ಸಿಎಂ ಬದಲಾಯಿಸದೆ ಪೊಲೀಸ್ ಅಧಿಕಾರಿ ಬದಲಾಯಿಸುವ ಕೇಂದ್ರ ಸರಕಾರ !
► ಸುದ್ದಿಯೇ ಆಗದ ಪೋಲೀಸರ ಅಮಾನುಷ ದೌರ್ಜನ್ಯ ► ಐದು ತಿಂಗಳಾದರೂ ಹಿಂಸಾಗ್ರಸ್ತ ಮಣಿಪುರಕ್ಕೆ ಹೋಗದ ಪ್ರಧಾನಿ ಮೋದಿ !
ಮಣಿಪುರ ಮತ್ತೆ ಹೊತ್ತಿ ಉರಿಯತೊಡಗಿದೆ. ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾದವರು ಮಾತ್ರ ಮತ್ತಷ್ಟು ದ್ವೇಷದ ಮಾತುಗಳಿಗಾಗಿ ಚುನಾವಣೆ ಹೊತ್ತಲ್ಲಿ ತಯಾರಾಗುತ್ತಿರುವ ಹಾಗಿದೆ. ಐದು ತಿಂಗಳುಗಳೇ ಕಳೆದರೂ ಈಶಾನ್ಯ ರಾಜ್ಯದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ ಎಂದಾದರೆ ವಿಶ್ವಗುರುವಿನ ಸರ್ಕಾರ ಏನು ಮಾಡುತ್ತಿದೆ?
ಇದಕ್ಕಿಂತಲೂ ಹೆಚ್ಚಾಗಿ, ಈಗ ನ್ಯಾಯ ಕೋರಿ ಪ್ರತಿಭಟನೆಗೆ ಇಳಿದಿರುವ ವಿದ್ಯಾರ್ಥಿಗಳನ್ನು ಅತ್ಯಂತ ಭಯಂಕರವಾಗಿ, ಅಮಾನುಷವಾಗಿ ಥಳಿಸಲಾಗಿರುವ ವರದಿಗಳೂ ಇವೆ. ಸರ್ಕಾರಕ್ಕೆ ಇದಾವುದೂ ಗೊತ್ತಾಗುತ್ತಿಲ್ಲವೆ?. ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಚಿತ್ರಗಳನ್ನು ಕಂಡು ನೊಂದುಹೋಗಿರುವವರು ನ್ಯಾಯ ಕೇಳುತ್ತಿದ್ದರೆ ಭಯಂಕರ ಪೊಲೀಸ್ ದೌರ್ಜನ್ಯವೇ ಅವರಿಗೆ ಸಿಗುತ್ತಿರುವ ನ್ಯಾಯವಾ ಎಂದು ಕೇಳಬೇಕಾಗಿದೆ.
ಯಾವತ್ತೋ ಕೊನೆಗೊಂಡಿರಬೇಕಿದ್ದ ಹಿಂಸಾಚಾರ ಮತ್ತೆ ಭುಗಿಲೇಳುವುದಕ್ಕೆ ಪ್ರೇರಣೆಯಾದ ವಿದ್ಯಮಾನಗಳೇನು? ಅಂಥವು ಘಟಿಸದಿರಲು ಏನನ್ನೂ ಮಾಡದೆ ಸರ್ಕಾರ ಕೂತಿರುವುದೇಕೆ? ಅಲ್ಲಿ ಹಿಂಸಾಚಾರ ನಿಲ್ಲುವುದೇ ಸರ್ಕಾರಕ್ಕೆ ಬೇಕಿಲ್ಲವೆ?. ಜಗತ್ತಿಗೆಲ್ಲ ಪಾಠ ಹೇಳುವ ಪ್ರಧಾನಿ ಮೋದಿ ಈ ಸಣ್ಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪಿಸಲು ವಿಫಲವಾದ ತನ್ನದೇ ಪಕ್ಷದ ರಾಜ್ಯ ಸರ್ಕಾರದ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?
ಅಲ್ಲಿನ ಮುಖ್ಯಮಂತ್ರಿ ವಿರುದ್ಧ ಪಕ್ಷಪಾತ ಮತ್ತು ಹಿಂಸೆಗೆ ಪರೋಕ್ಷ ಬೆಂಬಲ ನೀಡಿದ ಆರೋಪವಿದ್ದರೂ ಏಕೆ ಹುದ್ದೆಯಿಂದ ಕೆಳಗಿಳಿಸದೆ ರಕ್ಷಿಸಲಾಗುತ್ತಿದೆ?. ಇಷ್ಟೆಲ್ಲದರ ನಡುವೆ ಒಮ್ಮೆ ಮಣಿಪುರಕ್ಕೆ ಹೋಗಲಾರದ, ಅಲ್ಲಿನ ಜನರಿಗಾಗಿ ನಾಲ್ಕು ಮಾತುಗಳನ್ನಾಡಲಾರದ ಹಠಕ್ಕೆ ಈ ದೇಶದ ಪ್ರಧಾನಿ ಅಂಟಿಕೊಂಡಿರುವುದೇಕೆ?
ಎಷ್ಟು ವಿಲಕ್ಷಣ ಸಂಗತಿ ನೋಡಿ, ಇಡೀ ರಾಜ್ಯವನ್ನೇ ಪ್ರಕ್ಷುಬ್ಧ ಪ್ರದೇಶವೆಂದು ಸರ್ಕಾರ ಘೋಷಿಸುತ್ತದೆಯೆ ಹೊರತು, ಅದು ಹಾಗಾದಂತೆ ತಡೆಯಬೇಕಿದ್ದ ತನ್ನ ಪಾತ್ರದ ಬಗ್ಗೆ ಅಥವಾ ತಡೆಯಲಾರದ ತನ್ನ ವೈಫಲ್ಯದ ಬಗ್ಗೆ ಯೋಚಿಸುವುದಿಲ್ಲ,
ಇನ್ನೂ ವಿಪರ್ಯಾಸವೆಂದರೆ, ಹಿಂಸಾಚಾರ ಶುರುವಾದೊಡನೆ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ ಕೂತುಬಿಡುತ್ತದೆ. ಈಗಲೂ ಹಾಗೆಯೇ ಆಗಿದೆ. ಇಂಫಾಲ್ ಕಣಿವೆಯ 19 ಪೊಲೀಸ್ ಠಾಣೆಗಳ ವ್ಯಾಪ್ತಿ ಹೊರತುಪಡಿಸಿ ಇಡೀ ರಾಜ್ಯವನ್ನು ಪ್ರಕ್ಷುಬ್ಧ ಪ್ರದೇಶ ಎಂದು ಘೋಷಿಸಲಾಗಿದೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.
ರಾಜ್ಯಾದ್ಯಂತ ಐದು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಕ್ಟೋಬರ್ 1ರ ರಾತ್ರಿ 7.45ರವರೆಗೂ ಇದು ಜಾರಿಯಲ್ಲಿರುತ್ತವೆ.
ಜನಾಂಗೀಯ ಹಿಂಸಾಚಾರ ತೀವ್ರ ಮಟ್ಟದಲ್ಲಿದ್ದ ಹೊತ್ತಿನಲ್ಲಿ ಜುಲೈ 6ರಂದು ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಹತ್ಯೆಯಾಗಿರುವ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ವೈರಲ್ ಆದ ಫೋಟೋದಲ್ಲಿ 17 ವರ್ಷದ ಹುಡುಗಿ ಮತ್ತು 20 ವರ್ಷದ ಯುವಕ ಇದ್ದಾರೆ. ಅವರ ಹಿಂದೆ ಬಂದೂಕುಗಳನ್ನು ಹಿಡಿದ ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ.
ಮತ್ತೊಂದು ಫೋಟೋದಲ್ಲಿ ಅವರ ಮೃತದೇಹಗಳು ನೆಲದ ಮೇಲೆ ಬಿದ್ದಿವೆ. ಚುರಾಚಂದಪುರದಿಂದ 35 ಕಿ.ಮೀ ದೂರದಲ್ಲಿರುವ ಬಿಷ್ಣುಪುರ ಜಿಲ್ಲೆಯಲ್ಲಿ ಇವರಿಬ್ಬರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಎರಡು ಜಿಲ್ಲೆಗಳ ನಡುವಿನ ಪ್ರದೇಶದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಅಪಹರಿಸಿ ಚುರಾಚಂದಪುರಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿತ್ತು.
ಜುಲೈನಲ್ಲಿ ಈ ವಿದ್ಯಾರ್ಥಿಗಳು, ಅಂಗಡಿಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಕಡೆಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಇಷ್ಟು ದಿನ ಬೇಕೆ ಎಂದೂ ಹಲವರು ಪ್ರಶ್ನಿಸಿದ್ದಾರೆ.
ನ್ಯಾಯ ಕೋರಿ ಸೆಪ್ಟೆಂಬರ್ 26ರಂದು ಇಂಫಾಲ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಪ್ರತಿಭಟನೆ ಅನಂತರವೂ ಮುಂದುವರಿದಿದೆ. ಮಡಿಲ ಮೀಡಿಯಾಗಳ ವರದಿಯಲ್ಲಿ ಕಾಣಿಸದ ಕೆಲವು ಸತ್ಯಗಳು ಇನ್ನೊಂದೆಡೆ ವರದಿಯಾಗುತ್ತಿದ್ದು, ಅದರ ಪ್ರಕಾರ, ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮೇಲೆ ಅತ್ಯಂತ ಅಮಾನುಷ ರೀತಿಯಲ್ಲಿ ಪೊಲೀಸ್ ದೌರ್ಜನ್ಯ ನಡೆದಿದೆ.
ಅಂಥ ದೌರ್ಜನ್ಯದ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವ ಪತ್ರಕರ್ತೆ ತನುಶ್ರೀ ಪಾಂಡೆ, ಮಣಿಪುರದಲ್ಲಿನ ಕರಾಳತೆಯನ್ನು ಬಹಿರಂಗಗೊಳಿಸಿದ್ದಾರೆ. ಊಹಿಸುವುದಕ್ಕೂ ಸಾಧ್ಯವಿಲ್ಲದ ರೀತಿಯಲ್ಲಿ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂಬುದನ್ನು ಸೂಚಿಸುವ ಚಿತ್ರಗಳಾಗಿವೆ ಅವು.
ಈ ಭಯಾನಕ ದೌರ್ಜನ್ಯವನ್ನು ಸರ್ಕಾರ ಗಮನಿಸುತ್ತಿದೆಯೆ? ವಿದ್ಯಾರ್ಥಿಗಳಿಗೆ ಇಂಥ ಕ್ರೂರ ರೀತಿಯಲ್ಲಿ ಥಳಿಸಲು ಸರ್ಕಾರವೇ ಪೊಲೀಸರಿಗೆ ಅನುಮತಿ ಕೊಟ್ಟಿದೆಯೆ ಎಂದು ಅವರು ಪ್ರಶ್ನಿಸಿದ್ದಾರೆ. ಮೇ 3ರಂದು ಮಣಿಪುರದಲ್ಲಿ ಶುರುವಾದ ಜನಾಂಗೀಯ ಹಿಂಸಾಚಾರದಲ್ಲಿ ಈಗಾಗಲೇ 180ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ.ಈಗ ಮತ್ತೆ ಹಿಂಸಾಚಾರ ಶುರುವಾಗಿದ್ದು, ಇಂಫಾಲ್ ಪಶ್ಚಿಮದಲ್ಲಿನ ಡಿ.ಸಿ ಕಚೇರಿಯನ್ನು ಉದ್ರಿಕ್ತರ ಗುಂಪು ಧ್ವಂಸಗೊಳಿಸಿದೆ. ಮಾತ್ರವಲ್ಲ, ಎರಡು ವಾಹನಗಳಿಗೂ ಬೆಂಕಿಹಚ್ಚಿರುವುದಾಗಿ ವರದಿಯಾಗಿದೆ.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ತಲೆದೋರುತ್ತಿದ್ದಂತೆ ಕೇಂದ್ರ ಗೃಹ ಸಚಿವಾಲಯ ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಬಲ್ವಾಲ್ ಅವರನ್ನು ಶ್ರೀನಗರದಿಂದ ಪುನಃ ಈಶಾನ್ಯ ರಾಜ್ಯಕ್ಕೆ ವರ್ಗಾಯಿಸಿದೆ. ರಾಕೇಶ್ ಬಲ್ವಾಲ್ ಮಣಿಪುರ ಕೇಡರ್‌ಗೆ ಸೇರಿದವರಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. 2021ರಲ್ಲಿ ಅವರು ಶ್ರೀನಗರದಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೊಣೆ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು 2018ರಲ್ಲಿ ಎನ್‌ಐಎಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು, ನಾಲ್ಕು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದ ಬಲ್ವಾಲ್, 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ತನಿಖಾ ತಂಡದ ಸದಸ್ಯರಾಗಿದ್ದರು.
ಇದೆಲ್ಲದರ ನಡುವೆ ಈಗ ಪ್ರಶ್ನೆಯಿರುವುದು, ಏಕೆ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆಯ್ನನು ಮರುಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು. ಇಷ್ಟೆಲ್ಲ ಜನರನ್ನು ಬಲಿಪಡೆದ ನಂತರವೂ ಸರ್ಕಾರ ಸುಮ್ಮನೆ ಕುಳಿತಿದೆಯೆ ಎಂಬ ಪ್ರಶ್ನೆ ಕಾಡುತ್ತದೆ.
ಈ ಹಿನ್ನೆಲೆಯಲ್ಲಿ, ಹಿಂಸಾಚಾರ ಇನ್ನು ನಡೆಯದಂತೆ ಮಾಡುವ ಮೊದಲ ಹೆಜ್ಜೆಯಾಗಿ ಮಣಿಪುರದ ಅಸಮರ್ಥ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕಿತ್ತುಹಾಕಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಒತ್ತಾಯಿಸಿರುವುದು ಸರಿಯಾಗಿಯೇ ಇದೆ. ಐದು ತಿಂಗಳುಗಳೇ ಆದರೂ, ಮಣಿಪುರದ ಜನರು ನೋವು ಅನುಭವಿಸುವುದು ತಪ್ಪಿಲ್ಲ ಮತ್ತು ಅವರಲ್ಲಿಗೆ ಈ ದೇಶದ ಪ್ರಧಾನಿ ಭೇಟಿ ನೀಡಿ ಸಾಂತ್ವನದ ಎರಡು ಮಾತುಗಳನ್ನು ಆಡುತ್ತಿಲ್ಲ ಎಂಬುದು ನಿಜಕ್ಕೂ ಬೇಸರದ ವಿಚಾರವಾಗಿದೆ.
ಒಂದಿಡೀ ರಾಜ್ಯದ ಜನರು ಇವರೇ ಹಚ್ಚಿದ ದ್ವೇಷದ ಬೆಂಕಿಯಲ್ಲಿ ಬೇಯುತ್ತಿದ್ದಾರೆ, ಸಂಕಟ ಅನುಭವಿಸುತ್ತಿದ್ದಾರೆ, ದಿಕ್ಕಾಪಾಲಾಗಿ ಹೋಗಿದ್ದಾರೆ ಎಂದರೆ, ಅವರಿಗಾಗಿ ಇವರು ಮಾಡುತ್ತಿರುವುದೇನು?. ಇವರ ರಾಜಕಾರಣದಲ್ಲಿ ಅವರಿನ್ನೂ ನೋಯುತ್ತ, ಸಾಯುತ್ತಲೇ ಇರಬೇಕೆ?. ಆ ಜನರ ನಿಜವಾದ ಸಂಕಟವನ್ನು ಅರ್ಥ ಮಾಡಿಕೊಳ್ಳಲಾರದ ಈ ಸರ್ಕಾರಕ್ಕೆ, ಅವರ ನಡುವಿನ ಗೊಂದಲಗಳನ್ನು ಬಗೆಹರಿಸುವುದು ಹಾಗಿರಲಿ, ಅವರ ಸಂಕಟದಲ್ಲಿ ಭಾಗಿಯಾಗುವ ಸೌಜನ್ಯ ಕೂಡ ಇಲ್ಲವಾಗಿದೆ. ದ್ವೇಷದ ಕಿಚ್ಚು ಹಬ್ಬಿಸುವುದಕ್ಕೆ ಮಾತ್ರವೇ ತುದಿಗಾಲಲ್ಲಿ ಇರುವ ಇವರ ನೈತಿಕತೆ ಈ ಮಟ್ಟಕ್ಕೆ ಕುಸಿದಿರುವಾಗ, ಸಂತ್ರಸ್ತ ರಾಜ್ಯದ ಜನರ ಪಾಲಿಗೆ ರಕ್ಷಣೆ ಮತ್ತು ಸಾಂತ್ವನ ಸಿಗೋದಾದ್ರೂ ಹೇಗೆ ?