ಖಾಯಂ ನಿರ್ದೇಶಕರಿಲ್ಲದೆ, ಬಡಕಲಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು!

Update: 2024-01-18 03:24 GMT

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವ್ಯಾಪ್ತಿಯಲ್ಲಿ ಸೂಪರ್ ಸ್ಪೇಷಾಲಿಟಿ ಪಟ್ಟ ಪಡೆದುಕೊಂಡಿರುವ ಅನೇಕ ಆಸ್ಪತ್ರೆಗಳಿಗೆ ಖಾಯಂ ನಿರ್ದೇಶಕರ ನೇಮಕಾತಿಗೆ ರಾಜ್ಯ ಸರಕಾರ ಹಿಂದೇಟು ಹಾಕುತ್ತಿದ್ದು, ಇದರಿಂದ ಜನರಿಗೆ ಸೂಕ್ತ ಸಮಯಕ್ಕೆ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಬೆಂಗಳೂರಿನಲ್ಲಿರುವ ಪ್ರಮುಖ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳಾದ ನೆಪ್ರೋ ಯುರಾಲಜಿ ಸಂಸ್ಥೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ಮಾತ್ರವಲ್ಲದೆ, ವಿಕ್ಟೋರಿಯಾ ಆಸ್ಪತ್ರೆಗಳಿಗೆ ಇದುವರೆಗೂ ಖಾಯಂ ನಿರ್ದೇಶಕರ ನೇಮಕಕ್ಕೆ ರಾಜ್ಯ ಸರಕಾರ ಮುಹೂರ್ತ ನಿಗದಿ ಮಾಡಿಲ್ಲ. ಬರೀ ಪ್ರಭಾರ ಹುದ್ದೆಯಲ್ಲಿ ಹಲವು ವರ್ಷಗಳಿಂದ ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತೊಂದೆಡೆ, ಹಿಂದಿನ ಬಿಜೆಪಿ ಸರಕಾರ ನೇಮಕ ಮಾಡಿದ ಪ್ರಭಾರ ನಿರ್ದೇಶಕರನ್ನೇ ಕಾಂಗ್ರೆಸ್ ಸರಕಾರ ಮುಂದುವರಿಸುತ್ತಿದೆ. ಪ್ರಭಾರ ಹಾಗೂ ಹಲವು ಆರೋಪಗಳನ್ನು ಖಾಯಂ ನಿರ್ದೇಶಕರ ಆಸ್ಪತ್ರೆಗಳಲ್ಲಿ ಆಡಳಿತ ವ್ಯವಸ್ಥೆ ಕುಂಠಿತ ಹಾಗೂ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.

ಮೂತ್ರಪಿಂಡ ಮತ್ತು ಮೂತ್ರಕೋಶ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ನೆಪ್ರೋ ಯುರಾಲಜಿ ಸಂಸ್ಥೆಗೆ ೧೦ ವರ್ಷಗಳಿಂದ ಫೂರ್ಣಾವಧಿ ನಿರ್ದೇಶಕರಿಲ್ಲ. ಇದರಿಂದ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಮುಖ್ಯಮಂತ್ರಿಯೇ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ.

ಆಡಳಿತ ಮಂಡಳಿಯ ಸಭೆಗಳಲ್ಲಿ ಸಂಸ್ಥೆಯ ನಿರ್ದೇಶಕ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ರಾಜ್ಯ ಸರಕಾರ ಈವರೆಗೂ ನೇಮಕಾತಿ ನಡೆಸಿಲ್ಲ. ಪೂರ್ಣಾವಧಿ ನಿರ್ದೇಶಕರ ನೇಮಕಾತಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದಾಗಲೆಲ್ಲ ಸಂಸ್ಥೆಯ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು ನ್ಯಾಯಮಂಡಳಿಯಲ್ಲಿ ತಡೆಯಾಜ್ಞೆ ತರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಈ ಬಗ್ಗೆ ವರದಿ ಸಲ್ಲಿಸುವಂತೆ ೨೦೨೨ರ ಡಿಸೆಂಬರ್ ೧೪ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದರು. ೨೦೨೧ರಲ್ಲಿ ನಿರ್ದೇಶಕ ಹುದ್ದೆಗೆ ಅಧಿಸೂಚನೆ ಹೊರಡಿಸಿದಾಗ ಐವರು ಅರ್ಜಿ ಸಲ್ಲಿಸಿದ್ದರು. ಆದರೆ ಈವರೆಗೂ ನೇಮಕಾತಿ ನಡೆದಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ.

ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಈ ಸಂಸ್ಥೆಗಳಿಗೆ ಖಾಯಂ ನಿರ್ದೇಶಕರ ನೇಮಕ ಮಾಡುವ ಗೋಜಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿಲ್ಲ. ಪ್ರಭಾರ ನಿರ್ದೇಶಕರಾಗಿ ಡಾ.ಸಂಜಯ್ ಅವರು ಹಲವು ವರ್ಷಗಳಿಂದ ಮುಂದುವರಿಯುತ್ತಿದ್ದಾರೆ. ಇಲ್ಲಿನ ಬೈಲಾ ಸಮಸ್ಯೆಯಿಂದಾಗಿ ಹೊಸ ನಿರ್ದೇಶಕರ ನೇಮಕ ಸಾಧ್ಯವಾಗುತ್ತಿಲ್ಲ ಎಂಬುದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅದೇ ರೀತಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಖಾಯಂ ನಿರ್ದೇಶಕರ ನೇಮಕಾತಿ ನಡೆದಿಲ್ಲ. ಪ್ರಭಾರ ನಿರ್ದೇಶಕರಾಗಿ ರಮೇಶ್ ಕೃಷ್ಣ ಕಾರ್ಯಭಾರ ಮಾಡುತ್ತಿದ್ದಾರೆ. ಇಲ್ಲಿ ಫೆಲೋಶಿಪ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಫೆಲೋಶಿಪ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.

ಇಲಾಖೆ ನಡೆಸಿದ ತನಿಖೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಡಾ.ಎಂ.ಆರ್. ನಿರಂಜನ್ ಗೌಡ ಅವರನ್ನು ಅಮಾನತು ಮಾಡಲಾಗಿತ್ತು. ಸದ್ಯಕ್ಕೆ ಈ ಸಂಸ್ಥೆಯ ಜವಾಬ್ದಾರಿ ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕರಿಗೆ ನೀಡಲಾಗಿದೆ. ಆದರೆ, ಈವರೆಗೂ ಖಾಯಂ ನಿರ್ದೇಶಕರನ್ನೇ ನೇಮಕ ಮಾಡಿಲ್ಲ.

ಕಳಂಕಿತ ಖಾಯಂ ನಿರ್ದೇಶಕರ ಮೇಲೆ ತೂಗುಕತ್ತಿ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ನೆಪ್ರೋ ಯುರಾಲಜಿ ಸಂಸ್ಥೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಬಿವಿಎಂಸಿಆರ್‌ಐ) ನಿರ್ದೇಶಕರ ವಿರುದ್ಧ ಅಧಿಕಾರ ದುರ್ಬಳಕೆ ಸೇರಿ ವಿವಿಧ ಆರೋಪಗಳು ಕೇಳಿ ಬಂದಿದ್ದು, ಅಮಾನತು ಭೀತಿ ಎದುರಿಸುತ್ತಿದ್ದಾರೆ.

ಈಗಾಗಲೇ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ವಿ.ಲೋಕೇಶ್ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಅರುಂಧತಿ ಚಂದ್ರಶೇಖರ್ ಅಧ್ಯಕ್ಷತೆಯ ಸಮಿತಿ ತನಿಖೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿ ಒಂದೂವರೆ ತಿಂಗಳಾದರೂ ವರದಿ ಮಾತ್ರ ಬಿಡುಗಡೆಯಾಗಿಲ್ಲ. ನೆಪ್ರೋ ಯುರಾಲಜಿ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ.ಕೇಶವಮೂರ್ತಿ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ ಅಧ್ಯಕ್ಷತೆಯ ಸಮಿತಿ ತನಿಖೆ ಮುಗಿದಿದೆ.

ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಸಂಬಂಧ ಎಬಿವಿಎಂಸಿಆರ್‌ಐ ನಿರ್ದೇಶಕ ಡಾ.ಮನೋಜ್ ಕುಮಾರ್ ವಿರುದ್ಧ ಜನತಾ ಪಕ್ಷದ ಎನ್. ನಾಗೇಶ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ತಿದ್ದುಪಡಿ ಸಂಬಂಧ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಡಾ.ಎಂ.ಆರ್. ನಿರಂಜನ್‌ಗೌಡ ಅವರನ್ನು ಸರಕಾರ ಆಗಸ್ಟ್‌ನಲ್ಲಿ ಅಮಾನತು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಸಮೀರ್ ದಳಸನೂರು

contributor

Similar News