ಎನ್‌ಸಿಪಿಯಲ್ಲಿ ಒಡಕಿಲ್ಲ ಎಂಬ ಶರದ್ ಪವಾರ್ ಪ್ರತಿಪಾದನೆಯ ಮರ್ಮವೇನು?

ಎನ್‌ಸಿಪಿಯ ಗರಿಷ್ಠ ಶಾಸಕರು ಅಜಿತ್ ಪವಾರ್ ಬಣದಲ್ಲಿದ್ದಾರೆ. ಮಹಾರಾಷ್ಟ್ರ ಸರಕಾರದಲ್ಲಿ ಒಂಭತ್ತು ಸಚಿವರು ಎನ್‌ಸಿಪಿಯವರೇ ಆಗಿದ್ದಾರೆ. ಆದರೆ ಶರದ್ ಪವಾರ್ ಮಾತ್ರ ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದು ನಿರಂತರವಾಗಿ ಹೇಳುತ್ತಿದ್ದಾರೆ. ಚುನಾವಣಾ ಆಯೋಗ ಅಜಿತ್ ಪವಾರ್‌ಗೆ ಪಕ್ಷವನ್ನು ಹಸ್ತಾಂತರಿಸುವುದನ್ನು ತಡೆಯುವ ತಂತ್ರ ಇದೆಂದು ಹೇಳಲಾಗುತ್ತಿದೆ.

Update: 2023-08-31 06:57 GMT

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿ ಎರಡು ತಿಂಗಳುಗಳೇ ಆಗುತ್ತಿವೆ. ಅವರು ಪಕ್ಷಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಈಗ ಹೇಳುತ್ತಿದ್ದಾರೆ.

‘‘ಅಜಿತ್ ಪವಾರ್ ಈಗಲೂ ಪಕ್ಷದ ನಾಯಕ’’ ಎಂದು ತನ್ನ ಪುತ್ರಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರತಿಪಾದನೆಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್, ‘‘ಅಜಿತ್ ಪವಾರ್ ನಮ್ಮ ನಾಯಕ ಎಂದು ನಾನು ಹೇಳಿಲ್ಲ. ಸುಪ್ರಿಯಾ ಹಾಗೆ ಹೇಳಿಕೆ ನೀಡಿದ್ದಾರೆ. ಅದು ಅಣ್ಣನ ಬಗ್ಗೆ ಆಕೆ ಹೇಳುತ್ತಿರುವ ಮಾತು ಅಷ್ಟೆ. ಅದಕ್ಕೆ ಯಾವುದೇ ರಾಜಕೀಯ ಅರ್ಥವಿಲ್ಲ. ನಾನೆಂದೂ ಅಜಿತ್ ಪವಾರ್ ನಮ್ಮ ನಾಯಕ ಎಂದು ಹೇಳಿಲ್ಲ’’ ಎಂದಿದ್ದಾರೆ.

ಶರದ್ ಪವಾರ್ ಹೇಳಿಕೆ ಮಹಾರಾಷ್ಟ್ರದ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಬಿಜೆಪಿಯ ವಿವಿಧ ಬಗೆಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಶರದ್ ಪವಾರ್ ಅವರ ನಿಷ್ಠೆ ಎನ್‌ಡಿಎ ಕಡೆಗೆ ತಿರುಗುತ್ತಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಚಾಣಾಕ್ಷ ಪವಾರ್ ಬಿಜೆಪಿಯನ್ನು ದಿಗ್ಭ್ರಮೆಗೊಳಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಪಾಳೆಯ ವಾದಿಸಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಸುದ್ದಿಗಾರರೊಂದಿಗೆ ಮಾತನಾಡುತ್ತ, ಶರದ್ ಪವಾರ್ ಜೊತೆ ಅಜಿತ್ ಪವಾರ್ ಮಾತುಕತೆ ನಡೆಸಿರು ವುದರಿಂದ ಅವರು ಪಕ್ಷಕ್ಕೆ ಮರಳಲೂ ಬಹುದು ಎಂದು ಹೇಳಿದ್ದಾರೆ. ‘‘ಅಜಿತ್ ಪವಾರ್ ಮನಸ್ಸನ್ನು ಬದಲಾಯಿಸುವಲ್ಲಿ ಶರದ್ ಪವಾರ್ ಯಶಸ್ವಿಯಾಗಿದ್ದಾರೆ. ಶರದ್ ಪವಾರ್ ಬಗ್ಗೆ ಕಾಂಗ್ರೆಸ್ ಮತ್ತು ಉದ್ಧವ್ ನೇತೃತ್ವದ ಶಿವಸೇನೆಯಲ್ಲಿ ಯಾವುದೇ ಗೊಂದಲವಿಲ್ಲ. ನಾವು ಶರದ್ ಪವಾರ್ ಅವರ ಜೊತೆಗೆ ದೃಢವಾಗಿ ನಿಲ್ಲುತ್ತೇವೆ. ಎನ್‌ಸಿಪಿಯಲ್ಲಿ ಏನು ನಡೆಯುತ್ತಿದೆ ಮತ್ತು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಶರದ್ ಪವಾರ್ ಅವರು ನಿರ್ಧರಿಸುತ್ತಾರೆ’’ ಎಂದು ಪಟೋಲೆ ಹೇಳಿದ್ದಾರೆ.

ಮತ್ತೊಂದೆಡೆ, ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಶರದ್ ಪವಾರ್ ಎನ್‌ಡಿಎ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಪವಾರ್ ಅವರನ್ನು ಮಿತ್ರ ಎಂದು ಹೇಳುವ ಮೂಲಕ ಬವಾಂಕುಲೆ, ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಬೆಂಬಲದಿಂದ ಬಿಜೆಪಿ ಪಾರಮ್ಯ ಸಾಧಿಸಲಿದೆ ಎಂದು ಹೇಳಿದ್ದಾರೆ.

ಕಳೆದ ವಾರ ಕೊಲ್ಹಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಪವಾರ್ ಅವರು, ಅಜಿತ್ ಪಕ್ಷಕ್ಕೆ ಮರಳುವ ಸಾಧ್ಯತೆ ಕುರಿತ ಊಹಾಪೋಹಗಳಿಗೆ ತೆರೆಯೆಳೆದರು. ‘‘2019ರ ನಂತರ ಅಜಿತ್ ಮಹಾರಾಷ್ಟ್ರ ಸರಕಾರ ರಚಿಸಲು ಬಿಜೆಪಿಯ ದೇವೇಂದ್ರ ಫಡ್ನವೀಸ್ ಜೊತೆ ಮೈತ್ರಿ ಮಾಡಿಕೊಂಡಾಗಲೂ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲಾಗಿತ್ತು. ಆದರೆ ಈ ಬಾರಿ ಹಾಗೆ ನಡೆಯುವುದಿಲ್ಲ. ಮತ್ತೆ ಆ ಹಾದಿಯನ್ನು ತುಳಿಯುವುದಿಲ್ಲ. ನಾವು ಅದನ್ನು ಅವಕಾಶವಾಗಿ ಪರಿಗಣಿಸಿ ವಿಭಿನ್ನ ಕ್ರಮವನ್ನು ಆರಿಸಿಕೊಂಡಿದ್ದೇವೆ’’ ಎಂದು ಶರದ್ ಪವಾರ್ ಹೇಳಿದ್ದಾರೆ.

ಪಕ್ಷಕ್ಕೆ ಮರಳುವ ಅವಕಾಶವನ್ನು ಅಜಿತ್ ಅವರಿಗೆ ಮತ್ತೆ ಮತ್ತೆ ನೀಡಲಾಗುವುದಿಲ್ಲ ಮತ್ತು ಅದನ್ನು ಅವರು ನಿರೀಕ್ಷಿಸುವುದೂ ಬೇಡ ಎಂದು ಪವಾರ್ ಖಡಾಖಂಡಿತವಾಗಿ ಹೇಳಿದ್ದಾರೆ.

ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ಶರದ್ ಪವಾರ್ ಹೇಳಿಕೊಂಡಿದ್ದರೂ, ಎನ್‌ಸಿಪಿಯ ಗರಿಷ್ಠ ಶಾಸಕರು ಅಜಿತ್ ಪವಾರ್ ಬಣದಲ್ಲಿದ್ದಾರೆ. ಮಹಾರಾಷ್ಟ್ರ ಸರಕಾರದಲ್ಲಿ ಒಂಭತ್ತು ಸಚಿವರು ಎನ್‌ಸಿಪಿಯವರೇ ಆಗಿದ್ದಾರೆ. ಆದರೆ ಶರದ್ ಪವಾರ್ ಮಾತ್ರ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ನಿರಂತರವಾಗಿ ಹೇಳುತ್ತಿದ್ದಾರೆ. ಸುಪ್ರಿಯಾ ಸುಳೆ ಕೂಡ ಎನ್‌ಸಿಪಿಯಲ್ಲಿ ಯಾವುದೇ ಒಡಕು ಇಲ್ಲ ಎನ್ನುತ್ತಿದ್ದಾರೆ.

ಇಂತಹ ನಿಲುವಿಗೆ ಕಾರಣವೇನು? ಪಕ್ಷ ಒಡೆದುಹೋಗಿರುವುದನ್ನು ಒಪ್ಪಿಕೊಳ್ಳಲು ಶರದ್ ಪವಾರ್ ನಿರಾಕರಿಸುತ್ತಿರುವುದು ಏಕೆ? ಚುನಾವಣಾ ಆಯೋಗ ಅಜಿತ್ ಪವಾರ್‌ಗೆ ಪಕ್ಷವನ್ನು ಹಸ್ತಾಂತರಿಸುವುದನ್ನು ತಡೆಯುವ ತಂತ್ರ ಇದು ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಶಿವಸೇನೆ ವಿಚಾರದಲ್ಲಿ ಏನಾಯಿತು ಎಂಬುದು ಅವರಿಗೆ ಗೊತ್ತಿದೆ. ಶಾಸಕರ ಸಂಖ್ಯೆಯನ್ನು ಆಧರಿಸಿ ಏಕನಾಥ್ ಶಿಂದೆ ಬಣವನ್ನು ನೈಜ ಶಿವಸೇನೆ ಎಂದು ಚುನಾವಣಾ ಆಯೋಗ ಹೇಳಿತು. ಶಿಂದೆ ಬಣಕ್ಕೆ ಪಕ್ಷದ ಮೂಲ ಚಿಹ್ನೆಯಾದ ಬಿಲ್ಲು ಬಾಣ ದೊರೆಯಲಿದೆ ಎಂದು ಆಯೋಗ ಘೋಷಿಸಿತು.

ಶರದ್ ಪವಾರ್ ತಮ್ಮ ಪಕ್ಷದ ವಿಚಾರದಲ್ಲಿಯೂ ಹಾಗೇ ಆಗಬಹು ದೆಂದು ತಿಳಿದಿರುವಂತೆ ತೋರುತ್ತಿದೆ. ಹಾಗಾಗಿಯೇ, ಎನ್‌ಸಿಪಿಯಲ್ಲಿ ಯಾವುದೇ ಒಡಕು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ವಾಸ್ತವವಾಗಿ, ಎನ್‌ಸಿಪಿ ಶಿಂದೆ ಸರಕಾರದಲ್ಲಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿರುವ ತನ್ನ ಒಂಭತ್ತು ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆ ಪ್ರಾರಂಭಿಸಿದೆ. ಇದಕ್ಕೂ ಮುನ್ನ ಶರದ್ ಪವಾರ್, ನಮ್ಮಲ್ಲಿ ಯಾವುದೇ ಒಡಕು ಇಲ್ಲ ಮತ್ತು ಎನ್‌ಸಿಪಿ ಒಗ್ಗಟ್ಟಿನಿಂದ ಉಳಿದಿದೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ. ನಾವು ನಿಜವಾದ ಪಕ್ಷ ಮತ್ತು ಯಾರೂ ಅದರ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಅಂಥ ಮನವಿಯನ್ನು ಗಮನಕ್ಕೆ ತೆಗೆದುಕೊಳ್ಳಬಾರದು. ಏಕೆಂದರೆ ಅಂತಹ ಯಾವುದೇ ಒಡಕು ಸಂಭವಿಸಿಲ್ಲ ಮತ್ತು ಪಕ್ಷವು ಒಗ್ಗಟ್ಟಿನಿಂದ ಇದೆ ಎಂದಿದ್ದಾರೆ.

ಅಜಿತ್ ಪವಾರ್ ಚುನಾವಣಾ ಆಯೋಗಕ್ಕೆ ಕಳುಹಿಸಿರುವ ಪತ್ರ, ಅವರನ್ನು ಎನ್‌ಸಿಪಿ ಅಧ್ಯಕ್ಷರನ್ನಾಗಿ ಗುರುತಿಸುವಂತೆ ಕೇಳಿಕೊಂಡಿದೆ.

ಶರದ್ ಪವಾರ್ ನಿಷ್ಠಾವಂತ ಜಿತೇಂದ್ರ ಅವ್ಹಾಡ್ ಕೂಡ ಅದನ್ನೇ ಹೇಳಿದ್ದಾರೆ. ಪವಾರ್ ಪತ್ರಿಕಾಗೋಷ್ಠಿಯ ನಂತರ ಮಾತನಾಡಿದ ಅವರು, ಅಜಿತ್ ಪವಾರ್ ಅವರನ್ನು ಎನ್‌ಸಿಪಿ ನಾಯಕರೆಂದು ಒಪ್ಪಲು ನಿರಾಕರಿಸಿದ್ದಾರೆ.

ಇದೆಲ್ಲದರ ನಡುವೆಯೇ, ಶರದ್ ಪವಾರ್ ಹೇಳಿಕೆಗಳು ಮತ್ತವರ ನಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಬಗೆಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿರುವುದಂತೂ ನಿಜ.

ಶರದ್ ಪವಾರ್ ಅವರು ಬಹಳ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ. ಶಿವಸೇನೆಯ ವಿಚಾರದಲ್ಲಿ ಏನಾಗಿದೆ ಎಂಬುದು ಅವರಿಗೆ ಗೊತ್ತಿದೆ. ಅವರ ಯಾವುದೇ ಹೇಳಿಕೆಗಳು ಅನಪೇಕ್ಷಿತ ತೊಡಕುಗಳಿಗೆ ಕಾರಣವಾಗುವುದಿಲ್ಲ ಎಂದು ಶಿವಸೇನೆ (ಯುಬಿಟಿ) ಶಾಸಕ ಭಾಸ್ಕರ್ ಜಾಧವ್ ಹೇಳುತ್ತಿದ್ದಾರೆ.

ಶರದ್ ಪವಾರ್ ಅವರ ಹೇಳಿಕೆಗಳು ಹಲವು ಬಗೆಯಲ್ಲಿ ಅರ್ಥ ಪಡೆಯುತ್ತಿವೆ. ಪವಾರ್ ನಿಲುವು ಅನೇಕರಿಗೆ ನಿಗೂಢ ಸ್ವರೂಪದ್ದಾಗಿಯೂ ಕಾಣಿಸತೊಡಗಿದೆ ಮತ್ತು ಗೊಂದಲಕ್ಕೀಡು ಮಾಡಿದೆ. ಇನ್ನೊಂದೆಡೆ, ಎನ್‌ಸಿಪಿಯಿಂದ ಪಕ್ಷಾಂತರಗೊಂಡ ಶಾಸಕರ ವಿರುದ್ಧ ಪವಾರ್ ಹೋರಾಟದಲ್ಲಿದ್ದಾರೆ. ಅವರು ರಾಜಕೀಯ ಮತ್ತು ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿದ್ದಾರೆ. ಈಗಾಗಲೇ 9 ಶಾಸಕರ ವಿರುದ್ಧ ಅಧಿಕೃತವಾಗಿ ದೂರು ದಾಖಲಾಗಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಬೇರಾವ ದಾರಿಯೂ ಇಲ್ಲದೆ, ಪಕ್ಷಕ್ಕೆ ಮರಳಲು ಯತ್ನಿಸಬಹುದು. ಅದಕ್ಕೆ ಅವಕಾಶವಿಲ್ಲ ಎಂಬಂತೆ ಶರದ್ ಪವಾರ್ ಈಗಾಗಲೇ ಹೇಳಿದ್ದರೂ, ಪಕ್ಷ ಒಡೆದಿಲ್ಲ ಎಂಬ ಅವರ ಮಾತಿಗೂ, ಇಂಥದೊಂದು ಸಾಧ್ಯತೆಗೂ ಸಂಬಂಧವನ್ನು ಊಹಿಸಲು ಅವಕಾಶವಿದೆ.

(ಕೃಪೆ:thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಝೀಶನ್ ಕಸ್ಕರ್

contributor

Similar News