ಯಾದಗಿರಿ | ಅರ್ಥಪೂರ್ಣವಾಗಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ನಿರ್ಧಾರ
ಯಾದಗಿರಿ : ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಜ.20 ರಂದು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು, ಅಂದು ಮಧ್ಯಾಹ್ನ 12:30ಕ್ಕೆ ನಗರದ ಸರಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಲು, ವೇದಿಕೆ, ಆಹ್ವಾನ ಪತ್ರಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಈ ಜಯಂತಿ ಆಚರಿಸಲು ಹಾಗೂ ತಾಲೂಕು ಮಟ್ಟದಲ್ಲಿ, ಈ ಜಯಂತಿಯನ್ನು ದಿನಾಂಕ ಜ.14 ರಂದು ಆಚರಣೆಗೆ ಸಕಲ ಕ್ರಮಗಳನ್ನು ಕೈಗೊಳ್ಳಬೇಕು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ಹಾಗೂ ನುರಿತ ಉಪನ್ಯಾಸಕರನ್ನು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಬೇಕು, ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಯಾ ಸಮಾಜದ ಮುಖಂಡರು, ಸಂಘ ಸಂಸ್ಥೆಗಳವರು ತಪ್ಪದೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮುಧೋಳ, ಜಿಲ್ಲಾ ಭೋವಿ ಸಮಾಜದ ಜಿಲ್ಲಾಧ್ಯಕ್ಷ ನಾಗಪ್ಪ ಬೆನಕಲ್, ಸಮಾಜದ ಮುಖಂಡ ತಿಪ್ಪಣ್ಣ ಒಡೆಯರ್, ಸಿದ್ರಾಮಪ್ಪ ನಾಯ್ಕಲ್,ಮಿಲಿಂದ್ ಕುಮಾರ್.ಎಸ್.ಎಸ್ , ಸೇರಿದಂತೆ ಇತರರು ಉಪಸ್ಥಿತರಿದ್ದರು.