ಇನ್ನೂ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ ಏಕೆ ?

Update: 2023-07-07 17:04 GMT
Editor : Safwan | By : ಆರ್. ಜೀವಿ

ರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರ ಶುರುವಾಗಿದೆ. ಆದರೆ ಇದೇ ಮೊದಲ ಬಾರಿ ಪ್ರತಿಪಕ್ಷದ ನಾಯಕರಿಲ್ಲದೆ ವಿಧಾನಮಂಡಲದ ಕಲಾಪ ನಡೆಯುತ್ತಿದೆ. ಕಲಾಪ ಶುರುವಾಗಿ ಎರಡನೇ ದಿನವಾದರೂ ಇನ್ನೂ ವಿಧಾನ ಸಭೆ ಹಾಗು ವಿಧಾನ ಪರಿಷತ್ತಿನ ವಿಪಕ್ಷ ನಾಯಕರು ಯಾರು ಎಂದು ಘೋಷಿಸುವುದು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ.

ವಿಪಕ್ಷಗಳಿಗೆ ಪ್ರಧಾನಿ ಮೋದಿಯನ್ನು ಎದುರಿಸೋ ಒಬ್ಬ ನಾಯಕನನ್ನು ಹೆಸರಿಸೋದು ಸಾಧ್ಯಗುತ್ತಿಲ್ಲ ಎಂದು ಆಗಾಗ ಹೇಳೋ ಬಿಜೆಪಿಗೆ ಒಂದು ರಾಜ್ಯದ ವಿಧಾನ ಸಭೆ ಹಾಗು ಪರಿಷತ್ತಿಗೆ ಒಬ್ಬ ವಿಪಕ್ಷ ನಾಯಕರನ್ನು ಆಯ್ಕೆ ಮಾಡೋದು ಭಾರೀ ಕಷ್ಟವಾಗಿಬಿಟ್ಟಿದೆ. ಒಂದು ಸೋಲು ಆ ಪಕ್ಷವನ್ನು ಆ ಮಟ್ಟಿಗೆ ಕಂಗೆಡಿಸಿದೆ.

ಈ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಇದ್ದಿದ್ದರೆ ಬಿಜೆಪಿ, ಸಂಘ ಪರಿವಾರದ ಪಡೆ ಹಾಗು ಟಿವಿ ಚಾನಲ್ ಗಳ ಗೋಳಾಟ ಅದೆಷ್ಟು ಇರುತ್ತಿತ್ತು ಅಂತ ಯಾರೂ ಬಹಳ ಸುಲಭವಾಗಿ ಊಹಿಸಬಹುದು. ಆದರೆ ಈಗ ತೀವ್ರ ಇಕ್ಕಟ್ಟಿಗೆ ಸಿಲುಕಿರೋದು ಬಿಜೆಪಿ. ಹಾಗಾಗಿ ಐಟಿ ಸೆಲ್ ಶಾಂತವಾಗಿದೆ, ವಾಟ್ಸ್ ಆಪ್ ಯುನಿವರ್ಸಿಟಿ ಮೌನವಾಗಿದೆ, ಚಾನಲ್ ಗಳಲ್ಲೂ ಅಂತಹ ಗೋಳಾಟ ಏನೂ ಕಾಣ್ತಾ ಇಲ್ಲ.

ಕಲಾಪದ ಮೊದಲ ದಿನ ವಿಪಕ್ಷ ನಾಯಕರು ಇಲ್ಲದೆ ವಿಧಾನ ಸಭೆ ಹಾಗು ವಿಧಾನ ಪರಿಷತ್ತಿನಲ್ಲಿ ಅವರ ಸ್ಥಾನ ಖಾಲಿ ಬಿಟ್ಟು ಉಳಿದ ಸ್ಥಾನಗಳಲ್ಲಿ ಸದಸ್ಯರು ಕುಳಿತಿದ್ದಾರೆ. ಇಂತಹ ವಿಚಿತ್ರ ಪ್ರಸಂಗ ರಾಜ್ಯದ ಇತಿಹಾಸದಲ್ಲೇ ಮೊದಲು ಎಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಆದರೆ ವಿಷಯ ಬಿಜೆಪಿಗೆ ಸಂಬಂಧಿಸಿದ್ದು ಆಗಿರೋದ್ರಿಂದ ಆ ವರದಿಗಳು ಮುಖಪುಟಕ್ಕೆ ಬಾರದೆ ಒಳಪುಟಗಳ ಮೂಲೆಗೆ ಸೇರುತ್ತಿವೆ.

ಮೇಲ್ಮನೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಂಡಿಸಿದ ಸಂತಾಪ ಸೂಚನೆ ಮೇಲೆ ಸಭಾನಾಯಕರು ಮಾತಾಡಿದ ಮೇಲೆ "ಪ್ರತಿಪಕ್ಷದ ಕಡೆಯಿಂದ ಯಾರು ಮಾತಾಡುತ್ತೀರಿ " ಎಂದು ಸಭಾಪತಿಗಳು ಕೇಳುವ ಪರಿಸ್ಥಿತಿ ಬಂತು. ಯಾಕಂದ್ರೆ ಅಲ್ಲಿ ವಿಪಕ್ಷ ನಾಯಕರೇ ಇಲ್ಲ. ಕೊನೆಗೆ ಕೋಟಾ ಶ್ರೀನಿವಾಸ ಪೂಜಾರಿ ಮಾತಾಡಿದರು.

ಮಹಾರಾಷ್ಟ್ರದಲ್ಲಿ ಎನ್ ಸಿ ಪಿ ಒಡೆದು ಮುಗಿಸಿ ಹಾಕೋ ಬಿಝಿಯಲ್ಲಿರುವ ಬಿಜೆಪಿಗೆ ಕರ್ನಾಟಕದ ಕಿರಿಕಿರಿಗೆ ತಲೆ ಕೊಡುವಷ್ಟು ಪುರುಸೊತ್ತು ಸಿಕ್ಕಿಲ್ಲ. ಚುನಾವಣೆಯಲ್ಲಿ ಹೀನಾಯವಾಗಿ ಸೋತ ಸಿಟ್ಟು ಇನ್ನೂ ಕರಗಿಲ್ಲ. ಹಾಗಾಗಿ ಇಲ್ಲಿಗೆ ರವಿವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಬರಬೇಕಿದ್ದ ಇಬ್ಬರು ವೀಕ್ಷಕರು ಬಂದಿಲ್ಲ. ಮಂಗಳವಾರ ವಿನೋದ್ ತಾವಡೆ ಹಾಗು ಮನ್ ಸುಖ್ ಮಾಂಡವಿಯ ಅವರು ಬಂದು ಇಲ್ಲಿನ ಶಾಸಕರ ಅಭಿಪ್ರಾಯ ಕೇಳಿ ಬುಧವಾರ ಬೆಳಗ್ಗೆ ಅಧಿವೇಶನ ಆರಂಭವಾಗುವ ಮೊದಲು ವಿಪಕ್ಷ ನಾಯಕರ ಆಯ್ಕೆ ಅಂತಿಮವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ವಿಪಕ್ಷ ನಾಯಕ ಹುದ್ದೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮುಂಚೂಣಿಯಲ್ಲಿದ್ದರೂ ಬಸನ ಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್,

,ಸುನೀಲ್ ಕುಮಾರ್, ಆರ್ ಅಶೋಕ್ ಹಾಗು ಅಶ್ವಥ್ ನಾರಾಯಣ ಅವರ ಹೆಸರುಗಳೂ ಕೇಳಿ ಬರುತ್ತಿವೆ.

ಯತ್ನಾಳ್ ಅವರನ್ನೇ ಮಾಡಲು ವರಿಷ್ಠರಿಗೆ ಮನಸ್ಸಿದೆಯಾದ್ರೂ ಅವರ ನಾಲಗೆಯೇ ಅವರಿಗೆ ದೊಡ್ಡ ಶತ್ರು. ನಾಳೆ ಸದನದಲ್ಲೇ ಮುಜುಗರದ ಸನ್ನಿವೇಶ ಸೃಷ್ಟಿಸಿಬಿಟ್ಟರೇ .. ಎಂಬ ಭಯವೂ ಪಕ್ಷಕ್ಕಿದೆ. ಈ ಹಿಂದೆ ಸಿಎಂ ಆಗೋ ರೇಸಲ್ಲಿದ್ದ ಅರವಿಂದ ಬೆಲ್ಲದ ಅವರ ಮೇಲೂ ವರಿಷ್ಠರ ಕಣ್ಣಿದೆ. ಆದರೆ ಬಿ ಎಸ್ ವೈ ಬಣದ ಮುಂದೆ ಅವರ ಆಟ ನಡೆಯುತ್ತಾ ಎಂಬುದನ್ನೂ ದಿಲ್ಲಿಯವರು ನೋಡ್ತಾ ಇದ್ದಾರೆ.

ಮತ್ತೆ ಚುನಾವಣೆ ಸಂದರ್ಭದಲ್ಲಿ ನಡೆದಂತೆಯೇ ಬಿ ಎಸ್ ವೈ ಬಣ ಹಾಗು ಸಂತೋಷ್ ಬಣಗಳ ಜಿದ್ದಾಜಿದ್ದಿಯೂ ಸಾಕಷ್ಟಿದೆ. ವರಿಷ್ಠರಿಗೆ ಅವರ ಅಣತಿಗೆ ತಕ್ಕಂತೆ ಪಕ್ಷ ನಡೆಸುವವರು ಬೇಕು. ಆದರೆ ಇಲ್ಲಿ ಬೇರೆಯದೇ ಲೆಕ್ಕಾಚಾರವಿದೆ. ಬಿ ಎಸ್ ವೈ, ಜಾತಿ ಲೆಕ್ಕಾಚಾರ ಇವುಗಳನ್ನೆಲ್ಲ ನಿರ್ಲಕ್ಷಿಸಿದರೆ ಏನಾಗುತ್ತದೆ ಎಂದು ಈಗಾಗಲೇ ಚುನಾವಣೆಯಲ್ಲಿ ನೋಡಿಯಾಗಿದೆ. ಹಾಗಾಗಿ ಈ ಸಂಘರ್ಷದಲ್ಲಿ ಕೊನೆಗೆ ಯಾರ ಕೈ ಮೇಲಾಗುತ್ತದೆ ಎಂದು ಕಾದು ನೋಡಬೇಕು.

ಯಾವ ಬೆಲೆ ತೆತ್ತಾದರೂ ಪಕ್ಷವನ್ನು ವರಿಷ್ಠರು ಹಾಗು ಸಂಘದ ನಿಯಂತ್ರಣದಲ್ಲಿ ನಡೆಸಬೇಕು ಎಂದು ದಿಲ್ಲಿಯವರು ಡಿಸೈಡ್ ಮಾಡಿದ್ರೆ ಹೊಸ ಮುಖಕ್ಕೆ ಅವಕಾಶವಾಗುತ್ತದೆ. ಇಲ್ಲದಿದ್ದರೆ ಬಹುತೇಕ ಬೊಮ್ಮಾಯಿಯವರೇ ವಿಪಕ್ಷ ನಾಯಕರಾಗುತ್ತಾರೆ.

ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೂ ಭಾರೀ ಲಾಬಿ ನಡೆಯುತ್ತಿದೆ. ಲಿಂಗಾಯತರಿಗೆ ವಿಪಕ್ಷ ನಾಯಕ ಹುದ್ದೆ ಸಿಕ್ಕಿದರೆ ಒಕ್ಕಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿ ಎಂದು ಆಗ್ರಹ ಕೇಳಿ ಬಂದಿದೆ. ಬಿ ಎಸ್ ವೈ ತಮ್ಮ ಆಯ್ಕೆ ಹಿಂದೊಮ್ಮೆ ನಿಕಟವರ್ತಿಯಾಗಿದ್ದ ಶೋಭಾ ಕರಂದ್ಲಾಜೆ ಎಂದು ವರಿಷ್ಠರಿಗೆ ತಿಳಿಸಿದ್ದಾರೇ ಎಂಬ ವರದಿಗಳಿವೆ.

ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಶೋಭಾ ಅವರೇ ಪವರ್ ಸೆಂಟರ್ ಆಗಿದ್ದರು. ಅವರು ಎರಡನೇ ಬಾರಿ ಸಿಎಂ ಆದಾಗ ಅವರ ಕುಟುಂಬದವರು ಶೋಭಾ ಅವರನ್ನು ಸರ್ಕಾರದಿಂದ ದೂರ ಇರಿಸಿದ್ದರು. ಇತ್ತೀಚೆಗೆ ಯಡಿಯೂರಪ್ಪ, ವಿಜಯೇಂದ್ರ ಮತ್ತು ಶೋಭಾ ಮಧ್ಯೆ ಸಂಧಾನ ನಡೆದಿದ್ದು, ಎಲ್ಲರೂ ಮತ್ತೆ ಒಟ್ಟಾಗಿ ಹೋಗುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

ಚುನಾವಣೆ ಬಳಿಕ ಸಂತೋಷ್ ಬಣಕ್ಕೆ ತೀವ್ರ ಹಿನ್ನಡೆ ಆಗಿರುವಾಗ ಯಡಿಯೂರಪ್ಪ ಸಕ್ರಿಯರಾಗಲು ಇದೂ ಒಂದು ಕಾರಣ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿದೆ.

ಈಗ ಎಲ್ಲ ಲೆಕ್ಕಾಚಾರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟು ಆಗೋ ಸಾಧ್ಯತೆ ಹೆಚ್ಚಿದೆ. ಆಗ ಹೆಚ್ಚಿನ ರಿಸ್ಕ್ ಬೇಡ ಎಂದು ವರಿಷ್ಠರು ನಿರ್ಧರಿಸಿದ್ರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ ಎಸ್ ವೈ ಸೂಚಿಸಿದವರೇ ನೇಮಕ ಆಗೋ ಸಾಧ್ಯತೆ ಹೆಚ್ಚು. ಇಲ್ಲ..ಇಲ್ಲ.. ಮತ್ತೆ ಪರೋಕ್ಷವಾಗಿ ಬಿ ಎಸ್ ವೈ ಕೈಗೆ ಪಕ್ಷ ಕೊಡೋದು ಬೇಡ ಅಂತ ವರಿಷ್ಠರು ನಿರ್ಧರಿಸಿದ್ರೆ ಮತ್ತೆ ಹೊಸಬರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ರೂ ಸಿಗಬಹುದು.

ರಾಜ್ಯದಲ್ಲಿ ಸೋತು ಸುಣ್ಣವಾಗಿರುವ ಈ ಹೊತ್ತಲ್ಲಿ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಸದ್ಯದ ಕುತೂಹಲ.]

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಆರ್. ಜೀವಿ

contributor

Similar News