​ವಿಶ್ವಗುರುವಿನ ಅಚ್ಛೇ ದಿನ್ ಬಿಟ್ಟು ಹೋಗುತ್ತಿರುವ ಶ್ರೀಮಂತ ಭಾರತೀಯರು !

Update: 2023-08-02 14:52 GMT
Editor : Althaf | By : ಆರ್. ಜೀವಿ

- ಆರ್. ಜೀವಿ

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ವಿಶ್ವಗುರು ಆಗುತ್ತಿದೆ. ಪ್ರಪಂಚದ ದೊಡ್ಡ ದೊಡ್ಡ ಪವರ್ ಫುಲ್ ದೇಶಗಳೆಲ್ಲ ಮೋದಿ, ಮೋದಿ ಅಂತ ಗುಣಗಾನ ಮಾಡ್ತಾ ಇವೆ. ಅಮೇರಿಕ, ಚೀನಾ ದೇಶಗಳ ಅಧ್ಯಕ್ಷರೇ ಮೋದೀಜಿ ಹತ್ರ ಸೆಲ್ಫಿ ತೆಗೆಸಿಕೊಳ್ಳಲು ಕಾಯ್ತಾರೆ. ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸಲು ಮೋದೀಜಿ ಮಧ್ಯ ಪ್ರವೇಶಕ್ಕಾಗಿ ಇಡೀ ವಿಶ್ವವೇ ಕಾಯ್ತಾ ಇದೆ. ಅಮೇರಿಕ, ಆಸ್ಟ್ರೇಲಿಯಾ, ಬ್ರಿಟನ್ ಗೆ ಮೋದೀಜಿ ಹೋದ್ರೆ ಅಲ್ಲಿ ಅವರಿಗೆ ಹಾಲಿವುಡ್ ಸೂಪರ್ ಸ್ಟಾರ್ ಗಳಿಗಿಂತ ಭರ್ಜರಿ ಸ್ವಾಗತ ಸಿಗುತ್ತೆ.

ಇತ್ಯಾದಿ, ಇತ್ಯಾದಿ, ಇತ್ಯಾದಿ.

ಇದೆಲ್ಲ ಐಟಿ ಸೆಲ್ ಲೋಕದಲ್ಲಿ, ವಾಟ್ಸ್ ಆಪ್ ಯುನಿವರ್ಸಿಟಿಯಲ್ಲಿ, ಭಟ್ಟಂಗಿ ಚಾನಲ್ ಗಳ ಸ್ಟುಡಿಯೋಗಳಲ್ಲಿ, ಅಂಧ ಬೆಂಬಲಿಗರ ಫೇಸ್ ಬುಕ್ ಪೇಜುಗಳಲ್ಲಿ ಇರುವ ಇಮೇಜು. ಈಗ ನಾವು ವಾಸ್ತವ ಲೋಕಕ್ಕೆ ಬರೋಣ. ಅಲ್ಲೇನಾಗ್ತಾ ಇದೆ ಅಂತ ನೋಡೋಣ.

​ಮೋದಿ ಸರ್ಕಾರವೇ ಕೊಡುತ್ತಿರುವ ಅಂಕಿಅಂಶಗಳ ಪ್ರಕಾರ, 2011ರಿಂದ 16 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ. 2022, ಇದೊಂದೇ ವರ್ಷವೇ 2,25,620 ಮಂದಿ​ ಭಾರತೀಯ ಪೌರತ್ವ ತ್ಯಜಿಸಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 618 ಮಂದಿ.

ಈ ಅಂಕಿಅಂಶಗಳು ಏನನ್ನು ಹೇಳುತ್ತಿವೆ? ಯಾಕೆ ಶ್ರೀಮಂತ ಭಾರತೀಯರೆಲ್ಲ ದೇಶ ಬಿಟ್ಟು ವಿದೇಶಗಳಲ್ಲಿ ಹೋಗಿ ನೆಲೆಸುತ್ತಿದ್ದಾರೆ?​ ದೇಶದಲ್ಲಿ ಎಲ್ಲ ಚೆನ್ನಾಗಿದ್ದು ಅಚ್ಛೆದಿನ್ ಬಂದಿದ್ದರೆ ಯಾಕೆ ಇಷ್ಟೊಂದು ಜನ ಶ್ರೀಮಂತರು ಇಲ್ಲಿ ದುಡಿದು ​ಸಂಪಾದಿಸಿದ ಸಂಪತ್ತು ಹಿಡಿದುಕೊಂಡು ದೇಶ ಬಿಡುತ್ತಿದ್ದಾರೆ ? ಅದಕ್ಕೆ ಅವರು ಕೊಡುತ್ತಿರುವ ಕಾರಣಗಳು ಏನು ಹೇಳುತ್ತಿವೆ ?

ದೇಶ ಬಿಟ್ಟು ಹೋಗಿ​ ವಿದೇಶಗಳಲ್ಲಿ ವಾಸವಾಗಿ, ಇಲ್ಲಿ ದೇಶದಲ್ಲಿರುವ ಜನಸಾಮಾನ್ಯರಿಗೆ​ ಅಲ್ಲಿಂದ ದೇಶಭಕ್ತಿಯ​ ಹೆಸರಲ್ಲಿ ದ್ವೇಷಭಕ್ತಿ ಹಾಗು ಮೋದಿ ಭಕ್ತಿಯ ಪಾಠ ಹೇಳುವ ಈ ಹೊಸ ದೇಶಭಕ್ತಿ ಎಂಥದ್ದು​ ? ಅಂಕಿಅಂಶಗಳ ಪ್ರಕಾರ ಹಿಂದೆಂದಿಗಿಂತಲೂ ಹೆಚ್ಚಿನ ಭಾರತೀಯರು 2022ರಲ್ಲಿ ತಮ್ಮ ಪೌರತ್ವ ತ್ಯಜಿಸಿದ್ದಾರೆ ಮತ್ತು ಇತರ ದೇಶಗಳಲ್ಲಿ ಪೌರತ್ವ ಪಡೆದಿದ್ದಾರೆ.

ಲೋಕಸಭೆಯಲ್ಲಿ ಈ ವರ್ಷದ ಮಾರ್ಚ್ನಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಕೊಟ್ಟಿರುವ ಉತ್ತರ ಈ ವಿಚಾರವನ್ನು ಬಹಿರಂಗಪಡಿಸಿದೆ. ಏಕೆ ಹೀಗೆ? ಅವರೇಕೆ ಪೌರತ್ವ ತ್ಯಜಿಸುತ್ತಾರೆ?

ಇಂಥದೊಂದು ಪ್ರಶ್ನೆ ಸಹಜ. ಆದ್ರೆ ಇದಕ್ಕೆ ಉತ್ತರವಾಗಿ, ​" ಅದು ಅವರ ಆಯ್ಕೆ​" ಎನ್ನುತ್ತದೆ ಸರ್ಕಾರ. ಇನ್ನೂ ಮುಂದುವರಿದು, ಯಶಸ್ವಿ, ಸಮೃದ್ಧ ಮತ್ತು ಪ್ರಭಾವಿ ​ಅನಿವಾಸಿ ಭಾರತೀಯ ಸಮುದಾಯ ಭಾರತಕ್ಕೆ ಆಸ್ತಿಯಾಗಿದೆ. ​ಈ ಅನಿವಾಸಿ ಭಾರತೀಯರ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ದೇಶ ಬಹಳಷ್ಟು ಲಾಭ ಪಡೆಯಲು ಸಾಧ್ಯ ಎಂದೂ ಸಚಿವರು ಉತ್ತರ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

ಆದರೆ ಶ್ರೀಮಂತರೂ​, ಸುಶಿಕ್ಷಿತರೂ ಆಗಿರುವ ಅವರನ್ನು ದೇಶದಲ್ಲಿಯೇ ಉಳಿಸಿಕೊಂಡೂ ಲಾಭ ಪಡೆಯಬಹುದಲ್ಲವೆ ಎಂಬ ಪ್ರಶ್ನೆ​ಯನ್ನು ಈ ದೇಶದ ಯಾವುದೇ ಭಟ್ಟಂಗಿ ಚಾನಲ್ ಗಳು ಕೇಂದ್ರ ಸರಕಾರದ ಬಳಿ ಕೇಳುವುದಿಲ್ಲ. ವಲಸೆ ಮತ್ತು ಸ್ಥಳಾಂತರದ ಕುರಿತು ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸಲಹೆ ನೀಡುವ ಲಂಡನ್ ಮೂಲದ ಸಂಸ್ಥೆ ಹೆನ್ಲಿ ಮತ್ತು ಪಾರ್ಟ್ನರ್ಸ್ ಹೇಳುವಂತೆ, ಭಾರತದಿಂದ ಜಗತ್ತಿನ ವಿವಿಧೆಡೆಗೆ ವಲಸೆ ಬಂದ ಭಾರತೀಯ ​ಹೈ ನೆಟ್‌ವರ್ತ್ ವ್ಯಕ್ತಿಗಳು ​ಅಂದ್ರೆ HNWI​ ವ್ಯಕ್ತಿಗಳು ಜಗತ್ತಿನಾದ್ಯಂತ 2022ರಲ್ಲಿ ಎರಡನೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ಧಾರೆ.

ಮಿಲಿಯನೇರ್‌ಗಳು, ಅಥವಾ ​ಈ HNWI​ ಗಳೆಂದರೆ ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಸಂಪತ್ತನ್ನು ಹೊಂದಿರುವ ​ಸಿರಿವಂತರು. ಹೆಚ್ಚಿನ ಸಂಖ್ಯೆಯ HNWI ಗಳು ಚೀನಾದವರಾಗಿದ್ದಾರೆ. ಚೀನಾದ ಪೌರತ್ವವನ್ನು ಬಿಟ್ಟುಕೊಟ್ಟಿರುವವರು 2023ರಲ್ಲಿ 13,500 ಎಂದು ಹೇಳಲಾಗಿದೆ. 2022ರಲ್ಲಿ ಇಂಥವರ ಸಂಖ್ಯೆ 10,800 ಆಗಿತ್ತು. ಭಾರತದಿಂದ 2022ರಲ್ಲಿ ವಲಸೆಹೋದ HNWI ಗಳ ಸಂಖ್ಯೆ 7,500.

ಈ ವರ್ಷದ Henley Private Wealth Migration ವರದಿ ಪ್ರಕಾರ, 6,500 ಮಿಲಿಯನೇರ್‌ಗಳು 2023ರಲ್ಲಿ ಭಾರತ ತೊರೆಯಲಿದ್ದಾರೆ.

ಆದರೆ ಗ್ಲೋಬಲ್ ವೆಲ್ತ್ ಮೈಗ್ರೇಶನ್ ರಿವ್ಯೂ ಅಂಕಿಅಂಶಗಳು ಹೇಳುವ ಪ್ರಕಾರ, 2020ರಲ್ಲಾಗಲೇ ದೇಶದ ಮಿಲಿಯನೇರ್‌ಗಳಲ್ಲಿ ಶೇ.2ರಷ್ಟು ಮಂದಿ ವಿದೇಶ​ ಸೇರಿದ್ಧಾರೆ.

ವಿಶ್ವಸಂಸ್ಥೆಯ ವರದಿಯ ಪ್ರಕಾರ, 2020ರಲ್ಲಿ ದೇಶದ 180 ಲಕ್ಷ ಜನರು ತಾಯ್ನಾಡಿನ ಹೊರಗೆ ನೆಲೆಸಿದ್ದು, ಇದರೊಂದಿಗೆ ಭಾರತ ವಿಶ್ವದಲ್ಲೇ ಅತಿ ದೊಡ್ಡ ಡಯಾಸ್ಪೊರಾ ಜನಸಂಖ್ಯೆಯನ್ನು ಹೊಂದಿದೆ.

ಶ್ರೀಮಂತ ಭಾರತೀಯರು ವಿದೇಶಗಳಲ್ಲಿ ನೆಲೆಸಲು ಬಯಸುವುದೇಕೆ ಎಂಬುದಕ್ಕೆ ಕೊಡಲಾಗುತ್ತಿರುವ ಕಾರಣಗಳೆಂದರೆ,

1. ಉತ್ತಮ ಆರೋಗ್ಯ ರಕ್ಷಣೆ​,

2. ಮುಕ್ತ ಮತ್ತು ಹೊಂದಿಕೊಳ್ಳುವ ಉದ್ಯಮ ಪರಿಸರಗಳು​,

3. ಉತ್ತಮ ಶೈಕ್ಷಣಿಕ, ವೃತ್ತಿಪರ ಅವಕಾಶಗಳು​,

4. ಆರ್ಥಿಕ ಯೋಗಕ್ಷೇಮ

​ಇದ್ರಲ್ಲಿ ಮೊದಲ ಸ್ಥಾನದಲ್ಲೇ ಇರೋದು ಉತ್ತಮ ಅರೋಗ್ಯ ರಕ್ಷಣೆ. ಯಾರೋ ಚಕ್ರವರ್ತಿ ಸೂಲಿಬೆಲೆ ಅನ್ನೋ ಬಾಡಿಗೆ ಭಾಷಣಕಾರನೊಬ್ಬ " ಮೋದೀಜಿ ಲ್ಯಾಪ್ ಟಾಪ್ ಅಲ್ಲಿ ದೇಶದ ಪ್ರತಿಯೊಂದು ಆಸ್ಪತ್ರೆ ಕನೆಕ್ಟ್ ಆಗಿದೆ. ಪ್ರತಿ ರಾತ್ರಿ ಕೂತು ಅವರು ಆ ಲ್ಯಾಪ್ ಟಾಪ್ ನಲ್ಲಿ ಪ್ರತಿ ಆಸ್ಪತ್ರೆಯಲ್ಲಿ ಏನಾಗುತ್ತಿದೆ ಅಂತ ನೋಡಿ ಅಲ್ಲೇನಾದರೂ ಸಮಸ್ಯೆ ಇದ್ರೆ ಕೂಡಲೇ ಸರಿಪಡಿಸ್ತಾರೆ " ಅಂತ ಹೇಳಿದ್ದ ಜೋಕು ನೆನಪಾಗ್ತಾ ಇದೆಯಾ ನಿಮಗೆ ? ಬಿಡಿ, ಅದು ಬೇರಾವುದೋ ಆಸ್ಪತ್ರೆಗೆ ಸೇರಿಸೋ ಕೇಸು.

ಇನ್ನು 2015ರಿಂದ ಭಾರತದ ಪೌರತ್ವ ತ್ಯಜಿಸಿದವರೆಷ್ಟು ಎಂದು ನೋಡುವುದಾದರೆ,

2015 – 1,31,489

2016 – 1,41,603

2017 – 1,33,049

2018 – 1,34,561

2019 – 1,44,017

2020 – 85,256

2021 – 1,63,370

2022 – 2,25,620

ಮೋದಿ ಆಡಳಿತ ಕಾಲದಲ್ಲಿಯೇ ಹೀಗೆ ವರ್ಷ​ವರ್ಷವೂ ದೇಶದ ಲಕ್ಷ ಲಕ್ಷ ಜನರು ಪೌರತ್ವ ತೊರೆದು ವಿದೇಶಗಳಲ್ಲಿ ನೆಲೆಸುತ್ತಿರುವುದನ್ನು ತೋರಿಸುವ ಈ ಅಂಕಿ ಅಂಶಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.

ಡಯಾಸ್ಪೊರಾ ಭಾಗವಾಗಿ ಮೋದಿ​ ಆಡಳಿತವನ್ನು​ ವಿದೇಶಗಳಲ್ಲಿ ಕುಳಿತು ಕೊಂಡಾಡುವವರು​ ಮೋದಿ ಆಡಳಿತದಲ್ಲಿ ​ಇಲ್ಲೇ ದೇಶದಲ್ಲಿಯೇ ಇರಬಯಸದೆ ದೇಶವನ್ನು, ಅದರಲ್ಲೂ ಪೌರತ್ವವನ್ನೇ ತ್ಯಜಿಸಿ ಹೋಗುತ್ತಿರುವುದೇಕೆ? ಮೋದೀಜಿ ವಿದೇಶಕ್ಕೆ ಹೋದಾಗ ಅಲ್ಲಿ ಸ್ಟೇಡಿಯಂಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಅವರಿಗೆ ಜೈಕಾರ ಹಾಕುವವರು ಇಲ್ಲೇ ಬಂದು ಇರೋದಿಲ್ಲ ಯಾಕೆ ?

ಮೋದಿ ಆಡಳಿತದ ಅಚ್ಚೇದಿನಗಳು ಅವರಿಗೇಕೆ ಬೇಡ​ವಾಗಿವೆ ? ಪೌರತ್ವವನ್ನೇ ತೊರೆದು ವಿದೇಶಗಳಿಗೆ ಹೋಗುತ್ತಿದ್ದಾರೆಂದರೆ ಮೋದಿ ಸರ್ಕಾರ ಕೊಡುವ ಅಚ್ಚೇದಿನಗಳಿಗಿಂತಲೂ ಹೆಚ್ಚಿನದು ವಿದೇಶಗಳಲ್ಲಿ ಇರಲೇಬೇಕು ಎಂದಲ್ಲವೆ​ ? ಹಾಗಾದರೆ ಇವರೇಕೆ ಇನ್ನೂ ಕೊಡಲಿಕ್ಕಾಗದ ಅಚ್ಚೇದಿನಗಳ ಬಗ್ಗೆ ಇಷ್ಟೆಲ್ಲ ಅಬ್ಬರದಿಂದ​ ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ಹುಯಿಲೆಬ್ಬಿಸುತ್ತಿದ್ದಾರೆ​ ? ಅಷ್ಟಕ್ಕೂ ಇವರ ಅಚ್ಚೇದಿನಗಳನ್ನು ಕಂಡವರು ಯಾರು?

ದೇಶದ ಬ್ಯಾಂಕುಗಳಿಗೆ ಪಂಗನಾಮ ಹಾಕಿದವರೂ ವಿದೇಶಗಳಲ್ಲಿ ಹೋಗಿ ಕುಳಿತುಕೊಂಡು ಅಚ್ಚೇದಿನ ಅನುಭವಿಸುತ್ತಿದ್ದಾರೆ. ದೇಶದ ಶ್ರೀಮಂತರೂ ಇಲ್ಲಿಲ್ಲದ ಅಚ್ಚೇದಿನಗಳಿಗೋಸ್ಕರವೇ ವಿದೇಶಗಳಿಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಇವರ ಅಚ್ಚೆದಿನಗಳು ಹಸಿ ಹಸೀ ಸುಳ್ಳು ಎಂಬುದು ದೇಶದ ಬಡವರಿಗಂತೂ ಬಹಳ ಹಿಂದೆಯೇ ತಿಳಿದುಹೋಗಿದೆ. ಹಾಗಾದರೆ ನಿಜವಾಗಿಯೂ ಈ ದೇಶದಲ್ಲಿ ಅಚ್ಚೇದಿನಗಳಿಗೆ ​ಕಾಯುತ್ತಿರೋರು ಯಾರು ​?

Tags:    

Writer - ವಾರ್ತಾಭಾರತಿ

contributor

Editor - Althaf

contributor

Contributor - ಆರ್. ಜೀವಿ

contributor

Similar News