ಮುಖ್ಯಮಂತ್ರಿ ನವ ನಗರೋತ್ಥಾನ ಕ್ರಿಯಾ ಯೋಜನೆಗೆ ನಗರಾಭಿವೃದ್ಧಿ ಇಲಾಖೆಯು ಅನುದಾನ ಬಿಡುಗಡೆ ಮಾಡುತ್ತಿಲ್ಲ

Update: 2024-07-02 05:22 GMT
ಸಾಂದರ್ಭಿಕ ಚಿತ್ರ ( ಬೆಂಗಳೂರು ನಗರ) | PC: PTI

ಬೆಂಗಳೂರು: ಮುಖ್ಯಮಂತ್ರಿ ನವ ನಗರೋತ್ಥಾನ ಕ್ರಿಯಾ ಯೋಜನೆಗೆ 15 ತಿಂಗಳ ಹಿಂದೆಯೇ ಅನುಮೋದನೆ ದೊರೆತಿದ್ದರೂ ನಗರಾಭಿವೃದ್ಧಿ ಇಲಾಖೆಯು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಅನುದಾನಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ವಿಕಾಸಸೌಧ ಮತ್ತು ವಿಧಾನಸೌಧ ಮೆಟ್ಟಿಲು ಹತ್ತಿ ಬಸವಳಿದು ಹೋಗಿದ್ದಾರೆ.

ರಾಜಧಾನಿಯ ಅಭಿವೃದ್ಧಿಗಾಗಿ ಈ ಹಿಂದಿನ ಬಿಜೆಪಿ ಸರಕಾರವು ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಒದಗಿಸಿದ್ದ 8149.27 ಕೋಟಿ ರೂ. ಪೈಕಿ 485.06 ಕೋಟಿ ವೆಚ್ಚದ ಕಾಮಗಾರಿಗಳನ್ನು ಈಗಿನ ಕಾಂಗ್ರೆಸ್ ಸರಕಾರವು ಕೈಬಿಟ್ಟಿರುವ ನಡುವೆಯೇ ಪ್ರತಿಪಕ್ಷಗಳ ಶಾಸಕರು ಪ್ರತಿನಿಧಿಸಿರುವ ಕ್ಷೇತ್ರಗಳಿಗೆ 15 ತಿಂಗಳಾದರೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ವಿಚಾರವು ಮುನ್ನೆಲೆಗೆ ಬಂದಿದೆ.

ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ ಮಾಡುವಲ್ಲಿ ನಗರಾಭಿವೃದ್ಧಿ ನಿರ್ಲಕ್ಷ್ಯವಹಿಸಲಾಗುತ್ತಿದೆ. ಈ ಸಂಬಂಧ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಶಾಸಕರು ಮನವಿ, ದೂರುಗಳನ್ನು ಸಲ್ಲಿಸಿದ್ದಾರೆ. ಈ ದೂರುಗಳ ಪ್ರತಿಯು ‘the-file.in’ಗೆ ಲಭ್ಯವಾಗಿವೆ.

ಕ್ರಿಯಾ ಯೋಜನೆಗಳಿಗೆ ಅನುಮೋದನೆ ದೊರೆತಿರುವ ಪ್ರಸ್ತಾವಗಳಿಗೆ ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕಮಿಷನ್‌ಗಾಗಿ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಹಲವು ಕ್ಷೇತ್ರಗಳಿಗೆ ಅನುದಾನದ ಪ್ರಸ್ತಾವಗಳಿಗೆ ಅನುಮೋದನೆ ದೊರೆತಿರುವ ಅನುದಾನವನ್ನು ಕಾಂಗ್ರೆಸ್ ಸರಕಾರವು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ.

ಈ ಸಂಬಂಧ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಮುನಿರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2024ರ ಮೇ 8ರಂದೇ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?: ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ 8 ವಾರ್ಡ್‌ಗಳ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿತ್ತು. ಸರಕಾರದ ಆದೇಶದಂತೆ ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿಲ್ಲಿ 110 ಕೋಟಿ ರೂ. ಅಂದಾಜು ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿತ್ತು.

110 ಕೋಟಿ ರೂ. ಅನುದಾನದ ಪೈಕಿ ಈಗಾಗಲೇ ಬೃಹತ್ ರಸ್ತೆ ವಿಭಾಗದ ವತಿಯಿಂದ ಚೊಕ್ಕಸಂದ್ರ ವಾರ್ಡ್ ನಂ 39ರಲ್ಲಿ 20 ಕೋಟಿ ರೂ.ಗಳ ಕಾಮಗಾರಿಗಳಿಗೆ ಕಾರ್ಯಾದೇಶವಾಗಿದ್ದು ಕೆಲಸ ಪ್ರಗತಿಯಲ್ಲಿದೆ. ಇತ್ತೀಚೆಗೆ ಉಳಿದ 90 ಕೋಟಿ ರೂ.ಗಳ ಅನುದಾನದ ಪೈಕಿ 12 ಕೋಟಿ ರೂ.ಗಳ ಅನುದಾನದ ಪ್ರಸ್ತಾವಕ್ಕೆ ಮಂಜೂರಾತಿಯಾಗಿರುವುದು ಪತ್ರದಿಂದ ತಿಳಿದು ಬಂದಿದೆ.

ಉಳಿಕೆ 78 ಕೋಟಿ ರೂ. ಅನುದಾನಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ 2023ರ ಜನವರಿ 12ರಲ್ಲಿ ನಗರಾಭಿವೃದ್ಧಿ ಇಲಾಖೆಗೆ ಅನುಮೋದನೆ ಕೋರಿ ಪ್ರಸ್ತಾವ ಸಲ್ಲಿಸಿರುವುದು ಗೊತ್ತಾಗಿದೆ.

ಒಟ್ಟು 5 ಪ್ರಸ್ತಾವಗಳಿಗೆ ಸುಮಾರು 15 ತಿಂಗಳು ಕಳೆದರೂ ಸಹ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ದೊರೆತಿರುವುದಿಲ್ಲ. ಸರಕಾರವು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರೂ ಸಹ ಇದುವರೆಗೂ ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವಕ್ಕೆ ಅನುಮೋದನೆ ನೀಡದೇ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

‘ಈ ಪ್ರಸ್ತಾವಗಳಿಗೆ ತುರ್ತಾಗಿ ಅನುಮೋದನೆ ನೀಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ನಗರಾಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಅವರು 2024ರ ಮೇ 28ರಂದೇ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಗೊತ್ತಾಗಿದೆ.

ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಐದು ಹಳ್ಳಿಗಳ ರಸ್ತೆ ಅಭಿವೃದ್ಧಿ ಮತ್ತು ದುರಸ್ತಿಗೆ ಹೆಚ್ಚುವರಿಯಾಗಿ ಒದಗಿಸಿದ್ದ 25 ಕೋಟಿ ರೂ. ವೆಚ್ಚದ ಕಾಮಗಾರಿಗಳ ಟೆಂಡರ್‌ಗೆ ನೀಡಲಾಗಿದ್ದ ಅನುಮೋದನೆಯನ್ನೂ ಹಿಂಪಡೆದಿರುವುದನ್ನು ಸ್ಮರಿಸಬಹುದು.

ಅಕ್ಟೋಬರ್ 2021ರಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಬಿಜೆಪಿ ಸರಕಾರವು ಬೆಂಗಳೂರಿಗೆ ಅಮೃತ್ ನಗರೋತ್ಥಾನ ಯೋಜನೆಯಡಿ 6ಸಾವಿರ ಕೋಟಿ ರೂ.ಅನುದಾನವನ್ನು ಘೋಷಿಸಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ರಸ್ತೆ ಮೂಲಸೌಕರ್ಯ, ಕೆರೆಗಳು, ಮಳೆನೀರು ಚರಂಡಿಗಳು, ಆಸ್ಪತ್ರೆಗಳು ಮುಂತಾದ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿತ್ತು.

ಅಮೃತ್ ನಗರೋತ್ಥಾನ ಯೋಜನೆಯಡಿ 2,146 ಕಿ.ಮೀ ರಸ್ತೆಗಳ ಅಭಿವೃದ್ಧಿ (ಒಳಚರಂಡಿ ಸೇರಿದಂತೆ), 67 ಕೆರೆಗಳು ಮತ್ತು 11 ಹೊಸ ಉದ್ಯಾನಗಳ ಅಭಿವೃದ್ಧಿ, ಅಸ್ತಿತ್ವದಲ್ಲಿರುವ 15 ಉದ್ಯಾನವನಗಳ ನವೀಕರಣ, 42 ಹೊಸ ಶಾಲಾ ಕಟ್ಟಡಗಳು ಮತ್ತು ಅಸ್ತಿತ್ವದಲ್ಲಿರುವ 26 ಶಾಲೆಗಳ ನವೀಕರಣ, ನಿರ್ಮಾಣ 40 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 84 ಹಳೆಯ ಪ್ರಾಥಮಿಕ ಕೇಂದ್ರಗಳ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿತ್ತು.

2022-23ರಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಹೊಸ ಶಾಲಾ ಕಟ್ಟಡಗಳ ನಿರ್ಮಾಣದ ರೂಪದಲ್ಲಿ ಬಿಬಿಎಂಪಿ ಶಾಲೆಗಳ ನವೀಕರಣವನ್ನು ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿಯ ಬಜೆಟ್‌ನಲ್ಲಿ ಉಲ್ಲೇಖಿಸಿತ್ತು. ಅಸ್ತಿತ್ವದಲ್ಲಿರುವ ಶಾಲೆಗಳಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಮತ್ತು ತರಗತಿ ಕೊಠಡಿಗಳನ್ನು ನಿರ್ಮಿಸಲು ಕಟ್ಟಡಗಳನ್ನು ಖಚಿತಪಡಿಸಿಕೊಳ್ಳಲು ಬಳಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News