ಎಲ್ಲಿದೆ ಮೋದಿ ಕಿ ಗ್ಯಾರಂಟಿ? ಬಜೆಟ್ ಮಂಡನೆಯಾದರೂ ಗ್ಯಾರಂಟಿಯ ಸುಳಿವೇ ಇಲ್ಲ!
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ತಡ, ಬಿಜೆಪಿ ನಾಯಕರು ಹಾಗು ಬೆಂಬಲಿಗರು ಒಂದೇ ಸಮನೆ "ಗ್ಯಾರಂಟಿ, ಗ್ಯಾರಂಟಿ .." ಎಂದು ಶುರು ಮಾಡಿದ್ದರು. ಗ್ಯಾರಂಟಿ ಜಾರಿ ಆಗೋದೇ ಇಲ್ಲ, ಅದೆಲ್ಲ ಸುಮ್ಮನೆ ಹೇಳಿದ್ದು ಎಂಬ ವ್ಯಾಪಕ ಅಪಪ್ರಚಾರವೂ ನಡೆಯಿತು.
ಹಿರಿಯ ಬಿಜೆಪಿ ಮುಖಂಡರ, "ಬಸ್ಸಿನಲ್ಲಿ ಮಹಿಳೆಯರು ಟಿಕೆಟ್ ಕೊಡಬೇಡಿ, ಕರೆಂಟ್ ಬಿಲ್ ಕಟ್ಟಬೇಡಿ" ಇತ್ಯಾದಿ ಪ್ರದೋದನಕಾರಿ ಹೇಳಿಕೆಗಳನ್ನೂ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರದ್ದು ಗ್ಯಾರಂಟಿ ಯಾವಾಗ? ಎಂದು ಭಾರೀ ರಂಪಾಟ ನಡೆದಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದ ಕೆಲವೇ ದಿನಗಳಲ್ಲಿ ಒಂದೊಂದಾಗಿ ಐದೂ ಗ್ಯಾರಂಟಿಗಳು ಜಾರಿಯಾದವು, ಈಗ ವರ್ಷ ಕಳೆದ ಮೇಲೂ ಅವು ಹಾಗೇ ಜಾರಿಯಲ್ಲಿವೆ.
ಆದರೆ ಮೋದಿ ಸರಕಾರ ಬಂದು ತಿಂಗಳು ಒಂದೂವರೆ ಕಳೆಯಿತು, ಈಗ ಬಜೆಟ್ ಮಂಡನೆಯೂ ಆಗಿದೆ. ಆದರೆ ಅದರಲ್ಲಿ ಮೋದಿ ಕಿ ಗ್ಯಾರಂಟಿಗಳ ಸುಳಿವು ಕೂಡ ಇದ್ದಂತಿಲ್ಲ. ಮೋದಿ ಎಂಬುದರ ಹಿಂದೆಯಾಗಲಿ, ಮುಂದಾಗಲಿ ಏನನ್ನಾದರೂ ಅಂಟಿಸುವುದು ಬಿಜೆಪಿಯವರ ಚಾಳಿಯೇ ಆಗಿ ಬಹಳ ಸಮಯವಾಯಿತು. ಆದರೆ ಈ ಅಂಟಿಸಿಕೊಡುವ ಶೋಕಿ ಮಾಡುವ ಭರದಲ್ಲಿ ಮೋದಿ ಕಿ ಗ್ಯಾರಂಟಿಗಳ ಕಥೆ ಏನಾಯ್ತು?
ಬಹುಶಃ ಬಿಜೆಪಿ ನಾನೂರರ ಗಡಿ ದಾಟುವುದು ಹಾಗಿರಲಿ, ಇಡೀ ಎನ್ ಡಿ ಎಗೆ 300ರ ಗಡಿ ದಾಟುವುದು ಕೂಡ ಆಗದೇ ಹೋದಾಗಲೇ ಈ ಮೋದಿ ಕಿ ಗ್ಯಾರಂಟಿಗಳು ಕೂಡ ನೆಗೆದುಬಿದ್ದು ಹೋಯಿತೇ? ಕಳೆದ 10 ವರ್ಷಗಳಿಂದ ಮೋದಿ ಸರಕಾರ , ಮೋದಿ ಸೇನೆ, ಮೋದಿ ಬಿಜೆಪಿ ಎನ್ನುವಲ್ಲಿಂದ ಶುರುವಾಗಿ ಈಚೆಗೆ ಮೋದಿ ಪರಿವಾರ್ ಎನ್ನುವಲ್ಲಿಯವರೆಗೆ ಮೋದಿ ಎಂಬುದೊಂದೇ ಮೊಳಗುತ್ತಿತ್ತು.
ಯಾವಾಗ ಬಿದ್ದುಹೋಗುತ್ತಿದ್ದ ಮೋದಿಯ ಬಿಜೆಪಿಯನ್ನು ಎರಡೂ ಕಡೆಯಿಂದ ಹಿಡಿದು ನಿಲ್ಲಿಸಲು ಜೆಡಿಯು ಮತ್ತು ಟಿಡಿಪಿ ಬರಬೇಕಾಯಿತೊ ಅವತ್ತಿನಿಂದ ಮೋದಿ ಬಿಜೆಪಿಯೂ ಇಲ್ಲ, ಮೋದಿ ಪರಿವಾರವೂ ಇಲ್ಲ. ಈಗೇನಿದ್ದರೂ ಅದು ಎನ್ ಡಿ ಎ ಸರಕಾರ. ಹಾಗೆ ಮೂರನೇ ಅವಧಿಯಲ್ಲಿ ಮೋದಿ ಎಂಬುದು ಹಿಂದೆಕ್ಕೆ ಸರಿದು, ಎನ್ ಡಿ ಎ ಎಂಬುದು ಮುನ್ನೆಲೆಗೆ ಬಂದಿರುವಾಗ ಮೋದಿ ಕಿ ಗ್ಯಾರಂಟಿಗಳ ಸದ್ದೂ ಇಲ್ಲ. ಬಜೆಟ್ ನಲ್ಲಂತೂ ಅವುಗಳ ಪ್ರಸ್ತಾಪವೇ ಕಾಣಿಸದ ಹಾಗಾಗಿದೆ.
ಗ್ಯಾರಂಟಿ ವಿಚಾರಕ್ಕೆ ಯಾವ ಕಾಂಗ್ರೆಸ್ ಅನ್ನು ಮೋದಿಯೂ ಸೇರಿದಂತೆ ಇಡೀ ಬಿಜೆಪಿಯವರೇ ಜರೆದಿದ್ದರೊ ಅದೇ ಕಾಂಗ್ರೆಸ್ ಅನ್ನು ನಕಲು ಮಾಡಿ ಮೋದಿ ಕಿ ಗ್ಯಾರಂಟಿ ಎಂದು ಶುರು ಮಾಡಿಕೊಳ್ಳಲಾಯಿತು. ಚುನಾವಣೆಯೆಂದರೆ ಬಿಜೆಪಿಯಲ್ಲಿ ಮೋದಿಯೊಬ್ಬರೆ ಎನ್ನುವ ಸ್ಥಿತಿಯಿದ್ದಾಗ, ಬಿಜೆಪಿ ಪ್ರಣಾಳಿಕೆ ಕೂಡ ಮೋದಿ ಪ್ರಣಾಳಿಕೆಯೇ ಆಗಿಬಿಟ್ಟಿತ್ತು. ಸಾರ್ವತ್ರಿಕ ಚುನಾವಣೆಗೆ ಮುನ್ನ ಮೋದಿ ಕಿ ಗ್ಯಾರಂಟಿ ಎಂಬ ಹೆಸರಿನಲ್ಲಿ ಬಿಜೆಪಿ ತಂದಿದ್ದ ಸಂಕಲ್ಪ ಪತ್ರದಲ್ಲಿ 24 ಗ್ಯಾರಂಟಿಗಳನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು.
ಅದಲ್ಲದೆ ಬರೀ ಶಬ್ದಗಳ ಆಟದಂತಿದ್ದ ಉಪ ಗ್ಯಾರಂಟಿಗಳೂ ಸೇರಿ ನೂರಕ್ಕೂ ಮಿಕ್ಕಿ ಗ್ಯಾರಂಟಿಗಳ ಉದ್ದಾನುದ್ದ ಪಟ್ಟಿಯನ್ನೇ ಜನರ ಮುಂದೆ ಇಡಲಾಗಿತ್ತು. ಬರೀ ಘೋಷಣೆಗಳ ಮೂಲಕವೇ ಜನರನ್ನು ಮರುಳು ಮಾಡುವ ಕೆಲಸವನ್ನು ಹೀಗೆ ಬಿಜೆಪಿ ಕಳೆದ 10 ವರ್ಷಗಳಿಂದಲೂ ಮಾಡಿಕೊಂಡೇ ಬಂದಿದೆಯಲ್ಲವೆ?
ಲೋಕಸಭೆ ಚುನಾವಣೆ ವೇಳೆಯೂ ಅದನ್ನೆ ಮಾಡಲಾಯಿತು. ಆದರೆ, ಈಗಾಗಲೇ ಜಾರಿಯಲ್ಲಿರುವ ಕೆಲವು ಕಾರ್ಯಕ್ರಮಗಳು ಬಿಟ್ಟರೆ, ಸಂಕಲ್ಪ ಪತ್ರದ ಯಾವ ಗ್ಯಾರಂಟಿಯೂ ವಾಸ್ತವದಲ್ಲಿ ಕಾಣಿಸುತ್ತಿಲ್ಲ. 2014ರಲ್ಲಿ ಭ್ರಷ್ಟಾಚಾರದ ವಿರುದ್ದ ಹೋರಾಟ ಎಂದು ಕಥೆ ಹೇಳಿಕೊಂಡು ಅಧಿಕಾರಕ್ಕೇರಿದ ಬಿಜೆಪಿ ಕಡೆಗೆ ತಾನೇ ಹೇಗೆ ಭ್ರಷ್ಟರನ್ನು ಸೇರಿಸಿಕೊಳ್ಳುತ್ತ, ಅವರನ್ನೆ ಚುನಾವಣೆಗೆ ಇಳಿಸಿ ಗೆಲ್ಲುತ್ತ ಭ್ರಷ್ಟತೆಯ ಪರಾಕಾಷ್ಠೆ ಮುಟ್ಟಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ.
ಮೂರನೇ ಅತಿದೊಡ್ಡ ಆರ್ಥಿಕತೆ ಬಗ್ಗೆಯಂತೂ ಬಿಜೆಪಿಯವರ ಬೊಬ್ಬೆ ಕೇಳುವುದಕ್ಕೇ ಆಗದಷ್ಟು ಕರ್ಕಶವಾಗಿದೆ. ಬಡವರು-ಶ್ರೀಮಂತರ ನಡುವಿನ ಅಂತರ ಅಗಾಧವಾಗುತ್ತ, ಬಡವರು ಹೈರಾಣಾಗುತ್ತಿರುವಾಗ ಈ ಮೋದಿ ಪಡೆ ಯಾವ ಮೂರನೇ ಆರ್ಥಿಕತೆಯ ಬಗ್ಗೆ ಮಾತಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ನಿರುದ್ಯೋಗವಿದೆ, ಬೆಲೆಯೇರಿಕೆಯಿದೆ, ಅದನ್ನು ಬಗೆಹರಿಸಿ ಎಂದರೆ, 2047ರ ಕಥೆ ಹೇಳಿಕೊಂಡು ಬರಲಾಗುತ್ತಿದೆ ಮತ್ತು ಅದನ್ನೇ ಬಜೆಟ್ನಲ್ಲೂ ಮುಂದುವರಿಸಲಾಗಿದೆ.
ಮೋದಿ ಗ್ಯಾರಂಟಿಗಳಲ್ಲಿನ ಕೆಲವು ವಿಚಾರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವ ನಿಟ್ಟಿನ ಕ್ರಮವೂ ಒಂದು.ಆದರೆ ಕಾಂಗ್ರೆಸ್ ಲೇವಡಿ ಮಾಡುತ್ತಿರುವಂತೆ, ರಷ್ಯಾ-ಉಕ್ರೇನ್ ಯುದ್ದವನ್ನೂ ಒಂದೇ ಮಾತು ಹೇಳಿ ನಿಲ್ಲಿಸಬಲ್ಲ ಮೋದಿಗೆ ಪೇಪರ್ ಲೀಕ್ ತಡೆಯುವುದಕ್ಕೆ ಮಾತ್ರ ಆಗುತ್ತಿಲ್ಲ.
ರೈಲ್ವೆ ಸುರಕ್ಷತೆಯಂಥ ಅಗತ್ಯ ಕೆಲಸಗಳನ್ನು ಮಾಡುವುದಕ್ಕೂ ಕಳೆದ 10 ವರ್ಷಗಳಿಂದ ಮೋದಿ ಸರಕಾರ ಕ್ಕೆ ಆಗಲಿಲ್ಲ. ಬದಲಾಗಿ ಅಲ್ಲಿಯೂ ಶೋಕಿಯನ್ನೇ ಮಾಡಿಕೊಂಡು ಪ್ರಯಾಣಿಕರ ರೈಲುಗಳ ಅವಸ್ಥೆ ದಯನೀಯವಾಗಿ ಹೋಗಿದೆ. ಬಡವರಿಗಾಗಿ, ಮಧ್ಯಮವರ್ಗಕ್ಕಾಗಿ, ಮಹಿಳೆಯರಿಗಾಗಿ, ಯುವಜನತೆಗಾಗಿ, ಹಿರಿಯ ನಾಗರಿಕರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ ಮೋದಿ ಸರಕಾರ ಏನನ್ನಾದರೂ ಮಾಡಿತೆ?
ಸಂಕಲ್ಪ ಪತ್ರದಲ್ಲಿ ಮಾತ್ರ ಚಂದ ಚಂದದ ಹೆಸರಿಟ್ಟು ಭರವಸೆ ಘೋಷಿಸಿದವರಿಗೆ ಅದರ ಒಂದಂಶವನ್ನೂ ಜಾರಿಗೆ ತರಲಾಗದೇ ಇರುವುದಕ್ಕೆ ಕಿಂಚಿತ್ತೂ ನಾಚಿಕೆಯಾಗುವುದಿಲ್ಲವೆ? ವಿಕಾಸ, ಪರಿವಾರ, ಸ್ವಾಸ್ಥ್ಯ ಎಂದೆಲ್ಲ ಕಂತೆ ಕಟ್ಟಿ ಅದನ್ನು ಸಂಕಲ್ಪ ಪತ್ರ ಎಂದು ಕರೆದು ಮತ್ತೂ ಒಂದು ಅವಧಿಗೆ ಜನರನ್ನು ಮರುಳು ಮಾಡಹೊರಟವರಿಗೆ ಈಗ ತಾವು ಕೊಟ್ಟ ಭರವಸೆಗಳು ನೆನಪಿಲ್ಲ.
ಕಳೆದ 10 ವರ್ಷಗಳಿಂದಲೂ ಇವರೇ ಅಧಿಕಾರದಲ್ಲಿದ್ದಾರೆ. 10 ವರ್ಷಗಳಲ್ಲಿ ತಾವು ಏನನ್ನೂ ಮಾಡದೇ ಇರುವುದರ ಬಗ್ಗೆ ಹೇಳುತ್ತಿಲ್ಲ. ಬದಲಾಗಿ ಹಳೇ ಸರಕಾರ ಗಳ ಕಥೆ ಹೇಳಲಾಗುತ್ತದೆ. ಅವುಗಳ ಸಾಧನೆಗಳನ್ನೆಲ್ಲ ನಿರಾಕರಿಸುತ್ತ, ನಕಾರಾತ್ಮಕ ಬೊಬ್ಬೆ ಹೊಡೆಯಲಾಗುತ್ತಿದೆ.
ತಾನು ವಿಶ್ವಗುರು, ತಾನು ದೇವರು ಎಂದು ಹೇಳಿಕೊಳ್ಳುವವರಿಗೆ ಈಗ ತಮ್ಮ ಸರಕಾರ ದ ಉಳಿವಿನ ಬಗ್ಗೆಯೇ ಗ್ಯಾರಂಟಿಯಿಲ್ಲ. ಹೀಗಿರುವಾಗ ಮೋದಿ ಕಿ ಗ್ಯಾರಂಟಿ ಎಂಬುದು ಎಲ್ಲಿ ಕಾರ್ಯರೂಪಕ್ಕೆ ಬಂದೀತು?
ಕಿವಿ ಹಿಡಿದು ಸರಕಾರ ಸರಿದಾರಿಯಲ್ಲಿ ಸಾಗುವಂತೆ ಮಾಡಬಹುದಾಗಿದ್ದ ಇಬ್ಬರು ಕಿಂಗ್ ಮೇಕರ್ಗಳು ತಮ್ಮ ತಮ್ಮ ಡಿಮ್ಯಾಂಡುಗಳನ್ನು ಮುಂದಿಟ್ಟು ಬಜೆಟ್ಟಿನ ಬಹುಪಾಲನ್ನೇ ಲೂಟಿ ಹೊಡೆದುಕೊಂಡು ಮುಸಿ ಮುಸಿ ನಗುತ್ತಿದ್ದಾರೆ. ಸ್ಥಾನ ಎಷ್ಟೇ ಸಿಕ್ಕಿರಲಿ, ಮತ್ತೆ ಮೋದಿಯವರೇ ಅಧಿಕಾರಕ್ಕೆ ಬಂದಿದ್ದಾರೆ. ಹಾಗಾಗಿ ಮೋದಿ ಕಿ ಗ್ಯಾರಂಟಿಗಳನ್ನು ಜನರಿಗೆ ಕೊಡುವ ಬದ್ಧತೆಯನ್ನು ಅವರು ತೋರಿಸಬೇಕಿತ್ತು. ಅದು ಅವರ ನೈತಿಕ ಜವಾಬ್ದಾರಿಯಾಗಿತ್ತು.
ಆದರೆ ಎಂದು ಹ ಉತ್ತರದಾಯಿತ್ವ, ಹೊಣೆಗಾರಿಕೆ, ನೈತಿಕ ಪ್ರಜ್ಞೆಯನ್ನು ಮೋದೀಜಿ ಯಾವತ್ತಾದರೂ ತೋರಿಸಿದ್ದಾರಾ? ವಿಪಕ್ಷಗಳೂ ಮೋದೀಜಿ ಬಳಿ ನಿಮ್ಮ ಗ್ಯಾರಂಟಿ ಏನಾಯ್ತು ಎಂದು ಕೇಳುತ್ತಿಲ್ಲ. ಬಿಜೆಪಿ ಬೆಂಬಲಿಗರಂತೂ ಎಂದು ಅದೊಂದು ಗ್ಯಾರಂಟಿ ಕೊಡಲಾಗಿತ್ತು ಎಂಬುದನ್ನೇ ಮರೆತು ಬಿಟ್ಟವರಂತೆ ಮಗುಮ್ಮಾಗಿದ್ದಾರೆ.
ಪ್ರಧಾನಿ ಮತ್ತೆ ವಿಕಸಿತ ಭಾರತ ಎಂಬ ಅದೇ ಜೊಳ್ಳು ಕಥೆ ಹೇಳಿಕೊಂಡು, ಸದ್ಯ ಸರಕಾರ ಬಚಾವ್ ಎಂದು ನಿರಾಳವಾಗಿ ಕೂತಿರುವಾಗ, ಈ ಸರಕಾರ ದಿಂದ ಜನರಿಗಾಗಿ ಯಾವ ಗ್ಯಾರಂಟಿಗಳೂ ಸಿಗಲಾರವು ಎಂಬುದೊಂದೇ ಸತ್ಯ.