ಅಬ್ಬರದ ಪ್ರಚಾರವೊಂದರಿಂದಲೇ ಜಿ20 ಮತ್ತು ಭಾರತದ ಅಧ್ಯಕ್ಷತೆ ಉಳಿಸಿಕೊಳ್ಳಲು ಸಾಧ್ಯವಿಲ್ಲ

2008ರಲ್ಲಿ ಸ್ಥಾಪನೆಗೊಂಡಾಗಿನಿಂದ ಜಿ20 ಬಡತನ ಮತ್ತು ಅಸಮಾನತೆಯನ್ನು ತಗ್ಗಿಸುವ ಕುರಿತು ಚರ್ಚೆಗಳಲ್ಲಿ ತೊಡಗಿಸಿಕೊಂಡಿದೆ. ವಿರೋಧಾಭಾಸವೆಂದರೆ ವಿಶ್ವದ ದಕ್ಷಿಣ ಭಾಗ, ನಿರ್ದಿಷ್ಟವಾಗಿ ಕನಿಷ್ಠ ಅಭಿವೃದ್ಧಿಗೊಂಡ ದೇಶಗಳು (ಎಲ್‌ಡಿಸಿ) ಮತ್ತು ವಿಶ್ವದ ಉತ್ತರ ಭಾಗದ ನಡುವಿನ ಅಸಮಾನತೆಗಳು ಈಗಲೂ ಉಳಿದುಕೊಂಡಿವೆ ಮತ್ತು ಅನೇಕ ಪ್ರಕರಣಗಳಲ್ಲಿ ಇನ್ನಷ್ಟು ಹೆಚ್ಚಿವೆ. ಸಾಮಾನ್ಯ ಚೌಕಟ್ಟುಗಳು ಮತ್ತು ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎನ್‌ಡಿಆರ್)ನ ಹಂಚಿಕೆಯ ಹೊರತಾಗಿಯೂ ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳಿಗೆ ಒದಗಿಸಲಾಗಿರುವ ನೆರವು ಕಡಿಮೆ ಪ್ರಮಾಣದಲ್ಲಿಯೇ ಉಳಿದುಕೊಂಡಿದೆ. ವಾಸ್ತವದಲ್ಲಿ ಸಾಂಕ್ರಾಮಿಕದ ಬಳಿಕ ಈ ದೇಶಗಳ ಸಾಲದ ಹೊರೆ ಗಣನೀಯವಾಗಿ ಹೆಚ್ಚಾಗಿದೆ.

Update: 2023-09-09 07:14 GMT

ಅವಿನಾಶ್ ಕುಮಾರ್, ಆ್ಯಯನ್ನಿ ನಮಲಾ ಮತ್ತು ವಿದ್ಯಾ ದಿನಕರ

ಸೆ.9ರಿಂದ ದಿಲ್ಲಿಯಲ್ಲಿ ನಡೆಯಲಿರುವ ಈ ವರ್ಷದ ಜಿ20 ಶೃಂಗಸಭೆಗೆ ಸಮಾನಾಂತರವಾಗಿ ಎರಡು ಕಥೆಗಳಿವೆ. ಮೊದಲನೆಯದು,ವಿಶ್ವದ ಮಹಾನ್ ನಾಯಕರು ತಮ್ಮ ಸ್ವಂತ ಹಿತಾಸಕ್ತಿಗಳ ನೆಲೆಯಲ್ಲಿ ಫೋಟೊ ತೆಗೆಸಿಕೊಳ್ಳುವ ಅವಕಾಶಕ್ಕಾಗಿ ಮತ್ತು ಒಪ್ಪಂದಗಳನ್ನು ಉಳಿಸಿಕೊಳ್ಳಲು ಅಥವಾ ಮಾಡಿಕೊಳ್ಳಲು ಹಿಂಬಾಗಿಲ ಮಾತುಕತೆಗಳಿಗಾಗಿ ಶೃಂಗಸಭೆಯಲ್ಲಿ ಒಟ್ಟಿಗೆ ಸೇರುತ್ತಿದ್ದಾರೆ ಮತ್ತು ಎರಡನೆಯದು, ಆತಿಥೇಯ ಭಾರತವು ತನ್ನದೇ ಆದ ಸಾರ್ವಜನಿಕ ಉತ್ಸವವನ್ನು ನಡೆಸುವುದು. ದಿಲ್ಲಿ ಈಗ ಅಕ್ಷರಶಃ ಭದ್ರಕೋಟೆಯಾಗಿ ಪರಿವರ್ತನೆಗೊಂಡಿದೆ.

ಸಾರ್ವಜನಿಕ ಉತ್ಸವಗಳೊಂದಿಗಿನ ಸಮಸ್ಯೆ ಏನೆಂದರೆ ಅವು ಮುಕ್ತಾಯ ದಿನಾಂಕವೊಂದನ್ನು ಹೊಂದಿರಬೇಕಾಗುತ್ತದೆ ಮತ್ತು ಸಮೃದ್ಧಿ, ಭದ್ರತೆ ಮತ್ತು ಶಾಂತಿಯನ್ನೊಳಗೊಂಡ ಪ್ರಜ್ಞೆಯು ಉತ್ಸವವನ್ನು ಬೆಂಬಲಿಸದಿದ್ದರೆ ಯಾರೇ ಆದರೂ ಸುಸ್ತಾಗತೊಡಗುತ್ತಾರೆ.

ನಾವು ಭಾರತದ ವಿಷಯಕ್ಕೆ ಬರುವ ಮುನ್ನ ಈಗಿನ ವಿಶ್ವದ ವಾಸ್ತವತೆಯತ್ತ ನೋಡೋಣ. ಪ್ರಸ್ತುತ ವಿಶ್ವಾದ್ಯಂತ 700ಕ್ಕೂ ಅಧಿಕ ಸಂಘರ್ಷಗಳು ನಡೆಯುತ್ತಿವೆ ಮತ್ತು ಇವುಗಳಲ್ಲಿ ಕೆಲವಕ್ಕೆ ಕಾರಣವಾಗಿರುವ ನಾಯಕರು ಜಿ20 ಸದಸ್ಯರಾಗಿ ಒಟ್ಟಿಗೆ ಸೇರುತ್ತಿದ್ದಾರೆ. ಚೀನಾ ಮತ್ತು ಅಮೆರಿಕ ನೇತೃತ್ವದ ಗುಂಪುಗಳ ನಡುವೆ ಹೊಸ ಶೀತಲ ಸಮರದೊಂದಿಗೆ ಇಂತಹ ಸಂಘರ್ಷಗಳು ನಡೆಯುತ್ತಿರುವ ಸ್ಥಳಗಳಲ್ಲಿ ಉಕ್ರೇನ್, ಮ್ಯಾನ್ಮಾರ್,ದಕ್ಷಿಣ ಸುಡಾನ್,ಅಫ್ಘಾನಿಸ್ತಾನ್, ಯೆಮೆನ್‌ನಂತಹ ದೇಶಗಳು ಸೇರಿವೆ. ಕೋವಿಡ್ ಸಾಂಕ್ರಾಮಿಕದ ನಂತರದ ಸಾಲ ಬಿಕ್ಕಟ್ಟು ವಿಶೇಷವಾಗಿ ಕಡಿಮೆ ಆದಾಯದ ದೇಶಗಳ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ದೇಶಗಳಲ್ಲಿ ಬಹು ದಂಗೆಗಳು ದಿನನಿತ್ಯದ ವಿದ್ಯಮಾನಗಳಾಗಿವೆ. ಹಣದುಬ್ಬರದ ಆತಂಕಕಾರಿ ಏರಿಕೆಯೊಂದಿಗೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳು ತ್ವರಿತ ದಾಪುಗಾಲನ್ನು ಹಾಕುತ್ತಿವೆ. ಆಹಾರ ಮತ್ತು ಇಂಧನದಂತಹ ಅಗತ್ಯ ಸಂಪನ್ಮೂಲಗಳ ಕೊರತೆಗಳು ಸಾಮಾನ್ಯವಾಗಿಬಿಟ್ಟಿವೆ. ವಲಸೆ ವಿರೋಧಿ ಉನ್ಮಾದವು ಅಡೆತಡೆಯಿಲ್ಲದೆ ಮುಂದುವರಿದಿದೆ ಮತ್ತು ದೈನಂದಿನ ವಿದ್ಯಮಾನವಾಗಿರುವ ಹವಾಮಾನ ಸಂಬಂಧಿತ ವಿಪತ್ತುಗಳೊಂದಿಗೆ ಮಾನವೀಯ ಬಿಕ್ಕಟ್ಟು ಕೋವಿಡ್ ಸಾಂಕ್ರಾಮಿಕದ ನಂತರ ನಿರಂತರವಾಗಿ ಪರಿಣಾಮಗಳನ್ನು ಬೀರುತ್ತಲೇ ಇದೆ. ಇವೆಲ್ಲವೂ ಕುಂದುತ್ತಿರುವ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹಿನ್ನೆಲೆಯಲ್ಲಿನ ಬೆಳವಣಿಗೆಗಳಾಗಿವೆ.

ಜಿ20 ನಾಯಕರು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತು ಅಂತರ್‌ರಾಷ್ಟ್ರೀಯ ಒಡಂಬಡಿಕೆ (ಐಸಿಸಿಪಿಆರ್)ಗೆ ಸಹಿ ಹಾಕುವ ಮತ್ತು ಅದನ್ನು ದೃಢೀಕರಿಸುವ ಮೂಲಕ ಹಾಗೂ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಸಮಿತಿ (ಸಿಸಿಪಿಆರ್)ಯ ಅಂತಿಮ ಅವಲೋಕನಗಳನ್ನು ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಈ ಮಾನವ ಹಕ್ಕುಗಳ ಒಪ್ಪಂದಗಳಿಗೆ ಬದ್ಧರಾಗುವ ಮತ್ತು ಅವುಗಳನ್ನು ಎತ್ತಿ ಹಿಡಿಯುವ ಮೂಲಕ ಜಿ20 ನಾಯಕರು ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರಜಾಸತ್ತಾತ್ಮಕ ಜಾಗತಿಕ ಆಡಳಿತ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವಾಗಿರುವ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ರಕ್ಷಣೆಯನ್ನು ಬಲಪಡಿಸಬಹುದು.

ಕಳೆದ ಮೂರು ವರ್ಷಗಳಲ್ಲಿ ಜಾಗತಿಕ ಆದಾಯ ಕೊರತೆ ಮತ್ತು ಹಸಿವು ಹೆಚ್ಚಾಗಿವೆ, ವಿಶ್ವಾದ್ಯಂತ 70 ಕೋ.ಜನರು ತೀವ್ರ ಬಡತನವನ್ನು ಎದುರಿಸುತ್ತಿದ್ದಾರೆ. ಬಡತನದ ಬಲೆಯಲ್ಲಿ ಸಿಲುಕಿರುವವರು ಸಾಮಾನ್ಯವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹೊರಗಿಡಲಾಗಿರುವ ಗುಂಪುಗಳಿಗೆ ಸೇರಿದವರಾಗಿದ್ದಾರೆ.

ಇವೆಲ್ಲವೂ ಆತಿಥೇಯ ಭಾರತ ಸರಕಾರವು ಮುಂದಿಟ್ಟಿರುವ ಈ ವರ್ಷದ ವಿಷಯ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ಕ್ಕೆ ತೀರ ವ್ಯತಿರಿಕ್ತವಾಗಿವೆ.

ಜಾಗತಿಕ ಹಣಕಾಸು, ಸಾಲ, ತೆರಿಗೆ ಇತ್ಯಾದಿಗಳ ಸುತ್ತಲಿನ ಸೀಮಿತ ಆದ್ಯತೆಗಳ ಬಗ್ಗೆ ಹೆಚ್ಚು ಕಳವಳ ಹೊಂದಿರುವ 20 ದೇಶಗಳ (ಐರೋಪ್ಯ ಒಕ್ಕೂಟ ಸೇರಿದಂತೆ) ಗುಂಪಿನಿಂದಷ್ಟೇ ಈ ಎಲ್ಲವನ್ನೂ ಬಗೆಹರಿಸಲು ಸಾಧ್ಯವಿಲ್ಲ ಎಂದು ಯಾರೇ ಆದರೂ ಖಂಡಿತವಾಗಿ ವಾದಿಸಬಹುದು. ಆದಾಗ್ಯೂ ವೈವಿಧ್ಯಮಯ ಪ್ರಜಾಸತ್ತಾತ್ಮಕ, ಅರೆ ನಿರಂಕುಶ ಮತ್ತು ನಿರಂಕುಶ ಪ್ರಭುತ್ವಗಳನ್ನು ಒಳಗೊಂಡಿರುವ 20 ಆರ್ಥಿಕತೆಗಳ ಈ ಗುಂಪು ಸಾಮೂಹಿಕವಾಗಿ ಒಟ್ಟು ಜಾಗತಿಕ ಉತ್ಪನ್ನ(ಜಿಡಬ್ಲ್ಯುಪಿ)ದಲ್ಲಿ ಶೇ.80,ಅಂತರ್‌ರಾಷ್ಟ್ರೀಯ ವ್ಯಾಪಾರದಲ್ಲಿ ಶೇ.75ರಷ್ಟು ಪಾಲನ್ನು ಹಾಗೂ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಮತ್ತು ವಿಶ್ವದ ಭೂಪ್ರದೇಶದ ಶೇ.60ರಷ್ಟನ್ನು ಹೊಂದಿವೆ ಎನ್ನುವುದೂ ತಿಳಿದಿರುವ ವಿಷಯವಾಗಿದೆ.

ಇದು ಈ ದೇಶಗಳು ಬಯಸಿದರೆ ವಿಶ್ವಾದ್ಯಂತ ನಡೆಯುತ್ತಿರುವ ಬಹಳಷ್ಟು ವಿದ್ಯಮಾನಗಳ ಮೇಲೆ ಪ್ರಭಾವ ಬೀರಲು ಖಂಡಿತವಾಗಿಯೂ ಅವುಗಳಿಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ದುರದೃಷ್ಟವಶಾತ್ ಈ ದೇಶಗಳು ಪರಸ್ಪರರೊಂದಿಗೆ ಜಗಳವಾಡುವುದರಲ್ಲಿ ಅಥವಾ ಧಾರ್ಮಿಕ ಮತ್ತು ಪೊಳ್ಳು ಹೇಳಿಕೆಗಳನ್ನು ನೀಡುವುದರಲ್ಲಿ ನಿರತವಾಗಿರುವುದನ್ನು ಮಾತ್ರ ನಾವು ನೋಡಿದ್ದೇವೆ. ಅಲ್ಲದೆ ತಮಗೆ ಬೇಕಾದಾಗ ವಿಶ್ವಸಂಸ್ಥೆಯು ಪ್ರಸ್ತಾಪಿಸಿರುವ ಬಹುಪಕ್ಷೀಯ ಕಾರ್ಯವಿಧಾನವನ್ನು ಕಡೆಗಣಿಸುವಲ್ಲಿ ಯಾವುದೇ ಹಿಂಜರಿಕೆಯನ್ನು ಅವು ತೋರಿಸಿಲ್ಲ.

ಸಾಂಕ್ರಾಮಿಕದ ಸಂದರ್ಭದಲ್ಲಿ ಮಕ್ಕಳು ಸಾಮಾನ್ಯ ಶಾಲಾವರ್ಷದಲ್ಲಿಯ ಕಲಿಕೆಯ ಶೇ.35ರಷ್ಟನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಶಾಲೆಗಳನ್ನು ದೀರ್ಘಕಾಲ ಮುಚ್ಚಿದ್ದು ಅಸ್ತಿತ್ವದಲ್ಲಿರುವ ಶೈಕ್ಷಣಿಕ ಅಸಮಾನತೆಗಳನ್ನು ಉಲ್ಬಣಗೊಳಿಸಿದೆ,ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಖಿನ್ನತೆಗೆ ಕಾರಣವಾಗಿದೆ ಹಾಗೂ ಶಾಲಾ ಊಟಕ್ಕೆ ವ್ಯತ್ಯಯವನ್ನುಂಟು ಮಾಡುವ ಮೂಲಕ ಮಕ್ಕಳ ಹಸಿವಿಗೆ ತನ್ನ ಕೊಡುಗೆಯನ್ನು ಸಲ್ಲಿಸಿದೆ.

ಈ ವರ್ಷದ ಜುಲೈಯನ್ನು ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ತಾಪಮಾನದ ತಿಂಗಳು ಎಂದು ಇತ್ತೀಚೆಗೆ ಘೋಷಿಸಲಾಗಿದ್ದರೆ, ವಿಶ್ವದ ಇತರ ಪ್ರದೇಶಗಳು ಹಿಂದೆಂದೂ ಕಂಡಿರದ ಮಳೆ ಮತ್ತು ನೆರೆಗಳಿಗೆ ಸಾಕ್ಷಿಯಾಗಿವೆ. ಪ್ರಸ್ತುತ ಪ್ರಯತ್ನಗಳ ಮುನ್ನಂದಾಜಿನ ಆಧಾರದಲ್ಲಿ ಹೇಳುವುದಾದರೆ ಪ್ಯಾರಿಸ್ ಒಪ್ಪಂದದಂತೆ ಜಿ20 ದೇಶಗಳು 2030ರ ವೇಳೆಗೆ ತಮ್ಮ ಇಂಗಾಲ ಹೊರಸೂಸುವಿಕೆಯನ್ನು ಶೇ.45ರಷ್ಟು ತಗ್ಗಿಸಬೇಕಿದ್ದರೂ ಕೇವಲ ಶೇ.10ರಷ್ಟು ತಗ್ಗಿಸುವ ಸಾಧ್ಯತೆಯಿದೆ.

ಸಾಮೂಹಿಕವಾಗಿ ಜಿ20 ದೇಶಗಳು ಭೂ ಬಳಕೆ ಬದಲಾವಣೆ ಮತ್ತು ಅರಣ್ಯ ಸೇರಿದಂತೆ ಶೇ.75ರಷ್ಟು ಜಾಗತಿಕ ಹಸಿರುಮನೆ ಅನಿಲಗಳಿಗೆ ಕಾರಣವಾಗಿವೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸಲು ಮಹತ್ವಾಕಾಂಕ್ಷಿ ಗುರಿಗಳನ್ನು ನಿಗದಿಗೊಳಿಸುವ ಪರಿಷ್ಕೃತ ರಾಷ್ಟ್ರೀಯ ನಿರ್ಧರಿತ ಕೊಡುಗೆ (ಎನ್‌ಡಿಸಿ) ಚೌಕಟ್ಟಿನೊಳಗೆ ಗಣನೀಯ ಮತ್ತು ಸಮಾನ ಬದ್ಧತೆಗಳನ್ನು ರೂಪಿಸುವ ಶಕ್ತಿ ಜಿ20 ನಾಯಕರಿಗಿದೆ.

2022ರಲ್ಲಿ ಯುಎನ್‌ಎಫ್ಸಿಸಿಸಿ ಸಿಒಪಿ27ರಲ್ಲಿ ಒಪ್ಪಿಕೊಂಡಂತೆ ದುರ್ಬಲ ರಾಷ್ಟ್ರಗಳಿಗೆ ‘ನಷ್ಟ ಮತ್ತು ಹಾನಿ’ ನಿಧಿಗೆ ಗಣನೀಯ ಸಂಪನ್ಮೂಲಗಳ ಹಂಚಿಕೆಯೂ ಅಷ್ಟೇ ನಿರ್ಣಾಯಕವಾಗಿದೆ. ಕಡಿಮೆ ಇಂಗಾಲ ಹೊರಸೂಸುವಿಕೆಗೆ ತ್ವರಿತ,ನ್ಯಾಯಯುತ ಮತ್ತು ಸಮಾನ ಪರಿವರ್ತನೆಗಾಗಿ ಜಿ20 ದೇಶಗಳು ಪರಿಸರ,ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವಗಳ ಮೌಲ್ಯಮಾಪನ ನಡೆಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪರಿಣಾಮಕಾರಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಹಾಗೂ ವಿಕೇಂದ್ರೀಕೃತ, ಪರಿಸರ ಸ್ನೇಹಿ ಮತ್ತು ಸಮುದಾಯ ನೇತೃತ್ವದ ಪರಿಹಾರಗಳನ್ನು ಬಳಸಿಕೊಳ್ಳುವ ಮೂಲಕ ಪರಿಸರ ಮತ್ತು ಮಾನವ ಹಕ್ಕುಗಳ ಸುರಕ್ಷತೆ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಬಹುದು.

2008ರಲ್ಲಿ ಸ್ಥಾಪನೆಗೊಂಡಾಗಿನಿಂದ ಜಿ20 ಬಡತನ ಮತ್ತು ಅಸಮಾನತೆಯನ್ನು ತಗ್ಗಿಸುವ ಕುರಿತು ಚರ್ಚೆಗಳಲ್ಲಿ ತೊಡಗಿಸಿಕೊಂಡಿದೆ. ವಿರೋಧಾಭಾಸವೆಂದರೆ ವಿಶ್ವದ ದಕ್ಷಿಣ ಭಾಗ, ನಿರ್ದಿಷ್ಟವಾಗಿ ಕನಿಷ್ಠ ಅಭಿವೃದ್ಧಿಗೊಂಡ ದೇಶಗಳು (ಎಲ್‌ಡಿಸಿ) ಮತ್ತು ವಿಶ್ವದ ಉತ್ತರ ಭಾಗದ ನಡುವಿನ ಅಸಮಾನತೆಗಳು ಈಗಲೂ ಉಳಿದುಕೊಂಡಿವೆ ಮತ್ತು ಅನೇಕ ಪ್ರಕರಣಗಳಲ್ಲಿ ಇನ್ನಷ್ಟು ಹೆಚ್ಚಿವೆ. ಸಾಮಾನ್ಯ ಚೌಕಟ್ಟುಗಳು ಮತ್ತು ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎನ್‌ಡಿಆರ್)ನ ಹಂಚಿಕೆಯ ಹೊರತಾಗಿಯೂ ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳಿಗೆ ಒದಗಿಸಲಾಗಿರುವ ನೆರವು ಕಡಿಮೆ ಪ್ರಮಾಣದಲ್ಲಿಯೇ ಉಳಿದುಕೊಂಡಿದೆ. ವಾಸ್ತವದಲ್ಲಿ ಸಾಂಕ್ರಾಮಿಕದ ಬಳಿಕ ಈ ದೇಶಗಳ ಸಾಲದ ಹೊರೆ ಗಣನೀಯವಾಗಿ ಹೆಚ್ಚಾಗಿದೆ.

ವ್ಯಾಪಾರ ಕ್ಷೇತ್ರದಲ್ಲಿ ಪೇಟೆಂಟ್ ಹಕ್ಕುಗಳನ್ನು ತೊಡೆದುಹಾಕುವಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ಅಸಾಮರ್ಥ್ಯವು ನಿರ್ಣಾಯಕ ಕೋವಿಡ್ ಔಷಧಿಗಳನ್ನು ಪಡೆಯುವುದಕ್ಕೆ ತಡೆಯನ್ನುಂಟು ಮಾಡಿದೆ ಮತ್ತು ಲಸಿಕೆ ಅಸಮಾನತೆಯು ಉಲ್ಬಣಗೊಂಡಿದೆ. ಜಿ20 ನಾಯಕರು ತೆರಿಗೆ ಸ್ವರ್ಗಗಳ ಕುರಿತು ಸ್ಪಷ್ಟ ಬದ್ಧತೆಗಳನ್ನು ಪಡೆದುಕೊಳ್ಳುವ ಮೂಲಕ ಜಾಗತಿಕ ತೆರಿಗೆ, ತೆರಿಗೆ ತಪ್ಪಿಸುವಿಕೆಯಂತಹ ತುರ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಬಹುದು. ಇದಕ್ಕಾಗಿ ಪ್ರಗತಿಪರ ತೆರಿಗೆ ವ್ಯವಸ್ಥೆಗೆ ಸಮಾನ ಒಪ್ಪಿಗೆ ಹಾಗೂ ಜಾಗತಿಕ ಸಮಾನತೆ ಮತ್ತು ನ್ಯಾಯದ ತತ್ವಗಳಿಂದ ನಿರ್ದೇಶಿತ ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಮರುರೂಪಿಸುವುದೂ ಅಗತ್ಯವಿದೆ.

ಆದಾಗ್ಯೂ ಎರಡು ಬಲಾಢ್ಯ ದೇಶಗಳಾದ ರಶ್ಯ ಮತ್ತು ಚೀನಾ ದೇಶಗಳ ಸರಕಾರಗಳ ಮುಖ್ಯಸ್ಥರು ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ, ಹೀಗಾಗಿ ಯಾವುದೇ ಮಹತ್ವದ ಒಪ್ಪಂದದ ನಿರೀಕ್ಷೆಗಳನ್ನು ಈಗಾಗಲೇ ದುರ್ಬಲಗೊಳಿಸುತ್ತಿರುವ ಶೃಂಗಸಭೆಯು ದೇಶದಲ್ಲಿ ಮತ್ತು ಜಾಗತಿಕವಾಗಿ ಆತಿಥೇಯ ರಾಷ್ಟ್ರದ ದೃಷ್ಟಿಕೋನವನ್ನು ರೂಪಿಸಲು ಒಂದು ವರ್ಷದ ಸಿದ್ಧತೆಯಾಗಿ ಅಂತ್ಯಗೊಳ್ಳಬಹುದು.

ಮತ್ತು ಇದು ನಮ್ಮನ್ನು ತನ್ನನ್ನು ‘ಪ್ರಜಾಪ್ರಭುತ್ವದ ತಾಯಿ, ಎಂದು ಕರೆದುಕೊಳ್ಳುತ್ತಿರುವ ಮತ್ತು ‘ವಿಶ್ವಗುರು’ವಾಗಿ ‘ದಕ್ಷಿಣ ಜಗತ್ತಿನ ನಾಯಕತ್ವ ’ವನ್ನು ಧ್ವನಿಸುವ ಭರವಸೆ ನೀಡುತ್ತಿರುವ ಭಾರತದ ಕಥೆಗೆ ಕರೆತರುತ್ತದೆ.

ಮಾನವ ಹಕ್ಕುಗಳು, ವಾಕ್ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಹಾಗೂ ನಿಯಂತ್ರಕ ಮತ್ತು ದಂಡನಾತ್ಮಕ ಕಾರ್ಯವಿಧಾನಗಳ ಮೂಲಕ ನಾಗರಿಕ ಸಮಾಜದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ರಾಜಕೀಯ ಕೈದಿಗಳು ಯಾವುದೇ ವಿಚಾರಣೆಯಿಲ್ಲದೆ ವರ್ಷಗಳಿಂದಲೂ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳುಗಳಿಂದಲೂ ಮಣಿಪುರದಲ್ಲಿ ಅಕ್ಷರಶಃ ಅಂತರ್ಯುದ್ಧ ನಡೆಯುತ್ತಿದೆ ಮತ್ತು ಇದಕ್ಕಾಗಿ ಈವರೆಗೆ ಯಾವುದೇ ಉತ್ತರದಾಯಿತ್ವವನ್ನು ನಿಗದಿಪಡಿಸಲಾಗಿಲ್ಲ. ದೇಶಾದ್ಯಂತ ಸರಕಾರದ ನೇರ ಬೆಂಬಲದೊಂದಿಗೆ ಧಾರ್ಮಿಕ ಅಲ್ಪಸಂಖ್ಯಾತರ, ನಿರ್ದಿಷ್ಟವಾಗಿ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಸುಳ್ಳು ಪ್ರಚಾರ ಮತ್ತು ದ್ವೇಷಭಾಷಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಇವೆಲ್ಲವೂ ನಡೆಯುತ್ತಿದೆ.

ಇಂತಹ ಮಹತ್ವದ ಘಟನೆಯನ್ನು ನೇರವಾಗಿ ಜನತೆಗೆ ತಲುಪಿಸಿದ ಮೊದಲಿಗ ಜಿ20 ಎಂದು ಬಿಂಬಿಸಲಾಗುತ್ತಿದೆ. ಶೃಂಗಸಭೆಯನ್ನು ಹೈಲೈಟ್ ಮಾಡುತ್ತಿರುವ ದೇಶಾದ್ಯಂತ ಮಿನುಗುತ್ತಿರುವ ಅಸಂಖ್ಯಾತ ಜಿ20 ಲಾಂಛನಗಳು,ಬೆಳಕು ಮತ್ತು ಧ್ವನಿ ವ್ಯವಸ್ಥೆಗಳನ್ನು ನೋಡಿದ ಯಾರೇ ಆದರೂ ಅದನ್ನು ನಂಬಲು ಪ್ರೇರೇಪಿಸಲ್ಪಡಬಹುದು. ಆದರೆ ಶೃಂಗಸಭೆಗಾಗಿ ವಿವಿಧ ದೇಶಗಳ ಪ್ರತಿನಿಧಿಗಳ ಆಗಮನಕ್ಕೆ ಮುನ್ನ ನಗರಗಳು ಸುಂದರವಾಗಿ ಕಾಣಿಸುವಂತೆ ಮಾಡಲು ಹಲವಾರು ಕೊಳಗೇರಿಗಳನ್ನು ಹೇಗೆ ನೆಲಸಮಗೊಳಿಸಲಾಗಿದೆ ಅಥವಾ ಮರೆ ಮಾಡಲಾಗಿದೆ ಎನ್ನುವುದು ನಮಗೆ ಗೊತ್ತಿದೆ.

ಕಳೆದ ವಾರ ಮುಂಬರುವ ಶೃಂಗಸಭೆಯಿಂದ ಜನರ ನಿರೀಕ್ಷೆಗಳನ್ನು ವ್ಯಕ್ತಪಡಿಸಲು ಪೀಪಲ್ಸ್ ಅಸೆಂಬ್ಲಿಯ ಭಾಗವಾಗಿ ದೇಶಾದ್ಯಂತದ 300ಕ್ಕೂ ಅಧಿಕ ನಾಗರಿಕ ಸಮಾಜದ ಪ್ರತಿನಿಧಿಗಳು ದಿಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸಭೆ ಸೇರಿದ್ದರು. ವಿಶ್ವದ ಹಲವು ಭಾಗಗಳಿಂದ ಪ್ರತಿನಿಧಿಗಳೂ ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸ್ಥಳದಲ್ಲಿ ಹಲವಾರು ಪೊಲೀಸರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಪ್ರತಿಯೊಂದೂ ಅಧಿವೇಶನದ ಕಲಾಪಗಳನ್ನು ದಾಖಲಿಸಿಕೊಂಡ ಅವರು ಭಾಷಣಕಾರರ ಮುಖಗಳನ್ನು ಸ್ಕ್ಯಾನ್ ಮಾಡಿಕೊಂಡಿದ್ದರು. ಇದು ನಮ್ಮ ಪ್ರಜಾಪ್ರಭುತ್ವವು ಇಂದು ಎಷ್ಟೊಂದು ಸದೃಢವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ! ಅದಕ್ಕೂ ಒಂದು ವಾರ ಮೊದಲು ನಾಗರಿಕ ಸಮಾಜ ಸಂಘಟನೆಗಳ ಇನ್ನೊಂದು ಸಮಾವೇಶವನ್ನು ಪೊಲೀಸರು ಮಧ್ಯದಲ್ಲಿಯೇ ತಡೆದಿದ್ದರು, ಇದಕ್ಕಾಗಿ ಅವರು ನೀಡಿದ್ದ ನೆಪಗಳನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಮತ್ತು ಈ ಬಗ್ಗೆ ವಿಸ್ತೃತ ಮಾಧ್ಯಮವು ಮೌನವಾಗಿತ್ತು.

ದಮನದ ಭಾರದಿಂದ ಮುಕ್ತವಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವವು ಬೆಳೆಯುತ್ತದೆ. ಸುಸ್ಥಿರ ಅಭಿವೃದ್ಧಿಯ ಅನ್ವೇಷಣೆಯು ಪ್ರವರ್ಧಿಸುತ್ತಿರುವ ನಾಗರಿಕ ಸಮಾಜ ಮತ್ತು ಪುಟಿದೇಳುವ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಅಗತ್ಯವಾಗಿಸುತ್ತದೆ. ಈ ಮೂಲಾಧಾರಗಳು ಸಮಾನ ಪ್ರಗತಿಯನ್ನು ಮುನ್ನಡೆಸುವಲ್ಲಿ ಮತ್ತು ಎಲ್ಲ ಪ್ರಜೆಗಳ ಆಕಾಂಕ್ಷೆಗಳು ಗೌರವಿಸಲ್ಪಟ್ಟಿವೆ ಎನ್ನುವುದನ್ನು ಖಚಿತಪಡಿಸುವಲ್ಲಿ ಪ್ರಮುಖವಾಗಿವೆ. ಜಿ20 ನಾಯಕರು ಪ್ರಪಂಚದ ಮಾರ್ಗವನ್ನು ಸುಧಾರಣೆಯತ್ತ ಬದಲಿಸುವ ಇಚ್ಛೆಯನ್ನು ಹೊಂದಿದ್ದರೆ ಅದರ ಪ್ರಸ್ತುತ ಅಧ್ಯಕ್ಷರು ಮತ್ತು ಶೃಂಗಸಭೆ ಮಾರ್ಗವನ್ನು ತೋರಿಸಬೇಕಾಗುತ್ತದೆ.

(ಅವಿನಾಶ್ ಕುಮಾರ್, ಆ್ಯಯನ್ನಿ ನಮಲಾ ಮತ್ತು ವಿದ್ಯಾ ದಿನಕರ ಅವರು ಜಿ20ಯೊಂದಿಗೆ ತೊಡಗಿಕೊಂಡಿರುವ ಜಾಗತಿಕ ನಾಗರಿಕ ಸಮಾಜ ವೇದಿಕೆ ಪೀಪಲ್ಸ್ 20ಯ ಭಾರತೀಯ ಸಂಯೋಜಕರಾಗಿದ್ದಾರೆ.)

ಕೃಪೆ: thewire.in

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News