ವಿಶ್ವಕಪ್: ಭಾರತದ ಸೋಲಿಗೆ ಕಾರಣವಾದ ಮಹತ್ವದ ತಿರುವುಗಳು

Update: 2023-11-20 03:17 GMT

Photo: twitter.com/ANI

ಅಹ್ಮದಾಬಾದ್: ಪ್ರಸಕ್ತ ವಿಶ್ವಕಪ್ ಗೆಲ್ಲುವ ಭಾರತ ಕ್ರಿಕೆಟ್ ತಂಡದ ಕನಸು ನುಚ್ಚು ನೂರಾಗಿದ್ದು, ಭಾನುವಾರ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೇವಲ 240 ರನ್‍ಗಳಿಗೆ ಆಲೌಟ್ ಆದ ರೋಹಿತ್ ಪಡೆ, ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‍ಗಳ ಸೋಲು ಅನುಭವಿಸಿದೆ. ಫೈನಲ್‍ನಲ್ಲಿ ಭಾರತದ ಸೋಲಿಗೆ ಕಾರಣವಾದ ಪ್ರಮುಖ ಐದು ಅಂಶಗಳು ಇಲ್ಲಿವೆ.

ಶುಭ್‍ಮನ್ ಗಿಲ್ ವೈಫಲ್ಯ: ನಿಧಾನ ಪಿಚ್‍ನಲ್ಲಿ ಬ್ಯಾಟಿಂಗ್‍ಗೆ ಆಹ್ವಾನಿಸಲ್ಪಟ್ಟ ಭಾರತದ ಬ್ಯಾಟ್ಸ್ ಮನ್‍ಗಳು ಭರ್ಜರಿ ಹೊಡೆತಗಳಲ್ಲಿ ವಿಫಲರಾದರು. ಒಂದೆಡೆ ರೋಹಿತ್ ಶರ್ಮಾ ಸರಾಗವಾಗಿ ಬ್ಯಾಟಿಂಗ್ ಮಾಡುತ್ತಿದ್ದರೆ ಶುಭ್‍ಮನ್‍ ಗಿಲ್, ಭರ್ಜರಿ ಆರಂಭ ಒದಗಿಸಲು ಸಾಧ್ಯವಾಗಲಿಲ್ಲ. ಈ ಹಿಂದಿನ ಅಜೇಯ 10 ಪಂದ್ಯಗಳಲ್ಲಿ ಭರ್ಜರಿ ಆರಂಭ ಯಶಸ್ಸಿನ ಸೂತ್ರವಾಗಿತ್ತು.

ಗಿಲ್ ಪತನದ ಬಳಿಕವೂ ರೋಹಿತ್ ಶರ್ಮಾ ತನ್ನ ವೇಗವನ್ನು ಕಾಯ್ದುಕೊಂಡರು. 10ನೇ ಓವರ್ ನಲ್ಲಿ ಔಟ್ ಆಗುವ ಮುನ್ನ 31 ಎಸೆತಗಳಲ್ಲಿ 47 ರನ್ ಸೇರಿಸಿದರು. ಈ ಹಂತದಲ್ಲಿ 2 ವಿಕೆಟ್‍ಗೆ 80 ರನ್‍ಗಳಾಗಿದ್ದ ಭಾರತ, ಶ್ರೇಯಸ್ ಅಯ್ಯರ್ (4) ಅವರ ವಿಕೆಟ್ ಕಳೆದುಕೊಂಡು ಮುಂದಿನ 20 ಓವರ್ ಗಳಲ್ಲಿ ಪಂದ್ಯದ ಹಿಡಿತ ಕಳೆದುಕೊಂಡಿತು. ಮಧ್ಯಮ ಓವರ್ ಗಳಲ್ಲಿ ರನ್ ವೇಗ ಕುಂಠಿತಗೊಂಡದ್ದು ಭಾರತದ ಪಾಲಿಗೆ ದುಬಾರಿಯಾಯಿತು. 11 ರಿಂದ 20 ನೇ ಓವರ್ ನಲ್ಲಿ ಭಾರತ ಕೇವಲ 35 ರನ್ ಗಳಿಸಿದರೆ, 21 ರಿಂದ 30ನೇ ಓವರ್ ನಲ್ಲಿ 37 ರನ್ ಗಳಿಸುವುದು ಸಾಧ್ಯವಾಯಿತು. ಇಡೀ ಇನಿಂಗ್ಸ್ ನಲ್ಲಿ ಭಾರತ ಕೇವಲ 13 ಬೌಂಡರಿ ಹಾಗೂ ಮೂರು ಸಿಕ್ಸರ್ ಗಳಿಸಿತು.

ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿ ನಿರ್ಗಮಿಸಿದ ಬಳಿಕ ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್‍ಗೆ ಜತೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರ ಅಚ್ಚರಿಯ ನಡೆಯಲ್ಲಿ ರವೀಂದ್ರ ಜಡೇಜಾ ಕ್ರೀಸ್‍ಗೆ ಬಂದರೂ, 22 ಎಸೆತಗಳಲ್ಲಿ 9 ರನ್ ಗಳಿಸಲು ಸಾಧ್ಯವಾಯಿತು. ದೊಡ್ಡ ಹೊಡೆತಗಳಿಗೆ ಹೆಸರಾದ ಯಾದವ್ ಮೊದಲೇ ಬ್ಯಾಟಿಂಗ್‍ಗೆ ಬಂದಿದ್ದರೆ, ಭಾರತದ ಸ್ಕೋರ್ ಬೋರ್ಡ್ ಆಶಾದಾಯಕವಾಗಿರುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಮೊಹ್ಮದ್ ಸಿರಾಜ್ ಅವರಿಗೆ ಮೊದಲು ಬೌಲಿಂಗ್ ನೀಡದಿದ್ದುದು ಕೂಡಾ ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಹಿಂದಿನ ಎಲ್ಲ ಪಂದ್ಯಗಳಲ್ಲಿ ಬೂಮ್ರಾ ಹಾಗೂ ಸಿರಾಜ್ ಪರಿಣಾಮಕಾರಿಯಾಗಿದ್ದರು. ಆದರೆ ಮಹತ್ವದ ದಿನ ಬೂಮ್ರಾ ಹಾಗೂ ಶಮಿ ಬೌಲಿಂಗ್ ದಾಳಿ ಆರಂಭಿಸಿದರು. 47 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡ ಹಂತದಲ್ಲಿ ಇದು ಯಶಸ್ವಿ ಎನಿಸಿದರೂ, ಹೊಸ ಚೆಂಡಿನಲ್ಲಿ ಪರಿಣಾಮಕಾರಿ ಎನಿಸಿದ್ದ ಸಿರಾಜ್ ಅವರನ್ನು ಆರಂಭಿಕ ಓವರ್ ಗಳಲ್ಲಿ ಬಳಸಿಕೊಳ್ಳಲಿಲ್ಲ. ಈ ಹಂತದಲ್ಲಿ ಆಸೀಸ್ ಮೇಲೆ ಒತ್ತಡ ಹೇರಲು ಭಾರತ ವಿಫಲವಾಗಿದ್ದು, ಟ್ರಾವಿಸ್ ಹೆಡ್ (137) ಮತ್ತು ಲಂಬುಶೆನ್ (58) ನಡುವಿನ 192 ರನ್‍ಗಳ ಜತೆಯಾಟ ಭಾರತದ ಪಾಲಿಗೆ ದುಬಾರಿಯಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News