ಮಂಗಳೂರಿನ ಜನರಲ್ಲಿ ಊಹಾಪೋಹಕ್ಕೆ ಕಾರಣವಾಗಿರುವ ಮೂರು 'ಆತ್ಮ@ಹತ್ಯೆ'ಗಳು !

Update: 2023-10-16 11:15 GMT
Editor : Thouheed | By : ಆರ್. ಜೀವಿ

ಕೋಮು ರಾಜಕಾರಣಕ್ಕೆ ಆಗಾಗ ಸುದ್ದಿಯಲ್ಲಿರುವ ಮಂಗಳೂರು ಈಗ ಇನ್ನೊಂದು ವಿಲಕ್ಷಣ ಕಾರಣಕ್ಕೆ ಚರ್ಚೆಯಲ್ಲಿದೆ. ಇತ್ತೀಚಿನ ವರ್ಷಗಳಲ್ಲೇ ಕಂಡು ಕೇಳರಿಯದಂತಹ ವಿಚಿತ್ರ ವಿದ್ಯಮಾನದಿಂದಾಗಿ ಕರಾವಳಿ ರಾಜಧಾನಿ ಮಂಗಳೂರು ಸುದ್ದಿಯಲ್ಲಿದೆ. ಮಂಗಳೂರು ನಗರ ಮತ್ತು ಹೊರವಲಯದಲ್ಲಿ ದಿನನಿತ್ಯವೆಂಬಂತೆ ಬೇರೆ ಬೇರೆ ಕಾರಣಕ್ಕೆ ಒಂದಿಬ್ಬರು ಆತ್ಮಹತ್ಯೆ ಮಾಡುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಆತ್ಮಹತ್ಯೆ ಮಾಡಿಕೊಂಡವರ ಮನೆಯವರು ಈ ಬಗ್ಗೆ ಅಧೀರರಾದರೆ ಸುತ್ತಮುತ್ತಲಿನವರು, ಗ್ರಾಮಸ್ಥರು ಒಂದೆರೆಡು ದಿನ ಬಿರುಸಿನ ಚರ್ಚೆ ಮಾಡಿ ಸುಮ್ಮನಾಗುತ್ತಾರೆ.

ಪೊಲೀಸರು ಕೂಡ ಅಷ್ಟೆ, ಆತ್ಮಹತ್ಯೆ ಪ್ರಕರಣ ದಾಖಲಿಸಿ ಒಂದಷ್ಟು ತನಿಖೆ ನಡೆಸಿ ಆ ಬಳಿಕ ಫೈಲ್ ಕ್ಲೋಸ್ ಮಾಡಿಬಿಡುತ್ತಾರೆ. ಆದರೆ ಮಂಗಳೂರಿನಲ್ಲಿ ಕಳೆದ ಎರಡು ತಿಂಗಳ ಅಂತರದಲ್ಲಿ ನಡೆದ ಮೂವರು ದೊಡ್ಡ ಉದ್ಯಮಿಗಳ ಆತ್ಮಹತ್ಯೆ ಪ್ರಕರಣವು ಪೊಲೀಸರ ನಿದ್ದೆಗೆಡಿಸಿದೆ. ಸರಕಾರದ ಮಟ್ಟದಿಂದಲೇ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂಬ ಆದೇಶ ಬಂದಿರುವುದೇ ಹೀಗೆ ನಿದ್ದೆಗೆಡಲು

ಕಾರಣ.

ಆವರೆಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿ ಮನೆ ಮಂದಿಯ ಹೇಳಿಕೆ ಆಧರಿಸಿ ತನಿಖೆ ನಡೆಸಿ ಕಡತ ಮುಚ್ಚಿದ್ದ ಪೊಲೀಸರು ಇದೀಗ ಖುದ್ದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆ ಬಂದ ಬಳಿಕ ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳಾದ ಮುಂಡ್ಕೂರ್ ರಾಮದಾಸ್ ಕಾಮತ್ , ಉದ್ಯಮಿ ಮೋಹನ್ ಅಮೀನ್ ಪರಾರಿ ಹಾಗೂ ಸಾರಿಗೆ ಉದ್ಯಮಿ ಪ್ರಕಾಶ್ ಶೇಖ ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ಮೂವರು ಪ್ರಮುಖ ಉದ್ಯಮಿಗಳಾಗಿದ್ದಾರೆ. ಈ ಆತ್ಮಹತ್ಯೆಗಳಿಗೆ ಕಾರಣ ಏನು ಎಂಬುದರ ಬಗ್ಗೆ ಆರಂಭದಲ್ಲಿ ಭಾರೀ ಚರ್ಚೆ ನಡೆದಿತ್ತು. ಆದರೆ ಪೊಲೀಸರ ತನಿಖೆ ಮಂದಗತಿಯಲ್ಲಿ ಸಾಗಿದ್ದರಿಂದ ಕೃತ್ಯಕ್ಕೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಮುಂಡ್ಕೂರ್ ರಾಮದಾಸ್ ಕಾಮತ್ ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಷ್ಠಿತ ಉದ್ಯಮಿಯಾಗಿದ್ದರು. ಕೊಡುಗೈ ದಾನಿಯೂ ಆಗಿದ್ದರು.

ಅನಿವಾಸಿ ಭಾರತೀಯ ಉದ್ಯಮಿಯಾಗಿದ್ದ ಅವರು 200 ಕೋಟಿಗೂ ಹೆಚ್ಚು ಸೊತ್ತಿನ ಮಾಲಕರಾಗಿದ್ದರು ಹಾಗೂ ಹಲವು ಕಡೆ ಹೂಡಿಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಅಂತಹವರ ಆತ್ಮಹತ್ಯೆಯು ಹಲವು ಅನುಮಾನ ಹುಟ್ಟು ಹಾಕಿತ್ತು. ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್ನಾರೈ ಉದ್ಯಮಿ ಬಿ ಆರ್ ಶೆಟ್ಟಿ ಅವರು ತಮ್ಮ ವಕೀಲರ ಮೂಲಕ ಮಂಗಳೂರು ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿದ್ದರು.

ರಾಮದಾಸ್ ಕಾಮತ್ ಆರ್ಥಿಕವಾಗಿ ಸಬಲರಾಗಿದ್ದರು. ಆರೋಗ್ಯವೂ ಚೆನ್ನಾಗಿತ್ತು. ದೃಢಮನಸ್ಸಿನವರಾಗಿದ್ದರು. ದೇವರಲ್ಲಿ ಅಪಾರ ನಂಬಿಕೆಯಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ಹಾಗಾಗಿ ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಬೇಕಾಗಿದೆ. ಅದಕ್ಕಾಗಿ ವಿಶೇಷ ತನಿಖೆ ನಡೆಸಬೇಕಾಗಿದೆ ಎಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಬಿ ಆರ್ ಶೆಟ್ಟಿಯವರ ಪತ್ರದ ಬಳಿಕ ಕಾಮತರ ನಿಧನ ಚರ್ಚೆಯಲ್ಲಿದೆ. ಯಾವ ಕಾರಣಕ್ಕೆ ಅವರು ಪ್ರಾಣ ಕಳಕೊಳ್ಳುವಂತಾಯಿತು ಎಂದು ಊಹಾಪೋಹಗಳು ಹರಿದಾಡುತ್ತಿವೆ.

ಕಲ್ಲುಕೋರೆ, ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದ ಮೋಹನ್ ಅಮೀನ್ ಪರಾರಿ ಕೂಡ ಯಶಸ್ವಿ ಉದ್ಯಮಿಯಾಗಿದ್ದರು. ಮಂಗಳೂರಿನಲ್ಲೇ ಕೋಟ್ಯಂತರ ವ್ಯವಹಾರ ಹೊಂದಿದ್ದ ಅವರು ತಾನು ವಾಸವಾಗಿದ್ದ ಅಪಾರ್ಟ್ಮೆಂಟ್ನ ಮಹಡಿಯಿಂದ ಹಾರಿ ಆತ್ಮಹತ್ಯೆಗೈದಿದ್ದರು. ಅವರೂ ಆರ್ಥಿಕವಾಗಿ ಸಬಲರಾಗಿದ್ದರು. ಅವರ ಆರೋಗ್ಯವೂ ಉತ್ತಮವಾಗಿತ್ತು. ಅವರು ಆತ್ಮಹತ್ಯೆ ಮಾಡುವ ಮನಸ್ಥಿತಿಯವರೂ ಆಗಿರಲಿಲ್ಲ. ಆದರೂ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಸ್ಪಷ್ಟ ಕಾರಣ ಬೇಕಿದೆ ಎಂಬುದು ಅವರ ಆಪ್ತ ವಲಯದ ಆಗ್ರಹವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಬಸ್ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಪ್ರಕಾಶ್ ಶೇಖ ಅವರು ತನ್ನ ಫ್ಲ್ಯಾಟ್ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. 62 ಬಸ್ಗಳ ಮಾಲಕರಾಗಿದ್ದ ಅವರು ಕೂಡ ಆರ್ಥಿಕವಾಗಿ ಸಬಲರಾಗಿದ್ದರು. ಮೇಲ್ನೋಟಕ್ಕೆ ಅವರಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಹಾಗಿದ್ದರೂ ಪ್ರಕಾಶ್ ಶೇಖ ಆತ್ಮಹತ್ಯೆ ಮಾಡಿಕೊಂಡಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ.

ಎರಡು ತಿಂಗಳ ಅಂತರದಲ್ಲಿ ಈ ಮೂವರು ದೊಡ್ಡ ಉದ್ಯಮಿಗಳಲ್ಲಿ ಇಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಒಬ್ಬರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೃತ್ಯಕ್ಕೆ ಕಾರಣಗಳು ಬೇರೆ ಬೇರೆ ಇರಬಹುದೇನೋ? ಆದರೆ ನಿರ್ದಿಷ್ಟ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಲೇ ಹೊರಬರಬೇಕಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.

ಉದ್ಯಮಿಗಳ ಆತ್ಮಹತ್ಯೆಗೆ ಸಂಬಂಧಿಸಿ ಮೊಬೈಲ್ ದಾಖಲೆ, ಚಲನವಲನ ಮತ್ತು ಅಪಾರ್ಟ್ಮೆಂಟ್ಗಳ ಸಿಸಿ ಕ್ಯಾಮೆರಾ ದಾಖಲೆಗಳ ಪರಿಶೀಲನೆ, ಬ್ಯಾಂಕ್ ವ್ಯವಹಾರ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸಿದರೆ ಮಾತ್ರ ಮೂರು ಆತ್ಮಹತ್ಯೆ ಪ್ರಕರಣಗಳ ಸತ್ಯಾಂಶ ಹೊರಬಹುದೇನೋ ಎಂಬುದು ಉದ್ಯಮಿಗಳ ಆಪ್ತರ, ಮಂಗಳೂರಿಗರ ಅಭಿಪ್ರಾಯವಾಗಿದೆ.

ರಾಮದಾಸ್ ಕಾಮತ್ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ವಿಚಾರದಲ್ಲಿ ವಕೀಲರ ತಂಡವು ಸರಕಾರಕ್ಕೆ ಬರೆದ ಪತ್ರದ ಪ್ರತಿ ನಮಗೆ ಸಿಕ್ಕಿದೆ. ಇನ್ನಿಬ್ಬರು ಉದ್ಯಮಿಗಳ ಆತ್ಮಹತ್ಯೆ ಪ್ರಕರಣವೂ ತನಿಖೆಯಲ್ಲಿದೆ. ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಅಂದಹಾಗೆ ರಾಮದಾಸ್ ಕಾಮತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಅವರ ಕುಟುಂಬಸ್ಥರು ಯಾವುದೇ ಸಂಶಯ ವ್ಯಕ್ತಪಡಿಸಿ ದೂರು ನೀಡಿಲ್ಲ. ಆದರೂ ಯಾವುದೇ ಅನುಮಾನಗಳಿಗೆ ಆಸ್ಪದವಾಗಬಾರದೆಂಬ ಉದ್ದೇಶದಿಂದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಅದಕ್ಕಾಗಿ ಈಗಾಗಲೆ ಮೂರು ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ , ಚಾರ್ಟರ್ಡ್ ಅಕೌಂಟೆಂಟ್ ಒಬ್ಬರನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಿ ಎಸ್ ಬಿ ಸಮುದಾಯದ ಅನಿವಾಸಿ ಭಾರತೀಯ ಉದ್ಯಮಿ ರಾಮದಾಸ್ ಕಾಮತ್ ಸಹಿತ ಮೂವರು ಉದ್ಯಮಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣ ಏನು ಎಂಬುದು ಬಹಿರಂಗವಾಗಬೇಕಿದೆ. ರಾಮದಾಸ್ ಕಾಮತ್ರ ಬಂಧುಮಿತ್ರರು ಕೂಡ ಸಮಗ್ರ ತನಿಖೆಗೆ ಒತ್ತಾಯ ಮಾಡದಿರುವುದು ವಿಪರ್ಯಾಸ. ರಾಮದಾಸ್ ಕಾಮತರ ಸ್ನೇಹಿತ, ಅನಿವಾಸಿ ಉದ್ಯಮಿ ಬಿಆರ್ ಶೆಟ್ಟಿ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ, ತನಿಖೆ ನಡೆಸಿ ಎಂದು ಆಗ್ರಹಿಸಿದ ಬಳಿಕ ಚರ್ಚೆಗಳು ಶುರುವಾಗಿದೆ, ತನಿಖೆ ಆರಂಭಗೊಂಡಿದೆ. ಆದರೆ ಮಂಗಳೂರಿನ ಪೊಲೀಸರು ಈ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸುವುದು, ಆತ್ಮಹತ್ಯೆಗೆ ಕಾರಣರಾದ ಪ್ರಭಾವಿಗಳನ್ನು ಬಲೆಗೆ ಕೆಡಹುವುದು ಅನುಮಾನದ ಸಂಗತಿಯಾಗಿದೆ. ಹತ್ತಾರು ಕೋಟಿ ರೂಪಾಯಿಗಳ ವ್ಯವಹಾರ ಅಥವಾ ಅವ್ಯವಹಾರವು ಈ ಆತ್ಮಹತ್ಯೆಯ ಹಿಂದಿರುವುದು, ರಾಜಕೀಯ ಬಲ, ತೋಳ್ಬಲದ ಪ್ರಭಾವಿಗಳ ಹೆಸರು ಕೇಳಿ ಬರುತ್ತಿರುವುದು ಕೂಡ ತನಿಖೆಯು ನಿಜವಾದ ದಿಕ್ಕಿನಲ್ಲಿ ಸಾಗುವ ಬಗ್ಗೆ ಅನುಮಾನವಿದೆ ಎಂದಿದ್ದಾರೆ ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.

ಮಂಗಳೂರಿನ ಮಟ್ಟಿಗೆ ನಿದ್ರಾವಸ್ಥೆಯಲ್ಲಿರುವ ಕಾಂಗ್ರೆಸ್ ಸರಕಾರ ಈ ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆಸಬೇಕು. ಅದಕ್ಕಾಗಿ ನಾಗರಿಕ ಸಂಘಟನೆಗಳಿಂದ ಬಲವಾದ ಧ್ವನಿ ಕೇಳಿಬರಬೇಕಿದೆ. ಇಲ್ಲದಿದ್ದರೆ ಮಂಗಳೂರಿನ ತೋಳ್ಬಲವಿಲ್ಲದ ಶ್ರೀಮಂತ ಉದ್ಯಮಿಗಳನ್ನು ಹೀಗೆ ಬಲಿ ಪಡೆಯುವ ಸಾಧ್ಯತೆ ನಿಚ್ಛಳವಾಗಿವೆ. ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆ ಆದಾಗ ನಾಗರಿಕ ಸಮಾಜ ಧ್ವನಿ ಎತ್ತದ ಕಾರಣ ಆದ ಹಿನ್ನಡೆಯು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಮಂಗಳೂರಿನಲ್ಲಿ ಎರಡು ತಿಂಗಳ ಅಂತರದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾವ ಕಾರಣಕ್ಕೂ ನಿರ್ಲಕ್ಷ ಮಾಡಬಾರದು. ಪೊಲೀಸರು ಕಾಟಾಚಾರದ ತನಿಖೆ ನಡೆಸಿ ಕಡತ ಮುಚ್ಚುವ ಮುನ್ನವೇ ನಾಗರಿಕರು ಸಮರ್ಪಕ ತನಿಖೆಗೆ ಧ್ವನಿ ಎತ್ತಬೇಕಿದೆ ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿದ್ದರೂ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಬದಲಾವಣೆ ಏನೂ ಕಂಡು ಬಂದಿಲ್ಲ. ಇಲ್ಲಿನ ಬಹುತೇಕ ಶಾಸಕರೂ ಬಿಜೆಪಿಯವರೇ. ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಕಾಂಗ್ರೆಸ್ ನವರು ಈ ಹಿಂದಿನಂತೆಯೇ ನಿಷ್ಕ್ರಿಯವಾಗಿದ್ದಾರೆ. ಅವರ ಪಕ್ಷ ಅಧಿಕಾರದಲ್ಲಿದೆ ಎಂಬ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಹಿಂದಿನಂತೆಯೇ ಅಲ್ಲಲ್ಲಿ ಆಗಾಗ ಕೋಮು ರಾಜಕಾರಣ, ದ್ವೇಷ ಭಾಷಣ, ಅನೈತಿಕ ಪೊಲೀಸ್ ಗಿರಿ, ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ, ಪ್ರಚೋದನಕಾರಿ ಹೇಳಿಕೆಗಳು ಇವೆಲ್ಲವೂ ನಡೆಯುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಜಿಲ್ಲೆಯ ಬಿಜೆಪಿ ಶಾಸಕರ ಗುಂಪು ಸೇರಿಕೊಂಡು ಅದರಲ್ಲಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಧಿಕಾರಿಗಳಿಗೆ ಅವಹೇಳನಕಾರಿ ಪದ ಬಳಸಿ ಬೈದಿದ್ದು ಸುದ್ದಿಯಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದು ಜಿಲ್ಲೆಯಲ್ಲಿ ಕಾಣುವ ಹಾಗೆ ಅದರ ಆಡಳಿತ ವೈಖರಿ ಇರಬೇಕು ಎಂಬುದು ಜಿಲ್ಲೆಯ ಪ್ರಜ್ಞಾವಂತರ ಒತ್ತಾಯ. ಜೊತೆಗೆ ಬುದ್ಧಿವಂತರ ಜಿಲ್ಲೆ ಎಂಬ ಹೆಸರು ಪಡೆದಿರುವ ಇಲ್ಲಿ ನಡೆದಿರುವ ಈ ಸರಣಿ ಆತ್ಮಹತ್ಯೆಗಳ ಹಿಂದಿನ ಕಾರಣ ಬಯಲಾಗಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News