ಅನಿವಾಸಿ ಭಾರತೀಯ ಸಮುದಾಯ ಮತ್ತು ಮೋದಿ ರಾಜಕೀಯ ಮಾಧ್ಯಮಗಳು ಮರೆಮಾಚುವ ಸತ್ಯವೇನು?

ಹಿಂದುತ್ವ ರಾಜಕೀಯವು ಆರ್ಥಿಕ ಪ್ರಗತಿಗೆ ಮಾತ್ರವಲ್ಲ, ಜಾಗತಿಕ ಸಂಬಂಧಕ್ಕೂ ಧಕ್ಕೆ ಉಂಟುಮಾಡಬಹುದು; ರಾಜಕೀಯ ಪ್ರಸಿದ್ಧಿ ಮತ್ತು ಧಾರ್ಮಿಕ ಭ್ರಮೆಯಲ್ಲಿ ಮೈಮರೆತಿರುವ ಮೋದಿ, 140 ಕೋಟಿ ಜನರಿರುವ ವೈವಿಧ್ಯಮಯ ದೇಶದ ಇತರೆಲ್ಲ ಶಕ್ತಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಚಿಂತೆ ಅನಿವಾಸಿ ಭಾರತೀಯರಲ್ಲಿ ಅನೇಕರನ್ನು ಕಾಡುತ್ತಿದೆ. ನ್ಯೂಯಾರ್ಕ್ ಟೈಮ್ಸ್ ಇತ್ತೀಚೆಗೆ ಪ್ರಕಟಿಸಿರುವ ವರದಿ ತೆರೆದಿಟ್ಟಿರುವ ವಾಸ್ತವ ಇದು.

Update: 2023-07-30 12:11 GMT
Editor : Safwan | By : ಆರ್.ಕೆ.

Photo : ಮೋದಿ | PTI

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸವನ್ನು ರಾಜತಾಂತ್ರಿಕ ಅದ್ಭುತ ಎಂದು ಗೋದಿ ಮಾಧ್ಯಮಗಳು ಬಣ್ಣಿಸುತ್ತಲೇ ಇವೆ. ಅದನ್ನೊಂದು ದೊಡ್ಡ ಕ್ರಾಂತಿ ಎಂಬಂತೆ ಬಿಂಬಿಸುವುದೂ ಮುಂದುವರಿದೇ ಇದೆ. ವಿದೇಶಗಳಲ್ಲಿನ ಇಡೀ ಭಾರತೀಯ ಸಮುದಾಯ ಮೋದಿ ಬೆನ್ನಿಗಿದೆ ಎಂಬ ಕಥೆಯನ್ನೂ ಹೇಳಲಾಗುತ್ತಿದೆ.

ಆದರೆ ಈ ಅಬ್ಬರದಲ್ಲಿ ಮರೆಮಾಚಲಾಗುತ್ತಿರುವ ಸತ್ಯ ಬೇರೆಯೇ ಇದೆ. ಮತ್ತು ಆ ಸತ್ಯವನ್ನು ಇಲ್ಲಿನ ಮಾಧ್ಯಮಗಳು ಹೇಳಲಾರವು ಎಂಬುದು ಕೂಡ ಅಷ್ಟೇ ನಿಜ.

ವಿದೇಶಗಳಿಗೆ ವಲಸೆ ಹೋಗಿ ನೆಲೆಸಿರುವ ಭಾರತೀಯರನ್ನು ಹೇಗೆಲ್ಲ ಇಲ್ಲಿನ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತದೆ?

ಮೋದಿಯವರನ್ನು ವಿದೇಶದಲ್ಲಿ ಜೈಕಾರ ಹಾಕಿ ಸ್ವಾಗತಿಸುವ, ಅವರ ಭಾಷಣಕ್ಕೆ

ಸಾವಿರಾರು ಸಂಖ್ಯೆಯಲ್ಲಿ ಸೇರುವ ಅನಿವಾಸಿ ಭಾರತೀಯರ ಹಿಂದೆ, ಮೋದಿಯವರಿ ಗಾಗಿ ಏರ್ಪಡಿಸಲಾಗುವ ಕಾರ್ಯಕ್ರಮಗಳ ಹಿಂದೆ ಇರುವವರು ಯಾರು? ಜನರನ್ನು ಸಂಪರ್ಕಿಸುವವರು, ಅವರನ್ನು ಮೋದಿ ಕಾರ್ಯಕ್ರಮಕ್ಕೆ ಸೇರಿಸುವವರು, ಕಾರ್ಯಕ್ರಮದ ಸ್ಥಳಕ್ಕೆ ಕರೆದು ತರುವವರು ಯಾರು? ಮತ್ತು ಅದಕ್ಕಾಗಿ ಖರ್ಚಾಗುವ ದೊಡ್ಡ ಮೊತ್ತದ ಹಣ ಯಾರು ಕೊಡುತ್ತಿದ್ದಾರೆ ? ಈ ಪ್ರಶ್ನೆಗಳು ಬಹಳ ಮುಖ್ಯವಾಗಿವೆ.

ಇನ್ನೊಂದು ವಿಚಾರವೆಂದರೆ, ಅನಿವಾಸಿ ಭಾರತೀಯ ಸಮುದಾಯವೆಲ್ಲ ಮೋದಿ ಯನ್ನು ಬೆಂಬಲಿಸುತ್ತಿದೆ ಎಂದು ಹೇಳುತ್ತಿರುವುದರಲ್ಲಿ ಇರುವ ನಿಜವೆಷ್ಟು, ಸುಳ್ಳೆಷ್ಟು? ನಿಜವಾಗಿಯೂ ಮೋದಿಯವರನ್ನು ಅನಿವಾಸಿ ಭಾರತೀಯರು ಏಕಕಂಠದಿಂದ ಹಾಡಿ ಹೊಗಳುತ್ತಿದ್ದಾರೆಯೇ? ಒಂದೇ ಸ್ವರೂಪದ್ದಾಗಿರದ ಮತ್ತು ಸಂಕೀರ್ಣ ಇತಿಹಾಸವುಳ್ಳ ಅನಿವಾಸಿ ಭಾರತೀಯ ಸಮುದಾಯ ಪೂರ್ತಿಯಾಗಿ ಮೋದಿ ಜಪ ಮಾಡುತ್ತಿದೆ ಎಂದು ಬಿಂಬಿಸುತ್ತಿರುವುದರ ಹಿಂದಿನ ಹಿಕ್ಮತ್ತುಗಳೇನು?

ಸರಕಾರವನ್ನು ಪ್ರಶ್ನಿಸದ, ಸರಕಾರದ ಕುರಿತ ಕಹಿ ಸತ್ಯ ಹೇಳುವುದನ್ನು ಸಂಪೂರ್ಣ ಮರೆತುಬಿಟ್ಟಿರುವ, ಸತ್ಯದ ಮಗ್ಗಲುಗಳನ್ನು ಶೋಧಿಸುವ ಕನಿಷ್ಠ ಕುತೂಹಲವೂ ಇಲ್ಲದ ಇಲ್ಲಿನ ಮಾಧ್ಯಮಗಳು ಈ ಯಾವ ವಿಚಾರಗಳನ್ನೂ ಬಿಡಿಸಿ ಹೇಳಲಾರವು. ಅನಿವಾಸಿ ಭಾರತೀಯರ ಜೊತೆಗಿನ ಮೋದಿ ಪ್ರೇಮದ ಹಿಂದಿನ ರಾಜಕೀಯ ಅಸಲೀಯತ್ತನ್ನು ಬಯಲು ಮಾಡಿರುವುದು ಮತ್ತೊಮ್ಮೆ ವಿದೇಶದ ಪ್ರತಿಷ್ಠಿತ ಮಾಧ್ಯಮ. ಅದು, ‘ನ್ಯೂಯಾರ್ಕ್ ಟೈಮ್ಸ್’.

ಇತ್ತೀಚೆಗೆ ಮೋದಿ ಅಮೆರಿಕ ಪ್ರವಾಸದ ನಂತರ ಅದು ಒಂದು ಸುದೀರ್ಘ ವಿಶೇಷ ವರದಿಯನ್ನು ಪ್ರಕಟಿಸಿದೆ. ಅಮೆರಿಕಕ್ಕೆ ಹೋಗಿರುವ ಪತ್ರಕರ್ತ ರವೀಶ್ ಕುಮಾರ್ ಗಮನ ಸೆಳೆದಿದ್ದಾರೆ. ಅಷ್ಟು ಮಾತ್ರವಲ್ಲ, ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಹಿನ್ನೆಲೆಯಲ್ಲಿ

ಅವರು ಅನಿವಾಸಿ ಭಾರತೀಯ ಸಮುದಾಯದ ಕುರಿತ ಹಲವು ಸೂಕ್ಷ್ಮಗಳನ್ನು ನಮ್ಮ ಮುಂದಿಡುವ ಕೆಲಸವನ್ನೂ ಮಾಡಿದ್ದಾರೆ.

ಮುಂದೆ ಇರುವುದು ‘ನ್ಯೂಯಾರ್ಕ್ ಟೈಮ್ಸ್’ನ ಆ ವಿಶೇಷ ವರದಿಯ ಅಂಶಗಳು ಮತ್ತು ರವೀಶ್ ಕುಮಾರ್ ಅವರ ವಿಶ್ಲೇಷಣೆಯ ಕೆಲವು ವಿಚಾರಗಳು.

ವಾಶಿಂಗ್ಟನ್, ಸಿಲಿಕಾನ್ ವ್ಯಾಲಿ, ಸಿಡ್ನಿಯಿಂದ ಮಾಹಿತಿ ಸಂಗ್ರಹಿಸಿ ಡೇಮಿಯನ್ ಕೇವ್

ಅವರು ಬರೆದಿರುವ ‘ನ್ಯೂಯಾರ್ಕ್ ಟೈಮ್ಸ್’ ವಿಶೇಷ ವರದಿಯ ಮೊದಲ ಸಾಲು ಗಳಿಂದಲೇ ಗೊತ್ತಾಗಿಬಿಡುವ ಒಂದು ಸಂಗತಿಯೆಂದರೆ, ಮೋದಿ ಇಮೇಜ್ ಅನ್ನು ಜಾಗತಿಕ

ಮಟ್ಟದಲ್ಲಿ ಬೆಳೆಸಲು ಅನಿವಾಸಿ ಭಾರತೀಯರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಮತ್ತು ಅಲ್ಲಿನವರ ರಾಜಕೀಯ, ಆರ್ಥಿಕ ಶಕ್ತಿಯ ಲಾಭ ಪಡೆಯುವ ಯತ್ನ ನಡೆಯುತ್ತಿದೆ. ಆದರೆ ಮೋದಿ ಪಾಲಿಗೆ ಆ ಹಾದಿ ಅಷ್ಟು ಸರಳವಾಗಿಲ್ಲ ಎಂಬ ವಿಚಾರ.

ಅನಿವಾಸಿ ಭಾರತೀಯ ಸಮುದಾಯ ಮತ್ತು ಬಿಜೆಪಿ ಬಾಂಧವ್ಯ 1990ರ ದಶಕದ ಉತ್ತರಾರ್ಧದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಶುರುವಾಯಿತು. ಅದು ಈಗ ಮೋದಿ ಕಾಲದಲ್ಲಿ ಎಲ್ಲಿಗೆ ತಲುಪುತ್ತಿದೆ ಎಂಬುದು ಪ್ರಶ್ನೆ.

ವಿದೇಶದಿಂದ ಬಿಜೆಪಿಗೆ ಸಾಕಷ್ಟು ಹಣವೂ ಹರಿದುಬರುತ್ತಿರುವುದು ತೀರಾ ಗುಟ್ಟಾಗಿ ಉಳಿದಿಲ್ಲ. ಸಿಲಿಕಾನ್ ವ್ಯಾಲಿ ಮತ್ತು ಇತರೆಡೆಗಳಲ್ಲಿ ಬಿಜೆಪಿಯ ಅಂತರ್ರಾಷ್ಟ್ರೀಯ

ಅಂಗವಾದ ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಈಗಾಗಲೇ ತನ್ನದೇ ಅಸ್ತಿತ್ವ ಸ್ಥಾಪಿಸಿದೆ.

ವಲಸೆ ಸಮಸ್ಯೆಗಳು ಮತ್ತು ಇತರ ವಿಚಾರಗಳಲ್ಲಿ ನೆರವಾಗುವ ಸಾವಿರಾರು ಸ್ವಯಂ ಸೇವಕರಿದ್ದಾರೆ. ಕಳೆದ ವರ್ಷ ಟೆಕ್ಸಾಸ್, ನ್ಯೂಜೆರ್ಸಿ, ವಾಶಿಂಗ್ಟನ್ ಡಿಸಿ ಮತ್ತು ಉತ್ತರ

ಕೆರೊಲಿನಾದಲ್ಲಿ ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮಗಳು, ಹಾಗೆಯೇ ಕ್ಯಾಲಿಫೋರ್ನಿ ಯಾದ ಇಂಡಿಯಾ ಕಮ್ಯುನಿಟಿ ಸೆಂಟರ್ನಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿದ್ದವೆಂಬುದನ್ನೂ ‘ನ್ಯೂಯಾರ್ಕ್ ಟೈಮ್ಸ್’ ವರದಿ ಪ್ರಸ್ತಾಪಿಸುತ್ತದೆ.

ಬಿಜೆಪಿ ತಮ್ಮಿಂದ ದೇಣಿಗೆಯನ್ನು ಯಾವತ್ತೂ ಕೇಳಲಿಲ್ಲ ಎಂದೇ ಅನಿವಾಸಿ ಭಾರತೀಯರ

ಭಾಗವಾಗಿರುವ ಹಲವು ಉದ್ಯಮಿಗಳು ಹೇಳುತ್ತಾರಾದರೂ, ಅನಿವಾಸಿ ಭಾರತೀಯರಿಂದ

ಗಮನಾರ್ಹವಾದ ಹಣದ ಹರಿವು ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳಿಗೆ ಇದೆ ಎಂಬುದು ರಾಜಕೀಯ ಪರಿಣತರ ಖಚಿತ ಅಭಿಪ್ರಾಯ.

2018ರಲ್ಲಿ ಮೋದಿ ಸರಕಾರ ವಿದೇಶದಲ್ಲಿನ ಭಾರತೀಯರು ಮತ್ತು ಭಾರತದಲ್ಲಿ ಅಂಗ

ಸಂಸ್ಥೆಗಳನ್ನು ಹೊಂದಿರುವ ವಿದೇಶಿ ಕಂಪೆನಿಗಳು ಬಹಿರಂಗಪಡಿಸದ ರಾಜಕೀಯ ದೇಣಿಗೆ

ನೀಡಲು ಸಂಸತ್ತಿನ ಮೂಲಕ ಕಾನೂನನ್ನು ತಂದಿತು. ಭಾರತದ 2019ರ ಚುನಾವಣಾ ಪ್ರಚಾರದ ವೆಚ್ಚ 65 ಸಾವಿರ ಕೋಟಿ ರೂ. ಮೀರಿತ್ತು ಮತ್ತದು ವಿಶ್ವದ ಅತ್ಯಂತ ದುಬಾರಿ ಚುನಾವಣೆಯಾಗಿತ್ತು ಎಂಬುದನ್ನು ‘ನ್ಯೂಯಾರ್ಕ್ ಟೈಮ್ಸ್’ ವರದಿ ಉಲ್ಲೇಖಿಸಿದೆ.

ಅಮೆರಿಕದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ನೋಂದಾಯಿಸಿಕೊಂಡದ್ದು ಕೂಡ, 2019ರಲ್ಲಿ ಟ್ರಂಪ್ ಕಾಲದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದ ಹಿಂದಿನ ಹಣದ ಕುರಿತು ದೊಡ್ಡ ಮಟ್ಟದಲ್ಲಿ ಪ್ರಶ್ನೆಗಳು ಎದ್ದ ಬಳಿಕವೇ.

ಆಸ್ಟ್ರೇಲಿಯದಲ್ಲಿ ಮೇ ತಿಂಗಳಲ್ಲಿ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಕಣ್ಣು ಕುಕ್ಕುವ ಮಟ್ಟಿಗೆ ನಡೆದ ಮೋದಿ ರ್ಯಾಲಿಗೆ ಹಣ ಬಂದದ್ದು ಎಲ್ಲಿಂದ ಎಂಬುದು ಇನ್ನೂ ಬಗೆಹರಿಯದ ಪ್ರಶ್ನೆ. ಅದನ್ನು ಆಯೋಜಿಸಿದ ಸಂಘಟನೆ ಇನ್ನೂ ಫಾರಿನ್ ಟ್ರಾನ್ಸ್ ಪರೆನ್ಸಿ ರಿಜಿಸ್ಟರ್ನಲ್ಲಿ ದಾಖಲಾಗಿಲ್ಲ. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರೆಲ್ಲ ಅಲ್ಲಿನ ಬಿಜೆಪಿ ವ್ಯವಸ್ಥೆಗೊಳಿಸಿದ್ದ ಬಸ್ಗಳಲ್ಲಿ ಬಂದವರಾಗಿದ್ದರು. ಹಲವಾರು ವಿಮಾನಗಳನ್ನೂ ಪಕ್ಷ ಬಾಡಿಗೆಗೆ ಪಡೆಯಲಾಗಿತ್ತು ಎಂಬುದನ್ನು ವರದಿ ಹೇಳುತ್ತದೆ.

ಮೋದಿಯವರ ವಿಜೃಂಭಣೆಗಾಗಿ ಹೀಗೆ ಕೋಟಿ ಕೋಟಿ ಡಾಲರ್ ಖರ್ಚು ಮಾಡುವ

ಹಣ ಯಾರದು? ಯಾರು ಈ ಹಣವನ್ನು ಪೂರೈಸುತ್ತಾರೆ? ಎಲೆಕ್ಟೋರಲ್ ಬಾಂಡ್ ರೂಪದ ದೇಣಿಗೆಯಂತೆ ಮೂಲದ ಬಗ್ಗೆ ಪತ್ತೆಯೇ ಇರದ ಇದು ಭಾರತದೊಳಗಿನ ಹಣವೋ ಅಥವಾ ಹೊರಗಿನದ್ದೊ?

ಇವೆಲ್ಲದರ ಬಗ್ಗೆ ಕೇಳಿದ್ದಕ್ಕೆ, ಎಲ್ಲ ಹಣವನ್ನೂ ಸ್ಥಳೀಯ ಭಾರತೀಯ ಸಮುದಾಯ ಮತ್ತು ಉದ್ಯಮಿಗಳು ನೀಡಿದ್ದಾಗಿ ಬಿಜೆಪಿ ಮೂಲಗಳು ಹೇಳಿರುವುದನ್ನು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸುತ್ತದೆ. ಅಲ್ಲಿನ ಭಾರತೀಯ ಸಮುದಾಯವೇ ಕೊಟ್ಟಿದೆ ಎಂದಾದರೆ ಹಾಗೆ ಕೊಟ್ಟಿರುವವರು ಯಾರು? ಬಿಜೆಪಿಯೊಂದಿಗೆ ಅವರಿಗಿರುವ ಸಂಬಂಧವೇನು? ಭಾರತದಲ್ಲಿ ಅವರಿಗೆ ಏನಾದರೂ ಲಾಭವಾಗಬೇಕಿರುವುದು ಇದೆಯೇ? ಯಾಕಾಗಿ ಅವರು ಇಷ್ಟೊಂದು ಹಣವನ್ನು ತಾವಾಗಿಯೇ ಖರ್ಚು ಮಾಡುತ್ತಾರೆ?

ಆರಂಭದಲ್ಲಿ ಈ ಕಾರ್ಯಕ್ರಮಕ್ಕಾಗಿ ಆಸ್ಟ್ರೇಲಿಯನ್ ಸಿಖ್ ಅಸೋಸಿಯೇಶನ್ ಜೊತೆಗೂಡಿತ್ತಾದರೂ, ಅದರ ಹಣವನ್ನು ಆಯೋಜಕರು ನಿರಾಕರಿಸಿದ್ದರಿಂದ ಹಿಂದೆ ಸರಿಯಿತು. ಮುಸ್ಲಿಮರನ್ನು ಹತ್ಯೆ ಮಾಡಬೇಕೆಂಬ ಕೆಲವು ಸಂಘ ಪರಿವಾರ ನಾಯಕರ ಕರೆಯನ್ನು ಮೋದಿ ಖಂಡಿಸಿಲ್ಲವೆಂಬ ಕಾರಣದಿಂದ ಮುಸ್ಲಿಮ್ ನಾಯಕರೂ ಈ ಕಾರ್ಯಕ್ರಮದಿಂದ ದೂರವಿದ್ದರು.

ಇನ್ನು, ಮಾಧ್ಯಮಗಳು ಮೋದಿ ಮತ್ತು ಅನಿವಾಸಿ ಭಾರತೀಯ ಸಮುದಾಯದ ಸಂಬಂಧವನ್ನು ಮೋದಿ ಬೆನ್ನಿಗೆ ಗಟ್ಟಿಯಾಗಿ ನಿಂತಿರುವ ಸಮೂಹ ಅದೆಂದು ಬಿಂಬಿಸುವುದಕ್ಕೆ

ಸೀಮಿತವಾಗಿವೆ. ಆದರೆ ವಾಸ್ತವದಲ್ಲಿ ಮುಸ್ಲಿಮ್ ವಿರೋಧಿ ರಾಜಕಾರಣದ ದುಷ್ಟರಿಣಾಮ

ಗಳ ಬಗ್ಗೆ ಅನಿವಾಸಿ ಭಾರತೀಯ ಸಮುದಾಯದ ಅನೇಕರು ಚಿಂತೆ ಯಿಂದಲೇ ಹೇಳುತ್ತಾರೆ ಎನ್ನುತ್ತದೆ ವರದಿ.

ಮೋದಿ ಮತ್ತವರ ಹಿಂದುತ್ವ ಧೋರಣೆಯ ಬಿಜೆಪಿ ಯಶಸ್ವೀ ಅನಿವಾಸಿ ಭಾರತೀಯ ಸಮುದಾಯದೊಡನೆ ಗಟ್ಟಿಯಾದ ಸಂಬಂಧ ಬೆಸೆಯಲು ಯತ್ನಿಸುತ್ತಿರುವುದರ ಬಗ್ಗೆ ಹೇಳುವ ನ್ಯೂಯಾರ್ಕ್ ಟೈಮ್ಸ್ ವರದಿ, ಅವರ ಇತ್ತೀಚಿನ ಅಮೆರಿಕ, ಈಜಿಪ್ಟ್, ಫ್ರಾನ್ಸ್ ಪ್ರವಾಸಗಳ ಬಗ್ಗೆ, ಅದಕ್ಕೂ ಮುಂಚಿನ ಆಸ್ಟ್ರೇಲಿಯ ಭೇಟಿಯ ಬಗ್ಗೆ ಪ್ರಸ್ತಾಪಿಸುತ್ತದೆ.

1,200 ಸೀಟುಗಳಿರುವ ಕೆನಡಿ ಸೆಂಟರ್ನಲ್ಲಿ ಮೋದಿಯವರನ್ನು ಭೇಟಿ ಮಾಡಿದ ಉದ್ಯಮಿಗಳಲ್ಲಿ ಹೆಚ್ಚಿನವರು ಯುವಕರು ಮತ್ತು ಭಾರತದಲ್ಲಿ ಓದಿ ಅಮೆರಿಕದಲ್ಲಿ ದುಡ್ಡು ಮಾಡುತ್ತಿರುವವರು. ಅಲ್ಲದೆ ಮೋದಿ ಭೇಟಿಗೆ ಉತ್ಸುಕರಾಗಿದ್ದವರು. ಮೇ ತಿಂಗಳಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ರ್ಯಾಲಿಯಲ್ಲಿ 20,000 ಅಭಿಮಾನಿಗಳು ಸೇರಿದ್ದರು.

ಇವೆಲ್ಲವನ್ನೂ ಬಿಜೆಪಿ ಯಾಕೆ ಮಾಡುತ್ತಿದೆ? ಬಿಜೆಪಿ ನಾಯಕತ್ವ ವಿದೇಶದಲ್ಲಿ ತನ್ನ

ಶಕ್ತಿಪ್ರದರ್ಶನ ಮಾಡುವ ಮೂಲಕ ದೇಶದೊಳಕ್ಕೆ ತನ್ನ ಪ್ರತಿಷ್ಠೆ ಮತ್ತು ಪ್ರಭಾವ ಹೆಚ್ಚಿಸಿಕೊ

ಳ್ಳಲು ಬಯಸುತ್ತದೆ ಎಂದು ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನಲ್ಲಿ ದಕ್ಷಿಣ ಏಶ್ಯದ

ಹಿರಿಯ ತಜ್ಞರಾಗಿರುವ ಸಮೀರ್ ಲಾಲ್ವಾನಿ ಹೇಳುವುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖಿಸುತ್ತದೆ. ಆದರೆ ಇಡೀ ಅನಿವಾಸಿ ಭಾರತೀಯ ಸಮುದಾಯ ನಿಜವಾಗಿಯೂ ಮೋದಿ ಇಮೇಜ್ ಅನ್ನು ಸಂಭ್ರಮಿಸುತ್ತಿದೆಯೆ? ಇಂಥದೊಂದು ಪ್ರಶ್ನೆ ಇಟ್ಟುಕೊಂಡು ಆಳಕ್ಕಿಳಿದರೆ ಗೊತ್ತಾಗುವ ಸತ್ಯವೇ ಬೇರೆ.

ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಹೆಮ್ಮೆಪಡುವ ಅನೇಕ ಭಾರತೀಯ ವೃತ್ತಿಪರರು, ಅದೇ ಸಮಯದಲ್ಲಿ ಮೋದಿ ಸರಕಾರದ ಹಿಂದುತ್ವ ನೀತಿಗಳು,

ಮುಸ್ಲಿಮ್ ವಿರೋಧಿ ನಿಲುವುಗಳು, ಅಸಹಿಷ್ಣುತೆ ಭಾರತವನ್ನು ನಿಜವಾದ ಸೂಪರ್ ಪವರ್ ಮತ್ತು ಪ್ರಜಾಸತ್ತಾತ್ಮಕ ದೇಶವಾಗುವ ಸಾಧ್ಯತೆಯಿಂದ ದೂರವಿಡುತ್ತವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಎನ್ನುತ್ತದೆ ವರದಿ.

ಪ್ರಮುಖ ಸಿಲಿಕಾನ್ ವ್ಯಾಲಿ ಹೂಡಿಕೆದಾರ ವಿನೋದ್ ಖೋಸ್ಲಾ ಮಾತುಗಳನ್ನು ವರದಿ

ಉಲ್ಲೇಖಿಸುತ್ತದೆ. ಹಿಂದೂ ರಾಷ್ಟ್ರೀಯವಾದದಿಂದ ಉಂಟಾಗಿರುವ ಅಸ್ಥಿರತೆ ಮತ್ತು ಅಸಮಾನತೆ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವುದು ಭಾರತದ ಎದುರಿನ ದೊಡ್ಡ ಅಪಾಯ ಎನ್ನುತ್ತಾರೆ ಅವರು. ಹಿಂದುತ್ವ ರಾಜಕೀಯವು ಆರ್ಥಿಕ ಪ್ರಗತಿಗೆ ಮಾತ್ರವಲ್ಲ, ಜಾಗತಿಕ ಸಂಬಂಧಕ್ಕೂ ಧಕ್ಕೆ ಉಂಟುಮಾಡಬಹುದು ಎಂಬ ಆತಂಕವನ್ನು ಖೋಸ್ಲಾ ವ್ಯಕ್ತಪಡಿಸುತ್ತಾರೆ.ರಾಜಕೀಯ ಪ್ರಸಿದ್ಧಿ ಮತ್ತು ಧಾರ್ಮಿಕ ಭ್ರಮೆಯಲ್ಲಿ ಮೈಮರೆತಿರುವ ಮೋದಿ, 140 ಕೋಟಿ ಜನರಿರುವ ವೈವಿಧ್ಯಮಯ ದೇಶದ ಇತರೆಲ್ಲ ಶಕ್ತಿಯನ್ನು ನಿರ್ಲಕ್ಷಿಸು

ತ್ತಿದ್ದಾರೆ ಎಂಬ ಚಿಂತೆ ಅನಿವಾಸಿ ಭಾರತೀಯ ಸಮುದಾಯದ ಅನೇಕರನ್ನು ಕಾಡುತ್ತಿದೆ ಎನ್ನುತ್ತದೆ ‘ನ್ಯೂಯಾರ್ಕ್ ಟೈಮ್ಸ್’ ವರದಿ.

ಭಾರತ ಎಲ್ಲರಿಗಾಗಿ ಇದೆ ಎಂಬುದನ್ನು ಸ್ಪಷ್ಟವಾಗಿ ಕಾಣಿಸುವ ಪ್ರಯತ್ನಗಳು ಆಗಬೇಕಿದೆ ಎಂದು ಹೇಳುವ ಖಾಸಗಿ ಇಕ್ವಿಟಿ ಬ್ಯಾಂಕರ್ ಅರುಣ್ ಸುಬ್ರಮಣಿ, ಬಿಜೆಪಿಯ ಹಿಂದುತ್ವ ರಾಷ್ಟ್ರದ ಆತುರವನ್ನು ಸೂಕ್ಷ್ಮವಾಗಿ ವಿರೋಧಿಸುತ್ತಾರೆ.

ಜನಸಂಖ್ಯೆಯ ಶೇ.20ರಷ್ಟು ಧಾರ್ಮಿಕ ಅಲ್ಪಸಂಖ್ಯಾತರಿರುವ ಭಾರತದಲ್ಲಿ ಹಿಂದೂ ಗುಂಪುಗಳು ಆಹಾರ, ಉಡುಗೆ ಶೈಲಿ ಅಥವಾ ಅಂತರ್ಧರ್ಮೀಯ ವಿವಾಹಗಳ

ನೆಪದಲ್ಲಿ ಮುಸ್ಲಿಮರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದಕ್ಕೆ ವಿದೇಶದಲ್ಲಿರುವ ಅನೇಕ ಭಾರತೀಯರು ಚಿಂತಿತರಾಗಿದ್ದಾರೆ. ಬ್ರಿಟನ್, ಕೆನಡಾ ಮತ್ತು ಅಮೆರಿಕಗಳಲ್ಲಿರುವ ಭಾರತೀಯ ವಲಸಿಗರ ನಡುವೆಯೂ ಇತ್ತೀಚಿನ ವರ್ಷಗಳಲ್ಲಿನ ಸಂಘರ್ಷಗಳಿಂದ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ವರದಿಯಲ್ಲಿದೆ. ಧ್ರುವೀಕರಣದ ಬಗ್ಗೆ ಹೆಚ್ಚುತ್ತಿರುವ ಇಂಥ ಕಳವಳಗಳು, ಮೋದಿ ಪ್ರದರ್ಶನದ ನಡುವೆ ಸಾಮಾನ್ಯವಾಗಿ ಕಡೆಗಣಿಸಲ್ಪಡುತ್ತವೆ.

ಶ್ವೇತಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮೋದಿ, ಅಲ್ಪಸಂಖ್ಯಾತರ ವಿರುದ್ಧ ತಮ್ಮ ಸರಕಾರ ತಾರತಮ್ಯ ತೋರುತ್ತಿಲ್ಲ ಎಂದು ಹೇಳಿದ್ದರು. ಇದಾದ ಕೆಲವು ಗಂಟೆಗಳ ನಂತರ,

ಭಾರತದಲ್ಲಿ ಕಿರುಕುಳ ಎದುರಿಸಿ ಅಮೆರಿಕಕ್ಕೆ ಹೋಗಿರುವ ಮುಸ್ಲಿಮರು ಸೇರಿದಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಶ್ವೇತಭವನದ ಹೊರಗೆ ಜಮಾಯಿಸಿದ್ದರು. ಮಾಧ್ಯಮ

ದವರೆಲ್ಲ ಆ ವೇಳೆಗೆ ಹೊರಟುಹೋಗಿದ್ದರು. ಆದರೆ, ಈ ಕಹಿ ವಾಸ್ತವ ಮೋದಿಯವರನ್ನು ತಬ್ಬಿಬ್ಬುಗೊಳಿಸುವಂಥದ್ದಾಗಿತ್ತು ಎಂಬುದನ್ನು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ಹೇಳುತ್ತದೆ.

ಭಾರತ ಮತ್ತು ಭಾರತೀಯ ಅಮೆರಿಕನ್ನರ ಕಾಂಗ್ರೆಸನಲ್ ಕಾಕಸ್ನ ಸಹ ಅಧ್ಯಕ್ಷ ರೋ ಖನ್ನಾ ತಾವು ಮೋದಿಯೊಡನೆ ಬಹುತ್ವದ ಮಹತ್ವದ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದನ್ನೂ,

ದೇಶದ ಮೂಲತತ್ವಗಳ ಆಧಾರದಲ್ಲಿ ಎರಡು ದೇಶಗಳ ಸಂಬಂಧ ಗಟ್ಟಿಗೊಳ್ಳಬೇಕೇ ಹೊರತು ಯಾವುದೇ ವ್ಯಕ್ತಿಯ ವಿಜೃಂಭಣೆಯಿಂದಲ್ಲ ಎಂಬ ಅವರ ಮಾತನ್ನೂ ವರದಿ ಉಲ್ಲೇಖಿಸಿದೆ.

‘ನ್ಯೂಯಾರ್ಕ್ ಟೈಮ್ಸ್ ’ನ ಈ ವರದಿಯ ಹಿನ್ನೆಲೆಯಲ್ಲಿ ಪತ್ರಕರ್ತ ರವೀಶ್ ಕುಮಾರ್

ಅವರು ನ್ಯೂಜೆರ್ಸಿಯ ಡ್ರೂ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ

ಮತ್ತು ಅನಿವಾಸಿ ಭಾರತೀಯ ಸಮುದಾಯದ ಕುರಿತು ಪುಸ್ತಕಗಳನ್ನು ಬರೆದಿರುವ ಸಂಜಯ್ ಮಿಶ್ರಾ ಅವರೊಂದಿಗೆ ಸಂವಾದ ನಡೆಸಿದ್ದಾರೆ.

ಅವರ ಮಾತುಗಳು ಅನಿವಾಸಿ ಭಾರತೀಯ ಸಮುದಾಯದ ಸಂಕೀರ್ಣತೆ ಮತ್ತು ಅದರೊಳಗಿನ ವಾಸ್ತವವನ್ನು ತೆರೆದಿಡುತ್ತವೆ ಮತ್ತು ಅವು ಮೋದಿ ಗುಣಗಾನ ಮಾಡುವ ಮಾಧ್ಯಮಗಳು ಕೊಡುವ ಚಿತ್ರಕ್ಕಿಂತ ಪೂರ್ತಿಯಾಗಿ ಬೇರೆಯದೇ ಚಿತ್ರಗಳಾಗಿವೆ.

ಅನಿವಾಸಿ ಭಾರತೀಯ ಸಮುದಾಯದ ಕುರಿತ ಸಾಮಾನ್ಯ ಕಲ್ಪನೆಗಳನ್ನು ತೆಗೆದುಹಾಕು

ವಂಥ ಸಂಜಯ್ ಮಿಶ್ರಾ ಅವರ ಕೆಲವು ಮಾತುಗಳು ಹೀಗಿವೆ:

ಬ್ರಿಟನ್, ಅಮೆರಿಕ, ಕೆನಡಾ, ಕೆರೀಬಿಯನ್ ಹೀಗೆ ಹಲವೆಡೆ ವ್ಯಾಪಿಸಿಕೊಂಡಿರುವ ಅನಿವಾಸಿ ಭಾರತೀಯ ಸಮುದಾಯ ದೀರ್ಘ ಇತಿಹಾಸ ಹೊಂದಿದೆ. ಇವರೆಲ್ಲ ಬೇರೆ ಬೇರೆ ಸಮಯಗಳಲ್ಲಿ ವಲಸೆ ಹೋದವರು. ಮೈಕ್ರೋಸಾಫ್ಟ್ ಸಿಇಒ ಅಂಥ ಉನ್ನತ ಹುದ್ದೆಯಲ್ಲಿರುವವರೂ ಇದ್ದಾರೆ. ಕೆರೀಬಿಯನ್, ಮಧ್ಯಪ್ರಾಚ್ಯ, ಗಲ್ಫ್ ದೇಶಗಳಲ್ಲಿ ಕೌಶಲ್ಯ ರಹಿತ ಕೆಲಸವನ್ನು ಕಡಿಮೆ ಸಂಬಳಕ್ಕಾಗಿ ಮಾಡುವವರಿದ್ದಾರೆ. ಇವರೆಲ್ಲರೂ ಅನಿವಾಸಿ

ಭಾರತೀಯ ಸಮುದಾಯದ ಭಾಗ. ಇದು ಬಹಳ ದೊಡ್ಡದು ಮತ್ತು ಸರಳವಾಗಿ ಅರ್ಥ ಮಾಡಿಕೊಳ್ಳುವಂಥದ್ದಲ್ಲ.

ಅಮೆರಿಕದೊಳಕ್ಕೆ ಯಾರು ಬರಬೇಕು ಎಂಬುದನ್ನು ಆ ದೇಶವೇ ಆರಿಸಿಕೊಳ್ಳುತ್ತಿದ್ದ ಕಾಲವಿತ್ತು. ಎಲ್ಲ ಕ್ಷೇತ್ರಗಳ ತುಂಬ ಸುಶಿಕ್ಷಿತರು, ಪ್ರತಿಭಾವಂತರನ್ನು, ಇಲ್ಲಿನ ಎಲ್ಲ ಅದ್ಭುತ ಪ್ರತಿಭೆಗಳನ್ನು ಕರೆಸಿಕೊಳ್ಳುತ್ತಿತ್ತು. ಅದಾದ ಬಳಿಕ ಅವರ ಮೂಲಕ ಅವರ ಸಂಬಂಧಿಗಳು, ಮತ್ತಿತರರು ಅಲ್ಲಿಗೆ ಹೋಗುವುದು ಶುರುವಾಯಿತು. ಮೊದಲನೆಯದು ಕೌಶಲ್ಯ ವಲಸೆ, ನಂತರದ್ದು ಕೌಟುಂಬಿಕ ವಲಸೆ. 1970-80ರ ದಶಕಗಳಲ್ಲಿ ಇಂಥ ಕೌಟುಂಬಿಕ ವಲಸೆ ದೊಡ್ಡಮಟ್ಟದಲ್ಲಿ ಶುರುವಾಯಿತು. ಕಡಿಮೆ ಓದಿದ, ಕಡಿಮೆ ಪ್ರತಿಭೆಯ ಅವರು ಅಲ್ಲಿ ಸಣ್ಣಸಣ್ಣ ಕೆಲಸಗಳನ್ನು ಮಾಡತೊಡಗಿದರು. ಹೀಗೆ ಉನ್ನತ ಆದಾಯದವರೂ ಇದ್ದಾರೆ, ಅತಿ ಕಡಿಮೆ ಗಳಿಸುವವರರೂ ಇದ್ದಾರೆ. ಇವರ ನಡುವೆ, ಅಕ್ರಮವಾಗಿ ಅಮೆರಿಕ ಸೇರಿಕೊಂಡವರ ಸಂಖ್ಯೆಯೂ ದೊಡ್ಡದಿದೆ. ನಮಗೆ ಗೊತ್ತಿರುವಂತೆ, ಈ ಅಕ್ರಮ ವಲಸೆಯಲ್ಲಿಯೂ ಗುಜರಾತ್ ಮಾಡೆಲ್ ಪಾಲು ಜಾಸ್ತಿ. ಅಮೆರಿಕಕ್ಕೆ ಹೇಗಾದರೂ ಹೋಗಿ ಸೇರಿಕೊಳ್ಳಬೇಕು ಎಂದು ಅಕ್ರಮ ದಾರಿ ಹಿಡಿದು ಹೊರಟು ಜೈಲುಪಾಲಾದ, ಪ್ರಾಣವನ್ನೇ ಕಳಕೊಂಡ ಗುಜರಾತಿಗಳದ್ದೇ ಒಂದು ದೊಡ್ಡ ಕಥೆ.

ಸಂಜಯ್ ಮಿಶ್ರಾ ಅವರು ತೆರೆದಿಡುವ ಮತ್ತೊಂದು ಆಯಾಮ ಬಹಳ ಮುಖ್ಯವಾ

ದುದು: ಅಮೆರಿಕ, ಆಸ್ಟ್ರೇಲಿಯದಂಥ ದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಭಾರತೀಯರೂ

ಅಲ್ಲಿನವರ ಅಸೂಯೆಗೆ ತುತ್ತಾಗಬೇಕಿದೆ. ಕಚೇರಿಯಿಂದ ಹೊರಬರುತ್ತಿದ್ದಂತೆ ಅವರು ಇತರ ಸಾಮಾನ್ಯ ಭಾರತೀಯರನ್ನು ಕಾಣಲಾಗುವ ರೀತಿಯಲ್ಲಿಯೇ ಕಾಣಲ್ಪಡುತ್ತಾರೆ. ಇಂಥ ಸ್ಥಿತಿಯಲ್ಲಿ ಅವರು ಭಾರತದ ರಾಜಕೀಯದ ಜೊತೆ ಗುರುತಿಸಿಕೊಂಡು ತಮ್ಮ ಪ್ರತಿಷ್ಠೆ

ಹೆಚ್ಚಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗುತ್ತಾರೆ. ಎಷ್ಟೋ ವರ್ಷಗಳಿಂದ ನೆಲೆಸಿದ್ದರೂ ಅಲ್ಲಿನವರು ಭಾರತೀಯರನ್ನು ತಮ್ಮವರೆಂದು ಒಪ್ಪಲಾರರು. ತಮ್ಮ ಉದ್ಯೋಗಗಳನ್ನು ಕಸಿಯುವವರು ಎಂದು ಅವರನ್ನು ನೋಡುವ ಸ್ಥಿತಿಯಿದೆ. ಈ ಕಾರಣದಿಂದ ರಾಜಕೀಯ

ಬೆಂಬಲವನ್ನು ಭಾರತೀಯ ಸಮುದಾಯ ಬಯಸುತ್ತಿರುವುದೂ ಇದೆ.

ಈಗಿನ ಅಆರ್.ಕೆ.ಆರ್.ಕೆ.ನಿವಾಸಿ ಭಾರತೀಯ ಸಮುದಾಯದ ರಾಜಕೀಯಕ್ಕೆ, ಅವರಲ್ಲಿ ಬಹಳ ಹಣವಿದೆ ಎಂಬುದಷ್ಟೇ ಕಾರಣವಲ್ಲ. ಯಾಕೆಂದರೆ ಅವರು ಯಾರೋ ಉನ್ನತ ಹುದ್ದೆಯಲ್ಲಿರುವವರ ಬಳಿ ಮಾತ್ರ ಹೋಗುತ್ತಿಲ್ಲ. ಅವರು ಡಯಾಸ್ಪೊರಾದ ಎಲ್ಲರನ್ನೂ ಒಲಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಇಡೀ ಸಮೂಹದಲ್ಲಿ ತಮ್ಮ ಇಮೇಜ್ ಬೆಳೆಸುವ ಉದ್ದೇಶ. ಆ ಮೂಲಕ ಅನಿವಾಸಿ ಭಾರತೀಯ ಸಮುದಾಯದಿಂದ ರಾಜಕೀಯ ಲಾಭ ಪಡೆಯುವ ಯತ್ನವೊಂದು ವಾಜಪೇಯಿ ಕಾಲದಿಂದಲೂ ರೂಪುಗೊಳ್ಳುತ್ತಾ ಬಂದಿದೆ.

ಅನಿವಾಸಿ ಭಾರತೀಯ ಸಮುದಾಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ ಸಮುದಾಯದವರಿದ್ದಾರೆ. ಅವರು ಗುಜರಾತ್ ಅಥವಾ ಹಿಂದಿ ಪ್ರದೇಶದವರಲ್ಲ. ತಮಿಳುನಾಡು, ಆಂಧ್ರ, ಕೇರಳದಿಂದ ಬರುವವರು. ಇವು ಬಿಜೆಪಿ ಪ್ರಭಾವವಿರುವ ಪ್ರದೇಶಗಳಲ್ಲ. ಹೀಗೆ ಅನಿವಾಸಿ ಭಾರತೀಯ ಸಮುದಾಯದಲ್ಲಿ ಹಿಂದುತ್ವ ಬೆಂಬಲಿಸುವವರು ಇರುವಂತೆ ಹಿಂದುತ್ವ ವಿರೋಧಿಸುವವರೂ ಇದ್ದಾರೆ.

ಅನಿವಾಸಿ ಭಾರತೀಯ ಸಮುದಾಯವು ಏಕತೆಯದ್ದಲ್ಲ, ಅದು ವಿಭಜಿತ ಎಂಬ ಮಾತುಗಳನ್ನು ಸಂಜಯ್ ಮಿಶ್ರಾ ಬಹಳ ಸ್ಪಷ್ಟವಾಗಿ ಹೇಳುತ್ತಾರೆ.

ಆದರೆ, ಮಾಧ್ಯಮಗಳು ಮಾತ್ರ 1,200 ಭಾರತೀಯರ ಮುಂದೆ ಮೋದಿ ಮಾತಾ ಡಿದ್ದನ್ನೇ ಇಟ್ಟುಕೊಂಡು ಇಡೀ ಅನಿವಾಸಿ ಭಾರತೀಯ ಸಮುದಾಯ ಮೋದಿ ಬೆನ್ನಿಗಿದೆ ಎಂದು ಬಿಂಬಿಸುತ್ತಿರುವುದು ಸತ್ಯಕ್ಕೆ ದೂರ. ಅವರಲ್ಲಿ ಒಳವಿರೋಧವಿದೆ. ಅಲ್ಲಿನವರಲ್ಲಿ ರಾಜಕೀಯ, ಆರ್ಥಿಕ ನೀತಿಯ ವಿಚಾರವಾಗಿ ತೀವ್ರ ಭಿನ್ನಮತವೂ ಇದೆ.

ಅಮೆರಿಕದಂಥ ದೇಶದಲ್ಲಿ ಭೌಗೋಳಿಕ, ಭಾಷಿಕ, ಸಾಂಸ್ಕೃತಿಕ ವೈವಿಧ್ಯದ ಪರಿಸರದಿಂದ ಬಂದವರ ನಡುವೆ ಬದುಕುವಾಗಲೂ ಜಾತಿಯ ಅಹಂಕಾರವನ್ನು ಉಳಿಸಿಕೊಂಡೇ ಇರುವ

ಜನ ಅನಿವಾಸಿ ಭಾರತೀಯ ಸಮುದಾಯದಲ್ಲಿದ್ಧಾರೆ. ಹಿಂದುತ್ವದ ಮೇಲಿನ ದಾಳಿಯ ವಿರುದ್ಧ ಒಂದಾಗುವ ರಾಜಕೀಯವೂ ಇಲ್ಲಿದೆ. ಮತ್ತಿದು ಅತ್ಯಂತ ಹಾಸ್ಯಾಸ್ಪದ ರಾಜಕೀಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಆರ್.ಕೆ.

contributor

Similar News