ಪ್ಯಾರಿಸ್ ಒಲಿಂಪಿಕ್ಸ್ ಕಲಿಸುತ್ತಿರುವ ಮಾನವೀಯತೆಯ ಪಾಠಗಳು
ಕ್ರೀಡೆಯಲ್ಲಿ ಆಟವನ್ನು ಮೀರಿದ್ದು ಮಾನವೀಯ ಸಂಬಂಧಗಳು ಮತ್ತು ಮನುಷ್ಯತ್ವ ಎಂದು ಸಾಧಿಸುವ ಘಟನೆಗಳು ಈ ಸಲದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದಿವೆ.
ಭಾರತದ ಹೊಸ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ಸ್‌ನಲ್ಲಿ ಥೈವಾನ್ ದೇಶದ ಆಟಗಾರ ಚೌ ಟಿಯಾನ್ ಚೆನ್ ವಿರುದ್ಧ ಗೆದ್ದಾಗ ಸಂಭ್ರಮಿಸಲಿಲ್ಲ, ಯಾಕೆಂದರೆ ಟಿಯಾನ್ ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿ, ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರು. ಲಕ್ಷ್ಯ ಸೇನ್ ಅವರ ಈ ನಡೆ ಜಗತ್ತಿನ ಕ್ರೀಡಾ ಪ್ರೇಮಿಗಳ ಮೆಚ್ಚುಗೆ ಪಡೆಯಿತು.
ಇಂತಹದ್ದೇ ಮತ್ತೊಂದು ಘಟನೆ ಮಹಿಳಾ ಬ್ಯಾಡ್ಮಿಂಟನ್ ಪದಕ ವಿತರಣೆ ಸಂದರ್ಭದಲ್ಲಿ ನಡೆಯಿತು. ಬೆಳ್ಳಿ ಪದಕ ವಿಜೇತೆ, ಚೀನಾ ದೇಶದ ಹಿ ಬಿಂಗಿಯಾವೋ (ಸಿಂಧುರನ್ನು ಪ್ರೀ ಕ್ವಾರ್ಟರ್ ಫೈನಲ್ಸ್‌ನಲ್ಲಿ ಸೋಲಿಸಿದ್ದವರು) ಪದಕ ಪಡೆಯುವ ಸಂದರ್ಭದಲ್ಲಿ ಕೈಯಲ್ಲಿ ಸ್ಪ್ಯಾನಿಷ್‌ಪಿನ್ ಹಿಡಿದಿದ್ದರು. ಯಾಕೆಂದರೆ ಸೆಮಿಫೈನಲ್ಸ್‌ನಲ್ಲಿ ಆಕೆಯ ಎದುರಾಳಿ ಸ್ಪೇನ್‌ನ ಕೆರೊಲಿನಾ ಮರಿನ್ ಗೆಲುವಿನ ಹೊಸ್ತಿಲಿನಲ್ಲಿ ಇರುವಾಗ ಎಡವಿ ಬಿದ್ದು, ತೀವ್ರ ಗಾಯದೊಂದಿಗೆ ಪಂದ್ಯ ತ್ಯಜಿಸಬೇಕಾಯಿತು. ಮರಿನ್ ಆಟಕ್ಕೆ ಗೌರವ ಸಲ್ಲಿಸುವ ಸಲುವಾಗಿ ಹೀ ಬಿಂಗಿಯಾವೋ ಸ್ಪೇನ್ ದೇಶದ ಧ್ವಜದ ಪಿನ್ ಹಿಡಿದು ಪದಕ ಸ್ವೀಕರಿಸಿದರು.
ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಮೂರು ಜನ ಕಪ್ಪು ವರ್ಣೀಯ ಅತ್ಲೀಟ್‌ಗಳು ಮೊನ್ನೆ ಪದಕದ ವೇದಿಕೆಯಲ್ಲಿದ್ದರು. ಫ್ಲೋರ್ ಎಕ್ಸರ್‌ಸೈಸ್ ವಿಭಾಗದಲ್ಲಿ ಬ್ರೆಝಿಲ್‌ನ ರೆಬೆಕಾ ಅಂದ್ರಾದೆ, ಅಮೆರಿಕದ ಸಿಮೋನ್ ಬೈಲ್ಸ್ ಮತ್ತು ಜೋರ್ಡಾನ್ ಚಿಲೀಸ್ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರು.
ಮೊತ್ತಮೊದಲ ಬಾರಿಗೆ ಮುಖ್ಯ ಟೂರ್ನಮೆಂಟ್ ಒಂದರಲ್ಲಿ, ಈ ವಿಭಾಗದಲ್ಲಿ ಸಿಮೋನ್ ಬೈಲ್ಸ್ ಹೊರತಾಗಿ ಬೇರೆ ಅತ್ಲೀಟ್ ಒಬ್ಬರು ಚಿನ್ನ ಗೆದ್ದಿದ್ದು ಇದೇ ಮೊದಲು.
ಬ್ರೆಝಿಲ್‌ನ ರೆಬೆಕಾ ಅಂದ್ರಾದೆ ಪದಕ ಪಡೆಯಲು ನಿಂತಾಗ ಸಿಮೋನ್ ಬೈಲ್ಸ್ ಮತ್ತು ಜೋರ್ಡಾನ್ ಚಿಲೀಸ್ ಇಬ್ಬರೂ ಮಂಡಿಯೂರಿ ರೆಬೆಕಾ ಅಂದ್ರಾದೆಗೆ ನಮಿಸಿದ್ದು ವಿಶ್ವದ ಬಹುತೇಕ ಪ್ರಮುಖ ದಿನಪತ್ರಿಕೆಗಳಲ್ಲಿ ಚಿತ್ರದೊಂದಿಗೆ ಸುದ್ದಿಯಾಯಿತು.
ರೆಬೆಕಾಗೆ ಈ ಗೌರವ ಯಾಕೆ?
ಬ್ರೆಝಿಲ್‌ನ ರೆಬೆಕಾ ಅತ್ಯಂತ ಬಡತನದಲ್ಲಿ ಬೆಳೆದು ಬಂದವರು. ಅದಕ್ಕಿಂತ ಮುಖ್ಯವಾಗಿ ಮೂರು ಬಾರಿ ಬಲಗಾಲಿನ ಮೊಣಕಾಲ ಶಸ್ತ್ರಚಿಕಿತ್ಸೆಗೆ ಒಳಗಾದವರು (ACL knee Reconstrion surgery). ಒಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕ ಗೆದ್ದ ಬ್ರೆಝಿಲ್‌ನ ಕ್ರೀಡಾಪಟು.
ಇಂತಹ ರೆಬೆಕಾಗೆ ಗೌರವ ಸಲ್ಲಿಸಿದ ಸಿಮೋನ್ ಬೈಲ್ಸ್ ಮತ್ತು ಜೋರ್ಡಾನ್ ಚಿಲೀಸ್ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಮಹಿಳೆಯರ ನೂರು ಮೀಟರ್ ಓಟದ ಸ್ಪರ್ಧೆ ನಡೆಯುವಾಗ ದಕ್ಷಿಣ ಸುಡಾನ್ ದೇಶದ ಓಟಗಾರ್ತಿ ಲೂಸಿಯಾ ಮೋರಿಸ್ ಸ್ನಾಯು ಸೆಳೆತದಿಂದ ಮುಗ್ಗರಿಸಿ, ಓಟದ ನಡುವೆಯೇ ಬಿದ್ದರು. ಈ ಸಂದರ್ಭದಲ್ಲಿ ಉಳಿದ ಓಟಗಾರ್ತಿಯರು ಓಟ ಮುಗಿಸಿ ತೆರಳಿದರೆ, ಲಾವೋಸ್ ದೇಶದ ಓಟಗಾರ್ತಿ ಸಿಲಿನಾ ಪಾ ಆಪೆ ಗೆರೆ ಮುಟ್ಟಿದ ತಕ್ಷಣವೇ, ಟ್ರ್ಯಾಕ್‌ನಲ್ಲಿ ಬಿದ್ದು ನರಳಾಡುತ್ತಿದ್ದ ಲೂಸಿಯಾ ಬಳಿ ತೆರಳಿ ಆರೈಕೆ ಮಾಡತೊಡಗಿದರು. ವೈದ್ಯಕೀಯ ಸಿಬ್ಬಂದಿ ಬರುವವರೆಗೂ ಲೂಸಿಯಾ ಜೊತೆಗಿದ್ದು ಸಂತೈಸಿದರು. ಸಿಲಿನಾ ಪದಕ ಗೆಲ್ಲದೇ ಹೋದರೂ, ತನ್ನ ಹೃದಯವಂತಿಕೆಯಿಂದ ಕೋಟ್ಯಂತರ ಜನರ ಹೃದಯ ಗೆದ್ದರು.
ಇದೇ ರೀತಿ ಅತ್ಯಂತ ತುರುಸಿನ ಹಣಾಹಣಿಗೆ ಸಾಕ್ಷಿಯಾಗಿದ್ದ ಮಹಿಳೆಯರ ರಗ್ಬಿ (ರಗ್ಬಿ ಸೆವನ್ಸ್) ಆಟದಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ನ್ಯೂಝಿಲ್ಯಾಂಡ್, ಕೆನಡಾ ಮತ್ತು ಅಮೆರಿಕದ ಆಟಗಾರ್ತಿಯರು ಪರಸ್ಪರರ ಹೆಗಲು ಕೊಟ್ಟು ಒಟ್ಟಾಗಿ ಪದಕದ ವೇದಿಕೆಯಲ್ಲಿ ಕಾಣಿಸಿಕೊಂಡು ಕ್ರೀಡೆಗಿಂತ ದೊಡ್ಡದು ಭಾವೈಕ್ಯ ಎಂದು ತೋರಿಸಿಕೊಟ್ಟರು.