ಕೋವಿಡ್ ಬಳಿಕದ ಹಠಾತ್ ಸಾವುಗಳು: ಆದ್ಯತೆಗಳು ಹಾದಿ ತಪ್ಪದಿರಲಿ

ಸರಕಾರಗಳು-ಚುನಾವಣೆಗಳು ಬರುತ್ತವೆ-ಹೋಗುತ್ತವೆ. ಅದಕ್ಕಿಂತ ಮನುಷ್ಯ ಜೀವಗಳು ಅಮೂಲ್ಯ. ಐಸಿಎಂಆರ್‌ನಂತಹ ವೈದ್ಯವಿಜ್ಞಾನ ಸಂಸ್ಥೆಗಳು ‘ಮನುಷ್ಯರನ್ನು’ ರಕ್ಷಿಸುವ ಉದಾತ್ತ ಧ್ಯೇಯದೊಂದಿಗೆ ಕಾರ್ಯಾಚರಿಸಬೇಕಾದ ತುರ್ತು ಇದೆ.

Update: 2023-11-25 05:41 GMT

ಸಾಂದರ್ಭಿಕ ಚಿತ್ರ.

ಕೋವಿಡ್ ಬಳಿಕ ಗಮನಾರ್ಹವಾಗಿ ಹೆಚ್ಚಿರುವಂತೆ ಕಾಣಿಸುತ್ತಿದ್ದ ಹಠಾತ್ ಸಾವಿನ ಪ್ರಕರಣಗಳಿಗೆ ‘‘ಕೋವಿಡ್ ಲಸಿಕೆ ಕಾರಣ ಅಲ್ಲ’’ ಎಂದು ಸ್ಪಷ್ಟಪಡಿಸುವ ಅಧ್ಯಯನವೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಬಿಡುಗಡೆ ಮಾಡಿದ್ದು, ಅದು ಅವರ ಜರ್ನಲ್‌ನ (ಐಸಿಎಂಆರ್) ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಹಠಾತ್ ಸಾವುಗಳಲ್ಲಿ ಕೋವಿಡ್ ಲಸಿಕೆಯ ಸಂಭಾವ್ಯ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಸಂಶಯಗಳು ವ್ಯಕ್ತವಾಗಿದ್ದವು. ಆ ಹಿನ್ನೆಲೆಯಲ್ಲಿ ಈ ಹೊಸ ಅಧ್ಯಯನ ವರದಿಯ ಕುರಿತು, ಸ್ವತಃ ಐಸಿಎಂಆರ್ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿಕೊಂಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಐಸಿಎಂಆರ್ ಮುಖ್ಯಸ್ಥರಾದ ರಾಜೀವ್ ಬೆಹ್ಲ್ ಅವರು, ತಮ್ಮ ಸಂಸ್ಥೆಯು ಈ ವಿಚಾರದಲ್ಲಿ ನಾಲ್ಕು ಅಧ್ಯಯನಗಳನ್ನು ನಡೆಸಿದ್ದು, ಅವುಗಳನ್ನು ಸಮದಂಡಿಗಳ ಪರಿಶೀಲನೆಯ (ಪೀರ್ ರಿವ್ಯೆ) ಬಳಿಕ ಪ್ರಕಟಿಸಲಾಗುತ್ತದೆ ಎಂದು ಈ ಹಿಂದೆ ಹೇಳಿದ್ದರು. ಅದರಲ್ಲೀಗ ಎರಡು ಅಧ್ಯಯನಗಳು ಐಜೆಎಂಆರ್‌ನ ಜರ್ನಲ್‌ನಲ್ಲಿ ಪ್ರಕಟಗೊಂಡಿವೆ.

ಐಜೆಎಂಆರ್‌ನ ಆಗಸ್ಟ್ ಸಂಚಿಕೆಯಲ್ಲಿ ಗುಂಜನ್ ಕುಮಾರ್ ಅವರ ತಂಡ ನಡೆಸಿದ್ದ ಅಧ್ಯಯನ ಪ್ರಕಟಗೊಂಡಿತ್ತು. ಕೋವಿಡ್‌ಗೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ 14,419 ರೋಗಿಗಳ ಪೈಕಿ, ಒಂದು ವರ್ಷದ ಅವಧಿಯ ಒಳಗೆ 942 (ಶೇ. 6.5) ಮಂದಿ ತೀರಿಕೊಂಡಿದ್ದಾರೆ ಎಂದು ವಿವರಿಸುವ ಮೂಲಕ, ಗಂಭೀರ ಕೋವಿಡ್‌ಗೆ ತುತ್ತಾದವರಲ್ಲಿ ಸಾವಿನ ಸಂಭಾವ್ಯತೆಗಳು ಹೆಚ್ಚಿರುವ ಕುರಿತು ಅದು ಬೆಳಕು ಚೆಲ್ಲಿತ್ತು. (ಅಧ್ಯಯನದ ವಿವರಗಳು: https://journals.lww.com/ijmr/fulltext/2023/08000/determinants_of_post_discharge_mortality_among.6.aspx)

ಈಗ ಹೊಸದಾಗಿ, ಐಜೆಎಂಆರ್‌ನ ಅಕ್ಟೋಬರ್ 2023ರ ಸಂಚಿಕೆಯಲ್ಲಿ, ಮಾಣಿಕಂ ಪೊನ್ನಯ್ಯ ಅವರ ತಂಡ ನಡೆಸಿದ ಅಧ್ಯಯನ ಪ್ರಕಟಗೊಂಡಿದೆ. 18-45 ಪ್ರಾಯವರ್ಗದಲ್ಲಿ ಹಠಾತ್ ಸಾವಿಗೆ ಕೋವಿಡ್ ಲಸಿಕೆ ಕಾರಣವೇ? ಎಂಬ ಕುರಿತು ನಡೆಸಿದ ಈ ಅಧ್ಯಯನದಲ್ಲಿ, ಈ ಹಿಂದೆ ಕೋವಿಡ್ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವವರು, ಹಠಾತ್ ಸಾವಿನ ಕೌಟುಂಬಿಕ ಹಿನ್ನೆಲೆ ಇರುವವರು, ಕೆಲವು ಜೀವನಶೈಲಿ ಸಂಬಂಧಿ ಅಸಹಜತೆಗಳಿರುವವರು (ಕುಡಿತ, ವ್ಯಾಯಾಮದಂತಹ ಅತಿಯಾದ ದೈಹಿಕ ಶ್ರಮದ ಚಟವಟಿಕೆಗಳು) ಹಠಾತ್ ಸಾವಿಗೆ ತುತ್ತಾಗುವ ಸಾಧ್ಯತೆಗಳು, ಬೇರೆಯವರಿಗೆ ಹೋಲಿಸಿದರೆ ಹೆಚ್ಚು ಎಂದು ಕಂಡುಕೊಳ್ಳಲಾಗಿದೆ. (ಅಧ್ಯಯನದ ವಿವರಗಳು:https://journals.lww.com/ijmr/abstract/9900/factors_associated_with_unexplained_sudden_deaths.64.aspx)

ಅಧ್ಯಯನದಲ್ಲಿ ಏನಿದೆ?

ಭಾರತದಾದ್ಯಂತ 19 ರಾಜ್ಯಗಳ 47 ದೊಡ್ಡಾಸ್ಪತ್ರೆಗಳಲ್ಲಿ (ಟರ್ಷರಿಕೇರ್ ಕೇಂದ್ರಗಳು) 2023ರ ಮೇ-ಆಗಸ್ಟ್ ತಿಂಗಳುಗಳ ನಡುವೆ ಈ ಅಧ್ಯಯನ ನಡೆದಿದೆ. ಆ ಆಸ್ಪತ್ರೆಗಳಲ್ಲಿ 01-10-2021ರಿಂದ 31-03-2023ರ ನಡುವೆ ವರದಿ ಯಾಗಿರುವ ಹಠಾತ್ ಸಾವಿನ (ಅಂದರೆ ತೀರಿಕೊಳ್ಳುವ 24 ತಾಸುಗಳಿಗೆ ಮುನ್ನ ಆರೋಗ್ಯವಂತರಾಗಿದ್ದು, ಹಠಾತ್ ತೀರಿಕೊಂಡಿರುವ ವ್ಯಕ್ತಿಗಳ) ಪ್ರಕರಣಗಳನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೇಲೆ ಹೇಳಲಾಗಿರುವ 47 ಆಸ್ಪತ್ರೆಗಳಲ್ಲಿ ಅವರಿಗೆ, ಅಂತಹ ಬರೋಬ್ಬರಿ 29,171 ಪ್ರಕರಣಗಳು ದೊರೆತಿವೆ. ಅಧ್ಯಯನಕ್ಕೆ ಸಂಬಂಧಿಸಿದ ವಿವಿಧ ತಾಂತ್ರಿಕ ಕಾರಣಗಳಿಗಾಗಿ ಅವುಗಳ ಪೈಕಿ ಎಲ್ಲವನ್ನೂ ಹೊರಗಿಟ್ಟು, ಕೇವಲ 762 ಪ್ರಕರಣಗಳನ್ನು ಈ ಅಧ್ಯಯನಕ್ಕೆ ಸರಿಯೆಂದು ಪರಿಗಣಿಸಲಾಗಿತ್ತು. ‘ಕೇಸ್-ಕಂಟ್ರೋಲ್’ ಮಾದರಿಯನ್ನು ಅನುಸರಿಸಿದ ಈ ಅಧ್ಯಯನದಲ್ಲಿ ಪ್ರತೀ ಪ್ರಕರಣಕ್ಕೆ ಸರಾಸರಿ ನಾಲ್ಕರಂತೆ 2,916 ಮಂದಿ ಸ್ವಸ್ಥ, ಕೋವಿಡ್ ಲಸಿಕೆ ಪಡೆದಿರುವ ವ್ಯಕ್ತಿಗಳ ಮಾಹಿತಿಯನ್ನು ಕೂಡ ಬಳಸಿಕೊಳ್ಳಲಾಗಿತ್ತು. ಅಧ್ಯಯನವು ಕೋವಿಡ್ ಲಸಿಕೆಗೂ ಎಳೆಯರ ಅಕಾರಣ ಹಠಾತ್ ಸಾವುಗಳಿಗೂ ಸಂಬಂಧ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಮಾತ್ರವಲ್ಲದೆ, ಲಸಿಕೆಯಿಂದಾಗಿ ಹಠಾತ್ ಸಾವಿನ ಪ್ರಮಾಣ ತಗ್ಗಿದೆ ಎಂದೂ ಹೇಳಿದೆ.

ಅಧ್ಯಯನದ ಆಚೆಗಿನ ಕಟು ವಾಸ್ತವಗಳು

ಈ ಎರಡನೇ ಅಧ್ಯಯನ ‘ಕೇಸ್-ಕಂಟ್ರೋಲ್’ ವಿಧಾನದಲ್ಲಿ ನಡೆದದ್ದು ಸರಿಯೇ? ಅಥವಾ ‘ಕೋಹರ್ಟ್’ ಅಧ್ಯಯನ ಆಗಬೇಕಿತ್ತೇ ಎಂಬುದೆಲ್ಲ ವೈದ್ಯಕೀಯ ಪಂಡಿತರ ಚರ್ಚೆಗಳು. ಅವು ಅದರಷ್ಟಕ್ಕೆ ಯಥಾವಕಾಶ ನಡೆಯಲಿ. ಅದನ್ನು ದಾಟಿ ಕೆಲವು ಸಂಗತಿಗಳನ್ನು ಈ ಅಧ್ಯಯನದ ಹಿನ್ನೆಲೆಯಲ್ಲಿ ತುರ್ತಾಗಿ ಗಮನಿಸಬೇಕಿದೆ.

ಅಕ್ಟೋಬರ್ 2021ರಿಂದ ಮಾರ್ಚ್ 2023ರ ನಡುವೆ, ಒಂದೂವರೆ ವರ್ಷದಲ್ಲಿ, ದೇಶದ ಕೇವಲ 47 ಆಸ್ಪತ್ರೆಗಳಲ್ಲಿ 29,171 ಹಠಾತ್ ಸಾವಿನ ಪ್ರಕರಣಗಳನ್ನು ಈ ಅಧ್ಯಯನ ಗುರುತಿಸಿದೆ. ದೇಶದಲ್ಲಿ ಅಂದಾಜು 70,000ಕ್ಕೂ ಮಿಕ್ಕಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ಕಾರ್ಯನಿರತವಾಗಿವೆ. ಆ ಒಂದೂವರೆ ವರ್ಷದ ಅವಧಿಯಲ್ಲಿ, ಈ ಎಲ್ಲ 70,000 ಆಸ್ಪತ್ರೆಗಳಲ್ಲಿ ಅಂತಹ ಒಟ್ಟು ಎಷ್ಟು ಹಠಾತ್ ಸಾವಿನ ಪ್ರಕರಣಗಳು ವರದಿಯಾಗಿರಬಹುದು ಎಂಬುದನ್ನು ಊಹಿಸಿಕೊಂಡರೆ ಎದೆ ನಡುಗುತ್ತದೆ. ಇದಲ್ಲದೆ, ಆಸ್ಪತ್ರೆಗಳ ಗಮನಕ್ಕೆ ಬಂದಿರದ ಪ್ರಕರಣಗಳೂ ಸಾಕಷ್ಟಿರಬಹುದು. ಮೇಲಾಗಿ, ಈ ನಿಗದಿತ ಅವಧಿಯ ಮೊದಲು ಮತ್ತು ಆ ಬಳಿಕ ಕೂಡ ಸಾಕಷ್ಟು ಹಠಾತ್ ಸಾವಿನ ಪ್ರಕರಣಗಳು ದೇಶದಾದ್ಯಂತ ಆಗಾಗ ಕೇಳಿಬಂದಿವೆ.

ಕೋವಿಡ್ ಈಗ ಎಲ್ಲರಿಗೂ ತಿಳಿದಿರುವಂತೆ, ಮಧುಮೇಹ, ರಕ್ತದೊತ್ತಡ, ಬೊಜ್ಜು ಮತ್ತಿತರ ದೇಹವ್ಯವಸ್ಥೆಯ ತೊಂದರೆಗಳಿದ್ದವರನ್ನು ಹೆಚ್ಚು ಕಾಡುತ್ತದೆ. ಈ ರೋಗದ/ಲಸಿಕೆಯ ದೀರ್ಘಕಾಲಿಕ ಪರಿಣಾಮಗಳು ಇನ್ನಷ್ಟೇ ವಿವರವಾಗಿ ಅಧ್ಯಯನ ಆಗಬೇಕಿವೆ. ಅವುಗಳನ್ನು ಈ ಅಧ್ಯಯನ ಹೊರಗಿಟ್ಟೇ ಮುಂದುವರಿದಿದೆ.

ಇಂತಹದೊಂದು ಸನ್ನಿವೇಶದಲ್ಲಿ, ಹಠಾತ್ ಸಾವುಗಳು ಸಂಭವಿಸುತ್ತಿರುವುದು ಕೋವಿಡ್ ಲಸಿಕೆ ಯಿಂದ ಹೌದೇ ಅಲ್ಲವೇ ಎಂದು ತಿಳಿಯುವುದು ಖಂಡಿತಕ್ಕೂ ಆದ್ಯತೆ ಅಲ್ಲ. ಬದಲಾಗಿ, ಅಕಾರಣವಾಗಿ ಸಾಯತ್ತಿರುವ ಉತ್ಪಾದಕ ಪ್ರಾಯವರ್ಗದ ಜೀವಗಳನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಯ ರೂಪದಲ್ಲಿ ಏನು ಮಾಡಬಹುದು? ಯಾವ ವಿಧದ ವ್ಯಕ್ತಿಗಳಲ್ಲಿ ಇಂತಹ ಅಪಾಯ ಸಾಧ್ಯತೆ ಹೆಚ್ಚು? ಸಂಭಾವ್ಯ ಅಪಾಯಗಳನ್ನು ಹೇಗೆ ತಡೆಯಬಹುದು? ಎಂಬುದರತ್ತ ಯುದ್ಧೋಪಾದಿಯಲ್ಲಿ ಸಂಶೋಧನೆಗಳು ಇಷ್ಟರಲ್ಲೇ ಆರಂಭಗೊಳ್ಳಬೇಕಿತ್ತು. ಅವು ನಡೆದಂತಿಲ್ಲ. ಸರಕಾರಗಳು-ಚುನಾವಣೆಗಳು ಬರುತ್ತವೆ-ಹೋಗುತ್ತವೆ. ಅದಕ್ಕಿಂತ ಮನುಷ್ಯ ಜೀವಗಳು ಅಮೂಲ್ಯ. ಐಸಿಎಂಆರ್‌ನಂತಹ ವೈದ್ಯವಿಜ್ಞಾನ ಸಂಸ್ಥೆಗಳು ‘ಮನುಷ್ಯರನ್ನು’ ರಕ್ಷಿಸುವ ಉದಾತ್ತ ಧ್ಯೇಯದೊಂದಿಗೆ ಕಾರ್ಯಾಚರಿಸಬೇಕಾದ ತುರ್ತು ಇದೆ.

ಆರೋಗ್ಯ ಸಂಬಂಧಿ ವಿಚಾರಗಳು ಕೇಂದ್ರದ ಜವಾಬ್ದಾರಿ ಎಂದು ರಾಜ್ಯವೂ, ರಾಜ್ಯಪಟ್ಟಿಯ ವಿಚಾರ ಎಂದು ಕೇಂದ್ರ ಸರಕಾರವೂ ತಮ್ಮ ತಮ್ಮ ಸಂಸದೀಯ ಉತ್ತರದಾಯಿತ್ವದಿಂದ ಜಾರಿಕೊಂಡ ಹಲವು ಉದಾಹರಣೆಗಳನ್ನು ಕೋವಿಡೋತ್ತರ ಕಾಲದಲ್ಲಿ ನಾವು ಕಂಡಿದ್ದೇವೆ. ಕನಿಷ್ಠಪಕ್ಷ ಕರ್ನಾಟಕದಲ್ಲಿ, ಇನ್ನು ಮುಂದೆ ಸಂಭವಿಸುವ ಎಲ್ಲ ‘ಹಠಾತ್ ಸಾವು’ ಪ್ರಕರಣಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ಅವುಗಳ ಅಟಾಪ್ಸಿ ಕಡ್ಡಾಯವಾಗಿ ನಡೆಸಬೇಕು ಮತ್ತು ಈ ರೀತಿಯ ಹಠಾತ್ ಸಾವುಗಳಿಗೆ ಕಾರಣ ಪತ್ತೆ ಮಾಡುವುದಕ್ಕೆ ರಾಜ್ಯದ ವೈದ್ಯಕೀಯ ಕಾಲೇಜುಗಳ ಮೂಲಕ ವೈದ್ಯಕೀಯ ಸಂಶೋಧನಾ ಮಂಡಳಿಗಳನ್ನು ನಿಯೋಜಿಸಿ, ಕಾರ್ಯಪ್ರವೃತ್ತರಾಗಬೇಕು. ಅದಕ್ಕಾಗಿ ಆಗತ್ಯಬಿದ್ದರೆ ಶಾಸನಾತ್ಮಕ ತೀರ್ಮಾನಗಳನ್ನು ತಕ್ಷಣ ಕೈಗೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News