ಈಸೋಫನ ಕುದುರೆಯಂತಾಗುವುದೇ ಜೆಡಿಎಸ್?

ಯಾವ ಧರ್ಮ ಮತ್ತು ರಾಷ್ಟ್ರೀಯತೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದೋ ಅಂತಹವುಗಳನ್ನೇ ಬಿಜೆಪಿ ಮತ್ತು ಸಂಘ ಪರಿವಾರಗಳು ತಮ್ಮ ರಾಜಕೀಯ ದಾಳ ಮಾಡಿಕೊಂಡಿವೆ. ಇವು ಭಾವನಾತ್ಮಕ ಸಂಗತಿಗಳು. ಭಾರತೀಯರಾದ ನಾವು ಇಂತಹ ಭಾವನಾತ್ಮಕ ಸಂಗತಿಗಳಿಗೆ ಬಹುಬೇಗ ಸ್ಪಂದಿಸುತ್ತೇವೆ. ಇವು ಮುನ್ನೆಲೆಗೆ ಬಂದಾದ ನಂತರ, ಬೇರೆಲ್ಲ ರಾಜಕೀಯ ಸಿದ್ಧಾಂತ ಮತ್ತು ಅಸ್ತ್ರಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಾರಂಭಿಸುತ್ತವೆ; ಜಾತಿ ಕೂಡಾ!. ಇದೇ, ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ಜೊತೆಗಿನ ಮೈತ್ರಿಯಿಂದ ಮುಳುವಾಗುವ ಸಂಗತಿ. ಆರೇಳು ದಶಕಗಳ ಕಾಲ ರಾಜಕಾರಣವನ್ನು ಕಂಡುಂಡ ದೇವೇಗೌಡರಿಗೆ ಇದು ಅರ್ಥವಾಗದ ಸಂಗತಿಯೇನಲ್ಲ. ಆದರೆ, ಈ ಮಾತನ್ನು ಕುಮಾರಸ್ವಾಮಿಯವರ ವಿಚಾರದಲ್ಲಿ ಹೇಳಲಾಗದು. ಇಳಿವಯಸ್ಸಿನಲ್ಲಿರುವ ದೇವೇಗೌಡರು ಯಾವ್ಯಾವ ಬಗೆಯ ಒತ್ತಡಕ್ಕೆ ಸಿಲುಕಿದ್ದಾರೋ ಗೊತ್ತಿಲ್ಲ. ಆದರೆ, ಜೆಡಿಎಸ್ ಪಕ್ಷ ಈಗ ಮಾಡಿಕೊಂಡಿರುವ ಮೈತ್ರಿಯಿಂದ ಈಸೋಫನ ಕಥೆಯ ಕುದುರೆಯಂತಾಗುವ ಅಪಾಯವನ್ನು ತಳ್ಳಿಹಾಕಲಿಕ್ಕಾಗದು.

Update: 2023-09-26 05:19 GMT

‘‘ಚಹಾ ಅಂದುಕೊಂಡು, ಒಂದು ಕಪ್ ವಿಷ ಕುಡಿದುಬಿಟ್ಟೆ’’ - 2018ರಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಮೆಹಬೂಬ ಮುಫ್ತಿಯವರು ಈ ಮಾತು ಹೇಳಿದ್ದು, ಬಿಜೆಪಿ ಜೊತೆಗಿನ ತನ್ನ ಮೈತ್ರಿಯನ್ನು ತೊಡೆದುಕೊಂಡು ಹೊರಬರುವಾಗ. ಇದಕ್ಕೂ ಮೊದಲು, ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಸಿಎಂ ಎನಿಸಿದ ಮೆಹಬೂಬ ಮುಫ್ತಿಯವರು ಅಧಿಕಾರ ನಡೆಸಿದ್ದು ಕೇವಲ ಎರಡು ವರ್ಷ. ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಬಿದ್ದಿದ್ದರಿಂದ ಅವರು ಜೂನ್ 2018ರಲ್ಲಿ ರಾಜೀನಾಮೆ ನೀಡಬೇಕಾಯಿತು. ಅಷ್ಟೊತ್ತಿಗಾಗಲೇ ಬಿಜೆಪಿ ಜೊತೆಗಿನ ಸಂಘರ್ಷ ಮತ್ತು ಅಸಹಕಾರದಿಂದ ಹೈರಾಣಾಗಿದ್ದ ಅವರು, ಈ ಮೇಲಿನ ಮಾತು ಹೇಳಿದ್ದರು.

ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಮೆಹಬೂಬ ಮುಫ್ತಿಯವರ ಈ ಮಾತು ಹೆಚ್ಚು ಪ್ರಸ್ತುತವೆನಿಸುತ್ತದೆ. ಅವತ್ತಿನ ಜಮ್ಮು-ಕಾಶ್ಮೀರದ ರಾಜಕೀಯ ಸಂದರ್ಭಕ್ಕೂ, ಇವತ್ತಿನ ಕರ್ನಾಟಕದ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸ ಮತ್ತು ವೈರುಧ್ಯಗಳಿವೆಯಾದರೂ ಪರಿಣಾಮದಲ್ಲಿ ಸಾಮ್ಯತೆ ಇದ್ದಂತೆ ಕಾಣುತ್ತೆ. ಕೇವಲ ಪಿಡಿಪಿ ಮತ್ತು ಮುಫ್ತಿಯವರನ್ನು ಆಧಾರವಾಗಿಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗುವುದಿಲ್ಲ. ಆದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪ್ರಾದೇಶಿಕ ಪಕ್ಷಗಳಾದ ಮಹಾರಾಷ್ಟ್ರದ ಶಿವಸೇನೆ, ಪಂಜಾಬಿನ ಅಕಾಲಿದಳ, ಉತ್ತರಪ್ರದೇಶದ ಬಿಎಸ್‌ಪಿ, ಆಂಧ್ರದ ತೆಲುಗುದೇಶಂ ಪಾರ್ಟಿ, ಬಿಹಾರದ ಲೋಕಜನಶಕ್ತಿ ಪಾರ್ಟಿಗಳು ಮುಂದೆ ಎಂತಹ ಕೊರಕಲಿಗೆ ಜಾರಿದವು ಎಂಬುದನ್ನು ಗಮನಿಸಿದಾಗ, ಮುಫ್ತಿಯವರ ‘ವಿಷದ ಕಪ್’ ಹೇಳಿಕೆ ಜೆಡಿಎಸ್‌ನ ದುರಂತಕ್ಕೆ ಸಾಕ್ಷಿಯಾಗಿ ಘನೀಕರಿಸುತ್ತದೆ.

‘ಹೌ ಡೆಮಾಕ್ರೆಸೀಸ್ ಡೈಸ್’ ಎಂಬ ತಮ್ಮ ಕೃತಿಯಲ್ಲಿ ಸ್ಟೀವ್ ಲೆವಿಟ್‌ಸ್ಕೀ ಮತ್ತು ಡೇನಿಯಲ್ ಜಿಭ್ಲ್ಯಾಟ್ ಅವರು, ಮಹತ್ವಾಕಾಂಕ್ಷಿ ಪಕ್ಷವೊಂದು ಪ್ರಾದೇಶಿಕ ಪಕ್ಷಗಳ ಜೊತೆ ಮಾಡಿಕೊಳ್ಳುವ ಮೈತ್ರಿಯನ್ನು ‘ಡೆವಿಲ್ಸ್ ಬಾರ್ಗೇನ್’ (ದಯ್ಯದ ಚೌಕಾಶಿ) ಎಂದು ಕರೆಯುತ್ತಾರೆ. ಅದನ್ನವರು ಈಸೋಫನ ನೀತಿಕತೆಯೊಂದರ ಮೂಲಕ ವಿವರಿಸಿದ್ದಾರೆ. ಕಥೆ ಹೀಗಿದೆ....

ಒಮ್ಮೆ, ಕುದುರೆ ಹಾಗೂ ಜಿಂಕೆಯ ನಡುವೆ ಜಗಳ ಶುರುವಾಯಿತು. ಜಿಂಕೆಯ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಕುದುರೆ, ಬೇಟೆಗಾರನೇ ಇದಕ್ಕೆ ಸರಿಯಾದ ಆಯ್ಕೆ ಎಂದು ಅವನ ಬಳಿ ಬಂದು ಸಹಾಯ ಕೇಳಿತು. ಒಪ್ಪಿದ ಬೇಟೆಗಾರ ಒಂದು ಷರತ್ತು ಒಡ್ಡಿದ, ‘‘ನಾನೇನೊ ನಿನಗೆ ಸಹಾಯ ಮಾಡಬಲ್ಲೆ, ಆದರೆ ನೀನು ನಾನು ಹೇಳಿದಂತೆ ಕೇಳಬೇಕು. ನಿನ್ನ ಮೂಗಿನಲ್ಲಿ ದಾರವನ್ನು ಪೋಣಿಸಲು ಮತ್ತು ಬೆನ್ನ ಮೇಲೆ ಈ ಜೀನನ್ನು ಕಟ್ಟಲು ಅವಕಾಶ ಕೊಡಬೇಕು. ಅದರಿಂದಾಗಿ ಭದ್ರವಾಗಿ ಕೂತು, ನಿನ್ನನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ನನಗೆ ಸಾಧ್ಯವಾಗುತ್ತದೆ. ಆಗ ಜಿಂಕೆಯನ್ನು ನಾನು ಬೇಟೆಯಾಡಿ ಮಟ್ಟಹಾಕುತ್ತೇನೆ’ ಎಂದ. ಸೇಡಿನ ಕುದಿಯಲ್ಲಿದ್ದ ಕುದುರೆ ಸಮ್ಮತಿಸಿತು. ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೇಟೆಗಾರ, ಜಿಂಕೆಯನ್ನು ಯಶಸ್ವಿಯಾಗಿ ಬೇಟೆಯಾಡಿ ಕೊಂದುಹಾಕಿದ. ಆಗ ಕುದುರೆ, ‘‘ಈಗ ಕೆಲಸ ಆಯ್ತಲ್ಲವಾ. ಬೆನ್ನ ಮೇಲಿಂದ ಕೆಳಗಿಳಿದು, ನನಗೆ ಕಟ್ಟಿರುವ ಈ ನಿನ್ನ ಸಲಕರಣೆಗಳನ್ನು ಬಿಚ್ಚಿಹಾಕು’’ ಎಂದಿತು. ‘‘ಅಷ್ಟು ಅವಸರ ಯಾಕೆ ಗೆಳೆಯ, ಕಷ್ಟಪಟ್ಟು ನಿನ್ನನ್ನು ಪಳಗಿಸಿಕೊಂಡಿದ್ದೇನೆ. ಈಗ ಹೇಗಿರುವೆಯೋ, ಹಾಗೇ ಇದ್ದುಬಿಡು’’ ಎಂದು ಗಹಗಹಿಸಿ ನಕ್ಕ ಬೇಟೆಗಾರ.

ಸ್ಟೀವ್ ಲೆವಿಟ್‌ಸ್ಕೀಯವರು ಮೈತ್ರಿ ಮಾಡಿಕೊಳ್ಳುವ ಪ್ರಾದೇಶಿಕ ಪಕ್ಷವನ್ನು ಕಥೆಯ ಕುದುರೆಗೆ ಹೋಲಿಸುತ್ತಾರೆ. ಬಿಜೆಪಿಯೊಟ್ಟಿಗೆ ಮೈತ್ರಿ ಮಾಡಿಕೊಂಡ ಪಕ್ಷಗಳ ಅವಸಾನವನ್ನು ನೋಡಿದಾಗ ಅದು ನಿಜ ಅನ್ನಿಸದಿರದು. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಏನಾಯಿತು ಅನ್ನುವುದನ್ನು ನೋಡೋಣ.

ಶಿವಸೇನೆಯ ಸುಪ್ರೀಂ ನಾಯಕ ಬಾಳಾ ಠಾಕ್ರೆಯವರು 1985ರಲ್ಲಿ ರಾಜಕಾರಣವನ್ನು ಪ್ರವೇಶಿಸಿದರೂ, ಆ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿಯ ಚಿಹ್ನೆಯಡಿಯೇ ತಮ್ಮ ಶಿವಸೇನೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಹಿಂದುತ್ವ ಮತ್ತು ಮರಾಠಾ ವೋಟ್‌ಬ್ಯಾಂಕ್‌ಗೆ ಐಕಾನ್ ಆಗಿ ಹೊರಹೊಮ್ಮಿದ್ದ ಠಾಕ್ರೆಯವರಿಂದಾಗಿ ಆ ಸಲ ಬಿಜೆಪಿ ರಾಜ್ಯದ ಇತಿಹಾಸದಲ್ಲೇ ಹದಿನಾರು ಸ್ಥಾನಗಳಲ್ಲಿ ಜಯಗಳಿಸಿತು. ಅದರ ಪೈಕಿ ಶಿವಸೇನೆ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. 1990ರ ಹೊತ್ತಿಗೆ ಶಿವಸೇನೆ ತನ್ನದೇ ಲಾಂಛನದಡಿ ಚುನಾವಣೆಗೆ ಸಜ್ಜಾಯಿತು. ಈ ಮೈತ್ರಿಯಲ್ಲಿ ಶಿವಸೇನೆ ಹೆಚ್ಚು ಬಲಿಷ್ಠ ಪಾಲುದಾರನಾಗಿದ್ದರೆ, ಬಿಜೆಪಿಯು ಠಾಕ್ರೆಯವರ ನೆರಳಿನಂತೆ ಚುನಾವಣೆ ಎದುರಿಸಿತು. ಆ ಸಲ ಸೇನೆ 52 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 42ಕ್ಕೆ ಏರಿತು. 2004ರ ಚುನಾವಣೆವರೆಗೂ ಮೈತ್ರಿ ಬಲಾಢ್ಯತೆಯ ಈ ಸಮೀಕರಣ ಹೀಗೆ ಮುಂದುವರಿದುಕೊಂಡು ಬಂತು. ಆದರೆ ಈ ಅವಧಿಯಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ಸಂಘ ಪರಿವಾರದ ಮೂಲಕ ವ್ಯವಸ್ಥಿತವಾಗಿ ಪಸರಿಸುತ್ತಾ ಬಂದ ಬಿಜೆಪಿ 2009ರಲ್ಲಿ ಮೊತ್ತಮೊದಲ ಬಾರಿಗೆ ಶಿವಸೇನೆಗಿಂತ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿತು. ಅಲ್ಲಿಂದಾಚೆಗೆ ಮೈತ್ರಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ, ಶಿವಸೇನೆಯನ್ನು ದಮನಿಸುತ್ತಾ ಬಂತು. 2014ರ ಚುನಾವಣೆಯಲ್ಲಿ 122 ಸ್ಥಾನಗಳಲ್ಲಿ ಗೆದ್ದ ಬಿಜೆಪಿ, ಶಿವಸೇನೆಯ ಹಂಗು ಇಲ್ಲದೆ ಸ್ವತಂತ್ರವಾಗಿ ಸರಕಾರ ರಚನೆ ಮಾಡಿತು. ತನ್ನ ಕೈಕೆಳಗಿದ್ದ ಮೈತ್ರಿಪಕ್ಷ, ಈಗ ತನಗಿಂತಲೂ ಬಲವಾಗಿ ಬೆಳೆದಿದ್ದನ್ನು ಕಂಡ ಶಿವಸೇನೆ, ಕೆಲಕಾಲ ಸರಕಾರದ ಭಾಗವಾಗಿರದೆ, ಅಧಿಕೃತ ವಿರೋಧಪಕ್ಷವಾಗಿ ಕೆಲಸ ಮಾಡಿತು. ಆನಂತರ ಸರಕಾರದ ಭಾಗವಾಯಿತಾದರೂ ಅಲ್ಲಿ, ಅದಕ್ಕೆ ಮೊದಲಿನ ಮನ್ನಣೆ ಲಭ್ಯವಾಗಲಿಲ್ಲ.

ಬಲಾಢ್ಯವಾದ ನಂತರ, ತಾನು ಯಾವ ಶಿವಸೇನೆಯ ನೆರಳಿನಲ್ಲಿ ಭದ್ರ ಬುನಾದಿ ಕಂಡುಕೊಂಡಿತೋ, ಅದೇ ಶಿವಸೇನೆಯನ್ನು ಹೊಡೆದು ಇಬ್ಭಾಗ ಮಾಡುವ ಪ್ರಯತ್ನಕ್ಕೆ ಬಿಜೆಪಿ ಮುಂದಾದದ್ದು ಈಗ ಇತಿಹಾಸ. ಹಿಂದುತ್ವದ ಪ್ರತಿಪಾದಕನಾಗಿದ್ದರೂ, ಬಿಜೆಪಿಯ ಈ ವಿಶ್ವಾಸಘಾತಕ್ಕೆ ಪ್ರತ್ಯುತ್ತರ ನೀಡಬೇಕೆಂದು ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಒಂದು ಕಾಲಕ್ಕೆ, ಮಹಾರಾಷ್ಟ್ರ ರಾಜಕಾರಣದಲ್ಲಿ ಡಿಕ್ಟೇಟ್ ಮಾಡುವ ಹಂತದಲ್ಲಿದ್ದ ಶಿವಸೇನೆ, ಇಂದು ಅಸ್ತಿತ್ವದ ಹೋರಾಟದಲ್ಲಿದೆ; ಅದೇ ವೇಳೆ, ಬಿಜೆಪಿ ಬಲಶಾಲಿಯಾಗಿ ಬೆಳೆದು ನಿಂತಿದೆ.

ಪಂಜಾಬ್‌ನಲ್ಲಿ ಅಕಾಲಿದಳಕ್ಕೆ ಆಗಿದ್ದು ಕೂಡಾ ಇದೇ ಪರಿಸ್ಥಿತಿ. ಕಾಂಗ್ರೆಸ್ ನಂತರ ದೇಶದ ಅತಿ ಪುರಾತನ ರಾಜಕೀಯ ಪಕ್ಷವೆನಿಸಿದ ಶಿರೋಮಣಿ ಅಕಾಲಿದಳ, ಪಂಜಾಬ್‌ನಲ್ಲಿ ಸಿಖ್ಖರ ಪ್ರತಿನಿಧಿಯಂತೆ ಮೈದಳೆದ ಪಕ್ಷ. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ವಾಜಪೇಯಿಯವರ ಸರಕಾರ ರಚನೆಗೆ ಸಂಖ್ಯಾಬಲದ ಕೊರತೆ ಎದುರಾದಾಗ, ಅಕಾಲಿದಳ ತನ್ನ ಬೆಂಬಲ ಘೋಷಿಸಿತು. ಅಷ್ಟೊತ್ತಿಗಾಗಲೇ ಮೂರು ಸಲ ಪಂಜಾಬ್‌ನಲ್ಲಿ ಸರಕಾರ ರಚನೆ ಮಾಡುವಷ್ಟು ಪ್ರಬಲವಾಗಿ ಬೇರೂರಿದ್ದ ಪ್ರಾದೇಶಿಕ ಪಕ್ಷ. ಆ ಮೈತ್ರಿಯ ನಂತರ 1997ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಅಕಾಲಿದಳ 75 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಬಿಜೆಪಿ ಕೇವಲ 6 ಸ್ಥಾನ ಗಳಿಸಿತ್ತು. ಆದರೆ ಈಗ ಅಕಾಲಿದಳಕ್ಕೆ ಯಾವ ಪರಿಸ್ಥಿತಿ ಬಂದೊದಗಿದೆಯೆಂದರೆ, 2022ರ ಚುನಾವಣೆಯಲ್ಲಿ ಅಕಾಲಿದಳ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿರುವುದು ತನ್ನ ಮೂವರು ಶಾಸಕರನ್ನಷ್ಟೇ! ಈ ಅವನತಿಯಲ್ಲಿ ಅಕಾಲಿದಳದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಡ್ರಗ್ಸ್ ದಂಧೆಗೆ ನೆರವು ನೀಡಿದ್ದು, ಪ್ರಕಾಶ್ ಸಿಂಗ್ ಬಾದಲ್ ಅವರ ಕುಟುಂಬ ರಾಜಕಾರಣದ ತಪ್ಪುಗಳೇ ಢಾಳಾಗಿ ಕಾಣಿಸುತ್ತವೆಯಾದರೂ, ರಾಷ್ಟ್ರ ರಾಜಕಾರಣದಲ್ಲಿ ಎನ್‌ಡಿಎ ಮೈತ್ರಿಕೂಟದ ಸದಸ್ಯನಾದ ಕಾರಣಕ್ಕೆ, ಬಿಜೆಪಿಯ ನೀತಿಗಳನ್ನು ಕಣ್ಣುಮುಚ್ಚಿಕೊಂಡು ಬೆಂಬಲಿಸುತ್ತಾ ಬಂದದ್ದು ಕೂಡಾ ಅಕಾಲಿದಳದ ಮೇಲೆ ಸಿಖ್ಖರು ವಿಶ್ವಾಸ ಕಳೆದುಕೊಳ್ಳುವಲ್ಲಿ ಒಂದು ಪ್ರಮುಖ ಕಾರಣ. ಉದಾಹರಣೆಗೆ, ದೇಶದ, ಮುಖ್ಯವಾಗಿ ಪಂಜಾಬ್ ಮತ್ತು ಹರ್ಯಾಣ ರೈತರು ತೀವ್ರವಾಗಿ ವಿರೋಧಿಸಿದ ಮೂರು ಕೃಷಿ ಕಾಯ್ದೆಗಳನ್ನು ಮೋದಿ ಸರಕಾರ ಜಾರಿಗೆ ತರುವಾಗ, ಸೌಜನ್ಯಕ್ಕೂ ಮೈತ್ರಿಪಕ್ಷವಾದ ಅಕಾಲಿದಳದ ಅಭಿಪ್ರಾಯವನ್ನು ಸಂಗ್ರಹಿಸಲಾಗಿರಲಿಲ್ಲ. ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅಕಾಲಿದಳದ ಸಚಿವರು ಸಹ ಆ ಕಾಯ್ದೆಗಳ ಬಗ್ಗೆ ಚಕಾರವೆತ್ತಲಿಲ್ಲ. ಇಡೀ ಸಿಖ್ ರೈತ ಸಮುದಾಯ ಬೀದಿಗಿಳಿದು ಹೋರಾಟ ಶುರು ಮಾಡಿದ ನಂತರ ಅಕಾಲಿದಳ ಕಾಯ್ದೆಗಳ ವಿರುದ್ಧ ಪ್ರತಿಕ್ರಿಯಿಸಿತು. ಅಷ್ಟೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು. ಬಿಜೆಪಿಯ ನೀತಿಗಳನ್ನು ಬೆಂಬಲಿಸಿದ್ದಕ್ಕಾಗಿ ಪಂಜಾಬ್‌ನಲ್ಲಿ ತನ್ನ ಅಸ್ತಿತ್ವವನ್ನೇ ಕಿರಿದಾಗಿಸಿಕೊಂಡಿತ್ತು.

ಇನ್ನು ಬಿಹಾರದಲ್ಲಿ ರಾಮ್‌ವಿಲಾಸ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಹಾಗೂ ನಿತೀಶ್ ಕುಮಾರ್ ಅವರ ಜೆಡಿಯು ಜೊತೆಗೆ ಬಿಜೆಪಿ ವ್ಯವಹರಿಸಿದ ರೀತಿಯು, ನಿಜಕ್ಕೂ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳ ಬಯಸುವ ಪಕ್ಷಗಳಿಗೆ ಒಂದು ಪಾಠವೆಂದರೂ ತಪ್ಪಲ್ಲ. ಬದುಕಿದ್ದಷ್ಟೂ ದಿನವೂ ರಾಮ್‌ವಿಲಾಸ್ ಪಾಸ್ವಾನ್, ಬಿಜೆಪಿಯ ವಿಭಜಕ ನೀತಿಗಳಿಗೆ ದಮನಿತ ಸಮರ್ಥಕನಾಗಿ ನಿಲ್ಲುತ್ತಾ ಬಂದವರು. ಆದರೆ 2020ರಲ್ಲಿ ಅವರು ಅಸುನೀಗಿದ ನಂತರ ಎಲ್‌ಜೆಪಿಯೊಳಗೆ ಭುಗಿಲೆದ್ದ ಆಂತರಿಕ ಭಿನ್ನಾಭಿಪ್ರಾಯ ಮತ್ತು ವಿಭಜನೆಯ ಹಿಂದೆ ಬಿಜೆಪಿಯ ಪ್ರಭಾವ ಎದ್ದುಕಾಣುತ್ತೆ. ಪಾಸ್ವಾನ್ ಅವಸಾನದ ನಂತರ ಎಲ್‌ಜೆಪಿಯ ವೋಟ್‌ಬ್ಯಾಂಕ್ ಅನ್ನು ತಾನು ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ, ಅವರ ಮಗ ಚಿರಾಗ್ ಪಾಸ್ವಾನ್ ಅಡ್ಡಿಯಾದರು. ಚಿರಾಗ್ ಮತ್ತು ಆತನ ಚಿಕ್ಕಪ್ಪ ಪಶುಪತಿನಾಥ್ ಪರಸ್ ನಡುವೆ ಉಂಟಾದ ಭಿನ್ನಾಭಿಪ್ರಾಯದಲ್ಲಿ ಬಿಜೆಪಿಯನ್ನು ನೇರವಾಗಿ ಆರೋಪಿಸಲಾಗುವುದಿಲ್ಲವಾದರೂ, ಆ ಪಕ್ಷದ ಆರು ಸಂಸದರ ಪೈಕಿ ಐವರು ಬಂಡಾಯವೆದ್ದು ಪಕ್ಷದಿಂದ ಹೊರಗೆ ಬಂದ ವಿದ್ಯಮಾನಕ್ಕೆ ಬಿಜೆಪಿಯ ಕೃಪಾಕಟಾಕ್ಷ ಇತ್ತೆನ್ನುವುದು ನಿರ್ವಿವಾದ. ಯಾಕೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಆಯ್ಕೆಯಾದ ಲೋಕಸಭಾ ಸ್ಪೀಕರ್ ಅವರು, ಆ ಐವರು ಬಂಡಾಯ ಸಂಸದರಿಗೆ ಪ್ರತ್ಯೇಕ ರಾಜಕೀಯ ಪಕ್ಷವೆಂದು ಮನ್ನಣೆ ನೀಡಿದ್ದಾಗಲಿ, ಕೇಂದ್ರ ಚುನಾವಣಾ ಆಯೋಗವೂ ಎಲ್‌ಜೆಪಿಯ ಈ ಎರಡೂ ಬಣಗಳು ಪ್ರತ್ಯೇಕ ಪಕ್ಷವೆಂದು ಘೋಷಿಸಿದ್ದಾಗಲಿ, ಇವೆರಡರ ಹಿಂದೆ ಮೋದಿಯವರ ಕೇಂದ್ರ ಸರಕಾರದ ಹಸ್ತಕ್ಷೇಪವನ್ನು ಹೇಗೆ ತಾನೇ ತಳ್ಳಿಹಾಕಲು ಸಾಧ್ಯ? ಈಗ ಚಿರಾಗ್ ಪಾಸ್ವಾನ್ ತನ್ನ ಮತ್ತು ತನ್ನ ಪಕ್ಷದ ಅಸ್ತಿತ್ವಕ್ಕಾಗಿ, ಲಾಲುಪ್ರಸಾದ್ ಯಾದವ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವನ್ನೂ ಹೀಗೇ ದುರ್ಬಲಗೊಳಿಸುವ ಪ್ರಯತ್ನ ನಡೆದವಾದರೂ, ಅನುಭವಿ ಮತ್ತು ಪಕ್ಕಾ ಅವಕಾಶವಾದಿ ರಾಜಕಾರಣಿಯಾದ ಅವರು ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು, ಲಾಲು ಪ್ರಸಾದ್ ಯಾದವ್ ಜೊತೆ ಕೈಜೋಡಿಸಿ ಅಧಿಕಾರ ಉಳಿಸಿಕೊಂಡಿದ್ದಾರೆ. 2015ರ ಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಜೆಡಿಯು ಮಹಾಘಟಬಂಧನಕ್ಕೆ ಸ್ಪಷ್ಟ ಬಹುಮತ ಸಿಕ್ಕಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದರೆ 2017ರ ಹೊತ್ತಿಗೆ ಮೈತ್ರಿಯನ್ನು ಬದಲಿಸಿದ ನಿತೀಶ್, ಅಚ್ಚರಿಯ ಬೆಳವಣಿಗೆಯಲ್ಲಿ ಎನ್‌ಡಿಎ ಸೇರಿಕೊಂಡು, ಬಿಜೆಪಿ ಬೆಂಬಲದೊಂದಿಗೆ ಸಿಎಂ ಆಗಿ ಮುಂದುವರಿದರು. ಆ ಅವಧಿಯಲ್ಲಿ ಜೆಡಿಯು 71 ಸ್ಥಾನ ಗಳಿಸಿದ್ದರೆ, ಬಿಜೆಪಿ 53 ಸ್ಥಾನ ಗಳಿಸಿತ್ತು. ಆದರೆ 2020ರ ಚುನಾವಣೆಯಲ್ಲಿ ಈ ಸಂಖ್ಯೆ ಅದಲು ಬದಲಾಯಿತು. ಜೆಡಿಯು 43 ಸ್ಥಾನಗಳಿಗೆ ಕುಸಿದರೆ, ಬಿಜೆಪಿ ಮೈತ್ರಿಯ ಲಾಭದಿಂದಾಗಿ 74ಕ್ಕೆ ಏರಿಕೆಯಾಯಿತು. ಆದಾಗ್ಯೂ, ನಿತೀಶ್ ಕುಮಾರ್ ಅವರನ್ನೇ ತಮ್ಮ ಮೈತ್ರಿಯ ಸಿಎಂ ಎಂದು ಬಿಜೆಪಿ ಘೋಷಿಸಿತು. ತಮಗಿಂತಲೂ ಹೆಚ್ಚೂಕಮ್ಮಿ ಅರ್ಧದಷ್ಟು ಕಡಿಮೆ ಸ್ಥಾನ ಗಳಿಸಿದ ನಿತೀಶ್ ಅವರನ್ನೇ ತಾನು ಸಿಎಂ ಮಾಡಿರುವೆ ಎಂದು ಬಿಜೆಪಿ ಪ್ರತಿಪಾದಿಸಿತಾದರೂ, ಅದರ ಹಿಂದೆ ಬಿಜೆಪಿಯ ಮಹತ್ವಾಕಾಂಕ್ಷೆಯ ಉದ್ದೇಶವಿತ್ತು. ಬೆನ್ನು ಬಾಗಿರುವ ನಿತ್ರಾಣ ವ್ಯಕ್ತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದಂತೆ ಮಾಡಿ, ಸರಿಯಾದ ಸಮಯ ಕಾದು, ನೆಲಕ್ಕೆ ಎತ್ತಿಬಿಸಾಕಿ, ಆತ ಮತ್ತೆಂದೂ ಮೇಲೇಳದಂತೆ ಮಾಡಿ, ಜೆಡಿಯು ನಿರ್ವಾತದ ಶಾಶ್ವತ ಲಾಭ ಪಡೆಯುವುದು ಅದರ ಉದ್ದೇಶವಾಗಿತ್ತು.

ಸಿಎಂ ಸ್ಥಾನವಿದ್ದರೂ ನಿತೀಶ್ ಅವರಿಂದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಅವರ ಮಂತ್ರಿಮಂಡಲದ ಬಿಜೆಪಿ ಸಚಿವರೇ ಸರಕಾರದ ವಿರುದ್ಧ, ಸಿಎಂ ವಿರುದ್ಧ ಹೇಳಿಕೆ ನೀಡಲಾರಂಭಿಸಿದರು. ತನ್ನ ಪಕ್ಷದ ಉಪಮುಖ್ಯಮಂತ್ರಿಯನ್ನು ಬಳಸಿಕೊಂಡು, ಮುಖ್ಯಮಂತ್ರಿಯನ್ನು ಮೂಲೆಗುಂಪು ಮಾಡಲು ಬಿಜೆಪಿ ಯತ್ನಿಸಿತು. ಸರಕಾರದ ಭಾಗವಾಗಿದ್ದರೂ ಬಿಜೆಪಿ ಅಧಿಕೃತ ವಿರೋಧಪಕ್ಷದಂತೆ ವರ್ತಿಸಲು ಶುರು ಮಾಡಿತು. ನಿತೀಶ್ ಕುಮಾರ್ ಅವರು ಬಿಹಾರಕ್ಕೆ ಹಿಂದುಳಿದ ರಾಜ್ಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದಾಗ, ಬಿಜೆಪಿ ಉಪಮುಖ್ಯಮಂತ್ರಿಯೇ ಅದಕ್ಕೆ ವಿರೋಧ ವ್ಯಕ್ತಪಡಿಸಿ ಕೇಂದ್ರ ಸರಕಾರದ ಪರವಾಗಿ ಮಾತನಾಡಿದರು. ಬಿಜೆಪಿ ಸಚಿವ ಸಾಮ್ರಾಟ್ ಚೌಧರಿ, ಹರ್ಯಾಣ ಮಾದರಿಯಲ್ಲಿ ಬಿಹಾರದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಬೇಕು ಎಂದು ಒತ್ತಡ ತಂದು ನಿತೀಶ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯ, ಸಾಮ್ರಾಟ್ ಅಶೋಕ ಮತ್ತು ಔರಂಗಜೇಬನ ನಡುವಿನ ಹೋಲಿಕೆ, ಮದ್ರಸಾಗಳಲ್ಲಿ ಬ್ಲಾಂಕೆಟ್‌ಗಳನ್ನು ನಿಷೇಧಿಸಲು ಒತ್ತಾಯ, ಸದನದಲ್ಲಿ ರಾಷ್ಟ್ರಗೀತೆಯ ಚರ್ಚೆ ಇಂತಹ ತನ್ನ ಅಜೆಂಡಾಗಳನ್ನು ಮುಂದಿಟ್ಟುಕೊಂಡು ನಿತೀಶ್ ಕುಮಾರ್ ಮತ್ತು ಜೆಡಿಯು ಪಕ್ಷಕ್ಕೆ ‘ಹಿಂದೂವಿರೋಧಿ’ ಪಟ್ಟಕಟ್ಟಲು ಬಿಜೆಪಿ ಯತ್ನಿಸಿತು. ಬಿಜೆಪಿಯ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ‘‘ನಿತೀಶ್ ಕುಮಾರ್ ಇದೇ ಧೋರಣೆ ಮುಂದುವರಿಸಿದರೆ 76 ಲಕ್ಷ ಬಿಜೆಪಿ ಕಾರ್ಯಕರ್ತರು ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ’’ ಎಂದು ಎಚ್ಚರಿಕೆ ನೀಡಿದ್ದು ಸಹ ಇದೇ ಕಾರ್ಯತಂತ್ರದ ಭಾಗ.

ಬಿಜೆಪಿಯ ಈ ತಂತ್ರಗಾರಿಕೆಗಳಿಂದಾಗಿ ಮುಂದಿನ ಚುನಾವಣೆಯಲ್ಲಿ ತನ್ನ ಪಕ್ಷ ಅನುಭವಿಸಬೇಕಾದ ಹೀನಾಯ ಪರಿಸ್ಥಿತಿಯನ್ನು ಮನಗಂಡ ನಿತೀಶ್, ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು, ತನ್ನ ಹಳೆಯ ಮಿತ್ರಕೂಟವಾದ ಮಹಾಘಟಬಂಧನ್ ಸೇರಿ, ಆರ್‌ಜೆಡಿ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಆಂಧ್ರದ ಚಂದ್ರಬಾಬು ನಾಯ್ಡು, ಎನ್‌ಡಿಎ ತೊರೆದು ಬರುವಾಗ ಇಂತಹದ್ದೇ ಅನುಭವವನ್ನು ಹಂಚಿಕೊಂಡಿದ್ದರು. ‘‘ಪ್ರಧಾನಿ ಮೋದಿಯವರು ಎನ್‌ಡಿಎ ಮಿತ್ರಪಕ್ಷದ ನಾಯಕನಾದ ನನ್ನ ಭೇಟಿಗೂ ಅವಕಾಶ ಕೊಡದೆ, ಅವಮಾನ ಮಾಡಿದ್ದಾರೆ’’ ಎಂದು ನಾಯ್ಡು ಆರೋಪಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಸಾಮಾನ್ಯವಾಗಿ ಎರಡು ಅಥವಾ ಹಲವು ಪಕ್ಷಗಳು ಮೈತ್ರಿ ಮಾಡಿಕೊಂಡಾಗ, ಆ ಮೈತ್ರಿಯಿಂದ ಯಾವುದೋ ಒಂದು ಪಕ್ಷಕ್ಕೆ ಲಾಭವಾಗಬಹುದು; ಮತ್ತೊಂದು ಪಕ್ಷಕ್ಕೆ ನಷ್ಟವಾಗಬಹುದು. ಆದರೆ ಬಿಜೆಪಿ ಜೊತೆಗಿನ ಮೈತ್ರಿಯ ವಿಚಾರದಲ್ಲಿ ಲಾಭ ನಿರಂತರವಾಗಿ ಬಿಜೆಪಿಗೆ ಆಗುತ್ತಾ ಬಂದರೆ, ನಷ್ಟದ ಬಾಬತ್ತೇನಿದ್ದರೂ ಮೈತ್ರಿ ಪಕ್ಷಗಳಿಗೆ! ಯಾಕೆ ಹೀಗೆ?

ಇದಕ್ಕೆ ಮುಖ್ಯವೆನಿಸುವ ಕಾರಣವೊಂದಿದೆ. ಬಿಜೆಪಿಯ ರಾಜಕಾರಣ ಎರಡು ಬಗೆಯದ್ದು. ಮೊದಲನೆಯದು, ನಮಗೆಲ್ಲ ನೇರವಾಗಿ ಕಾಣುವಂತೆ ಬಿಜೆಪಿಯ ರಾಜಕೀಯ ನಾಯಕರು ನಡೆಸುವ ಚುನಾವಣಾ ರಾಜಕಾರಣವಾದರೆ, ಎರಡನೆಯದು ಅದರ ಮೂಲ ಬೆನ್ನೆಲುಬಾದ ಆರೆಸ್ಸೆಸ್ ಮತ್ತು ಸಂಘ ಪರಿವಾರಗಳು ನಡೆಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಜಕಾರಣ! ಚುನಾವಣಾ ಕೇಂದ್ರಿತ ರಾಜಕಾರಣದಲ್ಲಿ, ಹೆಚ್ಚೆಂದರೆ ಆಯಾ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರವರೆಗೆ ನೀವು ರಾಜಕಾರಣದ ಪ್ರಭಾವ ಮತ್ತು ತಂತ್ರಗಾರಿಕೆಗಳನ್ನು ವಿಸ್ತರಿಸಬಹುದು. ಹಾಗಾಗಿ ಇಲ್ಲಿ ರಾಜಕೀಯ ನಾಯಕ ಅಥವಾ ವ್ಯಕ್ತಿಗಳು ಮುಖ್ಯವಾಗುತ್ತಾರೆ. ಆದರೆ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಆಯಾಮಗಳನ್ನು ಮುಂದಿಟ್ಟುಕೊಂಡು ಸಂಘ ಪರಿವಾರ ನಡೆಸುವ ಸಂಕೀರ್ಣ ರಾಜಕಾರಣವು ರಾಜಕೀಯ ವ್ಯಕ್ತಿಗಳ ಹಂಗು ಇಲ್ಲದೆ ನೇರವಾಗಿ ಜನಸಮೂಹ, ಅರ್ಥಾತ್ ಮತದಾರರ ಮನಸ್ಥಿತಿಯನ್ನೇ ಪ್ರಭಾವಿಸುವಷ್ಟು ಆಳಕ್ಕೆ ಇಳಿಯುತ್ತವೆ. ಮೈತ್ರಿಯ ನೆಪದಲ್ಲಿ ಬಿಜೆಪಿಗೆ ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಅವಕಾಶ ಮಾಡಿಕೊಡುತ್ತವೆಯೋ, ಅಲ್ಲೆಲ್ಲ ಆ ಅಧಿಕಾರವನ್ನು ಬಳಸಿಕೊಂಡು ಸಂಘ ಪರಿವಾರದ ಪ್ರತ್ಯಕ್ಷ ಮತ್ತು ಪರೋಕ್ಷ ಶಾಖೆಗಳನ್ನು, ಸಂಘಟನೆಗಳನ್ನು ವ್ಯವಸ್ಥಿತವಾಗಿ ವಿಸ್ತರಿಸಲಾಗುತ್ತದೆ. ಯಾವ ಧರ್ಮ ಮತ್ತು ರಾಷ್ಟ್ರೀಯತೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದೋ ಅಂತಹವುಗಳನ್ನೇ ಬಿಜೆಪಿ ಮತ್ತು ಸಂಘ ಪರಿವಾರಗಳು ತಮ್ಮ ರಾಜಕೀಯ ದಾಳ ಮಾಡಿಕೊಂಡಿವೆ. ಇವು ಭಾವನಾತ್ಮಕ ಸಂಗತಿಗಳು. ಭಾರತೀಯರಾದ ನಾವು ಇಂತಹ ಭಾವನಾತ್ಮಕ ಸಂಗತಿಗಳಿಗೆ ಬಹುಬೇಗ ಸ್ಪಂದಿಸುತ್ತೇವೆ. ಇವು ಮುನ್ನೆಲೆಗೆ ಬಂದಾದ ನಂತರ, ಬೇರೆಲ್ಲ ರಾಜಕೀಯ ಸಿದ್ಧಾಂತ ಮತ್ತು ಅಸ್ತ್ರಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಾರಂಭಿಸುತ್ತವೆ; ಜಾತಿ ಕೂಡಾ!. ಇದೇ, ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ಜೊತೆಗಿನ ಮೈತ್ರಿಯಿಂದ ಮುಳುವಾಗುವ ಸಂಗತಿ.

ಆರೇಳು ದಶಕಗಳ ಕಾಲ ರಾಜಕಾರಣವನ್ನು ಕಂಡುಂಡ ದೇವೇಗೌಡರಿಗೆ ಇದು ಅರ್ಥವಾಗದ ಸಂಗತಿಯೇನಲ್ಲ. ಆದರೆ, ಈ ಮಾತನ್ನು ಕುಮಾರಸ್ವಾಮಿಯವರ ವಿಚಾರದಲ್ಲಿ ಹೇಳಲಾಗದು. ಇಳಿವಯಸ್ಸಿನಲ್ಲಿರುವ ದೇವೇಗೌಡರು ಯಾವ್ಯಾವ ಬಗೆಯ ಒತ್ತಡಕ್ಕೆ ಸಿಲುಕಿದ್ದಾರೋ ಗೊತ್ತಿಲ್ಲ. ಆದರೆ, ಜೆಡಿಎಸ್ ಪಕ್ಷ ಈಗ ಮಾಡಿಕೊಂಡಿರುವ ಮೈತ್ರಿಯಿಂದ ಈಸೋಫನ ಕಥೆಯ ಕುದುರೆಯಂತಾಗುವ ಅಪಾಯವನ್ನು ತಳ್ಳಿಹಾಕಲಿಕ್ಕಾಗದು. ಯಾಕೆಂದರೆ, ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ತಪ್ಪಿಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ‘ನಾನು ದೊಡ್ಡ ತಪ್ಪು ಮಾಡಿದೆ. ಅದರಿಂದ ಪಾಠ ಕಲಿತಿದ್ದೇನೆ’ ಎಂದು ಕುಮಾರಸ್ವಾಮಿಯವರು ಆಡಿದ ಪಶ್ಚಾತ್ತಾಪದ ಮಾತುಗಳಾಗಲಿ; ‘ಮತ್ತೊಮ್ಮೆ ನನ್ನ ಮಗ ಬಿಜೆಪಿ ಜೊತೆ ಸಖ್ಯ ಮಾಡಿದರೆ, ಆತ ನನ್ನ ಮಗನೇ ಅಲ್ಲವೆಂದು ಸಂಬಂಧ ಕಡಿದುಕೊಳ್ಳುತ್ತೇನೆ’ ಎಂದು ದೇವೇಗೌಡರು ಟಿವಿ ಸಂದರ್ಶನದಲ್ಲಿ ಹೇಳಿದ ಮಾತಾಗಲಿ ಇನ್ನೂ ಹಸಿರಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಗಿರೀಶ್ ತಾಳಿಕಟ್ಟೆ

contributor

Similar News