ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ?
ಎಂಥದೇ ಸಂದರ್ಭದಲ್ಲೂ ಕೊಪ್ಪಳ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಬೀದರ್- ಹೈದರಾಬಾದ್ ಕರ್ನಾಟಕದ ಈ ಐದು ಸೀಟುಗಳಲ್ಲಿ ಐದಕ್ಕೆ ಐದನ್ನೂ ಕಳೆದುಕೊಂಡಿರಲಿಲ್ಲ. ಅದರ ಜೊತೆ ದಾವಣಗೆರೆಯನ್ನೂ ಕಳೆದುಕೊಂಡೆವು ಎಂದು ಸೋಮಣ್ಣ ಹೇಳಿದ್ದಾರೆ. ಅದು ಯಡಿಯೂರಪ್ಪ ಹಾಗೂ ಅವರ ಮಗ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನೇ ಟಾರ್ಗೆಟ್ ಮಾಡಿ ಹೇಳಿದ ಹಾಗಿತ್ತು.
ರಾಜ್ಯದಲ್ಲಿ ಆಡಳಿತ ನಡೆಸುತ್ತಾ ಇರುವ ಕಾಂಗ್ರೆಸ್ ಒತ್ತಡದಲ್ಲಿದೆ. ಸರಕಾರ ಇದ್ದೂ, ಗ್ಯಾರಂಟಿಗಳನ್ನು ಕೊಟ್ಟೂ ಎರಡಂಕಿ ಎಂಪಿ ಸ್ಥಾನ ಗೆಲ್ಲಲಾಗಲಿಲ್ಲ ಎಂಬ ನೋವು ಒಂದು ಕಡೆ.. ಎಲ್ಲ ಆಂತರಿಕ ಗೊಂದಲಗಳ ನಡುವೆಯೂ ಬಿಜೆಪಿ ಹದಿನೇಳು ಸೀಟು ಗೆದ್ದಿದ್ದು ಇನ್ನೊಂದೆಡೆ...
ಸಾಲದ್ದಕ್ಕೆ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಧೂಳೀಪಟವಾಗಿದ್ದ ಜೆಡಿಎಸ್ ಎರಡು ಸೀಟು ಗೆದ್ದು ಹೊಸ ಚೈತನ್ಯ ತುಂಬಿಸಿಕೊಂಡಿದ್ದೂ ಕಾಂಗ್ರೆಸ್‌ಗೆ ಕಿರಿಕಿರಿ ತಂದಿದೆ.
ಆದರೆ ಹದಿನೇಳು ಸೀಟುಗಳನ್ನು ಗೆದ್ದರೂ ಬಿಜೆಪಿಯೊಳಗೆ ಮಾತ್ರ ಸಂಭ್ರಮ ಕಾಣುತ್ತಿಲ್ಲ.
ಭಾರೀ ಬಹುಮತದ ಕಾಂಗ್ರೆಸ್ ಸರಕಾರ ಇರುವಾಗಲೂ, ಗ್ಯಾರಂಟಿಗಳ ಪ್ರಭಾವವನ್ನೂ ಮೀರಿ ಪಕ್ಷ 17 ಸೀಟು ಗೆದ್ದಿದೆ ಎಂಬುದಕ್ಕೆ ವಿಜಯೇಂದ್ರ ಅವರಿಗೆ ಯಾರೂ ಕ್ರೆಡಿಟ್ ಕೊಟ್ಟಿಲ್ಲ.
ಹದಿನೇಳು ಸೀಟು ಗೆದ್ದಿದ್ದನ್ನು ಬದಿಗಿಟ್ಟು ಸೋತ ಒಂದು ಸೀಟನ್ನೇ ಹಿಡಿದುಕೊಂಡು ರಾಜ್ಯಾಧ್ಯಕ್ಷರ ವಿರುದ್ಧವೇ ಮಾತನಾಡುತ್ತ್ತಾ ಇರುವುದರ ಹಿಂದೆ ಏನಿದೆ ರಾಜಕೀಯ?
ರಾಜ್ಯ ಬಿಜೆಪಿಯ ಮೇಲಿನ ಬಿಎಸ್‌ವೈ ಕುಟುಂಬದ ಹಿಡಿತದ ಬಗ್ಗೆ ಪಕ್ಷದೊಳಗೇ ತಕರಾರುಗಳು ಮತ್ತು ವಿರೋಧ ಹೊಸದೇನೂ ಅಲ್ಲ. ಆದರೂ, ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಬಿಟ್ಟರೆ ಬೇರೆ ಗತಿಯಿಲ್ಲ ಎಂಬ ಸ್ಥಿತಿಯಿದೆ.ಅವರನ್ನು ಬದಿಗೆ ಸರಿಸಲು ನೋಡಿ ಅದು ಮತ್ತೆ ಮತ್ತೆ ಏಟು ತಿಂದದ್ದೂ ಆಗಿದೆ.
ಇದೆಲ್ಲದರ ನಡುವೆಯೂ ರಾಜ್ಯ ಬಿಜೆಪಿ ನಾಯಕರುಗಳಲ್ಲಿಯೇ ಕೆಲವರು ಬಿಎಸ್‌ವೈ ಮತ್ತವರ ಕುಟುಂಬದ ಹಿಡಿತದ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಅವರ ವಿರುದ್ಧ ಟೀಕೆ, ಲೇವಡಿ ಮಾಡುತ್ತಲೇ ಬಂದಿದ್ದಾರೆ.
ಹಿಂದೆ ಯತ್ನಾಳ್, ಈಶ್ವರಪ್ಪ ಥರದವರು ಹೆಚ್ಚು ಆಡಿಕೊಳ್ಳುತ್ತಿದ್ದರು. ಆದರೆ ಈಗ ಸೋಮಣ್ಣ ಕೂಡ ಮಾತಾಡಿದ್ದಾರೆ, ಶಾಸಕ ಬಿ.ಪಿ. ಹರೀಶ್ ಮಾತಾಡಿದ್ದಾರೆ.
ಬಹುಶಃ ಇದರೊಂದಿಗೆ ಬಿಎಸ್‌ವೈ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಮತ್ತೊಂದು ಸುತ್ತಿನ ದಾಳಿಗೆ ಒಂದು ಸಶಕ್ತ ತಯಾರಿ ಆಗಿದೆಯೇ ಎಂಬ ಅನುಮಾನ ಬರುವಂತಾಗಿದೆ.
ಇದಕ್ಕೆಲ್ಲ ನೆಪವಾಗಿ ಹಿನ್ನೆಲೆಯಲ್ಲಿರುವುದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿನ ಪಕ್ಷದ ಸೋಲಿನ ಕುರಿತ ಚರ್ಚೆ.
ಇದೇ ವಿಚಾರ ತೆಗೆದುಕೊಂಡು, ಮೊನ್ನೆ ಬಿಜೆಪಿ-ಜೆಡಿಎಸ್ ಸಂಸದರ ಸಭೆಯಲ್ಲೇ ಕೇಂದ್ರ ಸಚಿವ ವಿ. ಸೋಮಣ್ಣ ಮಾತಾಡಿರುವುದು, ಯಡಿಯೂರಪ್ಪ ಮತ್ತವರ ಪುತ್ರನ ತಪ್ಪುಗಳ ಬಗ್ಗೆ ಸ್ಪಷ್ಟವಾಗಿ ಬೆರಳು ತೋರಿಸಿದ ರೀತಿಯಲ್ಲಿತ್ತು. ವೇದಿಕೆಯಲ್ಲೇ ವಿಜಯೇಂದ್ರಗೆ ಪಾಠ ಮಾಡಿದ ರೀತಿಯಲ್ಲಿತ್ತು.
‘‘ಇನ್ನು ಮೇಲಾದರೂ ಕೆಲಸಕ್ಕೆ ಬಾರದವರನ್ನು ಕಿತ್ತುಹಾಕಿ. ಯಾರೋ ಮಾಡಿದ ಪಾಪಕ್ಕೆ ಯಾರನ್ನೋ ಗುರಿ ಮಾಡಬೇಡಿ’’ ಎಂದು ಸೋಮಣ್ಣ ಹೇಳಿರುವುದು ಇಬ್ಬರನ್ನೂ ತಿವಿದ ಹಾಗಿದೆ.
ದಾವಣಗೆರೆ ಸೋಲನ್ನು ಪ್ರಸ್ತಾಪಿಸಿ ಸೋಮಣ್ಣ ಹೀಗೆ ಮಾತನಾಡಿದ್ದಾರೆ. ಸೋಮಣ್ಣ ಈ ಮಾತುಗಳನ್ನು ಯಡಿಯೂರಪ್ಪ ಇದ್ದ ವೇದಿಕೆಯಲ್ಲಿಯೇ ಹೇಳಿದರೆಂಬುದನ್ನು ಗಮನಿಸಬೇಕು.
ಆದರೆ ಸೋಮಣ್ಣ ಮಾತಿಗೆ ಯಡಿಯೂರಪ್ಪ? ಅಲ್ಲೇ ಒಂದು ತಿರುಗೇಟು ಕೊಟ್ಟುಬಿಟ್ಟರು.
‘‘ನಾವು ಇನ್ನೂ ಎರಡು ಮೂರು ಕ್ಷೇತ್ರ ಗೆಲ್ಲಬಹುದಿತ್ತು. ಸೀಟ್ ಕೊಡುವಲ್ಲಿ ವ್ಯತ್ಯಾಸ ಆಯ್ತು’’ ಎಂದ ಯಡಿಯೂರಪ್ಪ, ಟಿಕೆಟ್ ಕೊಟ್ಟ ವರಿಷ್ಠರ ತಲೆಗೆ ಆ ಸೋಲುಗಳ ಹೊಣೆ ಹೊರಿಸಿದ್ದರು.
ಎಂಥದೇ ಸಂದರ್ಭದಲ್ಲೂ ಕೊಪ್ಪಳ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಬೀದರ್- ಹೈದರಾಬಾದ್ ಕರ್ನಾಟಕದ ಈ ಐದು ಸೀಟುಗಳಲ್ಲಿ ಐದಕ್ಕೆ ಐದನ್ನೂ ಕಳೆದುಕೊಂಡಿರಲಿಲ್ಲ. ಅದರ ಜೊತೆ ದಾವಣಗೆರೆಯನ್ನೂ ಕಳೆದುಕೊಂಡೆವು ಎಂದು ಸೋಮಣ್ಣ ಹೇಳಿದ್ದಾರೆ. ಅದು ಯಡಿಯೂರಪ್ಪ ಹಾಗೂ ಅವರ ಮಗ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನೇ ಟಾರ್ಗೆಟ್ ಮಾಡಿ ಹೇಳಿದ ಹಾಗಿತ್ತು.
ಇನ್ನೊಂದೆಡೆ, ಬಿಜೆಪಿ ಶಾಸಕ ಬಿ.ಪಿ. ಹರೀಶ್ ನೇರಾ ನೇರ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ಧಾರೆ.
‘‘ಶಾಮನೂರು ಶಿವಶಂಕರಪ್ಪ ಜೊತೆ ಒಳಒಪ್ಪಂದ ಮಾಡಿಕೊಂಡ ಪರಿಣಾಮ ದಾವಣಗೆರೆಯಲ್ಲಿ ಬಿಜೆಪಿ ಸೋತಿದೆ’’ ಎಂದು ನೇರವಾಗಿಯೇ ಹರಿಹರದ ಬಿಜೆಪಿ ಶಾಸಕ ಹರೀಶ್ ಆರೋಪ ಮಾಡಿದ್ದಾರೆ.
‘‘ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಹೀಗಾದರೆ ಪ್ರಾಮಾಣಿಕ ಕಾರ್ಯಕರ್ತರು ಏನು ಮಾಡಲು ಸಾಧ್ಯ?’’ ಎಂದು ಪ್ರಶ್ನಿಸುವುದರೊಂದಿಗೆ ಒಂದು ನೇರಾ ನೇರ ಕದನಕ್ಕೆ ಅವರು ಅಣಿಯಾದ ಸೂಚನೆಯನ್ನಂತೂ ಕೊಟ್ಟಂತಿದೆ.
ದಾವಣಗೆರೆ ಕ್ಷೇತ್ರ ಬಿಜೆಪಿ ಕೈತಪ್ಪಲು ಭ್ರಷ್ಟರ ವ್ಯವಸ್ಥಿತ ಪಿತೂರಿ ನಡೆಯಿತು. ಯಾರಾದರೊಬ್ಬರು ಸತ್ಯ ಹೇಳಲೇಬೇಕಿದೆ. ಇಲ್ಲದೇ ಇದ್ದರೆ ನಾವು ಮಾಡಿದ್ದೇ ಸರಿ ಎಂದು ಹೈಕಮಾಂಡ್‌ಗೆ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ದುಷ್ಟಶಕ್ತಿಗಳು ಮೆರೆಯುತ್ತವೆ ಎಂದು ತಿವಿದಿದ್ದಾರೆ.
ಉಚ್ಚಾಟಿತ ಗುರುಸಿದ್ದನಗೌಡ, ಅವರ ಪುತ್ರ ರವೀಂದ್ರ, ಮಾಡಾಳ್ ಮಲ್ಲಿಕಾರ್ಜುನ, ರೇಣುಕಾಸ್ವಾಮಿ, ವಿರೂಪಾಕ್ಷಪ್ಪ ಅವರುಗಳ ಜೊತೆ ವಿಜಯೇಂದ್ರ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದರೆಂಬುದನ್ನು ಕೂಡ ಹರೀಶ್ ಹೇಳಿದ್ದಾರೆ.
‘‘ನನ್ನನ್ನೂ ಜಿ.ಎಂ. ಸಿದ್ದೇಶ್ ಅವರನ್ನೂ ವಿಜಯೇಂದ್ರ ಬೆಂಗಳೂರಿಗೆ ಕರೆಸಿದ್ದರು. ಆಗ ಸಿದ್ದೇಶ್, ಉಚ್ಚಾಟನೆಯಾದವರ ಜೊತೆ ಸಭೆ ನಡೆಸುವುದು, ಅವರು ಬಿಜೆಪಿ ಕಚೇರಿಗೆ ಬರೋದು ನ್ಯಾಯವೇ’’ ಎಂದು ಕೇಳಿದರು. ಅದಕ್ಕೆ ‘‘ಅವರನ್ನು ಪಕ್ಷಕ್ಕೆ ಆಗಲೇ ಸೇರಿಸಿಕೊಂಡಿದ್ದೇವೆ’ ಎಂಬ ಉತ್ತರ ಬಂದಿತ್ತು’’ ಎಂದು ಹರೀಶ್ ಹೇಳಿದ್ದಾರೆ.
‘‘ನಾನು ಇದರ ಬಗ್ಗೆಯೆಲ್ಲ ಮಾತಾಡಿದರೆ ಮಾಡಾಳು ಪುತ್ರ ಮಲ್ಲಿಕಾರ್ಜುನ್ ಹುಚ್ಚು ಬಿಡಿಸುತ್ತೇನೆ ಎಂದು ನನಗೇ ಬೆದರಿಕೆ ಹಾಕುತ್ತಾರೆ. ಆದರೆ, ಕಳೆದ ಅವಧಿಯಲ್ಲಿ ಅನೇಕ ಹಗರಣ ಮಾಡಿದ ಹಲವಾರು ಶಾಸಕರು, ಹಲವಾರು ಸಚಿವರುಗಳಲ್ಲಿ ಅವರ ತಂದೆ ಕೂಡ ಒಬ್ಬರು ಎಂಬುದನ್ನು ಅವರು ಮರೆಯಬಾರದು’’ ಎಂದು ಹರೀಶ್ ಎಚ್ಚರಿಸಿದ್ದಾರೆ.
ಹೀಗೆ ದಾವಣಗೆರೆ ಸೋಲಿನ ಅಸಲಿ ಕಾರಣ ಬಾಯ್ಬಿಟ್ಟಿರುವ ಹರೀಶ್, ಮೋದಿಯನ್ನು ಸೋಲಿಸಿದವರು ದಿಲ್ಲಿಗೆ ಹೋಗಿಬರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ವಿಜಯೇಂದ್ರ ದರ್ಪದಿಂದ ಮಾತಾಡುತ್ತಿದ್ದರೆಂದೂ, ಯಡಿಯೂರಪ್ಪ ಮೌನವಾಗಿ ಕೂತಿದ್ದರೆಂದೂ ಹರೀಶ್ ಹೇಳಿದ್ದಾರೆ.
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಕೂಡ ತಮ್ಮ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದರ ಸುಳಿವು ಕೊಡುವ ಹಾಗೆ ಮಾತಾಡಿದ್ದಾರೆ.
ಕರ್ನಾಟಕ ವೀರಶೈವ ಮಹಾಸಭಾ ಅಂದರೆ ಮೂವರ ಕುಟುಂಬದ ಒಂದು ಸಂಸ್ಥೆಯಾಗಿದೆ ಎಂದು ಅವರು ಟೀಕಿಸಿದ್ಧಾರೆ.
‘‘ಬಿಎಸ್‌ವೈ ಬಿ ಅಂದ್ರೆ ಭೀಮಣ್ಣ ಖಂಡ್ರೆ. ಎಸ್ ಎಂದರೆ ಶಾಮನೂರು ಶಿವಶಂಕರಪ್ಪ, ವೈ ಅಂದರೆ ಯಡಿಯೂರಪ್ಪ’’ ಎಂಬುದು ಯತ್ನಾಳ್ ವಿವರಣೆ.
‘‘ಅವರು ಮೂರು ಮಂದಿ, ಮಕ್ಕಳು, ಮರಿಮೊಮ್ಮಕ್ಕಳು, ಗಂಡ, ಹೆಂಡತಿ, ಸೊಸೆ ಎಲ್ಲರೂ ಎಂಎಲ್‌ಎ, ಎಂಪಿ, ಎಂಎಲ್‌ಸಿ ಎಲ್ಲವೂ ಆಗಬೇಕು. ನಾವು ಅವರ ಮನೆಯ ಕಸ ಹೊಡೆಯಬೇಕು’’ ಎಂದು ಯತ್ನಾಳ್ ನೇರವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಈ ನಾಯಕರ ಮಾತುಗಳು ನೇರವಾಗಿ ಬಿಎಸ್‌ವೈ ಮತ್ತವರ ಕುಟುಂಬವನ್ನು ಗುರಿಯಾಗಿಸಿಕೊಂಡಿರುವುದನ್ನು ನೋಡಿದರೆ, ನಿಧಾನವಾಗಿ ಬಿಜೆಪಿ ಹಳೇ ತಂತ್ರವನ್ನು ಮತ್ತೆ ಜೀವಂತಗೊಳಿಸುತ್ತಿದೆಯೇ ಎಂಬ ಅನುಮಾನ ಬರುತ್ತದೆ.
ಹೇಗೂ ಚುನಾವಣೆ ಇಲ್ಲದ ಈ ಹೊತ್ತಿನಲ್ಲಿ ನಿಧಾನವಾಗಿ ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ಪಕ್ಷದೊಳಗೆ ದಿಟ್ಟ ಮಾತುಗಳು ಹರಿದಾಡುವ ಹಾಗೆ ಮಾಡಿ, ಪ್ರಾಯೋಗಿಕವಾಗಿ ಅದರ ಸಾಧ್ಯಾಸಾಧ್ಯತೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆಯೇ? ಯಡಿಯೂರಪ್ಪ ಮತ್ತವರ ಪುತ್ರನ ವಿರುದ್ಧ ನಿರ್ದಾಕ್ಷಿಣ್ಯವಾಗಿ ಮಾತಾಡಬಲ್ಲಷ್ಟು ಧೈರ್ಯವನ್ನು ಸೋಮಣ್ಣನವರಲ್ಲಿ ದಿಲ್ಲಿ ನಾಯಕರೇ ತುಂಬಿದ್ದಾರೆಯೆ?
ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಹಿರಿಯ ಸಂಸದ ಗದ್ದಿಗೌಡರ್ ಅವರನ್ನೆಲ್ಲ ಬಿಟ್ಟು ಸೋಮಣ್ಣ ಅವರನ್ನೇ ವರಿಷ್ಠರು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿರುವ ಹಿಂದಿರುವ ಲೆಕ್ಕಾಚಾರಗಳು ಏನೇನು?
ಹಾಗಾದರೆ ಮತ್ತೊಂದು ಚುನಾವಣೆ ಎದುರಿಸುವ ಹೊತ್ತಿಗೆ ರಾಜ್ಯ ಬಿಜೆಪಿಯ ಸ್ವರೂಪವೇ ಬದಲಾಗಿಬಿಟ್ಟಿರುತ್ತದೆಯೇ? ಇವು ಸದ್ಯಕ್ಕೆ ಮೂಡುತ್ತಿರುವ ಕುತೂಹಲಗಳಾಗಿವೆ.