ಯಾದಗಿರಿ | ಬಿಜೆಪಿಯವರು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುವ ಮುನ್ನ ಸಿ.ಟಿ.ರವಿ ರಾಜೀನಾಮೆ ಕೇಳಲಿ : ಮಾಳಪ್ಪ ಕಿರದಳ್ಳಿ
ಯಾದಗಿರಿ/ ಸುರಪುರ : ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವ ಬಿಜೆಪಿಯ ಮುಖಂಡರು ಮೊದಲು ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸುವ ಮೂಲಕ ಮಹಿಳಾ ಕುಲವನ್ನು ಅವಮಾನಿಸಿರುವ ನಿಮ್ಮ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜೀನಾಮೆ ಕೇಳಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಿಯಾಂಕ್ ಖರ್ಗೆ ಅವರಿಗೂ ಸಚಿನ್ ಪಂಚಾಳ ಆತ್ಮಹತ್ಯೆಗೂ ಯಾವುದೇ ಸಂಬಂಧವೇ ಇಲ್ಲ, ಆದರೂ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವ ನಿಮಗೆ ಯಾವ ನೈತಿಕತೆ ಇದೆ. ಈ ಹಿಂದೆ ತಾವೇ ಮಲ್ಲಿಕಾರ್ಜುನ ಖರ್ಗೆ ಅವರಿಂದ ಏನೆಲ್ಲ ಸೌಲಭ್ಯ ಪಡೆದುಕೊಂಡಿದ್ದೀರಿ, ಎಲ್ಲೆಲ್ಲಿ ಸೈಟ್ ಪಡೆದಿದ್ದೀರಿ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಎಂದರು.
ಸಚಿನ್ ಪಂಚಾಳ ಅವರು ಎಲ್ಲಿಯೂ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ, ಅಲ್ಲದೆ ಕೇವಲ ಪ್ರಿಯಾಂಕ್ ಖರ್ಗೆ ಅವರೊಂದಿಗೆ ರಾಜು ಕಪನೂರ ಇತರರು ಇರುವ ಫೋಟೊ ತೋರಿಸಿ ರಾಜೀನಾಮೆ ಕೇಳುವ ನೀವು, ನಿಮ್ಮ ಪಕ್ಷದ ಶಾಸಕರ ಜೊತೆಗೆ ಇರುವ ಫೋಟೊಗಳು ಹೊರಬಂದಿವೆಯಲ್ಲಾ, ನಿಮ್ಮ ಶಾಸಕರ ರಾಜೀನಾಮೆ ಕೇಳದೆ ಇರುವ ನಿಮ್ಮ ಮಾತಿಗೆ ಬೆಲೆ ಇದೆಯೇ ಎಂದ ಅವರು, ಯಾವುದೇ ಕಾರಣಕ್ಕೂ ಪ್ರಿಯಾಂಕ್ ಖರ್ಗೆ ಅವರು ರಾಜೀನೆಮೆ ನೀಡುವ ಪ್ರಶ್ನೆಯೇ ಇಲ್ಲ, ಅವರೊಂದಿಗೆ ನಾಡಿನ ಜನರಿದ್ದೇವೆ, ಇದೇ ರೀತಿ ನೀವು ವಿನಾಕಾರಣ ಖರ್ಗೆ ಕುಟುಂಬದ ವಿರುದ್ಧ ಹೇಳಿಕೆ ನೀಡಿದರೆ ನಿಮ್ಮ ವಿರುದ್ಧವೇ ಪ್ರತಿಭಟನೆ ನಡೆಸಬೇಕಾಗಲಿದೆ ಎಂದು ಎಚ್ಚರಿಸಿದ್ದಾರೆ.