ಯಾದಗಿರಿ | ಜನಪ್ರತಿನಿಧಿಗಳ ಮನೆ ಮುಂದೆ ಹೋರಾಟ : ಭೀಮುನಾಯಕ ಎಚ್ಚರಿಕೆ
ಯಾದಗಿರಿ : ರಾಯಚೂರು-ಯಾದಗಿರಿ ಜಿಲ್ಲೆಗಳನ್ನು ಇಲ್ಲಿಂದ 800 ಕಿ.ಮೀ. ದೂರ ಇರುವ ವಿಶಾಖಪಟ್ಟಣಂ ದಕ್ಷಿಣ ಪೂರ್ವ ಕರಾವಳಿ ವಲಯಕ್ಕೆ ಸೇರ್ಪಡೆ ಕೈಬಿಡದಿದ್ದರೆ ಜನಪ್ರತಿನಿಧಿಗಳ ಮನೆ ಮುಂದೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಆಂಧ್ರ ಮತ್ತು ಕೇಂದ್ರಗಳು ಲಾಭದಾಯಕವಾದ ಎಲ್ಲವುಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಯತ್ನಿಸುತ್ತಿದ್ದರೆ, ನಮ್ಮ ಭಾಗದ ಎಲ್ಲ ಶಾಸಕರು, ಸಂಸದರು, ಸಚಿವರು ಕೇಂದ್ರ ಮಂತ್ರಿಗಳು ತೋರಿಕೆಯ ಪ್ರತಿರೋಧ ವ್ಯಕ್ತಪಡಿಸುತ್ತಿರುವುದು ನಾಚಿಕೆಗೇಡು ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ಕಾಟಾಚಾರಕ್ಕೆ ಪತ್ರ ಬರೆಯುವ ನಾಟಕ ಕೈಬಿಡಬೇಕು, ಸಮಸ್ಯೆ ಉಲ್ಬಣವಾಗುವ ಮೊದಲೇ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿ ಜೊತೆಗೆ ಸಂಸತ್ತಿನಲ್ಲಿ, ವಿಧಾನಸೌಧದಲ್ಲಿ ಕೆಲಸಕ್ಕೆ ಬಾರದ ವಿಚಾರಗಳಿಗೆ ಸದನಗಳ ಅಮೂಲ್ಯ ಸಮಯ ಹಾಳುಮಾಡಲು ಬರುತ್ತದೆ. ಇಂತಹ ವಿಚಾರಗಳಿಗೆ ಸದನದಲ್ಲಿ ಕೋಲಾಹಲ ಎಬ್ಬಿಸಲು ಬರುವುದಿಲ್ಲವೇ? ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶಾಖಪಟ್ಟಣಕ್ಕೆ ಸೇರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ನಿಮ್ಮ ತಾಕತ್ತು ಪ್ರದರ್ಶನ ಮಾಡಿ ಇದನ್ನು ರದ್ದುಮಾಡಿಕೊಂಡು ಬಂದು ನಮ್ಮ ಜಿಲ್ಲೆಗಳನ್ನು ಹೊಸದಾಗಿ ಕಲಬುರಗಿ ವಿಭಾಗ ರಚನೆಯಾಗುವಂತೆ ಮಾಡಿ ಇಲ್ಲವೇ ಹುಬ್ಬಳ್ಳಿ ನೈರುತ್ಯ ವಲಯಕ್ಕಾದರೂ ಸೇರ್ಪಡೆ ಮಾಡಿ ತೋರಿಸಿ ನಿಮ್ಮ ಶಕ್ತಿ ಪ್ರದರ್ಶನ ಮಾಡಿ ಎಂದು ಸವಾಲೆಸೆದಿದ್ದಾರೆ.
ತಕ್ಷಣ ನಮ್ಮ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತು ಹೋರಾಟಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಇವರ ವಿರುದ್ಧ ಇನ್ನು ಮುಂದೆ ನಿರಂತರ ಹೋರಾಟ ನಡೆಸಲಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಯಮುನಯ್ಯ ಗುತ್ತೇದಾರ, ವಿಶ್ವರಾಜ ಹೊನಗೇರಾ ಸೇರಿದಂತೆ ಇನ್ನಿತರರು ಎಚ್ಚರಿಕೆ ನೀಡಿದ್ದಾರೆ.