲ್ಪನೆ ಇದಾಗಿರುವುದರಿಂದ, ಅಸ್ಪೃಶ್ಯತೆಯೊಂದಿಗೆ ರಾಜಿಮಾಡಿಕೊಳ್ಳಲು ನನಗೆ ಎಂದಿಗೂ ಸಾಧ್ಯವಾಗಿಲ್ಲ. ನಾನದನ್ನು ಯಾವಾಗಲೂ ಒಂದು ವಿಕೃತ ಬೆಳವಣಿಗೆಯೆಂದೇ ಭಾವಿಸಿದ್ದೇನೆ. ತಲೆತಲಾಂತರಗಳಿಂದ ಅದು ನಮಗೆ ಒದಗಿಬಂದಿರುವುದು ನಿಜ. ಅಂತೆಯೇ ಅನೇಕ ದುಷ್ಪಪದ್ಧತಿಗಳೂ ಇಂದಿನವರೆಗೂ ಉಳಿದುಕೊಂಡು ಬಂದಿವೆ. ಹುಡುಗಿಯರನ್ನು ವಸ್ತುತಃ ವೇಶ್ಯಾವೃತ್ತಿಗೆ ಮುಡಿಪು ಬಿಡುವುದು ಹಿಂದೂಧರ್ಮದ ಒಂದು ಅಂಶವಾಗಿತ್ತು ಎನ್ನುವುದನ್ನು ಚಿಂತಿಸುವುದು ಸಹ ನಾಚಿಕೆಗೇಡಿನ ಸಂಗತಿ ಎಂದು ನನಗನಿಸುತ್ತದೆ. ಆದರೂ ಇಂಡಿಯಾದ ಅನೇಕ ಭಾಗಗಳಲ್ಲಿ ಅದು ಹಿಂದೂಗಳಿಂದ ಆಚರಿಸಲ್ಪಡುತ್ತಿದೆ. ಕಾಳಿಗೆ ಮೇಕೆಗಳನ್ನು ಬಲಿಕೊಡುವುದು ಸ್ಪಷ್ಟ ಅಧರ್ಮ ಎಂದು ನಾನು ಭಾವಿಸುತ್ತೇನೆ ಮತ್ತು ಅದನ್ನು ಹಿಂದೂಧರ್ಮದ ಒಂದು ಅಂಶವೆಂದು ಪರಿಗಣಿಸುವುದಿಲ್ಲ. ಹಿಂದೂಧರ್ಮ ಎಂಬ ಹೆಸರೇ ವಿದೇಶಿಯರು ಹಿಂದೂಸ್ಥಾನದ ಜನರ ಧರ್ಮಕ್ಕೆ ಕೊಟ್ಟ ಹೆಸರು. ಒಂದಾನೊಂದು ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುತ್ತಿದ್ದುದರಲ್ಲಿ ಸಂದೇಹವಿಲ್ಲ. ಆದರೆ ಅದು ಧರ್ಮವಲ್ಲ, ಹಿಂದೂ ಧರ್ಮವಂತೂ ಅಲ್ಲವೇ ಅಲ್ಲ. ಆದ್ದರಿಂದಲೇ ಗೋರಕ್ಷಣೆ ನಮ್ಮ ಪೂರ್ವಜರಿಗೆ ಒಂದು ಧಾರ್ಮಿಕ ವಿಧಿಯಾದಾಗ ಗೋಮಾಂಸ ತಿನ್ನುವುದನ್ನು ಮುಂದುವರಿಸಿದವರು ಬಹಿಷ್ಕೃತರಾದರು ಎಂದು ನನಗೆ ಕಾಣುತ್ತದೆ. ಆ ಸಾಮಾಜಿಕ ಸಂಘರ್ಷ ಘೋರವಾಗಿದ್ದಿರಬೇಕು. ಸಾಮಾಜಿಕ ಬಹಿಷ್ಕಾರವು ನಿಯಮೋಲ್ಲಂಘನೆ ಮಾಡಿದವರಿಗಷ್ಟೇ ಅನ್ವಯವಾಗದೆ, ಅವರ ಬಹಿಷ್ಕಾರಗಳು ಅವರ ಮಕ್ಕಳಿಗೂ ಬಡಿದವು. ಈ ಪದ್ಧತಿ ಒಂದು ಸಂಪ್ರದಾಯವಾಗಿ ಬಲಗೊಂಡಿತು ಮತ್ತು ಈ ಆಚರಣೆಗೆ ಸ್ವಲ್ಪವೂ ಅರ್ಹವಲ್ಲದ ಹಾಗೂ ಅದಕ್ಕೂ ಕಡಿಮೆ ಸಮರ್ಥನೀಯವಾದ ಶಾಶ್ವತತೆಯನ್ನು ನೀಡುವಂತಹ ಶ್ಲೋಕಗಳು ಕೂಡ ನಮ್ಮ ಧರ್ಮಗ್ರಂಥಗಳೊಳಕ್ಕೆ ನುಸುಳಿದವು. ನನ್ನ ವಾದ ಸರಿಯೋ ಅಲ್ಲವೋ, ಅಸ್ಪೃಶ್ಯತೆಯಂತೂ ತರ್ಕಕ್ಕೆ ಕ್ಷಮೆ, ದಯೆ ಅಥವಾ ಪ್ರೀತಿಯ ಮಾನವನ ಸಹಜ ಸ್ವಭಾವಕ್ಕೆ ವಿರುದ್ಧವಾದುದು. ಗೋವಿನ ಪೂಜೆಯನ್ನು ಸ್ಥಾಪಿಸುವ ಧರ್ಮವೊಂದು ಧರ್ಮದ ಹೆಸರಿನಲ್ಲಿ ಆನೇಕ ಮೂಢನಂಬಿಕೆಗಳನ್ನು ಪ್ರಚಾರದಲ್ಲಿಟ್ಟಿದೆ ಎಂಬ ಸಂಗತಿ ನನಗೂ ಗೊತ್ತು. ಹಿಂದೂಧರ್ಮದ ವೇಷ ತೊಟ್ಟು ಪ್ರಚಲಿತವಾಗಿರುವ ಮೂಢನಂಬಿಕೆಗಳೆಲ್ಲವನ್ನೂ ನಾನು ಬಹಳ ದುಃಖದಿಂದ ಅರಿತಿದ್ದೇನೆ ಮತ್ತು ಈ ವಿಷಯಗಳ ಬಗ್ಗೆ ನೇರವಾಗಿ ಮಾತನಾಡಲು ಹಿಂಜರಿಯವುದಿಲ್ಲ. ಅಸ್ಪಶ್ಯತೆಯನ್ನು ಈ ಮೂಢನಂಬಿಕೆಗಳಲ್ಲಿ ಅತ್ಯಂತ ದೊಡ್ಡದು ಎಂದು ವರ್ಣಿಸಲು ನಾನು ಹಿಂದೆಗೆದಿಲ್ಲ. ಆದರೆ, ಇವೆಲ್ಲ ಇದ್ದರೂ, ನಾನು ಹಿಂದೂವಾಗಿಯೇ ಉಳಿದಿದ್ದೇನೆ. ಏಕೆಂದರೆ ಈ ಮೂಢನಂಬಿಕೆಗಳು ಹಿಂದೂ ಧರ್ಮದ ಅಂಗವಾಗಿವೆ ಎಂಬುದನ್ನು ನಾನು ನಂಬುವುದಿಲ್ಲ. ನಾನು ನಿಮಗೆ ವಿವರಿಸಿರುವ ಸತ್ಯಕ್ಕೆ ಹೊಂದಿಕೆಯಾಗದ ಯಾವುದನ್ನೇ ಆಗಲಿ ಅದು ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂದು ಕೂಡಲೇ ನಿರಾಕರಿಸಬೇಕು ಎಂದು ಹಿಂದೂ ಧರ್ಮವು ವಿಧಿಸಿರುವ ವ್ಯಾಖ್ಯಾನ ಸೂತ್ರಗಳೇ ನನಗೆ ಬೋಧಿಸುತ್ತವೆ.

ಕೃಪೆ: ಎಲ್ಲರ ಗಾಂಧೀಜಿ

ಕನ್ನಡಕ್ಕೆ: ಎನ್. ಬಾಲಸುಬ್ರಹ್ಮಣ್ಯ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ನಟರಾಜ್ ಹುಳಿಯಾರ್

contributor

Similar News